ಶಾಂತಿ ಪರ್ವ: ರಾಜಧರ್ಮ ಪರ್ವ

೨೧

12021001 ದೇವಸ್ಥಾನ ಉವಾಚ

12021001a ಅತ್ರೈವೋದಾಹರಂತೀಮಮಿತಿಹಾಸಂ ಪುರಾತನಮ್|

12021001c ಇಂದ್ರೇಣ ಸಮಯೇ ಪೃಷ್ಟೋ ಯದುವಾಚ ಬೃಹಸ್ಪತಿಃ||

ದೇವಸ್ಥಾನನು ಹೇಳಿದನು: “ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವೊಂದನ್ನು ಉದಾಹರಿಸುತ್ತಾರೆ. ಆಗ ಇಂದ್ರನು ಕೇಳಿದಾಗ ಬೃಹಸ್ಪತಿಯು ಇದನ್ನು ಹೇಳಿದ್ದನು.

12021002a ಸಂತೋಷೋ ವೈ ಸ್ವರ್ಗತಮಃ ಸಂತೋಷಃ ಪರಮಂ ಸುಖಮ್|

12021002c ತುಷ್ಟೇರ್ನ ಕಿಂ ಚಿತ್ಪರತಃ ಸುಸಮ್ಯಕ್ಪರಿತಿಷ್ಠತಿ||

ಸಂತೋಷವೇ ಸ್ವರ್ಗಕ್ಕೆ ಸಮಾನವಾದುದು. ಸಂತೋಷವೇ ಪರಮ ಸುಖಕರವಾದುದು. ಸಂತೋಷವು ನೆಲೆಗೊಂಡಿತೆಂದರೆ ಆ ತೃಪ್ತಿಗಿಂತ ಹೆಚ್ಚಿನದು ಬೇರೆ ಯಾವುದೂ ಇಲ್ಲ.

12021003a ಯದಾ ಸಂಹರತೇ ಕಾಮಾನ್ಕೂರ್ಮೋಽಂಗಾನೀವ ಸರ್ವಶಃ|

12021003c ತದಾತ್ಮಜ್ಯೋತಿರಾತ್ಮೈವ ಸ್ವಾತ್ಮನೈವ ಪ್ರಸೀದತಿ||

ಆಮೆಯು ತನ್ನ ಎಲ್ಲ ಅವಯವಗಳನ್ನೂ ಚಿಪ್ಪಿನೊಳಗೆ ಸಂಕೋಚಿಸಿಕೊಳ್ಳುವಂತೆ ಕಾಮಗಳೆಲ್ಲವನ್ನೂ ಒಳಸೆಳೆದುಕೊಂಡಾಗ ಜ್ಯೋತಿಸ್ವರೂಪನಾದ ಅಂತರಾತ್ಮನು ಅಂತಃಕರಣದಲ್ಲಿ ಕಾಣಿಸಿಕೊಳ್ಳುತ್ತಾನೆ.

12021004a ನ ಬಿಭೇತಿ ಯದಾ ಚಾಯಂ ಯದಾ ಚಾಸ್ಮಾನ್ನ ಬಿಭ್ಯತಿ|

12021004c ಕಾಮದ್ವೇಷೌ ಚ ಜಯತಿ ತದಾತ್ಮಾನಂ ಪ್ರಪಶ್ಯತಿ||

ಯಾವುದಕ್ಕೂ ಭಯಪಡದಿದ್ದಾಗ, ಯಾವುದೂ ಭಯವನ್ನುಂಟುಮಾಡದಿದ್ದಾಗ, ಮತ್ತು ಕಾಮ-ದ್ವೇಷಗಳನ್ನು ಜಯಿಸಿದಾಗ ಪರಮಾತ್ಮನು ಕಾಣಿಸಿಕೊಳ್ಳುತ್ತಾನೆ.

12021005a ಯದಾಸೌ ಸರ್ವಭೂತಾನಾಂ ನ ಕ್ರುಧ್ಯತಿ ನ ದುಷ್ಯತಿ|

12021005c ಕರ್ಮಣಾ ಮನಸಾ ವಾಚಾ ಬ್ರಹ್ಮ ಸಂಪದ್ಯತೇ ತದಾ||

ಯಾವಾಗ ಕಾರ್ಯದಿಂದಾಗಲೀ, ಮನಸ್ಸಿನಿಂದಾಗಲೀ ಅಥವಾ ಮಾತಿನಿಂದಾಗಲೀ ಸರ್ವಭೂತಗಳಿಗೂ ದ್ರೋಹವನ್ನೆಸಗುವುದಿಲ್ಲವೋ ಮತ್ತು ಇನ್ನೊಬ್ಬರಿಂದ ದ್ರೋಹವಾಗಲೆಂದು ಬಯಸುವುದಿಲ್ಲವೋ ಆಗ ಬ್ರಹ್ಮನ ಅರಿವಾಗುತ್ತದೆ.

12021006a ಏವಂ ಕೌಂತೇಯ ಭೂತಾನಿ ತಂ ತಂ ಧರ್ಮಂ ತಥಾ ತಥಾ|

12021006c ತದಾ ತದಾ ಪ್ರಪಶ್ಯಂತಿ ತಸ್ಮಾದ್ಬುಧ್ಯಸ್ವ ಭಾರತ||

ಕೌಂತೇಯ! ಹೀಗೆ ಇರುವವು ತಮ್ಮ ತಮ್ಮ ಧರ್ಮಗಳನ್ನು ಆಗಾಗ ಅನುಸರಿಸಿಕೊಂಡು ಆಗಾಗ ಬ್ರಹ್ಮನನ್ನು ಕಾಣುತ್ತಿರುತ್ತವೆ. ಭಾರತ! ಅದನ್ನು ತಿಳಿದುಕೋ!

12021007a ಅನ್ಯೇ ಶಮಂ ಪ್ರಶಂಸಂತಿ ವ್ಯಾಯಾಮಮಪರೇ ತಥಾ|

12021007c ನೈಕಂ ನ ಚಾಪರಂ ಕೇ ಚಿದುಭಯಂ ಚ ತಥಾಪರೇ||

ಕೆಲವರು ಶಾಂತಿಯನ್ನು ಪ್ರಶಂಸಿಸುತ್ತಾರೆ. ಇನ್ನು ಕೆಲವರು ವ್ಯಾಯಾಮವನ್ನು ಪ್ರಶಂಸಿಸುತ್ತಾರೆ. ಒಂದನ್ನು ಪ್ರಶಂಸಿಸುವವರು ಇನ್ನೊಂದನ್ನು ಪ್ರಶಂಸಿಸುವುದಿಲ್ಲ. ಕೆಲವರು ಮಾತ್ರ ಇವೆರಡನ್ನೂ ಪ್ರಶಂಸಿಸುತ್ತಾರೆ.

12021008a ಯಜ್ಞಮೇಕೇ ಪ್ರಶಂಸಂತಿ ಸಂನ್ಯಾಸಮಪರೇ ಜನಾಃ|

12021008c ದಾನಮೇಕೇ ಪ್ರಶಂಸಂತಿ ಕೇ ಚಿದೇವ ಪ್ರತಿಗ್ರಹಮ್||

ಒಬ್ಬನು ಯಜ್ಞವನ್ನು ಪ್ರಶಂಸಿಸಿದರೆ ಇತರ ಜನರು ಸಂನ್ಯಾಸವನ್ನು ಪ್ರಶಂಸಿಸುತ್ತಾರೆ. ಒಬ್ಬರು ದಾನವನ್ನು ಪ್ರಶಂಸಿಸಿದರೆ ಇತರರು ದಾನಸ್ವೀಕರಣೆಯನ್ನೇ ಪ್ರಶಂಸಿಸುತ್ತಾರೆ.

12021008e ಕೇ ಚಿತ್ಸರ್ವಂ ಪರಿತ್ಯಜ್ಯ ತೂಷ್ಣೀಂ ಧ್ಯಾಯಂತ ಆಸತೇ||

12021009a ರಾಜ್ಯಮೇಕೇ ಪ್ರಶಂಸಂತಿ ಸರ್ವೇಷಾಂ ಪರಿಪಾಲನಮ್|

12021009c ಹತ್ವಾ ಭಿತ್ತ್ವಾ ಚ ಚಿತ್ತ್ವಾ ಚ ಕೇ ಚಿದೇಕಾಂತಶೀಲಿನಃ||

ಕೆಲವರಾದರೋ ಎಲ್ಲವನ್ನು ಪರಿತ್ಯಜಿಸಿ ಸುಮ್ಮನಾಗಿ ಧ್ಯಾನದಲ್ಲಿ ಕುಳಿತುಕೊಂಡುಬಿಡುತ್ತಾರೆ. ಕೆಲವರು ಕೊಂದಾಗಲೀ, ತುಂಡರಿಸಿಯಾಗಲೀ, ಕಸಿದುಕೊಂಡಾಗಲೀ ರಾಜ್ಯವನ್ನು ಪಡೆದು ಎಲ್ಲರ ಪರಿಪಾಲನೆಯನ್ನು ಪ್ರಶಂಸಿಸುತ್ತಾರೆ. ಇನ್ನು ಕೆಲವರು ಏಕಾಂತದಲ್ಲಿರುವುದನ್ನು ಪ್ರಶಂಸಿಸುತ್ತಾರೆ.

12021010a ಏತತ್ಸರ್ವಂ ಸಮಾಲೋಕ್ಯ ಬುಧಾನಾಮೇಷ ನಿಶ್ಚಯಃ|

12021010c ಅದ್ರೋಹೇಣೈವ ಭೂತಾನಾಂ ಯೋ ಧರ್ಮಃ ಸ ಸತಾಂ ಮತಃ||

ಇವೆಲ್ಲವನ್ನೂ ಚೆನ್ನಾಗಿ ಅವಲೋಕಿಸಿ ವಿದ್ವಾಂಸರು ಈ ನಿರ್ಣಯಕ್ಕೆ ಬಂದಿರುತ್ತಾರೆ. ಇರುವ ಯಾವುದರ ಕುರಿತೂ ದ್ರೋಹವನ್ನೆಸಗದಿರುವುದೇ ಧರ್ಮವೆಂದು ಸತ್ಯವಂತರ ಅಭಿಪ್ರಾಯವಾಗಿದೆ.

12021011a ಅದ್ರೋಹಃ ಸತ್ಯವಚನಂ ಸಂವಿಭಾಗೋ ಧೃತಿಃ ಕ್ಷಮಾ|

12021011c ಪ್ರಜನಃ ಸ್ವೇಷು ದಾರೇಷು ಮಾರ್ದವಂ ಹ್ರೀರಚಾಪಲಮ್||

ಯಾರಿಗೂ ದ್ರೋಹಮಾಡದಿರುವುದು, ಸತ್ಯವನ್ನೇ ಹೇಳುವುದು, ಎಲ್ಲವಕ್ಕೂ ಯಥಾಯೋಗ್ಯವಾದ ಭಾಗಗಳನ್ನು ನೀಡುವುದು, ದಯೆ, ಕ್ಷಮೆ, ತನ್ನ ಪತ್ನಿಯರಲ್ಲಿ ಮಕ್ಕಳನ್ನು ಪಡೆಯುವುದು, ಮೃದುಸ್ವಭಾವ, ನಾಚಿಕೆ ಮತ್ತು ಚಾಪಲ್ಯಗಳನ್ನು[1] ತೊರೆದಿರುವುದು ಇವೇ ಧರ್ಮ.

12021012a ಧನಂ ಧರ್ಮಪ್ರಧಾನೇಷ್ಟಂ ಮನುಃ ಸ್ವಾಯಂಭುವೋಽಬ್ರವೀತ್|

12021012c ತಸ್ಮಾದೇವಂ ಪ್ರಯತ್ನೇನ ಕೌಂತೇಯ ಪರಿಪಾಲಯ||

ಧನವೇ ಧರ್ಮಕ್ಕೆ ಪ್ರಧಾನವಾದುದು ಎಂದು ಸ್ವಾಯಂಭು ಮನುವೇ ಹೇಳಿದ್ದಾನೆ. ಕೌಂತೇಯ! ಆದುದರಿಂದ ನೀನು ಅದನ್ನೇ ಪರಿಪಾಲಿಸು.

12021013a ಯೋ ಹಿ ರಾಜ್ಯೇ ಸ್ಥಿತಃ ಶಶ್ವದ್ವಶೀ ತುಲ್ಯಪ್ರಿಯಾಪ್ರಿಯಃ|

12021013c ಕ್ಷತ್ರಿಯೋ ಯಜ್ಞಶಿಷ್ಟಾಶೀ ರಾಜಶಾಸ್ತ್ರಾರ್ಥತತ್ತ್ವವಿತ್||

12021014a ಅಸಾಧುನಿಗ್ರಹರತಃ ಸಾಧೂನಾಂ ಪ್ರಗ್ರಹೇ ರತಃ|

12021014c ಧರ್ಮೇ ವರ್ತ್ಮನಿ ಸಂಸ್ಥಾಪ್ಯ ಪ್ರಜಾ ವರ್ತೇತ ಧರ್ಮವಿತ್||

12021015a ಪುತ್ರಸಂಕ್ರಾಮಿತಶ್ರೀಸ್ತು ವನೇ ವನ್ಯೇನ ವರ್ತಯನ್|

12021015c ವಿಧಿನಾ ಶ್ರಾಮಣೇನೈವ ಕುರ್ಯಾತ್ಕಾಲಮತಂದ್ರಿತಃ||

12021016a ಯ ಏವಂ ವರ್ತತೇ ರಾಜಾ ರಾಜಧರ್ಮವಿನಿಶ್ಚಿತಃ|

ರಾಜ್ಯಸಿಂಹಾಸನಾರೂಢನಾಗಿ ಯಾವ ರಾಜನು ಇಂದ್ರಿಯಗಳನ್ನು ವಶಪಡಿಸಿಕೊಂಡು, ಪ್ರಿಯ-ಅಪ್ರಿಯಗಳನ್ನು ಸಮಾನವಾಗಿ ಕಾಣುತ್ತಾ, ಯಜ್ಞಗಳನ್ನು ಯಾಜಿಸಿ ವಿಘಸಗಳನ್ನು ಭುಂಜಿಸುತ್ತಾ, ರಾಜನೀತಿಯ ಅರ್ಥವನ್ನು ತತ್ತ್ವಶಃ ತಿಳಿದುಕೊಂಡು, ದುಷ್ಟರನ್ನು ಶಿಕ್ಷಿಸುವುದರಲ್ಲಿಯೂ ಶಿಷ್ಟರನ್ನು ರಕ್ಷಿಸುವುದರಲ್ಲಿಯೂ ನಿರತನಾಗಿದ್ದುಕೊಂಡು, ತಾನೂ ಧರ್ಮದಲ್ಲಿ ನಡೆದುಕೊಂಡಿದ್ದು ಪ್ರಜೆಗಳನ್ನೂ ಧರ್ಮವಿದರನ್ನಾಗಿಸಿ ಧರ್ಮದಲ್ಲಿ ನಡೆದುಕೊಳ್ಳುವಂತೆ ಮಾಡಿ, ಮುಪ್ಪಿನಲ್ಲಿ ಸಂಪತ್ತನ್ನು ಪುತ್ರನಿಗಿತ್ತು ವನದಲ್ಲಿ ವಾನಪ್ರಸ್ಥಾಶ್ರಮದಲ್ಲಿ ಇದ್ದು, ಅರಣ್ಯದಲ್ಲಿಯೂ ವಿಧಿವತ್ತಾಗಿ ಶಾಸ್ತ್ರಗಳ ಶ್ರವಣ ಮತ್ತು ಕರ್ಮಗಳನ್ನು ಮಾಡುತ್ತಿರುವುದು – ಈ ರೀತಿ ನಡೆದುಕೊಳ್ಳುವವನನ್ನು ರಾಜಧರ್ಮದಲ್ಲಿರುವವನು ಎಂದು ನಿಶ್ಚಯಿಸಿದ್ದಾರೆ.

12021016c ತಸ್ಯಾಯಂ ಚ ಪರಶ್ಚೈವ ಲೋಕಃ ಸ್ಯಾತ್ಸಫಲೋ ನೃಪ||

12021016e ನಿರ್ವಾಣಂ ತು ಸುದುಷ್ಪಾರಂ ಬಹುವಿಘ್ನಂ ಚ ಮೇ ಮತಮ್||

ನೃಪ! ಇಂಥವನಿಗೆ ಇಹ-ಪರಗಳೆರಡರಲ್ಲೂ ಶುಭ ಫಲಗಳೇ ದೊರಕುತ್ತವೆ. ಸಂನ್ಯಾಸವು ಬಹಳ ಕಷ್ಟಕರವಾದುದು ಮತ್ತು ಬಹು ವಿಘ್ನಗಳಿಂದ ಕೂಡಿದುದು ಎಂದು ನನ್ನ ಅಭಿಪ್ರಾಯ.

12021017a ಏವಂ ಧರ್ಮಮನುಕ್ರಾಂತಾಃ ಸತ್ಯದಾನತಪಃಪರಾಃ|

12021017c ಆನೃಶಂಸ್ಯಗುಣೈರ್ಯುಕ್ತಾಃ ಕಾಮಕ್ರೋಧವಿವರ್ಜಿತಾಃ||

12021018a ಪ್ರಜಾನಾಂ ಪಾಲನೇ ಯುಕ್ತಾ ದಮಮುತ್ತಮಮಾಸ್ಥಿತಾಃ|

12021018c ಗೋಬ್ರಾಹ್ಮಣಾರ್ಥಂ ಯುದ್ಧೇನ ಸಂಪ್ರಾಪ್ತಾ ಗತಿಮುತ್ತಮಾಮ್||

ಹೀಗೆ ಧರ್ಮಾನುಸರಣೆಯನ್ನು ಮಾಡುವ, ಸತ್ಯನಿಷ್ಠರಾದ, ದಾನಶೀಲರಾದ, ತಪೋನಿರತರಾದ, ದಯೆಯೇ ಮುಂತಾದ ಸದ್ಗುಣಗಳಿಂದ ಪರಿಪೂರ್ಣರಾದ, ಕಾಮ-ಕ್ರೋಧಗಳನ್ನು ಸಂಪೂರ್ಣವಾಗಿ ವರ್ಜಿಸಿ ಪ್ರಜೆಗಳ ಪಾಲನೆಯಲ್ಲಿಯೇ ನಿರತರಾದ, ಶ್ರೇಷ್ಠ ಧರ್ಮವನ್ನಾಶ್ರಯಿಸಿರುವ ರಾಜರು ಗೋ-ಬ್ರಾಹ್ಮಣರ ಸಲುವಾಗಿಯೇ ಯುದ್ಧಮಾಡುತ್ತಾ ಅವಸಾನಾನಂತರದಲ್ಲಿ ಸದ್ಗತಿಯನ್ನು ಹೊಂದುತ್ತಾರೆ.

12021019a ಏವಂ ರುದ್ರಾಃ ಸವಸವಸ್ತಥಾದಿತ್ಯಾಃ ಪರಂತಪ|

12021019c ಸಾಧ್ಯಾ ರಾಜರ್ಷಿಸಂಘಾಶ್ಚ ಧರ್ಮಮೇತಂ ಸಮಾಶ್ರಿತಾಃ||

12021019e ಅಪ್ರಮತ್ತಾಸ್ತತಃ ಸ್ವರ್ಗಂ ಪ್ರಾಪ್ತಾಃ ಪುಣ್ಯೈಃ ಸ್ವಕರ್ಮಭಿಃ||

ಪರಂತಪ! ರುದ್ರರೂ, ವಸುಗಳೂ, ಆದಿತ್ಯರೂ, ಸಾಧ್ಯರೂ, ಅನೇಕ ರಾಜರ್ಷಿಗಳೂ ಅಪ್ರಮತ್ತರಾಗಿ ಇದೇ ಧರ್ಮವನ್ನಾಶ್ರಯಿಸಿ ತಮ್ಮ ತಮ್ಮ ಪುಣ್ಯ ಕರ್ಮಗಳಿಂದ ಸ್ವರ್ಗಲೋಕವನ್ನು ಪಡೆದುಕೊಂಡಿರುವರು.””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ದೇವಸ್ಥಾನವಾಕ್ಯೇ ಏಕವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ದೇವಸ್ಥಾನವಾಕ್ಯ ಎನ್ನುವ ಇಪ್ಪತ್ತೊಂದನೇ ಅಧ್ಯಾಯವು.

[1] ಜಿಹ್ವಾ ಚಾಪಲ್ಯ, ದೃಷ್ಟಿ ಚಾಪಲ್ಯ, ಶ್ರವಣಚಾಪಲ್ಯ, ಸ್ಪರ್ಶಚಾಪಲ್ಯ

Comments are closed.