ಶಾಂತಿ ಪರ್ವ: ರಾಜಧರ್ಮ ಪರ್ವ

೬೩

12063001 ಭೀಷ್ಮ ಉವಾಚ

12063001a ಜ್ಯಾಕರ್ಷಣಂ ಶತ್ರುನಿಬರ್ಹಣಂ ಚ

ಕೃಷಿರ್ವಣಿಜ್ಯಾ ಪಶುಪಾಲನಂ ಚ|

12063001c ಶುಶ್ರೂಷಣಂ ಚಾಪಿ ತಥಾರ್ಥಹೇತೋರ್

ಅಕಾರ್ಯಮೇತತ್ಪರಮಂ ದ್ವಿಜಸ್ಯ||

ಭೀಷ್ಮನು ಹೇಳಿದನು: “ಧನುಸ್ಸನ್ನು ಸೆಳೆಯುವುದು, ಶತ್ರುಗಳನ್ನು ಸಂಹರಿಸುವುದು, ಕೃಷಿ, ವಾಣಿಜ್ಯ, ಪಶುಪಾಲನೆ, ಸಂಪತ್ತಿಗಾಗಿ ಇತರರ ಶುಶ್ರೂಷೆಮಾಡುವುದು ಇವುಗಳು ದ್ವಿಜನಿಗೆ ಪರಮ ಅಕಾರ್ಯಗಳು.

12063002a ಸೇವ್ಯಂ ತು ಬ್ರಹ್ಮಷಟ್ಕರ್ಮ ಗೃಹಸ್ಥೇನ ಮನೀಷಿಣಾ|

12063002c ಕೃತಕೃತ್ಯಸ್ಯ ಚಾರಣ್ಯೇ ವಾಸೋ ವಿಪ್ರಸ್ಯ ಶಸ್ಯತೇ||

ಗೃಹಸ್ಥನಾಗಿರುವಾಗ ಬ್ರಾಹ್ಮಣನು ಆರು ಬ್ರಹ್ಮಕರ್ಮಗಳಲ್ಲಿ ತೊಡಗಿರಬೇಕು. ಗೃಹಸ್ಥಾಶ್ರಮದಲ್ಲಿ ಕೃತಕೃತ್ಯನಾದ ನಂತರ ಅರಣ್ಯದಲ್ಲಿ ವಾನಪ್ರಸ್ಥಾಶ್ರಮವನ್ನನುಸರಿಸಬೇಕು.

12063003a ರಾಜಪ್ರೈಷ್ಯಂ ಕೃಷಿಧನಂ ಜೀವನಂ ಚ ವಣಿಜ್ಯಯಾ|

12063003c ಕೌಟಿಲ್ಯಂ ಕೌಲಟೇಯಂ ಚ ಕುಸೀದಂ ಚ ವಿವರ್ಜಯೇತ್||

ಬ್ರಾಹ್ಮಣನು ರಾಜಸೇವೆ, ಕೃಷಿಯಿಂದ ಸಂಪಾದನೆ, ವಾಣಿಜ್ಯದಿಂದ ಜೀವನ, ಕುಟಿಲತೆ, ವ್ಯಭಿಚಾರಿಣಿಯೊಂದಿಗೆ ಸಹವಾಸ ಮತ್ತು ಬಡ್ಡೀ ಹಣದಿಂದ ಜೀವಿಸುವುದು – ಇವುಗಳನ್ನು ವರ್ಜಿಸಬೇಕು.

12063004a ಶೂದ್ರೋ ರಾಜನ್ಭವತಿ ಬ್ರಹ್ಮಬಂಧು-

ರ್ದುಶ್ಚಾರಿತ್ರ್ಯೋ ಯಶ್ಚ ಧರ್ಮಾದಪೇತಃ|

12063004c ವೃಷಲೀಪತಿಃ ಪಿಶುನೋ ನರ್ತಕಶ್ಚ

ಗ್ರಾಮಪ್ರೈಷ್ಯೋ ಯಶ್ಚ ಭವೇದ್ವಿಕರ್ಮಾ||

ರಾಜನ್! ದುಶ್ಚರಿತನೂ, ಧರ್ಮಹೀನನೂ, ಚಾಡಿಕೋರನೂ, ಕೆಳಜಾತಿಯವಳನ್ನು ಮದುವೆಯಾಗಿರುವವನೂ, ನರ್ತಕನೂ, ರಾಜಸೇವಕನೂ ಮತ್ತು ಬ್ರಾಹ್ಮಣರಿಗೆ ವಿರೋಧವಾದ ಕರ್ಮಗಳನ್ನು ಮಾಡುವವನೂ ಅವನು ಬ್ರಾಹ್ಮಣನಾಗಿದ್ದರೂ ಶೂದ್ರನಂತೆಯೇ!

12063005a ಜಪನ್ವೇದಾನಜಪಂಶ್ಚಾಪಿ ರಾಜನ್

ಸಮಃ ಶೂದ್ರೈರ್ದಾಸವಚ್ಚಾಪಿ ಭೋಜ್ಯಃ|

12063005c ಏತೇ ಸರ್ವೇ ಶೂದ್ರಸಮಾ ಭವಂತಿ

ರಾಜನ್ನೇತಾನ್ವರ್ಜಯೇದ್ದೇವಕೃತ್ಯೇ||

ರಾಜನ್! ಇಂಥವರು ವೇದಗಳನ್ನು ಜಪಿಸಲಿ ಅಥವಾ ಜಪಿಸದಿರಲಿ; ಅವರು ಶೂದ್ರಸಮರಾಗುತ್ತಾರೆ. ಭೋಜನದಲ್ಲಿ ದಾಸರನ್ನು ಹೇಗೋ ಹಾಗೆ ರಾಜನ್! ಈ ಶೂದ್ರಸಮಾನರನ್ನು ದೇವಕಾರ್ಯಗಳಲ್ಲಿ ವರ್ಜಿಸಬೇಕು.

12063006a ನಿರ್ಮರ್ಯಾದೇ ಚಾಶನೇ ಕ್ರೂರವೃತ್ತೌ

ಹಿಂಸಾತ್ಮಕೇ ತ್ಯಕ್ತಧರ್ಮಸ್ವವೃತ್ತೇ|

12063006c ಹವ್ಯಂ ಕವ್ಯಂ ಯಾನಿ ಚಾನ್ಯಾನಿ ರಾಜನ್

ದೇಯಾನ್ಯದೇಯಾನಿ ಭವಂತಿ ತಸ್ಮಿನ್||

ರಾಜನ್! ತಿನ್ನುವುದರಲ್ಲಿ ಮರ್ಯಾದೆಯೇ ಇರದ, ಕ್ರೂರವೃತ್ತಿಮಾಡುವ, ಹಿಂಸಾತ್ಮಕನಾದ, ಧರ್ಮವನ್ನು ತ್ಯಜಿಸಿ ತನ್ನದೇ ವೃತ್ತಿಯಲ್ಲಿ ನಿರತನಾಗಿರುವ ಬ್ರಾಹ್ಮಣನನ್ನು ಹವ್ಯಕವ್ಯಗಳಲ್ಲಿ ಆಹ್ವಾನಿಸಿದರೆ ಮತ್ತು ಅಂಥಹ ಬ್ರಾಹ್ಮಣನಿಗೆ ದಾನಗಳನ್ನು ನೀಡಿದರೆ ಅವುಗಳನ್ನು ಮಾಡಿದರೂ ಮಾಡಿದಂತೆ ಆಗುವುದಿಲ್ಲ.

12063007a ತಸ್ಮಾದ್ಧರ್ಮೋ ವಿಹಿತೋ ಬ್ರಾಹ್ಮಣಸ್ಯ

ದಮಃ ಶೌಚಂ ಚಾರ್ಜವಂ ಚಾಪಿ ರಾಜನ್|

12063007c ತಥಾ ವಿಪ್ರಸ್ಯಾಶ್ರಮಾಃ ಸರ್ವ ಏವ

ಪುರಾ ರಾಜನ್ಬ್ರಹ್ಮಣಾ ವೈ ನಿಸೃಷ್ಟಾಃ||

ರಾಜನ್! ಆದುದರಿಂದ ಬ್ರಾಹ್ಮಣನಿಗೆ ಇಂದ್ರಿಯ ನಿಗ್ರಹ, ಶೌಚ, ಸರಳತೆ, ಇವುಗಳೇ ಧರ್ಮಗಳೆಂದು ವಿಹಿತವಾಗಿವೆ. ಹಾಗೆಯೇ ನಾಲ್ಕು ಆಶ್ರಮ ಧರ್ಮಗಳೂ ಬ್ರಾಹ್ಮಣನಿಗೆ ವಿಹಿತವಾಗಿರುತ್ತವೆ. ಏಕೆಂದರೆ ಎಲ್ಲರಿಗಿಂತಲೂ ಮೊದಲು ಬ್ರಾಹ್ಮಣನ ಸೃಷ್ಟಿಯಾಗಿರುತ್ತದೆ.

12063008a ಯಃ ಸ್ಯಾದ್ದಾಂತಃ ಸೋಮಪ ಆರ್ಯಶೀಲಃ

ಸಾನುಕ್ರೋಶಃ ಸರ್ವಸಹೋ ನಿರಾಶೀಃ|

12063008c ಋಜುರ್ಮೃದುರನೃಶಂಸಃ ಕ್ಷಮಾವಾನ್

ಸ ವೈ ವಿಪ್ರೋ ನೇತರಃ ಪಾಪಕರ್ಮಾ||

ಇಂದ್ರಿಯಗಳನ್ನು ಸಂಯಮಗಳಲ್ಲಿಟ್ಟುಕೊಂಡಿರುವ, ಸೋಮವನ್ನು ಕುಡಿದಿರುವ, ಆರ್ಯಶೀಲ, ಅನುಕಂಪವುಳ್ಳ, ಸರ್ವವನ್ನೂ ಸಹಿಸಿಕೊಳ್ಳುವ, ಆಸೆಗಳನ್ನಿಟ್ಟುಕೊಂಡಿರದ, ನಿಷ್ಕಪಟಿ, ಮೃದು, ಅಹಿಂಸಾತ್ಮ, ಕ್ಷಮಾವಂತನು ಮಾತ್ರ ವಿಪ್ರನು. ಇತರರು ಪಾಪಕರ್ಮಿಗಳು.

12063009a ಶೂದ್ರಂ ವೈಶ್ಯಂ ರಾಜಪುತ್ರಂ ಚ ರಾಜ-

ಲ್ಲೋಕಾಃ ಸರ್ವೇ ಸಂಶ್ರಿತಾ ಧರ್ಮಕಾಮಾಃ|

12063009c ತಸ್ಮಾದ್ವರ್ಣಾನ್ಜಾತಿಧರ್ಮೇಷು ಸಕ್ತಾ-

ನ್ಮತ್ವಾ ವಿಷ್ಣುರ್ನೇಚ್ಚತಿ ಪಾಂಡುಪುತ್ರ||

ಪಾಂಡುಪುತ್ರ! ರಾಜನ್! ಲೋಕದಲ್ಲಿ ಧರ್ಮ-ಅರ್ಥ-ಕಾಮಗಳನ್ನು ಅರಸುವ ಎಲ್ಲರೂ ಶೂದ್ರ, ವೈಶ್ಯ ಮತ್ತು ರಾಜನನ್ನು ಸಂಶ್ರಯಿಸುತ್ತಾರೆ. ಆದುದರಿಂದ ಯಾವ ವರ್ಣದವರು ಮೋಕ್ಷಧರ್ಮದಲ್ಲಿ ಆಸಕ್ತರಾಗಿರುವುದಿಲ್ಲವೋ ಅವರಿಗೆ ವಿಷ್ಣುವು ಉಪದೇಶಿಸಲು ಇಚ್ಛಿಸುವುದಿಲ್ಲ.

12063010a ಲೋಕೇ ಚೇದಂ ಸರ್ವಲೋಕಸ್ಯ ನ ಸ್ಯಾ-

ಚ್ಚಾತುರ್ವರ್ಣ್ಯಂ ವೇದವಾದಾಶ್ಚ ನ ಸ್ಯುಃ|

12063010c ಸರ್ವಾಶ್ಚೇಜ್ಯಾಃ ಸರ್ವಲೋಕಕ್ರಿಯಾಶ್ಚ

ಸದ್ಯಃ ಸರ್ವೇ ಚಾಶ್ರಮಸ್ಥಾ ನ ವೈ ಸ್ಯುಃ||

ಒಂದುವೇಳೆ ಇದು ಹೀಗಾಗದಿದ್ದರೆ ಈ ಲೋಕದಲ್ಲಿ ಮತ್ತು ಸರ್ವ ಲೋಕಗಳಲ್ಲಿ ಚಾತುರ್ವರ್ಣಗಳೂ, ವೇದವಾದಗಳೂ, ಎಲ್ಲ ಯಜ್ಞಗಳೂ, ಸರ್ವಲೋಕಕ್ರಿಯೆಗಳೂ ಇರುತ್ತಿರಲಿಲ್ಲ. ಯಾರೂ ಆಶ್ರಮಧರ್ಮಗಳಲ್ಲಿಯೂ ಇರುತ್ತಿರಲಿಲ್ಲ.

12063011a ಯಶ್ಚ ತ್ರಯಾಣಾಂ ವರ್ಣಾನಾಮಿಚ್ಚೇದಾಶ್ರಮಸೇವನಮ್|

12063011c ಕರ್ತುಮಾಶ್ರಮದೃಷ್ಟಾಂಶ್ಚ ಧರ್ಮಾಂಸ್ತಾನ್ಶೃಣು ಪಾಂಡವ||

ಪಾಂಡವ! ಬ್ರಾಹ್ಮಣ-ವೈಶ್ಯ-ಶೂದ್ರ ಈ ಮೂರು ವರ್ಣದವರು ತಮ್ಮ ತಮ್ಮ ಆಶ್ರಮಧರ್ಮಗಳನ್ನು ಪಾಲಿಸಬೇಕೆಂದು ಬಯಸುವುದಾದರೆ ಆಶ್ರಮಗಳಿಗೆ ಹೇಳಲ್ಪಟ್ಟಿರುವ ಧರ್ಮಗಳ ಕುರಿತು ಕೇಳು.

12063012a ಶುಶ್ರೂಷಾಕೃತಕೃತ್ಯಸ್ಯ ಕೃತಸಂತಾನಕರ್ಮಣಃ|

12063012c ಅಭ್ಯನುಜ್ಞಾಪ್ಯ ರಾಜಾನಂ ಶೂದ್ರಸ್ಯ ಜಗತೀಪತೇ||

12063013a ಅಲ್ಪಾಂತರಗತಸ್ಯಾಪಿ ದಶಧರ್ಮಗತಸ್ಯ ವಾ|

12063013c ಆಶ್ರಮಾ ವಿಹಿತಾಃ ಸರ್ವೇ ವರ್ಜಯಿತ್ವಾ ನಿರಾಶಿಷಮ್||

ಜಗತೀಪತೇ! ಸೇವೆಗಳನ್ನು ಮಾಡಿ ಕೃತಕೃತ್ಯನಾದ, ಸಂತಾನಕರ್ಮಗಳನ್ನು ಪೂರೈಸಿದ, ದಶಧರ್ಮಗಳಲ್ಲಿ ಇತರರೊಂದಿಗೆ ಹೆಚ್ಚು ಅಂತರವನ್ನಿಟ್ಟುಕೊಂಡಿರದ ಶೂದ್ರನು ರಾಜನ ಅನುಮತಿಯನ್ನು ಪಡೆದು ಸಂನ್ಯಾಸವನ್ನು ಬಿಟ್ಟು ವಾನಪ್ರಸ್ಥಾಶ್ರಮವನ್ನು ಸ್ವೀಕರಿಸಬಹುದು.

12063014a ಭೈಕ್ಷಚರ್ಯಾಂ ನ ತು ಪ್ರಾಹುಸ್ತಸ್ಯ ತದ್ಧರ್ಮಚಾರಿಣಃ|

12063014c ತಥಾ ವೈಶ್ಯಸ್ಯ ರಾಜೇಂದ್ರ ರಾಜಪುತ್ರಸ್ಯ ಚೈವ ಹಿ||

ರಾಜೇಂದ್ರ! ಹಾಗೆಯೇ ವೈಶ್ಯನ ಮತ್ತು ರಾಜಪುತ್ರನ ಧರ್ಮಚಾರಿಗಳಿಗೆ ಕೂಡ ಸಂನ್ಯಾಸಾಶ್ರಮವನ್ನು ಹೇಳಿಲ್ಲ.

12063015a ಕೃತಕೃತ್ಯೋ ವಯೋತೀತೋ ರಾಜ್ಞಃ ಕೃತಪರಿಶ್ರಮಃ|

12063015c ವೈಶ್ಯೋ ಗಚ್ಚೇದನುಜ್ಞಾತೋ ನೃಪೇಣಾಶ್ರಮಮಂಡಲಮ್||

ಪರಿಶ್ರಮಗಳಿಂದ ಕೃತಕೃತ್ಯನಾದ ಮತ್ತು ವಯೋವೃದ್ಧನಾದ ವೈಶ್ಯನು ರಾಜನ ಅನುಮತಿಯನ್ನು ಪಡೆದು ರಾಜರ ವಾನಪ್ರಸ್ಥಾಶ್ರಮ ಮಂಡಲವನ್ನು ಸೇರಬಹುದು.

12063016a ವೇದಾನಧೀತ್ಯ ಧರ್ಮೇಣ ರಾಜಶಾಸ್ತ್ರಾಣಿ ಚಾನಘ|

12063016c ಸಂತಾನಾದೀನಿ ಕರ್ಮಾಣಿ ಕೃತ್ವಾ ಸೋಮಂ ನಿಷೇವ್ಯ ಚ||

12063017a ಪಾಲಯಿತ್ವಾ ಪ್ರಜಾಃ ಸರ್ವಾ ಧರ್ಮೇಣ ವದತಾಂ ವರ|

12063017c ರಾಜಸೂಯಾಶ್ವಮೇಧಾದೀನ್ಮಖಾನನ್ಯಾಂಸ್ತಥೈವ ಚ||

12063018a ಸಮಾನೀಯ ಯಥಾಪಾಠಂ ವಿಪ್ರೇಭ್ಯೋ ದತ್ತದಕ್ಷಿಣಃ|

12063018c ಸಂಗ್ರಾಮೇ ವಿಜಯಂ ಪ್ರಾಪ್ಯ ತಥಾಲ್ಪಂ ಯದಿ ವಾ ಬಹು||

12063019a ಸ್ಥಾಪಯಿತ್ವಾ ಪ್ರಜಾಪಾಲಂ ಪುತ್ರಂ ರಾಜ್ಯೇ ಚ ಪಾಂಡವ|

12063019c ಅನ್ಯಗೋತ್ರಂ ಪ್ರಶಸ್ತಂ ವಾ ಕ್ಷತ್ರಿಯಂ ಕ್ಷತ್ರಿಯರ್ಷಭ||

12063020a ಅರ್ಚಯಿತ್ವಾ ಪಿತೃನ್ಸಮ್ಯಕ್ಪಿತೃಯಜ್ಞೈರ್ಯಥಾವಿಧಿ|

12063020c ದೇವಾನ್ಯಜ್ಞೈಋಷೀನ್ವೇದೈರರ್ಚಿತ್ವಾ ಚೈವ ಯತ್ನತಃ||

12063021a ಅಂತಕಾಲೇ ಚ ಸಂಪ್ರಾಪ್ತೇ ಯ ಇಚ್ಚೇದಾಶ್ರಮಾಂತರಮ್|

12063021c ಆನುಪೂರ್ವ್ಯಾಶ್ರಮಾನ್ರಾಜನ್ಗತ್ವಾ ಸಿದ್ಧಿಮವಾಪ್ನುಯಾತ್||

ಅನಘ! ಮಾತನಾಡುವವರಲ್ಲಿ ಶ್ರೇಷ್ಠ! ಪಾಂಡವ! ಕ್ಷತ್ರಿಯರ್ಷಭ! ರಾಜನ್! ಧರ್ಮಪೂರ್ವಕವಾಗಿ ವೇದಗಳನ್ನೂ ರಾಜಶಾಸ್ತ್ರಗಳನ್ನೂ ಕಲಿತು, ಸಂತಾನಾದಿ ಕರ್ಮಗಳನ್ನು ಪೂರೈಸಿ, ಸೋಮವನ್ನು ಸೇವಿಸಿ, ಧರ್ಮದಿಂದ ಪ್ರಜೆಗಳೆಲ್ಲರನ್ನೂ ಪಾಲಿಸಿ, ವೇದಗಳಲ್ಲಿ ಹೇಳಿರುವಂತೆ ರಾಜಸೂಯ-ಅಶ್ವಮೇಧವೇ ಮೊದಲಾದ ಮುಖ್ಯ ಯಜ್ಞಗಳನ್ನು ದ್ವಿಜರಿಗೆ ದಕ್ಷಿಣೆಗಳನ್ನಿತ್ತು ಪೂರೈಸಿ, ಸ್ವಲ್ಪ ಅಥವಾ ಅಧಿಕ ಸಂಗ್ರಾಮಗಳಲ್ಲಿ ವಿಜಯಿಯಾಗಿ, ಪ್ರಜಾಪಾಲನೆಗಾಗಿ ರಾಜ್ಯದಲ್ಲಿ ಮಗನನ್ನು ಅಥವಾ ಅನ್ಯ ಗೋತ್ರದ ಪ್ರಶಸ್ತ ಕ್ಷತ್ರಿಯನನ್ನು ಸ್ಥಾಪಿಸಿ, ಪ್ರಯತ್ನಪಟ್ಟು ಯಥಾವಿಧಿ ಯಜ್ಞಗಳನ್ನು ರಚಿಸಿ ಪಿತೃಗಳನ್ನೂ, ದೇವತೆಗಳನ್ನೂ ಮತ್ತು ಋಷಿಗಳನ್ನೂ ಅರ್ಚಿಸಿ, ಅಂತ್ಯಕಾಲವು ಸಂಪ್ರಾಪ್ತವಾದಾಗ ಆಶ್ರಮಾಂತರವಾದ ವಾನಪ್ರಸ್ಥವನ್ನು ಸ್ವೀಕರಿಸಿದರೆ ಅಂಥಹ ಕ್ಷತ್ರಿಯನು ಕ್ರಮಾನುಬದ್ಧವಾಗಿ ಆಶ್ರಮಧರ್ಮಗಳನ್ನು ಸ್ವೀಕರಿಸಿದವನಾಗಿ ಸಿದ್ಧಿಯನ್ನು ಪಡೆಯುತ್ತಾನೆ.

12063022a ರಾಜರ್ಷಿತ್ವೇನ ರಾಜೇಂದ್ರ ಭೈಕ್ಷಚರ್ಯಾಧ್ವಸೇವಯಾ|

12063022c ಅಪೇತಗೃಹಧರ್ಮೋಽಪಿ ಚರೇಜ್ಜೀವಿತಕಾಮ್ಯಯಾ||

ರಾಜೇಂದ್ರ! ಹೀಗೆ ರಾಜರ್ಷಿಯಾದವನು ಗೃಹಸ್ಥಧರ್ಮವನ್ನು ತ್ಯಾಗಮಾಡಿದರೂ ಜೀವನ ನಿರ್ವಹಣೆಗಾಗಿ ಭಿಕ್ಷೆಯನ್ನೇ ಮಾಡಬೇಕು. ಇತರರ ಸೇವೆಯನ್ನು ಮಾಡಬಾರದು.

12063023a ನ ಚೈತನ್ನೈಷ್ಠಿಕಂ ಕರ್ಮ ತ್ರಯಾಣಾಂ ಭರತರ್ಷಭ|

12063023c ಚತುರ್ಣಾಂ ರಾಜಶಾರ್ದೂಲ ಪ್ರಾಹುರಾಶ್ರಮವಾಸಿನಾಮ್||

ಭರತರ್ಷಭ! ರಾಜಶಾರ್ದೂಲ! ಈ ಐಷ್ಠಿಕ ಕರ್ಮವು ಮೂರು ವರ್ಣದವರಿಗೆ ಮಾತ್ರ ಸೀಮಿತವಾಗಿಲ್ಲ. ನಾಲ್ಕೂ ವರ್ಣದವರಿಗೂ ಈ ವಾನಪ್ರಸ್ಥಾಶ್ರಮವನ್ನು ಹೇಳಿದ್ದಾರೆ.

12063024a ಬಾಹ್ವಾಯತ್ತಂ ಕ್ಷತ್ರಿಯೈರ್ಮಾನವಾನಾಂ

ಲೋಕಶ್ರೇಷ್ಠಂ ಧರ್ಮಮಾಸೇವಮಾನೈಃ|

12063024c ಸರ್ವೇ ಧರ್ಮಾಃ ಸೋಪಧರ್ಮಾಸ್ತ್ರಯಾಣಾಂ

ರಾಜ್ಞೋ ಧರ್ಮಾದಿತಿ ವೇದಾಚ್ಚೃಣೋಮಿ||

ಬಾಹುಬಲವನ್ನಾಶ್ರಯಿಸಿರುವ ಈ ಕ್ಷತ್ರಿಯ ಧರ್ಮವು ಸರ್ವಮಾನವರ ಸೇವೆಗೈಯುವುದರಿಂದ ಲೋಕಶ್ರೇಷ್ಠವಾದುದು. ಬ್ರಾಹ್ಮಣ-ವೈಶ್ಯ-ಶೂದ್ರ ಈ ಮೂರು ವರ್ಣದವರ ಸರ್ವ ಧರ್ಮ-ಉಪಧರ್ಮಗಳೂ ರಾಜಧರ್ಮದಿಂದಲೇ ಸಂರಕ್ಷಿಸಲ್ಪಡುವುದು ಎಂದು ವೇದಗಳಿಂದ ಕೇಳಿದ್ದೇನೆ.

12063025a ಯಥಾ ರಾಜನ್ಹಸ್ತಿಪದೇ ಪದಾನಿ

ಸಂಲೀಯಂತೇ ಸರ್ವಸತ್ತ್ವೋದ್ಭವಾನಿ|

12063025c ಏವಂ ಧರ್ಮಾನ್ರಾಜಧರ್ಮೇಷು ಸರ್ವಾನ್

ಸರ್ವಾವಸ್ಥಂ ಸಂಪ್ರಲೀನಾನ್ನಿಬೋಧ||

ರಾಜನ್! ಆನೆಯ ಪದಚಿಹ್ನೆಯಲ್ಲಿ ಇತರ ಎಲ್ಲ ಪ್ರಾಣಿಗಳ ಹೆಜ್ಜೆಗಳ ಗುರುತುಗಳೂ ಹೇಗೆ ಲೀನವಾಗಿಬಿಡುತ್ತವೆಯೋ ಹಾಗೆ ಎಲ್ಲ ಧರ್ಮಗಳೂ ಮತ್ತ ಅವುಗಳ ಎಲ್ಲ ಅವಸ್ಥೆ-ಭೇದಗಳೂ ರಾಜಧರ್ಮದಲ್ಲಿ ಲೀನವಾಗಿಬಿಡುತ್ತವೆ ಎಂದು ತಿಳಿ.

12063026a ಅಲ್ಪಾಶ್ರಯಾನಲ್ಪಫಲಾನ್ವದಂತಿ

ಧರ್ಮಾನನ್ಯಾನ್ಧರ್ಮವಿದೋ ಮನುಷ್ಯಾಃ|

12063026c ಮಹಾಶ್ರಯಂ ಬಹುಕಲ್ಯಾಣರೂಪಂ

ಕ್ಷಾತ್ರಂ ಧರ್ಮಂ ನೇತರಂ ಪ್ರಾಹುರಾರ್ಯಾಃ||

ಅನ್ಯ ಧರ್ಮಗಳ ಆಶ್ರಯವು ಅಲ್ಪಫಲಗಳನ್ನು ನೀಡುತ್ತವೆ ಎಂದು ಧರ್ಮವಿದ ಮನುಷ್ಯರು ಹೇಳುತ್ತಾರೆ. ಕ್ಷಾತ್ರಧರ್ಮಕ್ಕಿಂತಲೂ ಮಹಾಶ್ರಯ ನೀಡುವ ಮತ್ತು ಬಹುಕಲ್ಯಾಣರೂಪವಾದ ಇತರ ಧರ್ಮವಿಲ್ಲ ಎಂದು ಆರ್ಯರು ಹೇಳುತ್ತಾರೆ.

12063027a ಸರ್ವೇ ಧರ್ಮಾ ರಾಜಧರ್ಮಪ್ರಧಾನಾಃ

ಸರ್ವೇ ಧರ್ಮಾಃ ಪಾಲ್ಯಮಾನಾ ಭವಂತಿ|

12063027c ಸರ್ವತ್ಯಾಗೋ ರಾಜಧರ್ಮೇಷು ರಾಜಂಸ್

ತ್ಯಾಗೇ ಚಾಹುರ್ಧರ್ಮಮಗ್ರ್ಯಂ ಪುರಾಣಮ್||

ಸರ್ವಧರ್ಮಗಳಲ್ಲಿ ರಾಜಧರ್ಮವೇ ಪ್ರಧಾನವಾದುದು. ಎಲ್ಲ ಧರ್ಮಗಳ ಪಾಲನೆಯೂ ರಾಜಧರ್ಮದಿಂದ ನಡೆಯುತ್ತದೆ. ರಾಜನ್! ರಾಜಧರ್ಮದಲ್ಲಿ ಸರ್ವ ತ್ಯಾಗಗಳೂ ಒಳಗೊಂಡಿವೆ ಮತ್ತು ತ್ಯಾಗವೇ ಪುರಾಣ ಮತ್ತು ಅಗ್ರ ಧರ್ಮವೆಂದು ಹೇಳುತ್ತಾರೆ.

12063028a ಮಜ್ಜೇತ್ತ್ರಯೀ ದಂಡನೀತೌ ಹತಾಯಾಂ

ಸರ್ವೇ ಧರ್ಮಾ ನ ಭವೇಯುರ್ವಿರುದ್ಧಾಃ|

12063028c ಸರ್ವೇ ಧರ್ಮಾಶ್ಚಾಶ್ರಮಾಣಾಂ ಗತಾಃ ಸ್ಯುಃ

ಕ್ಷಾತ್ರೇ ತ್ಯಕ್ತೇ ರಾಜಧರ್ಮೇ ಪುರಾಣೇ||

ದಂಡನೀತಿಯು ನಾಶವಾಗಲು ಮೂರು ವೇದಗಳೂ ಪಾತಾಳದಲ್ಲಿ ಮುಳುಗಿಕೊಳ್ಳುತ್ತವೆ. ಸರ್ವ ಧರ್ಮಗಳೂ ನಾಶಗೊಳ್ಳುತ್ತವೆ. ಸನಾತನವಾದ ಕ್ಷತ್ರಿಯರ ರಾಜಧರ್ಮವು ಇಲ್ಲವಾದರೆ ಸರ್ವ ಆಶ್ರಮ ಧರ್ಮಗಳೂ ನಾಶಗೊಂಡಂತೆಯೇ.

12063029a ಸರ್ವೇ ತ್ಯಾಗಾ ರಾಜಧರ್ಮೇಷು ದೃಷ್ಟಾಃ

ಸರ್ವಾ ದೀಕ್ಷಾ ರಾಜಧರ್ಮೇಷು ಚೋಕ್ತಾಃ|

12063029c ಸರ್ವೇ ಯೋಗಾ ರಾಜಧರ್ಮೇಷು ಚೋಕ್ತಾಃ

ಸರ್ವೇ ಲೋಕಾ ರಾಜಧರ್ಮಾನ್ಪ್ರವಿಷ್ಟಾಃ||

ಸರ್ವ ತ್ಯಾಗಗಳೂ ರಾಜಧರ್ಮದಲ್ಲಿ ಕಾಣುತ್ತವೆ. ಸರ್ವ ದೀಕ್ಷೆಗಳು ರಾಜಧರ್ಮದಲ್ಲಿದೆ ಎಂದು ಹೇಳಿದೆ. ಸರ್ವ ಯೋಗಗಳೂ ರಾಜಧರ್ಮದಲ್ಲಿವೆಯೆಂದು ಹೇಳಿದೆ. ಸರ್ವ ಲೋಕಗಳೂ ರಾಜಧರ್ಮದಲ್ಲಿ ಸೇರಿಕೊಂಡಿವೆ.

12063030a ಯಥಾ ಜೀವಾಃ ಪ್ರಕೃತೌ ವಧ್ಯಮಾನಾ

ಧರ್ಮಾಶ್ರಿತಾನಾಮುಪಪೀಡನಾಯ|

12063030c ಏವಂ ಧರ್ಮಾ ರಾಜಧರ್ಮೈರ್ವಿಯುಕ್ತಾಃ

ಸರ್ವಾವಸ್ಥಂ ನಾದ್ರಿಯಂತೇ ಸ್ವಧರ್ಮಮ್||

ಪ್ರಕೃತಿಯಲ್ಲಿ ಜೀವಿಗಳು ವಧಿಸಲ್ಪಡುವಾಗ ಧರ್ಮಾಶ್ರಿತರು ಹೇಗೆ ಪೀಡೆಗೊಳಗಾಗುತ್ತಾರೋ ಹಾಗೆ ರಾಜಧರ್ಮವಿಲ್ಲದ ಸರ್ವಾವಸ್ಥೆಯ ಸರ್ವ ಸ್ವಧರ್ಮಗಳೂ ಪೀಡೆಗೊಳಗಾಗುತ್ತವೆ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವರ್ಣಾಶ್ರಮಧರ್ಮಕಥನೇ ತ್ರಿಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವರ್ಣಾಶ್ರಮಧರ್ಮಕಥನ ಎನ್ನುವ ಅರವತ್ಮೂರನೇ ಅಧ್ಯಾಯವು.

Comments are closed.