ಶಾಂತಿ ಪರ್ವ: ರಾಜಧರ್ಮ ಪರ್ವ

12009001 ಯುಧಿಷ್ಠಿರ ಉವಾಚ

12009001a ಮುಹೂರ್ತಂ ತಾವದೇಕಾಗ್ರೋ ಮನಃಶ್ರೋತ್ರೇಽಂತರಾತ್ಮನಿ|

12009001c ಧಾರಯಿತ್ವಾಪಿ ತೇ ಶ್ರುತ್ವಾ ರೋಚತಾಂ ವಚನಂ ಮಮ||

ಯುಧಿಷ್ಠಿರನು ಹೇಳಿದನು: “ನನ್ನ ಈ ಮಾತನ್ನು ಏಕಾಗ್ರಚಿತ್ತನಾಗಿ ಕೇಳಿ ಮುಹೂರ್ತಕಾಲ ಮನಸ್ಸು-ಕಿವಿಗಳನ್ನು ಅಂತರಾತ್ಮನಲ್ಲಿ ಸ್ಥಾಪಿಸಿ ಧ್ಯಾನಮಾಡು. ಆಗ ನಾನು ಹೇಳುವುದು ನಿನಗೆ ಹಿತಕರವೆನಿಸಬಹುದು.

12009002a ಸಾರ್ಥಗಮ್ಯಮಹಂ ಮಾರ್ಗಂ ನ ಜಾತು ತ್ವತ್ಕೃತೇ ಪುನಃ|

12009002c ಗಚ್ಚೇಯಂ ತದ್ಗಮಿಷ್ಯಾಮಿ ಹಿತ್ವಾ ಗ್ರಾಮ್ಯಸುಖಾನ್ಯುತ||

ನೀನು ಆಗ್ರಹಿಸುತ್ತಿರುವ ಧನದಿಂದ ಕೂಡಿರುವ ಮಾರ್ಗದಲ್ಲಿ ನಾನು ಪುನಃ ಹೋಗುವುದಿಲ್ಲ. ಗ್ರಾಮ್ಯಸುಖಗಳನ್ನು ತೊರೆದು ಹೋಗುವಂತಹ ಮಾರ್ಗದಲ್ಲಿ ಹೋಗುತ್ತೇನೆ.

12009003a ಕ್ಷೇಮ್ಯಶ್ಚೈಕಾಕಿನಾ ಗಮ್ಯಃ ಪಂಥಾಃ ಕೋಽಸ್ತೀತಿ ಪೃಚ್ಚ ಮಾಮ್|

12009003c ಅಥ ವಾ ನೇಚ್ಚಸಿ ಪ್ರಷ್ಟುಮಪೃಚ್ಚನ್ನಪಿ ಮೇ ಶೃಣು||

ಏಕಾಕಿಯಾಗಿ ಹೋಗುವ ಕ್ಷೇಮಮಾರ್ಗವು ಯಾವುದು ಎಂದು ನನ್ನನ್ನು ಕೇಳು. ಅಥವಾ ನನ್ನನ್ನು ಕೇಳಲು ಇಚ್ಛಿಸದಿದ್ದರೂ ನಾನು ಹೇಳುವುದನ್ನು ಕೇಳು.

12009004a ಹಿತ್ವಾ ಗ್ರಾಮ್ಯಸುಖಾಚಾರಂ ತಪ್ಯಮಾನೋ ಮಹತ್ತಪಃ|

12009004c ಅರಣ್ಯೇ ಫಲಮೂಲಾಶೀ ಚರಿಷ್ಯಾಮಿ ಮೃಗೈಃ ಸಹ||

ಗ್ರಾಮ್ಯ ಸುಖಾಚಾರವನ್ನು ತೊರೆದು ಮಹಾತಪಸ್ಸನ್ನು ತಪಿಸುತ್ತಾ, ಅರಣ್ಯದಲ್ಲಿ ಫಲಮೂಲಗಳನ್ನು ತಿಂದುಕೊಂಡು ಮೃಗಗಳೊಂದಿಗೆ ಸಂಚರಿಸುತ್ತೇನೆ.

12009005a ಜುಹ್ವಾನೋಽಗ್ನಿಂ ಯಥಾಕಾಲಮುಭೌ ಕಾಲಾವುಪಸ್ಪೃಶನ್|

12009005c ಕೃಶಃ ಪರಿಮಿತಾಹಾರಶ್ಚರ್ಮಚೀರಜಟಾಧರಃ||

ಎರಡೂ ಕಾಲಗಳಲ್ಲಿ ಶುಚಿಯಾಗಿ ಕಾಲಕ್ಕೆ ತಕ್ಕಂತೆ ಅಗ್ನಿಯಲ್ಲಿ ಆಹುತಿಗಳನ್ನು ನೀಡುತ್ತೇನೆ. ಮಿತ ಆಹಾರವನ್ನು ಸೇವಿಸಿಕೊಂಡು ನನ್ನ ಶರೀರವನ್ನು ಕೃಶಗೊಳಿಸುತ್ತೇನೆ. ವಲ್ಕಲಗಳನ್ನು ಧರಿಸುತ್ತೇನೆ. ಜಟೆಯನ್ನು ಧರಿಸುತ್ತೇನೆ.

12009006a ಶೀತವಾತಾತಪಸಹಃ ಕ್ಷುತ್ಪಿಪಾಸಾಶ್ರಮಕ್ಷಮಃ|

12009006c ತಪಸಾ ವಿಧಿದೃಷ್ಟೇನ ಶರೀರಮುಪಶೋಷಯನ್||

ಛಳಿ-ಗಾಳಿ-ಬಿಸಿಲುಗಳನ್ನು ಸಹಿಸಿಕೊಳ್ಳುತ್ತೇನೆ. ಹಸಿವು-ಬಾಯಾರಿಕೆ-ಆಯಾಸಗಳನ್ನು ಸಹಿಸಿಕೊಳ್ಳುತ್ತೇನೆ. ವಿಧಿದೃಷ್ಟ ತಪಸ್ಸಿನಿಂದ ಶರೀರವನ್ನು ಶೋಷಿಸುತ್ತೇನೆ.

12009007a ಮನಃಕರ್ಣಸುಖಾ ನಿತ್ಯಂ ಶೃಣ್ವನ್ನುಚ್ಚಾವಚಾ ಗಿರಃ|

12009007c ಮುದಿತಾನಾಮರಣ್ಯೇಷು ವಸತಾಂ ಮೃಗಪಕ್ಷಿಣಾಮ್||

ಅರಣ್ಯದಲ್ಲಿ ವಾಸಿಸುವ ಮುದಿತ ಮೃಗ-ಪಕ್ಷಿಗಳ ಜೋರಾದ ಧ್ವನಿಗಳನ್ನು ಕೇಳಿ ಮನಸ್ಸು-ಕಿವಿಗಳಿಗೆ ಸುಖವನ್ನು ಹೊಂದುತ್ತೇನೆ.

12009008a ಆಜಿಘ್ರನ್ಪೇಶಲಾನ್ಗಂಧಾನ್ಫುಲ್ಲಾನಾಂ ವೃಕ್ಷವೀರುಧಾಮ್|

12009008c ನಾನಾರೂಪಾನ್ವನೇ ಪಶ್ಯನ್ರಮಣೀಯಾನ್ವನೌಕಸಃ||

ಹೂಬಿಟ್ಟಿರುವ ಮರ-ಗಿಡ-ಬಳ್ಳಿಗಳ ಸುಗಂಧಗಳನ್ನು ಸೇವಿಸುತ್ತಾ, ನಾನಾರೂಪಗಳ ರಮಣೀಯ ವನವಾಸಿಗಳನ್ನು ನೋಡುತ್ತಾ ಇರುತ್ತೇನೆ.

12009009a ವಾನಪ್ರಸ್ಥಜನಸ್ಯಾಪಿ ದರ್ಶನಂ ಕುಲವಾಸಿನಃ|

12009009c ನಾಪ್ರಿಯಾಣ್ಯಾಚರಿಷ್ಯಾಮಿ ಕಿಂ ಪುನರ್ಗ್ರಾಮವಾಸಿನಾಮ್||

ವಾನಪ್ರಸ್ಥದಲ್ಲಿರುವವರನ್ನೂ, ಗುರುಕುಲ ವಾಸಿಗಳನ್ನೂ ಸಂದರ್ಶಿಸುತ್ತೇನೆ. ಅವರಿಗೆ ಅಪ್ರಿಯವಾಗದಂತೆ ನಡೆದುಕೊಳ್ಳುತ್ತೇನೆ. ಇನ್ನು ಪುನಃ ಗ್ರಾಮವಾಸಿಗಳ ಕುರಿತೇನು?

12009010a ಏಕಾಂತಶೀಲೀ ವಿಮೃಶನ್ಪಕ್ವಾಪಕ್ವೇನ ವರ್ತಯನ್|

12009010c ಪಿತೃನ್ದೇವಾಂಶ್ಚ ವನ್ಯೇನ ವಾಗ್ಭಿರದ್ಭಿಶ್ಚ ತರ್ಪಯನ್||

ಏಕಾಂತದಲ್ಲಿದ್ದುಕೊಂಡು ವಿಮರ್ಶಿಸುತ್ತೇನೆ. ಪಕ್ವವಾಗಿರಲಿ ಪಕ್ವವಾಗದಿರಲಿ, ದೊರಕಿದ ಆಹಾರವನ್ನು ಸೇವಿಸಿಕೊಂಡಿರುತ್ತೇನೆ. ವನದಲ್ಲಿ ದೊರಕುವ ಕಂದಮೂಲ-ಫಲಗಳಿಂದ, ನೀರಿನಿಂದ ಮತ್ತು ಉತ್ತಮ ಮಾತುಗಳಿಂದ ಪಿತೃಗಳನ್ನೂ ದೇವತೆಗಳನ್ನೂ ತೃಪ್ತಿಪಡಿಸುತ್ತೇನೆ.

12009011a ಏವಮಾರಣ್ಯಶಾಸ್ತ್ರಾಣಾಮುಗ್ರಮುಗ್ರತರಂ ವಿಧಿಮ್|

12009011c ಸೇವಮಾನಃ ಪ್ರತೀಕ್ಷಿಷ್ಯೇ ದೇಹಸ್ಯಾಸ್ಯ ಸಮಾಪನಮ್||

ಈ ರೀತಿ ಅರಣ್ಯವಾಸಿಗಳಿಗೆ ಶಾಸ್ತ್ರಗಳಲ್ಲಿ ಹೇಳಿರುವ ಉಗ್ರವೂ ಅತಿ ಉಗ್ರವೂ ಆದ ವಿಧಿಗಳನ್ನು ಆಚರಿಸುತ್ತಾ ಈ ದೇಹದ ಸಮಾಪನವನ್ನು ಪ್ರತೀಕ್ಷಿಸುತ್ತಿರುತ್ತೇನೆ.

12009012a ಅಥ ವೈಕೋಽಹಮೇಕಾಹಮೇಕೈಕಸ್ಮಿನ್ವನಸ್ಪತೌ|

12009012c ಚರನ್ಭೈಕ್ಷ್ಯಂ ಮುನಿರ್ಮುಂಡಃ ಕ್ಷಪಯಿಷ್ಯೇ ಕಲೇವರಮ್||

ಅಥವಾ ಮುಂಡನ ಮಾಡಿಕೊಂಡು ಮುನಿಯಾಗಿ ಪ್ರತಿದಿನವೂ ಒಂದೊಂದೇ ವೃಕ್ಷದಿಂದ ಆ ದಿನ ಬಿದ್ದ ಹಣ್ಣನ್ನು ಮಾತ್ರ ಸೇವಿಸುತ್ತಾ ಈ ಶರೀರವನ್ನು ಕ್ಷಯಿಸುತ್ತೇನೆ.

12009013a ಪಾಂಸುಭಿಃ ಸಮವಚ್ಚನ್ನಃ ಶೂನ್ಯಾಗಾರಪ್ರತಿಶ್ರಯಃ|

12009013c ವೃಕ್ಷಮೂಲನಿಕೇತೋ ವಾ ತ್ಯಕ್ತಸರ್ವಪ್ರಿಯಾಪ್ರಿಯಃ||

ಧೂಳಿನಿಂದ ತುಂಬಿಕೊಂಡಿದ್ದು, ಶೂನ್ಯ ಗೃಹದಲ್ಲಿ ಅಥವಾ ಮರದ ಬುಡದಲ್ಲಿ ವಾಸಿಸುತ್ತೇನೆ. ಮತ್ತು ಪ್ರಿಯ-ಅಪ್ರಿಯ ಎಲ್ಲವನ್ನೂ ಪರಿತ್ಯಜಿಸುತ್ತೇನೆ.

12009014a ನ ಶೋಚನ್ನ ಪ್ರಹೃಷ್ಯಂಶ್ಚ ತುಲ್ಯನಿಂದಾತ್ಮಸಂಸ್ತುತಿಃ|

12009014c ನಿರಾಶೀರ್ನಿರ್ಮಮೋ ಭೂತ್ವಾ ನಿರ್ದ್ವಂದ್ವೋ ನಿಷ್ಪರಿಗ್ರಹಃ||

ನಿಂದನೆ-ಸಂಸ್ತುತಿಗಳನ್ನು ಸಮನಾಗಿ ಕಾಣುತ್ತಾ ಶೋಕಿಸುವುದೂ ಇಲ್ಲ ಮತ್ತು ಹರ್ಷಿತನಾಗುವುದೂ ಇಲ್ಲ. ಏನನ್ನೂ ಬಯಸದೇ, ಯಾವುದನ್ನೂ ಅತಿಯಾಗಿ ಪ್ರೀತಿಸದೇ ನಿರ್ದ್ವಂದ್ವನಾಗಿಯೂ ಯಾವುದನ್ನೂ ತೆಗೆದುಕೊಳ್ಳದೆಯೂ ಇರುತ್ತೇನೆ.

12009015a ಆತ್ಮಾರಾಮಃ ಪ್ರಸನ್ನಾತ್ಮಾ ಜಡಾಂಧಬಧಿರಾಕೃತಿಃ|

12009015c ಅಕುರ್ವಾಣಃ ಪರೈಃ ಕಾಂ ಚಿತ್ಸಂವಿದಂ ಜಾತು ಕೇನ ಚಿತ್||

ಆತ್ಮಾರಾಮನಾಗಿದ್ದುಕೊಂಡು ಪ್ರಸನ್ನಾತ್ಮನಾಗಿರುತ್ತೇನೆ. ಜಡ-ಅಂಧ-ಕಿವುಡನಂತಿರುತ್ತೇನೆ. ಇನ್ನೊಬ್ಬರಿಂದ ಏನನ್ನೂ ಮಾಡಿಸಿಕೊಳ್ಳುವುದಿಲ್ಲ. ಯಾರೊಂದಿಗೂ ಮಾತನ್ನೂ ಆಡುವುದಿಲ್ಲ.

12009016a ಜಂಗಮಾಜಂಗಮಾನ್ಸರ್ವಾನ್ನವಿಹಿಂಸಂಶ್ಚತುರ್ವಿಧಾನ್|

12009016c ಪ್ರಜಾಃ ಸರ್ವಾಃ ಸ್ವಧರ್ಮಸ್ಥಾಃ ಸಮಃ ಪ್ರಾಣಭೃತಃ ಪ್ರತಿ||

ನಾಲ್ಕು ವಿಧದ ಚರಾಚರ ಪ್ರಾಣಿಗಳಲ್ಲಿ ಯಾರನ್ನೂ ಹಿಂಸಿಸುವುದಿಲ್ಲ. ಸ್ವಧರ್ಮನಿರತರಾಗಿರುವ ಎಲ್ಲ ಪ್ರಜೆಗಳನ್ನೂ ಪ್ರಾಣವಿರುವವನ್ನೂ ಸಮನಾಗಿ ಕಾಣುತ್ತೇನೆ.

12009017a ನ ಚಾಪ್ಯವಹಸನ್ಕಂ ಚಿನ್ನ ಕುರ್ವನ್ಭ್ರುಕುಟೀಂ ಕ್ವ ಚಿತ್|

12009017c ಪ್ರಸನ್ನವದನೋ ನಿತ್ಯಂ ಸರ್ವೇಂದ್ರಿಯಸುಸಂಯತಃ||

ಯಾರನ್ನೂ ಹಾಸ್ಯಮಾಡುವುದಿಲ್ಲ. ಯಾರ ಮೇಲೂ ಕುಪಿತನಾಗುವುದಿಲ್ಲ. ನಿತ್ಯವೂ ಸರ್ವ ಇಂದ್ರಿಯಗಳನ್ನೂ ನಿಯಂತ್ರಿಸಿಕೊಂಡು ಪ್ರಸನ್ನವದನನಾಗಿರುತ್ತೇನೆ.

12009018a ಅಪೃಚ್ಚನ್ಕಸ್ಯ ಚಿನ್ಮಾರ್ಗಂ ವ್ರಜನ್ಯೇನೈವ ಕೇನ ಚಿತ್|

12009018c ನ ದೇಶಂ ನ ದಿಶಂ ಕಾಂ ಚಿದ್ಗಂತುಮಿಚ್ಚನ್ವಿಶೇಷತಃ||

ಈ ದಾರಿಯು ಎಲ್ಲಿಗೆ ಹೋಗುತ್ತದೆ ಎಂದು ಯಾರನ್ನೂ ಕೇಳದೇ, ಯಾವುದೋ ಒಂದು ದಾರಿಯನ್ನು ಹಿಡಿದುಕೊಂಡು ಹೋಗುತ್ತೇನೆ. ವಿಶೇಷವಾಗಿ ಯಾವುದೇ ದೇಶ-ದಿಕ್ಕುಗಳಿಗೆ ಹೋಗಲು ಬಯಸದೇ ಹೋಗುತ್ತಿರುತ್ತೇನೆ.

12009019a ಗಮನೇ ನಿರಪೇಕ್ಷಶ್ಚ ಪಶ್ಚಾದನವಲೋಕಯನ್|

12009019c ಋಜುಃ ಪ್ರಣಿಹಿತೋ ಗಚ್ಚಂಸ್ತ್ರಸಸ್ಥಾವರವರ್ಜಕಃ||

ಹೋಗುವಾಗ ಏನನ್ನೂ ಅಪೇಕ್ಷಿಸುವುದಿಲ್ಲ. ಹಿಂದಿರುಗಿ ನೋಡುವುದಿಲ್ಲ. ಸರಳ ಭಾವದಿಂದಿದ್ದು, ಯಾವಾಗಲೂ ಅಂತರ್ಮುಖಿಯಾಗಿರುತ್ತೇನೆ. ಸ್ಥಾವರ-ಜಂಗಮಗಳನ್ನು ತೊರೆದು ಮುಂದೆ ಹೋಗುತ್ತಿರುತ್ತೇನೆ.

12009020a ಸ್ವಭಾವಸ್ತು ಪ್ರಯಾತ್ಯಗ್ರೇ ಪ್ರಭವಂತ್ಯಶನಾನ್ಯಪಿ|

12009020c ದ್ವಂದ್ವಾನಿ ಚ ವಿರುದ್ಧಾನಿ ತಾನಿ ಸರ್ವಾಣ್ಯಚಿಂತಯನ್||

ಸ್ವಾಭಾವಿಕವಾಗಿಯೇ ಮುಂದೆ ಏನಾಗುತ್ತದೆಯೋ ಏನು ದೊರೆಯುತ್ತದೆಯೋ ಅದನ್ನೇ ತಿನ್ನುತ್ತೇನೆ. ದ್ವಂದ್ವಗಳನ್ನೂ ವಿರುದ್ಧಗಳನ್ನೂ ಯೋಚಿಸದೇ ಮುಂದುವರೆಯುತ್ತಿರುತ್ತೇನೆ.

12009021a ಅಲ್ಪಂ ವಾಸ್ವಾದು ವಾ ಭೋಜ್ಯಂ ಪೂರ್ವಾಲಾಭೇನ ಜಾತು ಚಿತ್|

12009021c ಅನ್ಯೇಷ್ವಪಿ ಚರಽಲ್ಲಾಭಮಲಾಭೇ ಸಪ್ತ ಪೂರಯನ್||

ಅಲ್ಪವಾಗಿರಲೀ ಅಥವಾ ರುಚಿಯಾಗಿರದೇ ಇರಲಿ ಮೊದಲು ಸಿಕ್ಕಿದುದನ್ನು ತಿನ್ನುತ್ತೇನೆ. ಮೊದಲ ಮನೆಯಲ್ಲಿ ಭಿಕ್ಷೆಯು ಸಿಗದಿದ್ದರೆ ಅನ್ಯ ಏಳು ಮನೆಗಳಿಗೆ ಹೋಗುತ್ತೇನೆ.

12009022a ವಿಧೂಮೇ ನ್ಯಸ್ತಮುಸಲೇ ವ್ಯಂಗಾರೇ ಭುಕ್ತವಜ್ಜನೇ|

12009022c ಅತೀತಪಾತ್ರಸಂಚಾರೇ ಕಾಲೇ ವಿಗತಭಿಕ್ಷುಕೇ||

12009023a ಏಕಕಾಲಂ ಚರನ್ಭೈಕ್ಷ್ಯಂ ಗೃಹೇ ದ್ವೇ ಚೈವ ಪಂಚ ಚ|

12009023c ಸ್ಪೃಹಾಪಾಶಾನ್ವಿಮುಚ್ಯಾಹಂ ಚರಿಷ್ಯಾಮಿ ಮಹೀಮಿಮಾಮ್||

ಹೊಗೆಯಾಡದೇ ಇರುವ ಮನೆಗೆ, ಒನಕೆಯನ್ನು ತೆಗೆದಿಟ್ಟಿರುವ ಮನೆಗೆ, ಒಲೆಯ ಬೆಂಕಿಯನ್ನು ಆರಿಸಿದ ಮನೆಗೆ, ಮನೆಯವರೆಲ್ಲರೂ ಊಟಮಾಡಿಯಾಗಿರುವ ಮನೆಗೆ, ಅಡಿಗೆ ಪಾತ್ರೆಗಳನ್ನು ತೊಳೆದು ತೆಗೆದಿಟ್ಟ ಮನೆಗೆ, ಭಿಕ್ಷುಕರು ಬಂದು ಹೋಗುವ ಸಮಯವು ಕಳೆದುಹೋದ ನಂತರ ನಾನು ಭಿಕ್ಷೆಗೆ ಹೋಗುವುದಿಲ್ಲ. ಎರಡು ಅಥವಾ ಮೂರು ಅಥವಾ ಐದು ಮನೆಗಳಿಗೆ ದಿನದಲ್ಲಿ ಒಂದೇ ಸಾರಿ ಭಿಕ್ಷೆಗೆ ಹೋಗುತ್ತೇನೆ. ಸ್ನೇಹಪಾಶಗಳನ್ನು ತೊರೆದು ಈ ಭೂಮಿಯಲ್ಲಿ ಸಂಚರಿಸುತ್ತೇನೆ.

12009024a ನ ಜಿಜೀವಿಷುವತ್ಕಿಂ ಚಿನ್ನ ಮುಮೂರ್ಷುವದಾಚರನ್|

12009024c ಜೀವಿತಂ ಮರಣಂ ಚೈವ ನಾಭಿನಂದನ್ನ ಚ ದ್ವಿಷನ್||

ಜೀವಿಸಲು ಇಚ್ಛಿಸುವವನಂತೆ ಅಥವಾ ಸಾಯಲು ಇಚ್ಛಿಸುವವನಂತೆ ವರ್ತಿಸದೇ ಜೀವ-ಮರಣಗಳನ್ನು ಶ್ಲಾಘಿಸುವುದೂ ಇಲ್ಲ, ದ್ವೇಷಿಸುವುದೂ ಇಲ್ಲ.

12009025a ವಾಸ್ಯೈಕಂ ತಕ್ಷತೋ ಬಾಹುಂ ಚಂದನೇನೈಕಮುಕ್ಷತಃ|

12009025c ನಾಕಲ್ಯಾಣಂ ನ ಕಲ್ಯಾಣಂ ಚಿಂತಯನ್ನುಭಯೋಸ್ತಯೋಃ||

ನನ್ನ ಒಂದು ಬಾಹುವನ್ನು ಖಡ್ಗದಿಂದ ಗಾಯಗೊಳಿಸಿದವ ಮತ್ತು ಇನ್ನೊಂದಕ್ಕೆ ಚಂದನವನ್ನು ಲೇಪಿಸುವವ ಈ ಇಬ್ಬರ ಕುರಿತೂ ಮಂಗಳವಾದದ್ದನ್ನಾಗಲೀ ಅಮಂಗಳವಾದದ್ದನ್ನಾಗಲೀ ಯೋಚಿಸುವುದಿಲ್ಲ.

12009026a ಯಾಃ ಕಾಶ್ಚಿಜ್ಜೀವತಾ ಶಕ್ಯಾಃ ಕರ್ತುಮಭ್ಯುದಯಕ್ರಿಯಾಃ|

12009026c ಸರ್ವಾಸ್ತಾಃ ಸಮಭಿತ್ಯಜ್ಯ ನಿಮೇಷಾದಿವ್ಯವಸ್ಥಿತಃ||

ಜೀವಿಸಿರುವವನಿಗೆ ಶಕ್ಯವಾದ ಅಭ್ಯುದಯಕ್ರಿಯೆಗಳನ್ನೆಲ್ಲಾ ತ್ಯಜಿಸಿ ಕೇವಲ ಕಣ್ಣು ರೆಪ್ಪೆ ಬಡಿಯುವುದು ಮುಂತಾದ ಕಾರ್ಯಗಳನ್ನೇ ಮಾಡುತ್ತಿರುತ್ತೇನೆ.

12009027a ತೇಷು ನಿತ್ಯಮಸಕ್ತಶ್ಚ ತ್ಯಕ್ತಸರ್ವೇಂದ್ರಿಯಕ್ರಿಯಃ|

12009027c ಸುಪರಿತ್ಯಕ್ತಸಂಕಲ್ಪಃ ಸುನಿರ್ಣಿಕ್ತಾತ್ಮಕಲ್ಮಷಃ||

ಇಂದ್ರಿಯಕ್ರಿಯೆಗಳೆಲ್ಲವನ್ನೂ ತ್ಯಜಿಸಿ ಸಂಕಲ್ಪಶೂನ್ಯನಾಗಿರುತ್ತೇನೆ. ಆತ್ಮಕ್ಕೆ ಅಂಟಿಕೊಂಡಿರುವ ಕಲ್ಮಷಗಳನ್ನು ಸಂಪೂರ್ಣವಾಗಿ ತೆಗೆದುಹಾಕುತ್ತೇನೆ. ನಿತ್ಯವೂ ಇವುಗಳಲ್ಲಿ ಆಸಕ್ತನಾಗಿರುತ್ತೇನೆ.

12009028a ವಿಮುಕ್ತಃ ಸರ್ವಸಂಗೇಭ್ಯೋ ವ್ಯತೀತಃ ಸರ್ವವಾಗುರಾಃ|

12009028c ನ ವಶೇ ಕಸ್ಯ ಚಿತ್ತಿಷ್ಠನ್ಸಧರ್ಮಾ ಮಾತರಿಶ್ವನಃ||

ಸರ್ವಸಂಗಗಳಿಂದ ವಿಮುಕ್ತನಾಗಿ, ಸರ್ವ ಸ್ನೇಹಬಂಧನಗಳಿಂದ ಅತೀತನಾಗಿ ಯಾರ ವಶದಲ್ಲಿಯೂ ಬಾರದೇ ವಾಯುವಿನ ಧರ್ಮದಂತೆ ಎಲ್ಲಕಡೆ ಸಂಚರಿಸುತ್ತೇನೆ.

12009029a ವೀತರಾಗಶ್ಚರನ್ನೇವಂ ತುಷ್ಟಿಂ ಪ್ರಾಪ್ಸ್ಯಾಮಿ ಶಾಶ್ವತೀಮ್|

12009029c ತೃಷ್ಣಯಾ ಹಿ ಮಹತ್ಪಾಪಮಜ್ಞಾನಾದಸ್ಮಿ ಕಾರಿತಃ||

ಈ ರೀತಿ ವೀತರಾಗನಾಗಿ ಸಂಚರಿಸುತ್ತಾ ಶಾಶ್ವತ ತೃಪ್ತಿಯನ್ನು ಪಡೆಯುತ್ತೇನೆ. ಅಜ್ಞಾನದ ತೃಷ್ಣೆಯಿಂದಾಗಿ ನಾನು ಮಹಾ ಪಾಪವನ್ನು ಮಾಡಿದ್ದೇನೆ.

12009030a ಕುಶಲಾಕುಶಲಾನ್ಯೇಕೇ ಕೃತ್ವಾ ಕರ್ಮಾಣಿ ಮಾನವಾಃ|

12009030c ಕಾರ್ಯಕಾರಣಸಂಶ್ಲಿಷ್ಟಂ ಸ್ವಜನಂ ನಾಮ ಬಿಭ್ರತಿ||

ಕೆಲವು ಮಾನವರು ಕುಶಲ-ಅಕುಶಲ ಕರ್ಮಗಳನ್ನು ಮಾಡಿ, ಕಾರ್ಯ-ಕಾರಣ ನಿಮಿತ್ತದಿಂದ ಸ್ವಜನರನ್ನು ಪಾಲಿಸುತ್ತಾರೆ.

12009031a ಆಯುಷೋಽಂತೇ ಪ್ರಹಾಯೇದಂ ಕ್ಷೀಣಪ್ರಾಯಂ ಕಲೇವರಮ್|

12009031c ಪ್ರತಿಗೃಹ್ಣಾತಿ ತತ್ಪಾಪಂ ಕರ್ತುಃ ಕರ್ಮಫಲಂ ಹಿ ತತ್||

ಆಯುಷ್ಯವು ಕಳೆಯಲು ಕ್ಷೀಣಶರೀರವನ್ನು ಬಿಟ್ಟು ಆ ಪಾಪವನ್ನು ಸ್ವೀಕರಿಸುತ್ತಾರೆ. ಏಕೆಂದರೆ ಕರ್ಮಫಲವು ಕರ್ಮಮಾಡುವವನಿಗೇ ಸೇರುತ್ತವೆ.

12009032a ಏವಂ ಸಂಸಾರಚಕ್ರೇಽಸ್ಮಿನ್ವ್ಯಾವಿದ್ಧೇ ರಥಚಕ್ರವತ್|

12009032c ಸಮೇತಿ ಭೂತಗ್ರಾಮೋಽಯಂ ಭೂತಗ್ರಾಮೇಣ ಕಾರ್ಯವಾನ್||

ರಥದ ಚಕ್ರದಂತೆ ನಿರಂತರವಾಗಿ ತಿರುಗುತ್ತಿರುವ ಈ ಸಂಸಾರಚಕ್ರದಲ್ಲಿ ಭೂತಗ್ರಾಮಗಳು ಒಂದುಸೇರುತ್ತವೆ ಮತ್ತು ಭೂತಗ್ರಾಮಗಳಿಂದ ಕಾರ್ಯನಿರತವಾಗುತ್ತವೆ.

12009033a ಜನ್ಮಮೃತ್ಯುಜರಾವ್ಯಾಧಿವೇದನಾಭಿರುಪದ್ರುತಮ್|

12009033c ಅಸಾರಮಿಮಮಸ್ವಂತಂ ಸಂಸಾರಂ ತ್ಯಜತಃ ಸುಖಮ್||

ಜನ್ಮ-ಮೃತ್ಯು-ಮುಪ್ಪು-ವ್ಯಾಧಿ-ವೇದನೆಗಳಿಂದ ಆಕ್ರಮಿಸಲ್ಪಟ್ಟಿರುವ, ಸಾರವಿಲ್ಲದ ಅಸ್ವಾಸ್ಥ್ಯ ಸಂಸಾರವನ್ನು ತ್ಯಜಿಸಿದವನೇ ಸುಖಿಯು.

12009034a ದಿವಃ ಪತತ್ಸು ದೇವೇಷು ಸ್ಥಾನೇಭ್ಯಶ್ಚ ಮಹರ್ಷಿಷು|

12009034c ಕೋ ಹಿ ನಾಮ ಭವೇನಾರ್ಥೀ ಭವೇತ್ ಕಾರಣತತ್ತ್ವವಿತ್||

ದೇವತೆಗಳೂ ದಿವದಿಂದ ಮತ್ತು ಮಹರ್ಷಿಗಳೂ ತಮ್ಮ ಸ್ಥಾನಗಳಿಂದ ಕೆಳಕ್ಕೆ ಬೀಳುತ್ತಾರೆ. ಹೀಗಿರುವಾಗ ಕಾರಣತತ್ತ್ವವನ್ನು ತಿಳಿದಿರುವ ಯಾರು ತಾನೇ ಈ ಸಂಸಾರವನ್ನು ಬಯಸುತ್ತಾನೆ?

12009035a ಕೃತ್ವಾ ಹಿ ವಿವಿಧಂ ಕರ್ಮ ತತ್ತದ್ವಿವಿಧಲಕ್ಷಣಮ್|

12009035c ಪಾರ್ಥಿವೈರ್ನೃಪತಿಃ ಸ್ವಲ್ಪೈಃ ಕಾರಣೈರೇವ ಬಧ್ಯತೇ||

ವಿವಿಧ ಲಕ್ಷಣಗಳುಳ್ಳ ವಿವಿಧ ಕರ್ಮಗಳನ್ನು ಮಾಡಿದ ರಾಜನನ್ನು ಸ್ವಲ್ಪವೇ ಕಾರಣಕ್ಕಾಗಿ ಅನೇಕ ರಾಜರು ಬಂಧಿಸುತ್ತಾರೆ.

12009036a ತಸ್ಮಾತ್ಪ್ರಜ್ಞಾಮೃತಮಿದಂ ಚಿರಾನ್ಮಾಂ ಪ್ರತ್ಯುಪಸ್ಥಿತಮ್|

12009036c ತತ್ಪ್ರಾಪ್ಯ ಪ್ರಾರ್ಥಯೇ ಸ್ಥಾನಮವ್ಯಯಂ ಶಾಶ್ವತಂ ಧ್ರುವಮ್||

ಆದುದರಿಂದ ಈ ಜ್ಞಾನಾಮೃತವು ಬಹುಕಾಲದಿಂದ ನನ್ನಲ್ಲಿ ಮನೆಮಾಡಿಕೊಂಡಿದೆ. ಇದರ ಮೂಲಕವೇ ನಾನು ಅವ್ಯಯವೂ ಶಾಶ್ವತವೂ ಸ್ಥಿರವೂ ಆದ ಸ್ಥಾನವನ್ನು ಬಯಸುತ್ತೇನೆ.

12009037a ಏತಯಾ ಸತತಂ ವೃತ್ತ್ಯಾ ಚರನ್ನೇವಂಪ್ರಕಾರಯಾ|

12009037c ದೇಹಂ ಸಂಸ್ಥಾಪಯಿಷ್ಯಾಮಿ ನಿರ್ಭಯಂ ಮಾರ್ಗಮಾಸ್ಥಿತಃ||

ಈ ನಿರ್ಭಯ ಮಾರ್ಗವನ್ನನುಸರಿಸಿ, ಸತತವೂ ಅದರಂತೆಯೇ ನಡೆದುಕೊಂಡು ಇದೇಪ್ರಕಾರವಾಗಿ ಸಂಚರಿಸುತ್ತಾ ದೇಹವನ್ನು ಸಮಾಪನಗೊಳಿಸುತ್ತೇನೆ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರವಾಕ್ಯೇ ನವಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರವಾಕ್ಯ ಎನ್ನುವ ಒಂಭತ್ತನೇ ಅಧ್ಯಾಯವು.

Comments are closed.