ಶಾಂತಿ ಪರ್ವ: ರಾಜಧರ್ಮ ಪರ್ವ

೨೨

12022001 ವೈಶಂಪಾಯನ ಉವಾಚ

12022001a ತಸ್ಮಿನ್ವಾಕ್ಯಾಂತರೇ ವಾಕ್ಯಂ ಪುನರೇವಾರ್ಜುನೋಽಬ್ರವೀತ್|

12022001c ವಿಷಣ್ಣಮನಸಂ ಜ್ಯೇಷ್ಠಮಿದಂ ಭ್ರಾತರಮೀಶ್ವರಮ್||

ವೈಶಂಪಾಯನನು ಹೇಳಿದನು: “ಈ ಮಧ್ಯದಲ್ಲಿ ಅರ್ಜುನನು ಖಿನ್ನಮನಸ್ಕನಾಗಿದ ಹಿರಿಯಣ್ಣ ರಾಜನಿಗೆ ಪುನಃ ಈ ಮಾತನ್ನಾಡಿದನು:

12022002a ಕ್ಷತ್ರಧರ್ಮೇಣ ಧರ್ಮಜ್ಞ ಪ್ರಾಪ್ಯ ರಾಜ್ಯಮನುತ್ತಮಮ್|

12022002c ಜಿತ್ವಾ ಚಾರೀನ್ನರಶ್ರೇಷ್ಠ ತಪ್ಯತೇ ಕಿಂ ಭವಾನ್ಭೃಶಮ್||

“ಧರ್ಮಜ್ಞ! ನರಶ್ರೇಷ್ಠ! ಕ್ಷತ್ರಧರ್ಮದಿಂದ ಈ ಅನುತ್ತಮ ರಾಜ್ಯವನ್ನು ಪಡೆದೂ ಮತ್ತು ಶತ್ರುಗಳನ್ನು ಗೆದ್ದೂ ಕೂಡ ನೀನು ಏಕೆ ಹೀಗೆ ತುಂಬಾ ಪರಿತಪಿಸುತ್ತಿರುವೆ?

12022003a ಕ್ಷತ್ರಿಯಾಣಾಂ ಮಹಾರಾಜ ಸಂಗ್ರಾಮೇ ನಿಧನಂ ಸ್ಮೃತಮ್|

12022003c ವಿಶಿಷ್ಟಂ ಬಹುಭಿರ್ಯಜ್ಞೈಃ ಕ್ಷತ್ರಧರ್ಮಮನುಸ್ಮರ||

ಮಹಾರಾಜ! ಕ್ಷತ್ರಿಯ ಧರ್ಮವೇನು ಎನ್ನುವುದನ್ನು ನೆನಪಿಸಿಕೋ! ಅನೇಕ ಯಜ್ಞಗಳನ್ನು ಮಾಡುವುದಕ್ಕಿಂತಲೂ ಕ್ಷತ್ರಿಯರಿಗೆ ಸಂಗ್ರಾಮದಲ್ಲಿ ನಿಧನವೇ ವಿಶಿಷ್ಠವಾದುದು.

12022004a ಬ್ರಾಹ್ಮಣಾನಾಂ ತಪಸ್ತ್ಯಾಗಃ ಪ್ರೇತ್ಯಧರ್ಮವಿಧಿಃ ಸ್ಮೃತಃ|

12022004c ಕ್ಷತ್ರಿಯಾಣಾಂ ಚ ವಿಹಿತಂ ಸಂಗ್ರಾಮೇ ನಿಧನಂ ವಿಭೋ||

ಬ್ರಾಹ್ಮಣರಿಗೆ ತಪಸ್ಸು ಮತ್ತು ತ್ಯಾಗ ಇವೇ ಮರಣಾನಂತರ ಪುಣ್ಯಲೋಕಗಳನ್ನು ನೀಡುವ ಧರ್ಮವಿಧಿಯೆಂದು ಹೇಳಿದ್ದಾರೆ. ಪ್ರಭೋ! ಕ್ಷತ್ರಿಯರಿಗೆ ಸಂಗ್ರಾಮದಲ್ಲಿ ನಿಧನವು ವಿಹಿತವಾದುದು.

12022005a ಕ್ಷತ್ರಧರ್ಮೋ ಮಹಾರೌದ್ರಃ ಶಸ್ತ್ರನಿತ್ಯ ಇತಿ ಸ್ಮೃತಃ|

12022005c ವಧಶ್ಚ ಭರತಶ್ರೇಷ್ಠ ಕಾಲೇ ಶಸ್ತ್ರೇಣ ಸಂಯುಗೇ||

ಭರತಶ್ರೇಷ್ಠ! ನಿತ್ಯವೂ ಶಸ್ತ್ರಧಾರಣೆಮಾಡಬೇಕಾದ, ಯುದ್ಧದಲ್ಲಿ ಸಮಯವೊದಗಿದಾಗ ಶಸ್ತ್ರಗಳಿಂದ ವಧೆಯನ್ನೂ ಮಾಡಬೇಕಾದ ಕ್ಷತ್ರಧರ್ಮವನ್ನು ಮಹಾರೌದ್ರವಾದುದು ಎಂದು ಹೇಳುತ್ತಾರೆ.

12022006a ಬ್ರಾಹ್ಮಣಸ್ಯಾಪಿ ಚೇದ್ರಾಜನ್ ಕ್ಷತ್ರಧರ್ಮೇಣ ತಿಷ್ಠತಃ|

12022006c ಪ್ರಶಸ್ತಂ ಜೀವಿತಂ ಲೋಕೇ ಕ್ಷತ್ರಂ ಹಿ ಬ್ರಹ್ಮಸಂಸ್ಥಿತಮ್||

ರಾಜನ್! ಬ್ರಾಹ್ಮಣನಿಗೆ ಕೂಡ ಕ್ಷತ್ರಧರ್ಮಾನುಸಾರವಾಗಿ ಜೀವಿಸುವುದು ಪ್ರಶಸ್ತವಾದುದೇ. ಏಕೆಂದರೆ ಲೋಕದಲ್ಲಿ ಬ್ರಾಹ್ಮಣರಿಂದಲೇ ಕ್ಷತ್ರಿಯರು ಜನಿಸಿದ್ದುದು.

12022007a ನ ತ್ಯಾಗೋ ನ ಪುನರ್ಯಾಚ್ಚೋ ನ ತಪೋ ಮನುಜೇಶ್ವರ|

12022007c ಕ್ಷತ್ರಿಯಸ್ಯ ವಿಧೀಯಂತೇ ನ ಪರಸ್ವೋಪಜೀವನಮ್||

ಮನುಜೇಶ್ವರ! ಕ್ಷತ್ರಿಯನಿಗೆ ತ್ಯಾಗ, ನಂತರ ಯಾಚನೆ ಮತ್ತು ತಪಸ್ಸುಗಳು ಹಾಗು ಇತರರ ಸ್ವತ್ತಿನಿಂದ ಜೀವನ ನಿರ್ವಹಣೆ ಇವು ವಿಹಿತವಾಗಿಲ್ಲ.

12022008a ಸ ಭವಾನ್ಸರ್ವಧರ್ಮಜ್ಞಃ ಸರ್ವಾತ್ಮಾ ಭರತರ್ಷಭ|

12022008c ರಾಜಾ ಮನೀಷೀ ನಿಪುಣೋ ಲೋಕೇ ದೃಷ್ಟಪರಾವರಃ||

ಭರತರ್ಷಭ! ರಾಜಾ! ಸರ್ವಾತ್ಮನಾಗಿರುವ ನೀನು ಸರ್ವಧರ್ಮಗಳನ್ನೂ ತಿಳಿದಿರುವೆ. ಲೋಕದಲ್ಲಿ ನೀನು ಶ್ರೇಷ್ಠವಾದವುಗಳನ್ನು ಮತ್ತು ಶ್ರೇಷ್ಠವಲ್ಲದವುಗಳನ್ನು ಚೆನ್ನಾಗಿ ತಿಳಿದುಕೊಂಡಿರುವೆ.

12022009a ತ್ಯಕ್ತ್ವಾ ಸಂತಾಪಜಂ ಶೋಕಂ ದಂಶಿತೋ ಭವ ಕರ್ಮಣಿ|

12022009c ಕ್ಷತ್ರಿಯಸ್ಯ ವಿಶೇಷೇಣ ಹೃದಯಂ ವಜ್ರಸಂಹತಮ್||

ಸಂತಾಪದಿಂದ ಹುಟ್ಟಿರುವ ಶೋಕವನ್ನು ತ್ಯಜಿಸಿ ಮಾಡಬೇಕಾದ ಕರ್ಮಗಳ ಕವಚವನ್ನು ತೊಡು! ಕ್ಷತ್ರಿಯನ ಹೃದಯವು ವಿಶೇಷವಾಗಿ ವಜ್ರದಂತೆ ಕಠಿಣವಾದುದೆಂದು ಹೇಳುತ್ತಾರೆ.

12022010a ಜಿತ್ವಾರೀನ್ ಕ್ಷತ್ರಧರ್ಮೇಣ ಪ್ರಾಪ್ಯ ರಾಜ್ಯಮಕಂಟಕಮ್|

12022010c ವಿಜಿತಾತ್ಮಾ ಮನುಷ್ಯೇಂದ್ರ ಯಜ್ಞದಾನಪರೋ ಭವ||

ಮನುಷ್ಯೇಂದ್ರ! ಕ್ಷತ್ರಧರ್ಮದಿಂದ ಶತ್ರುಗಳನ್ನು ಗೆದ್ದು, ಕಂಟಕಗಳಿಲ್ಲದ ರಾಜ್ಯವನ್ನು ಪಡೆದು ವಿಜಿತಾತ್ಮನಾಗಿ ಯಜ್ಞದಾನಪರನಾಗಿರು.

12022011a ಇಂದ್ರೋ ವೈ ಬ್ರಹ್ಮಣಃ ಪುತ್ರಃ ಕರ್ಮಣಾ ಕ್ಷತ್ರಿಯೋಽಭವತ್|

12022011c ಜ್ಞಾತೀನಾಂ ಪಾಪವೃತ್ತೀನಾಂ ಜಘಾನ ನವತೀರ್ನವ||

ಬ್ರಾಹ್ಮಣ ಪುತ್ರನಾಗಿದ್ದ ಇಂದ್ರನು ತನ್ನ ಕರ್ಮಗಳಿಂದ ಕ್ಷತ್ರಿಯನಾದನು. ಪಾಪವೃತ್ತಿಗಳಲ್ಲಿ ತೊಡಗಿದ್ದ ಎಂಟುನೂರಾಹತ್ತು ಜ್ಞಾತಿಬಾಂಧವರನ್ನು ಸಂಹರಿಸಿದನು.

12022012a ತಚ್ಚಾಸ್ಯ ಕರ್ಮ ಪೂಜ್ಯಂ ಹಿ ಪ್ರಶಸ್ಯಂ ಚ ವಿಶಾಂ ಪತೇ|

12022012c ತೇನ ಚೇಂದ್ರತ್ವಮಾಪೇದೇ ದೇವಾನಾಮಿತಿ ನಃ ಶ್ರುತಮ್||

ವಿಶಾಂಪತೇ! ಅವನ ಆ ಕರ್ಮವನ್ನು ಗೌರವಿಸುತ್ತಾರೆ ಮತ್ತು ಪ್ರಶಂಸಿಸುತ್ತಾರೆ. ಅದರಿಂದಲೇ ಅವನಿಗೆ ದೇವತೆಗಳ ಇಂದ್ರತ್ವವು ದೊರಕಿತೆಂದು ನಾವು ಕೇಳಿದ್ದೇವೆ.

12022013a ಸ ತ್ವಂ ಯಜ್ಞೈರ್ಮಹಾರಾಜ ಯಜಸ್ವ ಬಹುದಕ್ಷಿಣೈಃ|

12022013c ಯಥೈವೇಂದ್ರೋ ಮನುಷ್ಯೇಂದ್ರ ಚಿರಾಯ ವಿಗತಜ್ವರಃ||

ಮನುಷ್ಯೇಂದ್ರ! ಮಹಾರಾಜ! ನೀನೂ ಕೂಡ ಇಂದ್ರನಂತೆ ಬಹುದಕ್ಷಿಣೆಗಳಿಂದ ಯುಕ್ತವಾದ ಯಜ್ಞಗಳನ್ನು ಮಾಡಿ ಬಹುಕಾಲ ನಿಶ್ಚಿಂತನಾಗಿರು.

12022014a ಮಾ ತ್ವಮೇವಂಗತೇ ಕಿಂ ಚಿತ್ ಕ್ಷತ್ರಿಯರ್ಷಭ ಶೋಚಿಥಾಃ|

12022014c ಗತಾಸ್ತೇ ಕ್ಷತ್ರಧರ್ಮೇಣ ಶಸ್ತ್ರಪೂತಾಃ ಪರಾಂ ಗತಿಮ್||

ಕ್ಷತ್ರಿಯರ್ಷಭ! ಹೀಗೆ ಹಿಂದೆಯೂ ನಡೆದುಹೋಗಿದ್ದುದರಿಂದ ನೀನು ಸ್ವಲ್ವವೂ ಶೋಕಿಸಬೇಕಾಗಿಲ್ಲ. ಕ್ಷತ್ರಧರ್ಮಾನುಸಾರವಾಗಿ ಶಸ್ತ್ರಗಳಿಂದ ಪವಿತ್ರರಾದ ಅವರು ಪರಮ ಗತಿಯನ್ನು ಹೊಂದಿದ್ದಾರೆ.

12022015a ಭವಿತವ್ಯಂ ತಥಾ ತಚ್ಚ ಯದ್ವೃತ್ತಂ ಭರತರ್ಷಭ|

12022015c ದಿಷ್ಟಂ ಹಿ ರಾಜಶಾರ್ದೂಲ ನ ಶಕ್ಯಮತಿವರ್ತಿತುಮ್||

ಭರತರ್ಷಭ! ಈಗ ನಡೆದುಹೋದುದು ಹಾಗೆಯೇ ಆಗಬೇಕಾಗಿತ್ತು. ರಾಜಶಾರ್ದೂಲ! ದೈವದ ನಿಯಮವನ್ನು ಉಲ್ಲಂಘಿಸಿ ನಡೆಯಲು ಯಾರಿಂದಲೂ ಸಾಧ್ಯವಿಲ್ಲ!””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಅರ್ಜುನವಾಕ್ಯೇ ದ್ವಾವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ಇಪ್ಪತ್ತೆರಡನೇ ಅಧ್ಯಾಯವು.

Comments are closed.