ಶಾಂತಿ ಪರ್ವ: ರಾಜಧರ್ಮ ಪರ್ವ

೩೭

12037001 ವೈಶಂಪಾಯನ ಉವಾಚ

12037001a ಏವಮುಕ್ತೋ ಭಗವತಾ ಧರ್ಮರಾಜೋ ಯುಧಿಷ್ಠಿರಃ|

12037001c ಚಿಂತಯಿತ್ವಾ ಮುಹೂರ್ತಂ ತು ಪ್ರತ್ಯುವಾಚ ತಪೋಧನಮ್||

ವೈಶಂಪಾಯನನು ಹೇಳಿದನು: “ಭಗವಾನ್ ವ್ಯಾಸನು ಹೀಗೆ ಹೇಳಲು ಧರ್ಮರಾಜ ಯುಧಿಷ್ಠಿರನು ಮುಹೂರ್ತಕಾಲ ಚಿಂತಿಸಿ ಆ ತಪೋಧನನನ್ನು ಪುನಃ ಪ್ರಶ್ನಿಸಿದನು:

12037002a ಕಿಂ ಭಕ್ಷ್ಯಂ ಕಿಮಭಕ್ಷ್ಯಂ ಚ ಕಿಂ ಚ ದೇಯಂ ಪ್ರಶಸ್ಯತೇ|

12037002c ಕಿಂ ಚ ಪಾತ್ರಮಪಾತ್ರಂ ವಾ ತನ್ಮೇ ಬ್ರೂಹಿ ಪಿತಾಮಹ||

“ಪಿತಾಮಹ! ತಿನ್ನಬಹುದಾದುದು ಯಾವುದು? ತಿನ್ನಬಾರದವುಗಳು ಯಾವುವು? ದಾನಮಾಡಲು ಯಾವುದು ಶ್ರೇಷ್ಠ? ದಾನಮಾಡಲು ಯಾರು ಪಾತ್ರರು ಮತ್ತು ಯಾರು ಅಪಾತ್ರರು ಎನ್ನುವುದನ್ನು ನನಗೆ ಹೇಳು!”

12037003 ವ್ಯಾಸ ಉವಾಚ

12037003a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12037003c ಸಿದ್ಧಾನಾಂ ಚೈವ ಸಂವಾದಂ ಮನೋಶ್ಚೈವ ಪ್ರಜಾಪತೇಃ||

ವ್ಯಾಸನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಬಹಳ ಹಿಂದೆ ನಡೆದ ಸಿದ್ಧರ ಮತ್ತು ಪ್ರಜಾಪತಿ ಮನುವಿನ ನಡುವೆ ನಡೆದ ಸಂವಾದವನ್ನು ಉದಾಹರಿಸುತ್ತಾರೆ.

12037004a ಸಿದ್ಧಾಸ್ತಪೋವ್ರತಪರಾಃ ಸಮಾಗಮ್ಯ ಪುರಾ ವಿಭುಮ್|

12037004c ಧರ್ಮಂ ಪಪ್ರಚ್ಚುರಾಸೀನಮಾದಿಕಾಲೇ ಪ್ರಜಾಪತಿಮ್||

ಹಿಂದೆ ಆದಿಕಾಲದಲ್ಲಿ ತಪೋವ್ರತಗಳಲ್ಲಿ ನಿರತರಾಗಿದ್ದ ಸಿದ್ಧರು ಒಂದಾಗಿ ಧರ್ಮದ ಕುರಿತು ಪ್ರಜಾಪತಿಯಲ್ಲಿ ಕೇಳಿದ್ದರು:

12037005a ಕಥಮನ್ನಂ ಕಥಂ ದಾನಂ ಕಥಮಧ್ಯಯನಂ ತಪಃ|

12037005c ಕಾರ್ಯಾಕಾರ್ಯಂ ಚ ನಃ ಸರ್ವಂ ಶಂಸ ವೈ ತ್ವಂ ಪ್ರಜಾಪತೇ||

“ಪ್ರಜಾಪತೇ! ಅನ್ನವು ಹೇಗಾಗುತ್ತದೆ? ದಾನವು ಹೇಗಾಗುತ್ತದೆ? ಅಧ್ಯಯನ-ತಪಸ್ಸುಗಳು ಹೇಗಾಗುತ್ತವೆ? ಮಾಡಬೇಕಾದ ಕಾರ್ಯಗಳು ಯಾವುವು? ಮಾಡಬಾರದ ಅಕಾರ್ಯಗಳು ಯಾವುವು? ಇವೆಲ್ಲವನ್ನೂ ನಮಗೆ ಹೇಳು!”

12037006a ತೈರೇವಮುಕ್ತೋ ಭಗವಾನ್ಮನುಃ ಸ್ವಾಯಂಭುವೋಽಬ್ರವೀತ್|

12037006c ಶುಶ್ರೂಷಧ್ವಂ ಯಥಾವೃತ್ತಂ ಧರ್ಮಂ ವ್ಯಾಸಸಮಾಸತಃ||

ಅವರು ಹೀಗೆ ಕೇಳಲು ಭಗವಾನ್ ಸ್ವಾಯಂಭು ಮನುವು ಹೇಳಿದನು: “ಧರ್ಮದ ಕುರಿತು ಸಂಕ್ಷೇಪವಾಗಿಯೂ ವಿಸ್ತಾರವಾಗಿಯೂ ಹೇಗಿರುವುದೋ ಹಾಗೆ ಕೇಳಿರಿ!

12037007a ಅದತ್ತಸ್ಯಾನುಪಾದಾನಂ ದಾನಮಧ್ಯಯನಂ ತಪಃ|

12037007c ಅಹಿಂಸಾ ಸತ್ಯಮಕ್ರೋಧಃ ಕ್ಷಮೇಜ್ಯಾ ಧರ್ಮಲಕ್ಷಣಮ್||

ಕೊಡದಿರುವುದನ್ನು ತೆಗೆದುಕೊಳ್ಳದಿರುವುದು, ದಾನ, ಅಧ್ಯಯನ, ತಪಸ್ಸು, ಅಹಿಂಸೆ, ಸತ್ಯತೆ, ಕೋಪಮಾಡಿಕೊಳ್ಳದಿರುವುದು, ಕ್ಷಮೆ ಮತ್ತು ಯಜ್ಞ - ಇವು ಧರ್ಮದ ಲಕ್ಷಣಗಳು.

12037008a ಯ ಏವ ಧರ್ಮಃ ಸೋಽಧರ್ಮೋಽದೇಶೇಽಕಾಲೇ ಪ್ರತಿಷ್ಠಿತಃ|

12037008c ಆದಾನಮನೃತಂ ಹಿಂಸಾ ಧರ್ಮೋ ವ್ಯಾವಸ್ಥಿಕಃ ಸ್ಮೃತಃ||

ದೇಶ-ಕಾಲಗಳನ್ನನುಸರಿಸಿ ಧರ್ಮವೆನಿಸಿದುದು ಅಧರ್ಮವೂ ಆಗಬಲ್ಲದು. ದಾನಮಾಡದೇ ಇರುವುದು, ಸುಳ್ಳುಹೇಳುವುದು, ಹಿಂಸೆ ಇವುಗಳನ್ನು ದೇಶ-ಕಾಲಗಳನ್ನನುಸರಿಸಿ ಧರ್ಮಕಾರ್ಯಗಳೆಂದೇ ಪರಿಗಣಿಸಲೂಬಹುದು.

12037009a ದ್ವಿವಿಧೌ ಚಾಪ್ಯುಭಾವೇತೌ ಧರ್ಮಾಧರ್ಮೌ ವಿಜಾನತಾಮ್|

12037009c ಅಪ್ರವೃತ್ತಿಃ ಪ್ರವೃತ್ತಿಶ್ಚ ದ್ವೈವಿಧ್ಯಂ ಲೋಕವೇದಯೋಃ||

ದೇಶ-ಕಾಲಗಳನ್ನನುಸರಿಸಿ ಧರ್ಮ ಮತ್ತು ಅಧರ್ಮವೆಂಬ ಎರಡು ವಿಧಗಳನ್ನು ತಿಳಿದುಕೊಳ್ಳಬೇಕು. ಲೋಕಗಳನ್ನು ತಿಳಿದವರು ಅಪ್ರವೃತ್ತಿ ಮತ್ತು ಪ್ರವೃತ್ತಿ[1] ಎಂಬ ಎರಡು ಪ್ರಕಾರಗಳ ಕುರಿತು ಹೇಳುತ್ತಾರೆ.

12037010a ಅಪ್ರವೃತ್ತೇರಮರ್ತ್ಯತ್ವಂ ಮರ್ತ್ಯತ್ವಂ ಕರ್ಮಣಃ ಫಲಮ್|

12037010c ಅಶುಭಸ್ಯಾಶುಭಂ ವಿದ್ಯಾಚ್ಚುಭಸ್ಯ ಶುಭಮೇವ ಚ||

12037011a ಏತಯೋಶ್ಚೋಭಯೋಃ ಸ್ಯಾತಾಂ ಶುಭಾಶುಭತಯಾ ತಥಾ|

ಅಪ್ರವೃತ್ತ ಕರ್ಮಗಳ ಫಲವು ಅಮೃತತ್ವ ಮತ್ತು ಪ್ರವೃತ್ತ ಕರ್ಮಗಳ ಫಲವು ಮರ್ತ್ಯತ್ವ. ಪ್ರವೃತ್ತ ಕರ್ಮಗಳಲ್ಲಿ ಎರಡು ಬಗೆಗಳಿವೆ – ಅಶುಭ ಮತ್ತು ಶುಭ ಕಾರ್ಯಗಳು. ಈ ಎರಡು ಬಗೆಯ ಕರ್ಮಗಳ ಫಲಗಳೂ ಕೂಡ ಶುಭ ಮತ್ತು ಅಶುಭಗಳೆಂದು ವಿಭಾಗಿಸಲ್ಪಟ್ಟಿವೆ.

12037011c ದೈವಂ ಚ ದೈವಯುಕ್ತಂ ಚ ಪ್ರಾಣಶ್ಚ ಪ್ರಲಯಶ್ಚ ಹ||

12037012a ಅಪ್ರೇಕ್ಷಾಪೂರ್ವಕರಣಾದಶುಭಾನಾಂ ಶುಭಂ ಫಲಮ್|

ದೇವತೆಗಳಿಗೆ ಸಂಬಂಧಿಸಿದ, ದೇವತೆಗಳನ್ನೊಳಗೊಂಡ, ತನ್ನ ಪ್ರಾಣವು ಹೋಗುವಾಗ ಅದನ್ನು ಉಳಿಸಿಕೊಳ್ಳಲು ಮಾಡುವ ಅಶುಭ ಕರ್ಮಗಳೂ ಶುಭ ಫಲಗಳನ್ನೇ ಕೊಡುತ್ತವೆ.

12037012c ಊರ್ಧ್ವಂ ಭವತಿ ಸಂದೇಹಾದಿಹ ದೃಷ್ಟಾರ್ಥಮೇವ ವಾ||

12037012e ಅಪ್ರೇಕ್ಷಾಪೂರ್ವಕರಣಾತ್ಪ್ರಾಯಶ್ಚಿತ್ತಂ ವಿಧೀಯತೇ||

ಅಪೇಕ್ಷಪೂರ್ವಕವಾಗಿ ಅಶುಭಕರ್ಮಗಳನ್ನು ಮಾಡಿದವರಿಗೆ, ಮತ್ತು ತಾನು ಮಾಡಿರುವ ಕಾರ್ಯವು ಅಶುಭವಾಗಿರಬಹುದೋ ಎಂದು ಸಂಶಯವಾಗಿರುವ ಕಾರ್ಯವನ್ನು ಮಾಡಿದವರಿಗೆ ಪ್ರಾಯಶ್ಚಿತ್ತಗಳನ್ನು ಹೇಳಲಾಗಿದೆ.

12037013a ಕ್ರೋಧಮೋಹಕೃತೇ ಚೈವ ದೃಷ್ಟಾಂತಾಗಮಹೇತುಭಿಃ|

12037013c ಶರೀರಾಣಾಮುಪಕ್ಲೇಶೋ ಮನಸಶ್ಚ ಪ್ರಿಯಾಪ್ರಿಯೇ||

12037013e ತದೌಷಧೈಶ್ಚ ಮಂತ್ರೈಶ್ಚ ಪ್ರಾಯಶ್ಚಿತ್ತೈಶ್ಚ ಶಾಮ್ಯತಿ||

ಕ್ರೋಧ-ಮೋಹಗಳಿಗೆ ವಶನಾಗಿ ಮನಸ್ಸಿಗೆ ಪ್ರಿಯವನ್ನುಂಟುಮಾಡಲು ಅಥವಾ ಮನಸ್ಸಿಗೆ ಅಪ್ರಿಯವಾದುದನ್ನು ವಿನಾಶಗೊಳಿಸಲು ಮತ್ತು ಹಿಂದೆ ಉದಾಹರಿಸಿದ ದೃಷ್ಟಾಂತಗಳ ಪ್ರಕಾರ ಅಶುಭಕಾರ್ಯವನ್ನೆಸಗಿದರೆ ಅವುಗಳ ಪಾಪಗಳನ್ನು ಶರೀರಬಾಧೆಗಳಿಂದ, ಔಷಧಿಗಳಿಂದ ಮತ್ತು ಮಂತ್ರಗಳಿಂದ ಪ್ರಾಯಶ್ಚಿತ್ತ ಮಾಡಿಕೊಂಡು ನಿವಾರಿಸಿಕೊಳ್ಳಬಹುದು.

12037014a ಜಾತಿಶ್ರೇಣ್ಯಧಿವಾಸಾನಾಂ ಕುಲಧರ್ಮಾಂಶ್ಚ ಸರ್ವತಃ|

12037014c ವರ್ಜಯೇನ್ನ ಹಿ ತಂ ಧರ್ಮಂ ಯೇಷಾಂ ಧರ್ಮೋ ನ ವಿದ್ಯತೇ||

ವರ್ಣ-ಆಶ್ರಮ-ಕುಲಧರ್ಮಗಳನ್ನು ಸಂಪೂರ್ಣವಾಗಿ ವರ್ಜಿಸಿದವರಿಗೆ ಯಾವುದೇ ರೀತಿಯ ಪ್ರಾಯಶ್ಚಿತ್ತಗಳೂ ಇರುವುದಿಲ್ಲ.

12037015a ದಶ ವಾ ವೇದಶಾಸ್ತ್ರಜ್ಞಾಸ್ತ್ರಯೋ ವಾ ಧರ್ಮಪಾಠಕಾಃ|

12037015c ಯದ್ಬ್ರೂಯುಃ ಕಾರ್ಯ ಉತ್ಪನ್ನೇ ಸ ಧರ್ಮೋ ಧರ್ಮಸಂಶಯೇ||

ಧರ್ಮಸಂಶಯವು ಉತ್ಪನ್ನವಾದಾಗ ಯಾವ ಕಾರ್ಯಗಳನ್ನು ಮಾಡಬೇಕೆನ್ನುವುದನ್ನು ವೇದ-ಶಾಸ್ತ್ರಗಳನ್ನು ತಿಳಿದ ಹತ್ತು ಅಥವಾ ಧರ್ಮಪಾಠಕರಾದ ಮೂರು ಮಂದಿಗಳ ನಿರ್ಣಯದಂತೆ ಮಾಡಬೇಕು.

12037016a ಅರುಣಾ ಮೃತ್ತಿಕಾ ಚೈವ ತಥಾ ಚೈವ ಪಿಪೀಲಕಾಃ|

12037016c ಶ್ಲೇಷ್ಮಾತಕಸ್ತಥಾ ವಿಪ್ರೈರಭಕ್ಷ್ಯಂ ವಿಷಮೇವ ಚ||

ಬ್ರಾಹ್ಮಣನಾದವನು ಕೆಂಪು ಮಣ್ಣನ್ನೂ, ಇರುವೆಗಳನ್ನೂ, ಚಳ್ಳೆಹಣ್ಣನ್ನೂ, ವಿಷವನ್ನೂ ತಿನ್ನಬಾರದು.

12037017a ಅಭಕ್ಷ್ಯಾ ಬ್ರಾಹ್ಮಣೈರ್ಮತ್ಸ್ಯಾಃ ಶಕಲೈರ್ಯೇ ವಿವರ್ಜಿತಾಃ|

12037017c ಚತುಷ್ಪಾತ್ಕಚ್ಚಪಾದನ್ಯೋ ಮಂಡೂಕಾ ಜಲಜಾಶ್ಚ ಯೇ||

ಆಮೆಗಳನ್ನು, ಮುಳ್ಳುಗಳಿರದ ಮೀನುಗಳನ್ನು, ಕಪ್ಪೆಗಳನ್ನೂ ಬಿಟ್ಟು ಬೇರೆ ಯಾವ ಜಲಚರ ಪ್ರಾಣಿಗಳನ್ನೂ ಬ್ರಾಹ್ಮಣರು ತಿನ್ನಬಾರದು.

12037018a ಭಾಸಾ ಹಂಸಾಃ ಸುಪರ್ಣಾಶ್ಚ ಚಕ್ರವಾಕಾ ಬಕಾಃ ಪ್ಲವಾಃ|

12037018c ಕಂಕೋ ಮದ್ಗುಶ್ಚ ಗೃಧ್ರಾಶ್ಚ ಕಾಕೋಲೂಕಂ ತಥೈವ ಚ||

12037019a ಕ್ರವ್ಯಾದಾಃ ಪಕ್ಷಿಣಃ ಸರ್ವೇ ಚತುಷ್ಪಾದಾಶ್ಚ ದಂಷ್ಟ್ರಿಣಃ|

12037019c ಯೇಷಾಂ ಚೋಭಯತೋ ದಂತಾಶ್ಚತುರ್ದಂಷ್ಟ್ರಾಶ್ಚ ಸರ್ವಶಃ||

ಭಾಸ, ಹಂಸ, ಗರುಡ, ಚಕ್ರವಾಕ, ಬಕಪಕ್ಷಿ, ಕಾಗೆ, ಮದು, ಹದ್ದು, ಗಿಡುಗ, ಗೂಬೆ, ಮಾಂಸವನ್ನು ತಿನ್ನುವ ಎಲ್ಲ ಪಕ್ಷಿಗಳು, ನಾಲ್ಕು ಕಾಲಿನ ಕೋರೆಹಲ್ಲುಗಳಿರುವ ಹಿಂಸಮೃಗಗಳು, ಎರಡೂ ಕಡೆ ಹಲ್ಲಿರುವ ಪ್ರಾಣಿಗಳು, ನಾಲ್ಕು ಕೋರೆದಾಡೆಗಳಿರುವ ಪ್ರಾಣಿಗಳು ಇವೆಲ್ಲವೂ ಬ್ರಾಹ್ಮಣರಿಗೆ ಅಭಕ್ಷ್ಯವಾದವುಗಳು.

12037020a ಏಡಕಾಶ್ವಖರೋಷ್ಟ್ರೀಣಾಂ ಸೂತಿಕಾನಾಂ ಗವಾಮಪಿ|

12037020c ಮಾನುಷೀಣಾಂ ಮೃಗೀಣಾಂ ಚ ನ ಪಿಬೇದ್ಬ್ರಾಹ್ಮಣಃ ಪಯಃ||

ಕುರಿ, ಕುದುರೆ, ಕತ್ತೆ, ಒಂಟೆ, ಮತ್ತು ಜನನವಾಗಿ ಹತ್ತು ದಿನಗಳ ಒಳಗಿನ ಮನುಷ್ಯ ಸ್ತ್ರೀಯ, ಜಿಂಕೆಯ ಮತ್ತು ಹಸುಗಳ ಹಾಲನ್ನು ಬ್ರಾಹ್ಮಣನು ಕುಡಿಯಬಾರದು.

12037021a ಪ್ರೇತಾನ್ನಂ ಸೂತಿಕಾನ್ನಂ ಚ ಯಚ್ಚ ಕಿಂ ಚಿದನಿರ್ದಶಮ್|

12037021c ಅಭೋಜ್ಯಂ ಚಾಪ್ಯಪೇಯಂ ಚ ಧೇನ್ವಾ ದುಗ್ಧಮನಿರ್ದಶಮ್||

ಪ್ರೇತಾನ್ನ[2] - ಸೂತಿಕಾನ್ನ[3] ಗಳು ಬ್ರಾಹ್ಮಣನಿಗೆ ನಿಷಿದ್ಧ. ಹಾಗೆಯೇ ಕರುಹಾಕಿದ ಹಸುವಿನ ಹಾಲನ್ನು ಮೊದಲ ಹತ್ತುದಿನಗಳು ಕುಡಿಯಬಾರದು.

12037022a ತಕ್ಷ್ಣಶ್ಚರ್ಮಾವಕರ್ತುಶ್ಚ ಪುಂಶ್ಚಲ್ಯಾ ರಜಕಸ್ಯ ಚ|

12037022c ಚಿಕಿತ್ಸಕಸ್ಯ ಯಚ್ಚಾನ್ನಮಭೋಜ್ಯಂ ರಕ್ಷಿಣಸ್ತಥಾ||

ಬಡಗಿ, ಚಮ್ಮಾರ, ವ್ಯಭಿಚಾರಿಣೀ, ಅಗಸ, ವೈದ್ಯ ಮತ್ತು ಗ್ರಾಮರಕ್ಷಕರ ಅನ್ನವನ್ನೂ ತಿನ್ನಬಾರದು.                                                         

12037023a ಗಣಗ್ರಾಮಾಭಿಶಸ್ತಾನಾಂ ರಂಗಸ್ತ್ರೀಜೀವಿನಶ್ಚ ಯೇ|

12037023c ಪರಿವಿತ್ತಿನಪುಂಷಾಂ ಚ ಬಂದಿದ್ಯೂತವಿದಾಂ ತಥಾ||

ಸಮಾಜ-ಗ್ರಾಮಗಳಿಂದ ಬಹಿಷ್ಕೃತನಾದವನ, ನರ್ತಕಿಯರ ಜೀವನವನ್ನು ನಡೆಸುವವರ, ತಮ್ಮನ ವಿವಾಹವಾದ ನಂತರ ವಿವಾಹವಾದವನ, ವಂದಿ-ಮಾಗದರ ಮತ್ತು ಜೂಜಿನಲ್ಲಿ ಆಸಕ್ತನಾಗಿರುವವನ ಅನ್ನವನ್ನೂ ತಿನ್ನಬಾರದು.

12037024a ವಾರ್ಯಮಾಣಾಹೃತಂ ಚಾನ್ನಂ ಶುಕ್ತಂ ಪರ್ಯುಷಿತಂ ಚ ಯತ್|

12037024c ಸುರಾನುಗತಮುಚ್ಚಿಷ್ಟಮಭೋಜ್ಯಂ ಶೇಷಿತಂ ಚ ಯತ್||

ಎಡಗೈಯಿಂದ ಬಡಿಸಿದ ಅನ್ನ, ಊಟಕ್ಕೆ ಕುಳಿತುಕೊಳ್ಳುವುದಕ್ಕೆ ಮೊದಲೇ ಬಡಿಸಿದ ಅನ್ನ, ಒಂದು ರಾತ್ರಿಯನ್ನು ಕಳೆದಿರುವ ಅನ್ನ, ಮದ್ಯದ ಸಮೀಪದಲ್ಲಿರುವ ಅನ್ನ, ಇನ್ನೊಬ್ಬರಿಗೆ ಬಡಿಸಿ ಉಳಿದ ಅನ್ನ, ಎಲ್ಲರೂ ತಿಂದು ಉಳಿದ ಅನ್ನ ಇವುಗಳನ್ನೂ ತಿನ್ನಬಾರದು.

12037025a ಪಿಷ್ಟಮಾಂಸೇಕ್ಷುಶಾಕಾನಾಂ ವಿಕಾರಾಃ ಪಯಸಸ್ತಥಾ|

12037025c ಸಕ್ತುಧಾನಾಕರಂಭಾಶ್ಚ ನೋಪಭೋಜ್ಯಾಶ್ಚಿರಸ್ಥಿತಾಃ||

ಹಿಟ್ಟು, ಕಬ್ಬಿನರಸ, ತರಕಾರಿ, ಹಾಲು ಇವುಗಳನ್ನು ವಿಕೃತಗೊಳಿಸಿ ತಯಾರಿಸಿದ ಆಹಾರ, ತಯಾರಿಸಿ ಬಹಳ ಸಮಯವಾದ ತಂಬಿಟ್ಟು, ಹುರಿದಹಿಟ್ಟು ಮತ್ತು ಕಲಸಿದ ಅನ್ನ ಇವುಗಳನ್ನೂ ತಿನ್ನಬಾರದು.

12037026a ಪಾಯಸಂ ಕೃಸರಂ ಮಾಂಸಮಪೂಪಾಶ್ಚ ವೃಥಾ ಕೃತಾಃ|

12037026c ಅಭೋಜ್ಯಾಶ್ಚಾಪ್ಯಭಕ್ಷ್ಯಾಶ್ಚ ಬ್ರಾಹ್ಮಣೈರ್ಗೃಹಮೇಧಿಭಿಃ||

ದೇವತಾಪ್ರೀತ್ಯರ್ಥವಾಗಿ ಮಾಡದೇ ಇದ್ದ ಪಾಯಸ, ತಿಲಾನ್ನ, ಮಾಂಸ, ಹೋಳಿಗೆ ಇವುಗಳನ್ನು ಗೃಹಸ್ಥ ಬ್ರಾಹ್ಮಣನು ತಿನ್ನಬಾರದು ಮತ್ತು ಕುಡಿಯಬಾರದು.

12037027a ದೇವಾನ್ಪಿತೃನ್ಮನುಷ್ಯಾಂಶ್ಚ ಮುನೀನ್ಗೃಹ್ಯಾಶ್ಚ ದೇವತಾಃ|

12037027c ಪೂಜಯಿತ್ವಾ ತತಃ ಪಶ್ಚಾದ್ಗೃಹಸ್ಥೋ ಭೋಕ್ತುಮರ್ಹತಿ||

ದೇವತೆಗಳು, ಋಷಿಗಳು, ಪಿತೃಗಳು, ಮನುಷ್ಯ-ಮುನಿಗಳು ಮತ್ತು ಮನೆಯ ದೇವತೆಗಳನ್ನು ಪೂಜಿಸಿದ ನಂತರವೇ ಗೃಹಸ್ಥನಾದವನು ಊಟ ಮಾಡಬೇಕು.

12037028a ಯಥಾ ಪ್ರವ್ರಜಿತೋ ಭಿಕ್ಷುರ್ಗೃಹಸ್ಥಃ ಸ್ವಗೃಹೇ ವಸೇತ್|

12037028c ಏವಂವೃತ್ತಃ ಪ್ರಿಯೈರ್ದಾರೈಃ ಸಂವಸನ್ಧರ್ಮಮಾಪ್ನುಯಾತ್||

ಪರಿವ್ರಾಜಕ ಭಿಕ್ಷುವಂತೆ ಪತ್ನೀ-ಪುತ್ರರೊಡನೆ ತನ್ನ ಮನೆಯಲ್ಲಿಯೇ ವಾಸಿಸಿರುವ ಗೃಹಸ್ಥನು ಧರ್ಮಫಲಗಳನ್ನು ಪಡೆಯುತ್ತಾನೆ.

12037029a ನ ದದ್ಯಾದ್ಯಶಸೇ ದಾನಂ ನ ಭಯಾನ್ನೋಪಕಾರಿಣೇ|

12037029c ನ ನೃತ್ತಗೀತಶೀಲೇಷು ಹಾಸಕೇಷು ಚ ಧಾರ್ಮಿಕಃ||

ಧಾರ್ಮಿಕನಾಗಿರುವವನು ಯಶಸ್ಸಿಗಾಗಲೀ, ಭಯದಿಂದಾಗಲೀ, ನೃತ್ಯಗೀತೆಗಳಲ್ಲಿ ಮತ್ತು ಹಾಸ್ಯವೃತ್ತಿಗಳಲ್ಲಿ ತೊಡಗಿರುವವರಿಗೆ ದಾನಮಾಡಬಾರದು.

12037030a ನ ಮತ್ತೇ ನೈವ ಚೋನ್ಮತ್ತೇ ನ ಸ್ತೇನೇ ನ ಚಿಕಿತ್ಸಕೇ|

12037030c ನ ವಾಗ್ಘೀನೇ ವಿವರ್ಣೇ ವಾ ನಾಂಗಹೀನೇ ನ ವಾಮನೇ||

12037031a ನ ದುರ್ಜನೇ ದೌಷ್ಕುಲೇ ವಾ ವ್ರತೈರ್ವಾ ಯೋ ನ ಸಂಸ್ಕೃತಃ|

12037031c ಅಶ್ರೋತ್ರಿಯೇ ಮೃತಂ ದಾನಂ ಬ್ರಾಹ್ಮಣೇಽಬ್ರಹ್ಮವಾದಿನಿ||

ಬ್ರಹ್ಮವಾದಿನಿಯಾದ ಬ್ರಾಹ್ಮಣನನ್ನು ಬಿಟ್ಟು ಮತ್ತನಾಗಿರುವವನಿಗೂ, ಹುಚ್ಚನಿಗೂ, ಕಳ್ಳನಿಗೂ, ಪರನಿಂದೆಯನ್ನು ಮಾಡುವವನಿಗೂ, ಮೂಕನಿಗೂ, ಮುಖದಲ್ಲಿ ವರ್ಚಸ್ಸಿಲ್ಲದಿರುವವನಿಗೂ, ಅಂಗವಿಕಲನಿಗೂ, ಗುಳ್ಳನಿಗೂ, ದುಷ್ಟನಿಗೂ, ದುಷ್ಕುಲದಲ್ಲಿ ಹುಟ್ಟಿದವನಿಗೂ, ವ್ರತಗಳನ್ನು ಆಚರಿಸದೇ ಸುಸಂಕೃತನಾಗದೇ ಇರುವವನಿಗೂ, ವೇದದಿಂದ ವಿಹೀನನಾದವನಿಗೂ ದಾನನೀಡಬಾರದು. 

12037032a ಅಸಮ್ಯಕ್ಚೈವ ಯದ್ದತ್ತಮಸಮ್ಯಕ್ಚ ಪ್ರತಿಗ್ರಹಃ|

12037032c ಉಭಯೋಃ ಸ್ಯಾದನರ್ಥಾಯ ದಾತುರಾದಾತುರೇವ ಚ||

ಶ್ರದ್ಧೆಯಿಲ್ಲದೇ ಶಾಸ್ತ್ರವಿಹಿತವಾಗಿ ಅನರ್ಹನಿಗೆ ಕೊಟ್ಟ ದಾನವು ದಾನಕೊಡುವವನಿಗೂ ಮತ್ತು ದಾನವನ್ನು ಸ್ವೀಕರಿಸಿದವನಿಗೂ ಅನರ್ಥಗಳನ್ನುಂಟುಮಾಡುತ್ತದೆ.

12037033a ಯಥಾ ಖದಿರಮಾಲಂಬ್ಯ ಶಿಲಾಂ ವಾಪ್ಯರ್ಣವಂ ತರನ್|

12037033c ಮಜ್ಜತೇ ಮಜ್ಜತೇ ತದ್ವದ್ದಾತಾ ಯಶ್ಚ ಪ್ರತೀಚ್ಚಕಃ||

ಕಗ್ಗಲೀ ಮರದ ತುಂಡನ್ನೋ ಅಥವಾ ಕಲ್ಲುಗುಂಡನ್ನೋ ಆಶ್ರಯಿಸಿ ಸಮುದ್ರವನ್ನು ದಾಟಲು ಹೋದವನಂತೆ ದಾನಕೊಟ್ಟವನೂ ದಾನವನ್ನು ಪರಿಗ್ರಹಿಸಿದವನೂ ಅಧರ್ಮದಲ್ಲಿ ಮುಳುಗಿಹೋಗುತ್ತಾರೆ.

12037034a ಕಾಷ್ಠೈರಾರ್ದ್ರೈರ್ಯಥಾ ವಹ್ನಿರುಪಸ್ತೀರ್ಣೋ ನ ದೀಪ್ಯತೇ|

12037034c ತಪಃಸ್ವಾಧ್ಯಾಯಚಾರಿತ್ರೈರೇವಂ ಹೀನಃ ಪ್ರತಿಗ್ರಹೀ||

ಹಸಿಯಾದ ಕಟ್ಟಿಗೆಯನ್ನು ಹಾಕಿದ ಅಗ್ನಿಯು ಹೇಗೆ ಚೆನ್ನಾಗಿ ಉರಿಯುವುದಿಲ್ಲವೋ ಹಾಗೆ ತಪಸ್ಸು-ಸ್ವಾಧ್ಯಾಯ ಮತ್ತು ಚಾರಿತ್ರಹೀನನಾಗಿರವವನು ದಾನವನ್ನು ಸ್ವೀಕರಿಸಿದರೆ ಅಂಥವನು ಶೋಭಿಸುವುದಿಲ್ಲ.

12037035a ಕಪಾಲೇ ಯದ್ವದಾಪಃ ಸ್ಯುಃ ಶ್ವದೃತೌ ವಾ ಯಥಾ ಪಯಃ|

12037035c ಆಶ್ರಯಸ್ಥಾನದೋಷೇಣ ವೃತ್ತಹೀನೇ ತಥಾ ಶ್ರುತಮ್||

ಆಶ್ರಯಸ್ಥಾನದೋಷಗಳಿಂದ ಶುದ್ಧವಾದ ನೀರನ್ನು ಕಪಾಲದಲ್ಲಿಟ್ಟರೆ ಅಥವಾ ಹಾಲನ್ನು ನಾಯಿಯ ಚರ್ಮದ ಚೀಲದಲ್ಲಿಟ್ಟರೆ ಹೇಗೋ ಹಾಗೆ ಆಚಾರಹೀನನಾದವನಲ್ಲಿರುವ ವೇದಗಳೂ ದೂಷಿತಗೊಳ್ಳುತ್ತವೆ.

12037036a ನಿರ್ಮಂತ್ರೋ ನಿರ್ವ್ರತೋ ಯಃ ಸ್ಯಾದಶಾಸ್ತ್ರಜ್ಞೋಽನಸೂಯಕಃ|

12037036c ಅನುಕ್ರೋಶಾತ್ಪ್ರದಾತವ್ಯಂ ದೀನೇಷ್ವೇವಂ ನರೇಷ್ವಪಿ||

ನಿರ್ಮಂತ್ರನಾಗಿದ್ದರೂ, ವ್ರತಾದಿಗಳನ್ನು ನಡೆಸದೇ ಇದ್ದರೂ, ಶಾಸ್ತ್ರಜ್ಞಾನಗಳನ್ನು ಹೊಂದಿಲ್ಲದಿದ್ದರೂ, ಅನಸೂಯಕನಾದ ದೀನ ನರನಿಗೆ ಅನುಕ್ರೋಶದಿಂದ ದಾನವನ್ನು ಕೊಡಬಹುದು.

12037037a ನ ವೈ ದೇಯಮನುಕ್ರೋಶಾದ್ದೀನಾಯಾಪ್ಯಪಕಾರಿಣೇ|

12037037c ಆಪ್ತಾಚರಿತಮಿತ್ಯೇವ ಧರ್ಮ ಇತ್ಯೇವ ವಾ ಪುನಃ||

ಇತರರಿಗೆ ಯಾವಾಗಲೂ ಕೇಡನ್ನೇ ಬಯಸುವವನಿಗೆ, ಅವನು ದರಿದ್ರನೇ ಆಗಿದ್ದರೂ, ದೀನನೇ ಆಗಿದ್ದರೂ, ಅನುಕಂಪದಿಂದ ದಾನಮಾಡಬಾರದು.

12037038a ನಿಷ್ಕಾರಣಂ ಸ್ಮ ತದ್ದತ್ತಂ ಬ್ರಾಹ್ಮಣೇ ಧರ್ಮವರ್ಜಿತೇ|

12037038c ಭವೇದಪಾತ್ರದೋಷೇಣ ನ ಮೇಽತ್ರಾಸ್ತಿ ವಿಚಾರಣಾ||

ಬ್ರಹ್ಮವರ್ಜಿತ ಬ್ರಾಹ್ಮಣನಿಗೆ ಕೊಟ್ಟ ದಾನವು ಅಪಾತ್ರನಿಗೆ ದಾನಮಾಡಿದ ದೋಷದಿಂದ ಕೂಡಿರುವುದರಿಂದ ನಿಷ್ಫಲವಾಗುತ್ತದೆ ಎನ್ನುವುದರಲ್ಲಿ ವಿಚಾರ ಮಾಡುವುದೇ ಬೇಕಾಗಿಲ್ಲ.

12037039a ಯಥಾ ದಾರುಮಯೋ ಹಸ್ತೀ ಯಥಾ ಚರ್ಮಮಯೋ ಮೃಗಃ|

12037039c ಬ್ರಾಹ್ಮಣಶ್ಚಾನಧೀಯಾನಸ್ತ್ರಯಸ್ತೇ ನಾಮಧಾರಕಾಃ||

ಮರದಿಂದ ತಯಾರಿಸಿದ ಆನೆ, ಚರ್ಮದಿಂದ ತಯಾರಿಸಿದ ಜಿಂಕೆ ಮತ್ತು ಬ್ರಹ್ಮಜ್ಞಾನವಿಹೀನ ಬ್ರಾಹ್ಮಣ ಈ ಮೂವರೂ ಕೇವಲ ನಾಮಧಾರಕಗಳೇ ಹೊರತು ಅವುಗಳಲ್ಲಿ ನಿಜವಾದ ಸತ್ತ್ವವು ಇರುವುದಿಲ್ಲ.

12037040a ಯಥಾ ಷಂಢೋಽಫಲಃ ಸ್ತ್ರೀಷು ಯಥಾ ಗೌರ್ಗವಿ ಚಾಫಲಾ|

12037040c ಶಕುನಿರ್ವಾಪ್ಯಪಕ್ಷಃ ಸ್ಯಾನ್ನಿರ್ಮಂತ್ರೋ ಬ್ರಾಹ್ಮಣಸ್ತಥಾ||

ಷಂಡನು ಸ್ತ್ರೀಯರಲ್ಲಿ, ಅಥವಾ ಹಸುವು ಇನ್ನೊಂದು ಹಸುವಿನಲ್ಲಿ ಹೇಗೆ ಫಲವನ್ನು ಹೊಂದಲಾರದೋ ಮತ್ತು ರೆಕ್ಕೆಗಳಿಲ್ಲದ ಪಕ್ಷಿಯು ಹೇಗೋ ಹಾಗೆ ಮಂತ್ರಗಳಿಲ್ಲದ ಬ್ರಾಹ್ಮಣನೂ ನಿಷ್ಪ್ರಯೋಜಕನು.

12037041a ಗ್ರಾಮಧಾನ್ಯಂ ಯಥಾ ಶೂನ್ಯಂ ಯಥಾ ಕೂಪಶ್ಚ ನಿರ್ಜಲಃ|

12037041c ಯಥಾ ಹುತಮನಗ್ನೌ ಚ ತಥೈವ ಸ್ಯಾನ್ನಿರಾಕೃತೌ||

ಧಾನ್ಯಗಳಿಲ್ಲದ ಗ್ರಾಮ ಮತ್ತು ನೀರಿಲ್ಲದ ಬಾವಿಯಂತೆ ವೇದಗಳಿಲ್ಲದ ಬ್ರಾಹ್ಮಣನಿಗೆ ದಾನವನ್ನಿತ್ತರೆ ಅಗ್ನಿಯಿಲ್ಲದ ಬೂದಿಯಲ್ಲಿ ಹೋಮಮಾಡಿದಷ್ಟೇ ಪ್ರಯೋಜನವಾಗುತ್ತದೆ.

12037042a ದೇವತಾನಾಂ ಪಿತೃಣಾಂ ಚ ಹವ್ಯಕವ್ಯವಿನಾಶನಃ|

12037042c ಶತ್ರುರರ್ಥಹರೋ ಮೂರ್ಖೋ ನ ಲೋಕಾನ್ಪ್ರಾಪ್ತುಮರ್ಹತಿ||

ವೇದವಿದ್ಯಾವಿಹೀನ ಬ್ರಾಹ್ಮಣನು ದೇವತೆಗಳಿಗೆ ಮತ್ತು ಪಿತೃಗಳಿಗೆ ನೀಡುವ ಹವ್ಯ-ಕವ್ಯಗಳನ್ನು ನಾಶಗೊಳಿಸುತ್ತಾನೆ. ಅಂಥಹ ಮೂರ್ಖನು ಧನಾಪಹಾರೀ ಶತ್ರುವಾಗಿ ಉತ್ತಮ ಲೋಕಗಳನ್ನು ಪಡೆಯಲು ಅರ್ಹನಾಗುವುದಿಲ್ಲ.”

12037043a ಏತತ್ತೇ ಕಥಿತಂ ಸರ್ವಂ ಯಥಾ ವೃತ್ತಂ ಯುಧಿಷ್ಠಿರ|

12037043c ಸಮಾಸೇನ ಮಹದ್ಧ್ಯೇತಚ್ಚ್ರೋತವ್ಯಂ ಭರತರ್ಷಭ||

ಯುಧಿಷ್ಠಿರ! ಭರತರ್ಷಭ! ಮಹಾ ಅರ್ಥಯುಕ್ತವಾದ ಈ ಎಲ್ಲ ವಿಷಯಗಳನ್ನೂ ಯಥಾವತ್ತಾಗಿ ಸಂಕ್ಷಿಪ್ತವಾಗಿ ನಿನಗೆ ಹೇಳಿದ್ದೇನೆ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವ್ಯಾಸವಾಕ್ಯೇ ಸಪ್ತತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಮೂವತ್ತೇಳನೇ ಅಧ್ಯಾಯವು.

[1] ಅಹಂಕಾರವಿಲ್ಲದೇ ಕರ್ಮಗಳನ್ನು ಮಾಡಿ ಕರ್ಮಫಲಗಳಲ್ಲಿ ನಿರಾಸಕ್ತನಾಗಿರುವುದು ಅಪ್ರವೃತ್ತಿ; ಅಹಂಕಾರದಿಂದ ಕರ್ಮಗಳನ್ನು ಮಾಡಿ ಅವುಗಳ ಫಲಗಳಲ್ಲಿ ಆಸಕ್ತಿಯನ್ನಿಟ್ಟುಕೊಂಡಿರುವುದು ಪ್ರವೃತ್ತಿ.

[2] ಮರಣವಾದವರ ಮನೆಯಲ್ಲಿ ಹತ್ತು ದಿನಗಳ ಪರ್ಯಂತದ ಊಟ

[3] ಜನನವಾದವರ ಮನೆಯಲ್ಲಿ ಹತ್ತು ದಿನಗಳ ಪರ್ಯಂತದ ಊಟ

Comments are closed.