ಶಾಂತಿ ಪರ್ವ: ರಾಜಧರ್ಮ ಪರ್ವ

೩೦

12030001 ಯುಧಿಷ್ಠಿರ ಉವಾಚ

12030001a ಸ ಕಥಂ ಕಾಂಚನಷ್ಠೀವೀ ಸೃಂಜಯಸ್ಯ ಸುತೋಽಭವತ್|

12030001c ಪರ್ವತೇನ ಕಿಮರ್ಥಂ ಚ ದತ್ತಃ ಕೇನ ಮಮಾರ ಚ||

ಯುಧಿಷ್ಠಿರನು ಹೇಳಿದನು: “ಸ್ವರ್ಣಷ್ಠೀವಿಯು ಸೃಂಜಯನ ಸುತನಾದದ್ದು ಹೇಗೆ? ಯಾವ ಕಾರಣಕ್ಕಾಗಿ ಪರ್ವತನು ಅವನನ್ನು ಸೃಂಜಯನಿಗೆ ದಯಪಾಲಿಸಿದನು ಮತ್ತು ಯಾವ ಕಾರಣಕ್ಕಾಗಿ ಸ್ವರ್ಣಷ್ಠೀವಿಯು ಕೌಮಾರ್ಯದಲ್ಲಿಯೇ ಮರಣಹೊಂದಿದನು?

12030002a ಯದಾ ವರ್ಷಸಹಸ್ರಾಯುಸ್ತದಾ ಭವತಿ ಮಾನವಃ|

12030002c ಕಥಮಪ್ರಾಪ್ತಕೌಮಾರಃ ಸೃಂಜಯಸ್ಯ ಸುತೋ ಮೃತಃ||

ಮನುಷ್ಯನಿಗೆ ಒಂದು ಸಾವಿರ ವರ್ಷಗಳ ಆಯುಸ್ಸು ಇರುವಂಥಹ ಆ ಕಾಲದಲ್ಲಿ ಸೃಂಜಯನ ಮಗನು ಕೌಮಾರ್ಯದಲ್ಲಿಯೇ ಹೇಗೆ ಮೃತನಾದನು?

12030003a ಉತಾಹೋ ನಾಮಮಾತ್ರಂ ವೈ ಸುವರ್ಣಷ್ಠೀವಿನೋಽಭವತ್|

12030003c ತಥ್ಯಂ ವಾ ಕಾಂಚನಷ್ಠೀವೀತ್ಯೇತದಿಚ್ಚಾಮಿ ವೇದಿತುಮ್||

ಅವನು ಹೆಸರಿನಲ್ಲಿ ಮಾತ್ರ ಸ್ವರ್ಣಷ್ಠೀವಿಯಾಗಿದ್ದನೋ? ಅಥವಾ ಅವನನ್ನು ಸುವರ್ಣಷ್ಠೀವಿಯೆಂದು ಏಕೆ ಕರೆಯುತ್ತಿದ್ದರು? ಇವೆಲ್ಲವನ್ನೂ ತಿಳಿಯಲು ಬಯಸುತ್ತೇನೆ.”

12030004 ವಾಸುದೇವ ಉವಾಚ

12030004a ಅತ್ರ ತೇ ಕಥಯಿಷ್ಯಾಮಿ ಯಥಾ ವೃತ್ತಂ ಜನೇಶ್ವರ|

12030004c ನಾರದಃ ಪರ್ವತಶ್ಚೈವ ಪ್ರಾಗೃಷೀ ಲೋಕಪೂಜಿತೌ||

ವಾಸುದೇವನು ಹೇಳಿದನು: “ಜನೇಶ್ವರ! ಅದು ಹೇಗೆ ನಡೆಯಿತೆನ್ನುವುದನ್ನು ನಿನಗೆ ಹೇಳುತ್ತೇನೆ. ಋಷಿಗಳಾದ ನಾರದ-ಪರ್ವತರು ಲೋಕಪೂಜಿತರು.

12030005a ಮಾತುಲೋ ಭಾಗಿನೇಯಶ್ಚ ದೇವಲೋಕಾದಿಹಾಗತೌ|

12030005c ವಿಹರ್ತುಕಾಮೌ ಸಂಪ್ರೀತ್ಯಾ ಮಾನುಷ್ಯೇಷು ಪುರಾ ಪ್ರಭೂ||

ಪ್ರಭೋ! ಹಿಂದೊಮ್ಮೆ ಆ ಸೋದರಮಾವ-ಸೋದರಳಿಯಂದಿರು ಮನುಷ್ಯಲೋಕದಲ್ಲಿ ಸಂಚರಿಸಬೇಕೆಂದು ಬಯಸಿ ದೇವಲೋಕದಿಂದ ಇಲ್ಲಿಗಿಳಿದರು.

12030006a ಹವಿಃಪವಿತ್ರಭೋಜ್ಯೇನ ದೇವ ಭೋಜ್ಯೇನ ಚೈವ ಹ|

12030006c ನಾರದೋ ಮಾತುಲಶ್ಚೈವ ಭಾಗಿನೇಯಶ್ಚ ಪರ್ವತಃ||

12030007a ತಾವುಭೌ ತಪಸೋಪೇತಾವವನೀತಲಚಾರಿಣೌ|

12030007c ಭುಂಜಾನೌ ಮಾನುಷಾನ್ಭೋಗಾನ್ಯಥಾವತ್ಪರ್ಯಧಾವತಾಮ್||

ತಾಪಸಿಗಳಾಗಿದ್ದ ಸೋದರಮಾವ ನಾರದ ಮತ್ತು ಸೋದರಳಿಯ ಪರ್ವತರು ಪವಿತ್ರವಾದ ಹವಿಸ್ಸನ್ನೂ, ದೇವಭೋಜನಕ್ಕೆ ಯೋಗ್ಯವಾದ ಆಹಾರಪದಾರ್ಥಗಳನ್ನೂ ತಿನ್ನುತ್ತಾ, ಮನುಷ್ಯರ ಭೋಗಗಳನ್ನು ಭೋಗಿಸುತ್ತಾ ಸ್ವೇಚ್ಛೆಯಿಂದ ಭೂಮಿಯಲ್ಲಿ ಸಂಚರಿಸುತ್ತಿದ್ದರು.

12030008a ಪ್ರೀತಿಮಂತೌ ಮುದಾ ಯುಕ್ತೌ ಸಮಯಂ ತತ್ರ ಚಕ್ರತುಃ|

12030008c ಯೋ ಭವೇದ್ಧೃದಿ ಸಂಕಲ್ಪಃ ಶುಭೋ ವಾ ಯದಿ ವಾಶುಭಃ||

12030008e ಅನ್ಯೋನ್ಯಸ್ಯ ಸ ಆಖ್ಯೇಯೋ ಮೃಷಾ ಶಾಪೋಽನ್ಯಥಾ ಭವೇತ್||

ಪರಸ್ಪರ ಪ್ರೀತಿಪಾತ್ರರಾಗಿದ್ದ ಅವರು ತಮ್ಮ-ತಮ್ಮಲ್ಲಿಯೇ ಒಂದು ಒಪ್ಪಂದವನ್ನು ಮಾಡಿಕೊಂಡರು: “ಯಾರೊಬ್ಬರಲ್ಲಿ ಯಾವುದೇ ಶುಭ ಅಥವಾ ಅಶುಭ ಸಂಕಲ್ಪವು ಮೂಡಿಕೊಂಡರೂ ಅದನ್ನು ಅನ್ಯೋನ್ಯರಲ್ಲಿ ಹೇಳಿಕೊಳ್ಳಬೇಕು. ಅದನ್ನು ಹೇಳಿಕೊಳ್ಳದೇ ಇದ್ದರೆ ಅಥವಾ ಸುಳ್ಳನ್ನು ಹೇಳಿದರೆ ಅವರು ಶಾಪಕ್ಕೆ ಗುರಿಯಾಗಬೇಕು.”

12030009a ತೌ ತಥೇತಿ ಪ್ರತಿಜ್ಞಾಯ ಮಹರ್ಷೀ ಲೋಕಪೂಜಿತೌ|

12030009c ಸೃಂಜಯಂ ಶ್ವೈತ್ಯಮಭ್ಯೇತ್ಯ ರಾಜಾನಮಿದಮೂಚತುಃ||

ಹಾಗೆಯೇ ಆಗಲೆಂದು ಪ್ರತಿಜ್ಞೆಮಾಡಿ ಆ ಇಬ್ಬರು ಲೋಕಪೂಜಿತ ಮಹರ್ಷಿಗಳೂ ಶ್ವೇತಪುತ್ರನ ಮಗ ರಾಜಾ ಸೃಂಜಯನಲ್ಲಿ ಹೋಗಿ ಇಂತೆಂದರು:

12030010a ಆವಾಂ ಭವತಿ ವತ್ಸ್ಯಾವಃ ಕಂ ಚಿತ್ ಕಾಲಂ ಹಿತಾಯ ತೇ|

12030010c ಯಥಾವತ್ಪೃಥಿವೀಪಾಲ ಆವಯೋಃ ಪ್ರಗುಣೀಭವ||

12030010e ತಥೇತಿ ಕೃತ್ವಾ ತೌ ರಾಜಾ ಸತ್ಕೃತ್ಯೋಪಚಚಾರ ಹ||

“ಪೃಥಿವೀಪಾಲ! ನಿನ್ನ ಹಿತಕ್ಕಾಗಿ ನಾವು ಕೆಲವು ಕಾಲ ನಿನ್ನ ಬಳಿಯಲ್ಲಿಯೇ ವಾಸಿಸುತ್ತೇವೆ. ನಾವಿರುವಲ್ಲಿಯವರೆಗೆ ನಮಗೆ ಅನುಕೂಲಕರನಾಗಿರು!” ಹಾಗೆಯೇ ಆಗಲೆಂದು ಹೇಳಿ ರಾಜನು ಅವರಿಬ್ಬರನ್ನೂ ಸತ್ಕರಿಸಿ ಉಪಚರಿಸಿದನು.

12030011a ತತಃ ಕದಾ ಚಿತ್ತೌ ರಾಜಾ ಮಹಾತ್ಮಾನೌ ತಥಾಗತೌ|

12030011c ಅಬ್ರವೀತ್ಪರಮಪ್ರೀತಃ ಸುತೇಯಂ ವರವರ್ಣಿನೀ||

ಆಗ ಒಮ್ಮೆ ಪರಮಪ್ರೀತನಾದ ರಾಜನು ತನ್ನ ವರವರ್ಣಿನೀ ಮಗಳನ್ನು ಆ ಮಹಾತ್ಮರ ಬಳಿ ಕರೆದುಕೊಂಡು ಹೋಗಿ ಹೀಗೆಂದನು:

12030012a ಏಕೈವ ಮಮ ಕನ್ಯೈಷಾ ಯುವಾಂ ಪರಿಚರಿಷ್ಯತಿ|

12030012c ದರ್ಶನೀಯಾನವದ್ಯಾಂಗೀ ಶೀಲವೃತ್ತಸಮನ್ವಿತಾ||

12030012e ಸುಕುಮಾರೀ ಕುಮಾರೀ ಚ ಪದ್ಮಕಿಂಜಲ್ಕಸಂನಿಭಾ||

ಅನವದ್ಯಾಂಗಿಯೂ ಶೀಲಚಾರಿತ್ರ್ಯಗಳಿಂದ ಕೂಡಿದವಳೂ, ಕಮಲದ ಕುಸುಮದಂತೆ ಕಾಂತಿಯುಕ್ತಳಾಗಿರುವ ಈ ಸುಂದರ ಯುವತಿಯು ನನ್ನ ಓರ್ವಳೇ ಮಗಳು ಕುಮಾರೀ ಸುಕುಮಾರಿ. ಇವಳು ನಿಮ್ಮ ಸೇವೆಯನ್ನು ಮಾಡುತ್ತಾಳೆ!”

12030013a ಪರಮಂ ಸೌಮ್ಯ ಇತ್ಯುಕ್ತಸ್ತಾಭ್ಯಾಂ ರಾಜಾ ಶಶಾಸ ತಾಮ್|

12030013c ಕನ್ಯೇ ವಿಪ್ರಾವುಪಚರ ದೇವವತ್ಪಿತೃವಚ್ಚ ಹ||

“ತುಂಬಾ ಒಳ್ಳೆಯದಾಯಿತು!” ಎಂದು ಅವರು ಹೇಳಲು ರಾಜನು ಅವಳಿಗೆ “ಕನ್ಯೇ! ದೇವ-ಪಿತೃಗಳಂತೆ ಈ ವಿಪ್ರರನ್ನು ಉಪಚರಿಸು!” ಎಂದು ಶಾಸನವನ್ನಿತ್ತನು.

12030014a ಸಾ ತು ಕನ್ಯಾ ತಥೇತ್ಯುಕ್ತ್ವಾ ಪಿತರಂ ಧರ್ಮಚಾರಿಣೀ|

12030014c ಯಥಾನಿದೇಶಂ ರಾಜ್ಞಸ್ತೌ ಸತ್ಕೃತ್ಯೋಪಚಚಾರ ಹ||

ಆ ಧರ್ಮಚಾರಿಣೀ ಕನ್ಯೆಯು ತಂದೆಗೆ ಹಾಗೆಯೇ ಆಗಲೆಂದು ಹೇಳಿ, ರಾಜನ ನಿರ್ದೇಶನದಂತೆ ಅವರಿಬ್ಬರನ್ನೂ ಸತ್ಕರಿಸಿ ಉಪಚರಿಸಿದಳು.

12030015a ತಸ್ಯಾಸ್ತಥೋಪಚಾರೇಣ ರೂಪೇಣಾಪ್ರತಿಮೇನ ಚ|

12030015c ನಾರದಂ ಹೃಚ್ಚಯಸ್ತೂರ್ಣಂ ಸಹಸೈವಾನ್ವಪದ್ಯತ||

ಅವಳ ಉಪಚಾರಗಳಿಂದ ಮತ್ತು ಅಪ್ರತಿಮ ರೂಪದಿಂದ ನಾರದನ ಹೃದಯದಲ್ಲಿ ಮಲಗಿದ್ದ ಕಾಮನು ಒಮ್ಮೆಲೇ ಎದ್ದು ಅವನನ್ನು ಆಕ್ರಮಣಿಸಲಾರಂಭಿಸಿದನು.

12030016a ವವೃಧೇ ಚ ತತಸ್ತಸ್ಯ ಹೃದಿ ಕಾಮೋ ಮಹಾತ್ಮನಃ|

12030016c ಯಥಾ ಶುಕ್ಲಸ್ಯ ಪಕ್ಷಸ್ಯ ಪ್ರವೃತ್ತಾವುಡುರಾಟ್ಶನೈಃ||

ಶುಕ್ಲಪಕ್ಶದಲ್ಲಿ ಉಡುರಾಜ ಚಂದ್ರನು ಹೇಗೆ ಮೆಲ್ಲ ಮೆಲ್ಲನೇ ವರ್ಧಿಸುತ್ತಾನೋ ಹಾಗೆ ಆ ಮಹಾತ್ಮನ ಹೃದಯದಲ್ಲಿ ಕಾಮವು ವೃದ್ಧಿಯಾಗತೊಡಗಿತು.

12030017a ನ ಚ ತಂ ಭಾಗಿನೇಯಾಯ ಪರ್ವತಾಯ ಮಹಾತ್ಮನೇ|

12030017c ಶಶಂಸ ಮನ್ಮಥಂ ತೀವ್ರಂ ವ್ರೀಡಮಾನಃ ಸ ಧರ್ಮವಿತ್||

ಆದರೆ ಧರ್ಮವಿದುವಾದ ಅವನು ನಾಚಿಕೊಂಡು ತನಗಾಗುತ್ತಿದ್ದ ಮನ್ಮಥನ ತೀವ್ರತೆಯನ್ನು ಸೋದರಳಿಯ ಮಹಾತ್ಮ ಪರ್ವತನಲ್ಲಿ ಹೇಳಿಕೊಳ್ಳಲೇ ಇಲ್ಲ.

12030018a ತಪಸಾ ಚೇಂಗಿತೇನಾಥ ಪರ್ವತೋಽಥ ಬುಬೋಧ ತತ್|

12030018c ಕಾಮಾರ್ತಂ ನಾರದಂ ಕ್ರುದ್ಧಃ ಶಶಾಪೈನಂ ತತೋ ಭೃಶಮ್||

ತನ್ನ ತಪಸ್ಸಿನ ಪ್ರಭಾವದಿಂದ ಅವನ ಇಂಗಿತವನ್ನು ತಿಳಿದುಕೊಂಡ ಪರ್ವತನು ಕ್ರುದ್ಧನಾಗಿ ಕಾಮಾರ್ತನಾದ ನಾರದನಿಗೆ ಭಯಂಕರವಾದ ಈ ಶಾಪವನ್ನಿತ್ತನು:

12030019a ಕೃತ್ವಾ ಸಮಯಮವ್ಯಗ್ರೋ ಭವಾನ್ವೈ ಸಹಿತೋ ಮಯಾ|

12030019c ಯೋ ಭವೇದ್ಧೃದಿ ಸಂಕಲ್ಪಃ ಶುಭೋ ವಾ ಯದಿ ವಾಶುಭಃ||

12030020a ಅನ್ಯೋನ್ಯಸ್ಯ ಸ ಆಖ್ಯೇಯ ಇತಿ ತದ್ವೈ ಮೃಷಾ ಕೃತಮ್|

12030020c ಭವತಾ ವಚನಂ ಬ್ರಹ್ಮಂಸ್ತಸ್ಮಾದೇತದ್ವದಾಮ್ಯಹಮ್||

“ಏನೇನು ಶುಭಾಶುಭ ಸಂಕಲ್ಪಗಳು ಹುಟ್ಟುತ್ತವೆಯೋ ಅವುಗಳನ್ನು ಅನ್ಯೋನ್ಯರಲ್ಲಿ ಹೇಳಬೇಕು” ಎಂದು ಅವ್ಯಗ್ರನಾಗಿ ನನ್ನೊಡನೆ ಒಪ್ಪೊಂದ ಮಾಡಿಕೊಂಡಿರುವ ನೀನು ಆ ವಚನಕ್ಕೆ ಸುಳ್ಳಾಗಿ ಮಾಡುತ್ತಿರುವೆ! ಬ್ರಹ್ಮನ್! ಆದುದರಿಂದ ನಾನು ನಿನಗೆ ಹೀಗೆ ಹೇಳುತ್ತಿದ್ದೇನೆ.

12030021a ನ ಹಿ ಕಾಮಂ ಪ್ರವರ್ತಂತಂ ಭವಾನಾಚಷ್ಟ ಮೇ ಪುರಾ|

12030021c ಸುಕುಮಾರ್ಯಾಂ ಕುಮಾರ್ಯಾಂ ತೇ ತಸ್ಮಾದೇಷ ಶಪಾಮ್ಯಹಮ್||

ಕುಮಾರಿ ಸುಕುಮಾರಿಯ ಕುರಿತು ನಿನ್ನಲ್ಲಿ ಹುಟ್ಟಿರುವ ಈ ಕಾಮದ ಕುರಿತು ನೀನು ನನಗೆ ಈ ಮೊದಲೇ ಹೇಳಲಿಲ್ಲ! ಆದುದರಿಂದ ನಾನು ನಿನ್ನನ್ನು ಶಪಿಸುತ್ತಿದ್ದೇನೆ.

12030022a ಬ್ರಹ್ಮವಾದೀ ಗುರುರ್ಯಸ್ಮಾತ್ತಪಸ್ವೀ ಬ್ರಾಹ್ಮಣಶ್ಚ ಸನ್|

12030022c ಅಕಾರ್ಷೀಃ ಸಮಯಭ್ರಂಶಮಾವಾಭ್ಯಾಂ ಯಃ ಕೃತೋ ಮಿಥಃ||

ಬ್ರಹ್ಮವಾದಿಯೂ, ಗುರುವೂ, ತಪಸ್ವೀ ಬ್ರಾಹ್ಮಣನೂ ಆಗಿರುವ ನೀನು ನಮ್ಮಿಬ್ಬರ ನಡುವೆ ಮಾಡಿಕೊಂಡ ಒಪ್ಪಂದವನ್ನು ಮುರಿದಿರುವೆ!

12030023a ಶಪ್ಸ್ಯೇ ತಸ್ಮಾತ್ಸುಸಂಕ್ರುದ್ಧೋ ಭವಂತಂ ತಂ ನಿಬೋಧ ಮೇ|

12030023c ಸುಕುಮಾರೀ ಚ ತೇ ಭಾರ್ಯಾ ಭವಿಷ್ಯತಿ ನ ಸಂಶಯಃ||

ಆದುದರಿಂದ ಸಂಕ್ರುದ್ಧನಾಗಿ ನಾನು ನಿನ್ನನ್ನು ಶಪಿಸುತ್ತಿದ್ದೇನೆ. ನಾನು ಹೇಳುವುದನ್ನು ಕೇಳು! ಸುಕುಮಾರಿಯು ನಿನ್ನ ಪತ್ನಿಯಾಗುತ್ತಾಳೆ ಎನ್ನುವುದರಲ್ಲಿ ಸಂಶಯವಿಲ್ಲ!

12030024a ವಾನರಂ ಚೈವ ಕನ್ಯಾ ತ್ವಾಂ ವಿವಾಹಾತ್ಪ್ರಭೃತಿ ಪ್ರಭೋ|

12030024c ಸಂದ್ರಕ್ಷ್ಯಂತಿ ನರಾಶ್ಚಾನ್ಯೇ ಸ್ವರೂಪೇಣ ವಿನಾಕೃತಮ್||

ಆದರೆ ಪ್ರಭೋ! ಆ ಕನ್ಯೆಯನ್ನು ವಿವಾಹವಾದೊಡನೆಯೇ ನೀನು ವಾನರ ರೂಪವನ್ನು ತಾಳುತ್ತೀಯೆ! ಸ್ವರೂಪವನ್ನು ಕಳೆದುಕೊಂಡು ಕಪಿಮುಖನಾಗುವ ನಿನ್ನನ್ನು ಜನರು ನೋಡುತ್ತಾರೆ!”

12030025a ಸ ತದ್ವಾಕ್ಯಂ ತು ವಿಜ್ಞಾಯ ನಾರದಃ ಪರ್ವತಾತ್ತದಾ|

12030025c ಅಶಪತ್ತಮಪಿ ಕ್ರೋಧಾದ್ಭಾಗಿನೇಯಂ ಸ ಮಾತುಲಃ||

ಪರ್ವತನ ಆ ಮಾತನ್ನು ಕೇಳಿದ ಸೋದರ ಮಾವ ನಾರದನೂ ಕೂಡ ಕುಪಿತನಾಗಿ ತನ್ನ ಅಳಿಯನನ್ನೂ ಶಪಿಸಿದನು:

12030026a ತಪಸಾ ಬ್ರಹ್ಮಚರ್ಯೇಣ ಸತ್ಯೇನ ಚ ದಮೇನ ಚ|

12030026c ಯುಕ್ತೋಽಪಿ ಧರ್ಮನಿತ್ಯಶ್ಚ ನ ಸ್ವರ್ಗವಾಸಮಾಪ್ಸ್ಯಸಿ||

“ತಪಸ್ಸು, ಬ್ರಹ್ಮಚರ್ಯ, ಸತ್ಯ ಮತ್ತು ದಮಗಳಿಂದ ಯುಕ್ತನಾಗಿದ್ದರೂ, ಧರ್ಮನಿತ್ಯನಾಗಿದ್ದರೂ, ನಿನಗೆ ಸ್ವರ್ಗವಾಸವು ದೊರಕುವುದಿಲ್ಲ!”

12030027a ತೌ ತು ಶಪ್ತ್ವಾ ಭೃಶಂ ಕ್ರುದ್ಧೌ ಪರಸ್ಪರಮಮರ್ಷಣೌ|

12030027c ಪ್ರತಿಜಗ್ಮತುರನ್ಯೋನ್ಯಂ ಕ್ರುದ್ಧಾವಿವ ಗಜೋತ್ತಮೌ||

ಹೀಗೆ ಕ್ರುದ್ಧರಾಗಿ ಪರಸ್ಪರರನ್ನು ಘೋರವಾಗಿ ಶಪಿಸಿ ಕ್ರುದ್ಧ ಗಜೋತ್ತಮರಂತೆ ಒಬ್ಬರನ್ನೊಬ್ಬರು ಸಹಿಸಿಕೊಳ್ಳಲಾಗದೇ ಅಗಲಿ ಹೊರಟುಹೋದರು.

12030028a ಪರ್ವತಃ ಪೃಥಿವೀಂ ಕೃತ್ಸ್ನಾಂ ವಿಚಚಾರ ಮಹಾಮುನಿಃ|

12030028c ಪೂಜ್ಯಮಾನೋ ಯಥಾನ್ಯಾಯಂ ತೇಜಸಾ ಸ್ವೇನ ಭಾರತ||

ಭಾರತ! ಮಹಾಮುನಿ ಪರ್ವತನು, ತನ್ನದೇ ತೇಜಸ್ಸಿನಿಂದ ಯಥಾನ್ಯಾಯವಾಗಿ ಪೂಜಿಸಲ್ಪಡುತ್ತಾ, ಭೂಮಿಯನ್ನಿಡೀ ಸಂಚರಿಸಿದನು.

12030029a ಅಥ ತಾಮಲಭತ್ಕನ್ಯಾಂ ನಾರದಃ ಸೃಂಜಯಾತ್ಮಜಾಮ್|

12030029c ಧರ್ಮೇಣ ಧರ್ಮಪ್ರವರಃ ಸುಕುಮಾರೀಮನಿಂದಿತಾಮ್||

ಅನಂತರ ಧರ್ಮಪ್ರವರ ನಾರದನು ಸೃಂಜಯನ ಮಗಳು ಅನಿಂದಿತೆ ಕನ್ಯೆ ಸುಕುಮಾರಿಯನ್ನು ಧರ್ಮಪ್ರಕಾರವಾಗಿ ಪಡೆದುಕೊಂಡನು.

12030030a ಸಾ ತು ಕನ್ಯಾ ಯಥಾಶಾಪಂ ನಾರದಂ ತಂ ದದರ್ಶ ಹ|

12030030c ಪಾಣಿಗ್ರಹಣಮಂತ್ರಾಣಾಂ ಪ್ರಯೋಗಾದೇವ ವಾನರಮ್||

ಪಾಣಿಗ್ರಹಣ ಮಂತ್ರಗಳು ಮತ್ತು ಪ್ರಯೋಗಗಳು ಮುಗಿದಾಕ್ಷಣವೇ ಆ ಕನ್ಯೆಯು, ಶಾಪವಿದ್ದಂತೆ, ನಾರದನನ್ನು ವಾನರರೂಪದಲ್ಲಿ ಕಂಡಳು.

12030031a ಸುಕುಮಾರೀ ಚ ದೇವರ್ಷಿಂ ವಾನರಪ್ರತಿಮಾನನಮ್|

12030031c ನೈವಾವಮನ್ಯತ ತದಾ ಪ್ರೀತಿಮತ್ಯೇವ ಚಾಭವತ್||

ವಾನರನ ಮುಖವನ್ನು ಹೊಂದಿದ್ದ ದೇವರ್ಷಿಯನ್ನು ಸುಕುಮಾರಿಯು ಅವಮಾನಗೊಳಿಸಲಿಲ್ಲ. ಅವನ ಮೇಲೆ ಪ್ರೀತಿಭಾವವನ್ನೇ ಹೊಂದಿದ್ದಳು.

12030032a ಉಪತಸ್ಥೇ ಚ ಭರ್ತಾರಂ ನ ಚಾನ್ಯಂ ಮನಸಾಪ್ಯಗಾತ್|

12030032c ದೇವಂ ಮುನಿಂ ವಾ ಯಕ್ಷಂ ವಾ ಪತಿತ್ವೇ ಪತಿವತ್ಸಲಾ||

ಪತಿಯ ಸೇವಾನಿರತಳಾಗಿದ್ದ ಅವಳು ಮನಸ್ಸಿನಲ್ಲಿ ಕೂಡ ದೇವ, ಮುನಿ, ಯಕ್ಷರು ಮತ್ತು ಬೇರೆ ಯಾರಲ್ಲಿಯೂ ಪತಿತ್ವವನ್ನು ಕಾಣಲಿಲ್ಲ.

12030033a ತತಃ ಕದಾ ಚಿದ್ ಭಗವಾನ್ಪರ್ವತೋಽನುಸಸಾರ ಹ|

12030033c ವನಂ ವಿರಹಿತಂ ಕಿಂ ಚಿತ್ತತ್ರಾಪಶ್ಯತ್ಸ ನಾರದಮ್||

ಹೀಗಿರಲು ಒಮ್ಮೆ ಭಗವಾನ್ ಪರ್ವತನು ಯಾವುದೋ ಕಾರಣಕ್ಕಾಗಿ ವನದಲ್ಲಿ ವಿಹರಿಸುತ್ತಿರುವಾಗ ಅಲ್ಲಿ ನಾರದನನ್ನು ಕಂಡನು.

12030034a ತತೋಽಭಿವಾದ್ಯ ಪ್ರೋವಾಚ ನಾರದಂ ಪರ್ವತಸ್ತದಾ|

12030034c ಭವಾನ್ಪ್ರಸಾದಂ ಕುರುತಾಂ ಸ್ವರ್ಗಾದೇಶಾಯ ಮೇ ಪ್ರಭೋ||

ಆಗ ಪರ್ವತನು ನಾರದನನ್ನು ಅಭಿವಂದಿಸಿ “ಪ್ರಭೋ! ನಿನ್ನ ಕರುಣೆಯಿಂದ ನಾನು ಸ್ವರ್ಗಕ್ಕೆ ಹೋಗುವಂತೆ ಮಾಡು!” ಎಂದು ಕೇಳಿಕೊಂಡನು.

12030035a ತಮುವಾಚ ತತೋ ದೃಷ್ಟ್ವಾ ಪರ್ವತಂ ನಾರದಸ್ತದಾ|

12030035c ಕೃತಾಂಜಲಿಮುಪಾಸೀನಂ ದೀನಂ ದೀನತರಃ ಸ್ವಯಮ್||

ತನಗಿಂತಲೂ ದೀನನಾಗಿ ಕೈಮುಗಿದು ಕುಳಿತುಕೊಂಡು ಯಾಚಿಸುತ್ತಿದ್ದ ಪರ್ವತನನ್ನು ನೋಡಿ ನಾರದನು ಅವನಿಗೆ ಇಂತೆಂದನು:

12030036a ತ್ವಯಾಹಂ ಪ್ರಥಮಂ ಶಪ್ತೋ ವಾನರಸ್ತ್ವಂ ಭವಿಷ್ಯಸಿ|

12030036c ಇತ್ಯುಕ್ತೇನ ಮಯಾ ಪಶ್ಚಾಚ್ಚಪ್ತಸ್ತ್ವಮಪಿ ಮತ್ಸರಾತ್||

12030036e ಅದ್ಯಪ್ರಭೃತಿ ವೈ ವಾಸಂ ಸ್ವರ್ಗೇ ನಾವಾಪ್ಸ್ಯಸೀತಿ ಹ||

“ನೀನೇ ನನ್ನನ್ನು ಮೊದಲು ವಾನರನಾಗೆಂದು ಶಪಿಸಿದೆ. ಇದನ್ನು ಕೇಳಿದ ನಾನು ಮತ್ಸರದಿಂದ ಇಂದಿನಿಂದ ನಿನಗೆ ಸ್ವರ್ಗವಾಸವು ದೊರೆಯದಿರಲಿ ಎಂದು ನಿನ್ನನ್ನೂ ಪ್ರತಿಯಾಗಿ ಶಪಿಸಿದೆನು.

12030037a ತವ ನೈತದ್ಧಿ ಸದೃಶಂ ಪುತ್ರಸ್ಥಾನೇ ಹಿ ಮೇ ಭವಾನ್|

12030037c ನಿವರ್ತಯೇತಾಂ ತೌ ಶಾಪಮನ್ಯೋಽನ್ಯೇನ ತದಾ ಮುನೀ||

ನನ್ನ ಪುತ್ರಸ್ಥಾನದಲ್ಲಿರುವ ನೀನು ಈ ರೀತಿ ಮಾಡಬಾರದಾಗಿತ್ತು!” ಅನಂತರ ಆ ಇಬ್ಬರು ಮುನಿಗಳೂ ಅನ್ಯೋನ್ಯರಿಗಿತ್ತಿದ್ದ ಶಾಪವನ್ನು ಹಿಂದೆ ತೆಗೆದುಕೊಂಡರು.

12030038a ಶ್ರೀಸಮೃದ್ಧಂ ತದಾ ದೃಷ್ಟ್ವಾ ನಾರದಂ ದೇವರೂಪಿಣಮ್|

12030038c ಸುಕುಮಾರೀ ಪ್ರದುದ್ರಾವ ಪರಪತ್ಯಭಿಶಂಕಯಾ||

ಆಗ ಕಾಂತಿಯುಕ್ತನಾಗಿದ್ದ ದೇವರೂಪೀ ಆ ನಾರದನನ್ನು ನೋಡಿ ಸುಕುಮಾರಿಯು ಪರಪುರುಷನೆಂಬ ಸಂದೇಹದಿಂದ ಓಡಿಹೋದಳು.

12030039a ತಾಂ ಪರ್ವತಸ್ತತೋ ದೃಷ್ಟ್ವಾ ಪ್ರದ್ರವಂತೀಮನಿಂದಿತಾಮ್|

12030039c ಅಬ್ರವೀತ್ತವ ಭರ್ತೈಷ ನಾತ್ರ ಕಾರ್ಯಾ ವಿಚಾರಣಾ||

ಓಡಿಹೋಗುತ್ತಿದ್ದ ಆ ಅನಿಂದಿತೆಯನ್ನು ನೋಡಿ ಪರ್ವತನು ಇಂತೆಂದನು: “ಇವನೇ ನಿನ್ನ ಪತಿ. ಅದರಲ್ಲಿ ವಿಚಾರಮಾಡಬೇಕಾದುದೇ ಇಲ್ಲ!

12030040a ಋಷಿಃ ಪರಮಧರ್ಮಾತ್ಮಾ ನಾರದೋ ಭಗವಾನ್ಪ್ರಭುಃ|

12030040c ತವೈವಾಭೇದ್ಯಹೃದಯೋ ಮಾ ತೇ ಭೂದತ್ರ ಸಂಶಯಃ||

ಈ ಋಷಿ, ಪರಮ ಧರ್ಮಾತ್ಮಾ ಭಗವಾನ್ ಪ್ರಭು ನಾರದನು ನಿನ್ನ ಅಭೇದ್ಯಹೃದಯ ಪತಿ. ಅದರಲ್ಲಿ ನಿನಗೆ ಸಂಶಯವಾಗದಿರಲಿ!”

12030041a ಸಾನುನೀತಾ ಬಹುವಿಧಂ ಪರ್ವತೇನ ಮಹಾತ್ಮನಾ|

12030041c ಶಾಪದೋಷಂ ಚ ತಂ ಭರ್ತುಃ ಶ್ರುತ್ವಾ ಸ್ವಾಂ ಪ್ರಕೃತಿಂ ಗತಾ||

12030041e ಪರ್ವತೋಽಥ ಯಯೌ ಸ್ವರ್ಗಂ ನಾರದೋಽಥ ಯಯೌ ಗೃಹಾನ್||

ಆ ಮಹಾತ್ಮ ಪರ್ವತನು ಬಹುವಿಧವಾಗಿ ಅವಳನ್ನು ಒಪ್ಪಿಸಲು, ತನ್ನ ಪತಿಯು ಶಾಪದೋಷಕ್ಕೊಳಗಾಗಿದ್ದುದನ್ನು ಕೇಳಿ ಸುಕುಮಾರಿಯು ಸ್ವಸ್ಥಚಿತ್ತಳಾದಳು. ಆಗ ಪರ್ವತನು ಸ್ವರ್ಗಕ್ಕೂ ನಾರದನು ಪತ್ನಿಯೊಡನೆ ತನ್ನ ಮನೆಗೂ ತೆರಳಿದರು.

12030042a ಪ್ರತ್ಯಕ್ಷಕರ್ಮಾ ಸರ್ವಸ್ಯ ನಾರದೋಽಯಂ ಮಹಾನೃಷಿಃ|

12030042c ಏಷ ವಕ್ಷ್ಯತಿ ವೈ ಪೃಷ್ಟೋ ಯಥಾ ವೃತ್ತಂ ನರೋತ್ತಮ||

ನರೋತ್ತಮ! ಈ ಮಹಾನೃಷಿ ನಾರದನೇ ಇದರ ಪ್ರತ್ಯಕ್ಷಕರ್ಮಿಯಾಗಿದ್ದನು. ನೀನು ಕೇಳಿದುದನ್ನು ನಡೆದಂತೆ ಇವನೇ ಹೇಳುತ್ತಾನೆ!””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ನಾರದಪರ್ವತೋಪಾಖ್ಯಾನೇ ತ್ರಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ನಾರದಪರ್ವತೋಪಾಖ್ಯಾನ ಎನ್ನುವ ಮೂವತ್ತನೇ ಅಧ್ಯಾಯವು.

Comments are closed.