ಶಾಂತಿ ಪರ್ವ: ರಾಜಧರ್ಮ ಪರ್ವ
Contents
Toggle೪೯
ಜಾಮದಗ್ನೇಯೋಽಪಖ್ಯಾನ
12049001 ವಾಸುದೇವ ಉವಾಚ
12049001a ಶೃಣು ಕೌಂತೇಯ ರಾಮಸ್ಯ ಮಯಾ ಯಾವತ್ಪರಿಶ್ರುತಮ್|
12049001c ಮಹರ್ಷೀಣಾಂ ಕಥಯತಾಂ ಕಾರಣಂ ತಸ್ಯ ಜನ್ಮ ಚ||
12049002a ಯಥಾ ಚ ಜಾಮದಗ್ನ್ಯೇನ ಕೋಟಿಶಃ ಕ್ಷತ್ರಿಯಾ ಹತಾಃ|
12049002c ಉದ್ಭೂತಾ ರಾಜವಂಶೇಷು ಯೇ ಭೂಯೋ ಭಾರತೇ ಹತಾಃ||
ವಾಸುದೇವನು ಹೇಳಿದನು: “ಕೌಂತೇಯ! ಮಹರ್ಷಿಗಳಿಂದ ನಾನು ಹೇಗೆ ಕೇಳಿದ್ದೆನೋ ಹಾಗೆ ರಾಮನ ಜನ್ಮದ ಕಾರಣ, ಆ ಜಾಮದಗ್ನಿಯು ಏಕೆ ಕೋಟಿಗಟ್ಟಲೆ ಕ್ಷತ್ರಿಯರನ್ನು ಸಂಹರಿಸಿದನು ಮತ್ತು ಹತರಾಗಿದ್ದ ರಾಜವಂಶಗಳಲ್ಲಿ ಪುನಃ ಹೇಗೆ ಕ್ಷತ್ರಿಯರು ಹುಟ್ಟಿದರು ಎನ್ನುವುದನ್ನು ಕೇಳು.
12049003a ಜಹ್ನೋರಜಹ್ನುಸ್ತನಯೋ ಬಲ್ಲವಸ್ತಸ್ಯ ಚಾತ್ಮಜಃ|
12049003c ಕುಶಿಕೋ ನಾಮ ಧರ್ಮಜ್ಞಸ್ತಸ್ಯ ಪುತ್ರೋ ಮಹೀಪತಿಃ||
ಜಹ್ನುವೆನ್ನುವ ರಾಜನಿದ್ದನು. ಅವನ ಮಗನೇ ಅಜ. ಬಲ್ಲವನು ಅಜನ ಮಗನಾಗಿದ್ದನು. ಮಹೀಪತಿ ಬಲ್ಲವನಿಗೆ ಕುಶಿಕ ಎಂಬ ಹೆಸರಿನ ಧರ್ಮಜ್ಞ ಮಗನಿದ್ದನು.
12049004a ಉಗ್ರಂ ತಪಃ ಸಮಾತಿಷ್ಠತ್ಸಹಸ್ರಾಕ್ಷಸಮೋ ಭುವಿ|
12049004c ಪುತ್ರಂ ಲಭೇಯಮಜಿತಂ ತ್ರಿಲೋಕೇಶ್ವರಮಿತ್ಯುತ||
ಭುವಿಯಲ್ಲಿ ಸಹಸ್ರಾಕ್ಷನಂತಿದ್ದ ಆ ಕುಶಿಕನು ಅಪರಾಜಿತನಾದ ತ್ರಿಲೋಕಗಳಿಗೂ ಈಶ್ವರನಾಗುವ ಮಗನನ್ನು ಪಡೆಯಲೋಸುಗ ಉಗ್ರ ತಪಸ್ಸನ್ನಾಚರಿಸಿದನು.
12049005a ತಮುಗ್ರತಪಸಂ ದೃಷ್ಟ್ವಾ ಸಹಸ್ರಾಕ್ಷಃ ಪುರಂದರಃ|
12049005c ಸಮರ್ಥಃ ಪುತ್ರಜನನೇ ಸ್ವಯಮೇವೈತ್ಯ ಭಾರತ||
ಭಾರತ! ಅವನ ಆ ಉಗ್ರತಪಸ್ಸನ್ನು ನೋಡಿ ಸಹಸ್ರಾಕ್ಷ ಪುರಂದರನು, ಕುಶಿಕನು ಬಯಸಿದ ಪುತ್ರನನ್ನು ಪಡೆಯಲು ಸಮರ್ಥನೆಂದು ತಿಳಿದು, ತಾನೇ ಅವನ ಮಗನಾಗಿ ಹುಟ್ಟಿದನು.
12049006a ಪುತ್ರತ್ವಮಗಮದ್ರಾಜಂಸ್ತಸ್ಯ ಲೋಕೇಶ್ವರೇಶ್ವರಃ|
12049006c ಗಾಧಿರ್ನಾಮಾಭವತ್ಪುತ್ರಃ ಕೌಶಿಕಃ ಪಾಕಶಾಸನಃ||
ರಾಜನ್! ಲೋಕೇಶ್ವರ ಈಶ್ವರ ಪಾಕಶಾಸನನು ಗಾಧಿ ಎಂಬ ಹೆಸರಿನಲ್ಲಿ ಕುಶಿಕನ ಪುತ್ರನಾಗಿ ಕೌಶಿಕನೆಂದೂ ಕರೆಯಲ್ಪಟ್ಟನು.
12049007a ತಸ್ಯ ಕನ್ಯಾಭವದ್ರಾಜನ್ನಾಮ್ನಾ ಸತ್ಯವತೀ ಪ್ರಭೋ|
12049007c ತಾಂ ಗಾಧಿಃ ಕವಿಪುತ್ರಾಯ ಸೋರ್ಚೀಕಾಯ ದದೌ ಪ್ರಭುಃ||
ರಾಜನ್! ಪ್ರಭೋ! ಅವನಿಗೆ ಸತ್ಯವತೀ ಎಂಬ ಹೆಸರಿನ ಮಗಳಾದಳು. ಪ್ರಭು ಗಾಧಿಯು ಅವಳನ್ನು ಭೃಗುವಿನ ಮಗ ಋಚೀಕನಿಗೆ ಮದುವೆಮಾಡಿಕೊಟ್ಟನು.
12049008a ತತಃ ಪ್ರೀತಸ್ತು ಕೌಂತೇಯ ಭಾರ್ಗವಃ ಕುರುನಂದನ|
12049008c ಪುತ್ರಾರ್ಥೇ ಶ್ರಪಯಾಮಾಸ ಚರುಂ ಗಾಧೇಸ್ತಥೈವ ಚ||
ಕೌಂತೇಯ! ಕುರುನಂದನ! ಅದರಿಂದ ಪ್ರೀತನಾದ ಭಾರ್ಗವ ಋಚೀಕನು ತನಗೂ ಮತ್ತು ಮಾವ ಗಾಧಿಗೂ ಪುತ್ರರಾಗಬೇಕೆಂಬ ಇಚ್ಛೆಯಿಂದ ಮಂತ್ರೋಕ್ತವಾದ ಚರುವನ್ನು ಸಿದ್ಧಪಡಿಸಿದನು.
12049009a ಆಹೂಯ ಚಾಹ ತಾಂ ಭಾರ್ಯಾಮೃಚೀಕೋ ಭಾರ್ಗವಸ್ತದಾ|
12049009c ಉಪಯೋಜ್ಯಶ್ಚರುರಯಂ ತ್ವಯಾ ಮಾತ್ರಾಪ್ಯಯಂ ತವ||
ಅನಂತರ ಭಾರ್ಗವ ಋಚೀಕನು ತನ್ನ ಭಾರ್ಯೆಯನ್ನು ಕರೆದು, ವಿಭಾಗಿಸಿದ ಚರುವಿನ ಎರಡು ಭಾಗಗಳನ್ನೂ ತೋರಿಸಿ ಹೇಳಿದನು: “ನೀನು ಒಂದು ಭಾಗವನ್ನೂ ನಿನ್ನ ತಾಯಿಯು ಮತ್ತೊಂದು ಭಾಗವನ್ನೂ ಭಕ್ಷಿಸಿರಿ!
12049010a ತಸ್ಯಾ ಜನಿಷ್ಯತೇ ಪುತ್ರೋ ದೀಪ್ತಿಮಾನ್ಕ್ಷತ್ರಿಯರ್ಷಭಃ|
12049010c ಅಜಯ್ಯಃ ಕ್ಷತ್ರಿಯೈರ್ಲೋಕೇ ಕ್ಷತ್ರಿಯರ್ಷಭಸೂದನಃ||
ಅವಳಲ್ಲಿ ಪ್ರದೀಪ್ತಮಾನ ಕ್ಷತ್ರಿಯರ್ಷಭನು ಜನಿಸುತ್ತಾನೆ. ಆ ಕ್ಷತ್ರಿಯರ್ಷಭಸೂದನನು ಕ್ಷತ್ರಿಯ ಲೋಕಗಳನ್ನು ಜಯಿಸುತ್ತಾನೆ.
12049011a ತವಾಪಿ ಪುತ್ರಂ ಕಲ್ಯಾಣಿ ಧೃತಿಮಂತಂ ತಪೋನ್ವಿತಮ್|
12049011c ಶಮಾತ್ಮಕಂ ದ್ವಿಜಶ್ರೇಷ್ಠಂ ಚರುರೇಷ ವಿಧಾಸ್ಯತಿ||
ಕಲ್ಯಾಣೀ! ಚರುವಿನ ಈ ಭಾಗದಿಂದ ನೀನು ದೃತಿಮಂತನೂ, ತಪೋನ್ವಿತನೂ, ಶಾಂತಾತ್ಮನೂ ಆದ ದ್ವಿಜಶ್ರೇಷ್ಠನನ್ನು ಪುತ್ರನನ್ನಾಗಿ ಪಡೆಯುವೆ!”
12049012a ಇತ್ಯೇವಮುಕ್ತ್ವಾ ತಾಂ ಭಾರ್ಯಾಮೃಚೀಕೋ ಭೃಗುನಂದನಃ|
12049012c ತಪಸ್ಯಭಿರತೋ ಧೀಮಾನ್ಜಗಾಮಾರಣ್ಯಮೇವ ಹ||
ತನ್ನ ಪತ್ನಿಗೆ ಹೀಗೆ ಹೇಳಿ ಭೃಗುನಂದನ ಧೀಮಾನ್ ಋಚೀಕನು ತಪಸ್ಸಿಗಾಗಿ ಅರಣ್ಯಕ್ಕೆ ತೆರಳಿದನು.
12049013a ಏತಸ್ಮಿನ್ನೇವ ಕಾಲೇ ತು ತೀರ್ಥಯಾತ್ರಾಪರೋ ನೃಪಃ|
12049013c ಗಾಧಿಃ ಸದಾರಃ ಸಂಪ್ರಾಪ್ತ ಋಚೀಕಸ್ಯಾಶ್ರಮಂ ಪ್ರತಿ||
ಇದೇ ಸಮಯದಲ್ಲಿ ತೀರ್ಥಯಾತ್ರೆಗೈಯುತ್ತಿದ್ದ ನೃಪ ಗಾಧಿಯು ಪತ್ನಿಯೊಂದಿಗೆ ಋಚೀಕನ ಆಶ್ರಮಕ್ಕೆ ಬಂದನು.
12049014a ಚರುದ್ವಯಂ ಗೃಹೀತ್ವಾ ತು ರಾಜನ್ಸತ್ಯವತೀ ತದಾ|
12049014c ಭರ್ತುರ್ವಾಕ್ಯಾದಥಾವ್ಯಗ್ರಾ ಮಾತ್ರೇ ಹೃಷ್ಟಾ ನ್ಯವೇದಯತ್||
ರಾಜನ್! ಆಗ ಸತ್ಯವತಿಯು ಚರುವಿನ ಎರಡು ಭಾಗಗಳನ್ನು ಎತ್ತಿಕೊಂಡು ಹರ್ಷದಿಂದ ತನ್ನ ಪತಿಯ ಮಾತನ್ನು ತಾಯಿಗೆ ತಿಳಿಸಿದಳು.
12049015a ಮಾತಾ ತು ತಸ್ಯಾಃ ಕೌಂತೇಯ ದುಹಿತ್ರೇ ಸ್ವಂ ಚರುಂ ದದೌ|
12049015c ತಸ್ಯಾಶ್ಚರುಮಥಾಜ್ಞಾತಮಾತ್ಮಸಂಸ್ಥಂ ಚಕಾರ ಹ||
ಕೌಂತೇಯ! ಆ ತಾಯಿಯಾದರೋ ಅಜ್ಞಾನವಶಾತ್ ತನಗೆಂದು ಅಭಿಮಂತ್ರಿಸಿದ್ದ ಚರುವನ್ನು ತನ್ನ ಮಗಳಿಗೆ ಕೊಟ್ಟು, ಅವಳಿಗೆಂದಿದ್ದ ಚರುವಿನ ಭಾಗವನ್ನು ತಾನೇ ಭುಂಜಿಸಿದಳು.
12049016a ಅಥ ಸತ್ಯವತೀ ಗರ್ಭಂ ಕ್ಷತ್ರಿಯಾಂತಕರಂ ತದಾ|
12049016c ಧಾರಯಾಮಾಸ ದೀಪ್ತೇನ ವಪುಷಾ ಘೋರದರ್ಶನಮ್||
ಆಗ ಸತ್ಯವತಿಯು ಪ್ರದೀಪ್ತತೇಜಸ್ಸಿನಿಂದ ಕೂಡಿದ ಘೋರವಾಗಿ ಕಾಣುತ್ತಿದ್ದ ಕ್ಷತ್ರಿಯಾಂತಕ ಗರ್ಭವನ್ನು ಧರಿಸಿದಳು.
12049017a ತಾಮೃಚೀಕಸ್ತದಾ ದೃಷ್ಟ್ವಾ ಧ್ಯಾನಯೋಗೇನ ವೈ ತತಃ|
12049017c ಅಬ್ರವೀದ್ರಾಜಶಾರ್ದೂಲ ಸ್ವಾಂ ಭಾರ್ಯಾಂ ವರವರ್ಣಿನೀಮ್||
ರಾಜಶರ್ದೂಲ! ಆಗ ಋಚೀಕನು ಧ್ಯಾನಯೋಗದಿಂದ ಅದನ್ನು ಕಂಡು ತನ್ನ ವರವರ್ಣಿನೀ ಪತ್ನಿಗೆ ಇಂತೆಂದನು:
12049018a ಮಾತ್ರಾಸಿ ವ್ಯಂಸಿತಾ ಭದ್ರೇ ಚರುವ್ಯತ್ಯಾಸಹೇತುನಾ|
12049018c ಜನಿಷ್ಯತೇ ಹಿ ತೇ ಪುತ್ರಃ ಕ್ರೂರಕರ್ಮಾ ಮಹಾಬಲಃ||
“ಭದ್ರೇ! ಚರುವು ಅದಲುಬದಲಾಗಿದೆ. ತಾಯಿಯಿಂದ ವಂಚಿತಳಾಗಿರುವೆ. ನಿನಗೆ ಹುಟ್ಟುವ ಮಹಾಬಲಶಾಲೀ ಮಗನು ಕ್ರೂರಕರ್ಮಿಯಾಗುವನು.
12049019a ಜನಿಷ್ಯತೇ ಹಿ ತೇ ಭ್ರಾತಾ ಬ್ರಹ್ಮಭೂತಸ್ತಪೋಧನಃ|
12049019c ವಿಶ್ವಂ ಹಿ ಬ್ರಹ್ಮ ತಪಸಾ ಮಯಾ ತತ್ರ ಸಮರ್ಪಿತಮ್||
ತಪಸ್ಸಿನಿಂದ ಸಕಲ ಬ್ರಹ್ಮತೇಜಸ್ಸನ್ನೂ ಸಪರ್ಪಿಸಿದ್ದ ಆ ಚರುವಿನಿಂದ ಹುಟ್ಟುವ ನಿನ್ನ ತಮ್ಮನು ಬ್ರಹ್ಮಭೂತನೂ ತಪೋಧನನೂ ಆಗುವನು.”
12049020a ಸೈವಮುಕ್ತಾ ಮಹಾಭಾಗಾ ಭರ್ತ್ರಾ ಸತ್ಯವತೀ ತದಾ|
12049020c ಪಪಾತ ಶಿರಸಾ ತಸ್ಮೈ ವೇಪಂತೀ ಚಾಬ್ರವೀದಿದಮ್||
ಪತಿಯು ಹೀಗೆ ಹೇಳಲು ಮಹಾಭಾಗೆ ಸತ್ಯವತಿಯು ತನ್ನ ತಲೆಯನ್ನು ಪತಿಯ ಪಾದಗಳಲ್ಲಿರಿಸಿ ಭಯದಿಂದ ನಡುಗುತ್ತಾ ಹೇಳಿದಳು:
12049021a ನಾರ್ಹೋಽಸಿ ಭಗವನ್ನದ್ಯ ವಕ್ತುಮೇವಂವಿಧಂ ವಚಃ|
12049021c ಬ್ರಾಹ್ಮಣಾಪಸದಂ ಪುತ್ರಂ ಪ್ರಾಪ್ಸ್ಯಸೀತಿ ಮಹಾಮುನೇ||
“ಮಹಾಮುನೇ! ಭಗವನ್! ಬ್ರಾಹ್ಮಣಾಪಸದನಾದ ಮಗನನ್ನು ಪಡೆಯುವೆನೆಂದು ಈ ರೀತಿ ಈಗ ಹೇಳುವುದು ಸರಿಯಲ್ಲ! ನಾನು ಅದಕ್ಕೆ ಅರ್ಹಳಲ್ಲ!”
12049022 ಋಚೀಕ ಉವಾಚ
12049022a ನೈಷ ಸಂಕಲ್ಪಿತಃ ಕಾಮೋ ಮಯಾ ಭದ್ರೇ ತಥಾ ತ್ವಯಿ|
12049022c ಉಗ್ರಕರ್ಮಾ ಭವೇತ್ಪುತ್ರಶ್ಚರುರ್ಮಾತಾ ಚ ಕಾರಣಮ್||
ಋಚೀಕನು ಹೇಳಿದನು: “ಭದ್ರೇ! ನಾನೂ ಕೂಡ ಆ ಆಸೆಯಿಂದ ಸಂಕಲ್ಪಮಾಡಿರಲಿಲ್ಲ. ಆದರೆ ನಿನ್ನ ತಾಯಿಯಿತ್ತ ಚರುವಿನ ಕಾರಣದಿಂದ ನಿನ್ನ ಮಗನು ಉಗ್ರಕರ್ಮಿಯಾಗುತ್ತಾನೆ!”
12049023 ಸತ್ಯವತ್ಯುವಾಚ
12049023a ಇಚ್ಚಽಲ್ಲೋಕಾನಪಿ ಮುನೇ ಸೃಜೇಥಾಃ ಕಿಂ ಪುನರ್ಮಮ|
12049023c ಶಮಾತ್ಮಕಮೃಜುಂ ಪುತ್ರಂ ಲಭೇಯಂ ಜಪತಾಂ ವರ||
ಸತ್ಯವತಿಯು ಹೇಳಿದಳು: “ಜಪಿಸುವವರಲ್ಲಿ ಶ್ರೇಷ್ಠನೇ! ಮುನೇ! ನೀನು ಇಚ್ಛಿಸಿದರೆ ಲೋಕಗಳನ್ನೇ ಸೃಷ್ಟಿಸಬಲ್ಲೆ! ಹೀಗಿರುವಾಗ ಶಾಂತಾತ್ಮಕ ಪುತ್ರನನ್ನು ನನಗೆ ಕೊಡಲಾರೆಯೇ?”
12049024 ಋಚೀಕ ಉವಾಚ
12049024a ನೋಕ್ತಪೂರ್ವಂ ಮಯಾ ಭದ್ರೇ ಸ್ವೈರೇಷ್ವಪ್ಯನೃತಂ ವಚಃ|
12049024c ಕಿಮುತಾಗ್ನಿಂ ಸಮಾಧಾಯ ಮಂತ್ರವಚ್ಚರುಸಾಧನೇ||
ಋಚೀಕನು ಹೇಳಿದನು: “ಭದ್ರೇ! ಇದಕ್ಕೆ ಮೊದಲು ಎಂದೂ ನಾನು ಸತ್ಯವಾಗದ ಮಾತನ್ನು ಆಡಿರಲಿಲ್ಲ. ಹೀಗಿರುವಾಗ ಅಗ್ನಿಯನ್ನು ಪ್ರತಿಷ್ಠಾಪಿಸಿ ಮಂತ್ರವನ್ನು ಉಚ್ಛರಿಸಿ ಸಿದ್ಧಪಡಿಸಿದ ಚರುವು ಸುಳ್ಳಾಗಲು ಹೇಗೆ ಸಾಧ್ಯ?”
12049025 ಸತ್ಯವತ್ಯುವಾಚ
12049025a ಕಾಮಮೇವಂ ಭವೇತ್ಪೌತ್ರೋ ಮಮೇಹ ತವ ಚೈವ ಹ|
12049025c ಶಮಾತ್ಮಕಮೃಜುಂ ಪುತ್ರಂ ಲಭೇಯಂ ಜಪತಾಂ ವರ||
ಸತ್ಯವತಿಯು ಹೇಳಿದಳು: “ಜಪಿಸುವವರಲ್ಲಿ ಶ್ರೇಷ್ಠನೇ! ನಮ್ಮ ಮೊಮ್ಮಗನು ಬೇಕಾದರೆ ನೀನು ಹೇಳಿದಂತೆ ಹುಟ್ಟಲಿ. ಆದರೆ ನನ್ನಲ್ಲಿ ಮಾತ್ರ ಈಗ ಶಾಂತಸ್ವಭಾವದ ಮಗನೇ ಹುಟ್ಟುವಂತೆ ಅನುಗ್ರಹಿಸು!”
12049026 ಋಚೀಕ ಉವಾಚ
12049026a ಪುತ್ರೇ ನಾಸ್ತಿ ವಿಶೇಷೋ ಮೇ ಪೌತ್ರೇ ವಾ ವರವರ್ಣಿನಿ|
12049026c ಯಥಾ ತ್ವಯೋಕ್ತಂ ತು ವಚಸ್ತಥಾ ಭದ್ರೇ ಭವಿಷ್ಯತಿ||
ಋಚೀಕನು ಹೇಳಿದನು: “ವರವರ್ಣಿನೀ! ನನಗೆ ಮಗ-ಮೊಮ್ಮಗರಲ್ಲಿ ವ್ಯತ್ಯಾಸವಿಲ್ಲ. ಭದ್ರೇ! ನೀನು ಹೇಳಿದಂತೆಯೇ ಆಗುತ್ತದೆ!””
12049027 ವಾಸುದೇವ ಉವಾಚ
12049027a ತತಃ ಸತ್ಯವತೀ ಪುತ್ರಂ ಜನಯಾಮಾಸ ಭಾರ್ಗವಮ್|
12049027c ತಪಸ್ಯಭಿರತಂ ಶಾಂತಂ ಜಮದಗ್ನಿಂ ಶಮಾತ್ಮಕಮ್||
ವಾಸುದೇವನು ಹೇಳಿದನು: “ಅನಂತರ ಸತ್ಯವತಿಯು ಶಾಂತನೂ, ತಪಸ್ಸಿನಲ್ಲಿ ನಿರತನೂ, ಸೌಮ್ಯಸ್ವಭಾವದನೂ ಆದ ಭಾರ್ಗವ ಜಮದಗ್ನಿಯನ್ನು ಪುತ್ರನನ್ನಾಗಿ ಪಡೆದಳು.
12049028a ವಿಶ್ವಾಮಿತ್ರಂ ಚ ದಾಯಾದಂ ಗಾಧಿಃ ಕುಶಿಕನಂದನಃ|
12049028c ಪ್ರಾಪ ಬ್ರಹ್ಮರ್ಷಿಸಮಿತಂ ವಿಶ್ವೇನ ಬ್ರಹ್ಮಣಾ ಯುತಮ್||
ಕುಶಿಕನಂದನ ಗಾಧಿಯು ಸಮಸ್ತಬ್ರಾಹ್ಮಣಗುಣಗಳಿಂದ ಕೂಡಿದ ಮತ್ತು ನಂತರ ಬ್ರಹ್ಮರ್ಷಿಪದವಿಯನ್ನೂ ಹೊಂದಿದ ವಿಶ್ವಾಮಿತ್ರನನ್ನು ಮಗನನ್ನಾಗಿ ಪಡೆದನು.
12049029a ಆರ್ಚೀಕೋ ಜನಯಾಮಾಸ ಜಮದಗ್ನಿಃ ಸುದಾರುಣಮ್|
12049029c ಸರ್ವವಿದ್ಯಾಂತಗಂ ಶ್ರೇಷ್ಠಂ ಧನುರ್ವೇದೇ ಚ ಪಾರಗಮ್||
12049029e ರಾಮಂ ಕ್ಷತ್ರಿಯಹಂತಾರಂ ಪ್ರದೀಪ್ತಮಿವ ಪಾವಕಮ್|
ಋಚೀಕನ ಮಗ ಜಮದಗ್ನಿಯು ಅಗ್ನಿಯಂತೆ ಬೆಳಗುತ್ತಿದ್ದ ಸುದಾರುಣ, ಸರ್ವವಿದ್ಯಾಂತಗ, ಧನುರ್ವಿದ್ಯಾ ಪಾರಂಗತ, ಕ್ಷತ್ರಿಯಹಂತಕ ಶ್ರೇಷ್ಠ ರಾಮನಿಗೆ ಜನ್ಮವಿತ್ತನು.
12049030a ಏತಸ್ಮಿನ್ನೇವ ಕಾಲೇ ತು ಕೃತವೀರ್ಯಾತ್ಮಜೋ ಬಲೀ||
12049030c ಅರ್ಜುನೋ ನಾಮ ತೇಜಸ್ವೀ ಕ್ಷತ್ರಿಯೋ ಹೈಹಯಾನ್ವಯಃ|
ಇದೇ ಸಮಯದಲ್ಲಿ ಹೈಹಯ ಕುಲದಲ್ಲಿ ಕೃತವೀರ್ಯನ ಮಗ ಅರ್ಜುನ ಎಂಬ ಹೆಸರಿನ ಬಲಶಾಲೀ ತೇಜಸ್ವೀ ಕ್ಷತ್ರಿಯನಿದ್ದನು.
12049031a ದದಾಹ ಪೃಥಿವೀಂ ಸರ್ವಾಂ ಸಪ್ತದ್ವೀಪಾಂ ಸಪತ್ತನಾಮ್||
12049031c ಸ್ವಬಾಹ್ವಸ್ತ್ರಬಲೇನಾಜೌ ಧರ್ಮೇಣ ಪರಮೇಣ ಚ|
ಅವನು ತನ್ನದೇ ಬಾಹುಬಲ-ಅಸ್ತ್ರಬಲಗಳಿಂದ ಹಾಗೂ ಪರಮ ಧರ್ಮದಿಂದ ಈ ಸಪ್ತದ್ವೀಪಗಳುಳ್ಳ ಪೃಥ್ವಿಯನ್ನು ಅದರ ಪಟ್ಟಣಗಳೊಂದಿಗೆ ಸುಟ್ಟುಹಾಕಿದನು.
12049032a ತೃಷಿತೇನ ಸ ಕೌರವ್ಯ ಭಿಕ್ಷಿತಶ್ಚಿತ್ರಭಾನುನಾ||
12049032c ಸಹಸ್ರಬಾಹುರ್ವಿಕ್ರಾಂತಃ ಪ್ರಾದಾದ್ಭಿಕ್ಷಾಮಥಾಗ್ನಯೇ|
ಕೌರವ್ಯ! ಒಮ್ಮೆ ಹಸಿವು ಬಾಯಾರಿಕೆಗಳಿಂದ ಬಳಲಿದ್ದ ಚಿತ್ರಭಾನು ಅಗ್ನಿಯು ಸಹಸ್ರಬಾಹುಗಳಿದ್ದ ವಿಕ್ರಾಂತ ಕಾರ್ತವೀರ್ಯಾರ್ಜುನನಲ್ಲಿ ಭಿಕ್ಷೆಯನ್ನು ಯಾಚಿಸಿ ಬಂದಿದ್ದನು. ಅವನು ಅಗ್ನಿಗೆ ಭಿಕ್ಷೆಯನ್ನಿತ್ತಿದ್ದನು.
12049033a ಗ್ರಾಮಾನ್ಪುರಾಣಿ ಘೋಷಾಂಶ್ಚ ಪತ್ತನಾನಿ ಚ ವೀರ್ಯವಾನ್||
12049033c ಜಜ್ವಾಲ ತಸ್ಯ ಬಾಣೈಸ್ತು ಚಿತ್ರಭಾನುರ್ದಿಧಕ್ಷಯಾ|
ಗ್ರಾಮ-ಪುರ-ಘೋಷ-ಪಟ್ಟಣಗಳನ್ನೂ ಸುಡಲು ಬಯಸಿ ಚಿತ್ರಭಾನುವು ಅರ್ಜುನನ ಬಾಣದ ತುದಿಯಿಂದ ಪ್ರಜ್ವಲಿಸತೊಡಗಿದನು.
12049034a ಸ ತಸ್ಯ ಪುರುಷೇಂದ್ರಸ್ಯ ಪ್ರಭಾವೇನ ಮಹಾತಪಾಃ||
12049034c ದದಾಹ ಕಾರ್ತವೀರ್ಯಸ್ಯ ಶೈಲಾನಥ ವನಾನಿ ಚ|
ಆ ಪುರುಷೇಂದ್ರ ಮಹಾತಪಸ್ವಿ ಕಾರ್ತವೀರ್ಯನ ಪ್ರಭಾವದಿಂದ ಅಗ್ನಿಯು ಶೈಲ-ವನಗಳನ್ನು ಸುಟ್ಟುಹಾಕಿದನು.
12049035a ಸ ಶೂನ್ಯಮಾಶ್ರಮಾರಣ್ಯಂ ವರುಣಸ್ಯಾತ್ಮಜಸ್ಯ ತತ್||
12049035c ದದಾಹ ಪವನೇನೇದ್ಧಶ್ಚಿತ್ರಭಾನುಃ ಸಹೈಹಯಃ|
ವಾಯುವಿನ ಮತ್ತು ಹೈಹಯನ ಸಹಾಯವನ್ನು ಪಡೆದುಕೊಂಡಿದ್ದ ಚಿತ್ರಭಾನುವು ಜನಶೂನ್ಯವಾಗಿದ್ದ ವರುಣನ ಮಗ ವಸಿಷ್ಠನ ಆಶ್ರಮವನ್ನೂ ಸುಟ್ಟುಬಿಟ್ಟನು.
12049036a ಆಪವಸ್ತಂ ತತೋ ರೋಷಾಚ್ಚಶಾಪಾರ್ಜುನಮಚ್ಯುತ||
12049036c ದಗ್ಧೇಽಶ್ರಮೇ ಮಹಾರಾಜ ಕಾರ್ತವೀರ್ಯೇಣ ವೀರ್ಯವಾನ್|
ಅಚ್ಯುತ! ಮಹಾರಾಜ! ವೀರ್ಯವಾನ್ ಕಾರ್ತವೀರ್ಯನಿಂದ ತನ್ನ ಆಶ್ರಮವು ಸುಟ್ಟುಹೋಗಲು ರೋಷದಿಂದ ಆಪವ ವಸಿಷ್ಠನು ಅರ್ಜುನನನ್ನು ಶಪಿಸಿದನು:
12049037a ತ್ವಯಾ ನ ವರ್ಜಿತಂ ಮೋಹಾದ್ಯಸ್ಮಾದ್ವನಮಿದಂ ಮಮ||
12049037c ದಗ್ಧಂ ತಸ್ಮಾದ್ರಣೇ ರಾಮೋ ಬಾಹೂಂಸ್ತೇ ಚೇತ್ಸ್ಯತೇಽರ್ಜುನ|
“ಅರ್ಜುನ! ಮೋಹದಿಂದ ನೀನು ನನ್ನ ಈ ವನವನ್ನೂ ಬಿಡದೇ ಸುಟ್ಟುಹಾಕಿದ ಕಾರಣ ರಣದಲ್ಲಿ ರಾಮನು ನಿನ್ನ ಬಾಹುಗಳನ್ನು ಕತ್ತರಿಸುತ್ತಾನೆ!”
12049038a ಅರ್ಜುನಸ್ತು ಮಹಾರಾಜ ಬಲೀ ನಿತ್ಯಂ ಶಮಾತ್ಮಕಃ||
12049038c ಬ್ರಹ್ಮಣ್ಯಶ್ಚ ಶರಣ್ಯಶ್ಚ ದಾತಾ ಶೂರಶ್ಚ ಭಾರತ|
ಮಹಾರಾಜ! ಭಾರತ! ಬಲಶಾಲೀ ಅರ್ಜುನನಾದರೋ ನಿತ್ಯವು ಶಮಾತ್ಮಕನಾಗಿದ್ದುಕೊಂಡು ಬ್ರಾಹ್ಮಣರ ಶರಣ್ಯನೂ ದಾನಿಯೂ ಶೂರನೂ ಆಗಿದ್ದನು.
12049039a ತಸ್ಯ ಪುತ್ರಾಃ ಸುಬಲಿನಃ ಶಾಪೇನಾಸನ್ಪಿತುರ್ವಧೇ||
12049039c ನಿಮಿತ್ತಮವಲಿಪ್ತಾ ವೈ ನೃಶಂಸಾಶ್ಚೈವ ನಿತ್ಯದಾ|
ಆದುದರಿಂದ ನಿತ್ಯವೂ ಅಹಿಂಸಿಯಾಗಿದ್ದ ಅವನು ಆ ಶಾಪದ ಕುರಿತು ಚಿಂತಿಸಲೇ ಇಲ್ಲ. ಆದರೆ ಅವನ ಬಲಶಾಲಿ ಮಕ್ಕಳೇ ತಂದೆಯ ವಧೆ ಮತ್ತು ಆ ಶಾಪವು ಫಲಿಸಲು ಕಾರಣರಾದರು.
12049040a ಜಮದಗ್ನಿಧೇನ್ವಾಸ್ತೇ ವತ್ಸಮಾನಿನ್ಯುರ್ಭರತರ್ಷಭ||
12049040c ಅಜ್ಞಾತಂ ಕಾರ್ತವೀರ್ಯಸ್ಯ ಹೈಹಯೇಂದ್ರಸ್ಯ ಧೀಮತಃ|
ಭರತರ್ಷಭ! ಹೈಹಯೇಂದ್ರ ಧೀಮಂತ ಕಾರ್ತವೀರ್ಯನಿಗೆ ತಿಳಿಯದಂತೆ ಅವನ ಮಕ್ಕಳು ಜಮದಗ್ನಿಯ ಹೋಮಧೇನುವಿನ ಕರುವನ್ನು ಅಪಹರಿಸಿಕೊಂಡು ಹೋದರು.
12049041a ತತೋಽರ್ಜುನಸ್ಯ ಬಾಹೂಂಸ್ತು ಚಿತ್ತ್ವಾ ವೈ ಪೌರುಷಾನ್ವಿತಃ||
12049041c ತಂ ರುವಂತಂ ತತೋ ವತ್ಸಂ ಜಾಮದಗ್ನ್ಯಃ ಸ್ವಮಾಶ್ರಮಮ್|
12049041e ಪ್ರತ್ಯಾನಯತ ರಾಜೇಂದ್ರ ತೇಷಾಮಂತಃಪುರಾತ್ಪ್ರಭುಃ||
ರಾಜೇಂದ್ರ! ಆಗ ಜಮದಗ್ನಿಯ ಮಗ ಪೌರುಷಾನ್ವಿತ ಪ್ರಭು ರಾಮನು ಅರ್ಜುನನ ಬಾಹುಗಳನ್ನು ತುಂಡರಿಸಿ ಅವನ ಅಂತಃಪುರದಿಂದ ರೋದಿಸುತ್ತಿದ್ದ ಹಸುಕರುವನ್ನು ತನ್ನ ಆಶ್ರಮಕ್ಕೆ ಪುನಃ ಕರೆತಂದನು.
12049042a ಅರ್ಜುನಸ್ಯ ಸುತಾಸ್ತೇ ತು ಸಂಭೂಯಾಬುದ್ಧಯಸ್ತದಾ|
12049042c ಗತ್ವಾಶ್ರಮಮಸಂಬುದ್ಧಂ ಜಮದಗ್ನೇರ್ಮಹಾತ್ಮನಃ||
12049043a ಅಪಾತಯಂತ ಭಲ್ಲಾಗ್ರೈಃ ಶಿರಃ ಕಾಯಾನ್ನರಾಧಿಪ|
12049043c ಸಮಿತ್ಕುಶಾರ್ಥಂ ರಾಮಸ್ಯ ನಿರ್ಗತಸ್ಯ ಮಹಾತ್ಮನಃ||
ನರಾಧಿಪ! ಅನಂತರ ಅರ್ಜುನನ ಮಕ್ಕಳು ಮೂಢತನದಿಂದ ಒಟ್ಟಾಗಿ, ಮಹಾತ್ಮ ರಾಮನು ಸಮಿತ್ತು-ದರ್ಬೆಗಳಿಗಾಗಿ ಹೊರ ಹೋಗಿರಲು, ತಪೋನಿರತನಾಗಿದ್ದ ಮಹಾತ್ಮ ಜಮದಗ್ನಿಯ ಶಿರವನ್ನು ಭಲ್ಲಗಳಿಂದ ಕಾಯದಿಂದ ಬೇರ್ಪಡಿಸಿ ಕೆಳಗುರುಳಿಸಿದರು.
12049044a ತತಃ ಪಿತೃವಧಾಮರ್ಷಾದ್ರಾಮಃ ಪರಮಮನ್ಯುಮಾನ್|
12049044c ನಿಃಕ್ಷತ್ರಿಯಾಂ ಪ್ರತಿಶ್ರುತ್ಯ ಮಹೀಂ ಶಸ್ತ್ರಮಗೃಹ್ಣತ||
ಆಗ ಪಿತೃವಧೆಯನ್ನು ಸಹಿಸಿಕೊಳ್ಳಲಾಗಿದೇ ಅತ್ಯಂತ ಕುಪಿತನಾದ ರಾಮನು ಭೂಮಿಯಲ್ಲಿ ಕ್ಷತ್ರಿಯರೇ ಇಲ್ಲದಂತೆ ಮಾಡುತ್ತೇನೆಂದು ಪ್ರತಿಜ್ಞೆಮಾಡಿ ಶಸ್ತ್ರವನ್ನು ಹಿಡಿದನು.
12049045a ತತಃ ಸ ಭೃಗುಶಾರ್ದೂಲಃ ಕಾರ್ತವೀರ್ಯಸ್ಯ ವೀರ್ಯವಾನ್|
12049045c ವಿಕ್ರಮ್ಯ ನಿಜಘಾನಾಶು ಪುತ್ರಾನ್ಪೌತ್ರಾಂಶ್ಚ ಸರ್ವಶಃ||
ಆಗ ವೀರ್ಯವಾನ್ ಭೃಗುಶಾರ್ದೂಲನು ವಿಕ್ರಮದಿಂದ ಕಾರ್ತವೀರ್ಯನ ಮಕ್ಕಳು-ಮೊಮ್ಮಕ್ಕಳು ಎಲ್ಲರನ್ನೂ ಸಂಹರಿಸಿದನು.
12049046a ಸ ಹೈಹಯಸಹಸ್ರಾಣಿ ಹತ್ವಾ ಪರಮಮನ್ಯುಮಾನ್|
12049046c ಚಕಾರ ಭಾರ್ಗವೋ ರಾಜನ್ಮಹೀಂ ಶೋಣಿತಕರ್ದಮಾಮ್||
ರಾಜನ್! ಸಹಸ್ರಾರು ಹೈಹಯರನ್ನು ಸಂಹರಿಸಿ ಪರಮಕೋಪಿ ಭಾರ್ಗವನು ರಕ್ತದ ಕೆಸರಿನಿಂದ ಭೂಮಿಯನ್ನೇ ತುಂಬಿಸಿಬಿಟ್ಟನು.
12049047a ಸ ತಥಾ ಸುಮಹಾತೇಜಾಃ ಕೃತ್ವಾ ನಿಃಕ್ಷತ್ರಿಯಾಂ ಮಹೀಮ್|
12049047c ಕೃಪಯಾ ಪರಯಾವಿಷ್ಟೋ ವನಮೇವ ಜಗಾಮ ಹ||
ಹಾಗೆ ಭೂಮಿಯನ್ನು ನಿಃಕ್ಷತ್ರಿಯರನ್ನಾಗಿಸಿ ಆ ಮಹಾತೇಜಸ್ವಿಯು ಪರಮ ಕೃಪಾವಿಷ್ಟನಾಗಿ ವನಕ್ಕೆ ತೆರಳಿದನು.
12049048a ತತೋ ವರ್ಷಸಹಸ್ರೇಷು ಸಮತೀತೇಷು ಕೇಷು ಚಿತ್|
12049048c ಕ್ಷೋಭಂ ಸಂಪ್ರಾಪ್ತವಾಂಸ್ತೀವ್ರಂ ಪ್ರಕೃತ್ಯಾ ಕೋಪನಃ ಪ್ರಭುಃ||
ಸಹಸ್ರವರ್ಷಗಳು ಕಳೆದನಂತರ ಸ್ವಭಾವತಃ ಕೋಪಿಷ್ಟನಾದ ಪ್ರಭು ರಾಮನು ಯಾವುದೋ ಒಂದು ಸಮಿತಿಯಲ್ಲಿ ತನ್ನ ಕುರಿತಾದ ಒಂದು ತೀವ್ರ ಆಕ್ಷೇಪವನ್ನು ಕೇಳಿದನು.
12049049a ವಿಶ್ವಾಮಿತ್ರಸ್ಯ ಪೌತ್ರಸ್ತು ರೈಭ್ಯಪುತ್ರೋ ಮಹಾತಪಾಃ|
12049049c ಪರಾವಸುರ್ಮಹಾರಾಜ ಕ್ಷಿಪ್ತ್ವಾಹ ಜನಸಂಸದಿ||
ಮಹಾರಾಜ! ವಿಶ್ವಾಮಿತ್ರನ ಮೊಮ್ಮಗ, ರೈಭ್ಯನ ಮಗ ಮಹಾತಪಸ್ವೀ ಪರಾವಸುವು ಜನಸಂಸದಿಯಲ್ಲಿ ಪರಶುರಾಮನನ್ನು ಆಕ್ಷೇಪಿಸುತ್ತಾ ಹೀಗೆ ಹೇಳಿದನು:
12049050a ಯೇ ತೇ ಯಯಾತಿಪತನೇ ಯಜ್ಞೇ ಸಂತಃ ಸಮಾಗತಾಃ|
12049050c ಪ್ರತರ್ದನಪ್ರಭೃತಯೋ ರಾಮ ಕಿಂ ಕ್ಷತ್ರಿಯಾ ನ ತೇ||
“ರಾಮನೇ! ಯಯಾತಿಯು ಸ್ವರ್ಗಲೋಕದಿಂದ ಭೂಮಿಗೆ ಬಿದ್ದ ಸ್ಥಳದಲ್ಲಿ ಯಜ್ಞಭಾಗಿಗಳಾಗಿದ್ದ ಪ್ರತರ್ದನನೇ ಮೊದಲಾದ ಸತ್ಪುರುಷರು ನಿನ್ನ ಪಾಲಿಗೆ ಕ್ಷತ್ರಿಯರಲ್ಲವೇನು?
12049051a ಮಿಥ್ಯಾಪ್ರತಿಜ್ಞೋ ರಾಮ ತ್ವಂ ಕತ್ಥಸೇ ಜನಸಂಸದಿ|
12049051c ಭಯಾತ್ಕ್ಷತ್ರಿಯವೀರಾಣಾಂ ಪರ್ವತಂ ಸಮುಪಾಶ್ರಿತಃ||
ರಾಮ! ನೀನು ಮಿಥ್ಯಾಪ್ರತಿಜ್ಞನು! ಜನಸಂಸಧಿಯಲ್ಲಿ ಹೇಗೆ ನೀನು ನಿನ್ನನ್ನೇ ಪ್ರಶಂಸಿಸಿಕೊಳ್ಳುವೆ? ಕ್ಷತ್ರಿಯ ವೀರರ ಭಯದಿಂದ ನೀನು ಪರ್ವತವನ್ನು ಆಶ್ರಯಿಸಿರುವೆ!”
12049052a ಸ ಪುನಃ ಕ್ಷತ್ರಿಯಶತೈಃ ಪೃಥಿವೀಮನುಸಂತತಾಮ್|
12049052c ಪರಾವಸೋಸ್ತದಾ ಶ್ರುತ್ವಾ ಶಸ್ತ್ರಂ ಜಗ್ರಾಹ ಭಾರ್ಗವಃ||
ಪರಾವಸುವಿನ ಆ ಮಾತನ್ನು ಕೇಳಿ ಭಾರ್ಗವನು ಭೂಮಿಯಲ್ಲಿ ಸಂತಾನಗಳನ್ನು ಪಡೆದಿದ್ದ ನೂರಾರು ಕ್ಷತ್ರಿಯರನ್ನು ಸಂಹರಿಸಲು ಪುನಃ ಶಸ್ತ್ರವನ್ನು ಹಿಡಿದನು.
12049053a ತತೋ ಯೇ ಕ್ಷತ್ರಿಯಾ ರಾಜನ್ಶತಶಸ್ತೇನ ಜೀವಿತಾಃ|
12049053c ತೇ ವಿವೃದ್ಧಾ ಮಹಾವೀರ್ಯಾಃ ಪೃಥಿವೀಪತಯೋಽಭವನ್||
ರಾಜನ್! ಜೀವಿತರಾಗಿದ್ದ ನೂರಾರು ಮಹಾವೀರ್ಯ ಕ್ಷತ್ರಿಯರು ವೃದ್ಧರಾಗಿ ಪೃಥ್ವೀಪತಿಗಳಾಗಿದ್ದರು.
12049054a ಸ ಪುನಸ್ತಾನ್ಜಘಾನಾಶು ಬಾಲಾನಪಿ ನರಾಧಿಪ|
12049054c ಗರ್ಭಸ್ಥೈಸ್ತು ಮಹೀ ವ್ಯಾಪ್ತಾ ಪುನರೇವಾಭವತ್ತದಾ||
ನರಾಧಿಪ! ಅವನು ಪುನಃ ಬಾಲಕರನ್ನೂ ಬಿಡದೇ ಅವರನ್ನು ಸಂಹರಿಸಿದನು. ಆದರೆ ಗರ್ಭಿಣಿಯರಾಗಿದ್ದ ಕ್ಷತ್ರಿಯಸ್ತ್ರೀಯರಿಂದ ಭೂಮಿಯು ವ್ಯಾಪ್ತವಾಗಿತ್ತು.
12049055a ಜಾತಂ ಜಾತಂ ಸ ಗರ್ಭಂ ತು ಪುನರೇವ ಜಘಾನ ಹ|
12049055c ಅರಕ್ಷಂಶ್ಚ ಸುತಾನ್ಕಾಂಶ್ಚಿತ್ತದಾ ಕ್ಷತ್ರಿಯಯೋಷಿತಃ||
ಮಕ್ಕಳು ಹುಟ್ಟುತ್ತಿದ್ದಂತೆಯೇ ಅವರನ್ನೂ ಪುನಃ ರಾಮನು ಸಂಹರಿಸಿದನು. ಆ ಕೆಲವು ಕ್ಷತ್ರಿಯ ಸ್ತ್ರೀಯರು ತಮ್ಮ ಮಕ್ಕಳನ್ನು ರಕ್ಷಿಸಿಕೊಂಡರು.
12049056a ತ್ರಿಃಸಪ್ತಕೃತ್ವಃ ಪೃಥಿವೀಂ ಕೃತ್ವಾ ನಿಃಕ್ಷತ್ರಿಯಾಂ ಪ್ರಭುಃ|
12049056c ದಕ್ಷಿಣಾಮಶ್ವಮೇಧಾಂತೇ ಕಶ್ಯಪಾಯಾದದತ್ತತಃ||
ಪ್ರಭು ರಾಮನು ಇಪ್ಪತ್ತೇಳು ಬಾರಿ ಭೂಮಿಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿ ಅಶ್ವಮೇಧದ ಅಂತ್ಯದಲ್ಲಿ ಭೂಮಿಯನ್ನು ಕಶ್ಯಪನಿಗೆ ದಕ್ಷಿಣೆಯನ್ನಾಗಿತ್ತನು.
12049057a ಕ್ಷತ್ರಿಯಾಣಾಂ ತು ಶೇಷಾರ್ಥಂ ಕರೇಣೋದ್ದಿಶ್ಯ ಕಶ್ಯಪಃ|
12049057c ಸ್ರುಕ್ಪ್ರಗ್ರಹವತಾ ರಾಜನ್ಶ್ರೀಮಾನ್ವಾಕ್ಯಮಥಾಬ್ರವೀತ್||
ರಾಜನ್! ಆಗ ಉಳಿದ ಕ್ಷತ್ರಿಯರನ್ನು ರಕ್ಷಿಸುವ ಉದ್ದೇಶದಿಂದ ಶ್ರೀಮಾನ್ ಕಶ್ಯಪನು ಕೈಯಲ್ಲಿ ಸ್ರುಕ್ಕನ್ನು ಹಿಡಿದು ಈ ಮಾತನ್ನಾಡಿದನು:
12049058a ಗಚ್ಚ ಪಾರಂ ಸಮುದ್ರಸ್ಯ ದಕ್ಷಿಣಸ್ಯ ಮಹಾಮುನೇ|
12049058c ನ ತೇ ಮದ್ವಿಷಯೇ ರಾಮ ವಸ್ತವ್ಯಮಿಹ ಕರ್ಹಿ ಚಿತ್||
“ಮಹಾಮುನೇ! ರಾಮ! ನನ್ನ ಈ ರಾಜ್ಯದಲ್ಲಿ ನೀನು ಯಾವಾಗಲೂ ವಾಸಿಸಬಾರದು. ಸಮುದ್ರದ ದಕ್ಷಿಣತೀರಕ್ಕೆ ಹೊರಟುಹೋಗು!”
12049059a ತತಃ ಶೂರ್ಪಾರಕಂ ದೇಶಂ ಸಾಗರಸ್ತಸ್ಯ ನಿರ್ಮಮೇ|
12049059c ಸಂತ್ರಾಸಾಜ್ಜಾಮದಗ್ನ್ಯಸ್ಯ ಸೋಽಪರಾಂತಂ ಮಹೀತಲಮ್||
ಅನಂತರ ಸಾಗರನು ಜಾಮದಗ್ನಿಯು ತಂಗಲೋಸುಗ ಶೂರ್ಪಾರಕವೆಂಬ ದೇಶವನ್ನು ನಿರ್ಮಿಸಿದನು, ಆ ಭೂಮಿಯನ್ನು ಅಪರಾಂತಭೂಮಿಯೆಂದೂ ಕರೆಯುತ್ತಾರೆ.
12049060a ಕಶ್ಯಪಸ್ತು ಮಹಾರಾಜ ಪ್ರತಿಗೃಹ್ಯ ಮಹೀಮಿಮಾಮ್|
12049060c ಕೃತ್ವಾ ಬ್ರಾಹ್ಮಣಸಂಸ್ಥಾಂ ವೈ ಪ್ರವಿವೇಶ ಮಹಾವನಮ್||
ಮಹಾರಾಜ! ಕಶ್ಯಪನಾದರೋ ಈ ಭೂಮಿಯನ್ನು ಸ್ವೀಕರಿಸಿ, ಅದನ್ನು ಬ್ರಾಹ್ಮಣರಿಗೆ ಕೊಟ್ಟು, ಮಹಾವನವನ್ನು ಪ್ರವೇಶಿಸಿದನು.
12049061a ತತಃ ಶೂದ್ರಾಶ್ಚ ವೈಶ್ಯಾಶ್ಚ ಯಥಾಸ್ವೈರಪ್ರಚಾರಿಣಃ|
12049061c ಅವರ್ತಂತ ದ್ವಿಜಾಗ್ರ್ಯಾಣಾಂ ದಾರೇಷು ಭರತರ್ಷಭ||
ಭರತರ್ಷಭ! ಆಗ ವೈಶ್ಯ-ಶೂದ್ರರು ದ್ವಿಜಾಗ್ರರ ಪತ್ನಿಯರೊಡನೆ ದುರ್ವ್ಯವಹಾರಗಳಲ್ಲಿ ತೊಡಗಿದರು.
12049062a ಅರಾಜಕೇ ಜೀವಲೋಕೇ ದುರ್ಬಲಾ ಬಲವತ್ತರೈಃ|
12049062c ಬಾಧ್ಯಂತೇ ನ ಚ ವಿತ್ತೇಷು ಪ್ರಭುತ್ವಮಿಹ ಕಸ್ಯ ಚಿತ್||
ಅರಾಜಕತೆಯಾಗಿ ಜೀವಲೋಕದಲ್ಲಿ ಬಲಶಾಲಿಗಳು ದುರ್ಬಲರನ್ನು ಬಾಧಿಸತೊಡಗಿದರು. ಸಂಪತ್ತು ಯಾರ ಪ್ರಭುತ್ವದಲ್ಲಿಯೂ ಉಳಿಯಲಿಲ್ಲ.
12049063a ತತಃ ಕಾಲೇನ ಪೃಥಿವೀ ಪ್ರವಿವೇಶ ರಸಾತಲಮ್|
12049063c ಅರಕ್ಷ್ಯಮಾಣಾ ವಿಧಿವತ್ಕ್ಷತ್ರಿಯೈರ್ಧರ್ಮರಕ್ಷಿಭಿಃ||
ಕಾಲಾಂತರದಲ್ಲಿ ಧರ್ಮರಕ್ಷಿಗಳಾದ ಕ್ಷತ್ರಿಯರಿಂದ ವಿಧಿವತ್ತಾಗಿ ರಕ್ಷಿಸಲ್ಪಡದ ಪೃಥ್ವಿಯು ರಸಾತಲವನ್ನು ಪ್ರವೇಶಿಸಿತು.
12049064a ಊರುಣಾ ಧಾರಯಾಮಾಸ ಕಶ್ಯಪಃ ಪೃಥಿವೀಂ ತತಃ|
12049064c ನಿಮಜ್ಜಂತೀಂ ತದಾ ರಾಜಂಸ್ತೇನೋರ್ವೀತಿ ಮಹೀ ಸ್ಮೃತಾ||
ರಾಜನ್! ಮುಳುಗಿಹೋಗುತ್ತಿರುವ ಆ ಭೂಮಿಯನ್ನು ಕಶ್ಯಪನು ತನ್ನ ತೊಡೆಯಲ್ಲಿ ಧರಿಸಿದನು. ಆದುದರಿಂದಲೇ ಈ ಮಹಿಗೆ ಉರ್ವೀ ಎಂದೂ ಕರೆಯಲ್ಪಡುತ್ತದೆ.
12049065a ರಕ್ಷಿಣಶ್ಚ ಸಮುದ್ದಿಶ್ಯ ಪ್ರಾಯಾಚತ್ಪೃಥಿವೀ ತದಾ|
12049065c ಪ್ರಸಾದ್ಯ ಕಶ್ಯಪಂ ದೇವೀ ಕ್ಷತ್ರಿಯಾನ್ಬಾಹುಶಾಲಿನಃ||
ಆಗ ಪೃಥ್ವೀ ದೇವಿಯು ಕಶ್ಯಪನನ್ನು ಪ್ರಸನ್ನಗೊಳಿಸಿ ತನ್ನ ರಕ್ಷಣಾರಾರ್ಥವಾಗಿ ಬಾಹುಶಾಲೀ ಕ್ಷತ್ರಿಯರನ್ನು ಯಾಚಿಸಿದಳು.
12049066a ಸಂತಿ ಬ್ರಹ್ಮನ್ಮಯಾ ಗುಪ್ತಾ ನೃಷು ಕ್ಷತ್ರಿಯಪುಂಗವಾಃ|
12049066c ಹೈಹಯಾನಾಂ ಕುಲೇ ಜಾತಾಸ್ತೇ ಸಂರಕ್ಷಂತು ಮಾಂ ಮುನೇ||
“ಮುನೇ! ಬ್ರಹ್ಮನ್! ನಾನು ಗೌಪ್ಯವಾಗಿ ಸಂರಕ್ಷಿಸಿದ್ದ ಹೈಹಯ ಕುಲದಲ್ಲಿ ಹುಟ್ಟಿದ ಕ್ಷತ್ರಿಯಪುಂಗವ ನರರಿದ್ದಾರೆ. ಅವರು ನನ್ನನ್ನು ರಕ್ಷಿಸಲಿ!
12049067a ಅಸ್ತಿ ಪೌರವದಾಯಾದೋ ವಿಡೂರಥಸುತಃ ಪ್ರಭೋ|
12049067c ಋಕ್ಷೈಃ ಸಂವರ್ಧಿತೋ ವಿಪ್ರ ಋಕ್ಷವತ್ಯೇವ ಪರ್ವತೇ||
ಪ್ರಭೋ! ವಿಪ್ರ! ಪೌರವ ವಿಡೂರರಥನ ಮಗನಿದ್ದಾನೆ. ಅವನು ಋಕ್ಷವತ್ಪರ್ವತದಲ್ಲಿ ಕರಡಿಗಳಿಂದ ಬೆಳೆಸಲ್ಪಟ್ಟಿದ್ದಾನೆ.
12049068a ತಥಾನುಕಂಪಮಾನೇನ ಯಜ್ವನಾಥಾಮಿತೌಜಸಾ|
12049068c ಪರಾಶರೇಣ ದಾಯಾದಃ ಸೌದಾಸಸ್ಯಾಭಿರಕ್ಷಿತಃ||
ಹಾಗೆಯೇ ಯಜ್ಞಪರಾಯಣನಾದ ಅಮಿತ ತೇಜಸ್ವಿಯಾದ ಸೌದಾಸನ ಮಗನನ್ನು ಪರಾಶರನು ಅನುಕಂಪದಿಂದ ರಕ್ಷಿಸಿಕೊಂಡಿದ್ದಾನೆ.
12049069a ಸರ್ವಕರ್ಮಾಣಿ ಕುರುತೇ ತಸ್ಯರ್ಷೇಃ ಶೂದ್ರವದ್ಧಿ ಸಃ|
12049069c ಸರ್ವಕರ್ಮೇತ್ಯಭಿಖ್ಯಾತಃ ಸ ಮಾಂ ರಕ್ಷತು ಪಾರ್ಥಿವಃ||
ಅವನು ಆ ಋಷಿಯಲ್ಲಿದ್ದುಕೊಂಡು ಶೂದ್ರನಂತೆ ಎಲ್ಲ ಕರ್ಮಗಳನ್ನೂ ಮಾಡುತ್ತಿದ್ದಾನೆ. ಸರ್ವಕರ್ಮನೆಂದು ವಿಖ್ಯಾತನಾಗಿರುವ ಆ ಪಾರ್ಥಿವನು ನನ್ನನ್ನು ರಕ್ಷಿಸಲಿ!
12049070a ಶಿಬೇಃ ಪುತ್ರೋ ಮಹಾತೇಜಾ ಗೋಪತಿರ್ನಾಮ ನಾಮತಃ|
12049070c ವನೇ ಸಂರಕ್ಷಿತೋ ಗೋಭಿಃ ಸೋಽಭಿರಕ್ಷತು ಮಾಂ ಮುನೇ||
ಮುನೇ! ಶಿಬಿಯ ಪುತ್ರ ಮಹಾತೇಜಸ್ವಿಯು ಗೋಪತಿಯೆಂಬ ಹೆಸರಿನಿಂದ ವನದಲ್ಲಿ ಗೋವುಗಳಿಂದ ಸಂರಕ್ಷಿಸಲ್ಪಡುತ್ತಿದ್ದಾನೆ. ಅವನೂ ಕೂಡ ನನ್ನನ್ನು ರಕ್ಷಿಸಲಿ!
12049071a ಪ್ರತರ್ದನಸ್ಯ ಪುತ್ರಸ್ತು ವತ್ಸೋ ನಾಮ ಮಹಾಯಶಾಃ|
12049071c ವತ್ಸೈಃ ಸಂವರ್ಧಿತೋ ಗೋಷ್ಠೇ ಸ ಮಾಂ ರಕ್ಷತು ಪಾರ್ಥಿವಃ||
ಪ್ರತರ್ದನನ ವತ್ಸ ಎಂಬ ಹೆಸರಿನ ಮಗನು ಮಹಾಯಶಸ್ವಿಯು. ಅವನು ಗೋಶಾಲೆಯಲ್ಲಿ ಹಸುಕರುಗಳ ಜೊತೆಗೆ ಬೆಳೆದಿದ್ದಾನೆ. ಆ ಪಾರ್ಥಿವನು ನನ್ನನ್ನು ರಕ್ಷಿಸಲಿ!
12049072a ದಧಿವಾಹನಪೌತ್ರಸ್ತು ಪುತ್ರೋ ದಿವಿರಥಸ್ಯ ಹ|
12049072c ಅಂಗಃ ಸ ಗೌತಮೇನಾಪಿ ಗಂಗಾಕೂಲೇಽಭಿರಕ್ಷಿತಃ||
ದಧಿವಾಹನನ ಮೊಮ್ಮಗ, ದಿವಿರಥನ ಮಗ ಅಂಗನನ್ನು ಗೌತಮನು ಗಂಗಾಕೂಲದಲ್ಲಿ ರಕ್ಷಿಸಿಕೊಂಡಿದ್ದಾನೆ.
12049073a ಬೃಹದ್ರಥೋ ಮಹಾಬಾಹುರ್ಭುವಿ ಭೂತಿಪುರಸ್ಕೃತಃ|
12049073c ಗೋಲಾಂಗೂಲೈರ್ಮಹಾಭಾಗೋ ಗೃಧ್ರಕೂಟೇಽಭಿರಕ್ಷಿತಃ||
ಭೂಮಿಯಲ್ಲಿ ಅತ್ಯಂತ ಪುರಸ್ಕೃತನಾದ ಮಹಾಭಾಗ ಮಹಾಬಾಹು ಬೃಹದ್ರಥನು ಗೃಧ್ರಕೂಟದಲ್ಲಿ ಗೋಲಾಂಗೂಲ[1]ಗಳಿಂದ ರಕ್ಷಿಸಲ್ಪಟ್ಟಿದ್ದಾನೆ.
12049074a ಮರುತ್ತಸ್ಯಾನ್ವವಾಯೇ ತು ಕ್ಷತ್ರಿಯಾಸ್ತುರ್ವಸೋಸ್ತ್ರಯಃ|
12049074c ಮರುತ್ಪತಿಸಮಾ ವೀರ್ಯೇ ಸಮುದ್ರೇಣಾಭಿರಕ್ಷಿತಾಃ||
ವೀರ್ಯದಲ್ಲಿ ದೇವರಾಜನ ಸಮನಾದ ಮರುತ್ತನ ವಂಶದಲ್ಲಿ ಹುಟ್ಟಿದ ಕ್ಷತ್ರಿಯರಾಜಕುಮಾರನನ್ನು ಸಮುದ್ರನು ರಕ್ಷಿಸಿರುತ್ತಾನೆ. ಅವನೂ ಕೂಡ ನನ್ನನ್ನು ಸಂರಕ್ಷಿಸಲಿ!
12049075a ಏತೇ ಕ್ಷತ್ರಿಯದಾಯಾದಾಸ್ತತ್ರ ತತ್ರ ಪರಿಶ್ರುತಾಃ|
12049075c ಸಮ್ಯಗ್ಮಾಮಭಿರಕ್ಷಂತು ತತಃ ಸ್ಥಾಸ್ಯಾಮಿ ನಿಶ್ಚಲಾ||
ಅಲ್ಲಲ್ಲಿಯೇ ವಿಖ್ಯಾತರಾಗಿರುವ ಈ ಕ್ಷತ್ರಿಯ ಕುಮಾರರು ನನ್ನನ್ನು ರಕ್ಷಿಸಿದ್ದೇ ಆದರೆ ನಾನು ನಿಶ್ಚಿಂತಳಾಗಿ ಅಚಲಳಾಗಿ ನನ್ನ ಹಿಂದಿನ ಸ್ಥಾನದಲ್ಲಿಯೇ ನಿಲ್ಲುತ್ತೇನೆ.
12049076a ಏತೇಷಾಂ ಪಿತರಶ್ಚೈವ ತಥೈವ ಚ ಪಿತಾಮಹಾಃ|
12049076c ಮದರ್ಥಂ ನಿಹತಾ ಯುದ್ಧೇ ರಾಮೇಣಾಕ್ಲಿಷ್ಟಕರ್ಮಣಾ||
ಇವರ ತಂದೆಯಂದಿರು ಮತ್ತು ಪಿತಾಮಹರು ನನಗಾಗಿ ಯುದ್ಧದಲ್ಲಿ ಅಕ್ಲಿಷ್ಟಕರ್ಮಣಿ ರಾಮನೊಂದಿಗೆ ಹೋರಾಡಿ ಮಡಿದರು.
12049077a ತೇಷಾಮಪಚಿತಿಶ್ಚೈವ ಮಯಾ ಕಾರ್ಯಾ ನ ಸಂಶಯಃ|
12049077c ನ ಹ್ಯಹಂ ಕಾಮಯೇ ನಿತ್ಯಮವಿಕ್ರಾಂತೇನ ರಕ್ಷಣಮ್||
ಅವರ ಮಕ್ಕಳ ಪ್ರತಿ ಇದು ನನ್ನ ಕರ್ತ್ಯವ್ಯವೂ ಹೌದು ಎನ್ನುವುದರಲ್ಲಿ ಸಂಶಯವಿಲ್ಲ. ನಿತ್ಯವೂ ಕೇವಲ ವಿಕ್ರಾಂತದಿಂದ ರಕ್ಷಿಸುವವನನ್ನು ನಾನು ಬಯಸುವುದಿಲ್ಲ!”
12049078a ತತಃ ಪೃಥಿವ್ಯಾ ನಿರ್ದಿಷ್ಟಾಂಸ್ತಾನ್ಸಮಾನೀಯ ಕಶ್ಯಪಃ|
12049078c ಅಭ್ಯಷಿಂಚನ್ಮಹೀಪಾಲಾನ್ಕ್ಷತ್ರಿಯಾನ್ವೀರ್ಯಸಂಮತಾನ್||
ಆಗ ಕಶ್ಯಪನು ಪೃಥ್ವಿಯು ನಿರ್ದಿಷ್ಟಪಡಿಸಿದ ಆ ವೀರ್ಯಸಂಮತ ಕ್ಷತ್ರಿಯರನ್ನು ಕರೆಯಿಸಿ ಮಹೀಪಾಲರನ್ನಾಗಿ ಅಭಿಷೇಕಿಸಿದನು.
12049079a ತೇಷಾಂ ಪುತ್ರಾಶ್ಚ ಪೌತ್ರಾಶ್ಚ ಯೇಷಾಂ ವಂಶಾಃ ಪ್ರತಿಷ್ಠಿತಾಃ|
12049079c ಏವಮೇತತ್ಪುರಾ ವೃತ್ತಂ ಯನ್ಮಾಂ ಪೃಚ್ಚಸಿ ಪಾಂಡವ||
ಅವರ ಪುತ್ರ-ಪೌತ್ರರು ಅವರವರ ವಂಶಗಳಲ್ಲಿ ರಾಜ್ಯವಾಳುತ್ತಿದ್ದಾರೆ. ಪಾಂಡವ! ಇದೇ ನೀನು ಕೇಳಿದಂಥಹ ಪುರಾತನ ವೃತ್ತಾಂತ!””
12049080 ವೈಶಂಪಾಯನ ಉವಾಚ
12049080a ಏವಂ ಬ್ರುವನ್ನೇವ ಯದುಪ್ರವೀರೋ| ಯುಧಿಷ್ಠಿರಂ ಧರ್ಮಭೃತಾಂ ವರಿಷ್ಠಮ್|
12049080c ರಥೇನ ತೇನಾಶು ಯಯೌ ಯಥಾರ್ಕೋ| ವಿಶನ್ಪ್ರಭಾಭಿರ್ಭಗವಾಂಸ್ತ್ರಿಲೋಕಮ್||
ವೈಶಂಪಾಯನನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠ ಯುಧಿಷ್ಠಿರನಿಗೆ ಇದನ್ನು ಹೇಳುತ್ತಾ ಯದುಪ್ರವೀರ ಕೃಷ್ಣನು ರಥದಲ್ಲಿ ಕುಳಿತು ಸೂರ್ಯನು ಹೇಗೆ ತನ್ನ ಕಿರಣಗಳಿಂದ ವಿಶ್ವವನ್ನೇ ಬೆಳಗುವನೋ ಹಾಗೆ ಬೇಗ ಬೇಗ ಮುಂದೆಸಾರಿದನು.”
ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ರಾಮೋಪಾಖ್ಯಾನೇ ಏಕೋನಪಂಚಾಶತ್ತಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ರಾಮೋಪಾಖ್ಯಾನ ಎನ್ನುವ ನಲ್ವತ್ತೊಂಭತ್ತನೇ ಅಧ್ಯಾಯವು.
[1] ಗೋವಿನ ಬಾಲದಂಥಹ ಬಾಲವುಳ್ಳ ಒಂದು ಜಾತಿಯ ಕಪಿಗಳು.
