ಶಾಂತಿ ಪರ್ವ: ರಾಜಧರ್ಮ ಪರ್ವ

೨೦

12020001 ವೈಶಂಪಾಯನ ಉವಾಚ

12020001a ತಸ್ಮಿನ್ವಾಕ್ಯಾಂತರೇ ವಕ್ತಾ ದೇವಸ್ಥಾನೋ ಮಹಾತಪಾಃ|

12020001c ಅಭಿನೀತತರಂ ವಾಕ್ಯಮಿತ್ಯುವಾಚ ಯುಧಿಷ್ಠಿರಮ್||

ವೈಶಂಪಾಯನನು ಹೇಳಿದನು: “ಈ ಮಧ್ಯದಲ್ಲಿ ಮಹಾತಪಸ್ವಿ ದೇವಸ್ಥಾನನು ಯುಧಿಷ್ಠಿರನಿಗೆ ನೀತಿಯುಕ್ತವಾದ ಈ ಮಾತುಗಳನ್ನು ಹೇಳಿದನು:

12020002a ಯದ್ವಚಃ ಫಲ್ಗುನೇನೋಕ್ತಂ ನ ಜ್ಯಾಯೋಽಸ್ತಿ ಧನಾದಿತಿ|

12020002c ಅತ್ರ ತೇ ವರ್ತಯಿಷ್ಯಾಮಿ ತದೇಕಾಗ್ರಮನಾಃ ಶೃಣು||

“ಧನಕ್ಕಿಂತಲೂ ಹೆಚ್ಚಿನದಾದುದ್ದು ಇಲ್ಲ ಎಂದು ಫಲ್ಗುನನು ಏನು ಹೇಳಿದನೋ ಅದೇ ವಿಷಯದಲ್ಲಿ ನಾನೂ ಕೂಡ ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು.

12020003a ಅಜಾತಶತ್ರೋ ಧರ್ಮೇಣ ಕೃತ್ಸ್ನಾ ತೇ ವಸುಧಾ ಜಿತಾ|

12020003c ತಾಂ ಜಿತ್ವಾ ನ ವೃಥಾ ರಾಜಂಸ್ತ್ವಂ ಪರಿತ್ಯಕ್ತುಮರ್ಹಸಿ||

ಅಜಾತಶತ್ರೋ! ರಾಜನ್! ಧರ್ಮದಿಂದಲೇ ನೀನು ಈ ಸಂಪೂರ್ಣ ವಸುಧೆಯನ್ನು ಗೆದ್ದಿರುವೆ. ಹಾಗೆ ಗೆದ್ದಿರುವ ರಾಜ್ಯವನ್ನು ವೃಥಾ ಪರಿತ್ಯಜಿಸುವುದು ಸರಿಯಲ್ಲ.

12020004a ಚತುಷ್ಪದೀ ಹಿ ನಿಃಶ್ರೇಣೀ ಕರ್ಮಣ್ಯೇಷಾ ಪ್ರತಿಷ್ಠಿತಾ|

12020004c ತಾಂ ಕ್ರಮೇಣ ಮಹಾಬಾಹೋ ಯಥಾವಜ್ಜಯ ಪಾರ್ಥಿವ||

ಬ್ರಹ್ಮ ಸಾಕ್ಷಾತ್ಕಾರಕ್ಕೆ ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ ಮತ್ತು ಸಂನ್ಯಾಸಗಳೆಂಬ ನಾಲ್ಕು ಆಶ್ರಮಧರ್ಮಗಳಿವೆ. ಇವುಗಳಲ್ಲಿ ಶ್ರೇಣಿಯೆಂಬುದಿಲ್ಲ. ಇವೆಲ್ಲವೂ ಕರ್ಮದಲ್ಲಿಯೇ ಪ್ರತಿಷ್ಠಿತವಾಗಿವೆ. ಮಹಾಬಾಹೋ! ಪಾರ್ಥಿವ! ಇವುಗಳನ್ನು ಕ್ರಮೇಣವಾಗಿ ಒಂದಾದ ನಂತರ ಮತ್ತೊಂದನ್ನು ಜಯಿಸುತ್ತಾ ಬಾ!

12020005a ತಸ್ಮಾತ್ಪಾರ್ಥ ಮಹಾಯಜ್ಞೈರ್ಯಜಸ್ವ ಬಹುದಕ್ಷಿಣೈಃ|

12020005c ಸ್ವಾಧ್ಯಾಯಯಜ್ಞಾ ಋಷಯೋ ಜ್ಞಾನಯಜ್ಞಾಸ್ತಥಾಪರೇ||

ಪಾರ್ಥ! ಆದುದರಿಂದ ಬಹುದಕ್ಷಿಣೆಗಳಿಂದ ಯುಕ್ತವಾದ ಮಹಾಯಜ್ಞಗಳನ್ನು ಯಾಜಿಸು. ಸ್ವಾಧ್ಯಾಯ ಯಜ್ಞದಲ್ಲಿ ನಿರತರಾಗಿರುವವರು ಋಷಿಗಳು. ಜ್ಞಾನಯಜ್ಞದಲ್ಲಿ ನಿರತರಾಗಿರುವವರು ಸಂನ್ಯಾಸಿಗಳು.

12020006a ಕರ್ಮನಿಷ್ಠಾಂಸ್ತು ಬುಧ್ಯೇಥಾಸ್ತಪೋನಿಷ್ಠಾಂಶ್ಚ ಭಾರತ|

12020006c ವೈಖಾನಸಾನಾಂ ರಾಜೇಂದ್ರ ವಚನಂ ಶ್ರೂಯತೇ ಯಥಾ||

ಭಾರತ! ರಾಜೇಂದ್ರ! ಕರ್ಮನಿಷ್ಠರು ಮತ್ತು ತಪೋನಿಷ್ಠರು ಇವರ ಕುರಿತು ತಿಳಿದುಕೊಳ್ಳಬೇಕು. ಈ ವಿಷಯದಲ್ಲಿ ವೈಖಾನಸರು ಈ ರೀತಿ ಹೇಳಿದ್ದಾರೆ:

12020007a ಈಹತೇ ಧನಹೇತೋರ್ಯಸ್ತಸ್ಯಾನೀಹಾ ಗರೀಯಸೀ|

12020007c ಭೂಯಾನ್ದೋಷಃ ಪ್ರವರ್ಧೇತ ಯಸ್ತಂ ಧನಮಪಾಶ್ರಯೇತ್||

ಧನವನ್ನು ಕೂಡಿಡಬೇಕೆಂದೇ ಧನವನ್ನು ಬಯಸುವುದಕ್ಕಿಂತ ಅದನ್ನು ಬಯಸದೇ ಇರುವುದೇ ಶ್ರೇಷ್ಠವಾದುದು. ಧನವನ್ನೇ ಆಶ್ರಯಿಸಿರುವವನಲ್ಲಿ ಅನೇಕ ದೋಷಗಳು ಪುನಃ ಪುನಃ ಬೆಳೆಯುತ್ತಿರುತ್ತವೆ.

12020008a ಕೃಚ್ಚ್ರಾಚ್ಚ ದ್ರವ್ಯಸಂಹಾರಂ ಕುರ್ವಂತಿ ಧನಕಾರಣಾತ್|

12020008c ಧನೇನ ತೃಷಿತೋಽಬುದ್ಧ್ಯಾ ಭ್ರೂಣಹತ್ಯಾಂ ನ ಬುಧ್ಯತೇ||

ಧನದ ಕಾರಣದಿಂದ ದ್ರವ್ಯವನ್ನು ಹೇಗೆ ವ್ಯಯಮಾಡಬೇಕೆಂದೂ ಕಷ್ಟಪಡುತ್ತಾರೆ. ಧನವನ್ನು ಹೇಗೆ ವ್ಯಯಮಾಡಬೇಕೆಂದು ತಿಳಿಯದೇ ಭ್ರೂಣಹತ್ಯಾದೋಷಕ್ಕೂ ಗುರಿಯಾಗುತ್ತಾರೆ.

12020009a ಅನರ್ಹತೇ ಯದ್ದದಾತಿ ನ ದದಾತಿ ಯದರ್ಹತೇ|

12020009c ಅನರ್ಹಾರ್ಹಾಪರಿಜ್ಞಾನಾದ್ದಾನಧರ್ಮೋಽಪಿ ದುಷ್ಕರಃ||

ಅನರ್ಹರಿಗೆ ದಾನನೀಡುವವನು ಮತ್ತು ಅರ್ಹನಾದವನಿಗೆ ದಾನನೀಡದಿರುವವನು ಇವೆರಡೂ ಪಾಪಕರ್ಮಗಳೇ. ಅನರ್ಹರ್ಯಾರು ಮತ್ತು ಅರ್ಹರ್ಯಾರು ಎಂದು ಪರಿಜ್ಞಾನವಿಲ್ಲದಿರುವುದರಿಂದ ದಾನಧರ್ಮಗಳೂ ದುಷ್ಕರವೇ ಸರಿ!

12020010a ಯಜ್ಞಾಯ ಸೃಷ್ಟಾನಿ ಧನಾನಿ ಧಾತ್ರಾ| ಯಷ್ಟಾದಿಷ್ಟಃ ಪುರುಷೋ ರಕ್ಷಿತಾ ಚ|

12020010c ತಸ್ಮಾತ್ಸರ್ವಂ ಯಜ್ಞ ಏವೋಪಯೋಜ್ಯಂ| ಧನಂ ತತೋಽನಂತರ ಏವ ಕಾಮಃ||

ಧಾತ್ರನು ಧನವನ್ನು ಯಜ್ಞಕ್ಕಾಗಿಯೇ ಸೃಷ್ಟಿಸಿದ್ದಾನೆ. ಸೃಷ್ಟಿಯ ಮುಖ್ಯ ಉದ್ದೇಶವಾದ ಯಜ್ಞಕ್ಕಾಗಿಯೇ ಮನುಷ್ಯನ ಸೃಷ್ಟಿಯೂ ರಕ್ಷಣೆಯೂ ನಡೆಯುತ್ತಿದೆ. ಆದುದರಿಂದ ಸರ್ವ ಧನವನ್ನೂ ಯಜ್ಞಕ್ಕಾಗಿಯೇ ಉಪಯೋಗಿಸಬೇಕು. ಧನವನ್ನು ಈ ರೀತಿ ಬಳಸಿದ ನಂತರವೇ ಮನುಷ್ಯನು ತನಗೆ ಬೇಕಾದುದನ್ನು ಪಡೆದುಕೊಳ್ಳುತ್ತಾನೆ.

12020011a ಯಜ್ಞೈರಿಂದ್ರೋ ವಿವಿಧೈರನ್ನವದ್ಭಿರ್| ದೇವಾನ್ಸರ್ವಾನಭ್ಯಯಾನ್ಮಹೌಜಾಃ|

12020011c ತೇನೇಂದ್ರತ್ವಂ ಪ್ರಾಪ್ಯ ವಿಭ್ರಾಜತೇಽಸೌ| ತಸ್ಮಾದ್ಯಜ್ಞೇ ಸರ್ವಮೇವೋಪಯೋಜ್ಯಮ್||

ಇಂದ್ರನು ವಿವಿಧ ಅನ್ನಗಳಿಂದ ಕೂಡಿದ ಯಜ್ಞಗಳನ್ನು ಮಾಡಿಯೇ ಎಲ್ಲ ದೇವತೆಗಳಿಗಿಂತಲೂ ಹೆಚ್ಚಿನ ಓಜಸ್ಸುಳ್ಳವನಾದನು. ಅದರಿಂದಲೇ ಅವನು ಇಂದ್ರತ್ವವನ್ನು ಪಡೆದುಕೊಂಡು ರಾರಾಜಿಸುತ್ತಿದ್ದಾನೆ. ಆದುದರಿಂದ ಯಜ್ಞಕ್ಕಾಗಿಯೇ ಸರ್ವ ಸಂಪತ್ತನ್ನೂ ವಿನಿಯೋಜಿಸಬೇಕು.

12020012a ಮಹಾದೇವಃ ಸರ್ವಮೇಧೇ ಮಹಾತ್ಮಾ| ಹುತ್ವಾತ್ಮಾನಂ ದೇವದೇವೋ ವಿಭೂತಃ|

12020012c ವಿಶ್ವಾಽಲ್ಲೋಕಾನ್ವ್ಯಾಪ್ಯ ವಿಷ್ಟಭ್ಯ ಕೀರ್ತ್ಯಾ| ವಿರೋಚತೇ ದ್ಯುತಿಮಾನ್ಕೃತ್ತಿವಾಸಾಃ||

ಮಹಾತ್ಮ ಮಹಾದೇವನೂ ಕೂಡ ಸರ್ವಮೇಧದಲ್ಲಿ ತನ್ನನ್ನು ತಾನೇ ಯಜ್ಞೇಶ್ವರನಿಗೆ ಸಮರ್ಪಿಸಿಕೊಂಡು ದೇವತೆಗಳಿಗೂ ದೇವನಾದನು. ಇದರಿಂದಲೇ ಆ ಕೃತ್ತಿವಾಸನು ಉತ್ತಮ ಕೀರ್ತಿಯಿಂದ ವಿಶ್ವಗಳನ್ನೂ ಲೋಕಗಳನ್ನೂ ವ್ಯಾಪಿಸಿ ಕಾಂತಿಮಂತನಾಗಿ ವಿರಾಜಿಸುತ್ತಾನೆ.

12020013a ಆವಿಕ್ಷಿತಃ ಪಾರ್ಥಿವೋ ವೈ ಮರುತ್ತಃ| ಸ್ವೃದ್ಧ್ಯಾ ಮರ್ತ್ಯೋ ಯೋಽಜಯದ್ದೇವರಾಜಮ್|

12020013c ಯಜ್ಞೇ ಯಸ್ಯ ಶ್ರೀಃ ಸ್ವಯಂ ಸಂನಿವಿಷ್ಟಾ| ಯಸ್ಮಿನ್ಭಾಂಡಂ ಕಾಂಚನಂ ಸರ್ವಮಾಸೀತ್||

ಅವಿಕ್ಷಿತನ ಮಗ ಪಾರ್ಥಿವ ಮರುತ್ತನು ಯಜ್ಞದಿಂದಲೇ ಮರ್ತ್ಯನಾಗಿದ್ದರೂ ದೇವರಾಜನನ್ನು ಜಯಿಸಿದ್ದನು. ಅವನ ಯಜ್ಞದಲ್ಲಿ ಸ್ವಯಂ ಲಕ್ಷ್ಮಿಯೇ ಸನ್ನಿಹಿತಳಾಗಿದ್ದಳು. ಅವನ ಯಜ್ಞದಲ್ಲಿ ಎಲ್ಲ ಪಾತ್ರೆಗಳೂ ಸ್ವರ್ಣಮಯವಾಗಿದ್ದವು.

12020014a ಹರಿಶ್ಚಂದ್ರಃ ಪಾರ್ಥಿವೇಂದ್ರಃ ಶ್ರುತಸ್ತೇ| ಯಜ್ಞೈರಿಷ್ಟ್ವಾ ಪುಣ್ಯಕೃದ್ವೀತಶೋಕಃ|

12020014c ಋದ್ಧ್ಯಾ ಶಕ್ರಂ ಯೋಽಜಯನ್ಮಾನುಷಃ ಸಂಸ್| ತಸ್ಮಾದ್ಯಜ್ಞೇ ಸರ್ವಮೇವೋಪಯೋಜ್ಯಮ್||

ಪಾರ್ಥಿವೇಂದ್ರ ಹರಿಶ್ಚಂದ್ರನ ಕುರಿತು ನೀನು ಕೇಳಿರುವೆ! ಅವನು ಮನುಷ್ಯನೇ ಆಗಿದ್ದರೂ ಶಕ್ರನನ್ನೂ ಪರಾಜಯಗೊಳಿಸಿದ್ದನು. ಅನೇಕ ಯಜ್ಞ-ಇಷ್ಟಿಗಳಿಂದ ಶೋಕರಹಿತನಾಗಿ ಪುಣ್ಯಗಳನ್ನು ಗಳಿಸಿದನು. ಆದುದರಿಂದ ಎಲ್ಲ ಐಶ್ವರ್ಯವನ್ನೂ ಯಜ್ಞಕ್ಕಾಗಿಯೇ ನಿಯೋಗಿಸಬೇಕು.”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ದೇವಸ್ಥಾನವಾಕ್ಯೇ ವಿಂಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ದೇವಸ್ಥಾನವಾಕ್ಯ ಎನ್ನುವ ಇಪ್ಪತ್ತನೇ ಅಧ್ಯಾಯವು.

Comments are closed.