Sabha Parva: Chapter 16

ಸಭಾ ಪರ್ವ: ಮಂತ್ರ ಪರ್ವ

೧೬

ಜರಾಸಂಧ

ಸೇನೆಯನ್ನು ತೆಗೆದುಕೊಳ್ಳದೇ ಶತ್ರುವಿನ ಬಳಿಸೇರಿ, ಶತ್ರುದೇಹವನ್ನು ಆಕ್ರಮಿಸಿ, ತಮ್ಮ ಗುರಿಯನ್ನು ಸಾಧಿಸಿದರೆ ಯಾವ ಅಪವಾದವೂ ಬರುವುದಿಲ್ಲವೆಂದು ಕೃಷ್ಣನು ಹೇಳುವುದು (೧-೯). ಜರಾಸಂಧನು ಯಾರು ಮತ್ತು ಅವನ ಪರಾಕ್ರಮಗಳೇನು ಎಂದು ಯುಧಿಷ್ಠಿರನು ಕೇಳಲು, ಕೃಷ್ಣನು ಜರಾಸಂಧನ ಜನ್ಮ-ಪರಾಕ್ರಮಗಳನ್ನು ವರ್ಣಿಸಿದ್ದುದು (೧೦-೫೧).

02016001 ವಾಸುದೇವ ಉವಾಚ|

02016001a ಜಾತಸ್ಯ ಭಾರತೇ ವಂಶೇ ತಥಾ ಕುಂತ್ಯಾಃ ಸುತಸ್ಯ ಚ|

02016001c ಯಾ ವೈ ಯುಕ್ತಾ ಮತಿಃ ಸೇಯಮರ್ಜುನೇನ ಪ್ರದರ್ಶಿತಾ||

ವಾಸುದೇವನು ಹೇಳಿದನು: “ಅರ್ಜುನನು ಭಾರತ ವಂಶದಲ್ಲಿ ಮತ್ತು ಕುಂತಿಯ ಸುತನಾಗಿ ಹುಟ್ಟಿದುದಕ್ಕೆ ಸರಿಯಾದ ಬುದ್ಧಿಯನ್ನು ಪ್ರದರ್ಶಿಸಿದ್ದಾನೆ.

02016002a ನ ಮೃತ್ಯೋಃ ಸಮಯಂ ವಿದ್ಮ ರಾತ್ರೌ ವಾ ಯದಿ ವಾ ದಿವಾ|

02016002c ನ ಚಾಪಿ ಕಂ ಚಿದಮರಮಯುದ್ಧೇನಾಪಿ ಶುಶ್ರುಮಃ||

ರಾತ್ರಿಯೋ ಹಗಲೋ ಮೃತ್ಯುವಿನ ಸಮಯವನ್ನು ನಾವು ಯಾರೂ ತಿಳಿದಿಲ್ಲ! ಹಾಗೆಯೇ ಯುದ್ಧಮಾಡದೇ ಅಮರರಾದ ಯಾರ ಕುರಿತೂ ನಾವು ಕೇಳಿಲ್ಲ!

02016003a ಏತಾವದೇವ ಪುರುಷೈಃ ಕಾರ್ಯಂ ಹೃದಯತೋಷಣಂ|

02016003c ನಯೇನ ವಿಧಿದೃಷ್ಟೇನ ಯದುಪಕ್ರಮತೇ ಪರಾನ್||

ಇದೇ ನ್ಯಾಯ ಮತ್ತು ವಿಧಿಪೂರ್ವಕವಾಗಿ ಶತ್ರುಗಳ ಮೇಲೆ ಧಾಳಿಯಿಡುವ ಪುರುಷನ ಹೃದಯವನ್ನು ಸಂತಸಗೊಳಿಸುವ ಕಾರ್ಯ.

02016004a ಸುನಯಸ್ಯಾನಪಾಯಸ್ಯ ಸಮ್ಯುಗೇ ಪರಮಃ ಕ್ರಮಃ|

02016004c ಸಂಶಯೋ ಜಾಯತೇ ಸಾಮ್ಯೇ ಸಾಮ್ಯಂ ಚ ನ ಭವೇದ್ದ್ವಯೋಃ||

ಹೋರಾಟದಲ್ಲಿ ಉತ್ತಮ ನ್ಯಾಯವೇ ಗೆಲ್ಲುತ್ತದೆ. ಎರಡೂ ಪಕ್ಷಗಳು ಸರಿಸಮವಾಗಿದ್ದರೆ, ಅದರಲ್ಲಿ ಸಂಶಯ ಬರಬಹುದು. ಆದರೆ ಎರಡು ಪಕ್ಷಗಳು ಎಂದೂ ಸರಿಸಮವಾಗಿರುವುದಿಲ್ಲ.

02016005a ತೇ ವಯಂ ನಯಮಾಸ್ಥಾಯ ಶತ್ರುದೇಹಸಮೀಪಗಾಃ|

02016005c ಕಥಮಂತಂ ನ ಗಚ್ಛೇಮ ವೃಕ್ಷಸ್ಯೇವ ನದೀರಯಾಃ|

02016005e ಪರರಂಧ್ರೇ ಪರಾಕ್ರಾಂತಾಃ ಸ್ವರಂಧ್ರಾವರಣೇ ಸ್ಥಿತಾಃ||

ಒಳ್ಳೆಯ ನೀತಿಯನ್ನು ನಮ್ಮದಾಗಿಸಿಕೊಂಡು ಶತ್ರುವಿನ ಬಳಿ ಹೋದರೆ ನದಿಯ ಪ್ರವಾಹವು ವೃಕ್ಷವನ್ನು ಹೇಗೋ ಹಾಗೆ ಕೊನೆಗೊಳಿಸಲು ಏಕೆ ಸಾಧ್ಯವಿಲ್ಲ? ನಮ್ಮ ದುರ್ಬಲತೆಯನ್ನು ಮುಚ್ಚಿಟ್ಟುಕೊಂಡು ಅವನ ದುರ್ಬಲತೆಯನ್ನು ನೋಡಿ ಆಕ್ರಮಣ ಮಾಡೋಣ.

02016006a ವ್ಯೂಢಾನೀಕೈರನುಬಲೈರ್ನೋಪೇಯಾದ್ಬಲವತ್ತರಂ|

02016006c ಇತಿ ಬುದ್ಧಿಮತಾಂ ನೀತಿಸ್ತನ್ಮಮಾಪೀಹ ರೋಚತೇ||

ತನಗಿಂತಲೂ ಬಲಶಾಲಿಯಾಗಿರುವವನನ್ನು ಸೇನೆ ಮತ್ತು ಬಲದೊಂದಿಗೆ ಆಕ್ರಮಣ ಮಾಡಬಾರದು ಎನ್ನುವುದು ಬುದ್ಧಿವಂತರ ನೀತಿ ಮತ್ತು ಇದು ನನಗೂ ಇಷ್ಟವಾಗುತ್ತದೆ.

02016007a ಅನವದ್ಯಾ ಹ್ಯಸಂಬುದ್ಧಾಃ ಪ್ರವಿಷ್ಟಾಃ ಶತ್ರುಸದ್ಮ ತತ್|

02016007c ಶತ್ರುದೇಹಮುಪಾಕ್ರಮ್ಯ ತಂ ಕಾಮಂ ಪ್ರಾಪ್ನುಯಾಮಹೇ||

ಸೇನೆಯನ್ನು ತೆಗೆದುಕೊಳ್ಳದೇ ಶತ್ರುವಿನ ಬಳಿಸೇರಿ, ಶತ್ರುದೇಹವನ್ನು ಆಕ್ರಮಿಸಿ, ನಮ್ಮ ಗುರಿಯನ್ನು ಸಾಧಿಸಿದರೆ ನಮ್ಮ ಮೇಲೆ ಯಾವ ಅಪವಾದವೂ ಬರುವುದಿಲ್ಲ.

02016008a ಏಕೋ ಹ್ಯೇವ ಶ್ರಿಯಂ ನಿತ್ಯಂ ಬಿಭರ್ತಿ ಪುರುಷರ್ಷಭ|

02016008c ಅಂತರಾತ್ಮೇವ ಭೂತಾನಾಂ ತತ್ಕ್ಷಯೇ ವೈ ಬಲಕ್ಷಯಃ||

ಪುರುಷರ್ಷಭ! ಜೀವಿಗಳ ಅಂತರಾತ್ಮನಂತೆ ಅವನೊಬ್ಬನೇ ನಿತ್ಯ ಶ್ರೀಯನ್ನು ಹೊರಸೂಸುತ್ತಾನೆ, ಅವನ ಕ್ಷಯದೊಂದಿಗೆ ಅವನ ಬಲವೂ ಕ್ಷಯಿಸುವುದು.

02016009a ಅಥ ಚೇತ್ತಂ ನಿಹತ್ಯಾಜೌ ಶೇಷೇಣಾಭಿಸಮಾಗತಾಃ|

02016009c ಪ್ರಾಪ್ನುಯಾಮ ತತಃ ಸ್ವರ್ಗಂ ಜ್ಞಾತಿತ್ರಾಣಪರಾಯಣಾಃ||

ಒಂದುವೇಳೆ ಅವನನ್ನು ನಾವು ಕೊಂದನಂತರ ಉಳಿದವರು ನಮ್ಮ ಮೇಲೆ ಆಕ್ರಮಣ ಮಾಡಿದರೆ ತಮ್ಮ ಜಾತಿಯವರನ್ನು ಬಿಡುಗಡೆಮಾಡಲು ತೊಡಗಿ ಯುದ್ಧದಲ್ಲಿ ವೀರಸ್ವರ್ಗವನ್ನು ಪಡೆಯುತ್ತೇವೆ.”

02016010 ಯುಧಿಷ್ಠಿರ ಉವಾಚ|

02016010a ಕೃಷ್ಣ ಕೋಽಯಂ ಜರಾಸಂಧಃ ಕಿಂವೀರ್ಯಃ ಕಿಂಪರಾಕ್ರಮಃ|

02016010c ಯಸ್ತ್ವಾಂ ಸ್ಪೃಷ್ಟ್ವಾಗ್ನಿಸದೃಶಂ ನ ದಗ್ಧಃ ಶಲಭೋ ಯಥಾ||

ಯುಧಿಷ್ಠಿರನು ಹೇಳಿದನು: “ಕೃಷ್ಣ! ಈ ಜರಾಸಂಧನು ಯಾರು? ಅಗ್ನಿಸದೃಶನಾದ ನಿನ್ನನ್ನು ಮುಟ್ಟಿದರೂ ಪತಂಗದಂತೆ ಸುಟ್ಟುಹೋಗದೇ ಇರುವ ಅವನ ವೀರ್ಯ ಮತ್ತು ಪರಾಕ್ರಮಗಳಾದರೂ ಏನು?”

02016011 ಕೃಷ್ಣ ಉವಾಚ|

02016011a ಶೃಣು ರಾಜಂ ಜರಾಸಂಧೋ ಯದ್ವೀರ್ಯೋ ಯತ್ಪರಾಕ್ರಮಃ|

02016011c ಯಥಾ ಚೋಪೇಕ್ಷಿತೋಽಸ್ಮಾಭಿರ್ಬಹುಶಃ ಕೃತವಿಪ್ರಿಯಃ||

ಕೃಷ್ಣನು ಹೇಳಿದನು: “ರಾಜನ್! ಜರಾಸಂಧನ ವೀರ್ಯ ಪರಾಕ್ರಮಗಳ ಕುರಿತು ಮತ್ತು ಅವನು ನಮ್ಮ ವಿರುದ್ಧ ಬಹಳ ರೀತಿಯಲ್ಲಿ ನಡೆದುಕೊಂಡರೂ ಏನೂ ಮಾಡದೇ ಇದ್ದುದಕ್ಕೆ ಕಾರಣವನ್ನು ಕೇಳು.

02016012a ಅಕ್ಷೌಹಿಣೀನಾಂ ತಿಸೃಣಾಮಾಸೀತ್ಸಮರದರ್ಪಿತಃ|

02016012c ರಾಜಾ ಬೃಹದ್ರಥೋ ನಾಮ ಮಗಧಾಧಿಪತಿಃ ಪತಿಃ||

ಮೂರು ಅಕ್ಷೌಹಿಣೀ ಸೇನಾಪತಿ ಸಮರದರ್ಪಿತ ಬೃಹದ್ರಥನೆಂಬ ಹೆಸರಿನ ಮಗಧಾಧಿಪತಿ ರಾಜನಿದ್ದನು.

02016013a ರೂಪವಾನ್ವೀರ್ಯಸಂಪನ್ನಃ ಶ್ರೀಮಾನತುಲವಿಕ್ರಮಃ|

02016013c ನಿತ್ಯಂ ದೀಕ್ಷಾಕೃಶತನುಃ ಶತಕ್ರತುರಿವಾಪರಃ||

ಅವನು ರೂಪವಂತನೂ ವೀರ್ಯಸಂಪನ್ನನೂ ಶ್ರೀಮಂತನೂ ಅತುಲವಿಕ್ರಮನೂ ಆಗಿದ್ದನು. ನಿತ್ಯವೂ ದೀಕ್ಷಾನಿರತನಾಗಿದ್ದ ಅವನು ತೆಳುದೇಹನವನಾಗಿದ್ದು ಇನ್ನೊಬ್ಬ ಶತುಕ್ರತುವೋ ಎಂಬಂತೆ ತೋರುತ್ತಿದ್ದನು.

02016014a ತೇಜಸಾ ಸೂರ್ಯಸದೃಶಃ ಕ್ಷಮಯಾ ಪೃಥಿವೀಸಮಃ|

02016014c ಯಮಾಂತಕಸಮಃ ಕೋಪೇ ಶ್ರಿಯಾ ವೈಶ್ರವಣೋಪಮಃ||

ತೇಜಸ್ಸಿನಲ್ಲಿ ಸೂರ್ಯಸದೃಶನಾಗಿದ್ದನು, ಕ್ಷಮೆಯಲ್ಲಿ ಪೃಥ್ವಿಸಮನಾಗಿದ್ದನು, ಕೋಪದಲ್ಲಿ ಅಂತಕ ಯಮನ ಸಮನಾಗಿದ್ದನು, ಮತ್ತು ಸಂಪತ್ತಿನಲ್ಲಿ ವೈಶ್ರವಣನಂತಿದ್ದನು.

02016015a ತಸ್ಯಾಭಿಜನಸಮ್ಯುಕ್ತೈರ್ಗುಣೈರ್ಭರತಸತ್ತಮ|

02016015c ವ್ಯಾಪ್ತೇಯಂ ಪೃಥಿವೀ ಸರ್ವಾ ಸೂರ್ಯಸ್ಯೇವ ಗಭಸ್ತಿಭಿಃ||

ಭರತಸತ್ತಮ! ಅವನ ಉಚ್ಛ ಜನ್ಮದಂತೆ ಅವನ ಗುಣಗಳೂ ಉತ್ತಮವಾಗಿದ್ದು, ಸೂರ್ಯನಿಂದ ಹೊರಸೂಸಿದ ಕಿರಣಗಳಂತೆ ಇಡೀ ಪೃಥ್ವಿಯನ್ನೇ ವ್ಯಾಪಿಸಿದ್ದವು.

02016016a ಸ ಕಾಶಿರಾಜಸ್ಯ ಸುತೇ ಯಮಜೇ ಭರತರ್ಷಭ|

02016016c ಉಪಯೇಮೇ ಮಹಾವೀರ್ಯೋ ರೂಪದ್ರವಿಣಸಮ್ಮತೇ||

ಭರತರ್ಷಭ! ಆ ಮಹಾವೀರನು ರೂಪ ಮತ್ತು ಸಂಪತ್ತನ್ನು ಹೊಂದಿದ್ದ ಕಾಶೀರಾಜನ ಅವಳಿ ಮಕ್ಕಳನ್ನು ಮದುವೆಯಾದನು.

02016017a ತಯೋಶ್ಚಕಾರ ಸಮಯಂ ಮಿಥಃ ಸ ಪುರುಷರ್ಷಭಃ|

02016017c ನಾತಿವರ್ತಿಷ್ಯ ಇತ್ಯೇವಂ ಪತ್ನೀಭ್ಯಾಂ ಸನ್ನಿಧೌ ತದಾ||

ಆ ಪುರುಷರ್ಷಭನು ತನ್ನ ಪತ್ನಿಯರಿಬ್ಬರ ಸಮಕ್ಷಮದಲ್ಲಿ ಅವನು ಅವರ ವಿರುದ್ಧ ಎಂದೂ ನಡೆದುಕೊಳ್ಳುವುದಿಲ್ಲ ಎಂಬ ಒಂದು ಒಪ್ಪಂದವನ್ನು ಮಾಡಿಕೊಂಡನು.

02016018a ಸ ತಾಭ್ಯಾಂ ಶುಶುಭೇ ರಾಜಾ ಪತ್ನೀಭ್ಯಾಂ ಮನುಜಾಧಿಪ|

02016018c ಪ್ರಿಯಾಭ್ಯಾಮನುರೂಪಾಭ್ಯಾಂ ಕರೇಣುಭ್ಯಾಮಿವ ದ್ವಿಪಃ||

ಮನುಜಾಧಿಪ! ಆ ರಾಜನು ತನ್ನ ಪ್ರಿಯ ಅನುರೂಪ ಇಬ್ಬರು ಪತ್ನಿಯರೊಂದಿಗೆ ಹೆಣ್ಣಾನೆಗಳ ಮಧ್ಯೆ ಗಂಡಾನೆಯಂತೆ ರಂಜಿಸಿದನು.

02016019a ತಯೋರ್ಮಧ್ಯಗತಶ್ಚಾಪಿ ರರಾಜ ವಸುಧಾಧಿಪಃ|

02016019c ಗಂಗಾಯಮುನಯೋರ್ಮಧ್ಯೇ ಮೂರ್ತಿಮಾನಿವ ಸಾಗರಃ||

ಅವರಿಬ್ಬರ ಮಧ್ಯೆ ವಸುಧಾಧಿಪನು ಗಂಗಾ ಮತ್ತು ಯಮುನೆಯರ ಮಧ್ಯೆ ಸಾಗರನ ಮೂರ್ತಿಯಂತೆ ರರಾಜಿಸಿದನು.

02016020a ವಿಷಯೇಷು ನಿಮಗ್ನಸ್ಯ ತಸ್ಯ ಯೌವನಮತ್ಯಗಾತ್|

02016020c ನ ಚ ವಂಶಕರಃ ಪುತ್ರಸ್ತಸ್ಯಾಜಾಯತ ಕಶ್ಚನ||

ವಿಷಯ ಸುಖದಲ್ಲಿಯೇ ಮಗ್ನನಾಗಿ ಅವನ ಯೌವನವು ಕಳೆಯುತ್ತಾಬಂದರೂ ಅವನಿಗೆ ವಂಶಕರ ಪುತ್ರನು ಯಾರೂ ಜನಿಸಲಿಲ್ಲ.

02016021a ಮಂಗಲೈರ್ಬಹುಭಿರ್ಹೋಮೈಃ ಪುತ್ರಕಾಮಾಭಿರಿಷ್ಟಿಭಿಃ|

02016021c ನಾಸಸಾದ ನೃಪಶ್ರೇಷ್ಠಃ ಪುತ್ರಂ ಕುಲವಿವರ್ಧನಂ||

ಬಹಳಷ್ಟು ಮಂಗಲ ಹೋಮಗಳು ಮತ್ತು ಪುತ್ರಕಾಮೇಷ್ಟಿಯಿಂದಲೂ ಆ ನೃಪಶ್ರೇಷ್ಠನು ಕುಲವಿವರ್ಧನ ಪುತ್ರನನ್ನು ಪಡೆಯಲಿಲ್ಲ.

02016022a ಅಥ ಕಾಕ್ಷೀವತಃ ಪುತ್ರಂ ಗೌತಮಸ್ಯ ಮಹಾತ್ಮನಃ|

02016022c ಶುಶ್ರಾವ ತಪಸಿ ಶ್ರಾಂತಮುದಾರಂ ಚಂಡಕೌಶಿಕಂ||

02016023a ಯದೃಚ್ಛಯಾಗತಂ ತಂ ತು ವೃಕ್ಷಮೂಲಮುಪಾಶ್ರಿತಂ|

02016023c ಪತ್ನೀಭ್ಯಾಂ ಸಹಿತೋ ರಾಜಾ ಸರ್ವರತ್ನೈರತೋಷಯತ್||

ಆಗ ಮಹಾತ್ಮ ಗೌತಮ ಕಾಕ್ಷೀವತನ ಮಗ ಚಂಡಕೌಶಿಕಿ ಎಂದು ಪ್ರಸಿದ್ಧ ಉದಾರ ತಪಸ್ವಿಯು ಅಲ್ಲಿಗೆ ಬಂದು ಒಂದು ಮರದಡಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾನೆ ಎಂದು ಕೇಳಿದನು. ಪತ್ನಿಯರ ಸಹಿತ ರಾಜನು ಸರ್ವ ರತ್ನ ಉಡುಗೊರೆಗಳಿಂದ ಅವನನ್ನು ಸಂತೃಪ್ತಿಗೊಳಿಸಿದನು.

02016024a ತಮಬ್ರವೀತ್ಸತ್ಯಧೃತಿಃ ಸತ್ಯವಾಗೃಷಿಸತ್ತಮಃ|

02016024c ಪರಿತುಷ್ಟೋಽಸ್ಮಿ ತೇ ರಾಜನ್ವರಂ ವರಯ ಸುವ್ರತ||

ಆ ಸತ್ಯಧೃತಿ ಸತ್ಯವಾಗ್ಮಿ ಋಷಿಸತ್ತಮನು “ಸುವ್ರತ ರಾಜನ್! ನಾನು ಸಂತುಷ್ಟಗೊಂಡಿದ್ದೇನೆ. ವರವನ್ನು ಕೇಳಿಕೋ!” ಎಂದನು.

02016025a ತತಃ ಸಭಾರ್ಯಃ ಪ್ರಣತಸ್ತಮುವಾಚ ಬೃಹದ್ರಥಃ|

02016025c ಪುತ್ರದರ್ಶನನೈರಾಶ್ಯಾದ್ಬಾಷ್ಪಗದ್ಗದಯಾ ಗಿರಾ||

ಪುತ್ರನನ್ನು ನೋಡಲು ಹಾತೊರೆಯುತ್ತಿದ್ದ ಬೃಹದ್ರಥನು ತನ್ನ ಪತ್ನಿಯರೊಂದಿಗೆ ನಮಸ್ಕರಿಸಿ ಕಣ್ಣೀರಿನಿಂದ ಕಟ್ಟಿದ ಧ್ವನಿಯಲ್ಲಿ ಹೇಳಿದನು:

02016026 ಬೃಹದ್ರಥ ಉವಾಚ|

02016026a ಭಗವನ್ರಾಜ್ಯಮುತ್ಸೃಜ್ಯ ಪ್ರಸ್ಥಿತಸ್ಯ ತಪೋವನಂ|

02016026c ಕಿಂ ವರೇಣಾಲ್ಪಭಾಗ್ಯಸ್ಯ ಕಿಂ ರಾಜ್ಯೇನಾಪ್ರಜಸ್ಯ ಮೇ||

ಬೃಹದ್ರಥನು ಹೇಳಿದನು: “ಭಗವನ್! ಮಕ್ಕಳಿಲ್ಲದೆ ರಾಜ್ಯವನ್ನು ತೊರೆದು ತಪೋವನಕ್ಕೆ ಹೊರಡುತ್ತಿರುವ ಈ ಅಲ್ಪಭಾಗನಿಗೆ ಈ ರಾಜ್ಯದಿಂದ ಏನಾಗಬೇಕು? ವರದಿಂದ ಏನಾಗಬೇಕು?””

02016027 ಕೃಷ್ಣ ಉವಾಚ|

02016027a ಏತಚ್ಛೃತ್ವಾ ಮುನಿರ್ಧ್ಯಾನಮಗಮತ್ ಕ್ಷುಭಿತೇಂದ್ರಿಯಃ|

02016027c ತಸ್ಯೈವ ಚಾಮ್ರವೃಕ್ಷಸ್ಯ ಚಾಯಾಯಾಂ ಸಮುಪಾವಿಶತ್||

02016028a ತಸ್ಯೋಪವಿಷ್ಟಸ್ಯ ಮುನೇರುತ್ಸಂಗೇ ನಿಪಪಾತ ಹ|

02016028c ಅವಾತಮಶುಕಾದಷ್ಟಮೇಕಮಾಮ್ರಫಲಂ ಕಿಲ||

ಕೃಷ್ಣನು ಹೇಳಿದನು: “ಇದನ್ನು ಕೇಳಿದ ಮುನಿಯು ಚಿಂತೆಗೊಳಗಾಗಿ ಧ್ಯಾನಮಗ್ನನಾದನು. ಅವನು ಯಾವ ಮಾವಿನ ಮರದ ಕೆಳಗೆ ಕುಳಿತಿದ್ದನೋ ಅಲ್ಲಿಂದ ಗಿಳಿಗಳು ಕಚ್ಚದೇ ಇದ್ದ ಒಂದು ಇಡೀ ಮಾವಿನ ಹಣ್ಣು ಅವನ ತೊಡೆಯಮೇಲೆ ಬಿದ್ದಿತು.

02016029a ತತ್ಪ್ರಗೃಹ್ಯ ಮುನಿಶ್ರೇಷ್ಠೋ ಹೃದಯೇನಾಭಿಮಂತ್ರ್ಯ ಚ|

02016029c ರಾಜ್ಞೇ ದದಾವಪ್ರತಿಮಂ ಪುತ್ರಸಂಪ್ರಾಪ್ತಿಕಾರಕಂ||

ಮುನಿಶ್ರೇಷ್ಠನು ಆ ಅಪ್ರತಿಮ ಹಣ್ಣನ್ನು ತನ್ನ ಕೈಯಲ್ಲಿ ತೆಗೆದುಕೊಂಡು, ಪುತ್ರನನ್ನು ಕೊಡುವಂತೆ ಅದಕ್ಕೆ ಹೃದಯದಿಂದ ಅಭಿಮಂತ್ರಿಸಿ ರಾಜನಿಗೆ ಕೊಟ್ಟನು.

02016030a ಉವಾಚ ಚ ಮಹಾಪ್ರಾಜ್ಞಸ್ತಂ ರಾಜಾನಂ ಮಹಾಮುನಿಃ|

02016030c ಗಚ್ಛ ರಾಜನ್ಕೃತಾರ್ಥೋಽಸಿ ನಿವರ್ತ ಮನುಜಾಧಿಪ||

ಮತ್ತು ಆ ಮಹಾಪ್ರಾಜ್ಞ ಮಹಾಮುನಿಯು ರಾಜನಿಗೆ ಹೇಳಿದನು: “ರಾಜನ್! ನಿನ್ನ ಆಸೆಯು ಈಡೇರುತ್ತದೆ. ಹೋಗು. ಮನುಜಾಧಿಪ! ಹಿಂದಿರುಗು.”

02016031a ಯಥಾಸಮಯಮಾಜ್ಞಾಯ ತದಾ ಸ ನೃಪಸತ್ತಮಃ|

02016031c ದ್ವಾಭ್ಯಾಮೇಕಂ ಫಲಂ ಪ್ರಾದಾತ್ಪತ್ನೀಭ್ಯಾಂ ಭರತರ್ಷಭ||

ಭರತರ್ಷಭ! ಆಗ ಆ ನೃಪತಿಸತ್ತಮನು ತಾನು ಮಾಡಿಕೊಂಡಿದ್ದ ಒಪ್ಪಂದವನ್ನು ನೆನಪಿಸಿಕೊಂಡು ತನ್ನ ಇಬ್ಬರು ಪತ್ನಿಯರಿಗೂ ಆ ಒಂದು ಫಲವನ್ನು ಕೊಟ್ಟನು.

02016032a ತೇ ತದಾಮ್ರಂ ದ್ವಿಧಾ ಕೃತ್ವಾ ಭಕ್ಷಯಾಮಾಸತುಃ ಶುಭೇ|

02016032c ಭಾವಿತ್ವಾದಪಿ ಚಾರ್ಥಸ್ಯ ಸತ್ಯವಾಕ್ಯಾತ್ತಥಾ ಮುನೇಃ||

02016033a ತಯೋಃ ಸಮಭವದ್ಗರ್ಭಃ ಫಲಪ್ರಾಶನಸಂಭವಃ|

02016033c ತೇ ಚ ದೃಷ್ಟ್ವಾ ನರಪತಿಃ ಪರಾಂ ಮುದಮವಾಪ ಹ||

ಶುಭೆಯರಿಬ್ಬರೂ ಆ ಮಾವಿನಹಣ್ಣನ್ನು ಅರ್ಧಮಾಡಿ ತಿಂದರು. ಮುನಿಯ ಸತ್ಯವಾಖ್ಯಗಳು ನಿಜವಾಗುವುದು ನಿರ್ದಿಷ್ಟವಾಗುವುದರಿಂದ, ಆ ಮಾವಿನ ಹಣ್ಣನ್ನು ತಿಂದ ಇಬ್ಬರೂ ಗರ್ಭವನ್ನು ಧರಿಸಿದರು. ಅವರನ್ನು ನೋಡಿದ ನರಪತಿಯು ಬಹಳ ಹರ್ಷಿತನಾದನು.

02016034a ಅಥ ಕಾಲೇ ಮಹಾಪ್ರಾಜ್ಞ ಯಥಾಸಮಯಮಾಗತೇ|

02016034c ಪ್ರಜಾಯೇತಾಮುಭೇ ರಾಜಂ ಶರೀರಶಕಲೇ ತದಾ||

02016035a ಏಕಾಕ್ಷಿಬಾಹುಚರಣೇ ಅರ್ಧೋದರಮುಖಸ್ಫಿಜೇ|

02016035c ದೃಷ್ಟ್ವಾ ಶರೀರಶಕಲೇ ಪ್ರವೇಪಾತೇ ಉಭೇ ಭೃಶಂ||

ಮಹಾಪ್ರಾಜ್ಞ ರಾಜನ್! ಸಮಯವು ಪ್ರಾಪ್ತಿಯಾದಾಗ ಇಬ್ಬರು ಶುಭೆಯರೂ ಅರ್ಧ ದೇಹವನ್ನು ಹೊಂದಿದ - ಒಂದು ಕಣ್ಣು, ಒಂದು ತೋಳು, ಒಂದು ಕಾಲು, ಕುಂಡೆ, ಅರ್ಧ ಮುಖ ಮತ್ತು ಹೊಟ್ಟೆಯ ಮಗುವಿಗೆ ಜನ್ಮವಿತ್ತರು. ಆ ಅರ್ಧ ಮಗುವನ್ನು ನೋಡಿ ಇಬ್ಬರೂ ಭಯದಿಂದ ನಡುಗಿದರು.

02016036a ಉದ್ವಿಗ್ನೇ ಸಹ ಸಮ್ಮಂತ್ರ್ಯ ತೇ ಭಗಿನ್ಯೌ ತದಾಬಲೇ|

02016036c ಸಜೀವೇ ಪ್ರಾಣಿಶಕಲೇ ತತ್ಯಜಾತೇ ಸುದುಃಖಿತೇ||

ಆಗ ಆ ಉದ್ವಿಗ್ನ ಅಬಲೆ ಸಹೋದರಿಯರು ಜೊತೆಗೆ ವಿಚಾರ ಮಾಡಿ ಬಹು ದುಃಖಿತರಾಗಿ ಜೀವಂತವಾಗಿದ್ದ ಆ ಎರಡು ಅರ್ಧ ಶಿಶುಗಳನ್ನು ಬಿಸಾಡಿದರು.

02016037a ತಯೋರ್ಧಾತ್ರ್ಯೌ ಸುಸಂವೀತೇ ಕೃತ್ವಾ ತೇ ಗರ್ಭಸಂಪ್ಲವೇ|

02016037c ನಿರ್ಗಮ್ಯಾಂತಃಪುರದ್ವಾರಾತ್ಸಮುತ್ಸೃಜ್ಯಾಶು ಜಗ್ಮತುಃ||

ಆ ಎರಡು ಅರ್ಧ ಶಿಶುಗಳನ್ನು ಸರಿಯಾಗಿ ಸುತ್ತಿ ಸೂತಗಿತ್ತಿಯರು ಅಂತಃಪುರದ ಬಾಗಿಲಿನಿಂದ ಹೊರಹೋಗಿ ಎಸೆದು ಅವಸರದಲ್ಲಿ ಹಿಂದಿರುಗಿದರು.

02016038a ತೇ ಚತುಷ್ಪಥನಿಕ್ಷಿಪ್ತೇ ಜರಾ ನಾಮಾಥ ರಾಕ್ಷಸೀ|

02016038c ಜಗ್ರಾಹ ಮನುಜವ್ಯಾಘ್ರ ಮಾಂಸಶೋಣಿತಭೋಜನಾ||

ಮನುಜವ್ಯಾಘ್ರ! ಅದೇ ಸಮಯದಲ್ಲಿ ರಕ್ತ-ಮಾಂಸಗಳನ್ನು ತಿನ್ನುವ ಜರಾ ಎಂಬ ಹೆಸರಿನ ರಾಕ್ಷಸಿಯು ನಾಲ್ಕು ರಸ್ತೆಗಳು ಸೇರುವಲ್ಲಿ ಇರಿಸಿದ್ದ ಮಕ್ಕಳನ್ನು ಎತ್ತಿಕೊಂಡಳು.

02016039a ಕರ್ತುಕಾಮಾ ಸುಖವಹೇ ಶಕಲೇ ಸಾ ತು ರಾಕ್ಷಸೀ|

02016039c ಸಂಘಟ್ಟಯಾಮಾಸ ತದಾ ವಿಧಾನಬಲಚೋದಿತಾ||

ಅವನ್ನು ತೆಗೆದುಕೊಂಡು ಹೋಗಲು ಸುಲಭವಾಗಲೆಂದು ಆ ರಾಕ್ಷಸಿಯು, ವಿಧಿಯ ಶಕ್ತಿಯಿಂದ ಪ್ರಚೋದಿತಳಾಗಿ, ಆ ಎರಡು ಅರ್ಧ ಶರೀರಗಳನ್ನು ಒಟ್ಟುಮಾಡಿ ಹಿಡಿದುಕೊಂಡಳು.

02016040a ತೇ ಸಮಾನೀತಮಾತ್ರೇ ತು ಶಕಲೇ ಪುರುಷರ್ಷಭ|

02016040c ಏಕಮೂರ್ತಿಕೃತೇ ವೀರಃ ಕುಮಾರಃ ಸಮಪದ್ಯತ||

ಪುರುಷರ್ಷಭ! ಆ ಎರಡು ಅರ್ಧಶರೀರಗಳನ್ನು ಒಟ್ಟುಮಾಡಿದ ಕೂಡಲೇ ಒಂದಾಗಿ ವೀರ ಕುಮಾರನ ಶರೀರವನ್ನು ತಾಳಿತು.

02016041a ತತಃ ಸಾ ರಾಕ್ಷಸೀ ರಾಜನ್ವಿಸ್ಮಯೋತ್ಫುಲ್ಲಲೋಚನಾ|

02016041c ನ ಶಶಾಕ ಸಮುದ್ವೋಢುಂ ವಜ್ರಸಾರಮಯಂ ಶಿಶುಂ||

ರಾಜನ್! ಆಗ ಆ ರಾಕ್ಷಸಿಯು ಆಶ್ಚರ್ಯದಿಂದ ತೆರೆದ ಕಣ್ಣುಗಳಿಂದ ನೋಡಿದಳು. ವಜ್ರದಿಂದ ಮಾಡಿದಂಥಿದ್ದ ಆ ಶಿಶುವನ್ನು ಎತ್ತಿಕೊಂಡು ಹೋಗಲೂ ಅವಳಿಗೆ ಸಾಧ್ಯವಾಗಲಿಲ್ಲ.

02016042a ಬಾಲಸ್ತಾಮ್ರತಲಂ ಮುಷ್ಟಿಂ ಕೃತ್ವಾ ಚಾಸ್ಯೇ ನಿಧಾಯ ಸಃ|

02016042c ಪ್ರಾಕ್ರೋಶದತಿಸಂರಂಭಾತ್ಸತೋಯ ಇವ ತೋಯದಃ||

ಆ ಬಾಲಕನು ತನ್ನ ಕೈಬೆರಳುಗಳನ್ನು ಮುಷ್ಟಿ ಮಾಡಿಕೊಂಡು ತನ್ನ ಬಾಯಿಯಲ್ಲಿಟ್ಟುಕೊಂಡು ಮಳೆಯ ಮೋಡವು ಒಡೆಯುವಾಗ ಹೇಗೆ ಗುಡುಗುತ್ತದೆಯೋ ಹಾಗೆ ಜೋರಾಗಿ ಅಳತೊಡಗಿದನು.

02016043a ತೇನ ಶಬ್ಧೇನ ಸಂಭ್ರಾಂತಃ ಸಹಸಾಂತಃಪುರೇ ಜನಃ|

02016043c ನಿರ್ಜಗಾಮ ನರವ್ಯಾಘ್ರ ರಾಜ್ಞಾ ಸಹ ಪರಂತಪ||

ಆ ಶಬ್ಧವನ್ನು ಕೇಳಿ ಸಂಭ್ರಾಂತನಾದ ಪರಂತಪ ನರವ್ಯಾಘ್ರ ರಾಜನು ಅಂತಃಪುರ ಜನರೊಂದಿಗೆ ಹೊರಬಂದನು.

02016044a ತೇ ಚಾಬಲೇ ಪರಿಗ್ಲಾನೇ ಪಯಃಪೂರ್ಣಪಯೋಧರೇ|

02016044c ನಿರಾಶೇ ಪುತ್ರಲಾಭಾಯ ಸಹಸೈವಾಭ್ಯಗಚ್ಛತಾಂ||

ದುಃಖಿತರಾದ, ನಿರಾಶರಾದ, ಹಾಲುತುಂಬಿದ ಸ್ತನಗಳ ಆ ಅಬಲೆಯರು ಪುತ್ರನನ್ನು ಪಡೆಯಲೋಸುಗ ತಕ್ಷಣವೇ ಓಡಿ ಬಂದರು.

02016045a ಅಥ ದೃಷ್ಟ್ವಾ ತಥಾಭೂತೇ ರಾಜಾನಂ ಚೇಷ್ಟಸಂತತಿಂ|

02016045c ತಂ ಚ ಬಾಲಂ ಸುಬಲಿನಂ ಚಿಂತಯಾಮಾಸ ರಾಕ್ಷಸೀ||

ಸಂತತಿಯನ್ನು ಬಯಸಿ ಬಂದ ಆ ರಾಜನನ್ನು ಮತ್ತು ಬಲಶಾಲಿ ಮಗುವನ್ನು ನೋಡಿದ ರಾಕ್ಷಸಿಯು ಯೋಚಿಸಿದಳು:

02016046a ನಾರ್ಹಾಮಿ ವಿಷಯೇ ರಾಜ್ಞೋ ವಸಂತೀ ಪುತ್ರಗೃದ್ಧಿನಃ|

02016046c ಬಾಲಂ ಪುತ್ರಮುಪಾದಾತುಂ ಮೇಘಲೇಖೇವ ಭಾಸ್ಕರಂ||

“ಪುತ್ರನಿಗಾಗಿ ಕೃಪಣನಾದ ಈ ರಾಜನ ರಾಜ್ಯದಲ್ಲಿ ವಾಸಿಸುತ್ತಿರುವ ನಾನು ಬಾಸ್ಕರನ ಕಿರಣಗಳನ್ನು ಕೊಂಡೊಯ್ಯುವ ಮೋಡಗಳಂತೆ ಈ ಬಾಲಕನನ್ನು ಎತ್ತಿಕೊಂಡು ಹೋಗಬಾರದು.”

02016047a ಸಾ ಕೃತ್ವಾ ಮಾನುಷಂ ರೂಪಮುವಾಚ ಮನುಜಾಧಿಪಂ|

02016047c ಬೃಹದ್ರಥ ಸುತಸ್ತೇಽಯಂ ಮದ್ದತ್ತಃ ಪ್ರತಿಗೃಹ್ಯತಾಂ||

ಅವಳು ಮನುಷ್ಯರೂಪವನ್ನು ಧರಿಸಿ ಮನುಜಾಧಿಪನಿಗೆ ಹೇಳಿದಳು: “ಬೃಹದ್ರಥ! ನಾನು ಕೊಡುತ್ತಿರುವ ಇವನು ನಿನ್ನ ಮಗ. ಸ್ವೀಕರಿಸು.

02016048a ತವ ಪತ್ನೀದ್ವಯೇ ಜಾತೋ ದ್ವಿಜಾತಿವರಶಾಸನಾತ್|

02016048c ಧಾತ್ರೀಜನಪರಿತ್ಯಕ್ತೋ ಮಯಾಯಂ ಪರಿರಕ್ಷಿತಃ||

ಆ ದ್ವಿಜಶ್ರೇಷ್ಠನ ವರಪ್ರಸಾದದಿಂದ ನಿನ್ನ ಇಬ್ಬರು ಪತ್ನಿಯರಲ್ಲಿ ಜನಿಸಿ, ಸೂಲಗಿತ್ತಿರಿಯರಿಂದ ಪರಿತ್ಯಕ್ತನಾದ ಇವನನ್ನು ನಾನು ರಕ್ಷಿಸಿದ್ದೇನೆ.”

02016049a ತತಸ್ತೇ ಭರತಶ್ರೇಷ್ಠ ಕಾಶಿರಾಜಸುತೇ ಶುಭೇ|

02016049c ತಂ ಬಾಲಮಭಿಪತ್ಯಾಶು ಪ್ರಸ್ನವೈರಭಿಷಿಂಚತಾಂ||

ಭರತಶ್ರೇಷ್ಠ! ಅನಂತರ ಸುಂದರ ಕಾಶಿರಾಜನ ಸುತೆಯರು ಆ ಬಾಲಕನನ್ನು ಎಳೆದು ಬಿಗಿದಪ್ಪಿ ಹರಿದು ಬರುತ್ತಿದ್ದ ಮೊಲೆಯ ಹಾಲನ್ನು ಅವನ ಮೇಲೆ ಸುರಿಸಿದರು.

02016050a ತತಃ ಸ ರಾಜಾ ಸಂಹೃಷ್ಟಃ ಸರ್ವಂ ತದುಪಲಭ್ಯ ಚ|

02016050c ಅಪೃಚ್ಛನ್ನವಹೇಮಾಭಾಂ ರಾಕ್ಷಸೀಂ ತಾಮರಾಕ್ಷಸೀಂ||

ಇದನ್ನೆಲ್ಲ ನೋಡಿ ಸಂತೋಷಗೊಂಡ ರಾಜನು ತನ್ನ ಮನುಷ್ಯರೂಪದಲ್ಲಿ ರಾಕ್ಷಸಿಯಂತೆ ತೋರದಿದ್ದ ಹೊಸ ಬಂಗಾರದ ಕಾಂತಿಯುಕ್ತ ಆ ರಾಕ್ಷಸಿಗೆ ಹೇಳಿದನು: 

02016051a ಕಾ ತ್ವಂ ಕಮಲಗರ್ಭಾಭೇ ಮಮ ಪುತ್ರಪ್ರದಾಯಿನೀ|

02016051c ಕಾಮಯಾ ಬ್ರೂಹಿ ಕಲ್ಯಾಣಿ ದೇವತಾ ಪ್ರತಿಭಾಸಿ ಮೇ||

“ನನ್ನ ಮಗನನ್ನು ಇತ್ತ ಕಮಲದ ಕುಸುಮದಂತೆ ಕಾಂತಿಯುಕ್ತಳಾದ ನೀನು ಯಾರು? ಕಲ್ಯಾಣಿ! ನನಗೆ ನಿನ್ನ ಮೇಲುಂಟಾದ ಪ್ರೀತಿಗಾಗಿ ಹೇಳು. ನಿನ್ನ ಪ್ರತಿಭೆಯನ್ನು ನೋಡಿದರೆ ದೇವತೆಯೆಂದು ನನಗನ್ನಿಸುತ್ತದೆ.”

ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಮಂತ್ರಪರ್ವಣಿ ಜರಾಸಂಧೋತ್ಪತ್ತೌ ಷೋಡಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಮಂತ್ರಪರ್ವದಲ್ಲಿ ಜರಾಸಂಧೋತ್ಪತ್ತಿ ಎನ್ನುವ ಹದಿನಾರನೆಯ ಅಧ್ಯಾಯವು.

Image result for indian motifs

Comments are closed.