Shanti Parva: Chapter 5

ಶಾಂತಿ ಪರ್ವ: ರಾಜಧರ್ಮ ಪರ್ವ

ಕರ್ಣನು ಜರಾಸಂಧನೊಡನೆ ಯುದ್ಧಮಾಡಿ ಮಾಲಿನೀ ನಗರವನ್ನು ಬಹುಮಾನವನ್ನಾಗಿ ಪಡೆದುದು (೧-೭). ದೇವೇಂದ್ರನಿಗೆ ತನ್ನ ಸಹಜವಾಗಿದ್ದ ಕವಚ-ಕುಂಡಲಗಳನ್ನಿತ್ತು ಅರ್ಜುನನಿಂದ ಕರ್ಣನು ಹತನಾದುದು (೮-೧೬).  

12005001 ನಾರದ ಉವಾಚ

12005001a ಆವಿಷ್ಕೃತಬಲಂ ಕರ್ಣಂ ಜ್ಞಾತ್ವಾ ರಾಜಾ ತು ಮಾಗಧಃ|

12005001c ಆಹ್ವಯದ್ದ್ವೈರಥೇನಾಜೌ ಜರಾಸಂಧೋ ಮಹೀಪತಿಃ||

ನಾರದನು ಹೇಳಿದನು: “ಸರ್ವತ್ರ ಖ್ಯಾತವಾಗಿದ್ದ ಕರ್ಣನ ಬಲವನ್ನು ಕೇಳಿ ಮಗಧ ದೇಶದ ರಾಜ ಮಹೀಪತಿ ಜರಾಸಂಧನು ಅವನನ್ನು ದ್ವೈರಥಯುದ್ಧಕ್ಕೆ ಆಹ್ವಾನಿಸಿದನು.

12005002a ತಯೋಃ ಸಮಭವದ್ಯುದ್ಧಂ ದಿವ್ಯಾಸ್ತ್ರವಿದುಷೋರ್ದ್ವಯೋಃ|

12005002c ಯುಧಿ ನಾನಾಪ್ರಹರಣೈರನ್ಯೋನ್ಯಮಭಿವರ್ಷತೋಃ||

ದಿವ್ಯಾಸ್ತ್ರಗಳಲ್ಲಿ ಪರಿಣಿತರಾಗಿದ್ದ ಅವರಿಬ್ಬರ ನಡುವೆ ಯುದ್ಧವು ಪ್ರಾರಂಭವಾಯಿತು. ಯುದ್ಧದಲ್ಲಿ ನಾನಾ ಪ್ರಹಾರಗಳಿಂದ ಅನ್ಯೋನ್ಯರನ್ನು ತೋಯಿಸಿದರು.

12005003a ಕ್ಷೀಣಬಾಣೌ ವಿಧನುಷೌ ಭಗ್ನಖಡ್ಗೌ ಮಹೀಂ ಗತೌ|

12005003c ಬಾಹುಭಿಃ ಸಮಸಜ್ಜೇತಾಮುಭಾವಪಿ ಬಲಾನ್ವಿತೌ||

ಬಾಣಗಳು ಮುಗಿದುಹೋಗಲು, ಧನುಸ್ಸೂ ಇಲ್ಲವಾಗಲು, ಮತ್ತು ಖಡ್ಗಗಳು ತುಂಡಾಗಲು ಆ ಇಬ್ಬರು ಬಲಾನ್ವಿತರೂ ನೆಲದ ಮೇಲೆ ನಿಂತು ಬಾಹುಯುದ್ಧದಲ್ಲಿ ತೊಡಗಿದರು.

12005004a ಬಾಹುಕಂಟಕಯುದ್ಧೇನ ತಸ್ಯ ಕರ್ಣೋಽಥ ಯುಧ್ಯತಃ|

12005004c ಬಿಭೇದ ಸಂಧಿಂ ದೇಹಸ್ಯ ಜರಯಾ ಶ್ಲೇಷಿತಸ್ಯ ಹ||

ಬಾಹುಕಂಟಕ[1] ಯುದ್ಧದಲ್ಲಿ ತೊಡಗಿದ್ದ ಕರ್ಣನು ಜರೆಯು ಜೋಡಿಸಿದ್ದ ಜರಾಸಂಧನ ಸಂಧಿಬಂಧವನ್ನು ಭೇದಿಸತೊಡಗಿದನು.

12005005a ಸ ವಿಕಾರಂ ಶರೀರಸ್ಯ ದೃಷ್ಟ್ವಾ ನೃಪತಿರಾತ್ಮನಃ|

12005005c ಪ್ರೀತೋಽಸ್ಮೀತ್ಯಬ್ರವೀತ್ಕರ್ಣಂ ವೈರಮುತ್ಸೃಜ್ಯ ಭಾರತ||

ಭಾರತ! ತನ್ನ ಶರೀರವು ವಿಕಾರವಾಗುತ್ತಿರುವನ್ನು ನೋಡಿ ಆ ನೃಪತಿಯು ವೈರವನ್ನು ತೊರೆದು “ನಿನ್ನಿಂದ ನಾನು ಪ್ರೀತನಾಗಿದ್ದೇನೆ!” ಎಂದು ಕರ್ಣನಿಗೆ ಹೇಳಿದನು.

12005006a ಪ್ರೀತ್ಯಾ ದದೌ ಸ ಕರ್ಣಾಯ ಮಾಲಿನೀಂ ನಗರೀಮಥ|

12005006c ಅಂಗೇಷು ನರಶಾರ್ದೂಲ ಸ ರಾಜಾಸೀತ್ಸಪತ್ನಜಿತ್||

ಅವನು ಪ್ರೀತಿಯಿಂದ ಕರ್ಣನಿಗೆ ಮಾಲಿನೀ ನಗರವನ್ನು ಕೊಟ್ಟನು. ನರಶಾರ್ದೂಲ! ಶತ್ರುವಿಜಯಿ ಅಂಗದ ರಾಜನು ಅದನ್ನು ಆಳಿದನು.

12005007a ಪಾಲಯಾಮಾಸ ಚಂಪಾಂ ತು ಕರ್ಣಃ ಪರಬಲಾರ್ದನಃ|

12005007c ದುರ್ಯೋಧನಸ್ಯಾನುಮತೇ ತವಾಪಿ ವಿದಿತಂ ತಥಾ||

ಪರಬಲಾರ್ದನ ಕರ್ಣನು ದುರ್ಯೋಧನನ ಅನುಮತಿಯಂತೆ ಚಂಪಾಪುರವನ್ನೂ ಆಳುತ್ತಿದ್ದನು. ಅದು ನಿನಗೆ ತಿಳಿದೇ ಇದೆ.

12005008a ಏವಂ ಶಸ್ತ್ರಪ್ರತಾಪೇನ ಪ್ರಥಿತಃ ಸೋಽಭವತ್ಕ್ಷಿತೌ|

12005008c ತ್ವದ್ಧಿತಾರ್ಥಂ ಸುರೇಂದ್ರೇಣ ಭಿಕ್ಷಿತೋ ವರ್ಮಕುಂಡಲೇ||

ಹೀಗೆ ಶಸ್ತ್ರಪ್ರತಾಪದಿಂದ ಅವನು ಭೂಮಿಯಲ್ಲಿ ಖ್ಯಾತನಾದನು. ನಿನ್ನ ಹಿತಕ್ಕಾಗಿ ಸುರೇಂದ್ರನು ಅವನ ಕವಚ-ಕುಂಡಲಗಳನ್ನು ಭಿಕ್ಷೆಯಾಗಿ ಬೇಡಿದನು.

12005009a ಸ ದಿವ್ಯೇ ಸಹಜೇ ಪ್ರಾದಾತ್ಕುಂಡಲೇ ಪರಮಾರ್ಚಿತೇ|

12005009c ಸಹಜಂ ಕವಚಂ ಚೈವ ಮೋಹಿತೋ ದೇವಮಾಯಯಾ||

ದೇವಮಾಯೆಯಿಂದ ಮೋಹಿತನಾದ ಅವನು ಹುಟ್ಟುವಾಗಲೇ ಇದ್ದಿದ್ದ ಕುಂಡಲಗಳನ್ನೂ ಹುಟ್ಟುವಾಗಲೇ ಇದ್ದಿದ್ದ ಕವಚವನ್ನೂ ಇಂದ್ರನಿಗೆ ಕೊಟ್ಟುಬಿಟ್ಟನು.

12005010a ವಿಮುಕ್ತಃ ಕುಂಡಲಾಭ್ಯಾಂ ಚ ಸಹಜೇನ ಚ ವರ್ಮಣಾ|

12005010c ನಿಹತೋ ವಿಜಯೇನಾಜೌ ವಾಸುದೇವಸ್ಯ ಪಶ್ಯತಃ||

ಸಹಜ ಕವಚ-ಕುಂಡಲಗಳಿಂದ ವಿಹೀನನಾಗಿದ್ದ ಅವನನ್ನು ವಿಜಯ ಅರ್ಜುನನು ವಾಸುದೇವನ ಸಮಕ್ಷಮದಲ್ಲಿಯೇ ಸಂಹರಿಸಿದನು.

12005011a ಬ್ರಾಹ್ಮಣಸ್ಯಾಭಿಶಾಪೇನ ರಾಮಸ್ಯ ಚ ಮಹಾತ್ಮನಃ|

12005011c ಕುಂತ್ಯಾಶ್ಚ ವರದಾನೇನ ಮಾಯಯಾ ಚ ಶತಕ್ರತೋಃ||

12005012a ಭೀಷ್ಮಾವಮಾನಾತ್ಸಂಖ್ಯಾಯಾಂ ರಥಾನಾಮರ್ಧಕೀರ್ತನಾತ್|

12005012c ಶಲ್ಯಾತ್ತೇಜೋವಧಾಚ್ಚಾಪಿ ವಾಸುದೇವನಯೇನ ಚ||

12005013a ರುದ್ರಸ್ಯ ದೇವರಾಜಸ್ಯ ಯಮಸ್ಯ ವರುಣಸ್ಯ ಚ|

12005013c ಕುಬೇರದ್ರೋಣಯೋಶ್ಚೈವ ಕೃಪಸ್ಯ ಚ ಮಹಾತ್ಮನಃ||

12005014a ಅಸ್ತ್ರಾಣಿ ದಿವ್ಯಾನ್ಯಾದಾಯ ಯುಧಿ ಗಾಂಡೀವಧನ್ವನಾ|

12005014c ಹತೋ ವೈಕರ್ತನಃ ಕರ್ಣೋ ದಿವಾಕರಸಮದ್ಯುತಿಃ||

ಬ್ರಾಹ್ಮಣನ ಮತ್ತು ಮಹಾತ್ಮ ರಾಮನ ಶಾಪದಿಂದ, ಕುಂತಿಯ ಮತ್ತು ಶತುಕ್ರತುವಿಗೆ ಮೋಸಹೋಗಿ ನೀಡಿದ ವರದಿಂದ, ರಥಾಥಿರಥರನ್ನು ಎಣಿಸುವಾಗ ಭೀಷ್ಮನು ಅವನನ್ನು ಅರ್ಧರಥನೆಂದು ಹೇಳಿದುದರಿಂದ, ಶಲ್ಯನ ತೇಜೋವಧೆಯಿಂದ, ವಾಸುದೇವನ ನೀತಿ, ಮತ್ತು ರುದ್ರ-ದೇವರಾಜ-ಯಮ-ವರುಣ-ಕುಬೇರ-ದ್ರೋಣ ಮತ್ತು ಮಹಾತ್ಮಕೃಪರಿಂದ ದಿವ್ಯಾಸ್ತ್ರಗಳನ್ನು ಪಡೆದಿದ್ದ ಗಾಂಡೀವ ಧನ್ವಿ - ಇವೆಲ್ಲ ಕಾರಣಗಳಿಂದ ದಿವಾಕರ ಸಮಾನ ಕಾಂತಿಯಿದ್ದ ವೈಕರ್ತನ ಕರ್ಣನು ಯುದ್ಧದಲ್ಲಿ ಹತನಾದನು.

12005015a ಏವಂ ಶಪ್ತಸ್ತವ ಭ್ರಾತಾ ಬಹುಭಿಶ್ಚಾಪಿ ವಂಚಿತಃ|

12005015c ನ ಶೋಚ್ಯಃ ಸ ನರವ್ಯಾಘ್ರೋ ಯುದ್ಧೇ ಹಿ ನಿಧನಂ ಗತಃ||

ಹೀಗೆ ಅನೇಕರಿಂದ ಶಾಪಗ್ರಸ್ತನಾಗಿ ಮತ್ತು ಅನೇಕರಿಂದ ವಂಚಿತನಾಗಿ ನಿನ್ನ ಅಣ್ಣ ನರವ್ಯಾಘ್ರನು ಯುದ್ಧದಲ್ಲಿ ನಿಧನಹೊಂದಿದನು. ಅವನಿಗಾಗಿ ಶೋಕಿಸಬೇಡ!””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಕರ್ಣವೀರ್ಯಕಥನಂ ನಾಮ ಪಂಚಮೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಕರ್ಣವೀರ್ಯಕಥನವೆನ್ನುವ ಐದನೇ ಅಧ್ಯಾಯವು.

[1] ಬಾಹುಕಂಟಕ ಯುದ್ಧವನ್ನು ಈ ರೀತಿ ವರ್ಣಿಸಿದ್ದಾರೆ: ಏಕಾಂ ಜಂಘಾಂ ಪದಾಕ್ರಮ್ಯ ಪರಾಮುದ್ಯಮ್ಯ ಪಾಟ್ಯತೇ| ಕೇತಕೀಪತ್ರವಚ್ಚತ್ರೋರ್ಯುದ್ಧಂ ತದ್ಬಾಹುಕಂಟಕಂ|| ಅರ್ಥಾತ್ ಕೇದಗೆಯ ಗರಿಯನ್ನು ಎರಡಾಗಿ ಸೀಳುವಂತೆ ಶತ್ರುವಿನ ಒಂದು ಮೊಣಕಾಲನ್ನು ಮೆಟ್ಟಿಕೊಂಡು ಮತ್ತೊಂದು ಮೊಣಕಾಲನ್ನು ಮೇಲಕ್ಕೆತ್ತಿ ಸೀಳುವುದಕ್ಕೆ ಬಾಹುಕಂಟಕಯುದ್ಧವೆಂದು ಹೆಸರು.

Comments are closed.