ಶಾಂತಿ ಪರ್ವ: ರಾಜಧರ್ಮ ಪರ್ವ

೨೩

12023001 ವೈಶಂಪಾಯನ ಉವಾಚ

12023001a ಏವಮುಕ್ತಸ್ತು ಕೌಂತೇಯೋ ಗುಡಾಕೇಶೇನ ಭಾರತ|

12023001c ನೋವಾಚ ಕಿಂ ಚಿತ್ಕೌರವ್ಯಸ್ತತೋ ದ್ವೈಪಾಯನೋಽಬ್ರವೀತ್||

ವೈಶಂಪಾಯನನು ಹೇಳಿದನು: “ಭಾರತ! ಕೌಂತೇಯ ಗುಡಾಕೇಶನು ಹೀಗೆ ಹೇಳಲು ಕೌರವ್ಯನು ಏನನ್ನೂ ಮಾತನಾಡಲಿಲ್ಲ. ಆಗ ದ್ವೈಪಾಯನನು ಹೇಳಿದನು:

12023002a ಬೀಭತ್ಸೋರ್ವಚನಂ ಸಮ್ಯಕ್ಸತ್ಯಮೇತದ್ಯುಧಿಷ್ಠಿರ|

12023002c ಶಾಸ್ತ್ರದೃಷ್ಟಃ ಪರೋ ಧರ್ಮಃ ಸ್ಮೃತೋ ಗಾರ್ಹಸ್ಥ್ಯ ಆಶ್ರಮಃ||

“ಯುಧಿಷ್ಠಿರ! ಬೀಭತ್ಸುವಿನ ಮಾತು ಸತ್ಯ. ಗೃಹಸ್ಥಾಶ್ರಮವು ಶಾಸ್ತ್ರ-ಸ್ಮೃತಿಗಳಲ್ಲಿ ತೋರಿಸಿಕೊಟ್ಟಿರುವ ಪರಮ ಧರ್ಮವು.

12023003a ಸ್ವಧರ್ಮಂ ಚರ ಧರ್ಮಜ್ಞ ಯಥಾಶಾಸ್ತ್ರಂ ಯಥಾವಿಧಿ|

12023003c ನ ಹಿ ಗಾರ್ಹಸ್ಥ್ಯಮುತ್ಸೃಜ್ಯ ತವಾರಣ್ಯಂ ವಿಧೀಯತೇ||

ಧರ್ಮಜ್ಞ! ಶಾಸ್ತ್ರಗಳಲ್ಲಿರುವಂತೆ ಯಥಾವಿಧಿಯಾಗಿ ಸ್ವಧರ್ಮದಲ್ಲಿ ನಡೆದುಕೋ. ಗೃಹಸ್ಥಧರ್ಮವನ್ನು ತ್ಯಜಿಸಿ ಅರಣ್ಯವನ್ನು ಸೇರುವುದು ನಿನಗೆ ವಿಹಿತವಾದುದಲ್ಲ.

12023004a ಗೃಹಸ್ಥಂ ಹಿ ಸದಾ ದೇವಾಃ ಪಿತರ ಋಷಯಸ್ತಥಾ|

12023004c ಭೃತ್ಯಾಶ್ಚೈವೋಪಜೀವಂತಿ ತಾನ್ಭಜಸ್ವ ಮಹೀಪತೇ||

ಮಹೀಪತೇ! ದೇವತೆಗಳು, ಪಿತೃಗಳು, ಋಷಿಗಳು ಮತ್ತು ಸೇವಕರು ಗೃಹಸ್ಥರನ್ನೇ ಆಶ್ರಯಿಸಿ ಉಪಜೀವನ ಮಾಡುತ್ತಾರೆ. ಆದುದರಿಂದ ನೀನು ಅವರ ಭರಣ-ಪೋಷಣೆಯನ್ನು ಮಾಡು.

12023005a ವಯಾಂಸಿ ಪಶವಶ್ಚೈವ ಭೂತಾನಿ ಚ ಮಹೀಪತೇ|

12023005c ಗೃಹಸ್ಥೈರೇವ ಧಾರ್ಯಂತೇ ತಸ್ಮಾಜ್ಜ್ಯೇಷ್ಠಾಶ್ರಮೋ ಗೃಹೀ||

ಮಹೀಪತೇ! ಪಶು-ಪಕ್ಷಿಗಳು ಮತ್ತು ಇತರ ಪ್ರಾಣಿಗಳು ಗೃಹಸ್ಥರನ್ನೇ ಅವಲಂಬಿಸಿವೆ. ಆದುದರಿಂದ ಗೃಹಸ್ಥಾಶ್ರಮವೇ ಹಿರಿದಾದುದು.

12023006a ಸೋಽಯಂ ಚತುರ್ಣಾಮೇತೇಷಾಮಾಶ್ರಮಾಣಾಂ ದುರಾಚರಃ|

12023006c ತಂ ಚರಾವಿಮನಾಃ ಪಾರ್ಥ ದುಶ್ಚರಂ ದುರ್ಬಲೇಂದ್ರಿಯೈಃ||

ಪಾರ್ಥ! ನಾಲ್ಕು ಆಶ್ರಮಗಳಲ್ಲಿ ಗೃಹಸ್ಥಾಶ್ರಮದ ಆಚರಣೆಯು ಅತ್ಯಂತ ಕಠಿಣವಾದುದು. ದುರ್ಬಲ ಇಂದ್ರಿಯಗಳಿರುವವರಿಗೆ ಕಷ್ಟಕರವಾದ ಗೃಹಸ್ಥಾಶ್ರಮವನ್ನು ವಿಮನಸ್ಕನಾಗಿ ನೀನು ಪಾಲಿಸು!

12023007a ವೇದಜ್ಞಾನಂ ಚ ತೇ ಕೃತ್ಸ್ನಂ ತಪಶ್ಚ ಚರಿತಂ ಮಹತ್|

12023007c ಪಿತೃಪೈತಾಮಹೇ ರಾಜ್ಯೇ ಧುರಮುದ್ವೋಢುಮರ್ಹಸಿ||

ನಿನ್ನಲ್ಲಿ ಸಂಪೂರ್ಣ ವೇದಜ್ಞಾನವಿದೆ. ಮಹಾ ತಪಸ್ಸನ್ನೂ ತಪಿಸಿದ್ದೀಯೆ. ಪಿತೃ-ಪಿತಾಮಹರ ಈ ರಾಜ್ಯದ ಭಾರವನ್ನು ನೀನು ಹೊರಬಲ್ಲೆ!

12023008a ತಪೋ ಯಜ್ಞಸ್ತಥಾ ವಿದ್ಯಾ ಭೈಕ್ಷಮಿಂದ್ರಿಯನಿಗ್ರಹಃ|

12023008c ಧ್ಯಾನಮೇಕಾಂತಶೀಲತ್ವಂ ತುಷ್ಟಿರ್ದಾನಂ ಚ ಶಕ್ತಿತಃ||

12023009a ಬ್ರಾಹ್ಮಣಾನಾಂ ಮಹಾರಾಜ ಚೇಷ್ಟಾಃ ಸಂಸಿದ್ಧಿಕಾರಿಕಾಃ|

ಮಹಾರಾಜ! ತಪಸ್ಸು, ಯಜ್ಞ, ವಿದ್ಯೆ, ಭಿಕ್ಷಾಟನೆ, ಇಂದ್ರಿಯನಿಗ್ರಹ, ಧ್ಯಾನ. ಏಕಾಂತಶೀಲತ್ವ, ತೃಪ್ತಿ, ಶಕ್ತಿಯಿದ್ದಷ್ಟು ದಾನ – ಇವು ಬ್ರಾಹ್ಮಣರಿಗೆ ಸಿದ್ಧಿಯನ್ನು ನೀಡುವ ಕ್ರಿಯೆಗಳು.

12023009c ಕ್ಷತ್ರಿಯಾಣಾಂ ಚ ವಕ್ಷ್ಯಾಮಿ ತವಾಪಿ ವಿದಿತಂ ಪುನಃ||

12023010a ಯಜ್ಞೋ ವಿದ್ಯಾ ಸಮುತ್ಥಾನಮಸಂತೋಷಃ ಶ್ರಿಯಂ ಪ್ರತಿ|

12023010c ದಂಡಧಾರಣಮತ್ಯುಗ್ರಂ ಪ್ರಜಾನಾಂ ಪರಿಪಾಲನಮ್||

12023011a ವೇದಜ್ಞಾನಂ ತಥಾ ಕೃತ್ಸ್ನಂ ತಪಃ ಸುಚರಿತಂ ತಥಾ|

12023011c ದ್ರವಿಣೋಪಾರ್ಜನಂ ಭೂರಿ ಪಾತ್ರೇಷು ಪ್ರತಿಪಾದನಮ್||

12023012a ಏತಾನಿ ರಾಜ್ಞಾಂ ಕರ್ಮಾಣಿ ಸುಕೃತಾನಿ ವಿಶಾಂ ಪತೇ|

12023012c ಇಮಂ ಲೋಕಮಮುಂ ಲೋಕಂ ಸಾಧಯಂತೀತಿ ನಃ ಶ್ರುತಮ್||

ನಿನಗೆ ತಿಳಿದಿದ್ದರೂ ಕ್ಷತ್ರಿಯರು ಏನು ಮಾಡಬೇಕು ಎನ್ನುವುದನ್ನು ಹೇಳುತ್ತೇನೆ. ವಿಶಾಂಪತೇ! ಯಜ್ಞ, ವಿದ್ಯಾಭ್ಯಾಸ, ಶತ್ರುಗಳ ಮೇಲೆ ಆಕ್ರಮಣ ಮಾಡುವುದು, ಸಂಪತ್ತಿನ ಕುರಿತು ಅಸಂತೋಷದಿಂದಿರುವುದು, ದಂಡಧಾರಣ, ಉಗ್ರತೆ, ಪ್ರಜೆಗಳ ಪರಿಪಾಲನೆ, ಸಂಪೂರ್ಣ ವೇದಜ್ಞಾನ, ತಪಸ್ಸು, ಸದಾಚಾರ, ಅಪಾರ ಐಶ್ವರ್ಯವನ್ನು ಗಳಿಸುವುದು, ಸತ್ಪಾತ್ರರಲ್ಲಿ ದಾನಮಾಡುವುದು – ಇವು ರಾಜರು ಮಾಡುವ ಪುಣ್ಯ ಕರ್ಮಗಳು. ಇವುಗಳನ್ನು ಮಾಡುವ ರಾಜರು ಇಹ-ಪರಗಳೆರಡನ್ನೂ ಸಾಧಿಸುತ್ತಾರೆಂದು ಕೇಳಿದ್ದೇವೆ.

12023013a ತೇಷಾಂ ಜ್ಯಾಯಸ್ತು ಕೌಂತೇಯ ದಂಡಧಾರಣಮುಚ್ಯತೇ|

12023013c ಬಲಂ ಹಿ ಕ್ಷತ್ರಿಯೇ ನಿತ್ಯಂ ಬಲೇ ದಂಡಃ ಸಮಾಹಿತಃ||

ಕೌಂತೇಯ! ಇವುಗಳಲ್ಲಿ ದಂಡಧಾರಣೆಯೇ ಶ್ರೇಷ್ಠವಾದುದೆಂದು ಹೇಳುತ್ತಾರೆ. ಕ್ಷತ್ರಿಯನಿಗೆ ಬಲವೇ ನಿತ್ಯ. ಬಲದಲ್ಲಿಯೇ ದಂಡವು ಸಮಾಹಿತವಾಗಿರುವುದು.

12023014a ಏತಾಶ್ಚೇಷ್ಟಾಃ ಕ್ಷತ್ರಿಯಾಣಾಂ ರಾಜನ್ಸಂಸಿದ್ಧಿಕಾರಿಕಾಃ|

12023014c ಅಪಿ ಗಾಥಾಮಿಮಾಂ ಚಾಪಿ ಬೃಹಸ್ಪತಿರಭಾಷತ||

ರಾಜನ್! ಈ ಶ್ರೇಷ್ಠ ಕರ್ಮಗಳು ಕ್ಷತ್ರಿಯರಿಗೆ ಸಂಸಿದ್ಧಿಕಾರಕಗಳು. ಇದರ ಕುರಿತು ಬೃಹಸ್ಪತಿಯು ಒಂದು ಗೀತೆಯನ್ನು ಹಾಡಿದ್ದಾನೆ:

12023015a ಭೂಮಿರೇತೌ ನಿಗಿರತಿ ಸರ್ಪೋ ಬಿಲಶಯಾನಿವ|

12023015c ರಾಜಾನಂ ಚಾವಿರೋದ್ಧಾರಂ ಬ್ರಾಹ್ಮಣಂ ಚಾಪ್ರವಾಸಿನಮ್||

“ಸರ್ಪವು ಬಿಲದಲ್ಲಿರುವ ಇಲಿಗಳನ್ನು ನುಂಗುವಂತೆ ಭೂಮಿಯು ಶತ್ರುವನ್ನು ವಿರೋಧಿಸದೇ ಇರುವ ರಾಜನನ್ನೂ ದೇಶಪರ್ಯಟನೆಮಾಡದ ಬ್ರಾಹ್ಮಣನನ್ನೂ ನುಂಗಿಹಾಕುತ್ತದೆ!”

12023016a ಸುದ್ಯುಮ್ನಶ್ಚಾಪಿ ರಾಜರ್ಷಿಃ ಶ್ರೂಯತೇ ದಂಡಧಾರಣಾತ್|

12023016c ಪ್ರಾಪ್ತವಾನ್ಪರಮಾಂ ಸಿದ್ಧಿಂ ದಕ್ಷಃ ಪ್ರಾಚೇತಸೋ ಯಥಾ||

ರಾಜರ್ಷಿ ಸುದ್ಯುಮ್ನನೂ ಕೂಡ ದಂಡಧಾರಣೆಯಿಂದಾಗಿ ಪ್ರಾಚೇತಸ ದಕ್ಷನಂತೆ ಪರಮ ಸಿದ್ಧಿಯನ್ನು ಪಡೆದನೆಂದು ಕೇಳಿದ್ದೇವೆ.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ವ್ಯಾಸವಾಕ್ಯೇ ತ್ರಯೋವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ವ್ಯಾಸವಾಕ್ಯ ಎನ್ನುವ ಇಪ್ಪತ್ಮೂರನೇ ಅಧ್ಯಾಯವು.

Comments are closed.