ಶಾಂತಿ ಪರ್ವ: ರಾಜಧರ್ಮ ಪರ್ವ

೬೬

12066001 ಯುಧಿಷ್ಠಿರ ಉವಾಚ

12066001a ಶ್ರುತಾ ಮೇ ಕಥಿತಾಃ ಪೂರ್ವೈಶ್ಚತ್ವಾರೋ ಮಾನವಾಶ್ರಮಾಃ|

12066001c ವ್ಯಾಖ್ಯಾನಮೇಷಾಮಾಚಕ್ಷ್ವ ಪೃಚ್ಚತೋ ಮೇ ಪಿತಾಮಹ||

ಯುಧಿಷ್ಠಿರನು ಹೇಳಿದನು: “ಪಿತಾಮಹ! ಈ ಹಿಂದೆ ನೀನು ಹೇಳಿದ ನಾಲ್ಕು ಮಾನವಾಶ್ರಮಗಳ ಕುರಿತು ನಾನು ಕೇಳಿದೆ. ಈಗ ನನಗೆ ಅವುಗಳ ವ್ಯಾಖ್ಯಾನಗಳನ್ನು ಹೇಳು. ನಾನು ಕೇಳುತ್ತಿದ್ದೇನೆ.”

12066002 ಭೀಷ್ಮ ಉವಾಚ

12066002a ವಿದಿತಾಃ ಸರ್ವ ಏವೇಹ ಧರ್ಮಾಸ್ತವ ಯುಧಿಷ್ಠಿರ|

12066002c ಯಥಾ ಮಮ ಮಹಾಬಾಹೋ ವಿದಿತಾಃ ಸಾಧುಸಂಮತಾಃ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ಮಹಾಬಾಹೋ! ಸಾಧುಸಮ್ಮತವಾದ ಈ ಧರ್ಮಗಳು ನನಗೆ ಹೇಗೆ ತಿಳಿದಿವೆಯೋ ಹಾಗೆ ನಿನಗೂ ಕೂಡ ತಿಳಿದಿವೆ.

12066003a ಯತ್ತು ಲಿಂಗಾಂತರಗತಂ ಪೃಚ್ಚಸೇ ಮಾಂ ಯುಧಿಷ್ಠಿರ|

12066003c ಧರ್ಮಂ ಧರ್ಮಭೃತಾಂ ಶ್ರೇಷ್ಠ ತನ್ನಿಬೋಧ ನರಾಧಿಪ||

ಯುಧಿಷ್ಠಿರ! ನರಾಧಿಪ! ಧರ್ಮಭೃತರಲ್ಲಿ ಶ್ರೇಷ್ಠ! ಬೇರೆಯೇ ಚಿಹ್ನೆಗಳನ್ನು ಧರಿಸಿರುವ ಧರ್ಮಗಳ ಕುರಿತು ನನ್ನನ್ನು ಕೇಳುತ್ತಿದ್ದೀಯೆ. ಅದನ್ನು ಕೇಳು.

12066004a ಸರ್ವಾಣ್ಯೇತಾನಿ ಕೌಂತೇಯ ವಿದ್ಯಂತೇ ಮನುಜರ್ಷಭ|

12066004c ಸಾಧ್ವಾಚಾರಪ್ರವೃತ್ತಾನಾಂ ಚಾತುರಾಶ್ರಮ್ಯಕರ್ಮಣಾಮ್||

ಕೌಂತೇಯ! ಮನುಜರ್ಷಭ! ಇವೆಲ್ಲವೂ ಉತ್ತಮ ಆಚಾರಪ್ರವೃತ್ತರಾಗಿರುವ ಮತ್ತು ನಾಲ್ಕು ಆಶ್ರಮಕರ್ಮಿಗಳಾದ ಸಾಧುಗಳಿಗೆ ತಿಳಿದಿರುತ್ತವೆ.

12066005a ಅಕಾಮದ್ವೇಷಯುಕ್ತಸ್ಯ ದಂಡನೀತ್ಯಾ ಯುಧಿಷ್ಠಿರ|

12066005c ಸಮೇಕ್ಷಿಣಶ್ಚ ಭೂತೇಷು ಭೈಕ್ಷಾಶ್ರಮಪದಂ ಭವೇತ್||

ಯುಧಿಷ್ಠಿರ! ಕಾಮ-ದ್ವೇಷರಹಿತನಾಗಿ ದಂಡನೀತಿಯನ್ನನುಸರಿಸಿ, ಸರ್ವಭೂತಗಳನ್ನೂ ಸಮದೃಷ್ಟಿಯಿಂದ ಕಾಣುವ ರಾಜನಿಗೂ ಕೂಡ ಭೈಕ್ಷಾಶ್ರಮದ (ಸಂನ್ಯಾಸಾಶ್ರಮದ) ಫಲವು ದೊರೆಯುತ್ತದೆ.

12066006a ವೇತ್ತ್ಯಾದಾನವಿಸರ್ಗಂ ಯೋ ನಿಗ್ರಹಾನುಗ್ರಹೌ ತಥಾ|

12066006c ಯಥೋಕ್ತವೃತ್ತೇರ್ವೀರಸ್ಯ ಕ್ಷೇಮಾಶ್ರಮಪದಂ ಭವೇತ್||

ದಾನ ಮತ್ತು ತ್ಯಾಗಗಳನ್ನು ತಿಳಿದುಕೊಂಡಿರುವ, ಇಂದ್ರಿಯನಿಗ್ರಹ ಮತ್ತು ಜೀವಿಗಳಿಗೆ ಅನುಗ್ರಹ ಇವುಗಳ ಕುರಿತು ತಿಳಿದುಕೊಂಡಿರುವ, ಮತ್ತು ಮೊದಲು ಹೇಳಿದಂತೆ ನಡೆದುಕೊಳ್ಳುವ ವೀರನಿಗೆ ಕ್ಷೇಮಾಶ್ರಮದ (ಗೃಹಸ್ಥಾಶ್ರಮದ) ಫಲವು ದೊರೆಯುತ್ತದೆ.

[1]12066007a ಜ್ಞಾತಿಸಂಬಂಧಿಮಿತ್ರಾಣಿ ವ್ಯಾಪನ್ನಾನಿ ಯುಧಿಷ್ಠಿರ|

12066007c ಸಮಭ್ಯುದ್ಧರಮಾಣಸ್ಯ ದೀಕ್ಷಾಶ್ರಮಪದಂ ಭವೇತ್||

ಯುಧಿಷ್ಠಿರ! ಸಂಕಟದಲ್ಲಿರುವ ದಾಯಾದಿಗಳನ್ನೂ, ಸಂಬಂಧಿಗಳನ್ನೂ ಮತ್ತು ಮಿತ್ರರನ್ನೂ ಉದ್ಧರಿಸುವ ಕ್ಷತ್ರಿಯನಿಗೆ ದೀಕ್ಷಾಶ್ರಮದ (ವಾನಪ್ರಸ್ಥಾನಾಶ್ರಮದ) ಫಲವು ಲಭಿಸುತ್ತದೆ.

[2]12066008a ಆಹ್ನಿಕಂ ಭೂತಯಜ್ಞಾಂಶ್ಚ ಪಿತೃಯಜ್ಞಾಂಶ್ಚ ಮಾನುಷಾನ್|

12066008c ಕುರ್ವತಃ ಪಾರ್ಥ ವಿಪುಲಾನ್ವನ್ಯಾಶ್ರಮಪದಂ ಭವೇತ್||

ಪಾರ್ಥ! ಆಹ್ನಿಕ, ಭೂತಯಜ್ಞ, ಪಿತೃಯಜ್ಞ ಮತ್ತು ಮನುಷ್ಯಯಜ್ಞಗಳನ್ನು ಮಾಡುವ ಕ್ಷತ್ರಿಯನಿಗೆ ವನ್ಯಾಶ್ರಮದ (ವಾನಪ್ರಸ್ಥಾಶ್ರಮದ) ಫಲವು ಲಭಿಸುತ್ತದೆ.

[3]12066009a ಪಾಲನಾತ್ಸರ್ವಭೂತಾನಾಂ ಸ್ವರಾಷ್ಟ್ರಪರಿಪಾಲನಾತ್|

12066009c ದೀಕ್ಷಾ ಬಹುವಿಧಾ ರಾಜ್ಞೋ ವನ್ಯಾಶ್ರಮಪದಂ ಭವೇತ್||

ಸರ್ವಭೂತಗಳ ಪಾಲನೆಯಿಂದ, ಸ್ವರಾಷ್ಟ್ರದ ಪರಿಪಾಲನೆಯಿಂದ, ಮತ್ತು ಬಹುವಿಧದ ಯಜ್ಞದೀಕ್ಷೆಗಳನ್ನು ಕೈಗೊಳ್ಳುವುದರಿಂದ ರಾಜನಿಗೆ ವಾನಪ್ರಸ್ಥಾಶ್ರಮದ ಫಲವು ಲಭಿಸುತ್ತದೆ.

12066010a ವೇದಾಧ್ಯಯನನಿತ್ಯತ್ವಂ ಕ್ಷಮಾಥಾಚಾರ್ಯಪೂಜನಮ್|

12066010c ತಥೋಪಾಧ್ಯಾಯಶುಶ್ರೂಷಾ ಬ್ರಹ್ಮಾಶ್ರಮಪದಂ ಭವೇತ್||

ನಿತ್ಯವೇದಾಧ್ಯಯನ, ಕ್ಷಮೆ, ಆಚಾರ್ಯಪೂಜನ, ಮತ್ತು ಉಪಾಧ್ಯಾಯಶುಶ್ರೂಷೆಯಿಂದ ಕ್ಷತ್ರಿಯನಿಗೆ ಬ್ರಹ್ಮಾಶ್ರಮಿಯ (ಸಂನ್ಯಾಸಿಯ) ಫಲವು ಲಭಿಸುತ್ತದೆ.

[4]12066011a ಅಜಿಹ್ಮಮಶಠಂ ಮಾರ್ಗಂ ಸೇವಮಾನಸ್ಯ ಭಾರತ|

12066011c ಸರ್ವದಾ ಸರ್ವಭೂತೇಷು ಬ್ರಹ್ಮಾಶ್ರಮಪದಂ ಭವೇತ್||

ಭಾರತ! ಸರ್ವಭೂತಗಳೊಂದಿಗೂ ಯಾವಾಗಲೂ ಋಜುತ್ವದಿಂದ ಮತ್ತು ನಿಷ್ಕಪಟತೆಯಿಂದ ವರ್ತಿಸುವ ಕ್ಷತ್ರಿಯನು ಸಂನ್ಯಾಸಾಶ್ರಮಿಯ ಫಲವನ್ನು ಪಡೆಯುತ್ತಾನೆ.

12066012a ವಾನಪ್ರಸ್ಥೇಷು ವಿಪ್ರೇಷು ತ್ರೈವಿದ್ಯೇಷು ಚ ಭಾರತ|

12066012c ಪ್ರಯಚ್ಚತೋಽರ್ಥಾನ್ವಿಪುಲಾನ್ವನ್ಯಾಶ್ರಮಪದಂ ಭವೇತ್||

ಭಾರತ! ವಾನಪ್ರಸ್ಥದಲ್ಲಿರುವ ಮತ್ತು ಮೂರುವೇದಗಳನ್ನು ತಿಳಿದಿರುವ ವಿಪ್ರರಿಗೆ ವಿಪುಲ ಧನವನ್ನು ದಾನಮಾಡುವ ಕ್ಷತ್ರಿಯನಿಗೆ ವಾನಪ್ರಸ್ಥಾಶ್ರಮದ ಫಲವು ದೊರೆಯುತ್ತದೆ.

12066013a ಸರ್ವಭೂತೇಷ್ವನುಕ್ರೋಶಂ ಕುರ್ವತಸ್ತಸ್ಯ ಭಾರತ|

12066013c ಆನೃಶಂಸ್ಯಪ್ರವೃತ್ತಸ್ಯ ಸರ್ವಾವಸ್ಥಂ ಪದಂ ಭವೇತ್||

ಭಾರತ! ಸರ್ವಭೂತಗಳ ಕುರಿತೂ ಅನುಕಂಪ ತೋರಿಸುವ ಮತ್ತು ಕ್ರೂರನಾಗಿ ವರ್ತಿಸದ ಅವನಿಗೆ ಎಲ್ಲ ಆಶ್ರಮಗಳ ಫಲವು ದೊರೆಯುತ್ತದೆ.

12066014a ಬಾಲವೃದ್ಧೇಷು ಕೌರವ್ಯ ಸರ್ವಾವಸ್ಥಂ ಯುಧಿಷ್ಠಿರ|

12066014c ಅನುಕ್ರೋಶಂ ವಿದಧತಃ ಸರ್ವಾವಸ್ಥಂ ಪದಂ ಭವೇತ್||

ಕೌರವ್ಯ! ಯುಧಿಷ್ಠಿರ! ಎಲ್ಲ ಸಮಯಗಳಲ್ಲಿಯೂ ಬಾಲಕ-ವೃದ್ಧರ ಕುರಿತು ಅನುಕಂಪ ತೋರಿಸುವ ಕ್ಷತ್ರಿಯನಿಗೆ ಎಲ್ಲ ಆಶ್ರಮಗಳ ವಿವಿಧ ಫಲಗಳೂ ದೊರೆಯುತ್ತವೆ.

12066015a ಬಲಾತ್ಕೃತೇಷು ಭೂತೇಷು ಪರಿತ್ರಾಣಂ ಕುರೂದ್ವಹ|

12066015c ಶರಣಾಗತೇಷು ಕೌರವ್ಯ ಕುರ್ವನ್ಗಾರ್ಹಸ್ಥ್ಯಮಾವಸೇತ್||

ಕರೂದ್ವಹ! ಕೌರವ್ಯ! ಬಲಾತ್ಕಾರಕ್ಕೊಳಗಾದ ಮತ್ತು ಶರಣಾಗತರ ಸಂರಕ್ಷಣೆ ಮಾಡುತ್ತಾ ಕ್ಷತ್ರಿಯನು ಗೃಹಸ್ಥಾಶ್ರಮದಲ್ಲಿರಬೇಕು.

12066016a ಚರಾಚರಾಣಾಂ ಭೂತಾನಾಂ ರಕ್ಷಾಮಪಿ ಚ ಸರ್ವಶಃ|

12066016c ಯಥಾರ್ಹಪೂಜಾಂ ಚ ಸದಾ ಕುರ್ವನ್ಗಾರ್ಹಸ್ಥ್ಯಮಾವಸೇತ್||

ಸದಾ ಎಲ್ಲಕಡೆ ಚರಾಚರ ಭೂತಗಳ ರಕ್ಷಣೆ ಮತ್ತು ಯಥಾರ್ಹವಾಗಿ ಪೂಜೆಗಳನ್ನು ಮಾಡುತ್ತಾ ಕ್ಷತ್ರಿಯನು ಗೃಹಸ್ಥಾಶ್ರಮದಲ್ಲಿರಬೇಕು.

12066017a ಜ್ಯೇಷ್ಠಾನುಜ್ಯೇಷ್ಠಪತ್ನೀನಾಂ ಭ್ರಾತೃಣಾಂ ಪುತ್ರನಪ್ತೃಣಾಮ್|

12066017c ನಿಗ್ರಹಾನುಗ್ರಹೌ ಪಾರ್ಥ ಗಾರ್ಹಸ್ಥ್ಯಮಿತಿ ತತ್ತಪಃ||

ಪಾರ್ಥ! ಹಿರಿಯ ಪತ್ನಿಯಾಗಲೀ, ಕಿರಿಯ ಪತ್ನಿಯಾಗಲೀ, ಸಹೋದರರಾಗಲೀ, ಮಕ್ಕಳು-ಮೊಮ್ಮಕ್ಕಳಾಗಲೀ ಅವರಿಗೆ ನಿಗ್ರಹ-ಅನುಗ್ರಹಗಳನ್ನು ಮಾಡುತ್ತಿರಬೇಕು. ಇದೇ ಗೃಹಸ್ಥಾಶ್ರಮದ ತಪಸ್ಸು.

12066018a ಸಾಧೂನಾಮರ್ಚನೀಯಾನಾಂ ಪ್ರಜಾಸು ವಿದಿತಾತ್ಮನಾಮ್|

12066018c ಪಾಲನಂ ಪುರುಷವ್ಯಾಘ್ರ ಗೃಹಾಶ್ರಮಪದಂ ಭವೇತ್||

ಪುರುಷವ್ಯಾಘ್ರ! ಸಾಧುಗಳ ಮತ್ತು ಆತ್ಮಜ್ಞಾನಿ ಪ್ರಜೆಗಳ ಅರ್ಚನೆ- ಪಾಲನೆಗಳನ್ನು ಮಾಡುವುದರಿಂದ ಗೃಹಸ್ಥಾಶ್ರಮದ ಫಲವು ದೊರೆಯುತ್ತದೆ.

12066019a ಆಶ್ರಮಸ್ಥಾನಿ ಸರ್ವಾಣಿ ಯಸ್ತು ವೇಶ್ಮನಿ ಭಾರತ|

12066019c ಆದದೀತೇಹ ಭೋಜ್ಯೇನ ತದ್ಗಾರ್ಹಸ್ಥ್ಯಂ ಯುಧಿಷ್ಠಿರ||

ಭಾರತ! ಯುಧಿಷ್ಠಿರ! ಆಶ್ರಮಸ್ಥರಾಗಿರುವ ಸರ್ವರನ್ನೂ ಮನೆಗೆ ಕರೆತಂದು ಭೋಜನಾದಿಗಳಿಂದ ತೃಪ್ತಿಗೊಳಿಸುವುದೇ ಗೃಹಸ್ಥಧರ್ಮ.

12066020a ಯಃ ಸ್ಥಿತಃ ಪುರುಷೋ ಧರ್ಮೇ ಧಾತ್ರಾ ಸೃಷ್ಟೇ ಯಥಾರ್ಥವತ್|

12066020c ಆಶ್ರಮಾಣಾಂ ಸ ಸರ್ವೇಷಾಂ ಫಲಂ ಪ್ರಾಪ್ನೋತ್ಯನುತ್ತಮಮ್||

ಧಾತೃವು ಸೃಷ್ಟಿಸಿದ ಧರ್ಮದಲ್ಲಿ ಯಥಾರ್ಥವಾಗಿ ನಡೆದುಕೊಳ್ಳುವ ಪುರುಷನು ಸರ್ವ ಆಶ್ರಮಗಳ ಅನುತ್ತಮ ಫಲಗಳನ್ನು ಪಡೆಯುತ್ತಾನೆ.

12066021a ಯಸ್ಮಿನ್ನ ನಶ್ಯಂತಿ ಗುಣಾಃ ಕೌಂತೇಯ ಪುರುಷೇ ಸದಾ|

12066021c ಆಶ್ರಮಸ್ಥಂ ತಮಪ್ಯಾಹುರ್ನರಶ್ರೇಷ್ಠಂ ಯುಧಿಷ್ಠಿರ||

ಕೌಂತೇಯ! ಯುಧಿಷ್ಠಿರ! ಯಾವ ಪುರುಷನ ಸದ್ಗುಣಗಳು ಸದಾ ನಶಿಸದೇ ಇರುವುದೋ ಆ ಆಶ್ರಮಸ್ಥ ಪುರುಷನನ್ನು ನರಶ್ರೇಷ್ಠನೆಂದು ಕರೆಯುತ್ತಾರೆ.

12066022a ಸ್ಥಾನಮಾನಂ ವಯೋಮಾನಂ ಕುಲಮಾನಂ ತಥೈವ ಚ|

12066022c ಕುರ್ವನ್ವಸತಿ ಸರ್ವೇಷು ಹ್ಯಾಶ್ರಮೇಷು ಯುಧಿಷ್ಠಿರ||

ಯುಧಿಷ್ಠಿರ! ಸ್ಥಾನಕ್ಕೆ ತಕ್ಕುದಾದ ಸನ್ಮಾನ, ವಯಸ್ಸಿಗೆ ತಕ್ಕುದಾದ ಸನ್ಮಾನ ಮತ್ತು ಕುಲಕ್ಕೆ ತಕ್ಕುದಾದ ಸನ್ಮಾನ ಇವುಗಳನ್ನು ಮಾಡುವವನು ಸರ್ವ ಆಶ್ರಮಗಳ ಫಲಗಳನ್ನು ಪಡೆಯುತ್ತಾನೆ.

12066023a ದೇಶಧರ್ಮಾಂಶ್ಚ ಕೌಂತೇಯ ಕುಲಧರ್ಮಾಂಸ್ತಥೈವ ಚ|

12066023c ಪಾಲಯನ್ಪುರುಷವ್ಯಾಘ್ರ ರಾಜಾ ಸರ್ವಾಶ್ರಮೀ ಭವೇತ್||

ಕೌಂತೇಯ! ಪುರುಷವ್ಯಾಘ್ರ! ದೇಶಧರ್ಮಗಳು ಮತ್ತು ಕುಲಧರ್ಮಗಳನ್ನು ಪಾಲಿಸುವ ರಾಜನು ಸರ್ವ ಆಶ್ರಮಗಳನ್ನೂ ಪಾಲಿಸಿದಂತಾಗುತ್ತದೆ.

12066024a ಕಾಲೇ ವಿಭೂತಿಂ ಭೂತಾನಾಮುಪಹಾರಾಂಸ್ತಥೈವ ಚ|

12066024c ಅರ್ಹಯನ್ಪುರುಷವ್ಯಾಘ್ರ ಸಾಧೂನಾಮಾಶ್ರಮೇ ವಸೇತ್||

ಪುರುಷವ್ಯಾಘ್ರ! ಆಗಾಗ ಐಶ್ವರ್ಯ ಮತ್ತು ಉಪಹಾರಗಳನ್ನು ಅರ್ಹರಾದವರಿಗೆ ನೀಡುವವನಿಗೆ ಸಾಧುಗಳ ಆಶ್ರಮ (ಸಂನ್ಯಾಸಾಶ್ರಮದ) ಫಲವು ಲಭಿಸುತ್ತದೆ.

12066025a ದಶಧರ್ಮಗತಶ್ಚಾಪಿ ಯೋ ಧರ್ಮಂ ಪ್ರತ್ಯವೇಕ್ಷತೇ|

12066025c ಸರ್ವಲೋಕಸ್ಯ ಕೌಂತೇಯ ರಾಜಾ ಭವತಿ ಸೋಽಽಶ್ರಮೀ||

ಕೌಂತೇಯ! ದಶಧರ್ಮಗಳನ್ನು ಅನುಸರಿಸಿ ಧರ್ಮವನ್ನು ರಕ್ಷಿಸುವವನು ಸರ್ವಲೋಕಗಳ ರಾಜನಾಗುತ್ತಾನೆ ಮತ್ತು ಸರ್ವ ಆಶ್ರಮಗಳ ಫಲಗಳನ್ನು ಪಡೆಯುತ್ತಾನೆ,

12066026a ಯೇ ಧರ್ಮಕುಶಲಾ ಲೋಕೇ ಧರ್ಮಂ ಕುರ್ವಂತಿ ಸಾಧವಃ|

12066026c ಪಾಲಿತಾ ಯಸ್ಯ ವಿಷಯೇ ಪಾದೋಽಂಶಸ್ತಸ್ಯ ಭೂಪತೇಃ||

ಯಾರ ರಾಜ್ಯದಲ್ಲಿ ಧರ್ಮಕುಶಲರಾದ ಸಾಧುಗಳ ಧರ್ಮವು ರಕ್ಷಿಸಲ್ಪಡುತ್ತದೆಯೋ ಅವರ ಆರನೆಯ ಒಂದು ಭಾಗವು ಆ ರಾಜನಿಗೂ ದೊರೆಯುತ್ತದೆ.

12066027a ಧರ್ಮಾರಾಮಾನ್ಧರ್ಮಪರಾನ್ಯೇ ನ ರಕ್ಷಂತಿ ಮಾನವಾನ್|

12066027c ಪಾರ್ಥಿವಾಃ ಪುರುಷವ್ಯಾಘ್ರ ತೇಷಾಂ ಪಾಪಂ ಹರಂತಿ ತೇ||

ಪುರುಷವ್ಯಾಘ್ರ! ಧರ್ಮದಲ್ಲಿಯೇ ರಮಿಸುವ ಧರ್ಮಪರಾಯಣರಾದ ಮಾನವರನ್ನು ರಕ್ಷಿಸದ ಪಾರ್ಥಿವನು ಅವರ ಪಾಪಗಳೆಲ್ಲವನ್ನೂ ಪಡೆದುಕೊಳ್ಳುತ್ತಾನೆ.

12066028a ಯೇ ಚ ರಕ್ಷಾಸಹಾಯಾಃ ಸ್ಯುಃ ಪಾರ್ಥಿವಾನಾಂ ಯುಧಿಷ್ಠಿರ|

12066028c ತೇ ಚೈವಾಂಶಹರಾಃ ಸರ್ವೇ ಧರ್ಮೇ ಪರಕೃತೇಽನಘ||

ಯುಧಿಷ್ಠಿರ! ಅನಘ! ಧರ್ಮರಕ್ಷಣೆಯಲ್ಲಿ ಪಾರ್ಥಿವರಿಗೆ ಸಹಾಯಮಾಡುವವರಿಗೂ ಇತರರು ಮಾಡುವ ಸರ್ವ ಧರ್ಮಕಾರ್ಯಗಳ ಫಲದ ಅಂಶವು ದೊರೆಯುತ್ತದೆ.

12066029a ಸರ್ವಾಶ್ರಮಪದೇ ಹ್ಯಾಹುರ್ಗಾರ್ಹಸ್ಥ್ಯಂ ದೀಪ್ತನಿರ್ಣಯಮ್|

12066029c ಪಾವನಂ ಪುರುಷವ್ಯಾಘ್ರ ಯಂ ವಯಂ ಪರ್ಯುಪಾಸ್ಮಹೇ||

ಪುರುಷವ್ಯಾಘ್ರ! ನಾವು ಯಾವ ಧರ್ಮವನ್ನು ಉಪಾಸಿಸುತ್ತಿರುವೆವೋ ಆ ಗೃಹಸ್ಥಾಶ್ರಮ ಧರ್ಮವೇ ಸರ್ವ ಆಶ್ರಮಪದಗಳಲ್ಲಿ ಪಾವನವೂ ಶ್ರೇಷ್ಠವೂ ಆಗಿರುವುದೆಂದು ನಿರ್ಣಯಿಸಿ ಹೇಳಿದ್ದಾರೆ.

12066030a ಆತ್ಮೋಪಮಸ್ತು ಭೂತೇಷು ಯೋ ವೈ ಭವತಿ ಮಾನವಃ|

12066030c ನ್ಯಸ್ತದಂಡೋ ಜಿತಕ್ರೋಧಃ ಸ ಪ್ರೇತ್ಯ ಲಭತೇ ಸುಖಮ್||

ಎಲ್ಲವನ್ನೂ ತನಗೆ ಸಮಾನವೆಂದು ಯಾರು ಭಾವಿಸುವವನೋ, ದಂಡವನ್ನು ಯಾರು ತ್ಯಜಿಸುವವನೋ ಮತ್ತು ಕ್ರೋಧವನ್ನು ಯಾರು ಗೆಲ್ಲುವವನೋ ಅವನಿಗೆ ಇಹದಲ್ಲಿಯೂ ಪರದಲ್ಲಿಯೂ ಸುಖವುಂಟಾಗುತ್ತದೆ.

12066031a ಧರ್ಮೋತ್ಥಿತಾ ಸತ್ತ್ವವೀರ್ಯಾ ಧರ್ಮಸೇತುವಟಾಕರಾ|

12066031c ತ್ಯಾಗವಾತಾಧ್ವಗಾ ಶೀಘ್ರಾ ನೌಸ್ತ್ವಾ ಸಂತಾರಯಿಷ್ಯತಿ||

ಧರ್ಮರೂಪದ ಸಮುದ್ರದಲ್ಲಿ ತೇಲುತ್ತಿರುವ ರಾಜಧರ್ಮವೆಂಬ ನೌಕೆಗೆ ಸತ್ತ್ವಗುಣವೇ ನಾವಿಕ, ಧರ್ಮಶಾಸ್ತ್ರವೇ ನೌಕೆಯನ್ನು ಬಂಧಿಸುವ ರಜ್ಜು. ತ್ಯಾಗರೂಪದಿಂದ ಬೀಸುವ ಗಾಳಿಯಿಂದ ಪ್ರೇರಿತವಾಗಿ ಅದು ಸಂಸಾರರೂಪವಾದ ಸಮುದ್ರವನ್ನು ಶೀಘ್ರವಾಗಿ ದಾಟಿಸುತ್ತದೆ.

12066032a ಯದಾ ನಿವೃತ್ತಃ ಸರ್ವಸ್ಮಾತ್ಕಾಮೋ ಯೋಽಸ್ಯ ಹೃದಿ ಸ್ಥಿತಃ|

12066032c ತದಾ ಭವತಿ ಸತ್ತ್ವಸ್ಥಸ್ತತೋ ಬ್ರಹ್ಮ ಸಮಶ್ನುತೇ||

ಸರ್ವಕಾಮನೆಗಳಿಂದ ನಿವೃತ್ತನಾಗಿ ಹೃದಯದಲ್ಲಿ ಸ್ಥಿತನಾಗಿರುವಾಗ ಸತ್ತ್ವಸ್ಥನೆನಿಸಿಕೊಂಡು ಬ್ರಹ್ಮವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.

12066033a ಸುಪ್ರಸನ್ನಸ್ತು ಭಾವೇನ ಯೋಗೇನ ಚ ನರಾಧಿಪ|

12066033c ಧರ್ಮಂ ಪುರುಷಶಾರ್ದೂಲ ಪ್ರಾಪ್ಸ್ಯಸೇ ಪಾಲನೇ ರತಃ||

ನರಾಧಿಪ! ಪುರುಷಶಾರ್ದೂಲ! ಸುಪ್ರಸನ್ನ ಭಾವದ ಯೋಗದಿಂದ ಪಾಲನೆಮಾಡುತ್ತಿರುವ ರಾಜನು ಧರ್ಮವನ್ನು ಪರಿಪಾಲಿಸಿದ ಫಲವನ್ನು ಹೊಂದುತ್ತಾನೆ.

12066034a ವೇದಾಧ್ಯಯನಶೀಲಾನಾಂ ವಿಪ್ರಾಣಾಂ ಸಾಧುಕರ್ಮಣಾಮ್|

12066034c ಪಾಲನೇ ಯತ್ನಮಾತಿಷ್ಠ ಸರ್ವಲೋಕಸ್ಯ ಚಾನಘ||

ಅನಘ! ವೇದಾಧ್ಯಯನ ಶೀಲರಾದ ವಿಪ್ರರ, ಸಾಧುಕರ್ಮಿಗಳ ಮತ್ತು ಸರ್ವಲೋಕದ ಪಾಲನೆಗೆ ಪ್ರಯತ್ನಿಸು!

12066035a ವನೇ ಚರತಿ ಯೋ ಧರ್ಮಮಾಶ್ರಮೇಷು ಚ ಭಾರತ|

12066035c ರಕ್ಷಯಾ ತಚ್ಚತಗುಣಂ ಧರ್ಮಂ ಪ್ರಾಪ್ನೋತಿ ಪಾರ್ಥಿವಃ||

ಭಾರತ! ವನದಲ್ಲಿ ಸಂಚರಿಸುವ ಆಶ್ರಮಧರ್ಮವನ್ನು ಪಾಲಿಸುವುದಕ್ಕಿಂತ ಎಷ್ಟೋ ಗುಣ ಹೆಚ್ಚು ಫಲವನ್ನು ಧರ್ಮರಕ್ಷಣೆಮಾಡುವ ಪಾರ್ಥಿವನು ಪಡೆಯುತ್ತಾನೆ.

12066036a ಏಷ ತೇ ವಿವಿಧೋ ಧರ್ಮಃ ಪಾಂಡವಶ್ರೇಷ್ಠ ಕೀರ್ತಿತಃ|

12066036c ಅನುತಿಷ್ಠ ತ್ವಮೇನಂ ವೈ ಪೂರ್ವೈರ್ದೃಷ್ಟಂ ಸನಾತನಮ್||

ಪಾಂಡವಶ್ರೇಷ್ಠ! ಇಗೋ ನಿನಗೆ ವಿವಿಧ ಧರ್ಮಗಳ ಕುರಿತು ಹೇಳಿದ್ದೇನೆ. ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಈ ಸನಾತನ ಧರ್ಮವನ್ನು ನೀನೂ ಅನುಷ್ಠಾನ ಮಾಡು.

12066037a ಚಾತುರಾಶ್ರಮ್ಯಮೇಕಾಗ್ರಃ ಚಾತುರ್ವರ್ಣ್ಯಂ ಚ ಪಾಂಡವ|

12066037c ಧರ್ಮಂ ಪುರುಷಶಾರ್ದೂಲ ಪ್ರಾಪ್ಸ್ಯಸೇ ಪಾಲನೇ ರತಃ||

ಪಾಂಡವ! ಪುರುಷಶಾರ್ದೂಲ! ನಾಲ್ಕು ಆಶ್ರಮದವರೂ ನಾಲ್ಕು ವರ್ಣದವರೂ ಪಡೆದುಕೊಳ್ಳುವ ಪುಣ್ಯವನ್ನು ಧರ್ಮಪಾಲನೆಯಲ್ಲಿ ನಿರತನಾಗಿರುವ ರಾಜನು ಪಡೆದುಕೊಳ್ಳುತ್ತಾನೆ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಚಾತುರಾಶ್ರಮ್ಯವಿಧೌ ಷಟ್ ಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಚಾತುರಾಶ್ರಮ್ಯವಿಧ ಎನ್ನುವ ಅರವತ್ತಾರನೇ ಅಧ್ಯಾಯವು.

[1] ಇದಕ್ಕೆ ಮೊದಲು ಭಾರತದರ್ಶನದಲ್ಲಿ ಈ ಶ್ಲೋಕವಿದೆ: ಅರ್ಹಾನ್ ಪೂಜಯತೋ ನಿತ್ಯಂ ಸಂವಿಭಾಗೇನ ಪಾಂಡವ| ಸರ್ವತಸ್ತಸ್ಯ ಕೌಂತೇಯ ಭೈಕ್ಷಾಶ್ರಮಪದಂ ಭವೇತ್|| ಅರ್ಥಾತ್ ಪಾಂಡವ! ಕೌಂತೇಯ! ಪೂಜಾರ್ಹರನ್ನು ಅವರ ಅಭೀಷ್ಟ ವಸ್ತುಪ್ರದಾನಗಳಿಂದ ನಿತ್ಯವೂ ಸನ್ಮಾನಿಸುವ ಕ್ಷತ್ರಿಯನಿಗೆ ಬ್ರಹ್ಮಚರ್ಯಾಶ್ರಮಿಯ ಫಲವು ಲಭಿಸುತ್ತದೆ.

[2] ಭಾರತ ದರ್ಶನದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಲೋಕಮುಖ್ಯೇಷ ಸತ್ಕಾರಂ ಲಿಂಗಮುಖ್ಯೇಷು ಚಾಸಕೃತ್| ಕುರ್ವತಸ್ತಸ್ಯ ಕೌಂತೇಯ ವನ್ಯಾಶ್ರಮಪದಂ ಭವೇತ್|| ಅರ್ಥಾತ್ ಲೋಕದ ಶ್ರೇಷ್ಠರಿಗೂ, ವರ್ಣಾಶ್ರಮಧರ್ಮಿಗಳಿಗೂ ನಿರಂತರ ಸತ್ಕರಿಸುವ ಕ್ಷತ್ರಿಯನಿಗೆ ವಾನಪ್ರಸ್ಥಾಶ್ರಮದ ಫಲವು ಲಭಿಸುತ್ತದೆ.

[3] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಎರಡು ಶ್ಲೋಕಗಳಿವೆ: (೧) ಸಂವಿಭಾಗೇನ ಭೂತಾನಾಮತಿಥೀನಾಂ ತಥಾರ್ಚನಾತ್| ದೇವಯಜ್ಞೈಶ್ಚ ರಾಜೇಂದ್ರ ವನ್ಯಾಶ್ರಮಪದಂ ಭವೇತ್|| ಅರ್ಥಾತ್ ರಾಜೇಂದ್ರ! ಯಥಾಭಾಗವಾಗಿ ಪ್ರಾಣಿಗಳು ಮತ್ತು ಅತಿಥಿಗಳ ಅರ್ಚನೆಯಿಂದ ಮತ್ತು ದೇವಯಜ್ಞಗಳಿಂದ ಕ್ಷತ್ರಿಯನಿಗೆ ವಾನಪ್ರಸ್ಥಾಶ್ರಮದ ಫಲವು ಲಭಿಸುತ್ತದೆ. (೨) ಮರ್ದನಂ ಪರರಾಷ್ಟ್ರಾಣಾಂ ಶಿಷ್ಟಾರ್ಥಂ ಸತ್ಯವಿಕ್ರಮ| ಕುರ್ವತಃ ಪುರುಷವ್ಯಾಘ್ರ ವನ್ಯಾಶ್ರಮಪದಂ ಲಭೇತ್|| ಅರ್ಥಾತ್ ಸತ್ಯವಿಕ್ರಮ! ಪುರುಷವ್ಯಾಘ್ರ! ಶಿಷ್ಟಾಚಾರಗಳನ್ನು ಸ್ಥಾಪಿಸಲೋಸುಗ ಪರರಾಷ್ಟ್ರಗಳನ್ನು ಸದೆಬಡಿಯುವುದರಿಂದ ಕ್ಷತ್ರಿಯನಿಗೆ ವಾನಪ್ರಸ್ಥಾಶ್ರಮದ ಫಲವು ಲಭಿಸುತ್ತದೆ.

[4] ಭಾರತದರ್ಶನದಲ್ಲಿ ಇದಕ್ಕೆ ಮೊದಲು ಈ ಎರಡು ಶ್ಲೋಕಗಳಿವೆ: (೧) ಆಹ್ನಿಕಂ ಜಪಮಾನಸ್ಯ ದೇವಾನ್ ಪೂಜಯತೇ ಸದಾ| ಧರ್ಮೇಣ ಪುರುಷವ್ಯಾಘ್ರ ಧರ್ಮಾಶ್ರಮಪದಂ ಭವೇತ್|| ಅರ್ಥಾತ್ ಸದಾ ಅಹ್ನೀಕ-ಜಪಗಳನ್ನು ಮಾಡುವ ಮತ್ತು ಧರ್ಮಪೂರ್ವಕವಾಗಿ ದೇವತೆಗಳನ್ನು ಪೂಜಿಸುವ ಕ್ಷತ್ರಿಯನಿಗೆ ಗೃಹಸ್ಥಾಶ್ರಮಿಯ ಫಲವು ಲಭಿಸುತ್ತದೆ. (೨) ಮೃತ್ಯುರ್ವಾ ರಕ್ಷಣಂ ವೇತಿ ಯಸ್ಯ ರಾಜ್ಞೋ ವಿನಿಶ್ಚಯಃ| ಪ್ರಾಣದ್ಯೂತೇ ತತಸ್ತಸ್ಯ ಬ್ರಹ್ಮಾಶ್ರಮಪದಂ ಭವೇತ್|| ಅರ್ಥಾತ್ ಮೃತ್ಯು ಅಥವಾ ರಾಷ್ಟರಕ್ಷಣೆ ಎಂದು ನಿಶ್ಚಯಿಸಿ ಪ್ರಾಣವನ್ನೇ ಪಣವನ್ನಾಗಿಟ್ಟು ಯುದ್ಧಮಾಡುವ ಕ್ಷತ್ರಿಯನಿಗೆ ಸಂನ್ಯಾಸಾಶ್ರಮಿಯ ಫಲವು ಲಭಿಸುತ್ತದೆ.

Comments are closed.