ಶಾಂತಿ ಪರ್ವ: ರಾಜಧರ್ಮ ಪರ್ವ

೪೩

12043001 ವೈಶಂಪಾಯನ ಉವಾಚ

12043001a ಅಭಿಷಿಕ್ತೋ ಮಹಾಪ್ರಾಜ್ಞೋ ರಾಜ್ಯಂ ಪ್ರಾಪ್ಯ ಯುಧಿಷ್ಠಿರಃ|

12043001c ದಾಶಾರ್ಹಂ ಪುಂಡರೀಕಾಕ್ಷಮುವಾಚ ಪ್ರಾಂಜಲಿಃ ಶುಚಿಃ||

ವೈಶಂಪಾಯನನು ಹೇಳಿದನು: “ರಾಜ್ಯವನ್ನು ಪಡೆದು ಅಭಿಷಿಕ್ತನಾದ ಮಹಾಪ್ರಾಜ್ಞ ಯುಧಿಷ್ಠಿರನು ಶುಚಿಯಾಗಿ ಕೈಮುಗಿದು ದಾಶಾರ್ಹ ಪುಂಡರೀಕಾಕ್ಷನಿಗೆ ಹೇಳಿದನು:

12043002a ತವ ಕೃಷ್ಣ ಪ್ರಸಾದೇನ ನಯೇನ ಚ ಬಲೇನ ಚ|

12043002c ಬುದ್ಧ್ಯಾ ಚ ಯದುಶಾರ್ದೂಲ ತಥಾ ವಿಕ್ರಮಣೇನ ಚ||

12043003a ಪುನಃ ಪ್ರಾಪ್ತಮಿದಂ ರಾಜ್ಯಂ ಪಿತೃಪೈತಾಮಹಂ ಮಯಾ|

12043003c ನಮಸ್ತೇ ಪುಂಡರೀಕಾಕ್ಷ ಪುನಃ ಪುನರರಿಂದಮ||

“ಕೃಷ್ಣ! ಯದುಶಾರ್ದೂಲ! ನಿನ್ನ ಪ್ರಸಾದದಿಂದ, ನೀತಿ-ಬಲಗಳಿಂದ, ಬುದ್ಧಿ-ವಿಕ್ರಮಗಳಿಂದ ನಾನು ಪಿತೃ-ಪಿತಾಮಹರ ಈ ರಾಜ್ಯವನ್ನು ಪುನಃ ಪಡೆದುಕೊಂಡಿದ್ದೇನೆ. ಪುಂಡರೀಕಾಕ್ಷ! ಅರಿಂದಮ! ಪುನಃ ಪುನಃ ನಿನಗೆ ನಮಸ್ಕರಿಸುತ್ತೇನೆ.

12043004a ತ್ವಾಮೇಕಮಾಹುಃ ಪುರುಷಂ ತ್ವಾಮಾಹುಃ ಸಾತ್ವತಾಂ ಪತಿಮ್|

12043004c ನಾಮಭಿಸ್ತ್ವಾಂ ಬಹುವಿಧೈಃ ಸ್ತುವಂತಿ ಪರಮರ್ಷಯಃ||

ನಿನ್ನನ್ನು ಏಕನೆಂದೂ, ಪುರುಷನೆಂದೂ, ಸಾತ್ವತರ ಪತಿಯೆಂದೂ ಪರಮಋಷಿಗಳು ಅನೇಕ ನಾಮಗಳಿಂದ ಬಹುವಿಧಗಳಲ್ಲಿ ಸ್ತುತಿಸುತ್ತಾರೆ!

12043005a ವಿಶ್ವಕರ್ಮನ್ನಮಸ್ತೇಽಸ್ತು ವಿಶ್ವಾತ್ಮನ್ವಿಶ್ವಸಂಭವ|

12043005c ವಿಷ್ಣೋ ಜಿಷ್ಣೋ ಹರೇ ಕೃಷ್ಣ ವೈಕುಂಠ ಪುರುಷೋತ್ತಮ||

ವಿಶ್ವಕರ್ಮ! ವಿಶ್ವಾತ್ಮನ್! ವಿಶ್ವಸಂಭವ! ವಿಷ್ಣು! ಜಿಷ್ಣು! ಹರಿ! ಕೃಷ್ಣ! ವೈಕುಂಠ! ಪುರುಷೋತ್ತಮ! ನಿನಗೆ ನಮಸ್ಕಾರ!

12043006a ಅದಿತ್ಯಾಃ ಸಪ್ತರಾತ್ರಂ ತು ಪುರಾಣೇ ಗರ್ಭತಾಂ ಗತಃ|

12043006c ಪೃಶ್ನಿಗರ್ಭಸ್ತ್ವಮೇವೈಕಸ್ತ್ರಿಯುಗಂ ತ್ವಾಂ ವದಂತ್ಯಪಿ||

ಹಿಂದೆ ನೀನು ಏಳು ಬಾರಿ ಅದಿತಿಯ ಗರ್ಭದಲ್ಲಿ ಅವತರಿಸಿದೆ[1]! ನೀನೊಬ್ಬನೇ ಪೃಶ್ನಿಗರ್ಭ[2]ನೆಂದು ಕರೆಯಿಸಿಕೊಂಡಿರುವೆ! ತ್ರಿಯುಗ[3]ನೆಂದೂ ನಿನ್ನನ್ನು ಕರೆಯುತ್ತಾರೆ!

12043007a ಶುಚಿಶ್ರವಾ ಹೃಷೀಕೇಶೋ ಘೃತಾರ್ಚಿರ್ಹಂಸ ಉಚ್ಯಸೇ|

12043007c ತ್ರಿಚಕ್ಷುಃ ಶಂಭುರೇಕಸ್ತ್ವಂ ವಿಭುರ್ದಾಮೋದರೋಽಪಿ ಚ||

ನಿನ್ನನ್ನು ಶುಚಿಶ್ರವ[4], ಹೃಷೀಕೇಶ[5], ಘೃತಾರ್ಚಿ[6], ಹಂಸ ಎಂದು ಕರೆಯುತ್ತಾರೆ. ಮುಕ್ಕಣ್ಣ ಶಂಭು ಮತ್ತು ನೀನು ಒಂದೇ ಆಗಿರುವಿರಿ! ನೀನು ವಿಭು[7] ಮತ್ತು ದಾಮೋದರ[8]!

12043008a ವರಾಹೋಽಗ್ನಿರ್ಬೃಹದ್ಭಾನುರ್ವೃಷಣಸ್ತಾರ್ಕ್ಷ್ಯಲಕ್ಷಣಃ|

12043008c ಅನೀಕಸಾಹಃ ಪುರುಷಃ ಶಿಪಿವಿಷ್ಟ ಉರುಕ್ರಮಃ||

12043009a ವಾಚಿಷ್ಠ ಉಗ್ರಃ ಸೇನಾನೀಃ ಸತ್ಯೋ ವಾಜಸನಿರ್ಗುಹಃ|

12043009c ಅಚ್ಯುತಶ್ಚ್ಯಾವನೋಽರೀಣಾಂ ಸಂಕೃತಿರ್ವಿಕೃತಿರ್ವೃಷಃ||

12043010a ಕೃತವರ್ತ್ಮಾ ತ್ವಮೇವಾದ್ರಿರ್ವೃಷಗರ್ಭೋ ವೃಷಾಕಪಿಃ|

12043010c ಸಿಂಧುಕ್ಷಿದೂರ್ಮಿಸ್ತ್ರಿಕಕುತ್ತ್ರಿಧಾಮಾ ತ್ರಿವೃದಚ್ಯುತಃ||

ನೀನೇ ವರಾಹ, ಅಗ್ನಿ, ಬೃಹದ್ಭಾನು[9], ವೃಷಣ[10], ತಾರ್ಕ್ಷ್ಯಲಕ್ಷಣ[11], ಅನೀಕಸಾಹ[12], ಪುರುಷ[13], ಶಿಪಿವಿಷ್ಟ[14], ಉರುಕ್ರಮ[15], ವಾಚಿಷ್ಠ, ಉಗ್ರ, ಸೇನಾನೀ, ಸತ್ಯ, ವಾಜಸನಿ[16], ಗುಹ, ಅಚ್ಯುತ, ಅರಿಗಳ ವಿನಾಶಕ, ಸಂಕೃತಿ[17], ವಿಕೃತಿ[18], ವೃಷ[19], ಕೃತವರ್ತ್ಮಾ[20], ಅದ್ರಿ[21], ವೃಷಗರ್ಭ[22], ವೃಷಾಕಪಿ[23], ಸಿಂಧುಕ್ಷಿದೂರ್ಮಿ[24], ತ್ರಿಕಕು[25], ತ್ರಿಧಾಮ, ತ್ರಿವೃದಚ್ಯುತ[26]!

12043011a ಸಮ್ರಾಡ್ವಿರಾಟ್ಸ್ವರಾಟ್ಚೈವ ಸುರರಾಡ್ಧರ್ಮದೋ ಭವಃ|

12043011c ವಿಭುರ್ಭೂರಭಿಭೂಃ ಕೃಷ್ಣಃ ಕೃಷ್ಣವರ್ತ್ಮಾ ತ್ವಮೇವ ಚ||

ನೀನೇ ಸಾಮ್ರಾಟ, ವಿರಾಟ, ಸ್ವರಾಟ, ಮತ್ತು ಸುರರಾಜ! ನೀನೇ ಧರ್ಮದ, ಭವ[27], ವಿಭು[28], ಭೂ, ಅಭಿಭು. ಕೃಷ್ಣ[29], ಕೃಷ್ಣವರ್ತ್ಮಾ[30]!

12043012a ಸ್ವಿಷ್ಟಕೃದ್ಭಿಷಗಾವರ್ತಃ ಕಪಿಲಸ್ತ್ವಂ ಚ ವಾಮನಃ|

12043012c ಯಜ್ಞೋ ಧ್ರುವಃ ಪತಂಗಶ್ಚ ಜಯತ್ಸೇನಸ್ತ್ವಮುಚ್ಯಸೇ||

ನಿನ್ನನ್ನು ಸ್ವಿಷ್ಟಕೃತು[31]ವೆಂದೂ, ಭಿಷಗಾವರ್ತ[32]ನೆಂದೂ, ಕಪಿಲ, ವಾಮನ, ಯಜ್ಞ, ಧ್ರುವ, ಪತಂಗ[33], ಮತ್ತು ಜಯತ್ಸೇನನೆಂದೂ ಕರೆಯುತ್ತಾರೆ.

12043013a ಶಿಖಂಡೀ ನಹುಷೋ ಬಭ್ರುರ್ದಿವಸ್ಪೃಕ್ತ್ವಂ ಪುನರ್ವಸುಃ|

12043013c ಸುಬಭ್ರುರುಕ್ಷೋ ರುಕ್ಮಸ್ತ್ವಂ ಸುಷೇಣೋ ದುಂದುಭಿಸ್ತಥಾ||

12043014a ಗಭಸ್ತಿನೇಮಿಃ ಶ್ರೀಪದ್ಮಂ ಪುಷ್ಕರಂ ಪುಷ್ಪಧಾರಣಃ|

12043014c ಋಭುರ್ವಿಭುಃ ಸರ್ವಸೂಕ್ಷ್ಮಸ್ತ್ವಂ ಸಾವಿತ್ರಂ ಚ ಪಠ್ಯಸೇ||

ನಿನ್ನನ್ನು ಶಿಖಂಡೀ[34], ನಹುಷ, ಬಭ್ರು[35], ದಿವಸ್ಪೃಕ್[36], ಪುನರ್ವಸು[37], ಸುಬಭ್ರು[38], ಸುಷೇಣ[39], ದುಂದುಭಿ[40], ಗಭಸ್ತಿನೇಮಿ[41], ಶ್ರೀಪದ್ಮ, ಪುಷ್ಕರ, ಪುಷ್ಪಧಾರೀ, ಋಭು, ವಿಭು, ಸರ್ವಸೂಕ್ಷ್ಮ, ಸಾವಿತ್ರ ಎಂದೂ ಕರೆಯುತ್ತಾರೆ.

12043015a ಅಂಭೋನಿಧಿಸ್ತ್ವಂ ಬ್ರಹ್ಮಾ ತ್ವಂ ಪವಿತ್ರಂ ಧಾಮ ಧನ್ವ ಚ|

12043015c ಹಿರಣ್ಯಗರ್ಭಂ ತ್ವಾಮಾಹುಃ ಸ್ವಧಾ ಸ್ವಾಹಾ ಚ ಕೇಶವ||

ನೀನು ಅಂಭೋನಿಧಿ[42]ಯು. ನೀನು ಬ್ರಹ್ಮ, ಪವಿತ್ರ ಧಾಮ ಮತ್ತು ಧನ್ವ. ಕೇಶವ! ನಿನ್ನನ್ನು ಹಿರಣ್ಯಗರ್ಭನೆಂದೂ, ಸ್ವಧಾ ಮತ್ತು ಸ್ವಾಹಾ ಎಂದೂ ಕರೆಯುತ್ತಾರೆ.

12043016a ಯೋನಿಸ್ತ್ವಮಸ್ಯ ಪ್ರಲಯಶ್ಚ ಕೃಷ್ಣ

ತ್ವಮೇವೇದಂ ಸೃಜಸಿ ವಿಶ್ವಮಗ್ರೇ|

12043016c ವಿಶ್ವಂ ಚೇದಂ ತ್ವದ್ವಶೇ ವಿಶ್ವಯೋನೇ

ನಮೋಽಸ್ತು ತೇ ಶಾರ್ಙ್ಗಚಕ್ರಾಸಿಪಾಣೇ||

ಕೃಷ್ಣ! ಯಾವುದರ ಯೋನಿ ಮತ್ತು ಪ್ರಲಯನೂ ನೀನಾಗಿರುವೆಯೋ ಆ ವಿಶ್ವವನ್ನು ಮೊದಲು ನೀನೇ ಸೃಷ್ಟಿಸುವೆ. ವಿಶ್ವಯೋನೇ! ಈ ವಿಶ್ವವು ನಿನ್ನದೇ ವಶದಲ್ಲಿದ್ದೆ. ಶಾರ್ಙ್ಗ-ಚಕ್ರ-ಖಡ್ಗಪಾಣಿಯೇ! ನಿನಗೆ ನಮಸ್ಕಾರವು!”

12043017a ಏವಂ ಸ್ತುತೋ ಧರ್ಮರಾಜೇನ ಕೃಷ್ಣಃ

ಸಭಾಮಧ್ಯೇ ಪ್ರೀತಿಮಾನ್ಪುಷ್ಕರಾಕ್ಷಃ|

12043017c ತಮಭ್ಯನಂದದ್ಭಾರತಂ ಪುಷ್ಕಲಾಭಿರ್

ವಾಗ್ಭಿರ್ಜ್ಯೇಷ್ಠಂ ಪಾಂಡವಂ ಯಾದವಾಗ್ರ್ಯಃ||

ಸಭಾಮಧ್ಯದಲ್ಲಿ ಧರ್ಮರಾಜನು ಹೀಗೆ ಸ್ತುತಿಸಲು ಪ್ರಸನ್ನನಾದ ಯಾದವಾಗ್ರ್ಯ ಪುಷ್ಕರಾಕ್ಷ ಕೃಷ್ಣನು ಜ್ಯೇಷ್ಠ ಪಾಂಡವ ಭಾರತನನ್ನು ಉತ್ತಮ ಮಾತುಗಳಿಂದ ಅಭಿನಂದಿಸಿದನು.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವಾಸುದೇವಸ್ತುತೌ ತ್ರಿಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವಾಸುದೇವಸ್ತುತಿ ಎನ್ನುವ ನಲ್ವತ್ಮೂರನೇ ಅಧ್ಯಾಯವು.

[1] ಸಪ್ತಧಾ ವಿಷ್ಣ್ವಾಖ್ಯ ಆದಿತ್ಯೋ ವಾಮನಶ್ಚೇತಿ ದ್ವೇಧಾ ಆದಿತ್ಯಾಮೇವ ಜನ್ಮ| ತತಃ ಆದಿತೇಃ ರೂಪಾಂತರೇಷು ಪೃಶ್ನಿಪ್ರಭೃತಿಷು ಕ್ರಮಾತ್ಪೃಶ್ನಿಗರ್ಭ ಪರಶುರಾಮಃ ದಾಶರಥೀರಾಮಃ ಯಾದವೌ ರಾಮಕೃಷ್ಣೌ ಚೇತಿ ಸರ್ವೇಷು ಗರ್ಭೇಷು ಏಕ ಏವ ತ್ವಂ ನ ತು ಪ್ರತಿಗರ್ಭಂ ಭಿನ್ನಃ - ಅರ್ಥಾತ್ ಆದಿತ್ಯ ಮತ್ತು ವಾಮನನಾಗಿ ಎರಡು ಬಾರಿ ಅದಿತಿಯಲ್ಲಿ ಗರ್ಭಸ್ಥನಾಗಿದ್ದನೆಂದೂ, ಅದಿತಿಯ ಪೃಶ್ನಿಯೇ ಮೊದಲಾದ ಜನ್ಮಾಂತರಗಳಲ್ಲಿ ಪರಶುರಾಮ, ರಾಮ, ಬಲರಾಮ ಮತ್ತು ಕೃಷ್ಣರಾಗಿ ಹುಟ್ಟಿದವನು ಒಬ್ಬನೇ ಎಂದು ವ್ಯಾಖ್ಯಾನಕಾರರು ಅರ್ಥೈಸಿದ್ದಾರೆ. [ಭಾರತ ದರ್ಶನ, ಸಂಪುಟ ೨೧, ಪುಟಸಂಖ್ಯೆ ೩೬೫-೩೬೬]

[2] ಪೃಶ್ನಿಯು ಕೃಷ್ಣನ ತಾಯಿ ದೇವಕಿಯು ತನ್ನ ಪೂರ್ವ ಜನ್ಮದಲ್ಲಿ ಸುತಪ ಎಂಬ ಪ್ರಜಾಪತಿಯಾಗಿದ್ದ ವಸುದೇವನ ಪತ್ನಿಯಾಗಿದ್ದಳು. ಆದುದರಿಂದ ಕೃಷ್ಣನಿಗೆ ಪೃಶ್ಣಿಗರ್ಭನೆಂಬ ಹೆಸರು. ವಸುದೇವ-ದೇವಕಿಯರು ಸುತಪ-ಪೃಶ್ನಿಯರಾಗಿದ್ದಾಗ ಉಗ್ರ ತಪಸ್ಸನ್ನಾಚರಿಸಿ ಪರಮಾತ್ಮನಲ್ಲಿ ಅವನಂಥಹ ಪುತ್ರನಾಗಬೇಕೆಂದು ಬೇಡಿಕೊಂಡಿದ್ದರು.

[3] ತ್ರಿಯುಗಂ ಎನ್ನುವುದಕ್ಕೆ ವ್ಯಾಖ್ಯಾನಕಾರರು ಮೂರು ಯುಗ್ಮಗಳು ಇರುವಂಥವನು ಎಂದು ಅರ್ಥೈಸಿದ್ದಾರೆ. ಧರ್ಮ-ಜ್ಞಾನ-ವೈರಾಗ್ಯ-ಐಶ್ವರ್ಯ-ಶ್ರೀ-ಯಶಸ್ಸು ಇವೇ ಆ ಮೂರು ಯುಗ್ಮಗಳು. [ಭಾರತ ದರ್ಶನ, ಸಂಪುಟ ೨೧, ಪುಟಸಂಖ್ಯೆ ೩೬೭]

[4] ನಿನ್ನ ಕೀರ್ತಿಯು ಪರಮಪವಿತ್ರವಾದುದು.

[5] ಇಂದ್ರಿಯಗಳ ಪ್ರೇರಕ

[6] ಘೃತದಿಂದ ಹತ್ತಿ ಉರಿಯುವ ಯಜ್ಞೇಶ್ವರ

[7] ಸರ್ವತ್ರವ್ಯಾಪಕ

[8] ಕೃಷ್ಣನ ತುಂಟತನವನ್ನು ತಡೆಯಲಾರದೇ ಯಶೋದೆಯು ಹಗ್ಗದಿಂದ ಅವನ ಹೊಟ್ಟೆಯನ್ನು ಕಟ್ಟಿ ಆ ಹಗ್ಗವನ್ನು ಒರಳುಕಲ್ಲಿಗೆ ಕಟ್ಟಿದುದರಿಂದ ಕೃಷ್ಣನಿಗೆ ದಾಮೋದರನೆಂಬ ಹೆಸರಾಯಿತು.

[9] ಸೂರ್ಯ

[10] ಧರ್ಮ

[11] ಗರುಡಧ್ವಜ

[12] ಸೇನೆಗಳನ್ನು ಸಹಿಸಿಕೊಳ್ಳತಕ್ಕವನು

[13] ಅಂತರ್ಯಾಮಿ ಪರಮಾತ್ಮ

[14] ಎಲ್ಲರಲ್ಲಿಯೂ ಆತ್ಮರೂಪನಾಗಿರುವವನು

[15] ವಾಮನ

[16] ಅನ್ನದಾತ

[17] ಸಂಸ್ಕಾರ ಸಂಪನ್ನ

[18] ಸಂಸ್ಕಾರಗಳಿಲ್ಲದವನು

[19] ಧರ್ಮ

[20] ಯಜ್ಞಸ್ವರೂಪ

[21] ಎಲ್ಲಕ್ಕೂ ಮೂಲ ಕಾರಣನು

[22] ಧರ್ಮಗರ್ಭ

[23] ಹರಿ-ಹರ ರೂಪಿ

[24] ಸಮುದ್ರಸ್ವರೂಪಿ

[25] ಕರ್ಮಮಾಡಲು ಯೋಗ್ಯವಾದ ಪೂರ್ವೋತ್ತರ ಮತ್ತು ಈಶಾನ್ಯ ದಿಕ್ಕುಗಳ ಸ್ವರೂಪಿ

[26] ಸ್ವರ್ಗದಿಂದ ಚ್ಯುತನಾಗಿ ಅವತರಿಸಿದವನು

[27] ಎಲ್ಲವುಗಳ ಉತ್ಪತ್ತಿ ಕಾರಣ

[28] ಸರ್ವತ್ರ ವ್ಯಾಪೀ

[29] ಎಲ್ಲವನ್ನೂ ತನ್ನ ಕಡೆಗೆ ಆಕರ್ಷಿಸಿಕೊಳ್ಳುವ

[30] ಅಗ್ನಿ

[31] ಸಕಲಾಭಿಷ್ಟಗಳನ್ನೂ ನೆರವೇರಿಸಿಕೊಡುವವನು

[32] ಅಶ್ವಿನೀ ದೇವತೆಗಳ ತಂದೆ ಸೂರ್ಯ

[33] ಗರುಡ

[34] ನವಿಲುಗರಿಯನ್ನು ಧರಿಸಿದವನು

[35] ಭೂಮಿಯನ್ನು ಧರಿಸಿರುವ ಅನಂತರೂಪೀ

[36] ಒಂದೇ ಕಾಲಿನಲ್ಲಿ ಆಕಾಶವನ್ನು ಅಳೆದವನು

[37] ಬ್ರಹ್ಮಾದಿದೇವತೆಗಳಲಿ ಅಂತರಾತ್ಮರೂಪನಾಗಿ ಪುನಃ ವಾಸಮಾಡುವವನು

[38] ಕಂದುಬಣ್ಣದವನು

[39] ಯಜ್ಞದಲ್ಲಿ ಹೇರಳ ಸುವರ್ಣವನ್ನು ದಕ್ಷಿಣೆಯಾಗಿ ಕೊಟ್ಟವನು

[40] ದುಂದುಭಿ ಎನ್ನುವ ರಾಕ್ಷಸನನ್ನು ಸಂಹರಿಸಿದವನು

[41] ಕಿರಣಗಳೇ ರಥದ ಚಕ್ರಗಳಾಗಿರುವ ಸೂರ್ಯ

[42] ಸಮುದ್ರ

Comments are closed.