ಶಾಂತಿ ಪರ್ವ: ರಾಜಧರ್ಮ ಪರ್ವ

೩೨

12032001 ವೈಶಂಪಾಯನ ಉವಾಚ

12032001a ತೂಷ್ಣೀಂಭೂತಂ ತು ರಾಜಾನಂ ಶೋಚಮಾನಂ ಯುಧಿಷ್ಠಿರಮ್|

12032001c ತಪಸ್ವೀ ಧರ್ಮತತ್ತ್ವಜ್ಞಃ ಕೃಷ್ಣದ್ವೈಪಾಯನೋಽಬ್ರವೀತ್||

ವೈಶಂಪಾಯನನು ಹೇಳಿದನು: “ಶೋಕಿಸುತ್ತಾ ಸುಮ್ಮನೇ ಕುಳಿತಿದ್ದ ರಾಜಾ ಯುಧಿಷ್ಠಿರನಿಗೆ ಧರ್ಮತತ್ತ್ವಜ್ಞ ತಪಸ್ವೀ ಕೃಷ್ಣದ್ವೈಪಾಯನನು ಇಂತೆಂದನು:

12032002a ಪ್ರಜಾನಾಂ ಪಾಲನಂ ಧರ್ಮೋ ರಾಜ್ಞಾಂ ರಾಜೀವಲೋಚನ|

12032002c ಧರ್ಮಃ ಪ್ರಮಾಣಂ ಲೋಕಸ್ಯ ನಿತ್ಯಂ ಧರ್ಮಾನುವರ್ತನಮ್||

“ರಾಜೀವಲೋಚನ! ಪ್ರಜೆಗಳನ್ನು ಪಾಲಿಸುವುದು ರಾಜರ ಧರ್ಮ. ನಿತ್ಯವೂ ಧರ್ಮವನ್ನು ಅನುಸರಿಸುವವನೇ ಲೋಕದಲ್ಲಿ ಧರ್ಮದ ಪ್ರಮಾಣನಾಗಿರುತ್ತಾನೆ.

12032003a ಅನುತಿಷ್ಠಸ್ವ ವೈ ರಾಜನ್ಪಿತೃಪೈತಾಮಹಂ ಪದಮ್|

12032003c ಬ್ರಾಹ್ಮಣೇಷು ಚ ಯೋ ಧರ್ಮಃ ಸ ನಿತ್ಯೋ ವೇದನಿಶ್ಚಿತಃ||

ರಾಜನ್! ಪಿತೃ-ಪಿತಾಮಹರ ದಾರಿಯನ್ನು ಅನುಸರಿಸು. ಬ್ರಾಹ್ಮಣರ ನಿತ್ಯ ಧರ್ಮವೇನೆನ್ನುವುದನ್ನು ವೇದವೇ ನಿಶ್ಚಯಿಸಿದೆ.

12032004a ತತ್ಪ್ರಮಾಣಂ ಪ್ರಮಾಣಾನಾಂ ಶಾಶ್ವತಂ ಭರತರ್ಷಭ|

12032004c ತಸ್ಯ ಧರ್ಮಸ್ಯ ಕೃತ್ಸ್ನಸ್ಯ ಕ್ಷತ್ರಿಯಃ ಪರಿರಕ್ಷಿತಾ||

ಭರತರ್ಷಭ! ಅದರ ಕುರಿತಾದ ಪ್ರಮಾಣಗಳು ಶಾಶ್ವತವಾಗಿ ವೇದದಲ್ಲಿವೆ. ಬ್ರಾಹ್ಮಣದ ಧರ್ಮವೆಲ್ಲವನ್ನೂ ಕ್ಷತ್ರಿಯನು ರಕ್ಷಿಸುತ್ತಾನೆ.

12032005a ತಥಾ ಯಃ ಪ್ರತಿಹಂತ್ಯಸ್ಯ ಶಾಸನಂ ವಿಷಯೇ ನರಃ|

12032005c ಸ ಬಾಹುಭ್ಯಾಂ ವಿನಿಗ್ರಾಹ್ಯೋ ಲೋಕಯಾತ್ರಾವಿಘಾತಕಃ||

ಯಾವ ಮನುಷ್ಯನು ವಿಷಯಾಸಕ್ತನಾಗಿ ಬ್ರಾಹ್ಮಣರ ಧರ್ಮವನ್ನು ಉಲ್ಲಂಘಿಸುತ್ತಾನೆಯೋ ಅಂಥಹ ಲೋಕಯಾತ್ರಾವಿಘಾತಕನನ್ನು ಕ್ಷತ್ರಿಯನು ಎರಡು ಬಾಹುಗಳಿಂದಲೂ ದಮನಮಾಡಬೇಕು.

12032006a ಪ್ರಮಾಣಮಪ್ರಮಾಣಂ ಯಃ ಕುರ್ಯಾನ್ಮೋಹವಶಂ ಗತಃ|

12032006c ಭೃತ್ಯೋ ವಾ ಯದಿ ವಾ ಪುತ್ರಸ್ತಪಸ್ವೀ ವಾಪಿ ಕಶ್ಚನ||

12032006e ಪಾಪಾನ್ಸರ್ವೈರುಪಾಯೈಸ್ತಾನ್ನಿಯಚ್ಚೇದ್ಘಾತಯೇತ ವಾ||

ಮೋಹವಶನಾಗಿ ಯಾರು ಪ್ರಮಾಣವಿರುವ ಧರ್ಮವನ್ನು ಪ್ರಮಾಣವಿಲ್ಲದ್ದು ಎಂದು ಸಾಧಿಸುತ್ತಾನೆಯೋ ಅವನು ಸೇವಕನೇ ಆಗಿರಲಿ, ಮಗನೇ ಆಗಿರಲಿ, ತಪಸ್ವಿಯೇ ಆಗಿರಲಿ, ಅಥವಾ ಬೇರೆ ಯಾರೇ ಆಗಿರಲಿ, ಸರ್ವ ಉಪಾಯಗಳಿಂದ ಆ ಪಾಪಿಯನ್ನು ದಮನಮಾಡಬೇಕು.

12032007a ಅತೋಽನ್ಯಥಾ ವರ್ತಮಾನೋ ರಾಜಾ ಪ್ರಾಪ್ನೋತಿ ಕಿಲ್ಬಿಷಮ್|

12032007c ಧರ್ಮಂ ವಿನಶ್ಯಮಾನಂ ಹಿ ಯೋ ನ ರಕ್ಷೇತ್ಸ ಧರ್ಮಹಾ||

ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ರಾಜನು ದೋಷವನ್ನು ಹೊಂದುತ್ತಾನೆ. ನಶಿಸಿಹೋಗುತ್ತಿರುವ ಧರ್ಮವನ್ನು ಯಾವ ರಾಜನು ರಕ್ಷಿಸುವುದಿಲ್ಲವೋ ಅವನೂ ಕೂಡ ಧರ್ಮಹಂತಕನಾಗುತ್ತಾನೆ.

12032008a ತೇ ತ್ವಯಾ ಧರ್ಮಹಂತಾರೋ ನಿಹತಾಃ ಸಪದಾನುಗಾಃ|

12032008c ಸ್ವಧರ್ಮೇ ವರ್ತಮಾನಸ್ತ್ವಂ ಕಿಂ ನು ಶೋಚಸಿ ಪಾಂಡವ||

12032008e ರಾಜಾ ಹಿ ಹನ್ಯಾದ್ದದ್ಯಾಚ್ಚ ಪ್ರಜಾ ರಕ್ಷೇಚ್ಚ ಧರ್ಮತಃ||

ಪಾಂಡವ! ಸ್ವಧರ್ಮದಲ್ಲಿ ನಡೆದುಕೊಳ್ಳುತ್ತಿದ್ದ ನೀನು ಧರ್ಮಹಂತಕರನ್ನು ಅವರ ಅನುಯಾಯಿಗಳೊಂದಿಗೆ ಸಂಹರಿಸಿದ್ದೀಯೆ. ಇದಕ್ಕೆ ಏಕೆ ಶೋಕಿಸುತ್ತಿರುವೆ? ರಾಜನು ತನ್ನ ಶತ್ರುಗಳನ್ನು ಸಂಹರಿಸಬೇಕು ಮತ್ತು ಪ್ರಜೆಗಳನ್ನು ಧರ್ಮಪೂರ್ವಕವಾಗಿ ರಕ್ಷಿಸಬೇಕು!”

12032009 ಯುಧಿಷ್ಠಿರ ಉವಾಚ

12032009a ನ ತೇಽಭಿಶಂಕೇ ವಚನಂ ಯದ್ಬ್ರವೀಷಿ ತಪೋಧನ|

12032009c ಅಪರೋಕ್ಷೋ ಹಿ ತೇ ಧರ್ಮಃ ಸರ್ವಧರ್ಮಭೃತಾಂ ವರ||

ಯುಧಿಷ್ಠಿರನು ಹೇಳಿದನು: “ತಪೋಧನ! ಸರ್ವಧರ್ಮಗಳನ್ನು ತಿಳಿದಿರುವವರಲ್ಲಿ ಶ್ರೇಷ್ಠ! ನೀನು ಸಮಗ್ರ ಧರ್ಮಗಳನ್ನೂ ಪ್ರತ್ಯಕ್ಷವಾಗಿ ಕಂಡಿರುವೆ. ನೀವು ಹೇಳುವ ಮಾತಿನಲ್ಲಿ ನನಗೆ ಸ್ವಲ್ಪವೂ ಶಂಕೆಯಿಲ್ಲ.

12032010a ಮಯಾ ಹ್ಯವಧ್ಯಾ ಬಹವೋ ಘಾತಿತಾ ರಾಜ್ಯಕಾರಣಾತ್|

12032010c ತಾನ್ಯಕಾರ್ಯಾಣಿ ಮೇ ಬ್ರಹ್ಮನ್ದಹಂತಿ ಚ ತಪಂತಿ ಚ||

ಬ್ರಹ್ಮನ್! ರಾಜ್ಯದ ಕಾರಣದಿಂದಾಗಿ ನಾನು ಅವಧ್ಯರಾದ ಅನೇಕರನ್ನು ಸಂಹರಿಸಿದ್ದೇನೆ. ಈ ಅಕಾರ್ಯದಿಂದಲೇ ನಾನು ಸುಡುತ್ತಿದ್ದೇನೆ. ತಪಿಸುತ್ತಿದ್ದೇನೆ.”

12032011 ವ್ಯಾಸ ಉವಾಚ

12032011a ಈಶ್ವರೋ ವಾ ಭವೇತ್ಕರ್ತಾ ಪುರುಷೋ ವಾಪಿ ಭಾರತ|

12032011c ಹಠೋ ವಾ ವರ್ತತೇ ಲೋಕೇ ಕರ್ಮಜಂ ವಾ ಫಲಂ ಸ್ಮೃತಮ್||

ವ್ಯಾಸನು ಹೇಳಿದನು: “ಭಾರತ! ಆಗಿಹೋದುದಕ್ಕೆ ಈಶ್ವರನೇ ಕರ್ತನಿರಬಹುದು ಅಥವಾ ಪುರುಷನೇ ಕರ್ತನಿರಬಹುದು. ಅದು ಆಕಸ್ಮಿಕವಾಗಿ ಆದುದಾಗಿರಬಹುದು ಅಥವಾ ಮಾಡಿದ ಕರ್ಮಗಳ ಫಲವೇ ಆಗಿರಬಹುದು ಎಂದು ಸ್ಮೃತಿಗಳು ಹೇಳುತ್ತವೆ.

12032012a ಈಶ್ವರೇಣ ನಿಯುಕ್ತಾ ಹಿ ಸಾಧ್ವಸಾಧು ಚ ಪಾರ್ಥಿವ|

12032012c ಕುರ್ವಂತಿ ಪುರುಷಾಃ ಕರ್ಮ ಫಲಮೀಶ್ವರಗಾಮಿ ತತ್||

12032013a ಯಥಾ ಹಿ ಪುರುಷಶ್ಚಿಂದ್ಯಾದ್ವೃಕ್ಷಂ ಪರಶುನಾ ವನೇ|

12032013c ಚೇತ್ತುರೇವ ಭವೇತ್ಪಾಪಂ ಪರಶೋರ್ನ ಕಥಂ ಚನ||

ಪಾರ್ಥಿವ! ಈಶ್ವರನ ನಿಯೋಗದಂತೆಯೇ ಮನುಷ್ಯನು ಒಳ್ಳೆಯ-ಕೆಟ್ಟ ಕರ್ಮಗಳನ್ನು ಮಾಡುತ್ತಾನೆ. ವನದಲ್ಲಿ ಕೊಡಲಿಯಿಂದ ಮರವನ್ನು ಕಡಿಯುವ ಮನುಷ್ಯನಿಗೆ ಪಾಪ ತಗಲುವುದೇ ಹೊರತು ಕೊಡಲಿಗೆ ಎಂದೂ ಪಾಪವು ತಗಲುವುದಿಲ್ಲ. ಅದರಂತೆ ಪುರುಷನು ಮಾಡಿದ ಕರ್ಮಗಳ ಫಲಗಳೆಲ್ಲವೂ ಈಶ್ವರನಿಗೇ ಸಲ್ಲುತ್ತವೆ.

12032014a ಅಥ ವಾ ತದುಪಾದಾನಾತ್ಪ್ರಾಪ್ನುಯುಃ ಕರ್ಮಣಃ ಫಲಮ್|

12032014c ದಂಡಶಸ್ತ್ರಕೃತಂ ಪಾಪಂ ಪುರುಷೇ ತನ್ನ ವಿದ್ಯತೇ||

ಅಥವಾ ಕೊಡಲಿಯನ್ನು ತಯಾರಿಸಿದ ಪುರುಷನೇ ಅದನ್ನು ಹಿಡಿದವನ ಕರ್ಮಗಳ ಫಲವನ್ನು ಪಡೆಯುತ್ತಾನೆ ಎನ್ನಬಹುದಲ್ಲವೇ?[1]

12032015a ನ ಚೈತದಿಷ್ಟಂ ಕೌಂತೇಯ ಯದನ್ಯೇನ ಫಲಂ ಕೃತಮ್|

12032015c ಪ್ರಾಪ್ನುಯಾದಿತಿ ತಸ್ಮಾಚ್ಚ ಈಶ್ವರೇ ತನ್ನಿವೇಶಯ||

ಕೌಂತೇಯ! ಆದರೆ ಒಬ್ಬನು ಮಾಡಿದ ಕಾರ್ಯಕ್ಕೆ ಮತ್ತೊಬ್ಬನನ್ನು ಹೊಣೆಗಾರನನ್ನಾಗಿಸುವುದು ಸರಿಯಲ್ಲ. ಆದುದರಿಂದ ಕರ್ಮಗಳ ಫಲಗಳನ್ನು ಈಶ್ವರನಲ್ಲಿಯೇ ಇರಿಸು!

12032016a ಅಥ ವಾ ಪುರುಷಃ ಕರ್ತಾ ಕರ್ಮಣೋಃ ಶುಭಪಾಪಯೋಃ|

12032016c ನ ಪರಂ ವಿದ್ಯತೇ ತಸ್ಮಾದೇವಮನ್ಯಚ್ಚುಭಂ ಕುರು||

ಅಥವಾ ಪುರುಷನೇ ಶುಭಾಶುಭ ಕರ್ಮಗಳ ಕರ್ತನೆಂದುಕೊಂಡರೂ ಈಗ ನೀನು ಮಾಡಿದುದು ಅಶುಭಕರ್ಮವೆಂದು ತಿಳಿದುಕೊಳ್ಳಬೇಕಾಗಿಲ್ಲ.

12032017a ನ ಹಿ ಕಶ್ಚಿತ್ಕ್ವ ಚಿದ್ರಾಜನ್ ದಿಷ್ಟಾತ್ಪ್ರತಿನಿವರ್ತತೇ|

12032017c ದಂಡಶಸ್ತ್ರಕೃತಂ ಪಾಪಂ ಪುರುಷೇ ತನ್ನ ವಿದ್ಯತೇ||

ರಾಜನ್! ಎಂದೂ ಯಾರೂ ವಿಧಿನಿಯಮವನ್ನು ಉಲ್ಲಂಘಿಸಿ ಕಾರ್ಯಗಳನ್ನು ಮಾಡುವುದಿಲ್ಲ. ಆದುದರಿಂದ ಕೊಡಲಿಯನ್ನು ತಯಾರಿಸಿದವನಿಗೂ ಕೊಡಲಿಯನ್ನು ಹಿಡಿದು ವೃಕ್ಷವನ್ನು ಕತ್ತರಿಸಿದ ಪುರುಷನಿಗೂ ಪಾಪವಿಲ್ಲವೆಂದು ತಿಳಿಯಬಹುದು.

12032018a ಯದಿ ವಾ ಮನ್ಯಸೇ ರಾಜನ್ಹಠೇ ಲೋಕಂ ಪ್ರತಿಷ್ಠಿತಮ್|

12032018c ಏವಮಪ್ಯಶುಭಂ ಕರ್ಮ ನ ಭೂತಂ ನ ಭವಿಷ್ಯತಿ||

ರಾಜನ್! ಒಂದು ವೇಳೆ ಲೋಕವು ಆಕಸ್ಮಿಕವಾಗಿ ಅಥವಾ ಸ್ವಾಭಾವಿಕವಾಗಿಯೇ ನಡೆಯುತ್ತದೆ ಎಂದು ತಿಳಿದುಕೊಂಡರೂ ಹಿಂದಿನ ಕರ್ಮಗಳಲ್ಲಿಯೂ ಮುಂದೆ ಮಾಡುವ ಕರ್ಮಗಳಲ್ಲಿಯೂ ಅಶುಭವೆನ್ನುವುದು ಏನೂ ಇಲ್ಲ[2].

12032019a ಅಥಾಭಿಪತ್ತಿರ್ಲೋಕಸ್ಯ ಕರ್ತವ್ಯಾ ಶುಭಪಾಪಯೋಃ|

12032019c ಅಭಿಪನ್ನತಮಂ ಲೋಕೇ ರಾಜ್ಞಾಮುದ್ಯತದಂಡನಮ್||

ಈಗ ಲೋಕದಲ್ಲಿ ಶುಭ-ಪಾಪ ಕರ್ಮಗಳ ನಿರ್ಣಯವಿದೆ. ಇದಕ್ಕಾಗಿಯೇ ಲೋಕದಲ್ಲಿ ರಾಜನ ದಂಡವು ಸದಾ ಸಿದ್ಧವಾಗಿರುತ್ತದೆ.

12032020a ಅಥಾಪಿ ಲೋಕೇ ಕರ್ಮಾಣಿ ಸಮಾವರ್ತಂತ ಭಾರತ|

12032020c ಶುಭಾಶುಭಫಲಂ ಚೇಮೇ ಪ್ರಾಪ್ನುವಂತೀತಿ ಮೇ ಮತಿಃ||

ಭಾರತ! ಹೀಗಿದ್ದರೂ ಲೋಕದಲ್ಲಿ ಶುಭಾಶುಭಕರ್ಮಗಳು ಚಕ್ರದಂತೆ ಸುತ್ತುತ್ತಲೇ ಇರುತ್ತವೆ. ಆ ಕರ್ಮಗಳಿಗೆ ತಕ್ಕಂತೆ ಕರ್ಮಗಳನ್ನು ಮಾಡಿದವರು ಶುಭಾಶುಭ ಫಲಗಳನ್ನು ಪಡೆಯುತ್ತಾರೆಂದು ನನ್ನ ಅಭಿಪ್ರಾಯ.

12032021a ಏವಂ ಸತ್ಯಂ ಶುಭಾದೇಶಂ ಕರ್ಮಣಸ್ತತ್ಫಲಂ ಧ್ರುವಮ್|

12032021c ತ್ಯಜ ತದ್ರಾಜಶಾರ್ದೂಲ ಮೈವಂ ಶೋಕೇ ಮನಃ ಕೃಥಾಃ||

ರಾಜಶಾರ್ದೂಲ! ಶುಭಕರ್ಮಗಳಿಗೆ ಫಲವು ನಿಶ್ಚಯ. ಇದೇ ಸತ್ಯವಾಗಿರುವಾಗ ನೀನು ಮನಸ್ಸಿನ ಶೋಕವನ್ನು ತ್ಯಜಿಸು.

12032022a ಸ್ವಧರ್ಮೇ ವರ್ತಮಾನಸ್ಯ ಸಾಪವಾದೇಽಪಿ ಭಾರತ|

12032022c ಏವಮಾತ್ಮಪರಿತ್ಯಾಗಸ್ತವ ರಾಜನ್ನ ಶೋಭನಃ||

ಭಾರತ! ರಾಜನ್! ಸ್ವಧರ್ಮದಲ್ಲಿ ನಡೆದುಕೊಳ್ಳುವವನಿಗೂ ಅಪವಾದವೆನ್ನುವುದು ಇದ್ದೇ ಇರುತ್ತದೆ. ಈ ರೀತಿಯ ಆತ್ಮಪರಿತ್ಯಾಗವು ನಿನಗೆ ಶೋಭಿಸುವುದಿಲ್ಲ.

12032023a ವಿಹಿತಾನೀಹ ಕೌಂತೇಯ ಪ್ರಾಯಶ್ಚಿತ್ತಾನಿ ಕರ್ಮಿಣಾಮ್|

12032023c ಶರೀರವಾಂಸ್ತಾನಿ ಕುರ್ಯಾದಶರೀರಃ ಪರಾಭವೇತ್||

ಕೌಂತೇಯ! ಎಲ್ಲ ಕರ್ಮಗಳಿಗೂ ಪ್ರಾಯಶ್ಚಿತ್ತವೆನ್ನುವುದು ಇದ್ದೇ ಇದೆ. ಶರೀರವಿದ್ದವನು ಈ ಪ್ರಾಯಶ್ಚಿತ್ತಗಳನ್ನು ಮಾಡಿಕೊಳ್ಳಬಹುದು. ಶರೀರವನ್ನು ತ್ಯಜಿಸುವುದು ಪರಾಭವಹೊಂದಿದಂತೆ!

12032024a ತದ್ರಾಜನ್ಜೀವಮಾನಸ್ತ್ವಂ ಪ್ರಾಯಶ್ಚಿತ್ತಂ ಚರಿಷ್ಯಸಿ|

12032024c ಪ್ರಾಯಶ್ಚಿತ್ತಮಕೃತ್ವಾ ತು ಪ್ರೇತ್ಯ ತಪ್ತಾಸಿ ಭಾರತ||

ಭಾರತ! ರಾಜನ್! ನೀನು ಜೀವಿತನಾಗಿದ್ದರೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಬಹುದು. ಪ್ರಾಯಶ್ಚಿತ್ತಗಳನ್ನು ಮಾಡಿಕೊಳ್ಳದೇ ಮರಣಹೊಂದಿದರೆ ನೀನು ಲೋಕಾಂತರಗಳಲ್ಲಿಯೂ ಪರಿತಪಿಸಬೇಕಾಗುತ್ತದೆ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಪ್ರಾಯಶ್ಚಿತ್ತವಿಧೌ ದ್ವಾತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಪ್ರಾಯಶ್ಚಿತ್ತವಿಧಿ ಎನ್ನುವ ಮೂವತ್ತೆರಡನೇ ಅಧ್ಯಾಯವು.

[1] ಕೊಡಲಿಯು ಜಡವಸ್ತು. ಅದಕ್ಕೆ ಕರ್ಮಮಾಡುವ ಸ್ವಾತಂತ್ರ್ಯವೇ ಇಲ್ಲ. ಆದುದರಿಂದ ಅದಕ್ಕೆ ಪಾಪ-ಪುಣ್ಯಗಳ ಲೇಪವೇ ಇಲ್ಲ. ಕೊಡಲಿಯನ್ನು ಹಿಡಿಯುವ ಮನುಷ್ಯನೇ ಕತೃವಾಗುತ್ತಾನೆ. ಆದುದರಿಂದ ಕೊಡಲಿಯನ್ನು ಹಿಡಿದು ವೃಕ್ಷವನ್ನು ಕತ್ತರಿಸಿವನಿಗೇ ಪಾಪವು ತಗಲುತ್ತದೆ. ಹಾಗಾದರೆ ಕೊಡಲಿಯನ್ನು ಮಾಡಿದವನಿಗಾದರೂ ವೃಕ್ಷವನ್ನು ಕಡಿದ ಪಾಪವು ಬರಬೇಕಾಗಿದ್ದಿತು. ಏಕೆಂದರೆ ವೃಕ್ಷಗಳ ನಾಶಕ್ಕೆ ಕೊಡಲಿಯನ್ನು ತಯಾರಿಸುವವನೇ ಮೂಲ ಕಾರಣನಾಗುತ್ತಾನೆ. ಕೊಡಲಿಯನ್ನ ತಯಾರಿಸಿದುದರಿಂದಲೇ ಮತ್ತೊಬ್ಬನು ವೃಕ್ಷವನ್ನು ಕತ್ತರಿಸಿದುದಲ್ಲವೇ? ಆದುದರಿಂದ ವೃಕ್ಷವನ್ನು ಕತ್ತರಿಸಿದವನಿಗೆ ಪಾಪವಿಲ್ಲ ಎಂದೂ ಹೇಳಬಹುದು.

[2] ಇದ್ದಕ್ಕಿದ್ದಂತೆಯೇ ಭೂಕಂಪವಾಗುತ್ತದೆ, ಊರುಗಳೇ ನೆಲದಲ್ಲಿ ಹುದುಗಿಹೋಗುತ್ತವೆ. ಸಾವಿರಾರು ಜನರು ಸಾಯುತ್ತಾರೆ. ಇಲ್ಲಿ ಕರ್ತೃ ಯಾರು? ಕಾರಣ ಯಾವುದು? ಫಲಾಫಲಗಳು ಯಾರಿಗೆ? ಎನ್ನುವುದನ್ನು ನಿರ್ಧರಿಸಿ ಹೇಳಲು ಸಾಧ್ಯವೇ ಇಲ್ಲ. ಅಂತೆಯೇ ಭಾರತಯುದ್ಧವು ನಡೆದುದು ಸ್ವಾಭಾವಿಕ. ಇದಕ್ಕೆ ಯಾರೂ ಕಾರಣರಲ್ಲ. ಇದರ ಫಲಾಫಲಗಳೂ ಯಾರಿಗೂ ಸೇರುವುದಿಲ್ಲ!

Comments are closed.