ಶಾಂತಿ ಪರ್ವ: ರಾಜಧರ್ಮ ಪರ್ವ

12006001 ವೈಶಂಪಾಯನ ಉವಾಚ

12006001a ಏತಾವದುಕ್ತ್ವಾ ದೇವರ್ಷಿರ್ವಿರರಾಮ ಸ ನಾರದಃ|

12006001c ಯುಧಿಷ್ಠಿರಸ್ತು ರಾಜರ್ಷಿರ್ದಧ್ಯೌ ಶೋಕಪರಿಪ್ಲುತಃ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ದೇವರ್ಷಿ ನಾರದನು ಸುಮ್ಮನಾದನು. ರಾಜರ್ಷಿ ಯುಧಿಷ್ಠಿರನಾದರೋ ಶೋಕಸಾಗರದಲ್ಲಿ ಮುಳುಗಿಹೋದನು.

12006002a ತಂ ದೀನಮನಸಂ ವೀರಮಧೋವದನಮಾತುರಮ್|

12006002c ನಿಃಶ್ವಸಂತಂ ಯಥಾ ನಾಗಂ ಪರ್ಯಶ್ರುನಯನಂ ತಥಾ||

12006003a ಕುಂತೀ ಶೋಕಪರೀತಾಂಗೀ ದುಃಖೋಪಹತಚೇತನಾ|

12006003c ಅಬ್ರವೀನ್ಮಧುರಾಭಾಷಾ ಕಾಲೇ ವಚನಮರ್ಥವತ್||

ದೀನಮನಸ್ಕನಾಗಿ ಮುಖ ಕೆಳಗೆಮಾಡಿಕೊಂಡು, ಆತುರನಾಗಿ ನಾಗದಂತೆ ನಿಟ್ಟುಸಿರುಬಿಡುತ್ತಾ ಕಣ್ಣೀರನ್ನು ಸುರಿಸುತ್ತಿದ್ದ ಅವನಿಗೆ ಶೋಕದಿಂದ ಸುಡುತ್ತಿದ್ದ, ದುಃಖದಿಂದ ಚೇತನವನ್ನೇ ಕಳೆದುಕೊಂಡಿದ್ದ ಕುಂತಿಯು ಮಧುರಭಾಷೆಯಲ್ಲಿ ಕಾಲಕ್ಕೆ ತಕ್ಕಂತಹ ಈ ಮಾತುಗಳನ್ನಾಡಿದಳು:

12006004a ಯುಧಿಷ್ಠಿರ ಮಹಾಬಾಹೋ ನೈನಂ ಶೋಚಿತುಮರ್ಹಸಿ|

12006004c ಜಹಿ ಶೋಕಂ ಮಹಾಪ್ರಾಜ್ಞ ಶೃಣು ಚೇದಂ ವಚೋ ಮಮ||

“ಮಹಾಬಾಹೋ! ಯುಧಿಷ್ಠಿರ! ನೀನು ಈ ರೀತಿ ಶೋಕಿಸಬಾರದು! ಮಹಾಪ್ರಾಜ್ಞ! ಶೋಕವನ್ನು ತೊರೆ! ನನ್ನ ಈ ಮಾತನ್ನು ಕೇಳು!

12006005a ಯತಿತಃ ಸ ಮಯಾ ಪೂರ್ವಂ ಭ್ರಾತ್ರ್ಯಂ ಜ್ಞಾಪಯಿತುಂ ತವ|

12006005c ಭಾಸ್ಕರೇಣ ಚ ದೇವೇನ ಪಿತ್ರಾ ಧರ್ಮಭೃತಾಂ ವರ||

ಧರ್ಮಭೃತರಲ್ಲಿ ಶ್ರೇಷ್ಠನೇ! ನೀವು ಸಹೋದರರೆಂದು ಮೊದಲೇ ಅವನಿಗೆ ತಿಳಿಸಲು ನಾನೂ ಮತ್ತು ಅವನ ತಂದೆ ದೇವ ಭಾಸ್ಕರರು ಪ್ರಯತ್ನಿಸಿದ್ದೆವು.

12006006a ಯದ್ವಾಚ್ಯಂ ಹಿತಕಾಮೇನ ಸುಹೃದಾ ಭೂತಿಮಿಚ್ಚತಾ|

12006006c ತಥಾ ದಿವಾಕರೇಣೋಕ್ತಃ ಸ್ವಪ್ನಾಂತೇ ಮಮ ಚಾಗ್ರತಃ||

ಹಿತವನ್ನು ಬಯಸಿ ಸುಹೃದಯರಿಗೆ ಏನನ್ನು ಹೇಳಬೇಕೋ ಅದನ್ನೇ ದಿವಾಕರನು ಸ್ವಪ್ನದಲ್ಲಿ ಮತ್ತು ನನ್ನ ಸಮಕ್ಷಮದಲ್ಲಿ ಕರ್ಣನಿಗೆ ಹೇಳಿದ್ದನು.

12006007a ನ ಚೈನಮಶಕದ್ಭಾನುರಹಂ ವಾ ಸ್ನೇಹಕಾರಣೈಃ|

12006007c ಪುರಾ ಪ್ರತ್ಯನುನೇತುಂ ವಾ ನೇತುಂ ವಾಪ್ಯೇಕತಾಂ ತ್ವಯಾ||

ದುರ್ಯೋಧನನೊಂದಿಗೆ ಅವನಿಗಿದ್ದ ಸ್ನೇಹದ ಕಾರಣದಿಂದಾಗಿ ಭಾನುವಾಗಲೀ ನಾನಾಗಲೀ ಕರ್ಣನು ನಿನ್ನೊಡನೆ ಸೇರುವಂತೆ ಅಥವಾ ಒಂದಾಗಿರುವಂತೆ ಮಾಡಲು ಶಕ್ಯರಾಗಲಿಲ್ಲ.

12006008a ತತಃ ಕಾಲಪರೀತಃ ಸ ವೈರಸ್ಯೋದ್ಧುಕ್ಷಣೇ ರತಃ|

12006008c ಪ್ರತೀಪಕಾರೀ ಯುಷ್ಮಾಕಮಿತಿ ಚೋಪೇಕ್ಷಿತೋ ಮಯಾ||

ಅನಂತರ ಕಾಲವಶದಿಂದಾಗಿ ಅವನು ನಿಮ್ಮೊಡನೆ ವೈರವನ್ನು ಬೆಳೆಸುವುದರಲ್ಲಿಯೇ ನಿರತನಾಗಿದ್ದನು ಮತ್ತು ನಿಮಗೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತಿದ್ದನು. ಆದುದರಿಂದ ನಾನು ಅವನನ್ನು ಉಪೇಕ್ಷಿಸಿದೆ!”

12006009a ಇತ್ಯುಕ್ತೋ ಧರ್ಮರಾಜಸ್ತು ಮಾತ್ರಾ ಬಾಷ್ಪಾಕುಲೇಕ್ಷಣಃ|

12006009c ಉವಾಚ ವಾಕ್ಯಂ ಧರ್ಮಾತ್ಮಾ ಶೋಕವ್ಯಾಕುಲಚೇತನಃ||

12006010a ಭವತ್ಯಾ ಗೂಢಮಂತ್ರತ್ವಾತ್ಪೀಡಿತೋಽಸ್ಮೀತ್ಯುವಾಚ ತಾಮ್|

ತಾಯಿಯು ಹೀಗೆ ಹೇಳಲು ಕಣ್ಣಿರುತುಂಬಿದ ಶೋಕವ್ಯಾಕುಲಚೇತನನಾಗಿದ್ದ ಧರ್ಮಾತ್ಮ ಧರ್ಮರಾಜನು “ನೀನು ಈ ವಿಷಯವನ್ನು ರಹಸ್ಯವಾಗಿಯೇ ಇಟ್ಟಿದುದರಿಂದ ನಾನು ಬಹಳ ಪೀಡಿತನಾಗಿದ್ದೇನೆ!” ಎಂದು ತಾಯಿಗೆ ಹೇಳಿದನು.

12006010c ಶಶಾಪ ಚ ಮಹಾತೇಜಾಃ ಸರ್ವಲೋಕೇಷು ಚ ಸ್ತ್ರಿಯಃ||

12006010e ನ ಗುಹ್ಯಂ ಧಾರಯಿಷ್ಯಂತೀತ್ಯತಿದುಃಖಸಮನ್ವಿತಃ||

ಅತಿ ದುಃಖ ಸಮನ್ವಿತನಾದ ಆ ಮಹಾತೇಜಸ್ವಿಯು ಸರ್ವಲೋಕಗಳಲ್ಲಿನ ಸ್ತ್ರೀಯರಿಗೆ “ರಹಸ್ಯವನ್ನು ಹಿಡಿದಿಟ್ಟುಕೊಳ್ಳಲಾರಿರಿ!” ಎಂದು ಶಪಿಸಿದನು.

12006011a ಸ ರಾಜಾ ಪುತ್ರಪೌತ್ರಾಣಾಂ ಸಂಬಂಧಿಸುಹೃದಾಂ ತಥಾ|

12006011c ಸ್ಮರನ್ನುದ್ವಿಗ್ನಹೃದಯೋ ಬಭೂವಾಸ್ವಸ್ಥಚೇತನಃ||

ತನ್ನ ಪುತ್ರ-ಪೌತ್ರರನ್ನೂ ಸಂಬಂಧಿ-ಸ್ನೇಹಿತರನ್ನೂ ನೆನಪಿಸಿಕೊಂಡು ರಾಜನು ಉದ್ವಿಗ್ನ ಹೃದಯಿಯಾಗಿ ಅಸ್ವಸ್ಥಚೇತನನಾದನು.

12006012a ತತಃ ಶೋಕಪರೀತಾತ್ಮಾ ಸಧೂಮ ಇವ ಪಾವಕಃ|

12006012c ನಿರ್ವೇದಮಕರೋದ್ಧೀಮಾನ್ ರಾಜಾ ಸಂತಾಪಪೀಡಿತಃ||

ಆಗ ಹೊಗೆಯಿಂದ ತುಂಬಿದ ಅಗ್ನಿಯಂತೆ ಶೋಕಪರೀತಾತ್ಮನಾದ ಆ ಧೀಮಾನ್ ರಾಜನು ಸಂತಾಪಪೀಡಿತನಾಗಿ ವೈರಾಗ್ಯವನ್ನು ತಾಳಿದನು.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಸ್ತ್ರೀಶಾಪೇ ಷಷ್ಠೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಸ್ತ್ರೀಶಾಪವೆನ್ನುವ ಆರನೇ ಅಧ್ಯಾಯವು.

Comments are closed.