|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಸಭಾ ಪರ್ವ: ಮಂತ್ರ ಪರ್ವ
೧೨
ರಾಜಸೂಯದ ಕುರಿತು ಯುಧಿಷ್ಠಿರನ ಸಮಾಲೋಚನೆ
ರಾಜಸೂಯದ ಕುರಿತು ಯುಧಿಷ್ಠಿರನು ಬಹಳಷ್ಟು ಚಿಂತಿಸಿದುದು ಮತ್ತು ಎಲ್ಲರೊಡನೆ ಸಮಾಲೋಚನೆ ಮಾಡಿದುದು (೧-೨೩). ಶ್ರೀಕೃಷ್ಣನನ್ನು ನೆನೆಯಿಸಿಕೊಂಡು ಅವನನ್ನು ಕರೆತರಿಸಿಕೊಂಡಿದ್ದುದು (೨೪-೨೯). ಶ್ರೀಕೃಷ್ಣನ ಆಗಮನ ಮತ್ತು ಅವನೊಂದಿಗೆ ಸಮಾಲೋಚನೆ (೩೦-೪೦).
02012001 ವೈಶಂಪಾಯನ ಉವಾಚ|
02012001a ಋಷೇಸ್ತದ್ವಚನಂ ಶ್ರುತ್ವಾ ನಿಶಶ್ವಾಸ ಯುಧಿಷ್ಠಿರಃ|
02012001c ಚಿಂತಯನ್ ರಾಜಸೂಯಾಪ್ತಿಂ ನ ಲೇಭೇ ಶರ್ಮ ಭಾರತ||
ವೈಶಂಪಾಯನನು ಹೇಳಿದನು: “ಭಾರತ! ಋಷಿಯ ಈ ಮಾತನ್ನು ಕೇಳಿ ಯುಧಿಷ್ಠಿರನು ನಿಟ್ಟುಸಿರೆಳೆದು, ರಾಜಸೂಯವನ್ನು ಹೇಗೆ ನೆರವೇರಿಸಬಹುದು ಎಂದು ಚಿಂತಿಸಿದನು ಮತ್ತು ಯಾವುದೇ ರೀತಿಯ ಸಾಂತ್ವನವನ್ನು ಪಡೆಯಲಿಲ್ಲ.
02012002a ರಾಜರ್ಷೀಣಾಂ ಹಿ ತಂ ಶ್ರುತ್ವಾ ಮಹಿಮಾನಂ ಮಹಾತ್ಮನಾಂ|
02012002c ಯಜ್ವನಾಂ ಕರ್ಮಭಿಃ ಪುಣ್ಯೈರ್ಲೋಕಪ್ರಾಪ್ತಿಂ ಸಮೀಕ್ಷ್ಯ ಚ||
02012003a ಹರಿಶ್ಚಂದ್ರಂ ಚ ರಾಜರ್ಷಿಂ ರೋಚಮಾನಂ ವಿಶೇಷತಃ|
02012003c ಯಜ್ವಾನಂ ಯಜ್ಞಮಾಹರ್ತುಂ ರಾಜಸೂಯಮಿಯೇಷ ಸಃ||
ಮಹಾತ್ಮ ರಾಜರ್ಷಿಗಳ ಮಹಿಮೆಗಳನ್ನು ಕೇಳಿ ಮತ್ತು ಈ ಯಾಗಕರ್ಮದಿಂದ ಅವರಿಗೆ ಪುಣ್ಯಲೋಕ ಪ್ರಾಪ್ತಿಯಾದುದನ್ನು ನೋಡಿ, ಅದರಲ್ಲೂ ವಿಶೇಷವಾಗಿ ರಾಜರ್ಷಿ ಹರಿಶ್ಚಂದ್ರನು ಯಜಿಸಿದ ರಾಜಸೂಯ ಯಜ್ಞವನ್ನು ಕೈಗೊಳ್ಳಲು ಬಯಸಿದನು.
02012004a ಯುಧಿಷ್ಠಿರಸ್ತತಃ ಸರ್ವಾನರ್ಚಯಿತ್ವಾ ಸಭಾಸದಃ|
02012004c ಪ್ರತ್ಯರ್ಚಿತಶ್ಚ ತೈಃ ಸರ್ವೈರ್ಯಜ್ಞಾಯೈವ ಮನೋ ದಧೇ||
ನಂತರ ಯುಧಿಷ್ಠಿರನು ಸಭಾಸದರೆಲ್ಲರನ್ನೂ ಅರ್ಚಿಸಿ, ತಿರುಗಿ ಅವರೆಲ್ಲರಿಂದ ಗೌರವವಿಸಲ್ಪಟ್ಟು, ಯಜ್ಞದ ಕುರಿತು ಯೋಚಿಸತೊಡಗಿದನು.
02012005a ಸ ರಾಜಸೂಯಂ ರಾಜೇಂದ್ರ ಕುರೂಣಾಂ ಋಷಭಃ ಕ್ರತುಂ|
02012005c ಆಹರ್ತುಂ ಪ್ರವಣಂ ಚಕ್ರೇ ಮನಃ ಸಂಚಿಂತ್ಯ ಸೋಽಸಕೃತ್||
ಬಹಳಷ್ಟು ಯೋಚನೆಮಾಡಿದ ನಂತರ ಆ ಕುರುವೃಷಭ ರಾಜೇಂದ್ರನು ರಾಜಸೂಯ ಕ್ರತುವನ್ನು ಕೈಗೊಳ್ಳಲು ಮನಸ್ಸು ಮಾಡಿದನು,
02012006a ಭೂಯಶ್ಚಾದ್ಭುತವೀರ್ಯೌಜಾ ಧರ್ಮಮೇವಾನುಪಾಲಯನ್|
02012006c ಕಿಂ ಹಿತಂ ಸರ್ವಲೋಕಾನಾಂ ಭವೇದಿತಿ ಮನೋ ದಧೇ||
ಪುನಃ ಧರ್ಮವನ್ನೇ ಅನುಪಾಲಿಸುತ್ತಿದ್ದ ಆ ಅದ್ಭುತವೀರ್ಯಜನು ಇದು ಸರ್ವಲೋಕಗಳಿಗೂ ಹಿತವಾದದ್ದುದೇ ಎಂದು ಯೋಚಿಸಿದನು.
02012007a ಅನುಗೃಹ್ಣನ್ಪ್ರಜಾಃ ಸರ್ವಾಃ ಸರ್ವಧರ್ಮವಿದಾಂ ವರಃ|
02012007c ಅವಿಶೇಷೇಣ ಸರ್ವೇಷಾಂ ಹಿತಂ ಚಕ್ರೇ ಯುಧಿಷ್ಠಿರಃ||
ಸರ್ವ ಧರ್ಮವಿದರಲ್ಲಿ ವರಿಷ್ಠ ಯುಧಿಷ್ಠಿರನು ಸರ್ವ ಪ್ರಜೆಗಳನ್ನೂ ಗಮನದಲ್ಲಿಟ್ಟುಕೊಂಡು ಯಾರನ್ನೂ ಬಿಡದೇ ಎಲ್ಲರಿಗೂ ಹಿತವಾದುದನ್ನು ಕೈಗೊಂಡನು.
02012008a ಏವಂ ಗತೇ ತತಸ್ತಸ್ಮಿನ್ಪಿತರೀವಾಶ್ವಸಂ ಜನಾಃ|
02012008c ನ ತಸ್ಯ ವಿದ್ಯತೇ ದ್ವೇಷ್ಟಾ ತತೋಽಸ್ಯಾಜಾತಶತ್ರುತಾ||
ಹೀಗೆ ಮುಂದುವರೆದು ಅವನು ತನ್ನ ಜನರಿಗೆ ತಂದೆಯಂತೆ ಆಶ್ವಾಸನೆಗಳನ್ನಿತ್ತನು ಮತ್ತು ಅವನನ್ನು ದ್ವೇಷಿಸುವವರು ಯಾರೂ ಇಲ್ಲದೇ ಹೋದುದರಿಂದ ಅವನು ಅಜಾತಶತ್ರು ಎಂದು ಕರೆಯಿಸಿಕೊಂಡನು.
02012009a ಸ ಮಂತ್ರಿಣಃ ಸಮಾನಾಯ್ಯ ಭ್ರಾತೄಂಶ್ಚ ವದತಾಂ ವರಃ|
02012009c ರಾಜಸೂಯಂ ಪ್ರತಿ ತದಾ ಪುನಃ ಪುನರಪೃಚ್ಛತ||
ಮಾತನಾಡುವವರಲ್ಲಿ ಶ್ರೇಷ್ಠ ಅವನು ತನ್ನ ಮಂತ್ರಿಗಳು ಮತ್ತು ಭ್ರಾತೃಗಳನ್ನು ಕರೆಯಿಸಿ ರಾಜಸೂಯದ ಕುರಿತು ಪುನಃ ಪುನಃ ಕೇಳುತ್ತಿದ್ದನು.
02012010a ತೇ ಪೃಚ್ಛ್ಯಮಾನಾಃ ಸಹಿತಾ ವಚೋಽರ್ಥ್ಯಂ ಮಂತ್ರಿಣಸ್ತದಾ|
02012010c ಯುಧಿಷ್ಠಿರಂ ಮಹಾಪ್ರಾಜ್ಞಂ ಯಿಯಕ್ಷುಮಿದಮಬ್ರುವನ್||
ಈ ರೀತಿಯ ಪ್ರಶ್ನೆ ಬರಲು ಅಲ್ಲಿ ಸೇರಿದ್ದ ಮಂತ್ರಿಗಳು ಯಜ್ಞವನ್ನು ಕೈಗೊಳ್ಳಲು ಉತ್ಸುಕನಾಗಿದ್ದ ಮಹಾಪ್ರಾಜ್ಞ ಯುಧಿಷ್ಠಿರನಿಗೆ ಹೇಳಿದರು:
02012011a ಯೇನಾಭಿಷಿಕ್ತೋ ನೃಪತಿರ್ವಾರುಣಂ ಗುಣಮೃಚ್ಛತಿ|
02012011c ತೇನ ರಾಜಾಪಿ ಸನ್ ಕೃತ್ಸ್ನಂ ಸಮ್ರಾಡ್ಗುಣಮಭೀಪ್ಸತಿ||
“ಈ ರೀತಿ ಅಭಿಷಿಕ್ತನಾಗುವುದರಿಂದ ನೃಪತಿಯು ವರುಣನ ಸ್ಥಾನವನ್ನು ಪಡೆಯುತ್ತಾನೆ. ಅವನು ಆಗ ರಾಜನಾಗಿದ್ದರೂ ಸಂಪೂರ್ಣ ಸಮ್ರಾಟನ ಸ್ಥಾನವನ್ನು ಪಡೆಯುತ್ತಾನೆ.
02012012a ತಸ್ಯ ಸಮ್ರಾಡ್ಗುಣಾರ್ಹಸ್ಯ ಭವತಃ ಕುರುನಂದನ|
02012012c ರಾಜಸೂಯಸ್ಯ ಸಮಯಂ ಮನ್ಯಂತೇ ಸುಹೃದಸ್ತವ||
ಕುರುನಂದನ! ನೀನು ಅಂಥಹ ಸಮ್ರಾಟ ಸ್ಥಾನಕ್ಕೆ ಅರ್ಹನಾಗಿದ್ದುದರಿಂದ ರಾಜಸೂಯದ ಸಮಯ ಪ್ರಾಪ್ತವಾಗಿದೆ ಎಂದು ನಿನ್ನ ಸುಹೃದಯರು ಅಭಿಪ್ರಾಯ ಪಡುತ್ತಾರೆ.
02012013a ತಸ್ಯ ಯಜ್ಞಸ್ಯ ಸಮಯಃ ಸ್ವಾಧೀನಃ ಕ್ಷತ್ರಸಂಪದಾ|
02012013c ಸಾಮ್ನಾ ಷಡಗ್ನಯೋ ಯಸ್ಮಿಂಶ್ಚೀಯಂತೇ ಸಂಶಿತವ್ರತೈಃ||
ಸಂಶಿತವ್ರತರು ಸಾಮವೇದದ ಮೂಲಕ ಆರು ಅಗ್ನಿಗಳನ್ನು ಸ್ಥಾಪಿಸುವ ಈ ಯಜ್ಞಕ್ಕೆ ಕ್ಷತ್ರಿಯರ ಸಮ್ಮತವಿರಬೇಕಾಗಿದ್ದುದರಿಂದ ತನ್ನದೇ ಆದ ಸಮಯವೆಂದಿಲ್ಲ.
02012014a ದರ್ವೀಹೋಮಾನುಪಾದಾಯ ಸರ್ವಾನ್ಯಃ ಪ್ರಾಪ್ನುತೇ ಕ್ರತೂನ್|
02012014c ಅಭಿಷೇಕಂ ಚ ಯಜ್ಞಾಂತೇ ಸರ್ವಜಿತ್ತೇನ ಚೋಚ್ಯತೇ||
ಎಲ್ಲ ಕ್ರಮಗಳನ್ನೂ ಆಹುತಿಗಳನ್ನೂ ನಡೆಸಿ ಕ್ರತುವನ್ನು ಪೂರೈಸಿ ಅಭಿಷಿಕ್ತನಾದ ನಂತರವೇ ಅವನನ್ನು ಸರ್ವಜಿತುವೆಂದು ಕರೆಯಲಾಗುತ್ತದೆ.
02012015a ಸಮರ್ಥೋಽಸಿ ಮಹಾಬಾಹೋ ಸರ್ವೇ ತೇ ವಶಗಾ ವಯಂ|
02012015c ಅವಿಚಾರ್ಯ ಮಹಾರಾಜ ರಾಜಸೂಯೇ ಮನಃ ಕುರು||
ಮಹಾರಾಜ! ಮಹಾಬಾಹೋ! ನಾವೆಲ್ಲರೂ ನಿನ್ನ ವಶದಲ್ಲಿದ್ದೇವೆ. ನೀನು ಸಮರ್ಥನಾಗಿದ್ದೀಯೆ. ವಿಚಾರಮಾಡದೇ ರಾಜಸೂಯಕ್ಕೆ ಮನಸ್ಸು ಮಾಡು.”
02012016a ಇತ್ಯೇವಂ ಸುಹೃದಃ ಸರ್ವೇ ಪೃಥಕ್ಚ ಸಹ ಚಾಬ್ರುವನ್|
02012016c ಸ ಧರ್ಮ್ಯಂ ಪಾಂಡವಸ್ತೇಷಾಂ ವಚಃ ಶ್ರುತ್ವಾ ವಿಶಾಂ ಪತೇ|
02012016e ಧೃಷ್ಟಮಿಷ್ಟಂ ವರಿಷ್ಠಂ ಚ ಜಗ್ರಾಹ ಮನಸಾರಿಹಾ||
ಹೀಗೆ ಅವನ ಸರ್ವ ಸುಹೃದಯರೂ ಪುನಃ ಪುನಃ ಹೇಳಿದರು. ಅಂಥಹ ಧಾರ್ಮಿಕ, ಧೃಷ್ಟ, ಇಷ್ಟ, ಮತ್ತು ವರಿಷ್ಠ ಮಾತುಗಳನ್ನು ಅವರಿಂದ ಕೇಳಿದ ವಿಶಾಂಪತಿ ಪಾಂಡವನು ಅದನ್ನು ಸ್ವೀಕರಿಸಿದನು.
02012017a ಶ್ರುತ್ವಾ ಸುಹೃದ್ವಚಸ್ತಚ್ಚ ಜಾನಂಶ್ಚಾಪ್ಯಾತ್ಮನಃ ಕ್ಷಮಂ|
02012017c ಪುನಃ ಪುನರ್ಮನೋ ದಧ್ರೇ ರಾಜಸೂಯಾಯ ಭಾರತ||
ಭಾರತ! ಸುಹೃದಯರ ಮಾತುಗಳನ್ನು ಕೇಳಿ ಮತ್ತು ತಾನು ಸಮರ್ಥನೆಂದು ತಿಳಿದ ಅವನು ಪುನಃ ಪುನಃ ಮನಸ್ಸಿನಲ್ಲಿಯೇ ರಾಜಸೂಯದ ಕುರಿತು ಯೋಚಿಸಿದನು.
02012018a ಸ ಭ್ರಾತೃಭಿಃ ಪುನರ್ಧೀಮಾನೃತ್ವಿಗ್ಭಿಶ್ಚ ಮಹಾತ್ಮಭಿಃ|
02012018c ಧೌಮ್ಯದ್ವೈಪಾಯನಾದ್ಯೈಶ್ಚ ಮಂತ್ರಯಾಮಾಸ ಮಂತ್ರಿಭಿಃ||
ಆ ಮಹಾತ್ಮನು ಪುನಃ ಪುನಃ ಭ್ರಾತೃಗಳೊಡನೆ, ಧೌಮ್ಯ-ದ್ವೈಪಾಯನರಂಥಹ ಧೀಮಂತ ಋತ್ವಿಗರೊಡನೆ, ಮತ್ತು ಮಂತಿಗಳೊಡನೆ ಮಂತ್ರಾಲೋಚನೆ ಮಾಡಿದನು.
02012019 ಯುಧಿಷ್ಠಿರ ಉವಾಚ|
02012019a ಇಯಂ ಯಾ ರಾಜಸೂಯಸ್ಯ ಸಮ್ರಾಡರ್ಹಸ್ಯ ಸುಕ್ರತೋಃ|
02012019c ಶ್ರದ್ದಧಾನಸ್ಯ ವದತಃ ಸ್ಪೃಹಾ ಮೇ ಸಾ ಕಥಂ ಭವೇತ್||
ಯುಧಿಷ್ಠಿರನು ಹೇಳಿದನು: “ಶ್ರದ್ಧೆಯಿಂದ ಹೇಳುತ್ತಿರುವ ಈ ಸಮ್ರಾಟಸ್ಥಾನವನ್ನು ನೀಡುವ ಸುಕ್ರತು ರಾಜಸೂಯವು ಹೇಗೆ ನಡೆಯಬಹುದು?””
02012020 ವೈಶಂಪಾಯನ ಉವಾಚ|
02012020a ಏವಮುಕ್ತಾಸ್ತು ತೇ ತೇನ ರಾಜ್ಞಾ ರಾಜೀವಲೋಚನ|
02012020c ಇದಮೂಚುರ್ವಚಃ ಕಾಲೇ ಧರ್ಮಾತ್ಮಾನಂ ಯುಧಿಷ್ಠಿರಂ|
02012020e ಅರ್ಹಸ್ತ್ವಮಸಿ ಧರ್ಮಜ್ಞ ರಾಜಸೂಯಂ ಮಹಾಕ್ರತುಂ||
ವೈಶಂಪಾಯನನು ಹೇಳಿದನು: “ರಾಜೀವಲೋಚನ! ಆ ರಾಜನು ಹೀಗೆ ಹೇಳಲು ಧರ್ಮಾತ್ಮ ಯುಧಿಷ್ಠಿರನಿಗೆ ಪ್ರತಿಸಲವೂ “ಧರ್ಮಜ್ಞ! ರಾಜಸೂಯ ಮಹಾಕ್ರತುವಿಗೆ ನೀನು ಅರ್ಹ!” ಎಂದು ಹೇಳುತ್ತಿದ್ದರು.
02012021a ಅಥೈವಮುಕ್ತೇ ನೃಪತಾವೃತ್ವಿಗ್ಭಿರೃಷಿಭಿಸ್ತಥಾ|
02012021c ಮಂತ್ರಿಣೋ ಭ್ರಾತರಶ್ಚಾಸ್ಯ ತದ್ವಚಃ ಪ್ರತ್ಯಪೂಜಯನ್||
02012022a ಸ ತು ರಾಜಾ ಮಹಾಪ್ರಾಜ್ಞಃ ಪುನರೇವಾತ್ಮನಾತ್ಮವಾನ್|
02012022c ಭೂಯೋ ವಿಮಮೃಶೇ ಪಾರ್ಥೋ ಲೋಕಾನಾಂ ಹಿತಕಾಮ್ಯಯಾ||
ಋತ್ವಿಗ ಋಷಿಗಳು ಈ ರೀತಿ ನೃಪತಿಗೆ ಹೇಳಲು ಮಂತ್ರಿಗಳು ಮತ್ತು ಸಹೋದರರು ಆ ಮಾತನ್ನು ಸನ್ಮಾನಿಸಿ ಸ್ವಾಗತಿಸಿದರು. ಮಹಾಪ್ರಜ್ಞ ರಾಜ ಪಾರ್ಥನಾದರೂ ಲೋಕಗಳ ಹಿತವನ್ನೇ ಬಯಸಿ ಪುನಃ ತನ್ನ ಮನಸ್ಸಿನಲ್ಲಿಯೇ ವಿಮರ್ಶಿಸಿದನು.
02012023a ಸಾಮರ್ಥ್ಯಯೋಗಂ ಸಂಪ್ರೇಕ್ಷ್ಯ ದೇಶಕಾಲೌ ವ್ಯಯಾಗಮೌ|
02012023c ವಿಮೃಶ್ಯ ಸಮ್ಯಕ್ಚ ಧಿಯಾ ಕುರ್ವನ್ಪ್ರಾಜ್ಞೋ ನ ಸೀದತಿ||
ತನ್ನ ಸಾಮರ್ಥ್ಯವನ್ನು ಪರಿಗಣಿಸಿ, ದೇಶ ಕಾಲಗಳನ್ನು ತುಲನೆ ಮಾಡಿ, ಆದಾಯ ವ್ಯಯಗಳನ್ನು ಪರಿಶೀಲಿಸಿ ಕಾರ್ಯವನ್ನು ಕೈಗೊಳ್ಳುವ ಪ್ರಾಜ್ಞನು ಎಂದೂ ನಾಶವಾಗುವುದಿಲ್ಲ.
02012024a ನ ಹಿ ಯಜ್ಞಸಮಾರಂಭಃ ಕೇವಲಾತ್ಮವಿಪತ್ತಯೇ|
02012024c ಭವತೀತಿ ಸಮಾಜ್ಞಾಯ ಯತ್ನತಃ ಕಾರ್ಯಮುದ್ವಹನ್||
02012025a ಸ ನಿಶ್ಚಯಾರ್ಥಂ ಕಾರ್ಯಸ್ಯ ಕೃಷ್ಣಮೇವ ಜನಾರ್ದನಂ|
02012025c ಸರ್ವಲೋಕಾತ್ಪರಂ ಮತ್ವಾ ಜಗಾಮ ಮನಸಾ ಹರಿಂ||
ತನ್ನನ್ನು ಆಪತ್ತಿನಲ್ಲಿ ತಂದುಕೊಳ್ಳಲು ಯಜ್ಞ ಸಮಾರಂಭವನ್ನು ಕೈಗೊಳ್ಳಬಾರದು ಮತ್ತು ಈ ಕಾರ್ಯದಲ್ಲಿ ಪ್ರಯತ್ನ ಬೇಕು ಎಂದು ತಿಳಿದ ಅವನು ಆ ಕಾರ್ಯದ ನಿಶ್ಚಿತಾರ್ಥಕ್ಕಾಗಿ ಮನಸ್ಸಿನಲ್ಲಿಯೇ ಸರ್ವಲೋಕಗಳಲ್ಲಿ ಶ್ರೇಷ್ಠನೆಂದು ತಿಳಿದ ಜನಾರ್ದನ ಹರಿ ಕೃಷ್ಣನಲ್ಲಿಗೆ ಹೋದನು.
02012026a ಅಪ್ರಮೇಯಂ ಮಹಾಬಾಹುಂ ಕಾಮಾಜ್ಜಾತಮಜಂ ನೃಷು|
02012026c ಪಾಂಡವಸ್ತರ್ಕಯಾಮಾಸ ಕರ್ಮಭಿರ್ದೇವಸಮ್ಮಿತೈಃ||
ಪಾಂಡವನು ದೇವಕರ್ಮಗಳಿಗೆ ಸಮ ಕಾರ್ಯಗಳನ್ನೆಸಗಿದ ಆ ಮಹಾಬಾಹು, ಹುಟ್ಟಿಲ್ಲದ ಆದರೂ ಸ್ವ ಇಚ್ಛೆಯಿಂದ ಮನುಷ್ಯರಲ್ಲಿ ಜನ್ಮ ತಾಳಿದ ಅಪ್ರಮೇಯನನ್ನು ನೆನೆದನು.
02012027a ನಾಸ್ಯ ಕಿಂ ಚಿದವಿಜ್ಞಾತಂ ನಾಸ್ಯ ಕಿಂ ಚಿದಕರ್ಮಜಂ|
02012027c ನ ಸ ಕಿಂ ಚಿನ್ನ ವಿಷಹೇದಿತಿ ಕೃಷ್ಣಮಮನ್ಯತ||
ಅವನಿಗೆ ತಿಳಿಯದೇ ಇದ್ದದ್ದು ಏನೂ ಇಲ್ಲ. ಅವನ ಕರ್ಮದಿಂದ ಹುಟ್ಟದೇ ಇರುವಂಥಹುದು ಏನೂ ಇಲ್ಲ. ಅವನು ಸಹಿಸದೇ ಇರುವಂಥಹುದು ಯಾವುದೂ ಇಲ್ಲ ಎಂದು ಕೃಷ್ಣನ ಕುರಿತು ಅವನು ಯೋಚಿಸಿದನು.
02012028a ಸ ತು ತಾಂ ನೈಷ್ಠಿಕೀಂ ಬುದ್ಧಿಂ ಕೃತ್ವಾ ಪಾರ್ಥೋ ಯುಧಿಷ್ಠಿರಃ|
02012028c ಗುರುವದ್ಭೂತಗುರವೇ ಪ್ರಾಹಿಣೋದ್ದೂತಮಂಜಸಾ||
ಅಂತಿಮ ನಿರ್ಧಾರಕ್ಕೆ ಬಂದ ನಂತರ ಪಾರ್ಥ ಯುಧಿಷ್ಠಿರನು ಬೇಗನೆ ಗುರುವಿಗೆ ಕಳುಹಿಸುವಂತೆ ದೂತನನ್ನು ಆ ಸರ್ವ ಭೂತಗಳ ಗುರುವಿಗೆ ಕಳುಹಿಸಿದನು.
02012029a ಶೀಘ್ರಗೇನ ರಥೇನಾಶು ಸ ದೂತಃ ಪ್ರಾಪ್ಯ ಯಾದವಾನ್|
02012029c ದ್ವಾರಕಾವಾಸಿನಂ ಕೃಷ್ಣಂ ದ್ವಾರವತ್ಯಾಂ ಸಮಾಸದತ್||
ಶೀಘ್ರರಥದಲ್ಲಿ ಬೇಗನೇ ಯಾದವರನ್ನು ತಲುಪಿದ ದೂತನು ದ್ವಾರಕಾವಾಸಿ ಕೃಷ್ಣನನ್ನು ದ್ವಾರವತಿಯ ಮನೆಯಲ್ಲಿ ಕಂಡನು.
02012030a ದರ್ಶನಾಕಾಂಕ್ಷಿಣಂ ಪಾರ್ಥಂ ದರ್ಶನಾಕಾಂಕ್ಷಯಾಚ್ಯುತಃ|
02012030c ಇಂದ್ರಸೇನೇನ ಸಹಿತ ಇಂದ್ರಪ್ರಸ್ಥಂ ಯಯೌ ತದಾ||
ತನ್ನನ್ನು ನೋಡಲು ಬಯಸಿದ ಪಾರ್ಥನನ್ನು ನೋಡುವ ಆಸೆಯಿಂದ ಅಚ್ಯುತನು ಇಂದ್ರಸೇನನನ್ನೊಡಗೊಂಡು ಇಂದ್ರಪ್ರಸ್ಥಕ್ಕೆ ಹೊರಟನು.
02012031a ವ್ಯತೀತ್ಯ ವಿವಿಧಾನ್ದೇಶಾಂಸ್ತ್ವರಾವಾನ್ ಕ್ಷಿಪ್ರವಾಹನಃ|
02012031c ಇಂದ್ರಪ್ರಸ್ಥಗತಂ ಪಾರ್ಥಮಭ್ಯಗಚ್ಛಜ್ಜನಾರ್ದನಃ||
ಕ್ಷಿಪ್ರವಾಹನವನ್ನೇರಿ ವಿವಿಧದೇಶಗಳನ್ನು ವೇಗವಾಗಿ ದಾಟಿ ಜನಾರ್ದನನು ಇಂದ್ರಪ್ರಸ್ಥವನ್ನು ಸೇರಿ ಪಾರ್ಥನನ್ನು ಭೇಟಿಯಾದನು.
02012032a ಸ ಗೃಹೇ ಭ್ರಾತೃವದ್ಭ್ರಾತ್ರಾ ಧರ್ಮರಾಜೇನ ಪೂಜಿತಃ|
02012032c ಭೀಮೇನ ಚ ತತೋಽಪಶ್ಯತ್ಸ್ವಸಾರಂ ಪ್ರೀತಿಮಾನ್ಪಿತುಃ||
ಭ್ರಾತೃವಿನ ಮನೆಗೆ ಭ್ರಾತೃವನ್ನು ಸ್ವಾಗತಿಸುವಂತೆ ಧರ್ಮರಾಜ- ಭೀಮಸೇನರು ಸ್ವಾಗತಿಸಲು ಅವನು ತನ್ನ ತಂದೆಯ ತಂಗಿಯನ್ನು ಪ್ರೀತಿಯಿಂದ ಕಂಡನು.
02012033a ಪ್ರೀತಃ ಪ್ರಿಯೇಣ ಸುಹೃದಾ ರೇಮೇ ಸ ಸಹಿತಸ್ತದಾ|
02012033c ಅರ್ಜುನೇನ ಯಮಾಭ್ಯಾಂ ಚ ಗುರುವತ್ಪರ್ಯುಪಸ್ಥಿತಃ||
ತನ್ನ ಪ್ರೀತಿಯ ಸುಹೃದ ಅರ್ಜುನನೊಡನೆ ರಮಿಸಿದನು ಮತ್ತು ಯಮಳರಿಂದ ಗುರುವಿಗೆ ತಕ್ಕ ಗೌರವವನ್ನು ಪಡೆದನು.
02012034a ತಂ ವಿಶ್ರಾಂತಂ ಶುಭೇ ದೇಶೇ ಕ್ಷಣಿನಂ ಕಲ್ಯಮಚ್ಯುತಂ|
02012034c ಧರ್ಮರಾಜಃ ಸಮಾಗಮ್ಯ ಜ್ಞಾಪಯತ್ಸ್ವಂ ಪ್ರಯೋಜನಂ||
ಅವನು ವಿಶ್ರಾಂತಿಯನ್ನು ಹೊಂದ ನಂತರ ಸಮಯ ಮಾಡಿಕೊಂಡು ಶುಭದೇಶದಲ್ಲಿ ಧರ್ಮರಾಜನು ಅವನನ್ನು ಬೇಟಿಮಾಡಿ ತನ್ನ ಯೋಜನೆಯ ಕುರಿತು ಹೇಳಿಕೊಂಡನು.
02012035 ಯುಧಿಷ್ಠಿರ ಉವಾಚ|
02012035a ಪ್ರಾರ್ಥಿತೋ ರಾಜಸೂಯೋ ಮೇ ನ ಚಾಸೌ ಕೇವಲೇಪ್ಸಯಾ|
02012035c ಪ್ರಾಪ್ಯತೇ ಯೇನ ತತ್ತೇ ಹ ವಿದಿತಂ ಕೃಷ್ಣ ಸರ್ವಶಃ||
ಯುಧಿಷ್ಠಿರನು ಹೇಳಿದನು: “ರಾಜಸೂಯವನ್ನು ಕೈಗೊಳ್ಳುವ ಮನಸ್ಸಾಗಿದೆ. ಆದರೆ ಕೃಷ್ಣ! ನಿನಗೆ ತಿಳಿದಿದೆ ಇದನ್ನು ಕೇವಲ ಇಚ್ಛಿಸುವುದರಿಂದ ಮಾತ್ರ ನೆರವೇರಿಸಿದಂತಾಗುವುದಿಲ್ಲ.
02012036a ಯಸ್ಮಿನ್ಸರ್ವಂ ಸಂಭವತಿ ಯಶ್ಚ ಸರ್ವತ್ರ ಪೂಜ್ಯತೇ|
02012036c ಯಶ್ಚ ಸರ್ವೇಶ್ವರೋ ರಾಜಾ ರಾಜಸೂಯಂ ಸ ವಿಂದತಿ||
ಯಾವುದರಿಂದ ಎಲ್ಲವೂ ಸಂಭವಿಸುತ್ತವೆಯೋ ಯಾವುದನ್ನು ಎಲ್ಲೆಡೆಯೂ ಪೂಜಿಸುತ್ತಾರೋ ಮತ್ತು ಯಾವ ರಾಜನನ್ನು ಸರ್ವೇಶ್ವರನೆಂದು ಪರಿಗಣಿಸುತ್ತಾರೋ ಅದೇ ರಾಜಸೂಯ.
02012037a ತಂ ರಾಜಸೂಯಂ ಸುಹೃದಃ ಕಾರ್ಯಮಾಹುಃ ಸಮೇತ್ಯ ಮೇ|
02012037c ತತ್ರ ಮೇ ನಿಶ್ಚಿತತಮಂ ತವ ಕೃಷ್ಣ ಗಿರಾ ಭವೇತ್||
ಸಭೆಯಲ್ಲಿ ನನ್ನ ಮಿತ್ರರು ನಾನು ರಾಜಸೂಯವನ್ನು ಮಾಡಲು ಅರ್ಹ ಎಂದಿದ್ದಾರೆ. ಆದರೆ ಕೃಷ್ಣ! ಇದರ ಕುರಿತು ನಿನ್ನ ಮಾತುಗಳನ್ನು ಕೇಳಿಯೇ ನಿಶ್ಚಯಿಸಬೇಕೆಂದಿದ್ದೇನೆ.
02012038a ಕೇ ಚಿದ್ಧಿ ಸೌಹೃದಾದೇವ ದೋಷಂ ನ ಪರಿಚಕ್ಷತೇ|
02012038c ಅರ್ಥಹೇತೋಸ್ತಥೈವಾನ್ಯೇ ಪ್ರಿಯಮೇವ ವದಂತ್ಯುತ||
02012039a ಪ್ರಿಯಮೇವ ಪರೀಪ್ಸಂತೇ ಕೇ ಚಿದಾತ್ಮನಿ ಯದ್ಧಿತಂ|
02012039c ಏವಂಪ್ರಾಯಾಶ್ಚ ದೃಶ್ಯಂತೇ ಜನವಾದಾಃ ಪ್ರಯೋಜನೇ||
ಕೆಲವರು ಮಿತ್ರತ್ವದಿಂದಾಗಿ ದೋಷವನ್ನು ಪರಿಗಣಿಸುವುದಿಲ್ಲ. ಇನ್ನು ಕೆಲವರು ಲಾಭದ ಪ್ರತೀಕ್ಷೆಯಿಂದ ಪ್ರಿಯ ಮಾತುಗಳನ್ನೇ ಆಡುತ್ತಾರೆ. ಹಾಗಾಗಿ ಜನರ ಅಭಿಪ್ರಾಯಗಳು ಅಷ್ಟೇ ಪ್ರಯೋಜನವಾಗಿರುತ್ತವೆ.
02012040a ತ್ವಂ ತು ಹೇತೂನತೀತ್ಯೈತಾನ್ಕಾಮಕ್ರೋಧೌ ವ್ಯತೀತ್ಯ ಚ|
02012040c ಪರಮಂ ನಃ ಕ್ಷಮಂ ಲೋಕೇ ಯಥಾವದ್ವಕ್ತುಮರ್ಹಸಿ||
ಆದರೆ ನೀನು ಕಾಮ ಕ್ರೋಧಗಳನ್ನು ತೊರೆದು ಈ ಎಲ್ಲ ಆಕಾಂಕ್ಷೆಗಳನ್ನೂ ಮೀರಿದ್ದೀಯೆ. ಈ ಲೋಕಕ್ಕೆ ಶ್ರೇಷ್ಠವಾದುದು ಏನು ಎನ್ನುವುದನ್ನು ನೀನು ಹೇಳಬೇಕು.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ಮಂತ್ರಪರ್ವಣಿ ವಾಸುದೇವಾಗಮನೇ ದ್ವಾದಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಸಭಾಪರ್ವದಲ್ಲಿ ಮಂತ್ರಪರ್ವದಲ್ಲಿ ವಾಸುದೇವನ ಆಗಮನ ಎನ್ನುವ ಹನ್ನೆರಡನೆಯ ಅಧ್ಯಾಯವು.