ಶಾಂತಿ ಪರ್ವ: ರಾಜಧರ್ಮ ಪರ್ವ

೩೯

12039001 ವೈಶಂಪಾಯನ ಉವಾಚ

12039001a ಪ್ರವೇಶನೇ ತು ಪಾರ್ಥಾನಾಂ ಜನಸ್ಯ ಪುರವಾಸಿನಃ|

12039001c ದಿದೃಕ್ಷೂಣಾಂ ಸಹಸ್ರಾಣಿ ಸಮಾಜಗ್ಮುರ್ಬಹೂನ್ಯಥ||

ವೈಶಂಪಾಯನನು ಹೇಳಿದನು: “ಪಾರ್ಥರು ಪ್ರವೇಶಿಸುತ್ತಿದ್ದಂತೆ ಅವರನ್ನು ನೋಡಲು ಸಹಸ್ರಾರು ಪುರವಾಸೀ ಜನರು ಬಂದು ಸೇರಿದರು.

12039002a ಸ ರಾಜಮಾರ್ಗಃ ಶುಶುಭೇ ಸಮಲಂಕೃತಚತ್ವರಃ|

12039002c ಯಥಾ ಚಂದ್ರೋದಯೇ ರಾಜನ್ವರ್ಧಮಾನೋ ಮಹೋದಧಿಃ||

ರಾಜನ್! ಚಂದ್ರೋದಯದ ಸಮಯದಲ್ಲಿ ಉಕ್ಕಿಬರುವ ಸಮುದ್ರದಂತೆ ಸಿಂಗರಿಸಿದ ರಾಜಮಾರ್ಗದ ಚೌಕವು ಅಸಂಖ್ಯಾತ ಜನಸ್ತೋಮದಿಂದ ಶೋಭಿಸುತ್ತಿತ್ತು.

12039003a ಗೃಹಾಣಿ ರಾಜಮಾರ್ಗೇ ತು ರತ್ನವಂತಿ ಬೃಹಂತಿ ಚ|

12039003c ಪ್ರಾಕಂಪಂತೇವ ಭಾರೇಣ ಸ್ತ್ರೀಣಾಂ ಪೂರ್ಣಾನಿ ಭಾರತ||

ರಾಜಮಾರ್ಗದಲ್ಲಿದ್ದ ವಿಶಾಲ ರತ್ನಖಚಿತ ಭವನಗಳು ಸ್ತ್ರೀಯರಿಂದ ತುಂಬಿಹೋಗಿ ಅವರ ಭಾರದಿಂದ ಕಂಪಿಸುತ್ತಿವೆಯೋ ಎಂಬಂತೆ ತೋರುತ್ತಿದ್ದವು.

12039004a ತಾಃ ಶನೈರಿವ ಸವ್ರೀಡಂ ಪ್ರಶಶಂಸುರ್ಯುಧಿಷ್ಠಿರಮ್|

12039004c ಭೀಮಸೇನಾರ್ಜುನೌ ಚೈವ ಮಾದ್ರೀಪುತ್ರೌ ಚ ಪಾಂಡವೌ||

ಆ ಸ್ತ್ರೀಯರು ನಾಚಿಕೊಂಡು ಮೆಲ್ಲನೇ ಯುಧಿಷ್ಠಿರನನ್ನು, ಭೀಮಸೇನ-ಅರ್ಜುನರನ್ನು ಮತ್ತು ಇಬ್ಬರು ಮಾದ್ರೀಪುತ್ರ ಪಾಂಡವರನ್ನು ಪ್ರಶಂಸಿಸುತ್ತಿದ್ದರು.

12039005a ಧನ್ಯಾ ತ್ವಮಸಿ ಪಾಂಚಾಲಿ ಯಾ ತ್ವಂ ಪುರುಷಸತ್ತಮಾನ್|

12039005c ಉಪತಿಷ್ಠಸಿ ಕಲ್ಯಾಣಿ ಮಹರ್ಷೀನಿವ ಗೌತಮೀ||

12039006a ತವ ಕರ್ಮಾಣ್ಯಮೋಘಾನಿ ವ್ರತಚರ್ಯಾ ಚ ಭಾಮಿನಿ|

12039006c ಇತಿ ಕೃಷ್ಣಾಂ ಮಹಾರಾಜ ಪ್ರಶಶಂಸುಸ್ತದಾ ಸ್ತ್ರಿಯಃ||

“ಪಾಂಚಾಲೀ! ಕಲ್ಯಾಣೀ! ಮಹರ್ಷಿಗಳನ್ನು ಸೇವಿಸುತ್ತಿದ್ದ ಗೌತಮಿಯಂತೆ[1] ಈ ಪುರುಷಸತ್ತಮರನ್ನು ಸೇವಿಸುತ್ತಿದ್ದ ನೀನೇ ಧನ್ಯಳು! ಭಾಮಿನೀ! ನೀನು ಮಾಡಿರುವ ವ್ರತಚರ್ಯೆಗಳೂ ಕರ್ಮಗಳೂ ಅಮೋಘವಾದವುಗಳು!” ಮಹಾರಾಜ! ಹೀಗೆ ಸ್ತ್ರೀಯರು ಕೃಷ್ಣೆಯನ್ನು ಪ್ರಶಂಸಿಸುತ್ತಿದ್ದರು.

12039007a ಪ್ರಶಂಸಾವಚನೈಸ್ತಾಸಾಂ ಮಿಥಃಶಬ್ದೈಶ್ಚ ಭಾರತ|

12039007c ಪ್ರೀತಿಜೈಶ್ಚ ತದಾ ಶಬ್ದೈಃ ಪುರಮಾಸೀತ್ಸಮಾಕುಲಮ್||

ಭಾರತ! ರಹಸ್ಯವಾಗಿ ಆಡಿಕೊಳ್ಳುತ್ತಿದ್ದ ಆ ಪ್ರಶಂಸೆಯ ಮಾತುಗಳಿಂದಲೂ ಪ್ರೀತಿಯುಕ್ತ ಮಾತುಗಳಿಂದಲೂ ಆ ಪುರವು ತುಂಬಿಹೋಗಿತ್ತು.

12039008a ತಮತೀತ್ಯ ಯಥಾಯುಕ್ತಂ ರಾಜಮಾರ್ಗಂ ಯುಧಿಷ್ಠಿರಃ|

12039008c ಅಲಂಕೃತಂ ಶೋಭಮಾನಮುಪಾಯಾದ್ರಾಜವೇಶ್ಮ ಹ||

ಯಥಾಯುಕ್ತವಾಗಿ ರಾಜಮಾರ್ಗವನ್ನು ದಾಟಿ, ಶೋಭಾಯಮಾನವಾಗಿ ಅಲಂಕೃತಗೊಂಡಿದ್ದ ರಾಜಭವನವನ್ನು ಯುಧಿಷ್ಠಿರನು ಪ್ರವೇಶಿಸಿದನು.

12039009a ತತಃ ಪ್ರಕೃತಯಃ ಸರ್ವಾಃ ಪೌರಜಾನಪದಾಸ್ತಥಾ|

12039009c ಊಚುಃ ಕಥಾಃ ಕರ್ಣಸುಖಾಃ ಸಮುಪೇತ್ಯ ತತಸ್ತತಃ||

ಆಗ ಎಲ್ಲ ಸಾಮಾನ್ಯ ಜನರೂ, ಪೌರಜನರೂ ಅಲ್ಲಲ್ಲಿ ಸೇರಿಕೊಂಡು ಕರ್ಣಾನಂದಕರವಾದ ಮಾತುಗಳನ್ನಾಡುತ್ತಿದ್ದರು:

12039010a ದಿಷ್ಟ್ಯಾ ಜಯಸಿ ರಾಜೇಂದ್ರ ಶತ್ರೂನ್ಶತ್ರುನಿಸೂದನ|

12039010c ದಿಷ್ಟ್ಯಾ ರಾಜ್ಯಂ ಪುನಃ ಪ್ರಾಪ್ತಂ ಧರ್ಮೇಣ ಚ ಬಲೇನ ಚ||

“ರಾಜೇಂದ್ರ! ಶತ್ರುನಿಸೂದನ! ಸೌಭಾಗ್ಯವಶಾತ್ ನೀನು ಶತ್ರುಗಳನ್ನು ಜಯಿಸಿರುವೆ. ಸೌಭಾಗ್ಯವಶಾತ್ ನೀನು ಪುನಃ ಧರ್ಮ-ಬಲಗಳನ್ನುಪಯೋಗಿಸಿ ರಾಜ್ಯವನ್ನು ಪಡೆದಿರುವೆ!

12039011a ಭವ ನಸ್ತ್ವಂ ಮಹಾರಾಜ ರಾಜೇಹ ಶರದಾಂ ಶತಮ್|

12039011c ಪ್ರಜಾಃ ಪಾಲಯ ಧರ್ಮೇಣ ಯಥೇಂದ್ರಸ್ತ್ರಿದಿವಂ ನೃಪ||

ಮಹಾರಾಜ! ನೀನು ನೂರು ವರ್ಷಗಳ ಪರ್ಯಂತವಾಗಿ ನಮ್ಮ ರಾಜನಾಗಿರು. ನೃಪ! ಇಂದ್ರನು ದಿವವನ್ನು ಹೇಗೋ ಹಾಗೆ ಧರ್ಮದಿಂದ ಪ್ರಜೆಗಳನ್ನು ಪಾಲಿಸು!”

12039012a ಏವಂ ರಾಜಕುಲದ್ವಾರಿ ಮಂಗಲೈರಭಿಪೂಜಿತಃ|

12039012c ಆಶೀರ್ವಾದಾನ್ದ್ವಿಜೈರುಕ್ತಾನ್ಪ್ರತಿಗೃಹ್ಯ ಸಮಂತತಃ||

ರಾಜಭವನದ ದ್ವಾರದಲ್ಲಿ ಈ ರೀತಿ ಮಂಗಲದ್ರವ್ಯಗಳಿಂದ ಪೂಜಿತನಾಗಿ ಅವನು ಎಲ್ಲಕಡೆಗಳಿಂದ ಬರುತ್ತಿದ್ದ ದ್ವಿಜರ ಆಶೀರ್ವಾದಗಳನ್ನು ಸ್ವೀಕರಿಸಿದನು.

12039013a ಪ್ರವಿಶ್ಯ ಭವನಂ ರಾಜಾ ದೇವರಾಜಗೃಹೋಪಮಮ್|

12039013c ಶ್ರುತ್ವಾ ವಿಜಯಸಂಯುಕ್ತಂ ರಥಾತ್ಪಶ್ಚಾದವಾತರತ್||

ದೇವರಾಜನ ಭವನದಂತಿದ್ದ ರಾಜಭವನವನ್ನು ಪ್ರವೇಶಿಸಿ ವಿಜಯ ಘೋಷಗಳಿಂದ ಸಂಯುಕ್ತವಾಗಿದ್ದ ರಥದಿಂದ ಕೆಳಕ್ಕಿಳಿದನು.

12039014a ಪ್ರವಿಶ್ಯಾಭ್ಯಂತರಂ ಶ್ರೀಮಾನ್ದೈವತಾನ್ಯಭಿಗಮ್ಯ ಚ|

12039014c ಪೂಜಯಾಮಾಸ ರತ್ನೈಶ್ಚ ಗಂಧೈರ್ಮಾಲ್ಯೈಶ್ಚ ಸರ್ವಶಃ||

ಶ್ರೀಯಿಂದ ಬೆಳಗುತ್ತಿದ್ದ ಅರಮನೆಯ ಒಳಭಾಗವನ್ನು ಪ್ರವೇಶಿಸಿ ಅವನು ಕುಲದೇವತೆಗಳ ಸನ್ನಿಧಿಗೆ ಹೋಗಿ ದೇವತೆಗಳೆಲ್ಲರನ್ನೂ ರತ್ನ-ಗಂಧ-ಮಾಲೆಗಳಿಂದ ಪೂಜಿಸಿದನು.

12039015a ನಿಶ್ಚಕ್ರಾಮ ತತಃ ಶ್ರೀಮಾನ್ಪುನರೇವ ಮಹಾಯಶಾಃ|

12039015c ದದರ್ಶ ಬ್ರಾಹ್ಮಣಾಂಶ್ಚೈವ ಸೋಽಭಿರೂಪಾನುಪಸ್ಥಿತಾನ್||

ಶ್ರೀಮಂತನೂ ಮಹಾಯಶಸ್ವಿಯೂ ಆಗಿದ್ದ ಅವನು ಪುನಃ ರಾಜಭವನದಿಂದ ಹೊರಟು ಎದುರಿಗೆ ನೆರೆದಿದ್ದ ಬ್ರಾಹ್ಮಣರನ್ನು ನೋಡಿದನು.

12039016a ಸ ಸಂವೃತಸ್ತದಾ ವಿಪ್ರೈರಾಶೀರ್ವಾದವಿವಕ್ಷುಭಿಃ|

12039016c ಶುಶುಭೇ ವಿಮಲಶ್ಚಂದ್ರಸ್ತಾರಾಗಣವೃತೋ ಯಥಾ||

ಆಶೀರ್ವದಿಸಲು ಅಲ್ಲಿಗೆ ಬಂದು ಸೇರಿದ್ದ ವಿಪ್ರರಿಂದ ಪರಿವೃತನಾದ ಅವನು ವಿಮಲ ಆಕಾಶದಲ್ಲಿ ತಾರಾಗಣಗಳಿಂದ ಸುತ್ತುವರೆಯಲ್ಪಟ್ಟ ಚಂದ್ರನಂತೆ ಶೋಭಿಸಿದನು.

12039017a ತಾನ್ಸ ಸಂಪೂಜಯಾಮಾಸ ಕೌಂತೇಯೋ ವಿಧಿವದ್ದ್ವಿಜಾನ್|

12039017c ಧೌಮ್ಯಂ ಗುರುಂ ಪುರಸ್ಕೃತ್ಯ ಜ್ಯೇಷ್ಠಂ ಪಿತರಮೇವ ಚ||

12039018a ಸುಮನೋಮೋದಕೈ ರತ್ನೈರ್ಹಿರಣ್ಯೇನ ಚ ಭೂರಿಣಾ|

12039018c ಗೋಭಿರ್ವಸ್ತ್ರೈಶ್ಚ ರಾಜೇಂದ್ರ ವಿವಿಧೈಶ್ಚ ಕಿಮಿಚ್ಚಕೈಃ||

ರಾಜೇಂದ್ರ! ಕೌಂತೇಯನು ಗುರು ಧೌಮ್ಯ ಮತ್ತು ದೊಡ್ಡಪ್ಪರನ್ನು ಮುಂದಿಟ್ಟುಕೊಂಡು ಆ ದ್ವಿಜರನ್ನು ಪುಷ್ಪಗಳಿಂದಲೂ, ಮೋದಕಗಳಿಂದಲೂ, ರತ್ನ-ಹಿರಣ್ಯಗಳಿಂದಲೂ, ಗೋವುಗಳಿಂದಲೂ ಮತ್ತು ವಿವಿಧ ವಸ್ತುಗಳಿಂದಲೂ ಪೂಜಿಸಿದನು.

12039019a ತತಃ ಪುಣ್ಯಾಹಘೋಷೋಽಭೂದ್ದಿವಂ ಸ್ತಬ್ಧ್ವೇವ ಭಾರತ|

12039019c ಸುಹೃದಾಂ ಹರ್ಷಜನನಃ ಪುಣ್ಯಃ ಶ್ರುತಿಸುಖಾವಹಃ||

ಭಾರತ! ಆಗ ಆಕಾಶವನ್ನೇ ಸ್ತಬ್ಧಗೊಳಿಸುವಂಥಹ ಪುಣ್ಯಾಹ ಘೋಷವು ಕೇಳಿಬಂದಿತು. ಸುಹೃದಯರಿಗೆ ಕೇಳಿದರೆ ಪುಣ್ಯವನ್ನೂ ಹರ್ಷವನ್ನೂ ತರುವ ಘೋಷಗಳು ಕೇಳಿಬಂದವು.

12039020a ಹಂಸವನ್ನೇದುಷಾಂ ರಾಜನ್ದ್ವಿಜಾನಾಂ ತತ್ರ ಭಾರತೀ|

12039020c ಶುಶ್ರುವೇ ವೇದವಿದುಷಾಂ ಪುಷ್ಕಲಾರ್ಥಪದಾಕ್ಷರಾ||

ರಾಜನ್! ಅಲ್ಲಿ ಹಂಸಗಳಂತೆ ಘೋಷಿಸುತ್ತಿದ್ದ ವೇದವಿದುಷ ದ್ವಿಜರ ಶ್ರೇಷ್ಠ ಪದಾಕ್ಷರಸಂಪನ್ನ ವಾಣಿಯು ಎಲ್ಲರಿಗೂ ಸ್ಪಷ್ಟವಾಗಿ ಕೇಳಿಬರುತ್ತಿತ್ತು.

12039021a ತತೋ ದುಂದುಭಿನಿರ್ಘೋಷಃ ಶಂಖಾನಾಂ ಚ ಮನೋರಮಃ|

12039021c ಜಯಂ ಪ್ರವದತಾಂ ತತ್ರ ಸ್ವನಃ ಪ್ರಾದುರಭೂನ್ನೃಪ||

ನೃಪ! ಆಗ ಮನೋರಮ ದುಂದುಭಿ ಮತ್ತು ಶಂಖಗಳ ನಿರ್ಘೋಷವೂ ಜಯಕಾರ ಧ್ವನಿಯೂ ಕೇಳಿಬಂದವು.

12039022a ನಿಃಶಬ್ದೇ ಚ ಸ್ಥಿತೇ ತತ್ರ ತತೋ ವಿಪ್ರಜನೇ ಪುನಃ|

12039022c ರಾಜಾನಂ ಬ್ರಾಹ್ಮಣಚ್ಚದ್ಮಾ ಚಾರ್ವಾಕೋ ರಾಕ್ಷಸೋಽಬ್ರವೀತ್||

ಆಗ ಅಲ್ಲಿ ವಿಪ್ರಜನರು ಪುನಃ ನಿಃಷಬ್ಧರಾಗಲು ಬ್ರಾಹ್ಮಣ ವೇಷಧರಿಸಿದ್ದ ರಾಕ್ಷಸ ಚಾರ್ವಾಕನು ರಾಜನನ್ನು ಉದ್ದೇಶಿಸಿ ಹೇಳಿದನು.

12039023a ತತ್ರ ದುರ್ಯೋಧನಸಖಾ ಭಿಕ್ಷುರೂಪೇಣ ಸಂವೃತಃ|

12039023c ಸಾಂಖ್ಯಃ ಶಿಖೀ ತ್ರಿದಂಡೀ ಚ ಧೃಷ್ಟೋ ವಿಗತಸಾಧ್ವಸಃ||

ಆ ದುರ್ಯೋಧನನ ಸಖನು ಭಿಕ್ಷುವಿನ ರೂಪವನ್ನು ಧರಿಸಿ ಅಕ್ಷಮಾಲೆಯನ್ನು ಹಿಡಿದು ಶಿಖಾಧಾರಿಯಾಗಿ ತ್ರಿದಂಡವನ್ನು ಹಿಡಿದು ಧೈರ್ಯಶಾಲಿಯಾಗಿ ತನ್ನ ನಿಜರೂಪವನ್ನು ಮರೆಸಿಕೊಂಡಿದ್ದನು.

12039024a ವೃತಃ ಸರ್ವೈಸ್ತದಾ ವಿಪ್ರೈರಾಶೀರ್ವಾದವಿವಕ್ಷುಭಿಃ|

12039024c ಪರಂಸಹಸ್ರೈ ರಾಜೇಂದ್ರ ತಪೋನಿಯಮಸಂಸ್ಥಿತೈಃ||

12039025a ಸ ದುಷ್ಟಃ ಪಾಪಮಾಶಂಸಮ್ಪಾಂಡವಾನಾಂ ಮಹಾತ್ಮನಾಮ್|

12039025c ಅನಾಮಂತ್ರ್ಯೈವ ತಾನ್ವಿಪ್ರಾಂಸ್ತಮುವಾಚ ಮಹೀಪತಿಮ್||

ರಾಜೇಂದ್ರ! ಆಶೀರ್ವಾದವನ್ನು ನೀಡಲು ಬಂದಿದ್ದ ಆ ಎಲ್ಲ ತಪೋನಿಯಮ ಸಂಸ್ಥಿತ ಸಹಸ್ರಾರು ವಿಪ್ರರ ಮಧ್ಯದಿಂದ ಮಹಾತ್ಮ ಪಾಂಡವರಿಗೆ ಕೇಡನ್ನೇ ಬಯಸುತ್ತಿದ್ದ ಆ ದುಷ್ಟನು ಮುಂದೆ ಬಂದು ವಿಪ್ರರ ಅನುಮತಿಯನ್ನು ಕೇಳದೇ ಮಹೀಪತಿಗೆ ಹೇಳತೊಡಗಿದನು.

12039026a ಇಮೇ ಪ್ರಾಹುರ್ದ್ವಿಜಾಃ ಸರ್ವೇ ಸಮಾರೋಪ್ಯ ವಚೋ ಮಯಿ|

12039026c ಧಿಗ್ಭವಂತಂ ಕುನೃಪತಿಂ ಜ್ಞಾತಿಘಾತಿನಮಸ್ತು ವೈ||

“ಈ ಎಲ್ಲ ದ್ವಿಜರೂ ನಿನಗೆ ಇದನ್ನು ಹೇಳುವ ಭಾರವನ್ನು ನನಗೆ ವಹಿಸಿದ್ದಾರೆ. ಜ್ಞಾತಿಬಾಂಧವರನ್ನು ಸಂಹರಿಸಿದ ಕುನೃಪತಿ ನಿನಗೆ ಧಿಕ್ಕಾರ!

12039027a ಕಿಂ ತೇ ರಾಜ್ಯೇನ ಕೌಂತೇಯ ಕೃತ್ವೇಮಂ ಜ್ಞಾತಿಸಂಕ್ಷಯಮ್|

12039027c ಘಾತಯಿತ್ವಾ ಗುರೂಂಶ್ಚೈವ ಮೃತಂ ಶ್ರೇಯೋ ನ ಜೀವಿತಮ್||

ಕೌಂತೇಯ! ಕುಲನಾಶವನ್ನು ಮಾಡಿರುವ ನಿನಗೆ ಈ ರಾಜ್ಯದಿಂದ ಏನು ಪ್ರಯೋಜನ? ಗುರುಜನರನ್ನೂ ಸಂಹರಿಸಿದ ನಿನಗೆ ಬದುಕಿರುವುದಕ್ಕಿಂತಲೂ ಮರಣವೇ ಶ್ರೇಯಸ್ಕರವಾದುದು!”

12039028a ಇತಿ ತೇ ವೈ ದ್ವಿಜಾಃ ಶ್ರುತ್ವಾ ತಸ್ಯ ಘೋರಸ್ಯ ರಕ್ಷಸಃ|

12039028c ವಿವ್ಯಥುಶ್ಚುಕ್ರುಶುಶ್ಚೈವ ತಸ್ಯ ವಾಕ್ಯಪ್ರಧರ್ಷಿತಾಃ||

ಆ ಘೋರ ರಾಕ್ಷಸನ ಕಠೋರ ಮಾತನ್ನು ಕೇಳಿ ದ್ವಿಜರು ವ್ಯಥಿತರಾಗಿ ಶೋಕಿಸಿದರು.

12039029a ತತಸ್ತೇ ಬ್ರಾಹ್ಮಣಾಃ ಸರ್ವೇ ಸ ಚ ರಾಜಾ ಯುಧಿಷ್ಠಿರಃ|

12039029c ವ್ರೀಡಿತಾಃ ಪರಮೋದ್ವಿಗ್ನಾಸ್ತೂಷ್ಣೀಮಾಸನ್ವಿಶಾಂ ಪತೇ||

ವಿಶಾಂಪತೇ! ಆಗ ಆ ಬ್ರಾಹ್ಮಣರೆಲ್ಲರೂ ರಾಜಾ ಯುಧಿಷ್ಠಿರನೂ ಪರಮ ಉದ್ವಿಗ್ನರೂ ಲಜ್ಜಿತರೂ ಆಗಿ ಏನನ್ನೂ ಮಾತನಾಡದೇ ಸುಮ್ಮನಿದ್ದರು.

12039030 ಯುಧಿಷ್ಠಿರ ಉವಾಚ

12039030a ಪ್ರಸೀದಂತು ಭವಂತೋ ಮೇ ಪ್ರಣತಸ್ಯಾಭಿಯಾಚತಃ|

12039030c ಪ್ರತ್ಯಾಪನ್ನಂ ವ್ಯಸನಿನಂ ನ ಮಾಂ ಧಿಕ್ಕರ್ತುಮರ್ಹಥ||

ಯುಧಿಷ್ಠಿರನು ಹೇಳಿದನು: “ನಾನು ನಿಮಗೆ ನಮಸ್ಕರಿಸಿ ಕೇಳಿಕೊಳ್ಳುತ್ತಿದ್ದೇನೆ. ನನ್ನ ಮೇಲೆ ಪ್ರಸನ್ನರಾಗಿರಿ! ಎಲ್ಲೆಡೆಯಿಂದ ವ್ಯಸನಭರಿತನಾಗಿರುವ ನನ್ನನ್ನು ನೀವು ಹೀಗೆ ಧಿಕ್ಕರಿಸುವುದು ಉಚಿತವಲ್ಲ!””

12039031 ವೈಶಂಪಾಯನ ಉವಾಚ

12039031a ತತೋ ರಾಜನ್ಬ್ರಾಹ್ಮಣಾಸ್ತೇ ಸರ್ವ ಏವ ವಿಶಾಂ ಪತೇ|

12039031c ಊಚುರ್ನೈತದ್ವಚೋಽಸ್ಮಾಕಂ ಶ್ರೀರಸ್ತು ತವ ಪಾರ್ಥಿವ||

ವೈಶಂಪಾಯನನು ಹೇಳಿದನು: “ರಾಜನ್! ವಿಶಾಂಪತೇ! ಆಗ ಆ ಎಲ್ಲ ಬ್ರಾಹ್ಮಣರೂ ಇಂತೆಂದರು: “ಪಾರ್ಥಿವ! ಇವನು ಹೇಳಿದುದು ನಮ್ಮ ಮಾತಲ್ಲ! ಈ ರಾಜ್ಯಶ್ರೀಯು ನಿನ್ನದೇ ಆಗಿರಲಿ!”

12039032a ಜಜ್ಞುಶ್ಚೈವ ಮಹಾತ್ಮಾನಸ್ತತಸ್ತಂ ಜ್ಞಾನಚಕ್ಷುಷಾ|

12039032c ಬ್ರಾಹ್ಮಣಾ ವೇದವಿದ್ವಾಂಸಸ್ತಪೋಭಿರ್ವಿಮಲೀಕೃತಾಃ||

ಆಗ ವೇದವಿದ್ವಾಂಸರಾದ ಮತ್ತು ತಪಸ್ಸಿನಿಂದ ಪವಿತ್ರರಾಗಿದ್ದ ಆ ಮಹಾತ್ಮ ಬ್ರಾಹ್ಮಣರು ತಮ್ಮ ಜ್ಞಾನದೃಷ್ಟಿಯಿಂದ ಚಾರ್ವಾಕನು ಯಾರೆಂದು ತಿಳಿದುಕೊಂಡರು.

12039033 ಬ್ರಾಹ್ಮಣಾ ಊಚುಃ

12039033a ಏಷ ದುರ್ಯೋಧನಸಖಾ ಚಾರ್ವಾಕೋ ನಾಮ ರಾಕ್ಷಸಃ|

12039033c ಪರಿವ್ರಾಜಕರೂಪೇಣ ಹಿತಂ ತಸ್ಯ ಚಿಕೀರ್ಷತಿ||

ಬ್ರಾಹ್ಮಣರು ಹೇಳಿದರು: “ಇವನು ದುರ್ಯೋಧನನ ಮಿತ್ರ. ಚಾರ್ವಾಕ ಎಂಬ ಹೆಸರಿನ ರಾಕ್ಷಸ. ಪರಿವ್ರಾಜಕನ ರೂಪದಲ್ಲಿ ಇವನು ಅವನ ಹಿತಕ್ಕಾಗಿ ಹೀಗೆ ಮಾಡುತ್ತಿದ್ದಾನೆ.

12039034a ನ ವಯಂ ಬ್ರೂಮ ಧರ್ಮಾತ್ಮನ್ವ್ಯೇತು ತೇ ಭಯಮೀದೃಶಮ್|

12039034c ಉಪತಿಷ್ಠತು ಕಲ್ಯಾಣಂ ಭವಂತಂ ಭ್ರಾತೃಭಿಃ ಸಹ||

ಧರ್ಮಾತ್ಮನ್! ನಾವು ಹೀಗೆ ಹೇಳಲಾರೆವು. ಈ ಭಯವು ನಿನ್ನಿಂದ ದೂರವಾಗಲಿ! ಎದ್ದೇಳು! ಸಹೋದರರೊಂದಿಗೆ ನಿನ್ನ ಕಲ್ಯಾಣವಾಗಲಿ!””

12039035 ವೈಶಂಪಾಯನ ಉವಾಚ

12039035a ತತಸ್ತೇ ಬ್ರಾಹ್ಮಣಾಃ ಸರ್ವೇ ಹುಂಕಾರೈಃ ಕ್ರೋಧಮೂರ್ಚಿತಾಃ|

12039035c ನಿರ್ಭರ್ತ್ಸಯಂತಃ ಶುಚಯೋ ನಿಜಘ್ನುಃ ಪಾಪರಾಕ್ಷಸಮ್||

ವೈಶಂಪಾಯನನು ಹೇಳಿದನು: “ಅನಂತರ ಆ ಶುಚಿ ಬ್ರಾಹ್ಮಣರೆಲ್ಲರೂ ಕ್ರೋಧಮೂರ್ಚಿತರಾಗಿ ಹುಂಕಾರಗಳಿಂದ ಆ ಪಾಪರಾಕ್ಷಸನನ್ನು ಬೆದರಿಸಿ ಸಂಹರಿಸಿದರು.

12039036a ಸ ಪಪಾತ ವಿನಿರ್ದಗ್ಧಸ್ತೇಜಸಾ ಬ್ರಹ್ಮವಾದಿನಾಮ್|

12039036c ಮಹೇಂದ್ರಾಶನಿನಿರ್ದಗ್ಧಃ ಪಾದಪೋಽಂಕುರವಾನಿವ||

ಇಂದ್ರನ ವಜ್ರಾಘಾತದಿಂದ ಚಿಗುರುಗಳೂ ಸೇರಿ ಭಸ್ಮೀಭೂತವಾಗುವ ವೃಕ್ಷದಂತೆ ಆ ಬ್ರಹ್ಮವಾದಿಗಳ ತೇಜಸ್ಸಿನಿಂದ ಚಾರ್ವಾಕನು ಭಸ್ಮೀಭೂತನಾಗಿ ಕೆಳಗೆ ಬಿದ್ದನು.

12039037a ಪೂಜಿತಾಶ್ಚ ಯಯುರ್ವಿಪ್ರಾ ರಾಜಾನಮಭಿನಂದ್ಯ ತಮ್|

12039037c ರಾಜಾ ಚ ಹರ್ಷಮಾಪೇದೇ ಪಾಂಡವಃ ಸಸುಹೃಜ್ಜನಃ||

ಬಳಿಕ ರಾಜನಿಂದ ಸತ್ಕೃತರಾದ ವಿಪ್ರರು ರಾಜನನ್ನು ಅಭಿನಂದಿಸಿ ತೆರಳಿದರು. ರಾಜಾ ಪಾಂಡವನೂ ಕೂಡ ತನ್ನ ಸುಹೃಜ್ಜನರೊಂದಿಗೆ ಹರ್ಷಿತನಾದನು.

12039038 ವಾಸುದೇವ ಉವಾಚ

12039038a ಬ್ರಾಹ್ಮಣಾಸ್ತಾತ ಲೋಕೇಽಸ್ಮಿನ್ನರ್ಚನೀಯಾಃ ಸದಾ ಮಮ|

12039038c ಏತೇ ಭೂಮಿಚರಾ ದೇವಾ ವಾಗ್ವಿಷಾಃ ಸುಪ್ರಸಾದಕಾಃ||

ವಾಸುದೇವನು ಹೇಳಿದನು: “ಅಯ್ಯಾ! ಬ್ರಾಹ್ಮಣರು ಈ ಲೋಕದಲ್ಲಿ ನನಗೆ ಸದಾ ಅರ್ಚನೀಯರಾಗಿದ್ದಾರೆ. ಇವರು ಭೂಮಿಯಲ್ಲಿ ಸಂಚರಿಸುವ ದೇವತೆಗಳು! ಇವರು ಕುಪಿತರಾದರೆ ಇವರ ಮಾತುಗಳು ವಿಷವಾಗಿರುತ್ತವೆ.

12039039a ಪುರಾ ಕೃತಯುಗೇ ತಾತ ಚಾರ್ವಾಕೋ ನಾಮ ರಾಕ್ಷಸಃ|

12039039c ತಪಸ್ತೇಪೇ ಮಹಾಬಾಹೋ ಬದರ್ಯಾಂ ಬಹುವತ್ಸರಮ್||

ಅಯ್ಯಾ ಮಹಾಬಾಹೋ! ಹಿಂದೆ ಕೃತಯುಗದಲ್ಲಿ ಚಾರ್ವಾಕನೆಂಬ ರಾಕ್ಷಸನು ಬದರಿಯಲ್ಲಿ ಅನೇಕ ವರ್ಷಗಳು ತಪಸ್ಸನ್ನು ಮಾಡಿದನು.

12039040a ಚಂದ್ಯಮಾನೋ ವರೇಣಾಥ ಬ್ರಹ್ಮಣಾ ಸ ಪುನಃ ಪುನಃ|

12039040c ಅಭಯಂ ಸರ್ವಭೂತೇಭ್ಯೋ ವರಯಾಮಾಸ ಭಾರತ||

ಭಾರತ! ಬ್ರಹ್ಮನು ಅವನಿಗೆ ವರವನ್ನು ಕೇಳಿಕೊಳ್ಳುವಂತೆ ಪುನಃ ಪುನಃ ಒತ್ತಾಯಿಸಲು ಅವನು ಸರ್ವಭೂತಗಳಿಂದಲೂ ಅಭಯವನ್ನು ವರವನ್ನಾಗಿ ಕೇಳಿಕೊಂಡನು.

12039041a ದ್ವಿಜಾವಮಾನಾದನ್ಯತ್ರ ಪ್ರಾದಾದ್ವರಮನುತ್ತಮಮ್|

12039041c ಅಭಯಂ ಸರ್ವಭೂತೇಭ್ಯಸ್ತತಸ್ತಸ್ಮೈ ಜಗತ್ಪ್ರಭುಃ||

ಆಗ ಜಗತ್ಪಭುವು ದ್ವಿಜರಿಗೆ ಅವಮಾನಮಾಡದೇ ಇದ್ದರೆ ಸರ್ವಭೂತಗಳಿಂದಲೂ ಅಭಯವಾಗಲಿ ಎಂದು ಅವನಿಗೆ ಆ ಉತ್ತಮ ವರವನ್ನು ಇತ್ತನು.

12039042a ಸ ತು ಲಬ್ಧವರಃ ಪಾಪೋ ದೇವಾನಮಿತವಿಕ್ರಮಃ|

12039042c ರಾಕ್ಷಸಸ್ತಾಪಯಾಮಾಸ ತೀವ್ರಕರ್ಮಾ ಮಹಾಬಲಃ||

ಆ ವರವನ್ನು ಪಡೆದು ಪಾಪಿ ತೀವ್ರಕರ್ಮಿ ಮಹಾಬಲಿ ಅಮಿತವಿಕ್ರಮಿ ರಾಕ್ಷಸನು ದೇವತೆಗಳನ್ನೂ ಪರಿತಪಿಸತೊಡಗಿದನು.

12039043a ತತೋ ದೇವಾಃ ಸಮೇತ್ಯಾಥ ಬ್ರಹ್ಮಾಣಮಿದಮಬ್ರುವನ್|

12039043c ವಧಾಯ ರಕ್ಷಸಸ್ತಸ್ಯ ಬಲವಿಪ್ರಕೃತಾಸ್ತದಾ||

ಆ ರಾಕ್ಷಸನ ಬಲದಿಂದ ಪೀಡಿತರಾದ ದೇವತೆಗಳು ಒಟ್ಟಾಗಿ ಅವನ ವಧೆಗಾಗಿ ಬ್ರಹ್ಮನಲ್ಲಿ ಕೇಳಿಕೊಂಡರು.

12039044a ತಾನುವಾಚಾವ್ಯಯೋ ದೇವೋ ವಿಹಿತಂ ತತ್ರ ವೈ ಮಯಾ|

12039044c ಯಥಾಸ್ಯ ಭವಿತಾ ಮೃತ್ಯುರಚಿರೇಣೈವ ಭಾರತ||

ಭಾರತ! ಅವ್ಯವ ದೇವನು ಆಗ ಅವರಿಗೆ ಹೇಳಿದನು: “ಅದರ ಕುರಿತು ನಾನು ಈಗಲೇ ನಿರ್ಧರಿಸಿದ್ದೇನೆ. ಬೇಗನೇ ಇವನ ಮರಣವಾಗಲಿದೆ!

12039045a ರಾಜಾ ದುರ್ಯೋಧನೋ ನಾಮ ಸಖಾಸ್ಯ ಭವಿತಾ ನೃಪ|

12039045c ತಸ್ಯ ಸ್ನೇಹಾವಬದ್ಧೋಽಸೌ ಬ್ರಾಹ್ಮಣಾನವಮಂಸ್ಯತೇ||

ಇವನು ದುರ್ಯೋಧನನೆಂಬ ರಾಜನ ಸಖನಾಗುವನು. ಅವನ ಸ್ನೇಹಪಾಶದ ಬಂಧನಕ್ಕೊಳಗಾಗಿ ಇವನು ಬ್ರಾಹ್ಮಣರನ್ನು ಅಪಮಾನಿಸುವನು.

12039046a ತತ್ರೈನಂ ರುಷಿತಾ ವಿಪ್ರಾ ವಿಪ್ರಕಾರಪ್ರಧರ್ಷಿತಾಃ|

12039046c ಧಕ್ಷ್ಯಂತಿ ವಾಗ್ಬಲಾಃ ಪಾಪಂ ತತೋ ನಾಶಂ ಗಮಿಷ್ಯತಿ||

ಇವನ ವಿರುದ್ಧಾಚರಣೆಯ ವಾಕ್ಶಲ್ಯದಿಂದ ಅಪಮಾನಿತರಾದ ಬ್ರಾಹ್ಮಣರು ಕೋಪದಿಂದ ತಮ್ಮ ವಾಗ್ಬಲಗಳಿಂದ ಇವನನ್ನು ಸುಡುತ್ತಾರೆ. ಆಗ ಈ ಪಾಪಿಯು ನಾಶಹೊಂದುತ್ತಾನೆ!”

12039047a ಸ ಏಷ ನಿಹತಃ ಶೇತೇ ಬ್ರಹ್ಮದಂಡೇನ ರಾಕ್ಷಸಃ|

12039047c ಚಾರ್ವಾಕೋ ನೃಪತಿಶ್ರೇಷ್ಠ ಮಾ ಶುಚೋ ಭರತರ್ಷಭ||

ಭರತಶ್ರೇಷ್ಠ! ಆ ರಾಕ್ಷಸ ಚಾರ್ವಾಕನೇ ಇಂದು ಹೀಗೆ ಬ್ರಹ್ಮದಂಡದಿಂದ ಹತನಾಗಿ ಬಿದ್ದಿದ್ದಾನೆ. ನೃಪತಿಶ್ರೇಷ್ಠ! ಇದಕ್ಕಾಗಿ ಶೋಕಿಸಬೇಡ!

12039048a ಹತಾಸ್ತೇ ಕ್ಷತ್ರಧರ್ಮೇಣ ಜ್ಞಾತಯಸ್ತವ ಪಾರ್ಥಿವ|

12039048c ಸ್ವರ್ಗತಾಶ್ಚ ಮಹಾತ್ಮಾನೋ ವೀರಾಃ ಕ್ಷತ್ರಿಯಪುಂಗವಾಃ||

ಪಾರ್ಥಿವ! ಕ್ಷತ್ರಿಯಧರ್ಮದಿಂದ ನಿನ್ನ ಜ್ಞಾತಿಬಾಂಧವ ಮಹಾತ್ಮ ವೀರ ಕ್ಷತ್ರಿಯ ಪುಂಗವರು ಸ್ವರ್ಗಸ್ಥರಾಗಿದ್ದಾರೆ.

12039049a ಸ ತ್ವಮಾತಿಷ್ಠ ಕಲ್ಯಾಣಂ ಮಾ ತೇ ಭೂದ್ಗ್ಲಾನಿರಚ್ಯುತ|

12039049c ಶತ್ರೂನ್ಜಹಿ ಪ್ರಜಾ ರಕ್ಷ ದ್ವಿಜಾಂಶ್ಚ ಪ್ರತಿಪಾಲಯ||

ನೀನು ಈಗ ಕಲ್ಯಾಣಕರ ಕರ್ತವ್ಯಗಳನ್ನು ಮಾಡು. ಅಚ್ಯುತ! ಶೋಕದಿಂದ ದುರ್ಬಲನಾಗಬೇಡ! ಶತ್ರುಗಳನ್ನು ಸಂಹರಿಸು! ಪ್ರಜೆಗಳನ್ನು ರಕ್ಷಿಸು! ಮತ್ತು ದ್ವಿಜರನ್ನು ಪಾಲಿಸು!””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಚಾರ್ವಾಕವಧೇ ಏಕೋನಚತ್ವಾರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಚಾರ್ವಾಕವಧೆ ಎನ್ನುವ ಮೂವತ್ತೊಂಭತ್ತನೇ ಅಧ್ಯಾಯವು.

[1] ಜಟಿಲಾ

Comments are closed.