ಶಾಂತಿ ಪರ್ವ: ರಾಜಧರ್ಮ ಪರ್ವ

೫೦

12050001 ವೈಶಂಪಾಯನ ಉವಾಚ

12050001a ತತೋ ರಾಮಸ್ಯ ತತ್ಕರ್ಮ ಶ್ರುತ್ವಾ ರಾಜಾ ಯುಧಿಷ್ಠಿರಃ|

12050001c ವಿಸ್ಮಯಂ ಪರಮಂ ಗತ್ವಾ ಪ್ರತ್ಯುವಾಚ ಜನಾರ್ದನಮ್||

ವೈಶಂಪಾಯನನು ಹೇಳಿದನು: “ರಾಮನ ಆ ಕರ್ಮದ ಕುರಿತು ಕೇಳಿದ ರಾಜಾ ಯುಧಿಷ್ಠಿರನು ಪರಮ ವಿಸ್ಮಿತನಾಗಿ ಜನಾರ್ದನನಲ್ಲಿ ಪುನಃ ಕೇಳಿದನು:

12050002a ಅಹೋ ರಾಮಸ್ಯ ವಾರ್ಷ್ಣೇಯ ಶಕ್ರಸ್ಯೇವ ಮಹಾತ್ಮನಃ|

12050002c ವಿಕ್ರಮೋ ಯೇನ ವಸುಧಾ ಕ್ರೋಧಾನ್ನಿಃಕ್ಷತ್ರಿಯಾ ಕೃತಾ||

“ಆಹಾ ಮಹಾತ್ಮ ರಾಮನ ವಿಕ್ರಮವೇ! ವಾರ್ಷ್ಣೇಯ! ಶಕ್ರನಂಥಹ ವಿಕ್ರಮವಿದ್ದ ಅವನು ಕ್ರೋಧದಿಂದ ಈ ವಸುಧೆಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿದನು!

12050003a ಗೋಭಿಃ ಸಮುದ್ರೇಣ ತಥಾ ಗೋಲಾಂಗೂಲರ್ಕ್ಷವಾನರೈಃ|

12050003c ಗುಪ್ತಾ ರಾಮಭಯೋದ್ವಿಗ್ನಾಃ ಕ್ಷತ್ರಿಯಾಣಾಂ ಕುಲೋದ್ವಹಾಃ||

ಆದರೆ ರಾಮನ ಭಯದಿಂದ ಉದ್ವಿಗ್ನರಾಗಿದ್ದ ಕ್ಷತ್ರಿಯರ ಕುಲೋದ್ಧಾರಕರನ್ನು ಗೋವುಗಳು, ಸಮುದ್ರ, ಗೋಲಾಂಗೂಲ ವಾನರರು ಮತ್ತು ಕರಡಿಗಳು ರಹಸ್ಯದಿಂದ ರಕ್ಷಿಸಿದವು.

12050004a ಅಹೋ ಧನ್ಯೋ ಹಿ ಲೋಕೋಽಯಂ ಸಭಾಗ್ಯಾಶ್ಚ ನರಾ ಭುವಿ|

12050004c ಯತ್ರ ಕರ್ಮೇದೃಶಂ ಧರ್ಮ್ಯಂ ದ್ವಿಜೇನ ಕೃತಮಚ್ಯುತ||

ಆಹಾ! ಈ ಲೋಕವೇ ಧನ್ಯವಾಯಿತು! ಭುವಿಯ ನರರೂ ಭಾಗ್ಯವಂತರೇ! ಅಚ್ಯುತ! ಆ ದ್ವಿಜನು ತನ್ನ ಈ ಕರ್ಮದಿಂದ ಧರ್ಮವನ್ನು ಸ್ಥಾಪಿಸಿದನು!”

12050005a ತಥಾ ಯಾಂತೌ ತದಾ ತಾತ ತಾವಚ್ಯುತಯುಧಿಷ್ಠಿರೌ|

12050005c ಜಗ್ಮತುರ್ಯತ್ರ ಗಾಂಗೇಯಃ ಶರತಲ್ಪಗತಃ ಪ್ರಭುಃ||

ಮಗೂ! ಹೀಗೆ ಅಚ್ಯುತ-ಯುಧಿಷ್ಠಿರರು ಪರಸ್ಪರರಲ್ಲಿ ಮಾತನಾಡಿಕೊಳ್ಳುತ್ತಾ ಪ್ರಭು ಗಾಂಗೇಯನು ಶರತಲ್ಪತನಾಗಿದ್ದಲ್ಲಿಗೆ ಬಂದರು.

12050006a ತತಸ್ತೇ ದದೃಶುರ್ಭೀಷ್ಮಂ ಶರಪ್ರಸ್ತರಶಾಯಿನಮ್|

12050006c ಸ್ವರಶ್ಮಿಜಾಲಸಂವೀತಂ ಸಾಯಂಸೂರ್ಯಮಿವಾನಲಮ್||

ಅಲ್ಲಿ ಅವರು ಶರಶಯನದಲ್ಲಿ ಮಲಗಿ ತನ್ನದೇ ರಶ್ಮಿಗಳ ಜಾಲದಿಂದ ಪ್ರಕಾಶಿಸುತ್ತಿದ್ದ ಸಾಯಂಕಾಲದ ಸೂರ್ಯನ ತೇಜಸ್ಸಿನಿಂದ ಬೆಳಗುತ್ತಿದ್ದ ಭೀಷ್ಮನನ್ನು ನೋಡಿದರು.

12050007a ಉಪಾಸ್ಯಮಾನಂ ಮುನಿಭಿರ್ದೇವೈರಿವ ಶತಕ್ರತುಮ್|

12050007c ದೇಶೇ ಪರಮಧರ್ಮಿಷ್ಠೇ ನದೀಮೋಘವತೀಮನು||

ಓಘವತೀ ನದಿಯ ತೀರದಲ್ಲಿ, ದೇವತೆಗಳಿಂದ ಶತಕ್ರತುವು ಹೇಗೋ ಹಾಗೆ ಮುನಿಗಳಿಂದ ಉಪಾಸನೆಗೊಳ್ಳುತ್ತಿರುವ ಆ ಪರಮಧರ್ಮಿಷ್ಟನನ್ನು ನೋಡಿದರು.

12050008a ದೂರಾದೇವ ತಮಾಲೋಕ್ಯ ಕೃಷ್ಣೋ ರಾಜಾ ಚ ಧರ್ಮರಾಟ್|

12050008c ಚತ್ವಾರಃ ಪಾಂಡವಾಶ್ಚೈವ ತೇ ಚ ಶಾರದ್ವತಾದಯಃ||

12050009a ಅವಸ್ಕಂದ್ಯಾಥ ವಾಹೇಭ್ಯಃ ಸಂಯಮ್ಯ ಪ್ರಚಲಂ ಮನಃ|

12050009c ಏಕೀಕೃತ್ಯೇಂದ್ರಿಯಗ್ರಾಮಮುಪತಸ್ಥುರ್ಮಹಾಮುನೀನ್||

ದೂರದಿಂದಲೇ ಅವನನ್ನು ನೋಡಿದ ಕೃಷ್ಣ, ರಾಜಾ ಧರ್ಮರಾಜ, ನಾಲ್ವರು ಪಾಂಡವರು, ಮತ್ತು ಶಾರದ್ವತರೇ ಮೊದಲಾದವರು, ಅವರವರ ವಾಹನಗಳಿಂದ ಕೆಳಕ್ಕಿಳಿದು, ಚಂಚಲ ಮನಸ್ಸನ್ನು ನಿಯಂತ್ರಿಸಿಕೊಂಡು, ಇಂದ್ರಿಯಗ್ರಾಮಗಳನ್ನು ಏಕೀಕರಿಸಿಕೊಂಡು ಆ ಮಹಾಮುನಿಗಳ ಬಳಿಬಂದರು.

12050010a ಅಭಿವಾದ್ಯ ಚ ಗೋವಿಂದಃ ಸಾತ್ಯಕಿಸ್ತೇ ಚ ಕೌರವಾಃ|

12050010c ವ್ಯಾಸಾದೀಂಸ್ತಾನೃಷೀನ್ಪಶ್ಚಾದ್ಗಾಂಗೇಯಮುಪತಸ್ಥಿರೇ||

ವ್ಯಾಸನೇ ಮೊದಲಾದ ಋಷಿಗಳನ್ನು ಅಭಿವಾದಿಸಿದ ನಂತರ ಗೋವಿಂದ, ಸಾತ್ಯಕಿ ಮತ್ತು ಕೌರವರು ಗಾಂಗೇಯನ ಬಳಿಸಾರಿದರು.

12050011a ತಪೋವೃದ್ಧಿಂ ತತಃ ಪೃಷ್ಟ್ವಾ ಗಾಂಗೇಯಂ ಯದುಕೌರವಾಃ|

12050011c ಪರಿವಾರ್ಯ ತತಃ ಸರ್ವೇ ನಿಷೇದುಃ ಪುರುಷರ್ಷಭಾಃ||

ಗಾಂಗೇಯನ ತಪೋವೃದ್ಧಿಯ ಕುರಿತು ಕೇಳಿ ಪುರುಷರ್ಷಭ ಯದು-ಕೌರವರು ಎಲ್ಲರೂ ಅವನನ್ನು ಸುತ್ತುವರೆದು ಕುಳಿತುಕೊಂಡರು.

12050012a ತತೋ ನಿಶಮ್ಯ ಗಾಂಗೇಯಂ ಶಾಮ್ಯಮಾನಮಿವಾನಲಮ್|

12050012c ಕಿಂ ಚಿದ್ದೀನಮನಾ ಭೀಷ್ಮಮಿತಿ ಹೋವಾಚ ಕೇಶವಃ||

ಆಗ ಆರಿಹೋಗುತ್ತಿರುವ ಯಜ್ಞೇಶ್ವರನಂತಿದ್ದ ಗಾಂಗೇಯನನ್ನು ನೋಡಿ ಕೇಶವನು ಸ್ವಲ್ಪ ದೀನಮನಸ್ಕನಾಗಿ “ಭೀಷ್ಮ!” ಎಂದು ಹೇಳಿದನು.

12050013a ಕಚ್ಚಿಜ್ಞಾನಾನಿ ತೇ ರಾಜನ್ಪ್ರಸನ್ನಾನಿ ಯಥಾ ಪುರಾ|

12050013c ಕಚ್ಚಿದವ್ಯಾಕುಲಾ ಚೈವ ಬುದ್ಧಿಸ್ತೇ ವದತಾಂ ವರ||

“ಮಾತನಾಡುವವರಲ್ಲಿ ಶ್ರೇಷ್ಠನೇ! ರಾಜನ್! ನಿನ್ನ ಜ್ಞಾನಗಳೆಲ್ಲವೂ ಹಿಂದಿನಂತೆಯೇ ಪ್ರಸನ್ನವಾಗಿವೆಯಲ್ಲವೇ? ನಿನ್ನ ಬುದ್ಧಿಗೆ ಯಾವುದೇ ವ್ಯಾಕುಲಗಳೂ ಇಲ್ಲ ತಾನೇ?

12050014a ಶರಾಭಿಘಾತದುಃಖಾತ್ತೇ ಕಚ್ಚಿದ್ಗಾತ್ರಂ ನ ದೂಯತೇ|

12050014c ಮಾನಸಾದಪಿ ದುಃಖಾದ್ಧಿ ಶಾರೀರಂ ಬಲವತ್ತರಮ್||

ಶರಗಳ ಅಭಿಘಾತದಿಂದ ನಿನ್ನ ಶರೀರವು ನೊಂದು ದುಃಖಿಸುತ್ತಿಲ್ಲ ತಾನೇ? ಏಕೆಂದರೆ ಮಾನಸಿಕ ದುಃಖಕ್ಕಿಂತಲೂ ಶಾರೀರಿಕ ದುಃಖವೇ ಅಧಿಕವಾಗಿರುತ್ತದೆ.

12050015a ವರದಾನಾತ್ಪಿತುಃ ಕಾಮಂ ಚಂದಮೃತ್ಯುರಸಿ ಪ್ರಭೋ|

12050015c ಶಂತನೋರ್ಧರ್ಮಶೀಲಸ್ಯ ನ ತ್ವೇತಚ್ಚಮಕಾರಣಮ್||

ಪ್ರಭೋ! ಧರ್ಮಶೀಲನಾದ ನಿನ್ನ ತಂದೆಯ ವರದಾನದಿಂದ ನೀನು ಇಚ್ಛಾಮರಣಿಯಾಗಿರುವೆ! ಆದರೆ ಅದು ನಿನ್ನ ಶಾಂತಿಗೆ ಕಾರಣವಾಗಲಾರದು!

12050016a ಸುಸೂಕ್ಷ್ಮೋಽಪೀಹ ದೇಹೇ ವೈ ಶಲ್ಯೋ ಜನಯತೇ ರುಜಮ್|

12050016c ಕಿಂ ಪುನಃ ಶರಸಂಘಾತೈಶ್ಚಿತಸ್ಯ ತವ ಭಾರತ||

ಭಾರತ! ಮುಳ್ಳು ಅತ್ಯಂತ ಸೂಕ್ಷ್ಮವಾಗಿದ್ದರೂ ಶರೀರವನ್ನು ಸೇರಿಕೊಂಡು ಹೆಚ್ಚು ನೋವನ್ನುಂಟುಮಾಡುತ್ತದೆ. ಹೀಗಿರುವಾಗ ಬಾಣಗಳ ಸಮೂಹಗಳಿಂದಲೇ ಚುಚ್ಚಲ್ಪಟ್ಟಿರುವ ನಿನ್ನ ವಿಷಯದಲ್ಲಿ ಹೇಳತಕ್ಕದ್ದೇನಿದೆ?

12050017a ಕಾಮಂ ನೈತತ್ತವಾಖ್ಯೇಯಂ ಪ್ರಾಣಿನಾಂ ಪ್ರಭವಾಪ್ಯಯೌ|

12050017c ಭವಾನ್ಹ್ಯುಪದಿಶೇಚ್ಚ್ರೇಯೋ ದೇವಾನಾಮಪಿ ಭಾರತ||

ಭಾರತ! ಹುಟ್ಟು-ಸಾವುಗಳು ಪ್ರಾಣಿಗಳಿಗೆ ಇರತಕ್ಕವೇ ಎನ್ನುವ ಉಪದೇಶವನ್ನು ನಿನಗೆ ನೀಡಲು ನಾನು ಬಯಸುತ್ತಿಲ್ಲ. ಏಕೆಂದರೆ ನೀನು ದೇವತೆಗಳಿಗೂ ಉಪದೇಶನೀಡಲು ಸಮರ್ಥನಾಗಿರುವೆ!

12050018a ಯದ್ಧಿ ಭೂತಂ ಭವಿಷ್ಯಚ್ಚ ಭವಚ್ಚ ಪುರುಷರ್ಷಭ|

12050018c ಸರ್ವಂ ತಜ್ಞಾನವೃದ್ಧಸ್ಯ ತವ ಪಾಣಾವಿವಾಹಿತಮ್||

ಪುರುಷರ್ಷಭ! ಜ್ಞಾನವೃದ್ಧನಾದ ನಿನ್ನಲ್ಲಿ ಭೂತ-ಭವಿಷ್ಯ-ವರ್ತಮಾನಗಳೆಲ್ಲವೂ, ಶಾಸ್ತ್ರ-ವೇದ-ಪುರಾಣ-ಇತಿಹಾಸಗಳೆಲ್ಲವೂ ಪ್ರತಿಷ್ಠಿತವಾಗಿವೆ.

12050019a ಸಂಸಾರಶ್ಚೈವ ಭೂತಾನಾಂ ಧರ್ಮಸ್ಯ ಚ ಫಲೋದಯಃ|

12050019c ವಿದಿತಸ್ತೇ ಮಹಾಪ್ರಾಜ್ಞ ತ್ವಂ ಹಿ ಬ್ರಹ್ಮಮಯೋ ನಿಧಿಃ||

ಮಹಾಪ್ರಾಜ್ಞ! ಪ್ರಾಣಿಗಳ ಸಂಸಾರ ಮತ್ತು ಧರ್ಮದ ಫಲಾನುಭವಗಳನ್ನು ನೀನು ಅರಿತುಕೊಂಡಿದ್ದೀಯೆ. ನೀನು ಬ್ರಹ್ಮಮಯ ನಿಧಿಯಾಗಿರುವೆ!

12050020a ತ್ವಾಂ ಹಿ ರಾಜ್ಯೇ ಸ್ಥಿತಂ ಸ್ಫೀತೇ ಸಮಗ್ರಾಂಗಮರೋಗಿಣಮ್|

12050020c ಸ್ತ್ರೀಸಹಸ್ರೈಃ ಪರಿವೃತಂ ಪಶ್ಯಾಮೀಹೋರ್ಧ್ವರೇತಸಮ್||

ಸಮೃದ್ಧ ರಾಜ್ಯದಲ್ಲಿ ನೀನು ನಿನ್ನ ಎಲ್ಲ ಅಂಗಾಂಗಳೂ ಸದೃಢವಾಗಿದ್ದು, ಅರೋಗಿಯಾಗಿದ್ದು, ಸಹಸ್ರಾರು ಸ್ತ್ರೀಯರಿಂದ ಪರಿವೃತನಾಗಿದ್ದರೂ, ಊರ್ಧ್ವರೇತಸ್ಕನಾಗಿ ಬ್ರಹ್ಮಚರ್ಯೆಯನ್ನು ಪಾಲಿಸಿದುದನ್ನು ನಾನು ಕಂಡಿದ್ದೇನೆ.

12050021a ಋತೇ ಶಾಂತನವಾದ್ಭೀಷ್ಮಾತ್ತ್ರಿಷು ಲೋಕೇಷು ಪಾರ್ಥಿವ|

12050021c ಸತ್ಯಸಂಧಾನ್ಮಹಾವೀರ್ಯಾಚ್ಚೂರಾದ್ಧರ್ಮೈಕತತ್ಪರಾತ್||

12050022a ಮೃತ್ಯುಮಾವಾರ್ಯ ತರಸಾ ಶರಪ್ರಸ್ತರಶಾಯಿನಃ|

12050022c ನಿಸರ್ಗಪ್ರಭವಂ ಕಿಂ ಚಿನ್ನ ಚ ತಾತಾನುಶುಶ್ರುಮ||

ಪಾರ್ಥಿವ! ಈ ಶರಶಯನದಲ್ಲಿ ಮಲಗಿರುವ ಸತ್ಯಸಂಧ, ಮಹಾವೀರ್ಯ, ಶೂರ. ಧರ್ಮದಲ್ಲಿಯೇ ತತ್ಪರನಾಗಿರುವ ಶಾಂತನವ ಭೀಷ್ಮನೊಬ್ಬನನ್ನು ಬಿಟ್ಟು ಮೃತ್ಯುವನ್ನೂ ತಡೆದು ನಿಲ್ಲಿಸಬಲ್ಲ ಮತ್ತೊಬ್ಬನನ್ನು ಈ ಮೂರುಲೋಕಗಳಲ್ಲಿಯೂ ಎಲ್ಲಿಯಾದರೂ ಹುಟ್ಟಿರುವನೆಂಬುದನ್ನು ನಾನು ಇದೂವರೆಗೂ ಕೇಳಿರುವುದಿಲ್ಲ!

12050023a ಸತ್ಯೇ ತಪಸಿ ದಾನೇ ಚ ಯಜ್ಞಾಧಿಕರಣೇ ತಥಾ|

12050023c ಧನುರ್ವೇದೇ ಚ ವೇದೇ ಚ ನಿತ್ಯಂ ಚೈವಾನ್ವವೇಕ್ಷಣೇ||

12050024a ಅನೃಶಂಸಂ ಶುಚಿಂ ದಾಂತಂ ಸರ್ವಭೂತಹಿತೇ ರತಮ್|

12050024c ಮಹಾರಥಂ ತ್ವತ್ಸದೃಶಂ ನ ಕಂ ಚಿದನುಶುಶ್ರುಮ||

ಸತ್ಯ, ತಪಸ್ಸು, ದಾನ, ಯಜ್ಞಾನುಷ್ಠಾನ, ಧನುರ್ವೇದ, ವೇದ, ನಿತ್ಯವೂ ಪ್ರಜೆಗಳ ಪರಿಪಾಲನೆ ಇವುಗಳಲ್ಲಿ ನಿನಗೆ ಸಮನಾದ ದಯಾವಂತ, ಶುಚಿ, ಜಿತೇಂದ್ರಿಯ, ಸರ್ವಭೂತಹಿತರತ, ಮಹಾರಥನ ಕುರಿತು ಇದೂವರೆಗೆ ನಾನು ಕೇಳಿಲ್ಲ!

12050025a ತ್ವಂ ಹಿ ದೇವಾನ್ಸಗಂಧರ್ವಾನ್ಸಸುರಾಸುರರಾಕ್ಷಸಾನ್|

12050025c ಶಕ್ತ ಏಕರಥೇನೈವ ವಿಜೇತುಂ ನಾತ್ರ ಸಂಶಯಃ||

ನೀನು ಒಂದೇ ರಥದಲ್ಲಿ ಗಂಧರ್ವ-ಸುರ-ಅಸುರ-ರಾಕ್ಷಸರೊಂದಿಗೆ ದೇವತೆಗಳನ್ನು ಜಯಿಸಲು ಶಕ್ತನೆನ್ನುವುದರಲ್ಲಿ ಸಂಶಯವೇ ಇಲ್ಲ.

12050026a ತ್ವಂ ಹಿ ಭೀಷ್ಮ ಮಹಾಬಾಹೋ ವಸೂನಾಂ ವಾಸವೋಪಮಃ|

12050026c ನಿತ್ಯಂ ವಿಪ್ರೈಃ ಸಮಾಖ್ಯಾತೋ ನವಮೋಽನವಮೋ ಗುಣೈಃ||

ಭೀಷ್ಮ! ಮಹಾಬಾಹೋ! ವಸುಗಳಲ್ಲಿ ನೀನು ಇಂದ್ರಸಮಾನನು. ವಿಪ್ರರು ನಿತ್ಯವೂ ನಿನ್ನನ್ನು ಅಷ್ಟವಸುಗಳ ಅಂಶದಿಂದ ಹುಟ್ಟಿದ ಒಂಭತ್ತನೆಯವನೆಂದೂ, ಗುಣಗಳಲ್ಲಿ ನಿನ್ನ ಸಮನಾಗಿರುವವರು ಯಾರೂ ಇಲ್ಲವೆಂದೂ ವರ್ಣಿಸುತ್ತಾರೆ.

12050027a ಅಹಂ ಹಿ ತ್ವಾಭಿಜಾನಾಮಿ ಯಸ್ತ್ವಂ ಪುರುಷಸತ್ತಮ|

12050027c ತ್ರಿದಶೇಷ್ವಪಿ ವಿಖ್ಯಾತಃ ಸ್ವಶಕ್ತ್ಯಾ ಸುಮಹಾಬಲಃ||

ಪುರುಷಸತ್ತಮ! ನೀನು ಯಾರೆಂದು ನಾನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ನಿನ್ನ ಶಕ್ತಿ ಮತ್ತು ಮಹಾಬಲಗಳಿಂದ ನೀನು ದೇವತೆಗಳಲ್ಲಿಯೂ ವಿಖ್ಯಾತನಾಗಿರುವೆ!

12050028a ಮನುಷ್ಯೇಷು ಮನುಷ್ಯೇಂದ್ರ ನ ದೃಷ್ಟೋ ನ ಚ ಮೇ ಶ್ರುತಃ|

12050028c ಭವತೋ ಯೋ ಗುಣೈಸ್ತುಲ್ಯಃ ಪೃಥಿವ್ಯಾಂ ಪುರುಷಃ ಕ್ವ ಚಿತ್||

ಮನುಷ್ಯೇಂದ್ರ! ಈ ಭೂಮಿಯ ಮನುಷ್ಯರಲ್ಲಿ ನಿನ್ನ ಸಮಾನ ಗುಣಗಳುಳ್ಳ ಬೇರೆ ಯಾವ ಪುರುಷನನ್ನೂ ನಾನು ನೋಡಲೂ ಇಲ್ಲ ಮತ್ತು ಕೇಳಲೂ ಇಲ್ಲ.

12050029a ತ್ವಂ ಹಿ ಸರ್ವೈರ್ಗುಣೈ ರಾಜನ್ದೇವಾನಪ್ಯತಿರಿಚ್ಯಸೇ|

12050029c ತಪಸಾ ಹಿ ಭವಾನ್ಶಕ್ತಃ ಸ್ರಷ್ಟುಂ ಲೋಕಾಂಶ್ಚರಾಚರಾನ್||

ರಾಜನ್! ನೀನು ಸರ್ವಗುಣಗಳಿಂದಲೂ ದೇವತೆಗಳನ್ನೂ ಅತಿಶಯಿಸಿರುವೆ. ನಿನ್ನ ತಪಸ್ಸಿನಿಂದ ನೀನು ಲೋಕಗಳನ್ನೂ ಚರಾಚರಗಳನ್ನೂ ಸೃಷ್ಟಿಸಲು ಶಕ್ತನಾಗಿರುವೆ.

12050030a ತದಸ್ಯ ತಪ್ಯಮಾನಸ್ಯ ಜ್ಞಾತೀನಾಂ ಸಂಕ್ಷಯೇಣ ವೈ|

12050030c ಜ್ಯೇಷ್ಠಸ್ಯ ಪಾಂಡುಪುತ್ರಸ್ಯ ಶೋಕಂ ಭೀಷ್ಮ ವ್ಯಪಾನುದ||

ಭೀಷ್ಮ! ಜ್ಞಾತಿಬಾಂಧವರ ಸಂಕ್ಷಯದಿಂದ ತಪಿಸುತ್ತಿರುವ ಈ ಜ್ಯೇಷ್ಠ ಪಾಂಡುಪುತ್ರನ ಶೋಕವನ್ನು ನೀನು ನಿವಾರಿಸು!

12050031a ಯೇ ಹಿ ಧರ್ಮಾಃ ಸಮಾಖ್ಯಾತಾಶ್ಚಾತುರ್ವರ್ಣ್ಯಸ್ಯ ಭಾರತ|

12050031c ಚಾತುರಾಶ್ರಮ್ಯಸಂಸೃಷ್ಟಾಸ್ತೇ ಸರ್ವೇ ವಿದಿತಾಸ್ತವ||

ಭಾರತ! ನಾಲ್ಕು ಆಶ್ರಮಧರ್ಮಗಳಿಂದ ಕೂಡಿರುವ ಚಾತುರ್ವರ್ಣಗಳ ಧರ್ಮಗಳೆಲ್ಲವೂ ನಿನಗೆ ಸಂಪೂರ್ಣವಾಗಿ ತಿಳಿದಿವೆ.

12050032a ಚಾತುರ್ವೇದ್ಯೇ ಚ ಯೇ ಪ್ರೋಕ್ತಾಶ್ಚಾತುರ್ಹೋತ್ರೇ ಚ ಭಾರತ|

12050032c ಸಾಂಖ್ಯೇ ಯೋಗೇ ಚ ನಿಯತಾ ಯೇ ಚ ಧರ್ಮಾಃ ಸನಾತನಾಃ||

12050033a ಚಾತುರ್ವರ್ಣ್ಯೇನ ಯಶ್ಚೈಕೋ ಧರ್ಮೋ ನ ಸ್ಮ ವಿರುಧ್ಯತೇ|

12050033c ಸೇವ್ಯಮಾನಃ ಸ ಚೈವಾದ್ಯೋ ಗಾಂಗೇಯ ವಿದಿತಸ್ತವ||

ಭಾರತ! ಗಾಂಗೇಯ! ನಾಲ್ಕು ವೇದಗಳಲ್ಲಿ ಹೇಳಿರುವ ನಾಲ್ಕು ಹೋತೃಗಳ ಕರ್ತವ್ಯಗಳನ್ನೂ, ಸಾಂಖ್ಯಯೋಗವನ್ನೂ, ನಾಲ್ಕೂ ವರ್ಣಗಳವರಿಗೆ ನಿಯಮಿಸಲ್ಪಟ್ಟಿರುವ ಸನಾತನ ಧರ್ಮಗಳನ್ನೂ, ಆದರೆ ಯಾವುದಕ್ಕೂ ವಿರುದ್ಧವಾಗಿರದ ಹಾಗೆ ನಡೆದುಕೊಳ್ಳುವ ಏಕೈಕ ಧರ್ಮವೇನಿದೆಯೋ ಅದನ್ನೂ ನೀನು ತಿಳಿದಿರುವೆ. 

12050034a ಇತಿಹಾಸಪುರಾಣಂ ಚ ಕಾರ್ತ್ಸ್ನ್ಯೇನ ವಿದಿತಂ ತವ|

12050034c ಧರ್ಮಶಾಸ್ತ್ರಂ ಚ ಸಕಲಂ ನಿತ್ಯಂ ಮನಸಿ ತೇ ಸ್ಥಿತಮ್||

ಇತಿಹಾಸ-ಪುರಾಣಗಳು ಸಂಪೂರ್ಣವಾಗಿ ನಿನಗೆ ತಿಳಿದಿವೆ. ಸಕಲ ಧರ್ಮಶಾಸ್ತ್ರಗಳೂ ನಿನ್ನ ಮನಸ್ಸಿನಲ್ಲಿ ನೆಲೆಸಿಬಿಟ್ಟಿವೆ.

12050035a ಯೇ ಚ ಕೇ ಚನ ಲೋಕೇಽಸ್ಮಿನ್ನರ್ಥಾಃ ಸಂಶಯಕಾರಕಾಃ|

12050035c ತೇಷಾಂ ಚೇತ್ತಾ ನಾಸ್ತಿ ಲೋಕೇ ತ್ವದನ್ಯಃ ಪುರುಷರ್ಷಭ||

ಪುರುಷರ್ಷಭ! ಸಂಶಯಾಸ್ಪದವಾದ ಯಾವುದಾದರೂ ಕೆಲವು ವಿಷಯಗಳು ಲೋಕದಲ್ಲಿದ್ದರೆ ಅವುಗಳನ್ನೂ ನಿವಾರಿಸಲು ಈ ಲೋಕದಲ್ಲಿ ನಿನ್ನನ್ನು ಬಿಟ್ಟು ಬೇರೆ ಯಾರೂ ಇಲ್ಲ.

12050036a ಸ ಪಾಂಡವೇಯಸ್ಯ ಮನಃಸಮುತ್ಥಿತಂ| ನರೇಂದ್ರ ಶೋಕಂ ವ್ಯಪಕರ್ಷ ಮೇಧಯಾ|

12050036c ಭವದ್ವಿಧಾ ಹ್ಯುತ್ತಮಬುದ್ಧಿವಿಸ್ತರಾ| ವಿಮುಹ್ಯಮಾನಸ್ಯ ಜನಸ್ಯ ಶಾಂತಯೇ||

ನರೇಂದ್ರ! ಈ ಪಾಂಡವೇಯನ ಮನಸ್ಸಿನಲ್ಲಿ ಹುಟ್ಟಿಕೊಂಡಿರುವ ಶೋಕವನ್ನು ನಿನ್ನ ಬುದ್ಧಿಶಕ್ತಿಯಿಂದ ದೂರಮಾಡು! ಮೋಹಗೊಂಡಿರುವ ಜನರನ್ನು ಶಾಂತಗೊಳಿಸಲು ನಿನ್ನಂಥಹ ಉತ್ತಮ ವಿಶಾಲ ಬುದ್ಧಿಯುಳ್ಳವನಿಗೆ ಮಾತ್ರ ಸಾಧ್ಯ!””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಕೃಷ್ಣವಾಕ್ಯೇ ಪಂಚಶತಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಕೃಷ್ಣವಾಕ್ಯ ಎನ್ನುವ ಐವತ್ತನೇ ಅಧ್ಯಾಯವು.

Comments are closed.