ಶಾಂತಿ ಪರ್ವ: ರಾಜಧರ್ಮ ಪರ್ವ

೪೫

12045001 ಜನಮೇಜಯ ಉವಾಚ

12045001a ಪ್ರಾಪ್ಯ ರಾಜ್ಯಂ ಮಹಾತೇಜಾ ಧರ್ಮರಾಜೋ ಯುಧಿಷ್ಠಿರಃ|

12045001c ಯದನ್ಯದಕರೋದ್ವಿಪ್ರ ತನ್ಮೇ ವಕ್ತುಮಿಹಾರ್ಹಸಿ||

ಜನಮೇಜಯನು ಹೇಳಿದನು: “ವಿಪ್ರ! ಮಹಾತೇಜಸ್ವಿ ಧರ್ಮರಾಜ ಯುಧಿಷ್ಠಿರನು ರಾಜ್ಯವನ್ನು ಪಡೆದು ಏನು ಮಾಡಿದನೆನ್ನುವುದನ್ನು ನನಗೆ ಹೇಳಬೇಕು.

12045002a ಭಗವಾನ್ವಾ ಹೃಷೀಕೇಶಸ್ತ್ರೈಲೋಕ್ಯಸ್ಯ ಪರೋ ಗುರುಃ|

12045002c ಋಷೇ ಯದಕರೋದ್ವೀರಸ್ತಚ್ಚ ವ್ಯಾಖ್ಯಾತುಮರ್ಹಸಿ||

ಋಷೇ! ತ್ರೈಲೋಕ್ಯದ ಪರಮ ಗುರು ಭಗವಾನ್ ಹೃಷೀಕೇಶನು ಏನು ಮಾಡಿದನೆನ್ನುವುದನ್ನೂ ನನಗೆ ಹೇಳಬೇಕು.”

12045003 ವೈಶಂಪಾಯನ ಉವಾಚ

12045003a ಶೃಣು ರಾಜೇಂದ್ರ ತತ್ತ್ವೇನ ಕೀರ್ತ್ಯಮಾನಂ ಮಯಾನಘ|

12045003c ವಾಸುದೇವಂ ಪುರಸ್ಕೃತ್ಯ ಯದಕುರ್ವತ ಪಾಂಡವಾಃ||

ವೈಶಂಪಾಯನನು ಹೇಳಿದನು: “ರಾಜೇಂದ್ರ! ಅನಘ! ವಾಸುದೇವನನ್ನು ಮುಂದಿಟ್ಟುಕೊಂಡು ಪಾಂಡವರು ಏನು ಮಾಡಿದರೆನ್ನುವುದನ್ನು ಹೇಳುತ್ತೇನೆ. ಕೇಳು.

12045004a ಪ್ರಾಪ್ಯ ರಾಜ್ಯಂ ಮಹಾತೇಜಾ ಧರ್ಮರಾಜೋ ಯುಧಿಷ್ಠಿರಃ|

12045004c ಚಾತುರ್ವರ್ಣ್ಯಂ ಯಥಾಯೋಗಂ ಸ್ವೇ ಸ್ವೇ ಧರ್ಮೇ ನ್ಯವೇಶಯತ್||

ಮಹಾತೇಜಸ್ವಿ ಧರ್ಮರಾಜ ಯುಧಿಷ್ಠಿರನು ರಾಜ್ಯವನ್ನು ಪಡೆದು ನಾಲ್ಕು ವರ್ಣದವರೂ ತಮ್ಮ ತಮ್ಮ ಧರ್ಮಗಳಲ್ಲಿ ಯಥಾಯೋಗವಾಗಿ ಇರುವಂತೆ ವ್ಯವಸ್ಥೆಮಾಡಿದನು.

12045005a ಬ್ರಾಹ್ಮಣಾನಾಂ ಸಹಸ್ರಂ ಚ ಸ್ನಾತಕಾನಾಂ ಮಹಾತ್ಮನಾಮ್|

12045005c ಸಹಸ್ರನಿಷ್ಕಮೇಕೈಕಂ ವಾಚಯಾಮಾಸ ಪಾಂಡವಃ||

ಪಾಂಡವನು ಸಾವಿರ ಮಹಾತ್ಮ ಸ್ನಾತಕ ಬ್ರಾಹ್ಮಣರು ಒಬ್ಬೊಬ್ಬರಿಗೂ ಒಂದೊಂದು ಸಾವಿರ ಸುವರ್ಣನಾಣ್ಯಗಳನ್ನು ದಾನಮಾಡಿದನು.

12045006a ತಥಾನುಜೀವಿನೋ ಭೃತ್ಯಾನ್ಸಂಶ್ರಿತಾನತಿಥೀನಪಿ|

12045006c ಕಾಮೈಃ ಸಂತರ್ಪಯಾಮಾಸ ಕೃಪಣಾಂಸ್ತರ್ಕಕಾನಪಿ||

ತನ್ನನ್ನೇ ಆಶ್ರಯಿಸಿ ಜೀವಿಸುತ್ತಿದ್ದ ಸೇವಕರನ್ನು, ಆಶ್ರಿತ ಅತಿಥಿಗಳನ್ನೂ, ದೀನ ಯಾಚಕರನ್ನೂ ಅವರಿಗೆ ಬೇಕಾದವುಗಳನ್ನಿತ್ತು ತೃಪ್ತಿಪಡಿಸಿದನು.

12045007a ಪುರೋಹಿತಾಯ ಧೌಮ್ಯಾಯ ಪ್ರಾದಾದಯುತಶಃ ಸ ಗಾಃ|

12045007c ಧನಂ ಸುವರ್ಣಂ ರಜತಂ ವಾಸಾಂಸಿ ವಿವಿಧಾನಿ ಚ||

ಪುರೋಹಿತ ಧೌಮ್ಯನಿಗೆ ಹತ್ತುಸಾವಿರ ಗೋವುಗಳನ್ನೂ, ಧನ, ಸುವರ್ಣ-ಬೆಳ್ಳಿಗಳ ವಸ್ತುಗಳನ್ನೂ, ವಿವಿಧ ವಸ್ತ್ರಗಳನ್ನೂ ದಾನಮಾಡಿದನು.

12045008a ಕೃಪಾಯ ಚ ಮಹಾರಾಜ ಗುರುವೃತ್ತಿಮವರ್ತತ|

12045008c ವಿದುರಾಯ ಚ ಧರ್ಮಾತ್ಮಾ ಪೂಜಾಂ ಚಕ್ರೇ ಯತವ್ರತಃ||

ಮಹಾರಾಜ! ಕೃಪನಿಗೆ ಗುರುವೃತ್ತಿಯಿಂದ ವಿಶ್ರಾಂತಿಯನ್ನು ದೊರಕಿಸಿದನು. ಆ ಯತವ್ರತ ಧರ್ಮಾತ್ಮನು ವಿದುರನನ್ನೂ ಗೌರವಿಸಿದನು.

12045009a ಭಕ್ಷಾನ್ನಪಾನೈರ್ವಿವಿಧೈರ್ವಾಸೋಭಿಃ ಶಯನಾಸನೈಃ|

12045009c ಸರ್ವಾನ್ಸಂತೋಷಯಾಮಾಸ ಸಂಶ್ರಿತಾನ್ದದತಾಂ ವರಃ||

ಆ ದಾನಿಗಳಲ್ಲಿ ಶ್ರೇಷ್ಠನು ಆಶ್ರಿತ ಜನರೆಲ್ಲರನ್ನೂ ಭಕ್ಷ್ಯ-ಅನ್ನ-ಪಾನಗಳಿಂದ, ವಿವಿಧ ವಸ್ತ್ರಗಳಿಂದ, ಶಯನಾಸನಗಳಿಂದ ಸಂತೋಷಗೊಳಿಸಿದನು.

12045010a ಲಬ್ಧಪ್ರಶಮನಂ ಕೃತ್ವಾ ಸ ರಾಜಾ ರಾಜಸತ್ತಮ|

12045010c ಯುಯುತ್ಸೋರ್ಧಾರ್ತರಾಷ್ಟ್ರಸ್ಯ ಪೂಜಾಂ ಚಕ್ರೇ ಮಹಾಯಶಾಃ||

ರಾಜಸತ್ತಮ! ದೊರಕಿರುವುದರಿಂದ ಎಲ್ಲರನ್ನೂ ತೃಪ್ತಿಪಡಿಸಿ ರಾಜನು ಮಹಾಯಶಸ್ವಿ ಧಾರ್ತರಾಷ್ಟ್ರ ಯುಯುತ್ಸುವನ್ನೂ ಗೌರವಿಸಿದನು.

12045011a ಧೃತರಾಷ್ಟ್ರಾಯ ತದ್ರಾಜ್ಯಂ ಗಾಂಧಾರ್ಯೈ ವಿದುರಾಯ ಚ|

12045011c ನಿವೇದ್ಯ ಸ್ವಸ್ಥವದ್ರಾಜನ್ನಾಸ್ತೇ ರಾಜಾ ಯುಧಿಷ್ಠಿರಃ||

ಆ ರಾಜ್ಯವನ್ನು ಧೃತರಾಷ್ಟ್ರನಿಗೂ, ಗಾಂಧಾರಿಗೂ ಮತ್ತು ವಿದುರನಿಗೂ ಸಮರ್ಪಿಸಿ ರಾಜಾ ಯುಧಿಷ್ಠಿರನು ಸ್ವಸ್ಥಚಿತ್ತನಾದನು.

12045012a ತಥಾ ಸರ್ವಂ ಸ ನಗರಂ ಪ್ರಸಾದ್ಯ ಜನಮೇಜಯ|

12045012c ವಾಸುದೇವಂ ಮಹಾತ್ಮಾನಮಭ್ಯಗಚ್ಚತ್ಕೃತಾಂಜಲಿಃ||

ಜನಮೇಜಯ! ಹಾಗೆ ನಗರದಲ್ಲಿ ಸರ್ವರನ್ನೂ ಪ್ರಸನ್ನಗೊಳಿಸಿ ಆ ಮಹಾತ್ಮನು ವಾಸುದೇವನ ಬಳಿಸಾರಿ, ಕೈಮುಗಿದು ನಮಸ್ಕರಿಸಿದನು.

12045013a ತತೋ ಮಹತಿ ಪರ್ಯಂಕೇ ಮಣಿಕಾಂಚನಭೂಷಿತೇ|

12045013c ದದರ್ಶ ಕೃಷ್ಣಮಾಸೀನಂ ನೀಲಂ ಮೇರಾವಿವಾಂಬುದಮ್||

12045014a ಜಾಜ್ವಲ್ಯಮಾನಂ ವಪುಷಾ ದಿವ್ಯಾಭರಣಭೂಷಿತಮ್|

12045014c ಪೀತಕೌಶೇಯಸಂವೀತಂ ಹೇಮ್ನೀವೋಪಹಿತಂ ಮಣಿಮ್||

12045015a ಕೌಸ್ತುಭೇನ ಉರಃಸ್ಥೇನ ಮಣಿನಾಭಿವಿರಾಜಿತಮ್|

12045015c ಉದ್ಯತೇವೋದಯಂ ಶೈಲಂ ಸೂರ್ಯೇಣಾಪ್ತಕಿರೀಟಿನಮ್||

12045015e ನೌಪಮ್ಯಂ ವಿದ್ಯತೇ ಯಸ್ಯ ತ್ರಿಷು ಲೋಕೇಷು ಕಿಂ ಚನ||

ಆಗ ಮಣಿಕಾಂಚನಭೂಷಿತ ಮಹಾ ಪರ್ಯಂಕದ ಮೇಲೆ ಮೋಡಗಳಿಂದ ಕೂಡಿದ ಮೇರು ಪರ್ವತದಂತೆ ನೀಲವರ್ಣದ ಕೃಷ್ಣನು ಕುಳಿತಿರುವುದನ್ನು ಅವನು ನೋಡಿದನು. ದಿವ್ಯಾಭರಣಗಳನ್ನು ಧರಿಸಿದ್ದ, ಹೊಂಬಣ್ಣದ ರೇಷ್ಮೆಯ ವಸ್ತ್ರವನ್ನುಟ್ಟಿದ್ದ, ಸುವರ್ಣದಿಂದ ಸಮಲಂಕೃತವಾದ ನೀಲಮಣಿಯಂತಿದ್ದ ಅವನ ದೇಹವು ಜಾಜ್ವಲ್ಯಮಾನವಾಗಿತ್ತು. ಉದಯಿಸುತ್ತಿರುವ ಸೂರ್ಯನು ಉದಯಾಚಲವನ್ನು ಪ್ರಕಾಶಗೊಳಿಸುವಂತೆ ಅವನ ವಕ್ಷಸ್ಥಳದಲ್ಲಿದ್ದ ಕೌಸ್ತುಭಮಣಿಯು ಕೃಷ್ಣನನ್ನು ಪ್ರಕಾಶಗೊಳಿಸುತ್ತಿತ್ತು. ಕಿರೀಟವನ್ನು ಧರಿಸಿದ್ದ ಅವನ ಸರಿಸಾಟಿಯಾದವರು ಮೂರು ಲೋಕಗಳಲ್ಲಿ ಯಾರೂ ಇರಲಿಲ್ಲ!

12045016a ಸೋಽಭಿಗಮ್ಯ ಮಹಾತ್ಮಾನಂ ವಿಷ್ಣುಂ ಪುರುಷವಿಗ್ರಹಮ್|

12045016c ಉವಾಚ ಮಧುರಾಭಾಷಃ ಸ್ಮಿತಪೂರ್ವಮಿದಂ ತದಾ||

ಮಾನವ ಶರೀರಿಯಾಗಿದ್ದ ಮಹಾತ್ಮ ವಿಷ್ಣುವಿನ ಬಳಿಸಾರಿ ಯುಧಿಷ್ಠಿರನು ನಸುನಗುತ್ತಾ ಮಧುರಭಾಷೆಯಲ್ಲಿ ಇಂತೆಂದನು:

12045017a ಸುಖೇನ ತೇ ನಿಶಾ ಕಚ್ಚಿದ್ವ್ಯುಷ್ಟಾ ಬುದ್ಧಿಮತಾಂ ವರ|

12045017c ಕಚ್ಚಿಜ್ಜ್ಞಾನಾನಿ ಸರ್ವಾಣಿ ಪ್ರಸನ್ನಾನಿ ತವಾಚ್ಯುತ||

“ಬುದ್ಧಿವಂತರಲ್ಲಿ ಶ್ರೇಷ್ಠನೇ! ಅಚ್ಯುತ! ರಾತ್ರಿಯನ್ನು ಸುಖವಾಗಿ ಕಳೆದೆಯೇ? ನಿನ್ನ ಎಲ್ಲ ಜ್ಞಾನೇಂದ್ರಿಯಗಳೂ ಪ್ರಸನ್ನವಾಗಿವೆಯಲ್ಲವೇ?

12045018a ತವ ಹ್ಯಾಶ್ರಿತ್ಯ ತಾಂ ದೇವೀಂ ಬುದ್ಧಿಂ ಬುದ್ಧಿಮತಾಂ ವರ|

12045018c ವಯಂ ರಾಜ್ಯಮನುಪ್ರಾಪ್ತಾಃ ಪೃಥಿವೀ ಚ ವಶೇ ಸ್ಥಿತಾ||

ಬುದ್ಧಿವಂತರಲ್ಲಿ ಶ್ರೇಷ್ಠ! ನಿನ್ನಲ್ಲಿರುವ ದೇವೀ ಬುದ್ಧಿಯನ್ನೇ ಆಶ್ರಯಿಸಿ ನಾವು ರಾಜ್ಯವನ್ನು ಪಡೆದೆವು ಮತ್ತು ಭೂಮಿಯು ನಮ್ಮ ವಶದಲ್ಲಿ ಬಂದಿದೆ.

12045019a ಭವತ್ಪ್ರಸಾದಾದ್ಭಗವಂಸ್ತ್ರಿಲೋಕಗತಿವಿಕ್ರಮ|

12045019c ಜಯಃ ಪ್ರಾಪ್ತೋ ಯಶಶ್ಚಾಗ್ರ್ಯಂ ನ ಚ ಧರ್ಮಾಚ್ಚ್ಯುತಾ ವಯಮ್||

ಭಗವನ್! ತ್ರಿಲೋಕಗತಿವಿಕ್ರಮ! ನಿನ್ನ ಪ್ರಸಾದದಿಂದ ಜಯವನ್ನೂ ಯಶಸ್ಸನ್ನೂ ಪಡೆದುಕೊಂಡೆವು. ನಾವು ಧರ್ಮದಿಂದಲೂ ಚ್ಯುತರಾಗಲಿಲ್ಲ.”

12045020a ತಂ ತಥಾ ಭಾಷಮಾಣಂ ತು ಧರ್ಮರಾಜಂ ಯುಧಿಷ್ಠಿರಮ್|

12045020c ನೋವಾಚ ಭಗವಾನ್ಕಿಂ ಚಿದ್ಧ್ಯಾನಮೇವಾನ್ವಪದ್ಯತ||

ಹಾಗೆ ಮಾತನಾಡುತ್ತಿದ್ದ ಧರ್ಮರಾಜ ಯುಧಿಷ್ಠಿರನಿಗೆ ಏನನ್ನೂ ಹೇಳದೇ ಭಗವಾನನು ಯಾವುದೋ ಧ್ಯಾನದಲ್ಲಿ ಮಗ್ನನಾಗಿದ್ದನು.

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಕೃಷ್ಣಂಪ್ರತಿಯುಧಿಷ್ಠಿರವಾಕ್ಯೇ ಪಂಚಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಕೃಷ್ಣನೊಂದಿಗೆ ಯುಧಿಷ್ಠಿರವಾಕ್ಯ ಎನ್ನುವ ನಲ್ವತ್ತೈದನೇ ಅಧ್ಯಾಯವು.

Comments are closed.