ಶಾಂತಿ ಪರ್ವ: ರಾಜಧರ್ಮ ಪರ್ವ

೩೪

12034001 ವೈಶಂಪಾಯನ ಉವಾಚ

12034001a ಯುಧಿಷ್ಠಿರಸ್ಯ ತದ್ವಾಕ್ಯಂ ಶ್ರುತ್ವಾ ದ್ವೈಪಾಯನಸ್ತದಾ|

12034001c ಸಮೀಕ್ಷ್ಯ ನಿಪುಣಂ ಬುದ್ಧ್ಯಾ ಋಷಿಃ ಪ್ರೋವಾಚ ಪಾಂಡವಮ್||

ವೈಶಂಪಾಯನನು ಹೇಳಿದನು: “ಯುಧಿಷ್ಠಿರನ ಆ ಮಾತನ್ನು ಕೇಳಿ ಋಷಿ ದ್ವೈಪಾಯನನು ನಿಪುಣ ಬುದ್ಧಿಯಿಂದ ಸಮೀಕ್ಷಿಸಿ ಪಾಂಡವನಿಗೆ ಇಂತೆಂದನು:

12034002a ಮಾ ವಿಷಾದಂ ಕೃಥಾ ರಾಜನ್ಕ್ಷತ್ರಧರ್ಮಮನುಸ್ಮರ|

12034002c ಸ್ವಧರ್ಮೇಣ ಹತಾ ಹ್ಯೇತೇ ಕ್ಷತ್ರಿಯಾಃ ಕ್ಷತ್ರಿಯರ್ಷಭ||

“ರಾಜನ್! ಕ್ಷತ್ರಿಯರ್ಷಭ! ವಿಷಾದಿಸಬೇಡ! ಕ್ಷತ್ರಿಯ ಧರ್ಮವನ್ನು ಸ್ಮರಿಸಿಕೋ! ಈ ಕ್ಷತ್ರಿಯರೆಲ್ಲರೂ ಸ್ವಧರ್ಮಾನುಸಾರವಾಗಿಯೇ ಹತರಾಗಿದ್ದಾರೆ.

12034003a ಕಾಂಕ್ಷಮಾಣಾಃ ಶ್ರಿಯಂ ಕೃತ್ಸ್ನಾಂ ಪೃಥಿವ್ಯಾಂ ಚ ಮಹದ್ಯಶಃ|

12034003c ಕೃತಾಂತವಿಧಿಸಂಯುಕ್ತಾಃ ಕಾಲೇನ ನಿಧನಂ ಗತಾಃ||

ಪೃಥ್ವಿಯ ಸಮಗ್ರ ರಾಜ್ಯಲಕ್ಷ್ಮಿಯನ್ನೂ ಮಹಾ ಯಶಸ್ಸನ್ನೂ ಆಕಾಂಕ್ಷಿಸುತ್ತಾ ಇವರು ಯಮನು ವಿಧಿಸಿದ ಕಾಲವು ಸನ್ನಿಹಿತವಾಗುತ್ತಲೇ ನಿಧನ ಹೊಂದಿದರು.

12034004a ನ ತ್ವಂ ಹಂತಾ ನ ಭೀಮೋಽಪಿ ನಾರ್ಜುನೋ ನ ಯಮಾವಪಿ|

12034004c ಕಾಲಃ ಪರ್ಯಾಯಧರ್ಮೇಣ ಪ್ರಾಣಾನಾದತ್ತ ದೇಹಿನಾಮ್||

ನೀನು ಅವರನ್ನು ಸಂಹರಿಸಲಿಲ್ಲ. ಭೀಮನಾಗಲೀ, ಅರ್ಜುನನಾಗಲೀ ಅಥವಾ ನಕುಲ-ಸಹದೇವರಾಗಲೀ ಅವರನ್ನು ಸಂಹರಿಸಿಲ್ಲ. ಪರ್ಯಾಯಧರ್ಮದ ಪ್ರಕಾರ ಕಾಲನು ಆ ದೇಹಿಗಳ ಪ್ರಾಣಗಳನ್ನು ತೆಗೆದುಕೊಂಡಿದ್ದಾನೆ!

12034005a ನ ಯಸ್ಯ ಮಾತಾಪಿತರೌ ನಾನುಗ್ರಾಹ್ಯೋಽಸ್ತಿ ಕಶ್ಚನ|

12034005c ಕರ್ಮಸಾಕ್ಷೀ ಪ್ರಜಾನಾಂ ಯಸ್ತೇನ ಕಾಲೇನ ಸಂಹೃತಾಃ||

ಯಾರಿಗೆ ತಾಯಿ-ತಂದೆಯರಿಲ್ಲವೋ, ಯಾರು ಯಾರಿಗೂ ಎಂದೂ ಅನುಗ್ರಹಮಾಡುವುದಿಲ್ಲವೋ ಆ ಪ್ರಜೆಗಳ ಕರ್ಮಸಾಕ್ಷೀ ಕಾಲನಿಂದ ಅವರೆಲ್ಲರೂ ಹತರಾದರು.

12034006a ಹೇತುಮಾತ್ರಮಿದಂ ತಸ್ಯ ಕಾಲಸ್ಯ ಪುರುಷರ್ಷಭ|

12034006c ಯದ್ಧಂತಿ ಭೂತೈರ್ಭೂತಾನಿ ತದಸ್ಮೈ ರೂಪಮೈಶ್ವರಮ್||

ಪುರುಷರ್ಷಭ! ಪ್ರಾಣಿಗಳನ್ನು ಪ್ರಾಣಿಗಳ ಮೂಲಕವೇ ಸಂಹರಿಸುವ ಈಶ್ವರೀಯ ರೂಪವಿರುವ ಕಾಲನಿಗೆ ಇದೊಂದು ಕೇವಲ ನಿಮಿತ್ತವಾಗಿತ್ತು.

12034007a ಕರ್ಮಮೂರ್ತ್ಯಾತ್ಮಕಂ[1] ವಿದ್ಧಿ ಸಾಕ್ಷಿಣಂ ಶುಭಪಾಪಯೋಃ|

12034007c ಸುಖದುಃಖಗುಣೋದರ್ಕಂ ಕಾಲಂ ಕಾಲಫಲಪ್ರದಮ್||

ಶುಭ-ಪಾಪಕರ್ಮಗಳಿಗೆ ಸಾಕ್ಷಿಯಾಗಿರುವ, ಕರ್ಮಗಳ ಮೂರ್ತಿಮತ್ತಾಗಿರುವ ಆ ಕಾಲನೇ ಕಾಲಾಂತರದಲ್ಲಿ ಪ್ರಾಣಿಗಳಿಗೆ ಸುಖ-ದುಃಖಗಳ ರೂಪದಲ್ಲಿ ಕರ್ಮಫಲಗಳನ್ನು ನೀಡುತ್ತಾನೆ.

12034008a ತೇಷಾಮಪಿ ಮಹಾಬಾಹೋ ಕರ್ಮಾಣಿ ಪರಿಚಿಂತಯ|

12034008c ವಿನಾಶಹೇತುಕಾರಿತ್ವೇ ಯೈಸ್ತೇ ಕಾಲವಶಂ ಗತಾಃ||

ಮಹಾಬಾಹೋ! ಅವರ ಕರ್ಮಗಳ ಕುರಿತೂ ಆಲೋಚಿಸು! ವಿನಾಶಕಾರ್ಯಗಳನ್ನೇ ಮಾಡಿದ ಅವರು ಕಾಲವಶರಾದರು!

12034009a ಆತ್ಮನಶ್ಚ ವಿಜಾನೀಹಿ ನಿಯಮವ್ರತಶೀಲತಾಮ್|

12034009c ಯದಾ ತ್ವಮೀದೃಶಂ ಕರ್ಮ ವಿಧಿನಾಕ್ರಮ್ಯ ಕಾರಿತಃ||

ನಿನ್ನ ನಿಯಮ-ವ್ರತಶೀಲತೆಗಳನ್ನಾದರೂ ಗಮನಿಸು. ವಿಧಿಯು ನಿನ್ನಂಥವನನ್ನು ಅಧೀನನನ್ನಾಗಿಸಿ ಅವರ ವಿನಾಶದ ಕರ್ಮವನ್ನು ಮಾಡಿಸಿದೆ!

12034010a ತ್ವಷ್ಟ್ರೇವ ವಿಹಿತಂ ಯಂತ್ರಂ ಯಥಾ ಸ್ಥಾಪಯಿತುರ್ವಶೇ|

12034010c ಕರ್ಮಣಾ ಕಾಲಯುಕ್ತೇನ ತಥೇದಂ ಭ್ರಾಮ್ಯತೇ ಜಗತ್||

ಬಡಗಿಯು ಮಾಡಿದ ಯಂತ್ರವು ಹೇಗೆ ಆಡಿಸುವವನ ವಶದಲ್ಲಿದ್ದು ಆಡಿಸಿದಂತೆ ಆಡುತ್ತಿರುತ್ತದೆಯೋ ಅದೇ ರೀತಿ ಬ್ರಹ್ಮನಿರ್ಮಿತ ಈ ಜಗತ್ತು ಕಾಲನ ವಶವಾಗಿ ಕಾಲವು ಆಡಿಸಿದಂತೆಯೇ ಆಡುತ್ತಿರುತ್ತದೆ!

12034011a ಪುರುಷಸ್ಯ ಹಿ ದೃಷ್ಟ್ವೇಮಾಮುತ್ಪತ್ತಿಮನಿಮಿತ್ತತಃ|

12034011c ಯದೃಚ್ಚಯಾ ವಿನಾಶಂ ಚ ಶೋಕಹರ್ಷಾವನರ್ಥಕೌ||

ಕಾರಣವೇನೆಂದು ತಿಳಿಯದ ಪುರುಷನ ಹುಟ್ಟು ಮತ್ತು ಸಾವುಗಳು ಕಾಲದ ವಶದಲ್ಲಿವೆ. ಆದುದರಿಂದ ಅವುಗಳಿಗೆ ಶೋಕ-ಹರ್ಷಗಳನ್ನು ತಾಳುವುದಕ್ಕೆ ಅರ್ಥವಿಲ್ಲ.

12034012a ವ್ಯಲೀಕಂ ಚಾಪಿ ಯತ್ತ್ವತ್ರ ಚಿತ್ತವೈತಂಸಿಕಂ ತವ|

12034012c ತದರ್ಥಮಿಷ್ಯತೇ ರಾಜನ್ಪ್ರಾಯಶ್ಚಿತ್ತಂ ತದಾಚರ||

ರಾಜನ್! ಆದರೂ ಇವೆಲ್ಲವನ್ನೂ ನೀನೇ ಮಾಡಿರುವೆಯೆಂಬ ಪೀಡೆಯು ನಿನ್ನ ಮನಸ್ಸನ್ನು ಕಲಕಿಸಿ ಪೀಡಿಸುತ್ತಿದೆ. ಅದಕ್ಕಾಗಿ ಪ್ರಾಯಶ್ಚಿತ್ತವಿದೆ. ಅದನ್ನು ಮಾಡಿಕೋ!

12034013a ಇದಂ ಚ ಶ್ರೂಯತೇ ಪಾರ್ಥ ಯುದ್ಧೇ ದೇವಾಸುರೇ ಪುರಾ|

12034013c ಅಸುರಾ ಭ್ರಾತರೋ ಜ್ಯೇಷ್ಠಾ ದೇವಾಶ್ಚಾಪಿ ಯವೀಯಸಃ||

ಪಾರ್ಥ! ಹಿಂದೆ ದೇವಾಸುರರ ನಡುವೆ ನಡೆದ ಯುದ್ಧದ ಕುರಿತು ಕೇಳು. ಸಹೋದರರಾಗಿದ್ದ ದೇವಾಸುರರಲ್ಲಿ ಅಸುರರು ಹಿರಿಯರೂ ದೇವತೆಗಳು ಕಿರಿಯರೂ ಆಗಿದ್ದರು.

12034014a ತೇಷಾಮಪಿ ಶ್ರೀನಿಮಿತ್ತಂ ಮಹಾನಾಸೀತ್ಸಮುಚ್ಚ್ರಯಃ|

12034014c ಯುದ್ಧಂ ವರ್ಷಸಹಸ್ರಾಣಿ ದ್ವಾತ್ರಿಂಶದಭವತ್ಕಿಲ||

ಸಂಪತ್ತಿನ ಕಾರಣದಿಂದಾಗಿ ಅವರ ನಡುವೆ ಕೂಡ ಮಹಾ ಯುದ್ಧವೇ ನಡೆಯಿತು. ಆ ಯುದ್ಧವು ಮೂವತ್ತೆರಡು ಸಾವಿರ ವರ್ಷಗಳ ಪರ್ಯಂತ ನಡೆಯಿತಂತೆ!

12034015a ಏಕಾರ್ಣವಾಂ ಮಹೀಂ ಕೃತ್ವಾ ರುಧಿರೇಣ ಪರಿಪ್ಲುತಾಮ್|

12034015c ಜಘ್ನುರ್ದೈತ್ಯಾಂಸ್ತದಾ ದೇವಾಸ್ತ್ರಿದಿವಂ ಚೈವ ಲೇಭಿರೇ||

ಭೂಮಿಯನ್ನು ರಕ್ತದಲ್ಲಿಯೇ ಮುಳುಗಿಸಿ ದೈತ್ಯರನ್ನು ಸಂಹರಿಸಿ ದೇವತೆಗಳು ಸ್ವರ್ಗವನ್ನು ಪಡೆದರು.

12034016a ತಥೈವ ಪೃಥಿವೀಂ ಲಬ್ಧ್ವಾ ಬ್ರಾಹ್ಮಣಾ ವೇದಪಾರಗಾಃ|

12034016c ಸಂಶ್ರಿತಾ ದಾನವಾನಾಂ ವೈ ಸಾಹ್ಯಾರ್ಥೇ ದರ್ಪಮೋಹಿತಾಃ||

12034017a ಶಾಲಾವೃಕಾ ಇತಿ ಖ್ಯಾತಾಸ್ತ್ರಿಷು ಲೋಕೇಷು ಭಾರತ|

12034017c ಅಷ್ಟಾಶೀತಿಸಹಸ್ರಾಣಿ ತೇ ಚಾಪಿ ವಿಬುಧೈರ್ಹತಾಃ||

ಭಾರತ! ವೇದಪಾರಂಗತರಾಗಿದ್ದ ಶಾಲಾವೃಕರೆಂದು ಮೂರೂ ಲೋಕಗಳಲ್ಲಿ ಪ್ರಸಿದ್ಧರಾಗಿದ್ದ ಎಂಬತ್ತೆಂಟು ಸಾವಿರ ಬ್ರಾಹ್ಮಣರೂ ದರ್ಪಮೋಹಿತರಾಗಿ ದಾನವರ ಸಹಾಯಾರ್ಥವಾಗಿ ಅವರ ಪಕ್ಷವನ್ನು ಸೇರಿದ್ದರು. ಅವರನ್ನು ಕೂಡ ಸಂಹರಿಸಿ ದೇವತೆಗಳು ಭೂಮಿಯನ್ನು ಪಡೆದರು.

12034018a ಧರ್ಮವ್ಯುಚ್ಚಿತ್ತಿಮಿಚ್ಚಂತೋ ಯೇಽಧರ್ಮಸ್ಯ ಪ್ರವರ್ತಕಾಃ|

12034018c ಹಂತವ್ಯಾಸ್ತೇ ದುರಾತ್ಮಾನೋ ದೇವೈರ್ದೈತ್ಯಾ ಇವೋಲ್ಬಣಾಃ||

ಧರ್ಮಮಾರ್ಗವೇ ಸಂಪೂರ್ಣವಾಗಿ ಕಡಿದುಹೋಗಬೇಕೆಂದು ಬಯಸಿ ಯಾರು ಅಧರ್ಮಪ್ರವರ್ತಕರಾಗುತ್ತಾರೋ ಅಂತಹ ದುರಾತ್ಮರನ್ನು ದೇವತೆಗಳು ಉದ್ಧತರಾದ ದೈತ್ಯರನ್ನು ಹೇಗೋ ಹಾಗೆ ಸಂಹರಿಸುತ್ತಾರೆ.

12034019a ಏಕಂ ಹತ್ವಾ ಯದಿ ಕುಲೇ ಶಿಷ್ಟಾನಾಂ ಸ್ಯಾದನಾಮಯಮ್|

12034019c ಕುಲಂ ಹತ್ವಾಥ ರಾಷ್ಟ್ರಂ ವಾ ನ ತದ್ವೃತ್ತೋಪಘಾತಕಮ್||

ಕುಲದಲ್ಲಿ ಒಬ್ಬನನ್ನು ಸಂಹರಿಸುವುದರಿಂದ ಉಳಿದ ಶಿಷ್ಟರಿಗೆ ಕ್ಷೇಮವುಂಟಾಗುತ್ತದೆ ಎಂದಾದರೆ ಅವನನ್ನು ಸಂಹರಿಸುವುದೇ ಯುಕ್ತವಾದುದು. ಹಾಗೆಯೇ ಒಂದು ಕುಲವನ್ನು ಸಂಹರಿಸಿ ರಾಷ್ಟ್ರವನ್ನು ವಿಪತ್ತಿನಿಂದ ಪಾರುಮಾಡಬಹುದಾದರೆ ಅಂತಹ ಕುಲವನ್ನೇ ವಿನಾಶಗೊಳಿಸಬೇಕು.

12034020a ಅಧರ್ಮರೂಪೋ ಧರ್ಮೋ ಹಿ ಕಶ್ಚಿದಸ್ತಿ ನರಾಧಿಪ|

12034020c ಧರ್ಮಶ್ಚಾಧರ್ಮರೂಪೋಽಸ್ತಿ ತಚ್ಚ ಜ್ಞೇಯಂ ವಿಪಶ್ಚಿತಾ||

ನರಾಧಿಪ! ಕೆಲವೊಮ್ಮೆ ಅಧರ್ಮವಾಗಿ ಕಾಣುವ ಕಾರ್ಯವು ಧರ್ಮಕಾರ್ಯವೇ ಆಗಿರುತ್ತದೆ. ಹಾಗೆಯೇ ಧರ್ಮಕಾರ್ಯವಾಗಿ ಕಾಣುವ ಕಾರ್ಯವು ಅಧರ್ಮಕಾರ್ಯವೇ ಆಗಿರಬಹುದು. ಅದನ್ನು ವಿಚಾರಿಸಿ ತಿಳಿದುಕೊಳ್ಳಬೇಕಾಗುತ್ತದೆ.

12034021a ತಸ್ಮಾತ್ಸಂಸ್ತಂಭಯಾತ್ಮಾನಂ ಶ್ರುತವಾನಸಿ ಪಾಂಡವ|

12034021c ದೇವೈಃ ಪೂರ್ವಗತಂ ಮಾರ್ಗಮನುಯಾತೋಽಸಿ ಭಾರತ||

ಪಾಂಡವ! ಭಾರತ! ನೀನು ತಿಳಿದವನು. ಆದುದರಿಂದ ನಿನ್ನನ್ನು ನೀನು ಸ್ಥಿರಗೊಳಿಸಿಕೋ! ಹಿಂದೆ ದೇವತೆಗಳು ಹಿಡಿದ ಮಾರ್ಗವನ್ನೇ ನೀನೂ ಕೂಡ ಅನುಸರಿಸಿವೆ!

12034022a ನ ಹೀದೃಶಾ ಗಮಿಷ್ಯಂತಿ ನರಕಂ ಪಾಂಡವರ್ಷಭ|

12034022c ಭ್ರಾತೃನಾಶ್ವಾಸಯೈತಾಂಸ್ತ್ವಂ ಸುಹೃದಶ್ಚ ಪರಂತಪ||

ಪಾಂಡವರ್ಷಭ! ಪರಂತಪ! ಹೀಗಿರುವಾಗ ನೀನು ನರಕಕ್ಕೆ ಹೋಗುವುದಿಲ್ಲ. ನಿನ್ನ ಸಹೋದರರನ್ನೂ ಸುಹೃದಯರನ್ನೂ ಸಂತಯಿಸು!

12034023a ಯೋ ಹಿ ಪಾಪಸಮಾರಂಭೇ ಕಾರ್ಯೇ ತದ್ಭಾವಭಾವಿತಃ|

12034023c ಕುರ್ವನ್ನಪಿ ತಥೈವ ಸ್ಯಾತ್ಕೃತ್ವಾ ಚ ನಿರಪತ್ರಪಃ||

12034024a ತಸ್ಮಿಂಸ್ತತ್ಕಲುಷಂ ಸರ್ವಂ ಸಮಾಪ್ತಮಿತಿ ಶಬ್ದಿತಮ್|

12034024c ಪ್ರಾಯಶ್ಚಿತ್ತಂ ನ ತಸ್ಯಾಸ್ತಿ ಹ್ರಾಸೋ ವಾ ಪಾಪಕರ್ಮಣಃ||

ಯಾರು ಪಾಪಭಾವದಿಂದ ಕಾರ್ಯವನ್ನು ಪ್ರಾರಂಭಿಸಿ ಅದೇ ಪಾಪಭಾವದಿಂದ ಮುಂದುವರೆದು ಕಾರ್ಯವನ್ನು ಪೂರ್ಣಗೊಳಿಸಿದ ನಂತರವೂ ನಾಚಿಕೆಪಟ್ಟುಕೊಳ್ಳುವುದಿಲ್ಲವೋ ಅಂಥವನಲ್ಲಿ ಆ ಮಹಾಪಾಪವು ಸಂಪೂರ್ಣವಾಗಿ ಪ್ರತಿಷ್ಠಿತವಾಗಿರುತ್ತದೆ ಎಂದು ಹೇಳುತ್ತಾರೆ. ಅಂಥವನಿಗೆ ಯಾವ ಪ್ರಾಯಶ್ಚಿತ್ತವೂ ಇರುವುದಿಲ್ಲ. ಆ ಪಾಪಕರ್ಮಿಯ ಪಾಪವು ಸ್ವಲ್ಪವೂ ಕಡಿಮೆಯಾಗುವುದಿಲ್ಲ.

12034025a ತ್ವಂ ತು ಶುಕ್ಲಾಭಿಜಾತೀಯಃ ಪರದೋಷೇಣ ಕಾರಿತಃ|

12034025c ಅನಿಚ್ಚಮಾನಃ ಕರ್ಮೇದಂ ಕೃತ್ವಾ ಚ ಪರಿತಪ್ಯಸೇ||

ನೀನಾದರೋ ಹುಟ್ಟಿನಿಂದಲೇ ಶುದ್ಧಸ್ವಭಾವನಾಗಿರುವೆ! ಇತರರು ಮಾಡಿದ ದೋಷಗಳಿಂದಾಗಿ, ನಿನಗಿಷ್ಟವಿಲ್ಲದಿದ್ದರೂ, ಯುದ್ಧವೆಂಬ ಈ ಕರ್ಮವನ್ನು ನಡೆಸಿ, ಈಗ ಪರಿತಪಿಸುತ್ತಿದ್ದೀಯೆ!

12034026a ಅಶ್ವಮೇಧೋ ಮಹಾಯಜ್ಞಃ ಪ್ರಾಯಶ್ಚಿತ್ತಮುದಾಹೃತಮ್|

12034026c ತಮಾಹರ ಮಹಾರಾಜ ವಿಪಾಪ್ಮೈವಂ ಭವಿಷ್ಯಸಿ||

ಮಹಾರಾಜ! ಇದಕ್ಕೆ ಅಶ್ವಮೇಧ ಮಹಾಯಜ್ಞವು ಪ್ರಾಯಶ್ಚಿತ್ತವೆಂದು ಹೇಳಲ್ಪಟ್ಟಿದೆ. ಅದನ್ನು ಮಾಡು. ಅದರಿಂದ ಪಾಪವನ್ನು ಕಳೆದುಕೊಳ್ಳುವೆ!

12034027a ಮರುದ್ಭಿಃ ಸಹ ಜಿತ್ವಾರೀನ್ಮಘವಾನ್ಪಾಕಶಾಸನಃ|

12034027c ಏಕೈಕಂ ಕ್ರತುಮಾಹೃತ್ಯ ಶತಕೃತ್ವಃ ಶತಕ್ರತುಃ||

ಮರುತ್ತುಗಳೊಂದಿಗೆ ಶತ್ರುಗಳನ್ನು ಜಯಿಸುತ್ತಾ ಮಘವಾನ್ ಪಾಕಶಾಸನನು, ಗೆದ್ದಾಗಲೆಲ್ಲಾ ಒಂದೊಂದು ಅಶ್ವಮೇಧವನ್ನು – ಹಾಗೆ ನೂರು ಯಾಗಗಳನ್ನು ಮಾಡಿ – ಶತ್ರುಕ್ರತುವೆಂದೆನಿಸಿಕೊಂಡನು.

12034028a ಪೂತಪಾಪ್ಮಾ ಜಿತಸ್ವರ್ಗೋ ಲೋಕಾನ್ಪ್ರಾಪ್ಯ ಸುಖೋದಯಾನ್|

12034028c ಮರುದ್ಗಣವೃತಃ ಶಕ್ರಃ ಶುಶುಭೇ ಭಾಸಯನ್ದಿಶಃ||

ಪಾಪರಹಿತನಾಗಿ ಸ್ವರ್ಗವನ್ನು ಜಯಿಸಿ ಸುಖೋದಯ ಲೋಕಗಳನ್ನು ಪಡೆದು ಮರುದ್ಗಣಗಳಿಂದ ಆವೃತನಾಗಿ ಶಕ್ರನು ದಿಕ್ಕುಗಳನ್ನು ಬೆಳಗಿಸುತ್ತಾ ಶೋಭಿಸುತ್ತಿದ್ದಾನೆ.

12034029a ಸ್ವರ್ಗಲೋಕೇ ಮಹೀಯಂತಮಪ್ಸರೋಭಿಃ ಶಚೀಪತಿಮ್|

12034029c ಋಷಯಃ ಪರ್ಯುಪಾಸಂತೇ ದೇವಾಶ್ಚ ವಿಬುಧೇಶ್ವರಮ್||

ಸ್ವರ್ಗಲೋಕದಲ್ಲಿ ಮೆರೆಯುತ್ತಿರುವ ಶಚೀಪತಿ ವಿಬುಧೇಶ್ವರನನ್ನು ಅಪ್ಸರೆಯರೂ, ಋಷಿಗಳೂ ಮತ್ತು ದೇವತೆಗಳೂ ಉಪಾಸನೆಗೈಯುತ್ತಾರೆ.

12034030a ಸೋಽಯಂ ತ್ವಮಿಹ ಸಂಕ್ರಾಂತೋ ವಿಕ್ರಮೇಣ ವಸುಂಧರಾಮ್|

12034030c ನಿರ್ಜಿತಾಶ್ಚ ಮಹೀಪಾಲಾ ವಿಕ್ರಮೇಣ ತ್ವಯಾನಘ||

ಅನಘ! ನೀನೂ ಕೂಡ ವಿಕ್ರಮದಿಂದ ಮಹೀಪಾಲರನ್ನು ಸೋಲಿಸಿ ಈ ವಸುಂಧರೆಯನ್ನು ವಶಪಡಿಸಿಕೊಂಡಿರುವೆ!

12034031a ತೇಷಾಂ ಪುರಾಣಿ ರಾಷ್ಟ್ರಾಣಿ ಗತ್ವಾ ರಾಜನ್ಸುಹೃದ್ವೃತಃ|

12034031c ಭ್ರಾತೃನ್ಪುತ್ರಾಂಶ್ಚ ಪೌತ್ರಾಂಶ್ಚ ಸ್ವೇ ಸ್ವೇ ರಾಜ್ಯೇಽಭಿಷೇಚಯ||

ರಾಜನ್! ಸುಹೃದಯರೊಂದಿಗೆ ಕೂಡಿಕೊಂಡು ನಿನ್ನಿಂದ ಹತರಾದವರ ರಾಷ್ಟ್ರ-ಪುರಗಳಿಗೆ ಹೋಗಿ ಅಲ್ಲಿ ಅವರ ಸಹೋದರರನ್ನೋ, ಪುತ್ರರನ್ನೋ, ಪೌತ್ರರನ್ನೋ, ರಾಜ್ಯಾಭಿಷೇಕ ಮಾಡು.

12034032a ಬಾಲಾನಪಿ ಚ ಗರ್ಭಸ್ಥಾನ್ಸಾಂತ್ವಾನಿ ಸಮುದಾಚರನ್|

12034032c ರಂಜಯನ್ಪ್ರಕೃತೀಃ ಸರ್ವಾಃ ಪರಿಪಾಹಿ ವಸುಂಧರಾಮ್||

ಬಾಲಕರನ್ನಾಗಲೀ ಗರ್ಭದಲ್ಲಿರುವವರನ್ನಾಗಲೀ ರಾಜನನ್ನಾಗಿಸುವುದಾಗಿ ಸಂತವಿಸಿ ಎಲ್ಲ ಪ್ರಜೆಗಳನ್ನೂ ರಂಜಿಸುತ್ತಾ ಈ ವಸುಂಧರೆಯನ್ನು ಪಾಲಿಸು!

12034033a ಕುಮಾರೋ ನಾಸ್ತಿ ಯೇಷಾಂ ಚ ಕನ್ಯಾಸ್ತತ್ರಾಭಿಷೇಚಯ|

12034033c ಕಾಮಾಶಯೋ ಹಿ ಸ್ತ್ರೀವರ್ಗಃ ಶೋಕಮೇವಂ ಪ್ರಹಾಸ್ಯತಿ||

ಕುಮಾರರ್ಯಾರೂ ಇಲ್ಲದಿದ್ದ ರಾಜವಂಶದಲ್ಲಿ ಕನ್ಯೆಯರಿದ್ದರೆ ಅವರಿಗೇ ಪಟ್ಟಾಭಿಷೇಕವನ್ನು ಮಾಡಿಸು. ಹೀಗೆ ಸ್ತ್ರೀವರ್ಗದ ಕಾಮನೆಗಳನ್ನು ಪೂರೈಸಿ ಅವರ ಶೋಕವನ್ನೂ ದೂರಮಾಡಿದಂತಾಗುತ್ತದೆ.

12034034a ಏವಮಾಶ್ವಾಸನಂ ಕೃತ್ವಾ ಸರ್ವರಾಷ್ಟ್ರೇಷು ಭಾರತ|

12034034c ಯಜಸ್ವ ವಾಜಿಮೇಧೇನ ಯಥೇಂದ್ರೋ ವಿಜಯೀ ಪುರಾ||

ಭಾರತ! ಹೀಗೆ ಸರ್ವರಾಷ್ಟ್ರಗಳಿಗೂ ಆಶ್ವಾಸನೆಯನ್ನಿತ್ತು ಹಿಂದೆ ವಿಜಯೀ ಇಂದ್ರನಂತೆ ಅಶ್ವಮೇಧಯಾಗವನ್ನು ಮಾಡು!

12034035a ಅಶೋಚ್ಯಾಸ್ತೇ ಮಹಾತ್ಮಾನಃ ಕ್ಷತ್ರಿಯಾಃ ಕ್ಷತ್ರಿಯರ್ಷಭ|

12034035c ಸ್ವಕರ್ಮಭಿರ್ಗತಾ ನಾಶಂ ಕೃತಾಂತಬಲಮೋಹಿತಾಃ||

ಕ್ಷತ್ರಿಯರ್ಷಭ! ತಮ್ಮದೇ ಕರ್ಮಗಳಿಂದ ಮತ್ತು ಕೃತಾಂತನ ಬಲಕ್ಕೆ ಸಿಲುಕಿ ಮೋಹಿತರಾದ ಮಹಾತ್ಮ ಕ್ಷತ್ರಿಯರ ಕುರಿತು ನೀನು ಶೋಕಿಸಬೇಕಾಗಿಲ್ಲ!

12034036a ಅವಾಪ್ತಃ ಕ್ಷತ್ರಧರ್ಮಸ್ತೇ ರಾಜ್ಯಂ ಪ್ರಾಪ್ತಮಕಲ್ಮಷಮ್|

12034036c ಚರಸ್ವ ಧರ್ಮಂ ಕೌಂತೇಯ ಶ್ರೇಯಾನ್ಯಃ ಪ್ರೇತ್ಯ ಭಾವಿಕಃ||

ಕೌಂತೇಯ! ಕ್ಷತ್ರಧರ್ಮದ ಪ್ರಕಾರವಾಗಿ ದೊರಕಿರುವ ಈ ಅಕಲ್ಮಷ ರಾಜ್ಯವನ್ನು ಪಡೆದು, ಇಹದಲ್ಲಿ ಮತ್ತು ಪರದಲ್ಲಿ ಶ್ರೇಯಸ್ಕರವಾಗಿರುವ ಧರ್ಮದಲ್ಲಿಯೇ ನಡೆದುಕೋ!”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಪ್ರಾಯಶ್ಚಿತ್ತೀಯೋಪಾಖ್ಯಾನೇ ಚತುಸ್ತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಪ್ರಾಯಶ್ಚಿತ್ತೀಯೋಪಾಖ್ಯಾನ ಎನ್ನುವ ಮೂವತ್ನಾಲ್ಕನೇ ಅಧ್ಯಾಯವು.

[1] ಭಾರತದರ್ಶನದಲ್ಲಿ “ಕರ್ಮಸೂತ್ರಾತ್ಮಕಂ” ಎಂಬ ಪಾಠಾಂತರವಿದೆ.

Comments are closed.