ಶಾಂತಿ ಪರ್ವ: ರಾಜಧರ್ಮ ಪರ್ವ

೨೮

12028001 ವೈಶಂಪಾಯನ ಉವಾಚ

12028001a ಜ್ಞಾತಿಶೋಕಾಭಿತಪ್ತಸ್ಯ ಪ್ರಾಣಾನಭ್ಯುತ್ಸಿಸೃಕ್ಷತಃ|

12028001c ಜ್ಯೇಷ್ಠಸ್ಯ ಪಾಂಡುಪುತ್ರಸ್ಯ ವ್ಯಾಸಃ ಶೋಕಮಪಾನುದತ್||

ವೈಶಂಪಾಯನನು ಹೇಳಿದನು: “ಜ್ಞಾತಿಶೋಕದಿಂದ ತಪಿಸುತ್ತಾ ಪ್ರಾಣಗಳನ್ನೇ ತೊರೆಯಲು ಸಿದ್ಧನಾಗಿದ್ದ ಪಾಂಡುಪುತ್ರರ ಜ್ಯೇಷ್ಠ ಯುಧಿಷ್ಠಿರನ ಶೋಕವನ್ನು ನೀಗಿಸಲು ವ್ಯಾಸನು ಹೀಗೆ ಹೇಳಿದನು:

12028002 ವ್ಯಾಸ ಉವಾಚ

12028002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|

12028002c ಅಶ್ಮಗೀತಂ ನರವ್ಯಾಘ್ರ ತನ್ನಿಬೋಧ ಯುಧಿಷ್ಠಿರ||

ವ್ಯಾಸನು ಹೇಳಿದನು: “ನರವ್ಯಾಘ್ರ! ಯುಧಿಷ್ಠಿರ! ಇದಕ್ಕೆ ಸಂಬಂಧಿಸಿದಂತೆ ಅಶ್ಮಗೀತವೆನ್ನುವ ಪುರಾತನ ಇತಿಹಾಸವೊಂದನ್ನು ಕೇಳು.

12028003a ಅಶ್ಮಾನಂ ಬ್ರಾಹ್ಮಣಂ ಪ್ರಾಜ್ಞಂ ವೈದೇಹೋ ಜನಕೋ ನೃಪಃ|

12028003c ಸಂಶಯಂ ಪರಿಪಪ್ರಚ್ಚ ದುಃಖಶೋಕಪರಿಪ್ಲುತಃ||

ದುಃಖ-ಶೋಕಗಳಲ್ಲಿ ಮುಳುಗಿಹೋಗಿದ್ದ ವಿದೇಹ ದೇಶದ ನೃಪ ಜನಕನು ಪ್ರಾಜ್ಞ ಬ್ರಾಹ್ಮಣ ಅಶ್ಮನನ್ನು ಪ್ರಶ್ನಿಸಿದನು:

12028004 ಜನಕ ಉವಾಚ

12028004a ಆಗಮೇ ಯದಿ ವಾಪಾಯೇ ಜ್ಞಾತೀನಾಂ ದ್ರವಿಣಸ್ಯ ಚ|

12028004c ನರೇಣ ಪ್ರತಿಪತ್ತವ್ಯಂ ಕಲ್ಯಾಣಂ ಕಥಮಿಚ್ಚತಾ||

ಜನಕನು ಹೇಳಿದನು: “ಕುಟುಂಬದ ಮತ್ತು ಸಂಪತ್ತಿನ ವೃದ್ಧಿ-ವಿನಾಶಗಳುಂಟಾದಾಗ ಕಲ್ಯಾಣವುಂಟಾಗಲು ಮನುಷ್ಯನು ಏನು ಮಾಡಬೇಕು?”

12028005 ಅಶ್ಮೋವಾಚ

12028005a ಉತ್ಪನ್ನಮಿಮಮಾತ್ಮಾನಂ ನರಸ್ಯಾನಂತರಂ ತತಃ|

12028005c ತಾನಿ ತಾನ್ಯಭಿವರ್ತಂತೇ ದುಃಖಾನಿ ಚ ಸುಖಾನಿ ಚ||

ಅಶ್ಮನು ಹೇಳಿದನು: “ಜನನದ ನಂತರ ಸತತವಾಗಿ ದುಃಖ-ಸುಖಗಳು ಮನುಷ್ಯನನ್ನು ಅನುಸರಿಸಿ ಬರುತ್ತಲೇ ಇರುತ್ತವೆ.

12028006a ತೇಷಾಮನ್ಯತರಾಪತ್ತೌ ಯದ್ಯದೇವೋಪಸೇವತೇ|

12028006c ತತ್ತದ್ಧಿ ಚೇತನಾಮಸ್ಯ ಹರತ್ಯಭ್ರಮಿವಾನಿಲಃ||

ಆ ಸುಖ-ದುಃಖಗಳಲ್ಲಿ ಯಾವುದು ಪ್ರಾಪ್ತವಾಗುವುದೋ ಅದೇ ಮನುಷ್ಯನ ಬುದ್ಧಿಯನ್ನು ಗಾಳಿಯು ಮೋಡವನ್ನು ಹಾರಿಸಿಕೊಂಡು ಹೋಗುವಂತೆ ಹಾರಿಸಿಕೊಂಡು ಹೋಗುತ್ತದೆ.

12028007a ಅಭಿಜಾತೋಽಸ್ಮಿ ಸಿದ್ಧೋಽಸ್ಮಿ ನಾಸ್ಮಿ ಕೇವಲಮಾನುಷಃ|

12028007c ಇತ್ಯೇವಂ ಹೇತುಭಿಸ್ತಸ್ಯ ತ್ರಿಭಿಶ್ಚಿತ್ತಂ ಪ್ರಸಿಚ್ಯತಿ||

ನಾನು ಒಳ್ಳೆಯಕುಲದಲ್ಲಿ ಹುಟ್ಟಿದ್ದೇನೆ, ನಾನು ಎಲ್ಲವನ್ನೂ ಸಾಧಿಸಿದ್ದೇನೆ ಮತ್ತು ನಾನು ಸಾಧಾರಣ ಮನುಷ್ಯನಲ್ಲ ಎಂಬ ಈ ಮೂರು ಅಹಂಕಾರಗುಣಗಳು ಮನುಷ್ಯನ ಚಿತ್ತವನ್ನು ತೋಯಿಸಿಬಿಡುತ್ತವೆ.

12028008a ಸ ಪ್ರಸಿಕ್ತಮನಾ ಭೋಗಾನ್ವಿಸೃಜ್ಯ ಪಿತೃಸಂಚಿತಾನ್|

12028008c ಪರಿಕ್ಷೀಣಃ ಪರಸ್ವಾನಾಮಾದಾನಂ ಸಾಧು ಮನ್ಯತೇ||

ಭೋಗಗಳಲ್ಲಿಯೇ ಮನಸ್ಸನ್ನು ತೊಡಗಿಸಿಕೊಂಡು ಪಿತೃಸಂಚಿತ ಸಂಪತ್ತು ಮುಗಿದುಹೋಗಲು ಪರರ ಸ್ವತ್ತನ್ನು ಕಿತ್ತುಕೊಳ್ಳುವುದೇ ಸರಿಯೆಂದು ಭಾವಿಸುತ್ತಾನೆ.

12028009a ತಮತಿಕ್ರಾಂತಮರ್ಯಾದಮಾದದಾನಮಸಾಂಪ್ರತಮ್|

12028009c ಪ್ರತಿಷೇಧಂತಿ ರಾಜಾನೋ ಲುಬ್ಧಾ ಮೃಗಮಿವೇಷುಭಿಃ||

ಮರ್ಯಾದೆಗಳನ್ನು ಮೀರಿ ಇತರರ ಸ್ವತ್ತನ್ನು ಅಪಹರಿಸುವ ಆ ಲುಬ್ಧರನ್ನು ರಾಜನು ಮೃಗಗಳನ್ನು ಬಾಣಗಳಿಂದ ಹೇಗೋ ಹಾಗೆ ಬೇಟೆಯಾಡಿ ವಿರೋಧಿಸುತ್ತಾನೆ.

12028010a ಯೇ ಚ ವಿಂಶತಿವರ್ಷಾ ವಾ ತ್ರಿಂಶದ್ವರ್ಷಾಶ್ಚ ಮಾನವಾಃ|

12028010c ಪರೇಣ ತೇ ವರ್ಷಶತಾನ್ನ ಭವಿಷ್ಯಂತಿ ಪಾರ್ಥಿವ||

ಪಾರ್ಥಿವ! ಇಪ್ಪತ್ತು ಅಥವಾ ಮೂವತ್ತು ವರ್ಷಗಳ ಇಂತಹ ಯುವಕರು ನೂರು ವರ್ಷಗಳ ಪರ್ಯಂತ ಜೀವಿಸುವುದಿಲ್ಲ.

12028011a ತೇಷಾಂ ಪರಮದುಃಖಾನಾಂ ಬುದ್ಧ್ಯಾ ಭೇಷಜಮಾದಿಶೇತ್|

12028011c ಸರ್ವಪ್ರಾಣಭೃತಾಂ ವೃತ್ತಂ ಪ್ರೇಕ್ಷಮಾಣಸ್ತತಸ್ತತಃ||

ಹೀಗೆ ಎಲ್ಲ ಪ್ರಾಣಿಗಳ ವ್ಯವಹಾರಗಳನ್ನೂ ಅಲ್ಲಲ್ಲಿ ನೋಡುತ್ತಾ ಅವರ ಪರಮದುಃಖಗಳಿಗೆ ಬುದ್ಧಿಯಿಂದ ಯೋಚಿಸಿ ಚಿಕಿತ್ಸೆಗಳನ್ನು ನಡೆಸಬೇಕು.

12028012a ಮಾನಸಾನಾಂ ಪುನರ್ಯೋನಿರ್ದುಃಖಾನಾಂ ಚಿತ್ತವಿಭ್ರಮಃ|

12028012c ಅನಿಷ್ಟೋಪನಿಪಾತೋ ವಾ ತೃತೀಯಂ ನೋಪಪದ್ಯತೇ||

ಮಾನಸಿಕ ದುಃಖಗಳಿಗೆ ಬುದ್ಧಿಭ್ರಮೆ ಮತ್ತು ಅನಿಷ್ಟಗಳೆಂಬ ಎರಡು ಕಾರಣಗಳಿವೆ. ಮೂರನೆಯ ಯಾವುದೇ ಕಾರಣವೂ ಇರುವುದಿಲ್ಲ.

12028013a ಏವಮೇತಾನಿ ದುಃಖಾನಿ ತಾನಿ ತಾನೀಹ ಮಾನವಮ್|

12028013c ವಿವಿಧಾನ್ಯುಪವರ್ತಂತೇ ತಥಾ ಸಾಂಸ್ಪರ್ಶಕಾನಿ ಚ||

ಇವೇ ಮೊದಲಾದ ದುಃಖಗಳು ಮಾನವನನ್ನು ಆವರಿಸುತ್ತಿರುತ್ತವೆ. ಹಾಗೆಯೇ ವಿಷಯಾಸಕ್ತಿಗಳಿಂದಲೂ ದುಃಖಗಳು ಪ್ರಾಪ್ತವಾಗುತ್ತವೆ.

12028014a ಜರಾಮೃತ್ಯೂ ಹ ಭೂತಾನಿ ಖಾದಿತಾರೌ ವೃಕಾವಿವ|

12028014c ಬಲಿನಾಂ ದುರ್ಬಲಾನಾಂ ಚ ಹ್ರಸ್ವಾನಾಂ ಮಹತಾಮಪಿ||

ಮುಪ್ಪು ಮತ್ತು ಸಾವು ಎನ್ನುವವು ಪ್ರಾಣಿಗಳನ್ನು ತಿನ್ನುವಂಥಹ ತೋಳಗಳಂತೆ. ಅವು ಬಲಶಾಲಿಗಳನ್ನೂ, ದುರ್ಬಲರನ್ನೂ, ಸಣ್ಣವರನ್ನೂ ಮತ್ತು ದೊಡ್ಡವರನ್ನೂ ತಿನ್ನುತ್ತವೆ.

12028015a ನ ಕಶ್ಚಿಜ್ಜಾತ್ವತಿಕ್ರಾಮೇಜ್ಜರಾಮೃತ್ಯೂ ಹ ಮಾನವಃ|

12028015c ಅಪಿ ಸಾಗರಪರ್ಯಂತಾಂ ವಿಜಿತ್ಯೇಮಾಂ ವಸುಂಧರಾಮ್||

ಸಾಗರ ಪರ್ಯಂತವಾದ ಈ ಭೂಮಿಯನ್ನು ಜಯಿಸಿದರೂ, ಜರಾಮೃತ್ಯುಗಳನ್ನು ಜಯಿಸಲು ಯಾವ ಮನುಷ್ಯನಿಗೂ ಸಾಧ್ಯವಿಲ್ಲ.

12028016a ಸುಖಂ ವಾ ಯದಿ ವಾ ದುಃಖಂ ಭೂತಾನಾಂ ಪರ್ಯುಪಸ್ಥಿತಮ್|

12028016c ಪ್ರಾಪ್ತವ್ಯಮವಶೈಃ ಸರ್ವಂ ಪರಿಹಾರೋ ನ ವಿದ್ಯತೇ||

ಕಾಲ-ಕರ್ಮ ಸಂಯೋಗದಿಂದ ಪ್ರಾಪ್ತವಾಗುವ ಸುಖ-ದುಃಖಗಳೆಲ್ಲವನ್ನೂ ಪ್ರಾಣಿಗಳು ಅವಶ್ಯವಾಗಿ ಅನುಭವಿಸಬೇಕೇ ಹೊರತು ಅವುಗಳಿಗೆ ಯಾವ ಪರಿಹಾರವೂ ಇಲ್ಲ.

12028017a ಪೂರ್ವೇ ವಯಸಿ ಮಧ್ಯೇ ವಾಪ್ಯುತ್ತಮೇ ವಾ ನರಾಧಿಪ|

12028017c ಅವರ್ಜನೀಯಾಸ್ತೇಽರ್ಥಾ ವೈ ಕಾಂಕ್ಷಿತಾಶ್ಚ ತತೋಽನ್ಯಥಾ||

ನರಾಧಿಪ! ಮನುಷ್ಯನಿಗೆ ಪೂರ್ವ ವಯಸ್ಸಿನಲ್ಲಿ, ಅಥವಾ ಮಧ್ಯ ವಯಸ್ಸಿನಲ್ಲಿ ಅಥವಾ ಮುಪ್ಪಿನಲ್ಲಿಯಾಗಲೀ ಈ ಸುಖ-ದುಃಖಗಳನ್ನು ತ್ಯಜಿಸಲು ಸಾಧ್ಯವಿಲ್ಲ. ಅನುಭವಿಸಬೇಕೇ ಹೊರತು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

12028018a ಸುಪ್ರಿಯೈರ್ವಿಪ್ರಯೋಗಶ್ಚ ಸಂಪ್ರಯೋಗಸ್ತಥಾಪ್ರಿಯೈಃ|

12028018c ಅರ್ಥಾನರ್ಥೌ ಸುಖಂ ದುಃಖಂ ವಿಧಾನಮನುವರ್ತತೇ||

ಅತ್ಯಂತ ಪ್ರಿಯರಾದವರಿಂದ ವಿಯೋಗ, ಅಪ್ರಿಯರೊಡನೆ ಸಹವಾಸ, ಧನಪ್ರಾಪ್ತಿ, ಧನನಷ್ಟ, ಮತ್ತು ಸುಖ-ದುಃಖಗಳು ಅವರವರ ಪ್ರಾರಬ್ಧವನ್ನು ಅನುಸರಿಸಿ ಬರುತ್ತಲೇ ಇರುತ್ತವೆ.

12028019a ಪ್ರಾದುರ್ಭಾವಶ್ಚ ಭೂತಾನಾಂ ದೇಹನ್ಯಾಸಸ್ತಥೈವ ಚ|

12028019c ಪ್ರಾಪ್ತಿವ್ಯಾಯಾಮಯೋಗಶ್ಚ ಸರ್ವಮೇತತ್ಪ್ರತಿಷ್ಠಿತಮ್||

ಪ್ರಾಣಿಗಳ ಹುಟ್ಟು-ಸಾವುಗಳೂ ಲಾಭಾಲಾಭಗಳೂ ಎಲ್ಲವೂ ಅವರವರು ಪಡೆದುಕೊಂಡು ಬಂದಿರುವ ಪ್ರಾರಬ್ಧಕರ್ಮಫಲಗಳಲ್ಲಿಯೇ ಪ್ರತಿಷ್ಠಿತವಾಗಿರುತ್ತವೆ.

12028020a ಗಂಧವರ್ಣರಸಸ್ಪರ್ಶಾ ನಿವರ್ತಂತೇ ಸ್ವಭಾವತಃ|

12028020c ತಥೈವ ಸುಖದುಃಖಾನಿ ವಿಧಾನಮನುವರ್ತತೇ||

ಗಂಧ-ವರ್ಣ-ರಸ-ಸ್ಪರ್ಶಗಳು ಸ್ವಾಭಾವಿಕವಾಗಿ ಬಂದು-ಹೋಗುತ್ತಲೇ ಇರುತ್ತವೆ. ಹಾಗೆಯೇ ಸುಖದುಃಖಗಳು ಕರ್ಮಫಲಾನುಸಾರವಾಗಿ ದೈವ ನಿಯಮವನ್ನನುಸರಿಸಿ ಬಂದು-ಹೋಗುತ್ತಿರುತ್ತವೆ.

12028021a ಆಸನಂ ಶಯನಂ ಯಾನಮುತ್ಥಾನಂ ಪಾನಭೋಜನಮ್|

12028021c ನಿಯತಂ ಸರ್ವಭೂತಾನಾಂ ಕಾಲೇನೈವ ಭವಂತ್ಯುತ||

ಸರ್ವಪ್ರಾಣಿಗಳಿಗೂ ಕುಳಿತುಕೊಳ್ಳುವ, ಮಲಗುವ, ತಿರುಗಾಡುವ, ಏಳುವ, ಮತ್ತು ಪಾನ-ಭೋಜನಗಳ ಕಾಲವು ನಿಯತವಾಗಿರುತ್ತದೆ.

12028022a ವೈದ್ಯಾಶ್ಚಾಪ್ಯಾತುರಾಃ ಸಂತಿ ಬಲವಂತಃ ಸುದುರ್ಬಲಾಃ|

12028022c ಸ್ತ್ರೀಮಂತಶ್ಚ ತಥಾ ಷಂಢಾ ವಿಚಿತ್ರಃ ಕಾಲಪರ್ಯಯಃ||

ವೈದ್ಯರೂ ರೋಗಿಗಳಾಗುತ್ತಾರೆ. ಬಲಿಷ್ಠರೂ ದುರ್ಬಲರಾಗುತ್ತಾರೆ. ಸ್ತ್ರೀಸಂಗಗಳನ್ನು ಹೊಂದಿದವರೂ ಷಂಢರಾಗುತ್ತಾರೆ. ಕಾಲದ ವೈಪರೀತ್ಯವು ಹೀಗೆ ವಿಚಿತ್ರವಾದುದು.

12028023a ಕುಲೇ ಜನ್ಮ ತಥಾ ವೀರ್ಯಮಾರೋಗ್ಯಂ ಧೈರ್ಯಮೇವ ಚ|

12028023c ಸೌಭಾಗ್ಯಮುಪಭೋಗಶ್ಚ ಭವಿತವ್ಯೇನ ಲಭ್ಯತೇ||

ಉತ್ತಮ ಕುಲದಲ್ಲಿ ಜನ್ಮ, ವೀರ್ಯ, ಆರೋಗ್ಯ, ಧೈರ್ಯ, ಸೌಭಾಗ್ಯ ಮತ್ತು ಉಪಭೋಗಗಳು ಅದೃಷ್ಟದಿಂದಲೇ ಲಭ್ಯವಾಗುತ್ತವೆ.

12028024a ಸಂತಿ ಪುತ್ರಾಃ ಸುಬಹವೋ ದರಿದ್ರಾಣಾಮನಿಚ್ಚತಾಮ್|

12028024c ಬಹೂನಾಮಿಚ್ಚತಾಂ ನಾಸ್ತಿ ಸಮೃದ್ಧಾನಾಂ ವಿಚೇಷ್ಟತಾಮ್||

ಮಕ್ಕಳೇ ಬೇಡವೆನ್ನುವ ದರಿದ್ರನಿಗೆ ಅನೇಕ ಮಕ್ಕಳಾಗುತ್ತಾರೆ. ಮಕ್ಕಳಾಗಬೇಕೆಂದು ಹಂಬಲಿಸುವ ಶ್ರೀಮಂತನಿಗೆ ಮಕ್ಕಳೇ ಆಗುವುದಿಲ್ಲ. ವಿಧಿಯು ವಿಚಿತ್ರವಾದುದು.

12028025a ವ್ಯಾಧಿರಗ್ನಿರ್ಜಲಂ ಶಸ್ತ್ರಂ ಬುಭುಕ್ಷಾ ಶ್ವಾಪದಂ ವಿಷಮ್|

12028025c ರಜ್ಜ್ವಾ ಚ ಮರಣಂ ಜಂತೋರುಚ್ಚಾಚ್ಚ ಪತನಂ ತಥಾ||

ವ್ಯಾಧಿ, ಅಗ್ನಿ, ನೀರು, ಶಸ್ತ್ರ, ಹಸಿವು, ಅಪಘಾತ, ವಿಷಜ್ವರ, ಬೀಳುವುದು ಇವೇ ಪ್ರಾಣಿಗಳ ಮರಣಕ್ಕೆ ಮುಖ್ಯ ಕಾರಣಗಳಾಗಿರುತ್ತವೆ.

12028026a ನಿರ್ಯಾಣಂ ಯಸ್ಯ ಯದ್ದಿಷ್ಟಂ ತೇನ ಗಚ್ಚತಿ ಹೇತುನಾ|

12028026c ದೃಶ್ಯತೇ ನಾಭ್ಯತಿಕ್ರಾಮನ್ನತಿಕ್ರಾಂತೋ ನ ವಾ ಪುನಃ||

ಯಾರ ಅದೃಷ್ಟದಲ್ಲಿ ಯಾವ ಕಾರಣದಿಂದ ಮರಣಹೊಂದಬೇಕೆಂದಿರುತ್ತದೆಯೋ ಅದೇ ರೀತಿಯಲ್ಲಿ ಮರಣ ಹೊಂದುತ್ತಾರೆ. ಕೆಲವೊಮ್ಮೆ ಧರ್ಮಗಳನ್ನು ಉಲ್ಲಂಘಿಸದೇ ಇರತಕ್ಕವನೂ ಆಪತ್ತಿನಿಂದ ಪಾರಾಗದೇ ಇರುವುದನ್ನು ಕಾಣುತ್ತೇವೆ.

12028027a ದೃಶ್ಯತೇ ಹಿ ಯುವೈವೇಹ ವಿನಶ್ಯನ್ವಸುಮಾನ್ನರಃ|

12028027c ದರಿದ್ರಶ್ಚ ಪರಿಕ್ಲಿಷ್ಟಃ ಶತವರ್ಷೋ ಜನಾಧಿಪ||

ಜನಾಧಿಪ! ಐಶ್ವರ್ಯವಂತನಾದವನು ಯುವಕನಾಗಿರುವಾಗಲೇ ಸತ್ತುಹೋಗುವುದನ್ನು ಮತ್ತು ದರಿದ್ರನಾಗಿ ಕಷ್ಟದಲ್ಲಿರುವವನು ನೂರುವರ್ಷಗಳು ಬದುಕಿರುವುದನ್ನು ನೋಡುತ್ತೇವೆ.

12028028a ಅಕಿಂಚನಾಶ್ಚ ದೃಶ್ಯಂತೇ ಪುರುಷಾಶ್ಚಿರಜೀವಿನಃ|

12028028c ಸಮೃದ್ಧೇ ಚ ಕುಲೇ ಜಾತಾ ವಿನಶ್ಯಂತಿ ಪತಂಗವತ್||

ಯಾರಲ್ಲಿ ಏನೂ ಇರುವುದಿಲ್ಲವೋ ಅಂಥಹ ದರಿದ್ರ ಜನರು ಬಹುಕಾಲ ಬಾಳುತ್ತಾರೆ. ಶ್ರೀಮಂತ ಕುಲದಲ್ಲಿ ಹುಟ್ಟಿದವರು ಪತಂಗಗಳಂತೆ ನಾಶಹೊಂದುತ್ತಾರೆ.

12028029a ಪ್ರಾಯೇಣ ಶ್ರೀಮತಾಂ ಲೋಕೇ ಭೋಕ್ತುಂ ಶಕ್ತಿರ್ನ ವಿದ್ಯತೇ|

12028029c ಕಾಷ್ಠಾನ್ಯಪಿ ಹಿ ಜೀರ್ಯಂತೇ ದರಿದ್ರಾಣಾಂ ನರಾಧಿಪ||

ನರಾಧಿಪ! ಲೋಕದಲ್ಲಿ ಶ್ರೀಮಂತರಿಗೆ ಬಹುಷಃ ಭೋಗಿಸುವ ಶಕ್ತಿಯೇ ಇರುವುದಿಲ್ಲ. ಆದರೆ ದರಿದ್ರನಿಗೆ ಕಟ್ಟಿಗೆಯನ್ನೂ ಜೀರ್ಣಿಸಿಕೊಳ್ಳುವ ಶಕ್ತಿಯಿರುತ್ತದೆ.

12028030a ಅಹಮೇತತ್ಕರೋಮೀತಿ ಮನ್ಯತೇ ಕಾಲಚೋದಿತಃ|

12028030c ಯದ್ಯದಿಷ್ಟಮಸಂತೋಷಾದ್ದುರಾತ್ಮಾ ಪಾಪಮಾಚರನ್||

ಕಾಲಚೋದಿತ ಮನುಷ್ಯನು ನಾನೇ ಇದನ್ನು ಮಾಡುತ್ತೇನೆ ಎಂದು ಭಾವಿಸಿಕೊಳ್ಳುತ್ತಾನೆ. ತನಗಿಲ್ಲವೆಂಬ ಅಸಂತೋಷದಿಂದ ದುರಾತ್ಮನು ಪಾಪಕರ್ಮಗಳನ್ನೆಸಗುತ್ತಾನೆ.

12028031a ಸ್ತ್ರಿಯೋಽಕ್ಷಾ ಮೃಗಯಾ ಪಾನಂ ಪ್ರಸಂಗಾನ್ನಿಂದಿತಾ ಬುಧೈಃ|

12028031c ದೃಶ್ಯಂತೇ ಚಾಪಿ ಬಹವಃ ಸಂಪ್ರಸಕ್ತಾ ಬಹುಶ್ರುತಾಃ||

ಸ್ತ್ರೀಸಂಗ, ದ್ಯೂತ, ಬೇಟೆ, ಸುರಾಪಾನ ಇವುಗಳು ಕೆಟ್ಟ ಹವ್ಯಾಸಗಳೆಂದು ತಿಳಿದವರು ನಿಂದಿಸುತ್ತಾರೆ. ಆದರೆ ತಿಳಿದವರೇ ಹೆಚ್ಚಾಗಿ ಇವುಗಳಲ್ಲಿ ತೊಡಗಿರುವುದನ್ನು ನಾವು ಕಾಣುತ್ತೇವೆ!

12028032a ಇತಿ ಕಾಲೇನ ಸರ್ವಾರ್ಥಾನೀಪ್ಸಿತಾನೀಪ್ಸಿತಾನಿ ಚ|

12028032c ಸ್ಪೃಶಂತಿ ಸರ್ವಭೂತಾನಿ ನಿಮಿತ್ತಂ ನೋಪಲಭ್ಯತೇ||

ಹೀಗೆ ಕಾಲದ ಪ್ರಭಾವದಿಂದಲೇ ಜೀವಿಗಳು – ಇಷ್ಟವಾದವುಗಳು ಮತ್ತು ಇಷ್ಟವಲ್ಲದವುಗಳು – ಎಲ್ಲವನ್ನೂ ಅವರವರ ಅದೃಷ್ಟದ ಪ್ರಕಾರ ಪಡೆಯುತ್ತವೆ. 

12028033a ವಾಯುಮಾಕಾಶಮಗ್ನಿಂ ಚ ಚಂದ್ರಾದಿತ್ಯಾವಹಃಕ್ಷಪೇ|

12028033c ಜ್ಯೋತೀಂಷಿ ಸರಿತಃ ಶೈಲಾನ್ಕಃ ಕರೋತಿ ಬಿಭರ್ತಿ ವಾ||

ವಾಯು, ಆಕಾಶ, ಅಗ್ನಿ, ಚಂದ್ರಾದಿತ್ಯರು, ಹಗಲು-ರಾತ್ರಿಗಳು, ನಕ್ಷತ್ರಗಳು ಮತ್ತು ನದೀ-ಪರ್ವತಗಳನ್ನು ಕಾಲವಲ್ಲದೇ ಇನ್ನ್ಯಾರು ಸೃಷ್ಟಿಸುತ್ತಾರೆ? ಬೇರೆ ಯಾರು ಇವುಗಳನ್ನು ಹೊರುತ್ತಾರೆ?

12028034a ಶೀತಮುಷ್ಣಂ ತಥಾ ವರ್ಷಂ ಕಾಲೇನ ಪರಿವರ್ತತೇ|

12028034c ಏವಮೇವ ಮನುಷ್ಯಾಣಾಂ ಸುಖದುಃಖೇ ನರರ್ಷಭ||

ನರರ್ಷಭ! ಛಳಿ-ಬೇಸಗೆ-ಮಳೆಗಾಲಗಳು ಕಾಲದ ಪ್ರಭಾವದಿಂದಲೇ ಬದಲಾಗುತ್ತಿರುತ್ತವೆ. ಹಾಗೆಯೇ ಮನುಷ್ಯರ ಸುಖ-ದುಃಖಗಳೂ ಬದಲಾಗುತ್ತಿರುತ್ತವೆ.

12028035a ನೌಷಧಾನಿ ನ ಶಾಸ್ತ್ರಾಣಿ ನ ಹೋಮಾ ನ ಪುನರ್ಜಪಾಃ|

12028035c ತ್ರಾಯಂತೇ ಮೃತ್ಯುನೋಪೇತಂ ಜರಯಾ ವಾಪಿ ಮಾನವಮ್||

ಔಷಧಗಳಾಗಲೀ, ಶಾಸ್ತ್ರಗಳಾಗಲೀ, ಹೋಮಗಳಾಗಲೀ ಅಥವಾ ಪುನಃ ಜಪಗಳಾಗಲೀ ಮಾನವನನ್ನು ಮೃತ್ಯುವಿನಿಂದಾಗಲೀ ಮುಪ್ಪಿನಿಂದಾಗಲೀ ರಕ್ಷಿಸುವುದಿಲ್ಲ.

12028036a ಯಥಾ ಕಾಷ್ಠಂ ಚ ಕಾಷ್ಠಂ ಚ ಸಮೇಯಾತಾಂ ಮಹೋದಧೌ|

12028036c ಸಮೇತ್ಯ ಚ ವ್ಯತೀಯಾತಾಂ ತದ್ವದ್ಭೂತಸಮಾಗಮಃ||

ಮಹಾಸಾಗರದಲ್ಲಿ ಹೇಗೆ ಒಂದು ಕಟ್ಟಿಗೆಯ ತುಂಡು ತೇಲಿಕೊಂಡು ಬಂದು ಇನ್ನೊಂದು ಕಟ್ಟಿಗೆಯ ತುಂಡನ್ನು ಸೇರಿ ಪುನಃ ದೂರ ತೇಲಿಕೊಂಡು ಹೋಗುವುದೋ ಹಾಗೆಯೇ ಜೀವಿಗಳ ಸಮಾಗಮವೂ ಕೂಡ ಕ್ಷಣಿಕವಾಗಿರುತ್ತದೆ.

12028037a ಯೇ ಚಾಪಿ ಪುರುಷೈಃ ಸ್ತ್ರೀಭಿರ್ಗೀತವಾದ್ಯೈರುಪಸ್ಥಿತಾಃ|

12028037c ಯೇ ಚಾನಾಥಾಃ ಪರಾನ್ನಾದಾಃ ಕಾಲಸ್ತೇಷು ಸಮಕ್ರಿಯಃ||

ಸ್ತ್ರೀಯರೊಡನೆ ಗೀತ-ವಾದ್ಯಗಳಿಂದ ಆನಂದಿತರಾಗಿರುವ ಪುರುಷರು ಮತ್ತು ಅನಾಥರಾಗಿ ಪರಾನ್ನವನ್ನೇ ತಿಂದು ಜೀವಿಸುವ ಪುರುಷರು ಇವರೊಬ್ಬಡನೆಯೂ ಕಾಲವು ಒಂದೇ ಸಮನಾಗಿ ವರ್ತಿಸುತ್ತದೆ[1].

12028038a ಮಾತೃಪಿತೃಸಹಸ್ರಾಣಿ ಪುತ್ರದಾರಶತಾನಿ ಚ|

12028038c ಸಂಸಾರೇಷ್ವನುಭೂತಾನಿ ಕಸ್ಯ ತೇ ಕಸ್ಯ ವಾ ವಯಮ್||

ಈ ಸಂಸಾರದಲ್ಲಿ ನಾವು ಅನೇಕಾನೇಕ ಸಹಸ್ರ ತಾಯಿ-ತಂದೆಯರನ್ನೂ, ಪತ್ನಿ-ಮಕ್ಕಳನ್ನೂ ಪಡೆದಿರುತ್ತೇವೆ. ಆದರೆ ಇಂದು ಅವರು ಯಾರಿಗೆ ಸಂಬಂಧಪಟ್ಟವರು? ಅಥವಾ ನಾವು ಯಾರಿಗೆ ಸಂಬಂಧಿಸಿದವರು?

12028039a ನೈವಾಸ್ಯ ಕಶ್ಚಿದ್ಭವಿತಾ ನಾಯಂ ಭವತಿ ಕಸ್ಯ ಚಿತ್|

12028039c ಪಥಿ ಸಂಗತಮೇವೇದಂ ದಾರಬಂಧುಸುಹೃದ್ಗಣೈಃ||

ನಾವು ಯಾರದ್ದೂ ಆಗಿರುವುದಿಲ್ಲ. ಯಾರೂ ನಮ್ಮವರಾಗಿರುವುದಿಲ್ಲ. ಈ ಪತ್ನಿ-ಬಂಧು-ಸ್ನೇಹಿತ ಗಣಗಳು ದಾರಿಯಲ್ಲಿ ಸಿಗುವ ದಾರಿಹೋಕರು ಅಷ್ಟೆ!

12028040a ಕ್ವಾಸಂ ಕ್ವಾಸ್ಮಿ ಗಮಿಷ್ಯಾಮಿ ಕೋ ನ್ವಹಂ ಕಿಮಿಹಾಸ್ಥಿತಃ|

12028040c ಕಸ್ಮಾತ್ಕಮನುಶೋಚೇಯಮಿತ್ಯೇವಂ ಸ್ಥಾಪಯೇನ್ಮನಃ||

12028040e ಅನಿತ್ಯೇ ಪ್ರಿಯಸಂವಾಸೇ ಸಂಸಾರೇ ಚಕ್ರವದ್ಗತೌ||

“ನಾನು ಯಾರು? ಎಲ್ಲಿಗೆ ಹೋಗುತ್ತಿದ್ದೇನೆ? ನಾನು ಯಾರವನು? ಇಲ್ಲಿಗೇಕೆ ಬಂದಿದ್ದೇನೆ? ಯಾರಿಗೋಸ್ಕರ ಚಿಂತಿಸುತ್ತಿದ್ದೇನೆ?” ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತಿರಬೇಕು. ಚಕ್ರದಂತೆ ತಿರುಗುತ್ತಿರುವ ಈ ಸಂಸಾರದಲ್ಲಿ ಪ್ರಿಯವಾದುದನ್ನು ಪಡೆಯುವ ಅಥವಾ ಪ್ರಿಯರೊಡನೆ ಸೇರುವ ಕ್ರಿಯೆಗಳು ಅನಿತ್ಯವಾದವು. ಶಾಶ್ವತವಾದವುಗಳಲ್ಲ.

12028041a ನ ದೃಷ್ಟಪೂರ್ವಂ ಪ್ರತ್ಯಕ್ಷಂ ಪರಲೋಕಂ ವಿದುರ್ಬುಧಾಃ|

12028041c ಆಗಮಾಂಸ್ತ್ವನತಿಕ್ರಮ್ಯ ಶ್ರದ್ಧಾತವ್ಯಂ ಬುಭೂಷತಾ||

ಪರಲೋಕವು ಪ್ರತ್ಯಕ್ಷದಲ್ಲಿಲ್ಲ. ಪರಲೋಕವನ್ನು ನೋಡಿದವರು ಯಾರೂ ಇಲ್ಲ ಎನ್ನುವುದನ್ನು ತಿಳಿದವರು ಹೇಳುತ್ತಾರೆ. ಆದರೆ ಆಗಮಗಳನ್ನು ಉಲ್ಲಂಘಿಸದೇ ಅವುಗಳಲ್ಲಿ ಶ್ರದ್ಧೆಯನ್ನಿಡಬೇಕು.

12028042a ಕುರ್ವೀತ ಪಿತೃದೈವತ್ಯಂ ಧರ್ಮಾಣಿ ಚ ಸಮಾಚರೇತ್|

12028042c ಯಜೇಚ್ಚ ವಿದ್ವಾನ್ವಿಧಿವತ್ತ್ರಿವರ್ಗಂ ಚಾಪ್ಯನುವ್ರಜೇತ್||

ವಿದ್ವಾನನು ಪಿತೃ-ದೇವಕಾರ್ಯಗಳನ್ನು ಮತ್ತು ಯಜ್ಞಗಳನ್ನು – ಈ ಮೂರು ವಿಧದ ಕರ್ಮಗಳನ್ನು ವಿಧಿವತ್ತಾಗಿ ನಡೆಸುತ್ತಿರಬೇಕು.

12028043a ಸಂನಿಮಜ್ಜಜ್ಜಗದಿದಂ ಗಂಭೀರೇ ಕಾಲಸಾಗರೇ|

12028043c ಜರಾಮೃತ್ಯುಮಹಾಗ್ರಾಹೇ ನ ಕಶ್ಚಿದವಬುಧ್ಯತೇ||

ಮುಪ್ಪು-ಮರಣಗಳೆಂಬ ಮೊಸಳೆಗಳಿಂದ ಕೂಡಿರುವ ಗಂಭೀರ ಸಮುದ್ರದಂತಿರುವ ಈ ಕಾಲದಲ್ಲಿ ಜಗತ್ತೆಲ್ಲವೂ ಮುಳುಗಿಹೋಗಿದೆ. ಆದರೆ ಯಾರೂ ಇದನ್ನು ತಿಳಿದುಕೊಳ್ಳುವುದಿಲ್ಲ!

12028044a ಆಯುರ್ವೇದಮಧೀಯಾನಾಃ ಕೇವಲಂ ಸಪರಿಗ್ರಹಮ್|

12028044c ದೃಶ್ಯಂತೇ ಬಹವೋ ವೈದ್ಯಾ ವ್ಯಾಧಿಭಿಃ ಸಮಭಿಪ್ಲುತಾಃ||

ಆಯುರ್ವೇದವನ್ನು ಅಧ್ಯಯನ ಮಾಡಿರುವ ಅನೇಕ ವೈದ್ಯರು ಪರಿವಾರ ಸಮೇತರಾಗಿ ನಾನಾ ವ್ಯಾಧಿಗಳಿಗೆ ತುತ್ತಾಗಿರುವುದನ್ನು ಕಾಣುತ್ತೇವೆ.

12028045a ತೇ ಪಿಬಂತಃ ಕಷಾಯಾಂಶ್ಚ ಸರ್ಪೀಂಷಿ ವಿವಿಧಾನಿ ಚ|

12028045c ನ ಮೃತ್ಯುಮತಿವರ್ತಂತೇ ವೇಲಾಮಿವ ಮಹೋದಧಿಃ||

ಅವರು ವಿವಿಧ ಕಷಾಯಗಳನ್ನೂ ಲೇಹಗಳನ್ನೂ ಸೇವಿಸುತ್ತಲೇ ಇರುತ್ತಾರೆ. ಆದರೂ ಸಮುದ್ರವು ಎಷ್ಟೇ ಪ್ರಯತ್ನಿಸಿದರೂ ತೀರವನ್ನು ಉಲ್ಲಂಘಿಸದಂತೆ ಅವರು ಮೃತ್ಯುವನ್ನು ಮೀರಲಾರರು.

12028046a ರಸಾಯನವಿದಶ್ಚೈವ ಸುಪ್ರಯುಕ್ತರಸಾಯನಾಃ|

12028046c ದೃಶ್ಯಂತೇ ಜರಯಾ ಭಗ್ನಾ ನಗಾ ನಾಗೈರಿವೋತ್ತಮೈಃ||

ರಸಾಯನ ಶಾಸ್ತ್ರವನ್ನು ತಿಳಿದವರೂ ಕೂಡ ಉಪಯುಕ್ತ ರಸಾಯನಪದಾರ್ಥಗಳನ್ನು ಸೇವಿಸಿದರೂ ಬಲಿಷ್ಠ ಆನೆಯಿಂದ ಮುರಿಯಲ್ಪಟ್ಟ ವೃಕ್ಷದಂತೆ ಮುಪ್ಪಿನಿಂದ ಮುರಿಯಲ್ಪಟ್ಟು ಬೀಳುತ್ತಾರೆ.

12028047a ತಥೈವ ತಪಸೋಪೇತಾಃ ಸ್ವಾಧ್ಯಾಯಾಭ್ಯಸನೇ ರತಾಃ|

12028047c ದಾತಾರೋ ಯಜ್ಞಶೀಲಾಶ್ಚ ನ ತರಂತಿ ಜರಾಂತಕೌ||

ಹಾಗೆಯೇ ತಪಸ್ಸಿನಿಂದ ಕೂಡಿ ಸ್ವಾಧ್ಯಾಯ-ಅಭ್ಯಾಸಗಳಲ್ಲಿ ನಿರತರಾದವರೂ, ದಾನಗಳನ್ನಿತ್ತವರೂ ಮತ್ತು ಯಜ್ಞಶೀಲರೂ ಕೂಡ ಮುಪ್ಪು-ಮರಣಗಳನ್ನು ಮೀರುವುದಿಲ್ಲ.

12028048a ನ ಹ್ಯಹಾನಿ ನಿವರ್ತಂತೇ ನ ಮಾಸಾ ನ ಪುನಃ ಸಮಾಃ|

12028048c ಜಾತಾನಾಂ ಸರ್ವಭೂತಾನಾಂ ನ ಪಕ್ಷಾ ನ ಪುನಃ ಕ್ಷಪಾಃ||

ಹುಟ್ಟಿದ ಎಲ್ಲ ಪ್ರಾಣಿಗಳಿಗೂ ಕಳೆದುಹೋದ ದಿನಗಳಾಗಲೀ, ರಾತ್ರಿಗಳಾಗಲೀ, ಮಾಸಗಳಾಗಲೀ, ಪಕ್ಷಗಳಾಗಲೀ, ವರ್ಷಗಳಾಗಲೀ ಪುನಃ ಮರಳಿ ಬರುವುದಿಲ್ಲ.

12028049a ಸೋಽಯಂ ವಿಪುಲಮಧ್ವಾನಂ ಕಾಲೇನ ಧ್ರುವಮಧ್ರುವಃ|

12028049c ನರೋಽವಶಃ ಸಮಭ್ಯೇತಿ ಸರ್ವಭೂತನಿಷೇವಿತಮ್||

ಅಸ್ಥಿರನಾದ ಅಸ್ವತಂತ್ರನಾದ ಮನುಷ್ಯನು ಕಾಲವು ಸನ್ನಿಹಿತವಾದೊಡನೆಯೇ ಸರ್ವಪ್ರಾಣಿಗಳೂ ಹೋಗುವ ಶಾಶ್ವತವಾದ ವಿಶಾಲ ಮೃತ್ಯುಪಥದಲ್ಲಿ ಹೋಗುತ್ತಾನೆ.

12028050a ದೇಹೋ ವಾ ಜೀವತೋಽಭ್ಯೇತಿ ಜೀವೋ ವಾಭ್ಯೇತಿ ದೇಹತಃ|

12028050c ಪಥಿ ಸಂಗತಮೇವೇದಂ ದಾರೈರನ್ಯೈಶ್ಚ ಬಂಧುಭಿಃ||

ದೇಹವೇ ಜೀವವೆಂದು ತಿಳಿದುಕೊಂಡಿರುವವರು ಅಥವಾ ಜೀವವೇ ದೇಹವೆಂದು ತಿಳಿದುಕೊಂಡಿರುವವರು ಇಬ್ಬರೂ ಕೂಡ ದಾರಿಯಲ್ಲಿ ಪತ್ನಿಯೇ ಮೊದಲಾದ ಬಂಧುಗಳೊಡನೆ ಸೇರಿಕೊಂಡು ಸ್ವಲ್ಪಕಾಲವೇ ಇರುತ್ತಾರೆ.

12028051a ನಾಯಮತ್ಯಂತಸಂವಾಸೋ ಲಭ್ಯತೇ ಜಾತು ಕೇನ ಚಿತ್|

12028051c ಅಪಿ ಸ್ವೇನ ಶರೀರೇಣ ಕಿಮುತಾನ್ಯೇನ ಕೇನ ಚಿತ್||

ಯಾರಿಗೂ ಅನಂತವಾದ (ಕೊನೆಯಾಗದ) ಸಂಬಂಧಗಳು ಯಾವಾಗಲೂ ದೊರಕುವುದಿಲ್ಲ. ತನ್ನ ಶರೀರದೊಡನಿರುವ ಸಂಬಂಧವೇ ಅಲ್ಪಕಾಲದ್ದಾಗಿರುವಾಗ ಬೇರೆಯವರೊಡನಿರುವ ಸಂಬಂಧಗಳ ಕುರಿತು ಹೇಳುವುದೇನಿದೆ?

12028052a ಕ್ವ ನು ತೇಽದ್ಯ ಪಿತಾ ರಾಜನ್ಕ್ವ ನು ತೇಽದ್ಯ ಪಿತಾಮಹಃ|

12028052c ನ ತ್ವಂ ಪಶ್ಯಸಿ ತಾನದ್ಯ ನ ತ್ವಾಂ ಪಶ್ಯಂತಿ ತೇಽಪಿ ಚ||

ರಾಜನ್! ಈಗ ನಿನ್ನ ತಂದೆಯೆಲ್ಲಿದ್ದಾನೆ? ನಿನ್ನ ಪಿತಾಮಹನೆಲ್ಲಿದ್ದಾನೆ? ಅವರನ್ನು ಇಂದು ನೀನೂ ಕಾಣುತ್ತಿಲ್ಲ. ಅವರಿಗೂ ಕೂಡ ನೀನು ಕಾಣುತ್ತಿಲ್ಲ!

12028053a ನ ಹ್ಯೇವ ಪುರುಷೋ ದ್ರಷ್ಟಾ ಸ್ವರ್ಗಸ್ಯ ನರಕಸ್ಯ ವಾ|

12028053c ಆಗಮಸ್ತು ಸತಾಂ ಚಕ್ಷುರ್ನೃಪತೇ ತಮಿಹಾಚರ||

ನೃಪತೇ! ಯಾವ ಪುರುಷನೂ ಇಲ್ಲಿಂದ ಸ್ವರ್ಗ ಅಥವಾ ನರಕವನ್ನು ಕಂಡಿಲ್ಲ. ಆದರೆ ಆಗಮಗಳೇ ಸತ್ಪುರುಷರಿಗೆ ಕಣ್ಣುಗಳಾಗಿವೆ. ಆದುದರಂತೆ ಅವುಗಳು ಹೇಳುವಂತೆ ನಡೆದುಕೋ!

12028054a ಚರಿತಬ್ರಹ್ಮಚರ್ಯೋ ಹಿ ಪ್ರಜಾಯೇತ ಯಜೇತ ಚ|

12028054c ಪಿತೃದೇವಮಹರ್ಷೀಣಾಮಾನೃಣ್ಯಾಯಾನಸೂಯಕಃ||

ಬ್ರಹ್ಮಚರ್ಯವನ್ನು ನಡೆಸಿ, ಮಕ್ಕಳನ್ನು ಪಡೆದು ಯಜ್ಞಗಳನ್ನು ಮಾಡಬೇಕು. ಈ ರೀತಿ ಪಿತೃ-ದೇವ-ಮಹರ್ಷಿಗಳ ಋಣಗಳನ್ನು ದೋಷವೆಣಿಸದೇ ತೀರಿಸಬೇಕು.

12028055a ಸ ಯಜ್ಞಶೀಲಃ ಪ್ರಜನೇ ನಿವಿಷ್ಟಃ| ಪ್ರಾಗ್ಬ್ರಹ್ಮಚಾರೀ ಪ್ರವಿಭಕ್ತಪಕ್ಷಃ|

12028055c ಆರಾಧಯನ್ಸ್ವರ್ಗಮಿಮಂ ಚ ಲೋಕಂ| ಪರಂ ಚ ಮುಕ್ತ್ವಾ ಹೃದಯವ್ಯಲೀಕಮ್||

ಮೊದಲು ಬ್ರಹ್ಮಚಾರಿಯಾಗಿದ್ದುಕೊಂಡು, ನಂತರ ಸಂತಾನಗಳನ್ನು ಪಡೆದು, ದ್ವಂದ್ವಗಳನ್ನು ಮೀರಿ ಅವಿಭಕ್ತನಾಗಿದ್ದುಕೊಂಡು ಈ ಲೋಕವೇ ಸ್ವರ್ಗವೆಂದು ಆರಾಧಿಸಿ ಹೃದಯದಲ್ಲಿರುವ ಮುಳ್ಳನ್ನು ಕಿತ್ತೊಗೆಯಬೇಕು.

12028056a ಸಮ್ಯಗ್ಹಿ ಧರ್ಮಂ ಚರತೋ ನೃಪಸ್ಯ| ದ್ರವ್ಯಾಣಿ ಚಾಪ್ಯಾಹರತೋ ಯಥಾವತ್|

12028056c ಪ್ರವೃತ್ತಚಕ್ರಸ್ಯ ಯಶೋಽಭಿವರ್ಧತೇ| ಸರ್ವೇಷು ಲೋಕೇಷು ಚರಾಚರೇಷು||

ಉತ್ತಮ ಧರ್ಮದಲ್ಲಿಯೇ ನಡೆದುಕೊಂಡು, ಯಥಾವತ್ತಾಗಿ ದ್ರವ್ಯಗಳನ್ನು ಸಂಗ್ರಹಿಸುತ್ತಾ ನಡೆದುಕೊಳ್ಳುವ ನೃಪನ ಯಶಸ್ಸು ಎಲ್ಲ ಲೋಕಗಳಲ್ಲಿಯೂ ವಿಸ್ತರಿಸುತ್ತದೆ.”

12028057 ವ್ಯಾಸ ಉವಾಚ

12028057a ಇತ್ಯೇವಮಾಜ್ಞಾಯ ವಿದೇಹರಾಜೋ| ವಾಕ್ಯಂ ಸಮಗ್ರಂ ಪರಿಪೂರ್ಣಹೇತುಃ|

12028057c ಅಶ್ಮಾನಮಾಮಂತ್ರ್ಯ ವಿಶುದ್ಧಬುದ್ಧಿರ್| ಯಯೌ ಗೃಹಂ ಸ್ವಂ ಪ್ರತಿ ಶಾಂತಶೋಕಃ||

ವ್ಯಾಸನು ಹೇಳಿದನು: “ಹೀಗೆ ಅಶ್ಮನಿಂದ ಈ ಸಮಗ್ರವಾದ, ಉದಾಹರಣೆಗಳಿಂದ ಪರಿಪೂರ್ಣವಾಗಿದ್ದ ಮಾತುಗಳನ್ನು ಕೇಳಿ ಜನಕನು ವಿಶುದ್ಧ ಮನಸ್ಸುಳ್ಳವನಾಗಿ, ಶೋಕವನ್ನು ತೊರೆದು ಶಾಂತನಾಗಿ ತನ್ನ ಅರಮನೆಗೆ ತೆರಳಿದನು.

12028058a ತಥಾ ತ್ವಮಪ್ಯಚ್ಯುತ ಮುಂಚ ಶೋಕಮ್| ಉತ್ತಿಷ್ಠ ಶಕ್ರೋಪಮ ಹರ್ಷಮೇಹಿ|

12028058c ಕ್ಷಾತ್ರೇಣ ಧರ್ಮೇಣ ಮಹೀ ಜಿತಾ ತೇ| ತಾಂ ಭುಂಕ್ಷ್ವ ಕುಂತೀಸುತ ಮಾ ವಿಷಾದೀಃ||

ಅಚ್ಯುತ! ಇಂದ್ರನ ಸಮಾನನೇ! ಕುಂತೀಸುತ! ಹಾಗೆಯೇ ನೀನೂ ಕೂಡ ಶೋಕವನ್ನು ತೊರೆ! ಎದ್ದೇಳು! ಹರ್ಷವನ್ನು ತಾಳು! ಕ್ಷಾತ್ರಧರ್ಮದಿಂದ ಮಹಿಯನ್ನು ಗೆದ್ದ ನೀನು ಅದನ್ನು ಭೋಗಿಸು! ವಿಷಾದಿಸಬೇಡ!””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವ್ಯಾಸವಾಕ್ಯೇ ಅಷ್ಟಾವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಇಪ್ಪತ್ತೆಂಟನೇ ಅಧ್ಯಾಯವು.

[1] ಕಾಲದ ಪರಿಣಾಮವು - ಶ್ರೀಮಂತರಿರಲಿ ಅಥವಾ ದರಿದ್ರರಿರಲಿ  ಒಂದೇ ತೆರನಾಗಿರುತ್ತದೆ.

Comments are closed.