ಶಾಂತಿ ಪರ್ವ: ರಾಜಧರ್ಮ ಪರ್ವ

೫೮

12058001 ಭೀಷ್ಮ ಉವಾಚ

12058001a ಏತತ್ತೇ ರಾಜಧರ್ಮಾಣಾಂ ನವನೀತಂ ಯುಧಿಷ್ಠಿರ|

12058001c ಬೃಹಸ್ಪತಿರ್ಹಿ ಭಗವಾನ್ನಾನ್ಯಂ ಧರ್ಮಂ ಪ್ರಶಂಸತಿ||

ಭೀಷ್ಮನು ಹೇಳಿದನು: “ಯುಧಿಷ್ಠಿರ! ನಾನು ಈಗ ಹೇಳಲಿರುವುದು ರಾಜಧರ್ಮಗಳನ್ನು ಕಡೆದು ತೆಗೆದ ಬೆಣ್ಣೆಯಂಥಹ ವಿಷಯಗಳು. ಏಕೆಂದರೆ ಬೃಹಸ್ಪತಿಯೂ ಅನ್ಯ ಧರ್ಮಗಳನ್ನು ಪ್ರಶಂಸಿಸುವುದಿಲ್ಲ.

12058002a ವಿಶಾಲಾಕ್ಷಶ್ಚ ಭಗವಾನ್ಕಾವ್ಯಶ್ಚೈವ ಮಹಾತಪಾಃ|

12058002c ಸಹಸ್ರಾಕ್ಷೋ ಮಹೇಂದ್ರಶ್ಚ ತಥಾ ಪ್ರಾಚೇತಸೋ ಮನುಃ||

12058003a ಭರದ್ವಾಜಶ್ಚ ಭಗವಾಂಸ್ತಥಾ ಗೌರಶಿರಾ ಮುನಿಃ|

12058003c ರಾಜಶಾಸ್ತ್ರಪ್ರಣೇತಾರೋ ಬ್ರಹ್ಮಣ್ಯಾ ಬ್ರಹ್ಮವಾದಿನಃ||

12058004a ರಕ್ಷಾಮೇವ ಪ್ರಶಂಸಂತಿ ಧರ್ಮಂ ಧರ್ಮಭೃತಾಂ ವರ|

12058004c ರಾಜ್ಞಾಂ ರಾಜೀವತಾಮ್ರಾಕ್ಷ ಸಾಧನಂ ಚಾತ್ರ ವೈ ಶೃಣು||

ಧರ್ಮಭೃತರಲ್ಲಿ ಶ್ರೇಷ್ಠನೇ! ಭಗವಾನ್ ವಿಶಾಲಾಕ್ಷ, ಮಹಾತಪಸ್ವಿ ಕಾವ್ಯ, ಸಹಸ್ರಾಕ್ಷ ಮಹೇಂದ್ರ, ಪ್ರಾಚೇತಸ ಮನು, ಭಗವಾನ್ ಭರದ್ವಾಜ, ಮುನಿ ಗೌರಶಿರ – ಈ ಎಲ್ಲ ರಾಜಶಾಸ್ತ್ರಪ್ರಣೇತಾರರೂ, ಬ್ರಹ್ಮಣ್ಯರೂ ಮತ್ತು ಬ್ರಹ್ಮವಾದಿಗಳೂ ರಕ್ಷಣೆಯೇ ರಾಜಧರ್ಮವೆಂದು ಪ್ರಶಂಸಿಸುತ್ತಾರೆ. ಕಮಲದಂತಹ ಕೆಂಪು ಕಣ್ಣುಗಳುಳ್ಳವನೇ! ರಾಜರು ಇದನ್ನು ಹೇಗೆ ಸಾಧಿಸಬೇಕೆನ್ನುವುದನ್ನು ಹೇಳುತ್ತೇನೆ ಕೇಳು.

12058005a ಚಾರಶ್ಚ ಪ್ರಣಿಧಿಶ್ಚೈವ ಕಾಲೇ ದಾನಮಮತ್ಸರಃ|

12058005c ಯುಕ್ತ್ಯಾದಾನಂ ನ ಚಾದಾನಮಯೋಗೇನ ಯುಧಿಷ್ಠಿರ||

ಯುಧಿಷ್ಠಿರ! ಗುಪ್ತಚಾರರನ್ನೂ ಪ್ರತ್ಯಕ್ಷ ಚಾರರನ್ನೂ ಇಟ್ಟುಕೊಂಡಿರಬೇಕು. ಮತ್ಸರವಿಲ್ಲದೇ ಅವರಿಗೆ ಕಾಲ ಕಾಲಕ್ಕೆ ವೇತನಗಳನ್ನು ಕೊಡಬೇಕು. ಯುಕ್ತಿಯಿಂದ ಮತ್ತು ಜನರಿಗೆ ತೊಂದರೆಯುಂಟಾಗದ ರೀತಿಯಲ್ಲಿ ತೆರಿಗೆಗಳನ್ನು ತೆಗೆದುಕೊಳ್ಳಬೇಕು.

12058006a ಸತಾಂ ಸಂಗ್ರಹಣಂ ಶೌರ್ಯಂ ದಾಕ್ಷ್ಯಂ ಸತ್ಯಂ ಪ್ರಜಾಹಿತಮ್|

12058006c ಅನಾರ್ಜವೈರಾರ್ಜವೈಶ್ಚ ಶತ್ರುಪಕ್ಷಸ್ಯ ಭೇದನಮ್||

ಸತ್ಪುರುಷರನ್ನು ಸಂಗ್ರಹಿಸಿಟ್ಟುಕೊಂಡಿರಬೇಕು. ಶೂರನಾಗಿರಬೇಕು. ಕಾರ್ಯದಕ್ಷನಾಗಿರಬೇಕು. ಸತ್ಯನಿಷ್ಟನೂ ಪ್ರಜೆಗಳ ಹಿತಕಾರಿಯೂ ಆಗಿರಬೇಕು. ಸರಳ ಅಥವಾ ಕಠಿನ ಮಾರ್ಗಗಳಿಂದ ಶತ್ರುಪಕ್ಷವನ್ನು ಭೇದಿಸಬೇಕು.

12058007a ಸಾಧೂನಾಮಪರಿತ್ಯಾಗಃ ಕುಲೀನಾನಾಂ ಚ ಧಾರಣಮ್|

12058007c ನಿಚಯಶ್ಚ ನಿಚೇಯಾನಾಂ ಸೇವಾ ಬುದ್ಧಿಮತಾಮಪಿ||

ಸತ್ಪುರುಷರರನ್ನು ಪರಿತ್ಯಜಿಸಬಾರದು. ಕುಲೀನರ ಭರಣೆ-ಪೋಷಣೆ ಮಾಡಬೇಕು. ಯೋಗ್ಯ ವಸ್ತುಗಳನ್ನು ಸಂಗ್ರಹಿಸಬೇಕು. ಬುದ್ಧಿವಂತರ ಸೇವೆ ಮಾಡುತ್ತಿರಬೇಕು.

12058008a ಬಲಾನಾಂ ಹರ್ಷಣಂ ನಿತ್ಯಂ ಪ್ರಜಾನಾಮನ್ವವೇಕ್ಷಣಮ್|

12058008c ಕಾರ್ಯೇಷ್ವಖೇದಃ ಕೋಶಸ್ಯ ತಥೈವ ಚ ವಿವರ್ಧನಮ್||

ಸೇನೆಗಳು ಯಾವಾಗಲೂ ಹರ್ಷಿತರಾಗಿರುವಂತೆ ನೋಡಿಕೊಳ್ಳಬೇಕು. ಪ್ರಜೆಗಳ ಕಷ್ಟ-ಸುಖಗಳನ್ನು ಪರಿಶೀಲಿಸುತ್ತಿರಬೇಕು. ಪ್ರಜೆಗಳ ಕುರಿತಾಗಿ ಮಾಡುವ ಕಾರ್ಯಗಳನ್ನು ಮಾಡುವಾಗ ಖೇದಿಸಬಾರದು. ಕೋಶವನ್ನು ತುಂಬಿಸುತ್ತಲೇ ಇರಬೇಕು.

12058009a ಪುರಗುಪ್ತಿರವಿಶ್ವಾಸಃ ಪೌರಸಂಘಾತಭೇದನಮ್|

12058009c ಕೇತನಾನಾಂ ಚ ಜೀರ್ಣಾನಾಮವೇಕ್ಷಾ ಚೈವ ಸೀದತಾಮ್||

ಪುರದ ರಕ್ಷಣೆಯ ಕುರಿತು ಯಾರಮೇಲೂ ವಿಶ್ವಾಸವನ್ನಿಡಬಾರದು. ಪೌರರು ಶತ್ರುವಿನೊಡನೆ ಸಂಪರ್ಕವನ್ನಿಟ್ಟುಕೊಂಡಿದ್ದರೆ ಅದನ್ನು ಭೇದಿಸಬೇಕು. ಜೀರ್ಣಾವಸ್ಥೆಯಲ್ಲಿರುವ ಕಟ್ಟಡಗಳ ಜೀರ್ಣೋದ್ಧಾರ ಮಾಡುತ್ತಿರಬೇಕು.

12058010a ದ್ವಿವಿಧಸ್ಯ ಚ ದಂಡಸ್ಯ ಪ್ರಯೋಗಃ ಕಾಲಚೋದಿತಃ|

12058010c ಅರಿಮಧ್ಯಸ್ಥಮಿತ್ರಾಣಾಂ ಯಥಾವಚ್ಚಾನ್ವವೇಕ್ಷಣಮ್||

ಕಾಲಕ್ಕೆ ಸರಿಯಾಗಿ ಎರಡು ರೀತಿಯ ದಂಡವನ್ನು ಪ್ರಯೋಗಿಸಬೇಕು – ಶರೀರ ದಂಡ ಮತ್ತು ಆರ್ಥಿಕ ದಂಡ. ಮಿತ್ರರ್ಯಾರು, ಶತ್ರುಗಳ್ಯಾರು ಮತ್ತು ಮಧ್ಯಸ್ಥರ್ಯಾರು ಎಂದು ಯಾವಾಗಲೂ ಪರಿಶೀಲಿಸುತ್ತಿರಬೇಕು.

12058011a ಉಪಜಾಪಶ್ಚ ಭೃತ್ಯಾನಾಮಾತ್ಮನಃ ಪರದರ್ಶನಾತ್|

12058011c ಅವಿಶ್ವಾಸಃ ಸ್ವಯಂ ಚೈವ ಪರಸ್ಯಾಶ್ವಾಸನಂ ತಥಾ||

ಸೇವಕರು ತನ್ನ ಕುರಿತು ಶತ್ರುಗಳಿಗೆ ತಿಳಿಸದಿರುವಂತೆ ಜಾಗರೂಕನಾಗಿರಬೇಕು. ಯಾರಲ್ಲಿಯೂ ವಿಶ್ವಾಸವನ್ನಿಡಬಾರದು. ಶರಣಾಗತರಾದ ಶತ್ರುಗಳಿಗೆ ಆಶ್ವಾಸನೆಯನ್ನು ನೀಡಬೇಕು.

12058012a ನೀತಿಧರ್ಮಾನುಸರಣಂ ನಿತ್ಯಮುತ್ಥಾನಮೇವ ಚ|

12058012c ರಿಪೂಣಾಮನವಜ್ಞಾನಂ ನಿತ್ಯಂ ಚಾನಾರ್ಯವರ್ಜನಮ್||

ನೀತಿ ಧರ್ಮವನ್ನು ಅನುಸರಿಸಬೇಕು. ನಿತ್ಯವೂ ಉದ್ಯೋಗಶೀಲನಾಗಿರಬೇಕು. ಶತ್ರುಗಳ ಕುರಿತು ಅಜ್ಞಾನಿಯಾಗಿರಬಾರದು. ನಿತ್ಯವೂ ಅನಾರ್ಯರನ್ನು ವರ್ಜಿಸಬೇಕು.

12058013a ಉತ್ಥಾನಂ ಹಿ ನರೇಂದ್ರಾಣಾಂ ಬೃಹಸ್ಪತಿರಭಾಷತ|

12058013c ರಾಜಧರ್ಮಸ್ಯ ಯನ್ಮೂಲಂ ಶ್ಲೋಕಾಂಶ್ಚಾತ್ರ ನಿಬೋಧ ಮೇ||

ಉದ್ಯೋಗಶೀಲತೆಯೇ ನರೇಂದ್ರರ ರಾಜಧರ್ಮದ ಮೂಲ. ಇದರ ಕುರಿತು ಬೃಹಸ್ಪತಿಯು ಹೇಳಿರುವ ಶ್ಲೋಕಗಳನ್ನು ಕೇಳು.

12058014a ಉತ್ಥಾನೇನಾಮೃತಂ ಲಬ್ಧಮುತ್ಥಾನೇನಾಸುರಾ ಹತಾಃ|

12058014c ಉತ್ಥಾನೇನ ಮಹೇಂದ್ರೇಣ ಶ್ರೈಷ್ಠ್ಯಂ ಪ್ರಾಪ್ತಂ ದಿವೀಹ ಚ||

“ಉದ್ಯೋಗಶೀಲತೆಯಿಂದಲೇ ಅಮೃತವು ದೊರೆಯಿತು. ಉದ್ಯೋಗಶೀಲತೆಯಿಂದಲೇ ಅಸುರರು ಹತರಾದರು. ಉದ್ಯೋಗಶೀಲತೆಯಿಂದಲೇ ಮಹೇಂದ್ರನು ದೇವ ಮತ್ತು ಈ ಲೋಕಗಳಲ್ಲಿ ಶ್ರೇಷ್ಠತೆಯನ್ನು ಪಡೆದುಕೊಂಡನು.

12058015a ಉತ್ಥಾನಧೀರಃ ಪುರುಷೋ ವಾಗ್ಧೀರಾನಧಿತಿಷ್ಠತಿ|

12058015c ಉತ್ಥಾನಧೀರಂ ವಾಗ್ಧೀರಾ ರಮಯಂತ ಉಪಾಸತೇ||

ಉದ್ಯೋಗಧೀರನಾದ ಪುರುಷನು ವಾಗ್ಧೀರರಿಗಿಂತಲೂ ಹೆಚ್ಚಿನವನು. ವಾಗ್ಧೀರರು ಉದ್ಯೋಗಧೀರರನ್ನೇ ರಮಿಸುತ್ತಿರುತ್ತಾರೆ ಮತ್ತು ಪೂಜಿಸುತ್ತಿರುತ್ತಾರೆ.”

12058016a ಉತ್ಥಾನಹೀನೋ ರಾಜಾ ಹಿ ಬುದ್ಧಿಮಾನಪಿ ನಿತ್ಯಶಃ|

12058016c ಧರ್ಷಣೀಯೋ ರಿಪೂಣಾಂ ಸ್ಯಾದ್ಭುಜಂಗ ಇವ ನಿರ್ವಿಷಃ||

ಉದ್ಯೋಗಶೀಲನಲ್ಲದ ರಾಜನು ಬುದ್ಧಿವಂತನೇ ಆಗಿದ್ದರೂ ವಿಷರಹಿತ ಸರ್ಪದಂತೆ ನಿತ್ಯವೂ ಶತ್ರುಗಳ ಆಕ್ರಮಣಕ್ಕೆ ಈಡಾಗುತ್ತಾನೆ.

12058017a ನ ಚ ಶತ್ರುರವಜ್ಞೇಯೋ ದುರ್ಬಲೋಽಪಿ ಬಲೀಯಸಾ|

12058017c ಅಲ್ಪೋಽಪಿ ಹಿ ದಹತ್ಯಗ್ನಿರ್ವಿಷಮಲ್ಪಂ ಹಿನಸ್ತಿ ಚ||

ರಾಜನಾಗಿರುವವನು ಶತ್ರುಗಳ ಕುರಿತು ಅಜ್ಞಾನಿಯಾಗಿರಬಾರದು. ಅಲ್ಪವಾದರೂ ಅಗ್ನಿಯು ಸುಡುತ್ತದೆ ಮತ್ತು ವಿಷವು ಅಲ್ಪವಾಗಿದ್ದರೂ ಕೊಲ್ಲುತ್ತದೆ. ಹಾಗೆ ದುರ್ಬಲನಾಗಿ ಕಾಣುವ ಶತ್ರುವು ಮುಂದೆ ಪ್ರಬಲನಾಗಬಹುದು.

12058018a ಏಕಾಶ್ವೇನಾಪಿ ಸಂಭೂತಃ ಶತ್ರುರ್ದುರ್ಗಸಮಾಶ್ರಿತಃ|

12058018c ತಂ ತಂ ತಾಪಯತೇ ದೇಶಮಪಿ ರಾಜ್ಞಃ ಸಮೃದ್ಧಿನಃ||

ಸಮೃದ್ಧ ರಾಜನ ದೇಶವನ್ನು ಒಂದೇ ಸೇನಾಂಗವನ್ನು ಇಟ್ಟುಕೊಂಡ ಶತ್ರುವೂ ದುರ್ಗವನ್ನು ಗೆದ್ದು ಪರಿತಾಪಕ್ಕೀಡುಮಾಡಬಹುದು.

12058019a ರಾಜ್ಞೋ ರಹಸ್ಯಂ ಯದ್ವಾಕ್ಯಂ ಜಯಾರ್ಥಂ ಲೋಕಸಂಗ್ರಹಃ|

12058019c ಹೃದಿ ಯಚ್ಚಾಸ್ಯ ಜಿಹ್ಮಂ ಸ್ಯಾತ್ಕಾರಣಾರ್ಥಂ ಚ ಯದ್ಭವೇತ್||

12058020a ಯಚ್ಚಾಸ್ಯ ಕಾರ್ಯಂ ವೃಜಿನಮಾರ್ಜವೇನೈವ ಧಾರ್ಯತೇ|

12058020c ದಂಭನಾರ್ಥಾಯ ಲೋಕಸ್ಯ ಧರ್ಮಿಷ್ಠಾಮಾಚರೇತ್ಕ್ರಿಯಾಮ್||

ರಾಜನ ರಹಸ್ಯ ಮಾತು, ವಿಜಯಕ್ಕಾಗಿ ಮಾಡಿದ ಲೋಕಸಂಗ್ರಹ, ಹೃದಯದಲ್ಲಿರುವ ದುರುದ್ದೇಶ, ವಿಜಯಕ್ಕಾಗಿ ನಡೆದು ಹೋದ ದುಷ್ಕಾರ್ಯ, ಮತ್ತು ಮಾಡಿದ ಸಮಯಕ್ಕೆ ತಕ್ಕುದಲ್ಲದ ಕಾರ್ಯ – ಇವುಗಳನ್ನು ರಾಜನಾದವನು ಅತ್ಯಂತ ಸರಳತೆಯಿಂದಲೇ ಧಾರಣೆಮಾಡಬೇಕು. ಲೋಕದಲ್ಲಿ ಪ್ರತಿಷ್ಠೆಗಾಗಿ ಅವನು ಧರ್ಮಿಷ್ಠನಾಗಿಯೇ ನಡೆದಕೊಳ್ಳಬೇಕು.

12058021a ರಾಜ್ಯಂ ಹಿ ಸುಮಹತ್ತಂತ್ರಂ ದುರ್ಧಾರ್ಯಮಕೃತಾತ್ಮಭಿಃ|

12058021c ನ ಶಕ್ಯಂ ಮೃದುನಾ ವೋಢುಮಾಘಾತಸ್ಥಾನಮುತ್ತಮಮ್||[1]

ರಾಜ್ಯಭಾರವು ಒಂದು ಮಹಾ ತಂತ್ರ. ಅಕೃತಾತ್ಮರಿಗೆ ಇದು ಕಷ್ಟದ ಕೆಲಸ. ಮೃದುತ್ವದಿಂದ ಈ ಜವಾಬ್ಧಾರಿಯನ್ನು ಹೊತ್ತುಕೊಳ್ಳುವುದು ಶಕ್ಯವಿಲ್ಲ. ಈ ಉತ್ತಮ ಸ್ಥಾನದಲ್ಲಿ ಆಘಾತಗಳಿರುತ್ತವೆ.

12058022a ರಾಜ್ಯಂ ಸರ್ವಾಮಿಷಂ ನಿತ್ಯಮಾರ್ಜವೇನೇಹ ಧಾರ್ಯತೇ|

12058022c ತಸ್ಮಾನ್ಮಿಶ್ರೇಣ ಸತತಂ ವರ್ತಿತವ್ಯಂ ಯುಧಿಷ್ಠಿರ||

ರಾಜ್ಯವೆನ್ನುವುದು ಎಲ್ಲರಿಗೂ ಆಸೆಹುಟ್ಟಿಸುವಂಥಹುದು. ಆದರೆ ನಿತ್ಯವೂ ಸರಳಸ್ವಭಾವವಿರುವವನು ಮಾತ್ರ ಇದರ ಹೊಣೆಯನ್ನು ಹೊರಬಲ್ಲನು. ಯುಧಿಷ್ಠಿರ! ಆದುದರಿಂದ ರಾಜನಾದವನು ಸತತವೂ ಮಿಶ್ರರೀತಿಯಲ್ಲಿ  - ಅಂದರೆ ಕ್ರೂರಿಗಳಿಗೆ ಕ್ರೂರಿಯಾಗಿಯೂ ಮೃದುಜನರಿಗೆ ಮೃದುವಾಗಿಯೂ – ವರ್ತಿಸಬೇಕಾಗುತ್ತದೆ.

12058023a ಯದ್ಯಪ್ಯಸ್ಯ ವಿಪತ್ತಿಃ ಸ್ಯಾದ್ರಕ್ಷಮಾಣಸ್ಯ ವೈ ಪ್ರಜಾಃ|

12058023c ಸೋಽಪ್ಯಸ್ಯ ವಿಪುಲೋ ಧರ್ಮ ಏವಂವೃತ್ತಾ ಹಿ ಭೂಮಿಪಾಃ||

ಧರ್ಮದಿಂದ ಪ್ರಜಾರಕ್ಷಣೆಯನ್ನು ಮಾಡುತ್ತಿರುವ ರಾಜನಿಗೆ ಒಂದುವೇಳೆ ವಿಪತ್ತಿಯು ಬಂದೊದಗಿದರೂ ಅದು ಅವನಿಗೆ ವಿಪುಲ ಧರ್ಮವನ್ನೇ ನೀಡುತ್ತದೆ. ಹೀಗೆಯೇ ಹಿಂದಿನ ಭೂಮಿಪರೆಲ್ಲರೂ ನಡೆದುಕೊಂಡು ಬಂದಿದ್ದಾರೆ.

12058024a ಏಷ ತೇ ರಾಜಧರ್ಮಾಣಾಂ ಲೇಶಃ ಸಮನುವರ್ಣಿತಃ|

12058024c ಭೂಯಸ್ತೇ ಯತ್ರ ಸಂದೇಹಸ್ತದ್ ಬ್ರೂಹಿ ವದತಾಂ ವರ||

ಮಾತನಾಡುವವರಲ್ಲಿ ಶ್ರೇಷ್ಠನೇ! ನಾನು ಈ ವರೆಗೆ ಲೇಶಮಾತ್ರವೇ ರಾಜಧರ್ಮಗಳನ್ನು ವರ್ಣಿಸಿದ್ದೇನೆ. ಇದರಲ್ಲಿ ಏನಾದರೂ ಸಂದೇಹವಿದ್ದರೆ ಕೇಳು. ಮತ್ತೆ ಹೇಳುತ್ತೇನೆ.””

12058025 ವೈಶಂಪಾಯನ ಉವಾಚ

12058025a ತತೋ ವ್ಯಾಸಶ್ಚ ಭಗವಾನ್ದೇವಸ್ಥಾನೋಽಶ್ಮನಾ ಸಹ|

12058025c ವಾಸುದೇವಃ ಕೃಪಶ್ಚೈವ ಸಾತ್ಯಕಿಃ ಸಂಜಯಸ್ತಥಾ||

12058026a ಸಾಧು ಸಾಧ್ವಿತಿ ಸಂಹೃಷ್ಟಾಃ ಪುಷ್ಯಮಾಣೈರಿವಾನನೈಃ|

12058026c ಅಸ್ತುವಂಸ್ತೇ ನರವ್ಯಾಘ್ರಂ ಭೀಷ್ಮಂ ಧರ್ಮಭೃತಾಂ ವರಮ್||

ವೈಶಂಪಾಯನನು ಹೇಳಿದನು: “ಆಗ ಭಗವಾನ್ ವ್ಯಾಸ, ಅಶ್ಮನೊಂದಿಗೆ ದೇವಸ್ಥಾನ, ವಾಸುದೇವ, ಕೃಪ, ಸಾತ್ಯಕಿ ಮತ್ತು ಸಂಜಯರು ಸಂಹೃಷ್ಟರಾಗಿ ಅರಳಿದ ಕಮಲಗಳಂತಿದ್ದ ಮುಖಗಳಿಂದ “ಸಾಧು! ಸಾಧು!” ಎಂದು ಧರ್ಮಭೃತರಲ್ಲಿ ಶ್ರೇಷ್ಠ ನರವ್ಯಾಘ್ರ ಭೀಷ್ಮನನ್ನು ಕೊಂಡಾಡಿದರು.

12058027a ತತೋ ದೀನಮನಾ ಭೀಷ್ಮಮುವಾಚ ಕುರುಸತ್ತಮಃ|

12058027c ನೇತ್ರಾಭ್ಯಾಮಶ್ರುಪೂರ್ಣಾಭ್ಯಾಂ ಪಾದೌ ತಸ್ಯ ಶನೈಃ ಸ್ಪೃಶನ್||

ಕುರುಸತ್ತಮ ಯುಧಿಷ್ಠಿರನು ದೀನಮನಸ್ಕನಾಗಿ ಕಂಬನಿದುಂಬಿದ ಕಣ್ಣುಗಳಿಂದ ಭೀಷ್ಮನ ಪಾದಗಳೆರಡನ್ನೂ ಮೃದುವಾಗಿ ಸ್ಪರ್ಶಿಸಿ ಹೇಳಿದನು:

12058028a ಶ್ವ ಇದಾನೀಂ ಸ್ವಸಂದೇಹಂ ಪ್ರಕ್ಷ್ಯಾಮಿ ತ್ವಂ ಪಿತಾಮಹ|

12058028c ಉಪೈತಿ ಸವಿತಾಪ್ಯಸ್ತಂ ರಸಮಾಪೀಯ ಪಾರ್ಥಿವಮ್||

“ಪಿತಾಮಹ! ಸವಿತು ಸೂರ್ಯನು ಭೂಮಿಯ ರಸಗಳನ್ನು ಕುಡಿದು ಹೋಗುತ್ತಿದ್ದಾನೆ. ನಾಳೆ ನನ್ನ ಸಂದೇಹಗಳನ್ನು ನಿನ್ನಲ್ಲಿ ಕೇಳಿ ತಿಳಿದುಕೊಳ್ಳುತ್ತೇನೆ!”

12058029a ತತೋ ದ್ವಿಜಾತೀನಭಿವಾದ್ಯ ಕೇಶವಃ

ಕೃಪಶ್ಚ ತೇ ಚೈವ ಯುಧಿಷ್ಠಿರಾದಯಃ|

12058029c ಪ್ರದಕ್ಷಿಣೀಕೃತ್ಯ ಮಹಾನದೀಸುತಂ

ತತೋ ರಥಾನಾರುರುಹುರ್ಮುದಾ ಯುತಾಃ||

ಅನಂತರ ಬ್ರಾಹ್ಮಣರಿಗೆ ಅಭಿವಂದಿಸಿ ಕೇಶವ, ಕೃಪ, ಯುಧಿಷ್ಠಿರಾದಿಗಳು ಮಹಾನದೀಸುತನಿಗೆ ಪ್ರದಕ್ಷಿಣೆಗೈದು ಸಂತೋಷದಿಂದ ರಥಗಳನ್ನೇರಿದರು.

12058030a ದೃಷದ್ವತೀಂ ಚಾಪ್ಯವಗಾಹ್ಯ ಸುವ್ರತಾಃ

ಕೃತೋದಕಾರ್ಯಾಃ ಕೃತಜಪ್ಯಮಂಗಲಾಃ|

12058030c ಉಪಾಸ್ಯ ಸಂಧ್ಯಾಂ ವಿಧಿವತ್ಪರಂತಪಾಸ್

ತತಃ ಪುರಂ ತೇ ವಿವಿಶುರ್ಗಜಾಹ್ವಯಮ್||

ಆ ಸುವ್ರತ ಪರಂತಪರು ದೃಷದ್ವತೀ ನದಿಯಲ್ಲಿ ಉದಕಕಾರ್ಯಗಳನ್ನು ಮಾಡಿ. ಮಂಗಲ ಜಪಗಳನ್ನು ಮಾಡಿ, ವಿಧಿವತ್ತಾಗಿ ಸಂಧ್ಯಾವಂದನೆಗಳನ್ನು ಮಾಡಿ ನಂತರ ಗಜಾಹ್ವಯ ಪುರವನ್ನು ಪ್ರವೇಶಿಸಿದರು.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಯುಧಿಷ್ಠಿರಾದಿಸ್ವಸ್ಥಾನಗಮನೇ ಅಷ್ಠಪಂಚಶತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಯುಧಿಷ್ಠಿರಾದಿಗಳ ಸ್ವಸ್ಥಾನಗಮನ ಎನ್ನುವ ಐವತ್ತೆಂಟನೇ ಅಧ್ಯಾಯವು.

[1] ನ ಶಕ್ಯಂ ವೃದುನಾ ವೋಢುಮಾಯಾಸಸ್ಥಾನಮುತ್ತಮಮ್| ಅರ್ಥಾತ್ ಮೃದುಸ್ವಭಾವದಿಂದ ರಾಜ್ಯವನ್ನು ಭರಿಸಲು ಶಕ್ಯವಿಲ್ಲ. ರಾಜ್ಯವನ್ನು ಆಳುವುದೆಂಬುದು ಅತ್ಯಂತ ಪರಿಶ್ರಮದಿಂದಲೇ ಸಾಧ್ಯವಾಗಬಲ್ಲ ಕಾರ್ಯವು ಎಂಬ ಪಾಠಾಂತರವಿದೆ.

Comments are closed.