ಶಾಂತಿ ಪರ್ವ: ರಾಜಧರ್ಮ ಪರ್ವ

೫೪

12054001 ಜನಮೇಜಯ ಉವಾಚ

12054001a ಧರ್ಮಾತ್ಮನಿ ಮಹಾಸತ್ತ್ವೇ ಸತ್ಯಸಂಧೇ ಜಿತಾತ್ಮನಿ|

12054001c ದೇವವ್ರತೇ ಮಹಾಭಾಗೇ ಶರತಲ್ಪಗತೇಽಚ್ಯುತೇ||

12054002a ಶಯಾನೇ ವೀರಶಯನೇ ಭೀಷ್ಮೇ ಶಂತನುನಂದನೇ|

12054002c ಗಾಂಗೇಯೇ ಪುರುಷವ್ಯಾಘ್ರೇ ಪಾಂಡವೈಃ ಪರ್ಯುಪಸ್ಥಿತೇ||

12054003a ಕಾಃ ಕಥಾಃ ಸಮವರ್ತಂತ ತಸ್ಮಿನ್ವೀರಸಮಾಗಮೇ|

12054003c ಹತೇಷು ಸರ್ವಸೈನ್ಯೇಷು ತನ್ಮೇ ಶಂಸ ಮಹಾಮುನೇ||

ಜನಮೇಜಯನು ಹೇಳಿದನು: “ಮಹಾಮುನೇ! ವೀರಸಮಾಗಮದಲ್ಲಿ ಸರ್ವಸೇನೆಗಳು ಹತಗೊಂಡ ನಂತರ ಆ ಧರ್ಮಾತ್ಮ, ಮಹಾಸತ್ತ್ವಯುತ, ಸತ್ಯಸಂಧ, ಜಿತಾತ್ಮ, ಮಹಾಭಾಗ, ಅಚ್ಯುತ, ಶರತಲ್ಪಗತ, ಮತ್ತು ವೀರಶಯನನಾಗಿದ್ದ ಶಂತನುನಂದನ ಗಾಂಗೇಯ ದೇವವ್ರತ ಭೀಷ್ಮ ಹಾಗೂ ಪಾಂಡವರು ಒಟ್ಟಿಗೇ ಕುಳಿತುಕೊಂಡಿರಲು, ಯಾವ ಮಾತುಕಥೆಗಳು ನಡೆದವು? ಅದನ್ನು ನನಗೆ ಹೇಳಬೇಕು!”

12054004 ವೈಶಂಪಾಯನ ಉವಾಚ

12054004a ಶರತಲ್ಪಗತೇ ಭೀಷ್ಮೇ ಕೌರವಾಣಾಂ ಧುರಂಧರೇ|

12054004c ಆಜಗ್ಮುಋಷಯಃ ಸಿದ್ಧಾ ನಾರದಪ್ರಮುಖಾ ನೃಪ||

ವೈಶಂಪಾಯನನು ಹೇಳಿದನು: “ನೃಪ! ಶರತಲ್ಪಗತನಾಗಿರುವ ಕೌರವರ ಧುರಂಧರ ಭೀಷ್ಮನ ಬಳಿ ನಾರದಪ್ರಮುಖ ಋಷಿಗಳು ಮತ್ತು ಸಿದ್ಧರು ಆಗಮಿಸಿದರು.

12054005a ಹತಶಿಷ್ಟಾಶ್ಚ ರಾಜಾನೋ ಯುಧಿಷ್ಠಿರಪುರೋಗಮಾಃ|

12054005c ಧೃತರಾಷ್ಟ್ರಶ್ಚ ಕೃಷ್ಣಶ್ಚ ಭೀಮಾರ್ಜುನಯಮಾಸ್ತಥಾ||

12054006a ತೇಽಭಿಗಮ್ಯ ಮಹಾತ್ಮಾನೋ ಭರತಾನಾಂ ಪಿತಾಮಹಮ್|

12054006c ಅನ್ವಶೋಚಂತ ಗಾಂಗೇಯಮಾದಿತ್ಯಂ ಪತಿತಂ ಯಥಾ||

ಮಹಾತ್ಮ ಯುಧಿಷ್ಠಿರನೇ ಮೊದಲಾದ ಅಳಿದುಳಿದ ರಾಜರು, ಧೃತರಾಷ್ಟ್ರ, ಕೃಷ್ಣ, ಭೀಮಾರ್ಜುನರು, ಯಮಳರು ಕೆಳಗೆ ಬಿದ್ದ ಸೂರ್ಯನಂತಿದ್ದ ಭಾರತರ ಪಿತಾಮಹ ಗಾಂಗೇಯನ ಬಳಿಸಾರಿ ಶೋಕಿಸಿದರು.

12054007a ಮುಹೂರ್ತಮಿವ ಚ ಧ್ಯಾತ್ವಾ ನಾರದೋ ದೇವದರ್ಶನಃ|

12054007c ಉವಾಚ ಪಾಂಡವಾನ್ಸರ್ವಾನ್ಹತಶಿಷ್ಟಾಂಶ್ಚ ಪಾರ್ಥಿವಾನ್||

ದೇವದರ್ಶನ ನಾರದನು ಮುಹೂರ್ತಕಾಲ ಧ್ಯಾನಿಸಿ ಪಾಂಡವರೆಲ್ಲರನ್ನೂ ಮತ್ತು ಅಳಿದುಳಿದ ಪಾರ್ಥಿವರನ್ನೂ ಉದ್ದೇಶಿಸಿ ಹೇಳಿದನು.

12054008a ಪ್ರಾಪ್ತಕಾಲಂ ಚ ಆಚಕ್ಷೇ ಭೀಷ್ಮೋಽಯಮನುಯುಜ್ಯತಾಮ್|

12054008c ಅಸ್ತಮೇತಿ ಹಿ ಗಾಂಗೇಯೋ ಭಾನುಮಾನಿವ ಭಾರತ||

“ಭಾರತ! ಅಸ್ತಮಿಸುವ ಸೂರ್ಯನಂತಿರುವ ಗಾಂಗೇಯನೊಡನೆ ಸಂಭಾಷಣೆಗೆ ತೊಡಗುವ ಸಮಯವು ಪ್ರಾಪ್ತವಾಗಿದೆ.

12054009a ಅಯಂ ಪ್ರಾಣಾನುತ್ಸಿಸೃಕ್ಷುಸ್ತಂ ಸರ್ವೇಽಭ್ಯೇತ್ಯ ಪೃಚ್ಚತ|

12054009c ಕೃತ್ಸ್ನಾನ್ಹಿ ವಿವಿಧಾನ್ಧರ್ಮಾಂಶ್ಚಾತುರ್ವರ್ಣ್ಯಸ್ಯ ವೇತ್ತ್ಯಯಮ್||

ಇವನು ಪ್ರಾಣಗಳನ್ನು ತೊರೆಯುವ ಮೊದಲು ಎಲ್ಲವನ್ನೂ ಕೇಳಬೇಕು. ಏಕೆಂದರೆ ಇವನು ಚಾತುರ್ವರ್ಣಗಳ ವಿವಿಧ ಧರ್ಮಗಳನ್ನೂ ಸಂಪೂರ್ಣವಾಗಿ ತಿಳಿದಿರುತ್ತಾನೆ.

12054010a ಏಷ ವೃದ್ಧಃ ಪುರಾ ಲೋಕಾನ್ಸಂಪ್ರಾಪ್ನೋತಿ ತನುತ್ಯಜಾಮ್|

12054010c ತಂ ಶೀಘ್ರಮನುಯುಂಜಧ್ವಂ ಸಂಶಯಾನ್ಮನಸಿ ಸ್ಥಿತಾನ್||

ಈ ವೃದ್ಧನು ತನುವನ್ನು ತ್ಯಜಿಸಿ ಲೋಕಗಳಿಗೆ ತೆರಳುವ ಮೊದಲೇ ಶೀಘ್ರವಾಗಿ ಮನಸ್ಸಿನಲ್ಲಿರುವ ಸಂಶಯಗಳನ್ನು ಕೇಳಬೇಕು!”

12054011a ಏವಮುಕ್ತಾ ನಾರದೇನ ಭೀಷ್ಮಮೀಯುರ್ನರಾಧಿಪಾಃ|

12054011c ಪ್ರಷ್ಟುಂ ಚಾಶಕ್ನುವಂತಸ್ತೇ ವೀಕ್ಷಾಂ ಚಕ್ರುಃ ಪರಸ್ಪರಮ್||

ಭೀಷ್ಮನ ಕುರಿತು ನಾರದನು ಹೀಗೆ ಹೇಳಲು ಅಲ್ಲಿದ್ದ ನರಾಧಿಪರು ಏನನ್ನೂ ಕೇಳಲು ಶಕ್ತರಾಗದೇ ಪರಸ್ಪರರನ್ನು ನೋಡತೊಡಗಿದರು.

12054012a ಅಥೋವಾಚ ಹೃಷೀಕೇಶಂ ಪಾಂಡುಪುತ್ರೋ ಯುಧಿಷ್ಠಿರಃ|

12054012c ನಾನ್ಯಸ್ತ್ವದ್ದೇವಕೀಪುತ್ರ ಶಕ್ತಃ ಪ್ರಷ್ಟುಂ ಪಿತಾಮಹಮ್||

ಆಗ ಪಾಂಡುಪುತ್ರ ಯುಧಿಷ್ಠಿರನು ಹೃಷೀಕೇಶನಿಗೆ ಹೇಳಿದನು: “ದೇವಕೀಪುತ್ರ! ನಿನ್ನನ್ನು ಬಿಟ್ಟು ಬೇರೆ ಯಾರೂ ಪಿತಾಮಹನನ್ನು ಪ್ರಶ್ನಿಸಲು ಶಕ್ತರಿಲ್ಲ!

12054013a ಪ್ರವ್ಯಾಹಾರಯ ದುರ್ಧರ್ಷ ತ್ವಮಗ್ರೇ ಮಧುಸೂದನ|

12054013c ತ್ವಂ ಹಿ ನಸ್ತಾತ ಸರ್ವೇಷಾಂ ಸರ್ವಧರ್ಮವಿದುತ್ತಮಃ||

ಮಧುಸೂದನ! ದುರ್ಧರ್ಷ! ನೀನೇ ಮುಂದೆನಿಂತು ವ್ಯವಹರಿಸು! ಏಕೆಂದರೆ ಅಯ್ಯಾ! ನೀನೇ ಎಲ್ಲರ ಎಲ್ಲ ಧರ್ಮಗಳನ್ನೂ ತಿಳಿದಿರುವೆ!”

12054014a ಏವಮುಕ್ತಃ ಪಾಂಡವೇನ ಭಗವಾನ್ಕೇಶವಸ್ತದಾ|

12054014c ಅಭಿಗಮ್ಯ ದುರಾಧರ್ಷಂ ಪ್ರವ್ಯಾಹಾರಯದಚ್ಯುತಃ||

ಪಾಂಡವನು ಹೀಗೆ ಹೇಳಲು ಭಗವಾನ್ ಅಚ್ಯುತ ಕೇಶವನು ದುರಾಧರ್ಷ ಭೀಷ್ಮನ ಬಳಿಸಾರಿ ಮಾತನಾಡಿದನು:

12054015 ವಾಸುದೇವ ಉವಾಚ

12054015a ಕಚ್ಚಿತ್ಸುಖೇನ ರಜನೀ ವ್ಯುಷ್ಟಾ ತೇ ರಾಜಸತ್ತಮ|

12054015c ವಿಸ್ಪಷ್ಟಲಕ್ಷಣಾ ಬುದ್ಧಿಃ ಕಚ್ಚಿಚ್ಚೋಪಸ್ಥಿತಾ ತವ||

ವಾಸುದೇವನು ಹೇಳಿದನು: “ರಾಜಸತ್ತಮ! ನೀನು ರಾತ್ರಿಯನ್ನು ಸುಖವಾಗಿ ಕಳೆದೆಯಲ್ಲವೇ? ನಿನ್ನ ಬುದ್ಧಿಯು ಸ್ಥಿರವಾಗಿ, ಸ್ಪಷ್ಟವಾಗಿ ಕಾಣುತ್ತಿದೆ ತಾನೇ?

12054016a ಕಚ್ಚಿಜ್ಞಾನಾನಿ ಸರ್ವಾಣಿ ಪ್ರತಿಭಾಂತಿ ಚ ತೇಽನಘ|

12054016c ನ ಗ್ಲಾಯತೇ ಚ ಹೃದಯಂ ನ ಚ ತೇ ವ್ಯಾಕುಲಂ ಮನಃ||

ಅನಘ! ಸರ್ವ ಜ್ಞಾನಗಳೂ ನಿನಗೆ ಹೊಳೆಯುತ್ತಿವೆ ತಾನೇ? ಹೃದಯದಲ್ಲಿ ದುಃಖವಿಲ್ಲ ತಾನೇ? ಮನಸ್ಸು ವ್ಯಾಕುಲಗೊಂಡಿಲ್ಲ ತಾನೇ?”

12054017 ಭೀಷ್ಮ ಉವಾಚ

12054017a ದಾಹೋ ಮೋಹಃ ಶ್ರಮಶ್ಚೈವ ಕ್ಲಮೋ ಗ್ಲಾನಿಸ್ತಥಾ ರುಜಾ|

12054017c ತವ ಪ್ರಸಾದಾದ್ಗೋವಿಂದ ಸದ್ಯೋ ವ್ಯಪಗತಾನಘ||

ಭೀಷ್ಮನು ಹೇಳಿದನು: “ಗೋವಿಂದ! ಅನಘ! ನಿನ್ನ ಪ್ರಸಾದದಿಂದ ಬಾಯಾರಿಕೆ, ಮೋಹ, ಸುಸ್ತು, ನೋವು, ದುಃಖ ಮತ್ತು ರುಜಿನಗಳು ಸದ್ಯ ಹೊರಟುಹೋಗಿವೆ!

12054018a ಯಚ್ಚ ಭೂತಂ ಭವಿಷ್ಯಚ್ಚ ಭವಚ್ಚ ಪರಮದ್ಯುತೇ|

12054018c ತತ್ಸರ್ವಮನುಪಶ್ಯಾಮಿ ಪಾಣೌ ಫಲಮಿವಾಹಿತಮ್||

ಪರಮದ್ಯುತೇ! ಕೈಯಲ್ಲಿರುವ ಫಲದಂತೆ ಭೂತ-ಭವ್ಯ-ವರ್ತಮಾನಗಳನ್ನು ಸ್ವಚ್ಛವಾಗಿ ಕಾಣುತ್ತಿದ್ದೇನೆ.

12054019a ವೇದೋಕ್ತಾಶ್ಚೈವ ಯೇ ಧರ್ಮಾ ವೇದಾಂತನಿಹಿತಾಶ್ಚ ಯೇ|

12054019c ತಾನ್ಸರ್ವಾನ್ಸಂಪ್ರಪಶ್ಯಾಮಿ ವರದಾನಾತ್ತವಾಚ್ಯುತ||

ಅಚ್ಯುತ! ನಿನ್ನ ವರದಾನದಿಂದ ವೇದಗಳು ಹೇಳಿರುವ ಧರ್ಮಗಳೂ, ವೇದಾಂತಗಳ ನಿಶ್ಚಯಗಳೂ ಎಲ್ಲವನ್ನೂ ನಾನು ಕಾಣುತ್ತಿದ್ದೇನೆ.

12054020a ಶಿಷ್ಟೈಶ್ಚ ಧರ್ಮೋ ಯಃ ಪ್ರೋಕ್ತಃ ಸ ಚ ಮೇ ಹೃದಿ ವರ್ತತೇ|

12054020c ದೇಶಜಾತಿಕುಲಾನಾಂ ಚ ಧರ್ಮಜ್ಞೋಽಸ್ಮಿ ಜನಾರ್ದನ||

ಶಿಷ್ಟರು ಯಾವುದನ್ನು ಧರ್ಮವೆಂದು ಕರೆಯುತ್ತಾರೆಯೋ ಅದೂ ಕೂಡ ನನ್ನ ಹೃದಯದಲ್ಲಿ ಪ್ರತಿಷ್ಠಿತವಾಗಿದೆ. ಜನಾರ್ದನ! ದೇಶ-ಜಾತಿ-ಕುಲಗಳ ಧರ್ಮಗಳನ್ನೂ ತಿಳಿದಿರುತ್ತೇನೆ.

12054021a ಚತುರ್ಷ್ವಾಶ್ರಮಧರ್ಮೇಷು ಯೋಽರ್ಥಃ ಸ ಚ ಹೃದಿ ಸ್ಥಿತಃ|

12054021c ರಾಜಧರ್ಮಾಂಶ್ಚ ಸಕಲಾನವಗಚ್ಚಾಮಿ ಕೇಶವ||

ಕೇಶವ! ನಾಲ್ಕು ಆಶ್ರಮಧರ್ಮಗಳೂ ಅವುಗಳ ಅರ್ಥಗಳೂ ನನ್ನ ಹೃದಯದಲ್ಲಿ ನೆಲೆಸಿವೆ. ಸಕಲ ರಾಜಧರ್ಮಗಳನ್ನೂ ತಿಳಿದುಕೊಂಡಿದ್ದೇನೆ.

12054022a ಯತ್ರ ಯತ್ರ ಚ ವಕ್ತವ್ಯಂ ತದ್ವಕ್ಷ್ಯಾಮಿ ಜನಾರ್ದನ|

12054022c ತವ ಪ್ರಸಾದಾದ್ಧಿ ಶುಭಾ ಮನೋ ಮೇ ಬುದ್ಧಿರಾವಿಶತ್||

ಜನಾರ್ದನ! ಯಾವ ಯಾವ ವಿಷಯದ ಕುರಿತು ಹೇಳಬೇಕೋ ಅದನ್ನು ನಾನು ಹೇಳುತ್ತೇನೆ. ನಿನ್ನ ಪ್ರಸಾದದಿಂದ ನನ್ನ ನಿರ್ಮಲ ಮನಸ್ಸನ್ನು ಶುಭ ಬುದ್ಧಿಯು ಪ್ರವೇಶಿಸಿದೆ.

12054023a ಯುವೇವ ಚಾಸ್ಮಿ ಸಂವೃತ್ತಸ್ತ್ವದನುಧ್ಯಾನಬೃಂಹಿತಃ|

12054023c ವಕ್ತುಂ ಶ್ರೇಯಃ ಸಮರ್ಥೋಽಸ್ಮಿ ತ್ವತ್ಪ್ರಸಾದಾಜ್ಜನಾರ್ದನ||

ಜನಾರ್ದನ! ಸದಾ ನಿನ್ನನ್ನೇ ಧ್ಯಾನಿಸುತ್ತಿರುವ ನಾನು ವೃದ್ಧನಾದರೂ ಯುವಕನಂತಾಗಿಬಿಟ್ಟಿದ್ದೇನೆ. ನಿನ್ನ ಪ್ರಸಾದದಿಂದ ಶ್ರೇಯವಾದುದನ್ನು ಹೇಳಲು ಸಮರ್ಥನಾಗಿದ್ದೇನೆ.

12054024a ಸ್ವಯಂ ಕಿಮರ್ಥಂ ತು ಭವಾನ್ಶ್ರೇಯೋ ನ ಪ್ರಾಹ ಪಾಂಡವಮ್|

12054024c ಕಿಂ ತೇ ವಿವಕ್ಷಿತಂ ಚಾತ್ರ ತದಾಶು ವದ ಮಾಧವ||

ಮಾಧವ! ಆದರೆ ಸ್ವಯಂ ನೀನೇ ಪಾಂಡವರಿಗೆ ಶ್ರೇಯವಾದುದನ್ನು ಏಕೆ ಹೇಳುತ್ತಿಲ್ಲ? ನಾನೇ ಅವುಗಳನ್ನು ಹೇಳಬೇಕೆನ್ನುವುದರಲ್ಲಿ ನಿನ್ನ ಉದ್ದೇಶವಾದರೂ ಏನು ಅದನ್ನು ಬೇಗನೇ ಹೇಳು!”

12054025 ವಾಸುದೇವ ಉವಾಚ

12054025a ಯಶಸಃ ಶ್ರೇಯಸಶ್ಚೈವ ಮೂಲಂ ಮಾಂ ವಿದ್ಧಿ ಕೌರವ|

12054025c ಮತ್ತಃ ಸರ್ವೇಽಭಿನಿರ್ವೃತ್ತಾ ಭಾವಾಃ ಸದಸದಾತ್ಮಕಾಃ||

ವಾಸುದೇವನು ಹೇಳಿದನು: “ಕೌರವ! ಎಲ್ಲರ ಶ್ರೇಯಸ್ಸು ಮತ್ತು ಯಶಸ್ಸುಗಳಿಗೆ ನಾನೇ ಮೂಲನೆಂದು ತಿಳಿ. ಪ್ರಪಂಚದಲ್ಲಿರುವ ಸತ್ ಮತ್ತು ಅಸತ್ ಎಲ್ಲ ಭಾವಗಳೂ ನನ್ನಿಂದಲೇ ಪ್ರಾದುರ್ಭವಿಸಿವೆ.

12054026a ಶೀತಾಂಶುಶ್ಚಂದ್ರ ಇತ್ಯುಕ್ತೇ ಕೋ ಲೋಕೇ ವಿಸ್ಮಯಿಷ್ಯತಿ|

12054026c ತಥೈವ ಯಶಸಾ ಪೂರ್ಣೇ ಮಯಿ ಕೋ ವಿಸ್ಮಯಿಷ್ಯತಿ||

ಚಂದ್ರನು ಶೀತಲಕಿರಣಗಳನ್ನು ಹೊಂದಿದ್ದಾನೆ ಎಂದು ಹೇಳಿದರೆ ಲೋಕದಲ್ಲಿ ಯಾರುತಾನೇ ವಿಸ್ಮಯಗೊಳ್ಳುತ್ತಾರೆ? ಹಾಗೆಯೇ ಯಶಸ್ಸಿನಿಂದ ಪೂರ್ಣನಾಗಿರುವ ನಾನು ಉಪದೇಶನೀಡಿದರೆ ಯಾರುತಾನೇ ವಿಸ್ಮಯಗೊಳ್ಳುತ್ತಾರೆ?

12054027a ಆಧೇಯಂ ತು ಮಯಾ ಭೂಯೋ ಯಶಸ್ತವ ಮಹಾದ್ಯುತೇ|

12054027c ತತೋ ಮೇ ವಿಪುಲಾ ಬುದ್ಧಿಸ್ತ್ವಯಿ ಭೀಷ್ಮ ಸಮಾಹಿತಾ||

ಮಹಾದ್ಯುತೇ! ಭೀಷ್ಮ! ಈ ಜಗತ್ತಿನಲ್ಲಿ ನಿನ್ನ ಯಶಸ್ಸನ್ನು ಇನ್ನೂ ಹೆಚ್ಚಿಸಬೇಕೆಂಬುದೇ ನನ್ನ ಆಶಯವಾಗಿದೆ. ಆದುದರಿಂದ ನನ್ನ ವಿಪುಲ ಬುದ್ಧಿಯನ್ನು ನಿನ್ನಲ್ಲಿಯೇ ಒಂದುಗೂಡಿಸಿದ್ದೇನೆ.

12054028a ಯಾವದ್ಧಿ ಪೃಥಿವೀಪಾಲ ಪೃಥಿವೀ ಸ್ಥಾಸ್ಯತೇ ಧ್ರುವಾ|

12054028c ತಾವತ್ತವಾಕ್ಷಯಾ ಕೀರ್ತಿರ್ಲೋಕಾನನು ಚರಿಷ್ಯತಿ||

ಪೃಥಿವೀಪಾಲ! ಎಲ್ಲಿಯವರೆಗೆ ಈ ಪೃಥ್ವಿಯು ಸ್ಥಿರವಾಗಿ ನಿಂತಿರುವುದೋ ಅಲ್ಲಿಯವರೆಗೆ ನಿನ್ನ ಅಕ್ಷಯ ಕೀರ್ತಿಯು ಲೋಕಗಳಲ್ಲಿ ವ್ಯಾಪ್ತವಾಗಿರುತ್ತದೆ.

12054029a ಯಚ್ಚ ತ್ವಂ ವಕ್ಷ್ಯಸೇ ಭೀಷ್ಮ ಪಾಂಡವಾಯಾನುಪೃಚ್ಚತೇ|

12054029c ವೇದಪ್ರವಾದಾ ಇವ ತೇ ಸ್ಥಾಸ್ಯಂತಿ ವಸುಧಾತಲೇ||

ಭೀಷ್ಮ! ಪಾಂಡವನು ಕೇಳಿದುದಕ್ಕೆ ನೀನು ಏನನ್ನು ಹೇಳುತ್ತೀಯೋ ಅದು ವಸುಧಾತಲದಲ್ಲಿ ವೇದವಾಖ್ಯವಾಗಿ ನಿಲ್ಲುತ್ತದೆ.

12054030a ಯಶ್ಚೈತೇನ ಪ್ರಮಾಣೇನ ಯೋಕ್ಷ್ಯತ್ಯಾತ್ಮಾನಮಾತ್ಮನಾ|

12054030c ಸ ಫಲಂ ಸರ್ವಪುಣ್ಯಾನಾಂ ಪ್ರೇತ್ಯ ಚಾನುಭವಿಷ್ಯತಿ||

ನಿನ್ನ ಮಾತುಗಳನ್ನು ಪ್ರಮಾಣಭೂತವನ್ನಾಗಿಟ್ಟುಕೊಂಡು ಯಾರು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾನೆಯೋ ಅವನು ಆ ಸರ್ವಪುಣ್ಯಗಳ ಫಲಗಳನ್ನೂ ಮರಣಾನಂತರದಲ್ಲಿ ಪಡೆದುಕೊಳ್ಳುತ್ತಾನೆ.

12054031a ಏತಸ್ಮಾತ್ಕಾರಣಾದ್ಭೀಷ್ಮ ಮತಿರ್ದಿವ್ಯಾ ಮಯಾ ಹಿ ತೇ|

12054031c ದತ್ತಾ ಯಶೋ ವಿಪ್ರಥೇತ ಕಥಂ ಭೂಯಸ್ತವೇತಿ ಹ||

ಭೀಷ್ಮ! ಈ ಕಾರಣದಿಂದಲೇ ನಿನ್ನ ಯಶಸ್ಸನ್ನು ಹೇಗೆ ಹೆಚ್ಚಿಸಬೇಕು ಎಂದು ಆಲೋಚಿಸಿ, ನನ್ನ ದಿವ್ಯ ಮತಿಯನ್ನು ನಿನಗೆ ಇತ್ತಿದ್ದೇನೆ.

12054032a ಯಾವದ್ಧಿ ಪ್ರಥತೇ ಲೋಕೇ ಪುರುಷಸ್ಯ ಯಶೋ ಭುವಿ|

12054032c ತಾವತ್ತಸ್ಯಾಕ್ಷಯಂ ಸ್ಥಾನಂ ಭವತೀತಿ ವಿನಿಶ್ಚಿತಮ್||

ಎಲ್ಲಿಯವರೆಗೆ ಪುರುಷನ ಯಶಸ್ಸು ಭುವಿಯ ಜನರಲ್ಲಿ ಹರಡಿರುತ್ತದೆಯೋ ಅಲ್ಲಿಯವರೆಗೆ ಅವನ ಸ್ಥಾನವು ಅಕ್ಷಯವಾಗಿರುತ್ತದೆ ಎನ್ನುವುದು ನಿಶ್ಚಿತವಾಗಿದೆ.

12054033a ರಾಜಾನೋ ಹತಶಿಷ್ಟಾಸ್ತ್ವಾಂ ರಾಜನ್ನಭಿತ ಆಸತೇ|

12054033c ಧರ್ಮಾನನುಯುಯುಕ್ಷಂತಸ್ತೇಭ್ಯಃ ಪ್ರಬ್ರೂಹಿ ಭಾರತ||

ರಾಜನ್! ಭಾರತ! ಅಳಿದುಳಿದ ರಾಜರು ನಿನ್ನಿಂದ ಧರ್ಮವನ್ನು ತಿಳಿದುಕೊಳ್ಳಬೇಕೆಂಬ ಇಚ್ಛೆಯಿಂದ ನಿನ್ನ ಸುತ್ತಲೂ ಕುಳಿತಿದ್ದಾರೆ. ಅವರೆಲ್ಲರಿಗೂ ಉಪದೇಶಿಸು!

12054034a ಭವಾನ್ಹಿ ವಯಸಾ ವೃದ್ಧಃ ಶ್ರುತಾಚಾರಸಮನ್ವಿತಃ|

12054034c ಕುಶಲೋ ರಾಜಧರ್ಮಾಣಾಂ ಪೂರ್ವೇಷಾಮಪರಾಶ್ಚ ಯೇ||

ನೀನು ವಯಸ್ಸಿನಲ್ಲಿ ವೃದ್ಧನಾಗಿರುವೆ. ಶಾಸ್ತ್ರಜ್ಞಾನ ಮತ್ತು ಸದಾಚಾರಗಳಿಂದ ಕೂಡಿರುವೆ. ಹಿಂದಿದ್ದ ಮತ್ತು ಮುಂದೆ ಬೇಕಾಗುವ ರಾಜಧರ್ಮಗಳಲ್ಲಿ ಕುಶಲನಾಗಿರುವೆ.

12054035a ಜನ್ಮಪ್ರಭೃತಿ ತೇ ಕಶ್ಚಿದ್ವೃಜಿನಂ ನ ದದರ್ಶ ಹ|

12054035c ಜ್ಞಾತಾರಮನುಧರ್ಮಾಣಾಂ ತ್ವಾಂ ವಿದುಃ ಸರ್ವಪಾರ್ಥಿವಾಃ||

ಜನ್ಮಪ್ರಭೃತಿ ನಿನ್ನಲ್ಲಿ ಯಾವುದೇ ದೋಷವನ್ನೂ ಕಂಡಿಲ್ಲ. ನೀನು ಸರ್ವಧರ್ಮಗಳನ್ನು ತಿಳಿದಿರುವೆ ಎಂದು ಸರ್ವಪಾರ್ಥಿವರೂ ಅರಿತಿದ್ದಾರೆ.

12054036a ತೇಭ್ಯಃ ಪಿತೇವ ಪುತ್ರೇಭ್ಯೋ ರಾಜನ್ಬ್ರೂಹಿ ಪರಂ ನಯಮ್|

12054036c ಋಷಯಶ್ಚ ಹಿ ದೇವಾಶ್ಚ ತ್ವಯಾ ನಿತ್ಯಮುಪಾಸಿತಾಃ||

ರಾಜನ್! ತಂದೆಯು ಮಕ್ಕಳಿಗೆ ಉಪದೇಶಿಸುವಂತೆ ಇವರಿಗೆ ಪರಮ ನೀತಿಯನ್ನು ಉಪದೇಶಿಸು. ಋಷಿಗಳನ್ನೂ ದೇವತೆಗಳನ್ನೂ ನೀನು ನಿತ್ಯವೂ ಉಪಾಸಿಸಿರುವೆ.

12054037a ತಸ್ಮಾದ್ವಕ್ತವ್ಯಮೇವೇಹ ತ್ವಯಾ ಪಶ್ಯಾಮ್ಯಶೇಷತಃ|

12054037c ಧರ್ಮಾನ್ಶುಶ್ರೂಷಮಾಣೇಭ್ಯಃ ಪೃಷ್ಟೇನ ಚ ಸತಾ ಪುನಃ||

12054038a ವಕ್ತವ್ಯಂ ವಿದುಷಾ ಚೇತಿ ಧರ್ಮಮಾಹುರ್ಮನೀಷಿಣಃ|

12054038c ಅಪ್ರತಿಬ್ರುವತಃ ಕಷ್ಟೋ ದೋಷೋ ಹಿ ಭವತಿ ಪ್ರಭೋ||

ಆದುದರಿಂದ ಇವರಿಗೆ ನೀನು ಸಂಪೂರ್ಣವಾಗಿ ಉಪದೇಶಿಸಬೇಕೆಂದು ನನಗನ್ನಿಸುತ್ತದೆ. ಧರ್ಮವನ್ನು ತಿಳಿಯಲು ಇಚ್ಛೆಯುಳ್ಳವರು ವಿದುಷನನ್ನು ಕೇಳಿದರೆ ಆ ಧರ್ಮವನ್ನು ತಿಳಿಸಬೇಕೆಂದು ಮನೀಷಿಣರು ಹೇಳುತ್ತಾರೆ. ಪ್ರಭೋ! ಹಾಗೆ ಹೇಳದೇ ಇದ್ದವನಿಗೆ ಕಷ್ಟವೂ ದೋಷವೂ ಆಗುತ್ತದೆ.

12054039a ತಸ್ಮಾತ್ಪುತ್ರೈಶ್ಚ ಪೌತ್ರೈಶ್ಚ ಧರ್ಮಾನ್ಪೃಷ್ಟಃ ಸನಾತನಾನ್|

12054039c ವಿದ್ವಾಜ್ಜಿಜ್ಞಾಸಮಾನೈಸ್ತ್ವಂ ಪ್ರಬ್ರೂಹಿ ಭರತರ್ಷಭ||

ಭರತರ್ಷಭ! ಆದುದರಿಂದ ಸನಾತನ ಧರ್ಮದ ಕುರಿತು ಕೇಳುತ್ತಿರುವ ನಿನ್ನ ಪುತ್ರ-ಪೌತ್ರರಿಗೆ ವಿದ್ವಾನನೂ ಜಿಜ್ಞಾಸೆಮಾಡಬಲ್ಲನೂ ಆದ ನೀನು ಉಪದೇಶಿಸು!””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಕೃಷ್ಣವಾಕ್ಯೇ ಚತುಃಪಂಚಶತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಕೃಷ್ಣವಾಕ್ಯ ಎನ್ನುವ ಐವತ್ನಾಲ್ಕನೇ ಅಧ್ಯಾಯವು.

Comments are closed.