ಶಾಂತಿ ಪರ್ವ: ರಾಜಧರ್ಮ ಪರ್ವ

೪೮

12048001 ವೈಶಂಪಾಯನ ಉವಾಚ

12048001a ತತಃ ಸ ಚ ಹೃಷೀಕೇಶಃ ಸ ಚ ರಾಜಾ ಯುಧಿಷ್ಠಿರಃ|

12048001c ಕೃಪಾದಯಶ್ಚ ತೇ ಸರ್ವೇ ಚತ್ವಾರಃ ಪಾಂಡವಾಶ್ಚ ಹ||

12048002a ರಥೈಸ್ತೇ ನಗರಾಕಾರೈಃ ಪತಾಕಾಧ್ವಜಶೋಭಿತೈಃ|

12048002c ಯಯುರಾಶು ಕುರುಕ್ಷೇತ್ರಂ ವಾಜಿಭಿಃ ಶೀಘ್ರಗಾಮಿಭಿಃ||

ವೈಶಂಪಾಯನನು ಹೇಳಿದನು: “ಅನಂತರ ಹೃಷೀಕೇಶ, ರಾಜಾ ಯುಧಿಷ್ಠಿರ, ನಾಲ್ವರು ಪಾಂಡವರು, ಮತ್ತು ಕೃಪನೇ ಮೊದಲಾದವರೆಲ್ಲರೂ ಶೀಘ್ರ ಕುದುರೆಗಳನ್ನು ಕಟ್ಟಿದ, ಪತಾಕೆ-ಧ್ವಜಗಳಿಂದ ಶೋಭಿಸುತ್ತಿರುವ, ನಗರಗಳ ಆಕಾರದ ರಥಗಳಲ್ಲಿ ಕುಳಿತು ಕುರುಕ್ಷೇತ್ರಕ್ಕೆ ಪ್ರಯಾಣಿಸಿದರು.

12048003a ತೇಽವತೀರ್ಯ ಕುರುಕ್ಷೇತ್ರಂ ಕೇಶಮಜ್ಜಾಸ್ಥಿಸಂಕುಲಮ್|

12048003c ದೇಹನ್ಯಾಸಃ ಕೃತೋ ಯತ್ರ ಕ್ಷತ್ರಿಯೈಸ್ತೈರ್ಮಹಾತ್ಮಭಿಃ||

ಮಹಾತ್ಮ ಕ್ಷತ್ರಿಯರು ಎಲ್ಲಿ ದೇಹಗಳನ್ನು ತೊರೆದಿದ್ದರೋ ಆ ತಲೆಗೂದಲು-ಮಜ್ಜೆ-ಮೂಳೆಗಳ ಸಮಾಕುಲವಾಗಿದ್ದ ಕುರುಕ್ಷೇತ್ರದಲ್ಲಿ ಅವರು ಇಳಿದರು.

12048004a ಗಜಾಶ್ವದೇಹಾಸ್ಥಿಚಯೈಃ ಪರ್ವತೈರಿವ ಸಂಚಿತಮ್|

12048004c ನರಶೀರ್ಷಕಪಾಲೈಶ್ಚ ಶಂಖೈರಿವ ಸಮಾಚಿತಮ್||

ಅಲ್ಲಿ ಆನೆ-ಕುದುರೆಗಳ ದೇಹಗಳೂ ಮೂಳೆಗಳೂ ಪರ್ವತಗಳೋಪಾದಿಯಲ್ಲಿ ಬಿದ್ದಿದ್ದವು. ಅಲ್ಲಿ ಬಿದ್ದಿದ್ದ ಮನುಷ್ಯರ ತಲೆಬುರುಡೆಗಳು ಶಂಖಗಳಂತೆ ತೋರುತ್ತಿದ್ದವು.

12048005a ಚಿತಾಸಹಸ್ರೈರ್ನಿಚಿತಂ ವರ್ಮಶಸ್ತ್ರಸಮಾಕುಲಮ್|

12048005c ಆಪಾನಭೂಮಿಂ ಕಾಲಸ್ಯ ತದಾ ಭುಕ್ತೋಜ್ಜಿತಾಮಿವ||

ಸಹಸ್ರಾರು ಚಿತೆಗಳು ಉರಿಯುತ್ತಿದ್ದವು. ಕವಚ-ಆಯುಧಗಳು ರಾಶಿ-ರಾಶಿಯಾಗಿ ಬಿದ್ದಿದ್ದವು. ಆಗ ಕುರುಕ್ಷೇತ್ರವು ಕಾಲನ ಪಾನಭೂಮಿಯಂತೆ ತೋರುತ್ತಿತ್ತು. ಅಲ್ಲಲ್ಲಿ ಬಿದ್ದಿದ್ದ ಮಜ್ಜೆ-ಅಸ್ತಿಗಳು ಕಾಲನು ತಿಂದು ಉಳಿಸಿದ ಎಂಜಲಿನಂತೆ ತೋರುತ್ತಿದ್ದವು.

12048006a ಭೂತಸಂಘಾನುಚರಿತಂ ರಕ್ಷೋಗಣನಿಷೇವಿತಮ್|

12048006c ಪಶ್ಯಂತಸ್ತೇ ಕುರುಕ್ಷೇತ್ರಂ ಯಯುರಾಶು ಮಹಾರಥಾಃ||

ಭೂತಗಣಗಳು ಸಂಚರಿಸುತ್ತಿದ್ದ ಮತ್ತು ರಾಕ್ಷಸಗಣಗಳಿಂದ ಸಂಸೇವಿಸಲ್ಪಟ್ಟ ಕುರುಕ್ಷೇತ್ರವನ್ನು ನೋಡುತ್ತಾ ಆ ಮಹಾರಥರು ಸಾಗಿದರು.

12048007a ಗಚ್ಚನ್ನೇವ ಮಹಾಬಾಹುಃ ಸರ್ವಯಾದವನಂದನಃ|

12048007c ಯುಧಿಷ್ಠಿರಾಯ ಪ್ರೋವಾಚ ಜಾಮದಗ್ನ್ಯಸ್ಯ ವಿಕ್ರಮಮ್||

ಹಾಗೆ ಸಾಗುತ್ತಿರುವಾಗ ಸರ್ವಯಾದವರ ನಂದನ, ಮಹಾಬಾಹು ಕೃಷ್ಣನು ಯುಧಿಷ್ಠಿರನಿಗೆ ಜಾಮದಗ್ನಿ ಪರಶುರಾಮನ ವಿಕ್ರಮದ ಕುರಿತು ಹೇಳಿದನು:

12048008a ಅಮೀ ರಾಮಹ್ರದಾಃ ಪಂಚ ದೃಶ್ಯಂತೇ ಪಾರ್ಥ ದೂರತಃ|

12048008c ಯೇಷು ಸಂತರ್ಪಯಾಮಾಸ ಪೂರ್ವಾನ್ಕ್ಷತ್ರಿಯಶೋಣಿತೈಃ||

“ಪಾರ್ಥ! ಇಗೋ ದೂರದಲ್ಲಿ ಕಾಣುತ್ತಿರುವ ಈ ಐದು ಸರೋವರಗಳಲ್ಲಿ ಹಿಂದೆ ರಾಮನು ಕ್ಷತ್ರಿಯರ ರಕ್ತದಿಂದ ತರ್ಪಣಗಳನ್ನಿತ್ತಿದ್ದನು. 

12048009a ತ್ರಿಃಸಪ್ತಕೃತ್ವೋ ವಸುಧಾಂ ಕೃತ್ವಾ ನಿಃಕ್ಷತ್ರಿಯಾಂ ಪ್ರಭುಃ|

12048009c ಇಹೇದಾನೀಂ ತತೋ ರಾಮಃ ಕರ್ಮಣೋ ವಿರರಾಮ ಹ||

ಪ್ರಭು ರಾಮನು ಇಪ್ಪತ್ತೊಂದು ಬಾರಿ ಭೂಮಿಯನ್ನು ನಿಃಕ್ಷತ್ರಿಯರನ್ನಾಗಿ ಮಾಡಿ ಇಲ್ಲಿಯೇ ಆ ಕರ್ಮದಿಂದ ವಿರತನಾದನು.”

12048010 ಯುಧಿಷ್ಠಿರ ಉವಾಚ

12048010a ತ್ರಿಃಸಪ್ತಕೃತ್ವಃ ಪೃಥಿವೀ ಕೃತಾ ನಿಃಕ್ಷತ್ರಿಯಾ ತದಾ|

12048010c ರಾಮೇಣೇತಿ ಯದಾತ್ಥ ತ್ವಮತ್ರ ಮೇ ಸಂಶಯೋ ಮಹಾನ್||

ಯುಧಿಷ್ಠಿರನು ಹೇಳಿದನು: “ರಾಮನು ಇಪ್ಪತ್ತೊಂದು ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯರನ್ನಾಗಿಸಿದನೆಂದು ಹೇಳಿದೆಯಲ್ಲಾ! ಅದರ ಕುರಿತು ಒಂದು ಮಹಾ ಸಂಶಯವು ನನ್ನಲ್ಲಿದೆ.

12048011a ಕ್ಷತ್ರಬೀಜಂ ಯದಾ ದಗ್ಧಂ ರಾಮೇಣ ಯದುಪುಂಗವ|

12048011c ಕಥಂ ಭೂಯಃ ಸಮುತ್ಪತ್ತಿಃ ಕ್ಷತ್ರಸ್ಯಾಮಿತವಿಕ್ರಮ||

ಅಮಿತವಿಕ್ರಮಿ! ಯದುಪುಂಗವ! ರಾಮನಿಂದ ಕ್ಷತ್ರಬೀಜವು ಭಸ್ಮವಾದ ನಂತರ ಪುನಃ ಹೇಗೆ ಕ್ಷತ್ರಿಯರ ಉತ್ಪತ್ತಿಯಾಯಿತು?

12048012a ಮಹಾತ್ಮನಾ ಭಗವತಾ ರಾಮೇಣ ಯದುಪುಂಗವ|

12048012c ಕಥಮುತ್ಸಾದಿತಂ ಕ್ಷತ್ರಂ ಕಥಂ ವೃದ್ಧಿಂ ಪುನರ್ಗತಮ್||

ಯದುಪುಂಗವ! ಮಹಾತ್ಮಾ ಭಗವನ್ ರಾಮನು ಯಾವ ಕಾರಣದಿಂದ ಕ್ಷತ್ರಿಯರನ್ನು ವಿನಾಶಗೊಳಿಸಿದನು? ಪುನಃ ಕ್ಷತ್ರಿಯರ ವೃದ್ಧಿಯು ಹೇಗಾಯಿತು?

12048013a ಮಹಾಭಾರತಯುದ್ಧೇ ಹಿ ಕೋಟಿಶಃ ಕ್ಷತ್ರಿಯಾ ಹತಾಃ|

12048013c ತಥಾಭೂಚ್ಚ ಮಹೀ ಕೀರ್ಣಾ ಕ್ಷತ್ರಿಯೈರ್ವದತಾಂ ವರ||

ಮಾತನಾಡುವವರಲ್ಲಿ ಶ್ರೇಷ್ಠನೇ! ಮಹಾಭಾರತ ಯುದ್ಧದಲ್ಲಿ ಹೇಗೆ ಕೋಟಿಗಟ್ಟಲೆ ಕ್ಷತ್ರಿಯರು ಹತರಾದರೋ ಹಾಗೆ ಆಗಲೂ ಕೂಡ ಈ ಭೂಮಿಯು ಕ್ಷತ್ರಿಯರ ಮೃತದೇಹಗಳಿಂದ ತುಂಬಿಹೋಗಿದ್ದಿರಬಹುದು!

12048014a ಏವಂ ಮೇ ಚಿಂಧಿ ವಾರ್ಷ್ಣೇಯ ಸಂಶಯಂ ತಾರ್ಕ್ಷ್ಯಕೇತನ|

12048014c ಆಗಮೋ ಹಿ ಪರಃ ಕೃಷ್ಣ ತ್ವತ್ತೋ ನೋ ವಾಸವಾನುಜ||

ವಾರ್ಷ್ಣೇಯ! ಗರುಡಧ್ವಜ! ಕೃಷ್ಣ! ವಾಸವಾನುಜ! ನನ್ನ ಈ ಸಂಶಯವನ್ನು ಹೋಗಲಾಡಿಸು! ನೀನೇ ಸರ್ವ ಆಗಮಗಳ ನಿಗಮ. ನಿನ್ನ ಹೊರತಾದ ಶಾಸ್ತ್ರಗಳ್ಯಾವುವೂ ಇಲ್ಲ!””

12048015 ವೈಶಂಪಾಯನ ಉವಾಚ

12048015a ತತೋ ವ್ರಜನ್ನೇವ ಗದಾಗ್ರಜಃ ಪ್ರಭುಃ| ಶಶಂಸ ತಸ್ಮೈ ನಿಖಿಲೇನ ತತ್ತ್ವತಃ|

12048015c ಯುಧಿಷ್ಠಿರಾಯಾಪ್ರತಿಮೌಜಸೇ ತದಾ| ಯಥಾಭವತ್ ಕ್ಷತ್ರಿಯಸಂಕುಲಾ ಮಹೀ||

ವೈಶಂಪಾಯನನು ಹೇಳಿದನು: “ಅನಂತರ ಗದಾಗ್ರಜ ಪ್ರಭು ಕೃಷ್ಣನು ಅಪ್ರತಿಮ ತೇಜಸ್ವೀ ಯುಧಿಷ್ಠಿರನಿಗೆ ಭೂಮಿಯಲ್ಲಿ ಕ್ಷತ್ರಿಯಸಂಕುಲಗಳ ವಿನಾಶವು ಹೇಗಾಯಿತೆನ್ನುವುದನ್ನು ಸಂಪೂರ್ಣವಾಗಿ ಅರ್ಥವತ್ತಾಗಿ ಹೇಳಿದನು.

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ರಾಮೋಪಾಖ್ಯಾನೇ ಅಷ್ಠಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ರಾಮೋಪಾಖ್ಯಾನ ಎನ್ನುವ ನಲ್ವತ್ತೆಂಟನೇ ಅಧ್ಯಾಯವು.

Comments are closed.