ಶಾಂತಿ ಪರ್ವ: ರಾಜಧರ್ಮ ಪರ್ವ

೬೦

ಸರ್ವವರ್ಣಧರ್ಮ ಮತ್ತು ಚಾತುರ್ವಣ್ಯಧರ್ಮ

12060001 ವೈಶಂಪಾಯನ ಉವಾಚ

12060001a ತತಃ ಪುನಃ ಸ ಗಾಂಗೇಯಮಭಿವಾದ್ಯ ಪಿತಾಮಹಮ್|

12060001c ಪ್ರಾಂಜಲಿರ್ನಿಯತೋ ಭೂತ್ವಾ ಪರ್ಯಪೃಚ್ಚದ್ಯುಧಿಷ್ಠಿರಃ||

ವೈಶಂಪಾಯನನು ಹೇಳಿದನು: “ಅನಂತರ ಯುಧಿಷ್ಠಿರನು ಪಿತಾಮಹ ಗಾಂಗೇಯನಿಗೆ ಕೈಮುಗಿದು ತಲೆಬಾಗಿ ನಮಸ್ಕರಿಸಿ ಪುನಃ ಪ್ರಶ್ನಿಸಿದನು:

12060002a ಕೇ ಧರ್ಮಾಃ ಸರ್ವವರ್ಣಾನಾಂ ಚಾತುರ್ವರ್ಣ್ಯಸ್ಯ ಕೇ ಪೃಥಕ್|

12060002c ಚತುರ್ಣಾಮಾಶ್ರಮಾಣಾಂ ಚ ರಾಜಧರ್ಮಾಶ್ಚ ಕೇ ಮತಾಃ||

“ಸರ್ವವರ್ಣದವರಿಗೂ ಇರುವ ಧರ್ಮವ್ಯಾವುದು? ಚಾತುರ್ವರ್ಣ್ಯದ ಪ್ರತಿಯೊಂದು ವರ್ಣದವರಿಗೂ ಇರುವ ಧರ್ಮವ್ಯಾವುದು? ಈ ನಾಲ್ಕೂ ವರ್ಣದವರಲ್ಲಿ ನಾಲ್ಕು ಆಶ್ರಮಗಳ ಧರ್ಮಗಳ್ಯಾವುವು? ರಾಜಧರ್ಮಗಳು ಯಾವುವು?

12060003a ಕೇನ ಸ್ವಿದ್ವರ್ಧತೇ ರಾಷ್ಟ್ರಂ ರಾಜಾ ಕೇನ ವಿವರ್ಧತೇ|

12060003c ಕೇನ ಪೌರಾಶ್ಚ ಭೃತ್ಯಾಶ್ಚ ವರ್ಧಂತೇ ಭರತರ್ಷಭ||

ಭರತರ್ಷಭ! ಯಾವುದರಿಂದ ರಾಷ್ಟ್ರವು ವೃದ್ಧಿಯಾಗುತ್ತದೆ? ಯಾವುದರಿಂದ ರಾಜನು ಅಭಿವೃದ್ಧಿಗೊಳ್ಳುತ್ತಾನೆ? ಯಾವುದರಿಂದ ಪೌರರೂ ಸೇವಕರೂ ಅಭಿವೃದ್ಧಿಹೊಂದುತ್ತಾರೆ?

12060004a ಕೋಶಂ ದಂಡಂ ಚ ದುರ್ಗಂ ಚ ಸಹಾಯಾನ್ಮಂತ್ರಿಣಸ್ತಥಾ|

12060004c ಋತ್ವಿಕ್ಪುರೋಹಿತಾಚಾರ್ಯಾನ್ಕೀದೃಶಾನ್ವರ್ಜಯೇನ್ನೃಪಃ||

ರಾಜನಾದವನು ಯಾವ ರೀತಿಯ ಕೋಶಾಧಿಕಾರಿಗಳನ್ನೂ, ದಂಡಾಧಿಕಾರಿಗಳನ್ನೂ, ರಕ್ಷಣಾಧಿಕಾರಿಗಳನ್ನೂ, ಸಹಾಯಕರನ್ನೂ, ಮಂತ್ರಿಗಳನ್ನೂ, ಋತ್ವಿಕರನ್ನೂ, ಪುರೋಹಿತರನ್ನೂ, ಆಚಾರ್ಯರನ್ನೂ ವರ್ಜಿಸಬೇಕು?

12060005a ಕೇಷು ವಿಶ್ವಸಿತವ್ಯಂ ಸ್ಯಾದ್ರಾಜ್ಞಾಂ ಕಸ್ಯಾಂ ಚಿದಾಪದಿ|

12060005c ಕುತೋ ವಾತ್ಮಾ ದೃಢೋ ರಕ್ಷ್ಯಸ್ತನ್ಮೇ ಬ್ರೂಹಿ ಪಿತಾಮಹ||

ಏನಾದರೂ ಆಪತ್ತು ಬಂದೊದಗಿದರೆ ರಾಜನಾದವನು ಯಾರ ಮೇಲೆ ವಿಶ್ವಾಸವನ್ನಿಡಬೇಕು? ಯಾರಿಂದ ತನ್ನ ದೃಢ ರಕ್ಷಣೆಯನ್ನು ಮಾಡಿಕೊಳ್ಳಬೇಕು? ಅದನ್ನು ನನಗೆ ಹೇಳು ಪಿತಾಮಹ!”

12060006 ಭೀಷ್ಮ ಉವಾಚ

12060006a ನಮೋ ಧರ್ಮಾಯ ಮಹತೇ ನಮಃ ಕೃಷ್ಣಾಯ ವೇಧಸೇ|

12060006c ಬ್ರಾಹ್ಮಣೇಭ್ಯೋ ನಮಸ್ಕೃತ್ವಾ ಧರ್ಮಾನ್ವಕ್ಷ್ಯಾಮಿ ಶಾಶ್ವತಾನ್||

ಭೀಷ್ಮನು ಹೇಳಿದನು: “ಮಹಾತ್ಮ ಧರ್ಮನಿಗೆ ನಮಸ್ಕಾರ! ವಿಶ್ವದ ಸೃಷ್ಟಿಗೆ ಕಾರಣನಾದ ಕೃಷ್ಣನಿಗೆ ನಮಸ್ಕಾರ! ಬ್ರಾಹ್ಮಣರಿಗೆ ನಮಸ್ಕರಿಸಿ ಶಾಶ್ವತ ಧರ್ಮಗಳ ಕುರಿತು ಹೇಳುತ್ತೇನೆ.

12060007a ಅಕ್ರೋಧಃ ಸತ್ಯವಚನಂ ಸಂವಿಭಾಗಃ ಕ್ಷಮಾ ತಥಾ|

12060007c ಪ್ರಜನಃ ಸ್ವೇಷು ದಾರೇಷು ಶೌಚಮದ್ರೋಹ ಏವ ಚ||

12060008a ಆರ್ಜವಂ ಭೃತ್ಯಭರಣಂ ನವೈತೇ ಸಾರ್ವವರ್ಣಿಕಾಃ|

12060008c ಬ್ರಾಹ್ಮಣಸ್ಯ ತು ಯೋ ಧರ್ಮಸ್ತಂ ತೇ ವಕ್ಷ್ಯಾಮಿ ಕೇವಲಮ್||

ಕ್ರೋಧಿತನಾಗದಿರುವುದು, ಸತ್ಯವಚನ, ಎಲ್ಲವನ್ನೂ ಹಂಚಿಕೊಳ್ಳುವುದು, ಕ್ಷಮೆ, ತನ್ನದೇ ಪತ್ನಿಯಲ್ಲಿ ಮಕ್ಕಳನ್ನು ಪಡೆಯುವುದು, ಶುಚಿಯಾಗಿರುವುದು, ದ್ರೋಹವೆಸಗದಿರುವುದು, ಸರಳತೆ, ತನ್ನನ್ನೇ ಅವಲಂಬಿಸಿರುವವರ ಪಾಲನ-ಪೋಷಣೆ ಮಾಡುವುದು – ಇವುಗಳೇ ಸರ್ವವರ್ಣದವರಿಗೂ ಇರುವ ಧರ್ಮ. ಇನ್ನು ನಾನು ಕೇವಲ ಬ್ರಾಹ್ಮಣ ವರ್ಣಕ್ಕೆ ಸಂಬಂಧಿಸಿದ ಧರ್ಮದ ಕುರಿತು ಹೇಳುತ್ತೇನೆ.

12060009a ದಮಮೇವ ಮಹಾರಾಜ ಧರ್ಮಮಾಹುಃ ಪುರಾತನಮ್|

12060009c ಸ್ವಾಧ್ಯಾಯೋಽಧ್ಯಾಪನಂ ಚೈವ ತತ್ರ ಕರ್ಮ ಸಮಾಪ್ಯತೇ||

ಮಹಾರಾಜ! ಇಂದ್ರಿಯ ನಿಗ್ರಹವೇ ಬ್ರಾಹ್ಮಣರ ಪುರಾತನ ಧರ್ಮವೆಂದು ಹೇಳುತ್ತಾರೆ. ಸ್ವಯಂ ತಾನೇ ಅಧ್ಯಯನ ಮಾಡುವುದು ಮತ್ತು ಇತರರಿಗೆ ಅಧ್ಯಾಪನ ಮಾಡುವುದು ಇವುಗಳಿಂದ ಅವನ ಕರ್ಮಗಳೆಲ್ಲ ಪೂರೈಸಿದಂತಾಗುತ್ತದೆ.

12060010a ತಂ ಚೇದ್ವಿತ್ತಮುಪಾಗಚ್ಚೇದ್ವರ್ತಮಾನಂ ಸ್ವಕರ್ಮಣಿ|

12060010c ಅಕುರ್ವಾಣಂ ವಿಕರ್ಮಾಣಿ ಶಾಂತಂ ಪ್ರಜ್ಞಾನತರ್ಪಿತಮ್||

12060011a ಕುರ್ವೀತಾಪತ್ಯಸಂತಾನಮಥೋ ದದ್ಯಾದ್ಯಜೇತ ಚ|

12060011c ಸಂವಿಭಜ್ಯ ಹಿ ಭೋಕ್ತವ್ಯಂ ಧನಂ ಸದ್ಭಿರಿತೀಷ್ಯತೇ||

ಸ್ವ-ವರ್ಣೋಕ್ತವಾದ ಸ್ವಾಧ್ಯಾಯ-ಅಧ್ಯಾಪನಗಳಲ್ಲಿಯೇ ನಿರತನಾಗಿರುವ, ಮಾಡದಿರುವಂಥಹ ಕರ್ಮಗಳನ್ನು ಮಾಡದೇ ಶಾಂತನಾಗಿ, ಪ್ರಜ್ಞಾನ ಮತ್ತು ತೃಪ್ತಿಯಿಂದಿದ್ದ ಬ್ರಾಹ್ಮಣನು ಒಂದು ವೇಳೆ ಸಂಪತ್ತನ್ನೇನಾದರೂ ಪಡೆದುಕೊಂಡರೆ ಅವನು ಮದುವೆಮಾಡಿಕೊಂಡು ಸಂತಾನವನ್ನು ಪಡೆಯಬೇಕು. ದಾನಮಾಡಬೇಕು. ಯಜ್ಞಮಾಡಬೇಕು. ತಾನಾಗಿಯೇ ಬಂದ ಸಂಪತ್ತನ್ನು ಬಂಧು-ಬಾಂಧವರಲ್ಲಿ ಹಂಚಿಕೊಂಡು ಭೋಗಿಸಬೇಕು. ಇದು ಬ್ರಾಹ್ಮಣರ ಧರ್ಮವೆಂದು ಸತ್ಪುರುಷರು ಹೇಳುತ್ತಾರೆ.

12060012a ಪರಿನಿಷ್ಠಿತಕಾರ್ಯಸ್ತು ಸ್ವಾಧ್ಯಾಯೇನೈವ ಬ್ರಾಹ್ಮಣಃ|

12060012c ಕುರ್ಯಾದನ್ಯನ್ನ ವಾ ಕುರ್ಯಾನ್ಮೈತ್ರೋ ಬ್ರಾಹ್ಮಣ ಉಚ್ಯತೇ||

ಅವನು ಬೇರೆ ಕರ್ಮಗಳನ್ನು ಮಾಡಲಿ ಅಥವಾ ಮಾಡದಿರಲಿ – ಬ್ರಾಹ್ಮಣನು ಸ್ವಾಧ್ಯಾಯದಿಂದಲೇ ಕೃತಕೃತ್ಯತೆಯನ್ನು ಹೊಂದುತ್ತಾನೆ. ಎಲ್ಲರೊಡನೆಯೂ ಮೈತ್ರಿಯಿಂದ ಇರುವುದರಿಂದ ಬ್ರಾಹ್ಮಣನನ್ನು “ಮೈತ್ರ” ಎಂದೂ ಕರೆಯುತ್ತಾರೆ.

12060013a ಕ್ಷತ್ರಿಯಸ್ಯಾಪಿ ಯೋ ಧರ್ಮಸ್ತಂ ತೇ ವಕ್ಷ್ಯಾಮಿ ಭಾರತ|

12060013c ದದ್ಯಾದ್ರಾಜಾ ನ ಯಾಚೇತ ಯಜೇತ ನ ತು ಯಾಜಯೇತ್||

ಭಾರತ! ಈಗ ನಿನಗೆ ಕ್ಷತ್ರಿಯನ ಧರ್ಮವನ್ನು ಹೇಳುತ್ತೇನೆ. ರಾಜನಾದವನು ದಾನನೀಡಬೇಕೇ ಹೊರತು ದಾನವನ್ನು ಕೇಳಬಾರದು. ಯಾಗಮಾಡಬೇಕೇ ಹೊರತು ಯಾಗಮಾಡಿಸಬಾರದು.

12060014a ನಾಧ್ಯಾಪಯೇದಧೀಯೀತ ಪ್ರಜಾಶ್ಚ ಪರಿಪಾಲಯೇತ್|

12060014c ನಿತ್ಯೋದ್ಯುಕ್ತೋ ದಸ್ಯುವಧೇ ರಣೇ ಕುರ್ಯಾತ್ಪರಾಕ್ರಮಮ್||

ಅಧ್ಯಯನ ಮಾಡಬೇಕೇ ಹೊರತು ಇತರರಿಗೆ ಹೇಳಿಕೊಡಬಾರದು. ಪ್ರಜೆಗಳನ್ನು ಪರಿಪಾಲಿಸಬೇಕು. ಪ್ರಜೆಗಳನ್ನು ಪೀಡಿಸುವವರ ವಧೆಯಲ್ಲಿಯೇ ನಿತ್ಯವೂ ನಿರತನಾಗಿರಬೇಕು. ರಣದಲ್ಲಿ ಪರಾಕ್ರಮದಿಂದ ಯುದ್ಧಮಾಡಬೇಕು.

12060015a ಯೇ ಚ ಕ್ರತುಭಿರೀಜಾನಾಃ ಶ್ರುತವಂತಶ್ಚ ಭೂಮಿಪಾಃ|

12060015c ಯ ಏವಾಹವಜೇತಾರಸ್ತ ಏಷಾಂ ಲೋಕಜಿತ್ತಮಾಃ||

ಕ್ರತುಗಳನ್ನು ಮಾಡಿರುವ, ವೇದ-ಶಾಸ್ತ್ರಗಳನ್ನು ತಿಳಿದುಕೊಂಡಿರುವ ಭೂಮಿಪರನ್ನು ಯುದ್ಧದಲ್ಲಿ ಸೋಲಿಸುವ ಕ್ಷತ್ರಿಯನೇ ಪುಣ್ಯಲೋಕಗಳನ್ನು ಜಯಿಸುತ್ತಾನೆ.

12060016a ಅವಿಕ್ಷತೇನ ದೇಹೇನ ಸಮರಾದ್ಯೋ ನಿವರ್ತತೇ|

12060016c ಕ್ಷತ್ರಿಯೋ ನಾಸ್ಯ ತತ್ಕರ್ಮ ಪ್ರಶಂಸಂತಿ ಪುರಾವಿದಃ||

ಶರೀರದಲ್ಲಿ ಯಾವ ಗಾಯವೂ ಆಗದೇ ಸಮರದಿಂದ ಹಿಂದಿರುಗಿದ ಕ್ಷತ್ರಿಯನ ಆ ಕರ್ಮವನ್ನು ವಿಧ್ವಾಂಸರು ಪ್ರಶಂಸಿಸುವುದಿಲ್ಲ.

12060017a ವಧಂ ಹಿ ಕ್ಷತ್ರಬಂಧೂನಾಂ ಧರ್ಮಮಾಹುಃ ಪ್ರಧಾನತಃ|

12060017c ನಾಸ್ಯ ಕೃತ್ಯತಮಂ ಕಿಂ ಚಿದನ್ಯದ್ದಸ್ಯುನಿಬರ್ಹಣಾತ್||

ವಧಿಸುವುದೇ ಕ್ಷತ್ರಬಂಧುಗಳ ಪ್ರಧಾನ ಧರ್ಮವೆಂದು ಹೇಳುತ್ತಾರೆ. ದಸ್ಯುಗಳನ್ನು ನಿಯಂತ್ರಿಸುವುದಕ್ಕಿಂತ ಹೆಚ್ಚಿನ ಕರ್ತವ್ಯವು ಅವರಿಗಿಲ್ಲ.

12060018a ದಾನಮಧ್ಯಯನಂ ಯಜ್ಞೋ ಯೋಗಃ ಕ್ಷೇಮೋ ವಿಧೀಯತೇ|

12060018c ತಸ್ಮಾದ್ರಾಜ್ಞಾ ವಿಶೇಷೇಣ ಯೋದ್ಧವ್ಯಂ ಧರ್ಮಮೀಪ್ಸತಾ||

ದಾನ, ಅಧ್ಯಯನ, ಯಜ್ಞ, ಯೋಗ ಇವು ಕ್ಷತ್ರಿಯರಿಗೆ ಒಳ್ಳೆಯದೆಂದು ವಿಧಿತವಾಗಿವೆ. ಆದರೆ ಧರ್ಮದಿಂದಿರುವ ರಾಜನು ವಿಶೇಷವಾಗಿ ಯುದ್ಧಶೀಲನಾಗಿರಬೇಕು.

12060019a ಸ್ವೇಷು ಧರ್ಮೇಷ್ವವಸ್ಥಾಪ್ಯ ಪ್ರಜಾಃ ಸರ್ವಾ ಮಹೀಪತಿಃ|

12060019c ಧರ್ಮೇಣ ಸರ್ವಕೃತ್ಯಾನಿ ಸಮನಿಷ್ಠಾನಿ ಕಾರಯೇತ್||

ಮಹೀಪತಿಯು ಪ್ರಜೆಗಳೆಲ್ಲರನ್ನೂ ಅವರವರ ಧರ್ಮದಲ್ಲಿ ನೆಲೆಸಿರುವಂತೆ ಮಾಡಿ ಶಾಂತಿಗಾಗಿ ಸರ್ವಕೃತ್ಯಗಳನ್ನೂ ಧರ್ಮಾನುಸಾರವಾಗಿಯೇ ಮಾಡುತ್ತಿರಬೇಕು.

12060020a ಪರಿನಿಷ್ಠಿತಕಾರ್ಯಃ ಸ್ಯಾನ್ನೃಪತಿಃ ಪರಿಪಾಲನಾತ್|

12060020c ಕುರ್ಯಾದನ್ಯನ್ನ ವಾ ಕುರ್ಯಾದೈಂದ್ರೋ ರಾಜನ್ಯ ಉಚ್ಯತೇ||

ಬೇರೆ ಏನನ್ನು ಮಾಡಲಿ ಅಥವಾ ಮಾಡದಿರಲಿ, ನೃಪತಿಯು ಪ್ರಜಾಪಾಲನೆಯಿಂದಲೇ ನೃಪತಿಯು ಕೃತಕೃತ್ಯನಾಗುತ್ತಾನೆ. ಇಂದ್ರನಂತೆ ಬಲವೇ ಪ್ರಧಾನವಾಗಿರುವುದರಿಂದ ರಾಜನನ್ನು “ಐಂದ್ರ” ಎಂದೂ ಕರೆಯುತ್ತಾರೆ.

12060021a ವೈಶ್ಯಸ್ಯಾಪೀಹ ಯೋ ಧರ್ಮಸ್ತಂ ತೇ ವಕ್ಷ್ಯಾಮಿ ಭಾರತ|

12060021c ದಾನಮಧ್ಯಯನಂ ಯಜ್ಞಃ ಶೌಚೇನ ಧನಸಂಚಯಃ||

ಭಾರತ! ಈಗ ನಾನು ನಿನಗೆ ವೈಶ್ಯನ ಧರ್ಮವನ್ನು ಹೇಳುತ್ತೇನೆ. ದಾನ, ಅಧ್ಯಯನ, ಯಜ್ಞ, ಶೌಚ ಮತ್ತು ಧನಸಂಚಯ ಇವು ವೈಶ್ಯನ ಧರ್ಮಗಳು.

12060022a ಪಿತೃವತ್ಪಾಲಯೇದ್ವೈಶ್ಯೋ ಯುಕ್ತಃ ಸರ್ವಪಶೂನಿಹ|

12060022c ವಿಕರ್ಮ ತದ್ಭವೇದನ್ಯತ್ಕರ್ಮ ಯದ್ಯತ್ಸಮಾಚರೇತ್||

12060022e ರಕ್ಷಯಾ ಸ ಹಿ ತೇಷಾಂ ವೈ ಮಹತ್ಸುಖಮವಾಪ್ನುಯಾತ್|

ವೈಶ್ಯನು ತಂದೆಯಂತೆ ಸರ್ವಪಶುಗಳನ್ನೂ ಪಾಲಿಸಬೇಕು. ಪಶುಪಾಲನೆಯನ್ನು ಬಿಟ್ಟು ಬೇರೆ ಯಾವ ಕೆಲಸಗಳನ್ನು ಮಾಡಿದರೂ ವೈಶ್ಯನಿಗೆ ಅದು ವಿಕರ್ಮವೇ ಆಗುತ್ತದೆ.

12060023a ಪ್ರಜಾಪತಿರ್ಹಿ ವೈಶ್ಯಾಯ ಸೃಷ್ಟ್ವಾ ಪರಿದದೇ ಪಶೂನ್||

12060023c ಬ್ರಾಹ್ಮಣಾಯ ಚ ರಾಜ್ಞೇ ಚ ಸರ್ವಾಃ ಪರಿದದೇ ಪ್ರಜಾಃ|

ಪ್ರಜಾಪತಿಯು ವೈಶ್ಯನಿಗೆಂದೇ ಪಶುಗಳನ್ನು ಸೃಷ್ಟಿಸಿದನು. ಬ್ರಾಹ್ಮಣರಿಗೆ ಮತ್ತು ರಾಜರಿಗೆ ಎಲ್ಲ ಪ್ರಜೆಗಳ ಪಾಲನೆಯ ಜವಾಬ್ಧಾರಿಯನ್ನೂ ಕೊಟ್ಟಿದ್ದಾನೆ.

12060024a ತಸ್ಯ ವೃತ್ತಿಂ ಪ್ರವಕ್ಷ್ಯಾಮಿ ಯಚ್ಚ ತಸ್ಯೋಪಜೀವನಮ್||

12060024c ಷಣ್ಣಾಮೇಕಾಂ ಪಿಬೇದ್ಧೇನುಂ ಶತಾಚ್ಚ ಮಿಥುನಂ ಹರೇತ್|

ವೈಶ್ಯನಾಗಿ ಉಪಜೀವನಮಾಡುವವನ ವೃತ್ತಿಯ ಕುರಿತು ಹೇಳುತ್ತೇನೆ. ಅವನು ಆರು ಹಸುಗಳನ್ನು ಸಾಕುತ್ತಿದ್ದರೆ ಅವುಗಳಲ್ಲಿ ಒಂದು ಹಸುವಿನ ಹಾಲನ್ನು ಮಾತ್ರ ತಾನು ಸೇವಿಸಬೇಕು. ನೂರು ಹಸುಗಳನ್ನು ಸಾಕುತ್ತಿದ್ದರೆ, ಅವುಗಳಲ್ಲಿ ಒಂದು ಜೋಡಿಯ ಹಾಲನ್ನು ಮಾತ್ರ ಸೇವಿಸಬೇಕು.

12060025a ಲಯೇ ಚ ಸಪ್ತಮೋ ಭಾಗಸ್ತಥಾ ಶೃಂಗೇ ಕಲಾ ಖುರೇ||

12060025c ಸಸ್ಯಸ್ಯ ಸರ್ವಬೀಜಾನಾಮೇಷಾ ಸಾಂವತ್ಸರೀ ಭೃತಿಃ|

ತೀರಿಕೊಂಡ ಹಸುಗಳ ಕೊಂಬುಗಳ ಮಾರಾಟದಿಂದ ಬರುವ ಮೌಲ್ಯದ ಏಳನೆಯ ಒಂದು ಭಾಗವನ್ನು ಮತ್ತು ಗೊರಸುಗಳ ಮಾರಾಟದಿಂದ ಬರುವ ಮೌಲ್ಯದ ಹದಿನಾರನೇ ಒಂದು ಭಾಗವನ್ನು ತನಗಾಗಿ ಇಟ್ಟುಕೊಳ್ಳಬಹುದು. ವೈಶ್ಯನು ಬೆಳೆದ ಆಹಾರಧಾನ್ಯಗಳಲ್ಲಿ ಹದಿನಾರನೇ ಒಂದು ಭಾಗವನ್ನು ಮಾತ್ರ ತನ್ನ ವಾರ್ಷಿಕ ಭತ್ಯವನ್ನಾಗಿ ಇಟ್ಟುಕೊಳ್ಳಬೇಕು.

12060026a ನ ಚ ವೈಶ್ಯಸ್ಯ ಕಾಮಃ ಸ್ಯಾನ್ನ ರಕ್ಷೇಯಂ ಪಶೂನಿತಿ||

12060026c ವೈಶ್ಯೇ ಚೇಚ್ಚತಿ ನಾನ್ಯೇನ ರಕ್ಷಿತವ್ಯಾಃ ಕಥಂ ಚನ|

ಪಶುಗಳನ್ನು ನಾನು ರಕ್ಷಿಸುವುದಿಲ್ಲ ಎಂದು ವೈಶ್ಯನು ಎಂದೂ ಆಶಿಸಬಾರದು. ತಾನು ರಕ್ಷಿಸಲು ಸಾಧ್ಯವಾಗುವ ವರೆಗೆ ಇನ್ನೊಬ್ಬರಿಗೆ ಅವುಗಳ ರಕ್ಷಣೆಯ ಜವಾಬ್ಧಾರಿಯನ್ನು ಕೊಡಬಾರದು.

12060027a ಶೂದ್ರಸ್ಯಾಪಿ ಹಿ ಯೋ ಧರ್ಮಸ್ತಂ ತೇ ವಕ್ಷ್ಯಾಮಿ ಭಾರತ||

12060027c ಪ್ರಜಾಪತಿರ್ಹಿ ವರ್ಣಾನಾಂ ದಾಸಂ ಶೂದ್ರಮಕಲ್ಪಯತ್|

ಭಾರತ! ಈಗ ನಾನು ನಿನಗೆ ಶೂದ್ರನ ಧರ್ಮವನ್ನು ಹೇಳುತ್ತೇನೆ. ಪ್ರಜಾಪತಿಯು ಶೂದ್ರನನ್ನು ಇತರ ವರ್ಣಗಳ ದಾಸನನ್ನಾಗಿಯೇ ಸೃಷ್ಟಿಸಿದನು.

12060028a ತಸ್ಮಾಚ್ಚೂದ್ರಸ್ಯ ವರ್ಣಾನಾಂ ಪರಿಚರ್ಯಾ ವಿಧೀಯತೇ||

12060028c ತೇಷಾಂ ಶುಶ್ರೂಷಣಾಚ್ಚೈವ ಮಹತ್ಸುಖಮವಾಪ್ನುಯಾತ್|

ಆದುದರಿಂದ ಶೂದ್ರನಿಗೆ ಇತರ ವರ್ಣದವರ ಪರಿಚರ್ಯೆಯನ್ನೇ ವಿಧಿಸಲಾಗಿದೆ. ಅವರ ಶುಶ್ರೂಷೆಯಿಂದಲೇ ಶೂದ್ರನು ಮಹಾ ಸುಖವನ್ನು ಹೊಂದುತ್ತಾನೆ.

12060029a ಶೂದ್ರ ಏತಾನ್ಪರಿಚರೇತ್ತ್ರೀನ್ವರ್ಣಾನನಸೂಯಕಃ||

12060029c ಸಂಚಯಾಂಶ್ಚ ನ ಕುರ್ವೀತ ಜಾತು ಶೂದ್ರಃ ಕಥಂ ಚನ|

ಶೂದ್ರನು ಈ ಮೂರು ವರ್ಣದವರನ್ನು ಅಸೂಯೆ ಪಡೆಯದೇ ಪರಿಚರಿಸಬೇಕು. ಶೂದ್ರನು ಎಂದೂ ಧನಸಂಚಯವನ್ನು ಮಾಡಬಾರದು.

12060030a ಪಾಪೀಯಾನ್ಹಿ ಧನಂ ಲಬ್ಧ್ವಾ ವಶೇ ಕುರ್ಯಾದ್ಗರೀಯಸಃ||

12060030c ರಾಜ್ಞಾ ವಾ ಸಮನುಜ್ಞಾತಃ ಕಾಮಂ ಕುರ್ವೀತ ಧಾರ್ಮಿಕಃ|

ಧನವನ್ನು ಪಡೆದು ಪಾಪಿಯಾಗಿ ಅವನು ತನಗಿಂಥಲೂ ಶ್ರೇಷ್ಠರಾದವರನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಬಹುದು. ರಾಜನ ಅನುಜ್ಞೆಯನ್ನು ಪಡೆದು ಶೂದ್ರನು ಧನವನ್ನು ಸಂಗ್ರಹಿಸಿ ಧರ್ಮಕಾರ್ಯಗಳನ್ನು ಮಾಡಬಹುದು.

12060031a ತಸ್ಯ ವೃತ್ತಿಂ ಪ್ರವಕ್ಷ್ಯಾಮಿ ಯಚ್ಚ ತಸ್ಯೋಪಜೀವನಮ್||

12060031c ಅವಶ್ಯಭರಣೀಯೋ ಹಿ ವರ್ಣಾನಾಂ ಶೂದ್ರ ಉಚ್ಯತೇ|

ಶೂದ್ರನ ವೃತ್ತಿ ಮತ್ತು ಉಪಜೀವನದ ಕುರಿತು ಹೇಳುತ್ತೇನೆ. ಉಳಿದ ಮೂರು ವರ್ಣದವರೂ ಶೂದ್ರನ ಭರಣ-ಪೋಷಣೆಯನ್ನು ಅವಶ್ಯವಾಗಿ ಮಾಡಬೇಕೆಂದು ಹೇಳಲ್ಪಟ್ಟಿದೆ.

12060032a ಚತ್ರಂ ವೇಷ್ಟನಮೌಶೀರಮುಪಾನದ್ವ್ಯಜನಾನಿ ಚ||

12060032c ಯಾತಯಾಮಾನಿ ದೇಯಾನಿ ಶೂದ್ರಾಯ ಪರಿಚಾರಿಣೇ|

ಪರಿಚರ್ಯೆಯನ್ನು ಮಾಡುವ ಶೂದ್ರನಿಗೆ ಉಪಯೋಗಿಸಿದ ಛತ್ರಿಯನ್ನೂ, ವೇಷ್ಟಿಯನ್ನೂ, ಶಯನಾಸನಗಳನ್ನೂ, ಪಾದರಕ್ಷೆಗಳನ್ನೂ, ಮತ್ತು ಬೀಸಣಿಗೆಗಳನ್ನೂ ಕೊಡಬೇಕು.

12060033a ಅಧಾರ್ಯಾಣಿ ವಿಶೀರ್ಣಾನಿ ವಸನಾನಿ ದ್ವಿಜಾತಿಭಿಃ||

12060033c ಶೂದ್ರಾಯೈವ ವಿಧೇಯಾನಿ ತಸ್ಯ ಧರ್ಮಧನಂ ಹಿ ತತ್|

ದ್ವಿಜಾತಿಯರು ಧರಿಸದ ಹಳೆಯ ಬಟ್ಟೆಗಳನ್ನು ಶೂದ್ರನಿಗೇ ಕೊಡಬೇಕು. ಏಕೆಂದರೆ ಇವು ಅವನ ಧರ್ಮಧನವೇ ಆಗಿರುತ್ತವೆ.

12060034a ಯಶ್ಚ ಕಶ್ಚಿದ್ದ್ವಿಜಾತೀನಾಂ ಶೂದ್ರಃ ಶುಶ್ರೂಷುರಾವ್ರಜೇತ್||

12060034c ಕಲ್ಪ್ಯಾಂ ತಸ್ಯ ತು ತೇನಾಹುರ್ವೃತ್ತಿಂ ಧರ್ಮವಿದೋ ಜನಾಃ|

ಶುಶ್ರೂಷೆಗೆಂದು ಯಾವುದೇ ಶೂದ್ರನು ಬಂದರೂ ದ್ವಿಜಾತಿಯವರು ಅವನಿಗೆ ವೃತ್ತಿಯನ್ನು ಕಲ್ಪಿಸಿಕೊಟ್ಟು ಜೀವನ ವ್ಯವಸ್ಥೆಯನ್ನು ಮಾಡಲೇ ಬೇಕೆಂದು ಧರ್ಮವಿದರು ಹೇಳುತ್ತಾರೆ.

12060034e ದೇಯಃ ಪಿಂಡೋಽನಪೇತಾಯ ಭರ್ತವ್ಯೌ ವೃದ್ಧದುರ್ಬಲೌ||

12060035a ಶೂದ್ರೇಣ ಚ ನ ಹಾತವ್ಯೋ ಭರ್ತಾ ಕಸ್ಯಾಂ ಚಿದಾಪದಿ|

ಮಕ್ಕಳಿಲ್ಲದ ದ್ವಿಜಾತಿಯವನಿಗೆ ಶುಶ್ರೂಷೆಮಾಡುವ ಶೂದ್ರನೇ ಪಿಂಡಪ್ರದಾನ ಮಾಡಬೇಕು. ವೃದ್ಧರೂ ದುರ್ಬಲರೂ ಆದ ದ್ವಿಜಾತಿಯವರನ್ನು ಶೂದ್ರನೇ ಭರಣ-ಪೋಷಣೆಗಳನ್ನು ಮಾಡಬೇಕು. ಆಪತ್ತುಗಳಲ್ಲಿ ದ್ವಿಜಾತಿಯವರನ್ನು ಶೂದ್ರನೇ ನೋಡಿಕೊಳ್ಳಬೇಕು.

12060035c ಅತಿರೇಕೇಣ ಭರ್ತವ್ಯೋ ಭರ್ತಾ ದ್ರವ್ಯಪರಿಕ್ಷಯೇ||

12060035e ನ ಹಿ ಸ್ವಮಸ್ತಿ ಶೂದ್ರಸ್ಯ ಭರ್ತೃಹಾರ್ಯಧನೋ ಹ್ಯಸೌ|

ಒಂದುವೇಳೆ ಯಜಮಾನನ ಧನವು ನಷ್ಟವಾಗಿ ನಿರ್ಧನನಾದರೆ ಶೂದ್ರನು ದೂರೀಕರಿಸದೇ ಅವನ ಭರಣ-ಪೋಷಣೆಯನ್ನು ಮಾಡಬೇಕು.

12060036a ಉಕ್ತಸ್ತ್ರಯಾಣಾಂ ವರ್ಣಾನಾಂ ಯಜ್ಞಸ್ತ್ರಯ್ಯೈವ ಭಾರತ||

12060036c ಸ್ವಾಹಾಕಾರನಮಸ್ಕಾರೌ ಮಂತ್ರಃ ಶೂದ್ರೇ ವಿಧೀಯತೇ[1]|

ಭಾರತ! ಮೂರು ವರ್ಣದವರಿಗೆ ಹೇಳಿರುವ ಯಜ್ಞಗಳೂ ಶೂದ್ರನಿಗೆ ಹೇಳಲ್ಪಟ್ಟಿವೆ. ಆದರೆ ಶೂದ್ರರಿಗೆ ಸ್ವಾಹಾಕಾರ ಮತ್ತು ನಮಸ್ಕಾರಗಳೇ ಮಂತ್ರಗಳೆಂದು ವಿಹಿತವಾಗಿವೆ.

12060037a ತಾಭ್ಯಾಂ ಶೂದ್ರಃ ಪಾಕಯಜ್ಞೈರ್ಯಜೇತ ವ್ರತವಾನ್ಸ್ವಯಮ್||

12060037c ಪೂರ್ಣಪಾತ್ರಮಯೀಮಾಹುಃ ಪಾಕಯಜ್ಞಸ್ಯ ದಕ್ಷಿಣಾಮ್|

ಶೂದ್ರನು ಸ್ವಯಂ ವ್ರತನಿಷ್ಟನಾಗಿದ್ದುಕೊಂಡು ಸ್ವಾಹಾಕಾರ-ನಮಸ್ಕಾರಗಳಿಂದ ಪಾಕಯಜ್ಞದ ಮೂಲಕ ಯಾಜಿಸಬೇಕು. ಪಾಕಯಜ್ಞದ ದಕ್ಷಿಣೆಗೆ “ಪೂರ್ಣಪಾತ್ರಮಯೀ[2]” ಎಂದು ಹೇಳುತ್ತಾರೆ.

12060038a ಶೂದ್ರಃ ಪೈಜವನೋ ನಾಮ ಸಹಸ್ರಾಣಾಂ ಶತಂ ದದೌ||

12060038c ಐಂದ್ರಾಗ್ನೇನ ವಿಧಾನೇನ ದಕ್ಷಿಣಾಮಿತಿ ನಃ ಶ್ರುತಮ್|

“ಪೈಜವನ” ಎಂಬ ಹೆಸರಿನ ಶೂದ್ರನು ಐಂದ್ರಾಗ್ನಿಯ ವಿಧಾನದಿಂದ ಯಾಜಿಸಿ, ಒಂದು ಲಕ್ಷ ಪೂರ್ಣಪಾತ್ರೆಗಳನ್ನು ದಕ್ಷಿಣೆಯನ್ನಾಗಿತ್ತನು ಎಂದು ನಾವು ಕೇಳಿದ್ದೇವೆ.

12060039a ಅತೋ ಹಿ ಸರ್ವವರ್ಣಾನಾಂ ಶ್ರದ್ಧಾಯಜ್ಞೋ ವಿಧೀಯತೇ||

12060039c ದೈವತಂ ಹಿ ಮಹಚ್ಚ್ರದ್ಧಾ ಪವಿತ್ರಂ ಯಜತಾಂ ಚ ಯತ್|

ಹೀಗಿದ್ದರೂ ಸರ್ವವರ್ಣದವರಿಗೂ ಶ್ರದ್ಧಾಯಜ್ಞವೇ ವಿಹಿತವಾಗಿವೆ. ದೇವತೆಗಳಿಗೂ ಮಹತ್ತರವಾದ ಶ್ರದ್ಧೆಯೇ ಯಾಜಕನನ್ನು ಪವಿತ್ರಗೊಳಿಸುತ್ತದೆ.

12060040a ದೈವತಂ ಪರಮಂ ವಿಪ್ರಾಃ ಸ್ವೇನ ಸ್ವೇನ ಪರಸ್ಪರಮ್||

12060040c ಅಯಜನ್ನಿಹ ಸತ್ರೈಸ್ತೇ ತೈಸ್ತೈಃ ಕಾಮೈಃ ಸನಾತನೈಃ|

ವಿಪ್ರರು ಅನ್ಯೋನ್ಯವಾಗಿ ತಮ್ಮವರೊಂದಿಗೆ ಕೂಡಿಕೊಂಡು ಅವರವರ ಸನಾತನ ಕಾಮಗಳಿಂದ ಸತ್ರಗಳ ಮೂಲಕ ಪರಮ ದೈವತವನ್ನು ಯಜಿಸುತ್ತಾರೆ.

12060041a ಸಂಸೃಷ್ಟಾ ಬ್ರಾಹ್ಮಣೈರೇವ ತ್ರಿಷು ವರ್ಣೇಷು ಸೃಷ್ಟಯಃ||

12060041c ದೇವಾನಾಮಪಿ ಯೇ ದೇವಾ ಯದ್ಬ್ರೂಯುಸ್ತೇ ಪರಂ ಹಿ ತತ್|

12060041e ತಸ್ಮಾದ್ವರ್ಣೈಃ ಸರ್ವಯಜ್ಞಾಃ ಸಂಸೃಜ್ಯಂತೇ ನ ಕಾಮ್ಯಯಾ||

ಬ್ರಾಹ್ಮಣರಿಂದಲೇ ಉಳಿದ ಮೂರು ವರ್ಣಗಳು ಸೃಷ್ಟಿಸಲ್ಪಟ್ಟಿವೆ. ದೇವತೆಗಳಿಗೂ ದೇವರಂತಿರುವ ಅವರು ಏನನ್ನು ಹೇಳುತ್ತಾರೆಯೋ ಅದು ಎಲ್ಲ ವರ್ಣದವರಿಗೂ ಪರಮ ಹಿತವಾದುದಾಗಿರುತ್ತದೆ. ಆದುದರಿಂದ ಉಳಿದ ವರ್ಣದವರು ಸರ್ವಯಜ್ಞಗಳನ್ನೂ ಬ್ರಾಹ್ಮಣರ ಆದೇಶದಂತೆಯೇ ಮಾಡಬೇಕೇ ಹೊರತು ಸ್ವ-ಇಚ್ಛೆಯಿಂದಲ್ಲ.

12060042a ಋಗ್ಯಜುಃಸಾಮವಿತ್ಪೂಜ್ಯೋ ನಿತ್ಯಂ ಸ್ಯಾದ್ದೇವವದ್ದ್ವಿಜಃ|

12060042c ಅನೃಗ್ಯಜುರಸಾಮಾ ತು ಪ್ರಾಜಾಪತ್ಯ ಉಪದ್ರವಃ||

ಋಗ್ವೇದ, ಯಜುರ್ವೇದ ಮತ್ತು ಸಾಮವೇದಗಳನ್ನು ಅರ್ಥಮಾಡಿಕೊಂಡಿರುವ ದ್ವಿಜನು ದೇವತೆಗಳಂತೆ ನಿತ್ಯವೂ ಪೂಜನೀಯನು. ಋಗ್ವೇದ-ಯಜುರ್ವೇದ-ಸಾಮವೇದಗಳನ್ನು ಅರಿಯದ ಬ್ರಾಹ್ಮಣನು ಪ್ರಜಾಪತಿಯ ಉಪದ್ರವನು.

12060043a ಯಜ್ಞೋ ಮನೀಷಯಾ ತಾತ ಸರ್ವವರ್ಣೇಷು ಭಾರತ|

12060043c ನಾಸ್ಯ ಯಜ್ಞಹನೋ ದೇವಾ ಈಹಂತೇ ನೇತರೇ ಜನಾಃ||

12060043e ತಸ್ಮಾತ್ಸರ್ವೇಷು ವರ್ಣೇಷು ಶ್ರದ್ಧಾಯಜ್ಞೋ ವಿಧೀಯತೇ|

ಭಾರತ! ಮಗೂ! ಸರ್ವವರ್ಣದವರಲ್ಲಿ ಮನಸ್ಸು-ಶ್ರದ್ಧೆಗಳಿಂದ ಮಾಡುವ ಯಜ್ಞವನ್ನು ದೇವತೆಗಳು ಮತ್ತು ಇತರ ಜನರು ಅಪೇಕ್ಷಿಸುವುದಿಲ್ಲ. ಆದುದರಿಂದ ಸರ್ವ ವರ್ಣದವರಿಗೂ ಶದ್ಧಾಯಜ್ಞವನ್ನೂ ವಿಧಿಸಲಾಗಿದೆ.

12060044a ಸ್ವಂ ದೈವತಂ ಬ್ರಾಹ್ಮಣಾಃ ಸ್ವೇನ ನಿತ್ಯಂ

ಪರಾನ್ವರ್ಣಾನ್ನಯಜನ್ನೇವಮಾಸೀತ್||

12060044c ಆರೋಚಿತಾ ನಃ ಸುಮಹಾನ್ಸ ಧರ್ಮಃ

ಸೃಷ್ಟೋ ಬ್ರಹ್ಮಣಾ ತ್ರಿಷು ವರ್ಣೇಷು ದೃಷ್ಟಃ|

ಬ್ರಾಹ್ಮಣನು ತನ್ನ ಕರ್ಮಗಳಿಂದ ಇತರ ಮೂರು ವರ್ಣದವರಿಗೂ ತನ್ನನ್ನು ನಿತ್ಯ ದೇವತೆಯಂತೆ ಮಾಡಿಕೊಂಡಿದ್ದಾನೆ. ಅವನು ಇತರ ವರ್ಣದವರಿಗಾಗಿ ಯಜ್ಞಮಾಡುವುದಿಲ್ಲ ಎನ್ನುವುದು ಇಲ್ಲ. ಇತರ ಮೂರು ವರ್ಣದವರಿಗಾಗಿಯೇ ಬ್ರಾಹ್ಮಣನು ಸೃಷ್ಟಿಸಲ್ಪಟ್ಟಿದ್ದಾನೆ ಎನ್ನುವುದನ್ನು ಕಾಣುತ್ತೇವೆ.

12060045a ತಸ್ಮಾದ್ವರ್ಣಾ ಋಜವೋ ಜಾತಿಧರ್ಮಾಃ

ಸಂಸೃಜ್ಯಂತೇ ತಸ್ಯ ವಿಪಾಕ ಏಷಃ||

12060045c ಏಕಂ ಸಾಮ ಯಜುರೇಕಮೃಗೇಕಾ

ವಿಪ್ರಶ್ಚೈಕೋಽನಿಶ್ಚಯಸ್ತೇಷು ದೃಷ್ಟಃ|

ಬ್ರಾಹ್ಮಣ ವರ್ಣದಿಂದಲೇ ಇತರ ಜಾತಿಧರ್ಮಗಳು ಸೃಷ್ಟಿಯಾಗಿರುವುದರಿಂದ, ಉಳಿದ ಮೂರು ವರ್ಣಗಳೂ ಬ್ರಾಹ್ಮಣವರ್ಣಕ್ಕೆ ಸಮಾನವರ್ಣಗಳಾಗಿವೆ. ಋಗ್ವೇದ-ಯಜುರ್ವೇದ-ಸಾಮವೇದಗಳು ಹೇಗೆ ಒಂದೇ ಆಗಿರುವವೋ ಹಾಗೆ ವಿಪ್ರನೂ ಉಳಿದ ಮೂರು ವರ್ಣಗಳಿಂದ ಬೇರೆಯಲ್ಲ ಎಂದು ನಿಶ್ಚಯಿಸಲಾಗಿದೆ.

12060046a ಅತ್ರ ಗಾಥಾ ಯಜ್ಞಗೀತಾಃ ಕೀರ್ತಯಂತಿ ಪುರಾವಿದಃ||

12060046c ವೈಖಾನಸಾನಾಂ ರಾಜೇಂದ್ರ ಮುನೀನಾಂ ಯಷ್ಟುಮಿಚ್ಚತಾಮ್|

ರಾಜೇಂದ್ರ! ಇದಕ್ಕೆ ಸಂಬಂಧಿಸಿದಂತೆ ಪುರಾಣಗಳನ್ನು ತಿಳಿದಿರುವವರು ಯಜ್ಞಮಾಡಲು ಇಚ್ಛಿಸಿದ ವೈಖಾನಸ ಮುನಿಗಳ ಈ ಯಜ್ಞಗೀತೆಗಳನ್ನು ಹಾಡುತ್ತಾರೆ.

12060047a ಉದಿತೇಽನುದಿತೇ[3] ವಾಪಿ ಶ್ರದ್ದಧಾನೋ ಜಿತೇಂದ್ರಿಯಃ||

12060047c ವಹ್ನಿಂ ಜುಹೋತಿ ಧರ್ಮೇಣ ಶ್ರದ್ಧಾ ವೈ ಕಾರಣಂ ಮಹತ್|

“ಸೂರ್ಯೋದಯದ ಮೊದಲು ಅಥವಾ ನಂತರ ಶ್ರದ್ಧೆಯುಳ್ಳ ಜಿತೇಂದ್ರಿಯನು ಧರ್ಮಪೂರ್ವಕಗಾಗಿ ಅಗ್ನಿಯಲ್ಲಿ ಆಹುತಿಯನ್ನು ಕೊಡುತ್ತಾನೆ. ಅದಕ್ಕೆ ಶ್ರದ್ಧೆಯೇ ಮುಖ್ಯ ಕಾರಣವಾಗಿರುತ್ತದೆ.

12060048a ಯತ್ಸ್ಕನ್ನಮಸ್ಯ ತತ್ಪೂರ್ವಂ ಯದಸ್ಕನ್ನಂ ತದುತ್ತರಮ್||

12060048c ಬಹೂನಿ ಯಜ್ಞರೂಪಾಣಿ ನಾನಾಕರ್ಮಫಲಾನಿ ಚ|

ಇವುಗಳಲ್ಲಿ ಸ್ಕನ್ನವಾದವುಗಳು ಮೊದಲಿನವನಿಗೂ ಅಸ್ಕನ್ನವಾದವುಗಳು ಎರಡನೆಯವನಿಗೂ ಸೇರುತ್ತವೆ[4]. ನಾನಾಕರ್ಮಫಲಗಳನ್ನು ಕೊಡುವ ಯಜ್ಞವಿಧಗಳು ಅನೇಕವಾಗಿವೆ.

12060049a ತಾನಿ ಯಃ ಸಂವಿಜಾನಾತಿ ಜ್ಞಾನನಿಶ್ಚಯನಿಶ್ಚಿತಃ||

12060049c ದ್ವಿಜಾತಿಃ ಶ್ರದ್ಧಯೋಪೇತಃ ಸ ಯಷ್ಟುಂ ಪುರುಷೋಽರ್ಹತಿ|

ಯಾರು ಹಲವು ಯಜ್ಞರೂಪಗಳನ್ನು ಮತ್ತು ಅವುಗಳು ಕೊಡುವ ಫಲಗಳನ್ನು ತಿಳಿದುಕೊಂಡಿರುವನೋ ಅವನೇ ಯಜ್ಞಗಳ ಕುರಿತಾದ ನಿಶ್ಚಯಜ್ಞಾನಿಯಾಗಿರುತ್ತಾನೆ. ಶ್ರದ್ಧೆಯುಳ್ಳ ಅಂತಹ ದ್ವಿಜ ಪುರುಷನೇ ಯಾಗಮಾಡಲು ಅರ್ಹನಾಗುತ್ತಾನೆ.

12060050a ಸ್ತೇನೋ ವಾ ಯದಿ ವಾ ಪಾಪೋ ಯದಿ ವಾ ಪಾಪಕೃತ್ತಮಃ||

12060050c ಯಷ್ಟುಮಿಚ್ಚತಿ ಯಜ್ಞಂ ಯಃ ಸಾಧುಮೇವ ವದಂತಿ ತಮ್|

ಕಳ್ಳನೇ ಆಗಿರಲಿ, ಪಾಪಿಷ್ಟನೇ ಆಗಿರಲಿ ಅಥವಾ ಪಾಪಿಷ್ಟರಲ್ಲಿಯೇ ಅತಿಪಾಪಿಷ್ಟನಾಗಿರಲಿ, ಅವನು ಯಜ್ಞಮಾಡಲು ಇಚ್ಛಿಸಿದರೆ ಅಂಥವನನ್ನು ಸಾಧು, ಸತ್ಪುರುಷ ಎಂದೇ ಹೇಳುತ್ತಾರೆ.

12060051a ಋಷಯಸ್ತಂ ಪ್ರಶಂಸಂತಿ ಸಾಧು ಚೈತದಸಂಶಯಮ್||

12060051c ಸರ್ವಥಾ ಸರ್ವವರ್ಣೈರ್ಹಿ ಯಷ್ಟವ್ಯಮಿತಿ ನಿಶ್ಚಯಃ|

12060051e ನ ಹಿ ಯಜ್ಞಸಮಂ ಕಿಂ ಚಿತ್ತ್ರಿಷು ಲೋಕೇಷು ವಿದ್ಯತೇ||

ಋಷಿಗಳೂ ಕೂಡ ಅವನನ್ನು ಸಾಧುವೆಂದು ಪ್ರಶಂಸಿಸುತ್ತಾರೆ. ಇದರಲ್ಲಿ ಸಂಶಯವೇ ಇಲ್ಲ. ಸರ್ವಥಾ ಸರ್ವವರ್ಣದವರೂ ಯಜ್ಞಮಾಡಬೇಕು ಎನ್ನುವುದು ಇದರ ನಿಶ್ಚಯ.

12060052a ತಸ್ಮಾದ್ಯಷ್ಟವ್ಯಮಿತ್ಯಾಹುಃ ಪುರುಷೇಣಾನಸೂಯತಾ|

12060052c ಶ್ರದ್ಧಾಪವಿತ್ರಮಾಶ್ರಿತ್ಯ ಯಥಾಶಕ್ತಿ ಪ್ರಯಚ್ಚತಾ||

ಆದುದರಿಂದ ಪುರುಷನು ಅಸೂಯಾರಹಿತನಾಗಿ ಪವಿತ್ರ ಶ್ರದ್ಧೆಯನ್ನು ಆಶ್ರಯಿಸಿ ಯಥಾಶಕ್ತಿ ಯಜ್ಞಮಾಡಬೇಕೆಂದು ತಿಳಿದವರು ಹೇಳುತ್ತಾರೆ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವರ್ಣಾಶ್ರಮಧರ್ಮಕಥನೇ ಷಷ್ಠಿತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವರ್ಣಾಶ್ರಮಧರ್ಮಕಥನ ಎನ್ನುವ ಅರವತ್ತನೇ ಅಧ್ಯಾಯವು.

[1] ಸ್ವಾಹಾಕಾರವಷಟ್ಕಾರೌ ಮಂತ್ರಃ ಶೂದ್ರೇ ನ ವಿದ್ಯತೇ| ಅರ್ಥಾತ್, ಶೂದ್ರನು ಮಾಡು ಯಜ್ಞದಲ್ಲಿ ಸ್ವಾಹಾಕರ-ವಷಟ್ಕಾರಗಳೂ ಮತ್ತು ವೈದಿಕ ಮಂತ್ರ ಪ್ರಯೋಗಗಳೂ ಇರುವುದಿಲ್ಲ ಎಂಬ ಪಾಠಾಂತರವಿದೆ (ಭಾರತ ದರ್ಶನ).

[2] ಗೋಭಿಲಸ್ಮೃತಿಯಲ್ಲಿ ಪೂರ್ಣಪಾತ್ರದಕ್ಷಿಣೆಯ ಪರಿಮಾಣವು ಈ ರೀತಿಯಲ್ಲಿದೆ: ಅಷ್ಟಮುಷ್ಟಿರ್ಭವೇತ್ಕುಂಚಃ ಕುಂಚಯೋಽಷ್ಟೌ ಚ ಪುಷ್ಕಲಂ| ಪುಷ್ಕಲಾನಿ ಚ ಚತ್ವಾರಿ ಪರಿಪೂರ್ಣಂ ವಿಧೀಯತೇ|| ಹೋಮಾಂತೇ ಪೂರ್ಣಪಾತ್ರಂ ಬ್ರಹ್ಮಣೇ ದದ್ಯಾತ್: ಅರ್ಥಾತ್, ೮ ಮುಷ್ಟಿಗಳು ಒಂದು ಕುಂಚಕ್ಕೆ ಸಮಾನ, ೮ ಕುಂಚಗಳು ಒಂದು ಪುಷ್ಕಲಕ್ಕೆ ಸಮಾನ, ಮತ್ತು ೪ ಪುಷ್ಕಲಗಳು ಒಂದು ಪೂರ್ಣಪಾತ್ರೆಗೆ ಸಮಾನ. ಅರ್ಥಾತ್, ೨೫೬ ಮುಷ್ಟಿಗಳಿಗೆ ಒಂದು ಪೂರ್ಣಪಾತ್ರವಾಗುತ್ತದೆ. ಹೋಮದ ಕೊನೆಯಲ್ಲಿ ಪೂರ್ಣಪಾತ್ರೆಯನ್ನು ಬ್ರಹ್ಮನಿಗೆ ಕೊಡಬೇಕು. ಆಪಸ್ತಂಬಗೃಹ್ಯಸೂತ್ರ ಪ್ರಕಾರ ಅಷ್ಟಮುಷ್ಟಿರ್ಭವೇತ್ಕಿಂಚಿತ್ಕಿಂಚಿಚ್ಚತ್ವಾರಿ ಪುಷ್ಕಲಂ| ಪುಷ್ಕಲಾನಿ ಚ ಚತ್ವಾರಿ ಪೂರ್ಣಪಾತ್ರಂ ಚ ಪ್ರಕ್ಷತೇ|| ಅಂದರೆ ೧೨೮ ಮುಷ್ಟಿಗಳಿಗೇ ಒಂದ ಪೂರ್ಣಪಾತ್ರೆಯಾಗುತ್ತದೆ.

[3] ಎರಡು ಪ್ರಕಾರದ ಅಗ್ನಿಹೋತ್ರಗಳಿವೆ: ಸೂರ್ಯೋದಯಕ್ಕೆ ಮೊದಲು ಮಾಡುವ ಅಗ್ನಿಹೋತ್ರಕ್ಕೆ ಅನುದಿತ ಎಂದೂ ಸೂರ್ಯೋದಯಕ್ಕೆ ನಂತರ ಮಾಡುವ ಅಗ್ನಿಹೋತ್ರಕ್ಕೆ ಉದಿತ ಎಂದೂ ಹೆಸರು. ಅನುದಿತ ಅಗ್ನಿಹೋತ್ರಕ್ಕೆ ಅಗ್ನಿಯು ಪ್ರಧಾನ ದೇವತೆ. ಉದಿತ ಅಗ್ನಿಹೋತ್ರಕ್ಕೆ ಸೂರ್ಯನು ಪ್ರಧಾನ ದೇವತೆ. ಅಗ್ನಿಗೆ ಮೊದಲಿಗನೆಂದೂ ಸೂರ್ಯನಿಗೆ ಎರಡನೆಯನು ಅಥವಾ ಕಡೆಯವನು ಎಂದು ಹೇಳುತ್ತಾರೆ.

[4] ಸ್ಕನ್ನ ಎಂದರೆ ಕೆಳಗೆ ಚಿಲ್ಲಿರುವ ಹೋಮ ದ್ರವ್ಯ. ಅಸ್ಕನ್ನ ಎಂದರೆ ಕೆಳಗೆ ಚೆಲ್ಲದೇ ಇದ್ದ ಹೋಮದ್ರವ್ಯ. ಮೊದಲಿನವನು ಎಂದರೆ ಅಗ್ನಿಯೂ, ಎರಡನೆಯವನು ಎಂದರೆ ಸೂರ್ಯನೂ ಎಂದು ಅರ್ಥ.

Comments are closed.