ಶಾಂತಿ ಪರ್ವ: ರಾಜಧರ್ಮ ಪರ್ವ

೧೮

12018001 ವೈಶಂಪಾಯನ ಉವಾಚ

12018001a ತೂಷ್ಣೀಂಭೂತಂ ತು ರಾಜಾನಂ ಪುನರೇವಾರ್ಜುನೋಽಬ್ರವೀತ್|

12018001c ಸಂತಪ್ತಃ ಶೋಕದುಃಖಾಭ್ಯಾಂ ರಾಜ್ಞೋ ವಾಕ್ಶಲ್ಯಪೀಡಿತಃ||

ವೈಶಂಪಾಯನನು ಹೇಳಿದನು: “ರಾಜನ ಮಾತಿನ ಮುಳ್ಳುಗಳಿಂದ ಪೀಡಿತನಾದ ಮತ್ತು ಶೋಕ-ದುಃಖಗಳಿಂದ ಸಂತಪ್ತನಾದ ಅರ್ಜುನನು ಸುಮ್ಮನಾಗಿ ಕುಳಿತಿದ್ದ ರಾಜನಿಗೆ ಪುನಃ ಹೇಳಿದನು:

12018002a ಕಥಯಂತಿ ಪುರಾವೃತ್ತಮಿತಿಹಾಸಮಿಮಂ ಜನಾಃ|

12018002c ವಿದೇಹರಾಜ್ಞಃ ಸಂವಾದಂ ಭಾರ್ಯಯಾ ಸಹ ಭಾರತ||

“ಭಾರತ! ಹಿಂದೆ ವಿದೇಹರಾಜ ಮತ್ತು ಅವನ ಪತ್ನಿ ಇವರ ನಡುವೆ ನಡೆದ ಸಂವಾದವನ್ನು ಜನರು ಉದಾಹರಿಸುತ್ತಾರೆ. 

12018003a ಉತ್ಸೃಜ್ಯ ರಾಜ್ಯಂ ಭೈಕ್ಷಾರ್ಥಂ ಕೃತಬುದ್ಧಿಂ ಜನೇಶ್ವರಮ್|

12018003c ವಿದೇಹರಾಜಂ ಮಹಿಷೀ ದುಃಖಿತಾ ಪ್ರತ್ಯಭಾಷತ||

ರಾಜ್ಯವನ್ನು ತ್ಯಜಿಸಿ ಭಿಕ್ಷುವಾಗಿರಲು ನಿಶ್ಚಯಿಸಿದ ಜನೇಶ್ವರ ವಿದೇಹರಾಜನಿಗೆ ದುಃಖಿತಳಾದ ರಾಣಿಯು ಹೇಳಿದುದನ್ನು ಕೇಳು.

12018004a ಧನಾನ್ಯಪತ್ಯಂ ಮಿತ್ರಾಣಿ ರತ್ನಾನಿ ವಿವಿಧಾನಿ ಚ|

12018004c ಪಂಥಾನಂ ಪಾವನಂ ಹಿತ್ವಾ ಜನಕೋ ಮೌಂಡ್ಯಮಾಸ್ಥಿತಃ||

ಐಶ್ವರ್ಯ, ಮಕ್ಕಳು, ಮಿತ್ರರು, ವಿವಿಧ ರತ್ನಗಳು, ಮತ್ತು ಪಾವನ ಗೃಹಸ್ಥಾಶ್ರಮವನ್ನು ತ್ಯಜಿಸಿ ಜನಕನು ತಲೆಬೋಳಿಸಿಕೊಂಡು ಭಿಕ್ಷುವಾಗಲು ನಿಶ್ಚಯಿಸಿದನು.

12018005a ತಂ ದದರ್ಶ ಪ್ರಿಯಾ ಭಾರ್ಯಾ ಭೈಕ್ಷ್ಯವೃತ್ತಿಮಕಿಂಚನಮ್|

12018005c ಧಾನಾಮುಷ್ಟಿಮುಪಾಸೀನಂ ನಿರೀಹಂ ಗತಮತ್ಸರಮ್||

ಭಿಕ್ಷಾವೃತ್ತಿಯನ್ನು ಅವಲಂಬಿಸಿ ಒಂದು ಮುಷ್ಟಿ ಧಾನ್ಯದ ಹಿಟ್ಟನ್ನೇ ತಿನ್ನುತ್ತಿದ್ದ, ನಿರೀಹನಾಗಿದ್ದ, ಮತ್ಸರವನ್ನು ತೊರೆದಿದ್ದ ಅವನನ್ನು ಅವನ ಪ್ರಿಯ ಭಾರ್ಯೆಯು ನೋಡಿದಳು.

12018006a ತಮುವಾಚ ಸಮಾಗಮ್ಯ ಭರ್ತಾರಮಕುತೋಭಯಮ್|

12018006c ಕ್ರುದ್ಧಾ ಮನಸ್ವಿನೀ ಭಾರ್ಯಾ ವಿವಿಕ್ತೇ ಹೇತುಮದ್ವಚಃ||

ಆ ಮನಸ್ವಿನೀ ಪತ್ನಿಯು ಕ್ರುದ್ಧಳಾಗಿ ಭಯವನ್ನೇ ತೊರೆದಿದ್ದ ಪತಿಯ ಬಳಿಸಾರಿ ಯುಕ್ತಿಯುಕ್ತವಾದ ಈ ಮಾತುಗಳನ್ನಾಡಿದಳು:

12018007a ಕಥಮುತ್ಸೃಜ್ಯ ರಾಜ್ಯಂ ಸ್ವಂ ಧನಧಾನ್ಯಸಮಾಚಿತಮ್|

12018007c ಕಾಪಾಲೀಂ ವೃತ್ತಿಮಾಸ್ಥಾಯ ಧಾನಾಮುಷ್ಟಿರ್ವನೇಽಚರಃ||

“ಧನ-ಧಾನ್ಯ ಸಮೃದ್ಧವಾಗಿರುವ ನಿನ್ನ ಈ ರಾಜ್ಯವನ್ನು ನೀನೇ ತೊರೆದು ಕಾಪಾಲ ವೃತ್ತಿಯನ್ನೇಕೆ ಹಿಡಿದಿರುವೆ? ಮುಷ್ಟಿ ಧಾನ್ಯವನ್ನು ತಿನ್ನುವುದು ವನಚರರಿಗೆ ಸರಿಯಾದುದು!

12018008a ಪ್ರತಿಜ್ಞಾ ತೇಽನ್ಯಥಾ ರಾಜನ್ವಿಚೇಷ್ಟಾ ಚಾನ್ಯಥಾ ತವ|

12018008c ಯದ್ರಾಜ್ಯಂ ಮಹದುತ್ಸೃಜ್ಯ ಸ್ವಲ್ಪೇ ತುಷ್ಯಸಿ ಪಾರ್ಥಿವ||

ರಾಜನ್! ನಿನ್ನ ಪ್ರತಿಜ್ಞೆಯೇ ಒಂದಾಗಿದ್ದರೆ ನೀನು ಮಾಡುತ್ತಿರುವುದು ಇನ್ನೊಂದಾಗಿದೆ! ಪಾರ್ಥಿವ! ಮಹಾರಾಜ್ಯವನ್ನು ತ್ಯಜಿಸಿ ಸ್ವಲ್ಪದಲ್ಲಿಯೇ ತೃಪ್ತಿಪಡೆಯುವವನಾಗಿಬಿಟ್ಟೆಯಲ್ಲ!

12018009a ನೈತೇನಾತಿಥಯೋ ರಾಜನ್ದೇವರ್ಷಿಪಿತರಸ್ತಥಾ|

12018009c ಶಕ್ಯಮದ್ಯ ತ್ವಯಾ ಭರ್ತುಂ ಮೋಘಸ್ತೇಽಯಂ ಪರಿಶ್ರಮಃ||

ರಾಜನ್! ಇಂದು ನೀನು ಅತಿಥಿಗಳನ್ನು, ದೇವರ್ಷಿ-ಪಿತೃಗಳನ್ನು ಸತ್ಕರಿಸಲು ಶಕ್ಯನಾಗಿಲ್ಲ. ನಿನ್ನ ಪರಿಶ್ರಮಗಳೆಲ್ಲವೂ ವ್ಯರ್ಥವಾದಂತೆಯೇ!

12018010a ದೇವತಾತಿಥಿಭಿಶ್ಚೈವ ಪಿತೃಭಿಶ್ಚೈವ ಪಾರ್ಥಿವ|

12018010c ಸರ್ವೈರೇತೈಃ ಪರಿತ್ಯಕ್ತಃ ಪರಿವ್ರಜಸಿ ನಿಷ್ಕ್ರಿಯಃ||

ಪಾರ್ಥಿವ! ದೇವತೆಗಳು, ಅತಿಥಿಗಳು ಮತ್ತು ಪಿತೃಗಳು ಎಲ್ಲರನ್ನೂ ಪರಿತ್ಯಜಿಸಿ ನೀನು ನಿಷ್ಕರ್ಮಿಯಾಗಿದ್ದುಕೊಂಡು ತಿರುಗುವೆ!

12018011a ಯಸ್ತ್ವಂ ತ್ರೈವಿದ್ಯವೃದ್ಧಾನಾಂ ಬ್ರಾಹ್ಮಣಾನಾಂ ಸಹಸ್ರಶಃ|

12018011c ಭರ್ತಾ ಭೂತ್ವಾ ಚ ಲೋಕಸ್ಯ ಸೋಽದ್ಯಾನ್ಯೈರ್ಭೃತಿಮಿಚ್ಚಸಿ||

ಮೂರುವೇದಗಳನ್ನು ತಿಳಿದಿರುವ ಸಹಸ್ರಾರು ವೃದ್ಧ ಬ್ರಾಹ್ಮಣರ ಪೋಷಕನಾಗಿದ್ದುಕೊಂಡು ಈಗ ಲೋಕದ ಅನ್ಯರಿಂದ ಪೋಷಣೆಗೊಳ್ಳಲು ಬಯಸುತ್ತಿರುವೆ!

12018012a ಶ್ರಿಯಂ ಹಿತ್ವಾ ಪ್ರದೀಪ್ತಾಂ ತ್ವಂ ಶ್ವವತ್ಸಂಪ್ರತಿ ವೀಕ್ಷ್ಯಸೇ|

12018012c ಅಪುತ್ರಾ ಜನನೀ ತೇಽದ್ಯ ಕೌಸಲ್ಯಾ ಚಾಪತಿಸ್ತ್ವಯಾ||

ಬೆಳಗುತ್ತಿರುವ ಸಂಪತ್ತನ್ನು ತ್ಯಜಿಸಿ ನೀನು ನಾಯಿಯಂತೆಯೇ ತೋರುತ್ತಿರುವೆ! ಇಂದು ನಿನ್ನ ತಾಯಿಯು ಬಂಜೆಯಾದಳು ಮತ್ತು ನಿನ್ನ ಪತ್ನಿಯಾದ ಕೌಸಲ್ಯೆ ನಾನು ಪತಿಹೀನಳಾದೆನು!

12018013a ಅಶೀತಿರ್ಧರ್ಮಕಾಮಾಸ್ತ್ವಾಂ ಕ್ಷತ್ರಿಯಾಃ ಪರ್ಯುಪಾಸತೇ|

12018013c ತ್ವದಾಶಾಮಭಿಕಾಂಕ್ಷಂತ್ಯಃ ಕೃಪಣಾಃ ಫಲಹೇತುಕಾಃ||

ಧರ್ಮ-ಕಾಮನೆಗಳನ್ನು ಸಾಧಿಸಿಕೊಳ್ಳಲು ಈ ಕ್ಷತ್ರಿಯರು ನಿನ್ನನ್ನೇ ಉಪಾಸನೆಮಾಡುತ್ತಿದ್ದಾರೆ. ಆಕಾಂಕ್ಷೆಗಳನ್ನು ಹೊಂದಿರುವ ಈ ದೀನರು ಫಲಕ್ಕಾಗಿ ನಿನ್ನ ಸೇವೆಯಲ್ಲಿ ತತ್ಪರರಾಗಿದ್ದಾರೆ.

12018014a ತಾಶ್ಚ ತ್ವಂ ವಿಫಲಾಃ ಕುರ್ವನ್ಕಾಽಲ್ಲೋಕಾನ್ನು ಗಮಿಷ್ಯಸಿ|

12018014c ರಾಜನ್ಸಂಶಯಿತೇ ಮೋಕ್ಷೇ ಪರತಂತ್ರೇಷು ದೇಹಿಷು||

ಇವರನ್ನು ವಿಫಲರನ್ನಾಗಿಸಿ ನೀನು ಯಾವ ಲೋಕಗಳಿಗೆ ಹೋಗುತ್ತೀಯೆ? ರಾಜನ್! ಪರತಂತ್ರರಾದ ಮನುಷ್ಯರಿಗೆ ಮೋಕ್ಷವು ನಿಶ್ಚಯವಾದುದಲ್ಲ.

12018015a ನೈವ ತೇಽಸ್ತಿ ಪರೋ ಲೋಕೋ ನಾಪರಃ ಪಾಪಕರ್ಮಣಃ|

12018015c ಧರ್ಮ್ಯಾನ್ದಾರಾನ್ಪರಿತ್ಯಜ್ಯ ಯಸ್ತ್ವಮಿಚ್ಚಸಿ ಜೀವಿತುಮ್||

ಧರ್ಮಪತ್ನಿಯನ್ನು ಪರಿತ್ಯಜಿಸಿ ಜೀವಿಸಲು ಬಯಸುವ ನಿನಗೆ ಈ ಪಾಪಕರ್ಮದಿಂದ ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಸುಖವು ದೊರಕಲಾರದು.

12018016a ಸ್ರಜೋ ಗಂಧಾನಲಂಕಾರಾನ್ವಾಸಾಂಸಿ ವಿವಿಧಾನಿ ಚ|

12018016c ಕಿಮರ್ಥಮಭಿಸಂತ್ಯಜ್ಯ ಪರಿವ್ರಜಸಿ ನಿಷ್ಕ್ರಿಯಃ||

ಹಾರ-ಗಂಧ-ಅಲಂಕಾರ ಮತ್ತು ವಿವಿಧ ವಸ್ತ್ರಗಳನ್ನು ತ್ಯಜಿಸಿ ಕರ್ತವ್ಯ ಹೀನನಾಗಿ ನೀನು ಏಕೆ ಪರಿವ್ರಾಜಕನಾಗಲು ಬಯಸುವೆ?

12018017a ನಿಪಾನಂ ಸರ್ವಭೂತಾನಾಂ ಭೂತ್ವಾ ತ್ವಂ ಪಾವನಂ ಮಹತ್|

12018017c ಆಢ್ಯೋ ವನಸ್ಪತಿರ್ಭೂತ್ವಾ ಸೋಽದ್ಯಾನ್ಯಾನ್ಪರ್ಯುಪಾಸಸೇ||

ಸರ್ವಭೂತಗಳಿಗೂ ಸರೋವರದಂತಿದ್ದು ನೀನು ಮಹಾ ಪಾವನನಾಗಿದ್ದೆ. ವಿಶಾಲ ವೃಕ್ಷದಂತೆ ನೀನು ಎಲ್ಲರಿಗೂ ನೆರಳನ್ನಿತ್ತು ಸೇವೆಸಲ್ಲಿಸುತ್ತಿದ್ದೆ.

12018018a ಖಾದಂತಿ ಹಸ್ತಿನಂ ನ್ಯಾಸೇ ಕ್ರವ್ಯಾದಾ ಬಹವೋಽಪ್ಯುತ|

12018018c ಬಹವಃ ಕೃಮಯಶ್ಚೈವ ಕಿಂ ಪುನಸ್ತ್ವಾಮನರ್ಥಕಮ್||

ಎಲ್ಲವನ್ನೂ ತೊರೆದು ಬಿದ್ದಿರುವ ಆನೆಯನ್ನು ಮಾಂಸಾಶಿ ಪ್ರಾಣಿಗಳೂ ಕ್ರಿಮಿಗಳೂ ಜೀವಸಹಿತ ತಿಂದುಹಾಕಿಬಿಡುತ್ತವೆ. ಇನ್ನು ನಿಷ್ಕರ್ಮಿಯಾಗುವ ನಿನ್ನ ಕುರಿತೇನು ಹೇಳುವುದಿದೆ?

12018019a ಯ ಇಮಾಂ ಕುಂಡಿಕಾಂ ಭಿಂದ್ಯಾತ್ತ್ರಿವಿಷ್ಟಬ್ಧಂ ಚ ತೇ ಹರೇತ್|

12018019c ವಾಸಶ್ಚಾಪಹರೇತ್ತಸ್ಮಿನ್ಕಥಂ ತೇ ಮಾನಸಂ ಭವೇತ್||

ನಿನ್ನ ಈ ಕಮಂಡಲುವನ್ನು ಯಾರಾದರೂ ಅಪಹರಿಸಿಕೊಳ್ಳಬಹುದು. ನಿನ್ನ ಈ ತ್ರಿದಂಡವನ್ನೇ ಅಪಹರಿಸಿಕೊಂಡು ಹೋಗಬಹುದು. ನೀನು ಉಟ್ಟಿರುವ ವಸ್ತ್ರವನ್ನೂ ಕಿತ್ತುಕೊಳ್ಳಬಹುದು. ಆಗ ನಿನ್ನ ಮನೋಸ್ಥಿತಿಯು ಹೇಗಿರುತ್ತದೆ?

12018020a ಯಸ್ತ್ವಯಂ ಸರ್ವಮುತ್ಸೃಜ್ಯ ಧಾನಾಮುಷ್ಟಿಪರಿಗ್ರಹಃ|

12018020c ಯದಾನೇನ ಸಮಂ ಸರ್ವಂ ಕಿಮಿದಂ ಮಮ ದೀಯತೇ||

12018020e ಧಾನಾಮುಷ್ಟಿರಿಹಾರ್ಥಶ್ಚೇತ್ಪ್ರತಿಜ್ಞಾ ತೇ ವಿನಶ್ಯತಿ||

ಎಲ್ಲವನ್ನೂ ತ್ಯಾಗಮಾಡಿ ಒಂದು ಮುಷ್ಟಿ ಹುರಿಧಾನ್ಯವನ್ನು ಅವಲಂಬಿಸಲು ಹೊರಟ ನಿನಗೆ ಎಲ್ಲವೂ ಸಮವೆಂದು ಹೇಗೆ ತೋರುತ್ತಿದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ! ಮುಷ್ಟಿ ಹುರಿಧಾನ್ಯವನ್ನು ಕೇಳುವುದರಿಂದ ನಿನ್ನ ಈ ಎಲ್ಲವನ್ನೂ ಸಮವೆಂದು ಕಾಣುವೆ ಎನ್ನುವ ಪ್ರತಿಜ್ಞೆಯು ಭಂಗವಾಗುವುದಿಲ್ಲವೇ?[1]

12018021a ಕಾ ವಾಹಂ ತವ ಕೋ ಮೇ ತ್ವಂ ಕೋಽದ್ಯ ತೇ ಮಯ್ಯನುಗ್ರಹಃ|

12018021c ಪ್ರಶಾಧಿ ಪೃಥಿವೀಂ ರಾಜನ್ಯತ್ರ ತೇಽನುಗ್ರಹೋ ಭವೇತ್||

12018021e ಪ್ರಾಸಾದಂ ಶಯನಂ ಯಾನಂ ವಾಸಾಂಸ್ಯಾಭರಣಾನಿ ಚ||

ಆಗ ನಾನು ನಿನಗೆ ಎನಾಗುತ್ತೇನೆ? ಇಂದು ನನ್ನ ಮೇಲೆ ನಿನಗಿರುವ ಅನುಗ್ರಹಕ್ಕೆ ಏನಾಗುತ್ತದೆ? ರಾಜನ್! ನಿನ್ನ ಅನುಗ್ರಹವಿದ್ದರೆ ಭೂಮಿಯನ್ನು ಆಳು! ಅರಮನೆ, ಉತ್ತಮ ಹಾಸಿಗೆ, ವಾಹನ, ವಸ್ತ್ರಾ-ಭರಣಗಳನ್ನು ಭೋಗಿಸು!

12018022a ಶ್ರಿಯಾ ನಿರಾಶೈರಧನೈಸ್ತ್ಯಕ್ತಮಿತ್ರೈರಕಿಂಚನೈಃ|

12018022c ಸೌಖಿಕೈಃ ಸಂಭೃತಾನರ್ಥಾನ್ಯಃ ಸಂತ್ಯಜಸಿ ಕಿಂ ನು ತತ್||

ಶ್ರೀಯಿಂದ ನಿರಾಶೆಗೊಂಡ, ನಿರ್ಧನ, ಬಂಧು-ಮಿತ್ರರಿಲ್ಲದ ಮತ್ತು ಅಕಿಂಚನರಾದ ಸಂನ್ಯಾಸಿಗಳು ಸುಖಕ್ಕಾಗಿಯೇ ತಮಗೆ ಬೇಕಾದ ಸಲಕರಣೆಗಳನ್ನು (ಕಮಂಡಲು-ಕೃಷ್ಣಾಜಿನ ಇತ್ಯಾದಿ) ಸಂಗಹಿಸಿಟ್ಟುಕೊಂಡಿರುತ್ತಾರೆ.[2]

12018023a ಯೋಽತ್ಯಂತಂ ಪ್ರತಿಗೃಹ್ಣೀಯಾದ್ಯಶ್ಚ ದದ್ಯಾತ್ಸದೈವ ಹಿ|

12018023c ತಯೋಸ್ತ್ವಮಂತರಂ ವಿದ್ಧಿ ಶ್ರೇಯಾಂಸ್ತಾಭ್ಯಾಂ ಕ ಉಚ್ಯತೇ||

ಯಾವಾಗಲೂ ವಸ್ತುಗಳನ್ನು ಸಂಗ್ರಹಿಸುವುದರಲ್ಲಿ ನಿರತರಾದವರ ಮತ್ತು ಯಾವಾಗಲೂ ದಾನಮಾಡುವವರ ನಡುವಿನ ಅಂತರವನ್ನು ತಿಳಿದುಕೋ! ಇವರಿಬ್ಬರಲ್ಲಿ ಯಾರು ಶ್ರೇಷ್ಠರೆನಿಸಿಕೊಳ್ಳುತ್ತಾರೆ?

12018024a ಸದೈವ ಯಾಚಮಾನೇಷು ಸತ್ಸು ದಂಭವಿವರ್ಜಿಷು|[3]

12018024c ಏತೇಷು ದಕ್ಷಿಣಾ ದತ್ತಾ ದಾವಾಗ್ನಾವಿವ ದುರ್ಹುತಮ್||

ಸಾಧುಗಳಲ್ಲಿ ಮತ್ತು ದಂಭವನ್ನು ತೊರೆದವರಲ್ಲಿ ಯಾವಾಗಲೂ ಬೇಡುವವರಿಗೆ ದಾನಮಾಡಿದ ದಕ್ಷಿಣೆಯು ದಾವಾಗ್ನಿಯಲ್ಲಿ ಹೋಮಮಾಡಿದಂತೆ ವ್ಯರ್ಥವಾಗುತ್ತದೆ.

12018025a ಜಾತವೇದಾ ಯಥಾ ರಾಜನ್ನಾದಗ್ಧ್ವೈವೋಪಶಾಮ್ಯತಿ|

12018025c ಸದೈವ ಯಾಚಮಾನೋ ವೈ ತಥಾ ಶಾಮ್ಯತಿ ನ ದ್ವಿಜಃ||

ರಾಜನ್! ತನ್ನಲ್ಲಿ ಹಾಕಿದ ಕಟ್ಟಿಗೆಯನ್ನು ಸಂಪೂರ್ಣವಾಗಿ ಸುಡದೇ ಅಗ್ನಿಯು ಹೇಗೆ ಪ್ರಶಮನಗೊಳ್ಳುವುದಿಲ್ಲವೋ ಹಾಗೆ ಸದಾ ಬೇಡುವ ದ್ವಿಜನು ಬೇಡುತ್ತಿರುವುದು ದೊರೆಯದೇ ಶಾಂತನಾಗುವುದಿಲ್ಲ.

12018026a ಸತಾಂ ಚ ವೇದಾ ಅನ್ನಂ ಚ ಲೋಕೇಽಸ್ಮಿನ್ಪ್ರಕೃತಿರ್ಧ್ರುವಾ|

12018026c ನ ಚೇದ್ದಾತಾ ಭವೇದ್ದಾತಾ ಕುತಃ ಸ್ಯುರ್ಮೋಕ್ಷಕಾಂಕ್ಷಿಣಃ||[4]

ಸತ್ಪುರುಷರು, ವೇದಗಳು ಮತ್ತು ಅನ್ನಗಳನ್ನು ಅವಲಂಬಿಸಿಯೇ ಈ ಲೋಕದಲ್ಲಿ ಪ್ರಕೃತಿಯು ಸ್ಥಿರವಾಗಿ ನೆಲೆಸಿದೆ. ದಾನಮಾಡುವ ದಾನಿಗಳು ಇರದಿದ್ದರೆ ಮೋಕ್ಷಗಳನ್ನು ಬಯಸುವ ಮುನಿಗಳು ಎಲ್ಲಿರುತ್ತಿದ್ದರು?

12018027a ಅನ್ನಾದ್ಗೃಹಸ್ಥಾ ಲೋಕೇಽಸ್ಮಿನ್ಭಿಕ್ಷವಸ್ತತ ಏವ ಚ|

12018027c ಅನ್ನಾತ್ಪ್ರಾಣಃ ಪ್ರಭವತಿ ಅನ್ನದಃ ಪ್ರಾಣದೋ ಭವೇತ್||

ಈ ಲೋಕದಲ್ಲಿ ಅನ್ನವನ್ನು ದಾನಮಾಡುವುದರಿಂದ ಗೃಹಸ್ಥನೆನಿಸಿಕೊಳ್ಳುತ್ತಾನೆ. ಅದೇ ಅನ್ನವನ್ನು ಬೇಡುವವರು ಸಂನ್ಯಾಸಿಗಳೆನಿಸಿಕೊಳ್ಳುತ್ತಾರೆ. ಅನ್ನದಿಂದಲೇ ಪ್ರಾಣವು ಬೆಳೆಯುತ್ತದೆ. ಆದುದರಿಂದ ಅನ್ನವನ್ನು ದಾನಮಾಡುವವನು ಪ್ರಾಣವನ್ನು ದಾನಮಾಡುವವನಾಗುತ್ತಾನೆ.

12018028a ಗೃಹಸ್ಥೇಭ್ಯೋಽಭಿನಿರ್ವೃತ್ತಾ ಗೃಹಸ್ಥಾನೇವ ಸಂಶ್ರಿತಾಃ|

12018028c ಪ್ರಭವಂ ಚ ಪ್ರತಿಷ್ಠಾಂ ಚ ದಾಂತಾ ನಿಂದಂತ ಆಸತೇ||

ಸಂನ್ಯಾಸಿಗಳು ಗೃಹಸ್ಥಾಶ್ರಮದಿಂದ ನಿರ್ವೃತ್ತರಾದರೂ ಗೃಹಸ್ಥರನ್ನೇ ಆಶ್ರಯಿಸಿರುತ್ತಾರೆ. ಆದುದರಿಂದ ಗೃಹಸ್ಥಾಶ್ರಮವೇ ಸಂನ್ಯಾಸದ ಉಗಮ, ನೆಲೆ ಮತ್ತು ಆಶ್ರಯವಾಗಿದೆ.

12018029a ತ್ಯಾಗಾನ್ನ ಭಿಕ್ಷುಕಂ ವಿದ್ಯಾನ್ನ ಮೌಂಡ್ಯಾನ್ನ ಚ ಯಾಚನಾತ್|

12018029c ಋಜುಸ್ತು ಯೋಽರ್ಥಂ ತ್ಯಜತಿ ತಂ ಸುಖಂ ವಿದ್ಧಿ ಭಿಕ್ಷುಕಮ್||

ತ್ಯಾಗದಿಂದ, ವಿದ್ಯೆಯಿಂದ, ಮುಂಡನಮಾಡಿಕೊಂಡಿರುವುದರಿಂದ ಮತ್ತು ಬೇಡುವುದರಿಂದ ಭಿಕ್ಷುವೆನಿಸಿಕೊಳ್ಳುವುದಿಲ್ಲ. ಸರಳನಾಗಿದ್ದು ಯಾರು ಅರ್ಥವನ್ನು ತ್ಯಜಿಸುತ್ತಾನೋ ಅವನೇ ಸುಖೀ ಭಿಕ್ಷುಕನೆಂದು ತಿಳಿ.

12018030a ಅಸಕ್ತಃ ಸಕ್ತವದ್ಗಚ್ಚನ್ನಿಃಸಂಗೋ ಮುಕ್ತಬಂಧನಃ|

12018030c ಸಮಃ ಶತ್ರೌ ಚ ಮಿತ್ರೇ ಚ ಸ ವೈ ಮುಕ್ತೋ ಮಹೀಪತೇ||

ಮಹೀಪತೇ! ಆಸಕ್ತಿಯಿಲ್ಲದಿದ್ದರೂ ಆಸಕ್ತನಂತೆ ಲೋಕವ್ಯವಹಾರಗಳನ್ನು ನಡೆಸಿಕೊಂಡು ಹೋಗುತ್ತಾ ನಿಸ್ಸಂಗನಾಗಿ ಬಂಧನಗಳಿಂದ ಮುಕ್ತನಾಗಿ, ಮಿತ್ರ-ಶತ್ರುಗಳಲ್ಲಿ ಸಮಭಾವದಿಂದ ಇರುವವನು ರಾಜನಾಗಿದ್ದರೂ ಮುಕ್ತನಾದಂತೆ.

12018031a ಪರಿವ್ರಜಂತಿ ದಾನಾರ್ಥಂ ಮುಂಡಾಃ ಕಾಷಾಯವಾಸಸಃ|

12018031c ಸಿತಾ ಬಹುವಿಧೈಃ ಪಾಶೈಃ ಸಂಚಿನ್ವಂತೋ ವೃಥಾಮಿಷಮ್||

ಮುಂಡನಮಾಡಿಕೊಂಡು ಕಾಷಾಯವಸ್ತ್ರಗಳನ್ನು ಧರಿಸಿ ದಾನಗಳಿಗೆ ಅಲೆದಾಡುವವರು ಅನೇಕವಿಧದ ಪಾಶಗಳಿಂದ ಬದ್ಧರಾಗಿ ವೃಥಾ ಕೂಡಿಸಿಕೊಳ್ಳುವ ಆಸೆಯಿಂದಿರುತ್ತಾರೆ.

12018032a ತ್ರಯೀಂ ಚ ನಾಮ ವಾರ್ತಾಂ ಚ ತ್ಯಕ್ತ್ವಾ ಪುತ್ರಾಂಸ್ತ್ಯಜಂತಿ ಯೇ|

12018032c ತ್ರಿವಿಷ್ಟಬ್ಧಂ ಚ ವಾಸಶ್ಚ ಪ್ರತಿಗೃಹ್ಣಂತ್ಯಬುದ್ಧಯಃ||

ಯಾರು ಮೂರು ವೇದಗಳನ್ನೂ, ಅವುಗಳು ಹೇಳಿರುವ ಕರ್ಮಗಳನ್ನೂ, ಪುತ್ರರನ್ನೂ ಪರಿತ್ಯಜಿಸಿ ತ್ರಿದಂಡವನ್ನು ಹಿಡಿದು ಕಾಷಾಯವಸ್ತ್ರವನ್ನು ಪರಿಗ್ರಹಿಸುತ್ತಾರೋ ಅವರು ಬುದ್ಧಿಹೀನರೇ ಸರಿ!

12018033a ಅನಿಷ್ಕಷಾಯೇ ಕಾಷಾಯಮೀಹಾರ್ಥಮಿತಿ ವಿದ್ಧಿ ತತ್|

12018033c ಧರ್ಮಧ್ವಜಾನಾಂ ಮುಂಡಾನಾಂ ವೃತ್ತ್ಯರ್ಥಮಿತಿ ಮೇ ಮತಿಃ||

ಹೃದಯದಲ್ಲಿ ಆಸೆಗಳನ್ನಿಟ್ಟುಕೊಂಡು ಕಾಷಾಯವನ್ನು ಧರಿಸುವುದು ಒಂದು ಸೋಗು ಎಂದೇ ನೀನು ತಿಳಿ. ಧರ್ಮದ ಸೋಗನ್ನು ಹಾಕಿಕೊಂಡು ತಿರುಗಾಡುವ ಮುಂಡರಿಗೆ ಸಂನ್ಯಾಸಿಗಳೆನ್ನುವುದು ವ್ಯರ್ಥವೇ ಸರಿ ಎಂದು ನನಗನ್ನಿಸುತ್ತದೆ.

12018034a ಕಾಷಾಯೈರಜಿನೈಶ್ಚೀರೈರ್ನಗ್ನಾನ್ಮುಂಡಾನ್ಜಟಾಧರಾನ್|

12018034c ಬಿಭ್ರತ್ಸಾಧೂನ್ಮಹಾರಾಜ ಜಯ ಲೋಕಾನ್ಜಿತೇಂದ್ರಿಯಃ||

ಮಹಾರಾಜ! ನೀನು ಜಿತೇಂದ್ರಿಯನಾಗಿದ್ದುಕೊಂಡು ಕಾಷಾಯವಸ್ತ್ರಧಾರಿಗಳನ್ನು, ಕೃಷ್ಣಾಜಿನ-ವಲ್ಕಲಗಳನ್ನು ಉಟ್ಟವರನ್ನೂ, ದಿಗಂಬರರಾದ ಅವಧೂತರನ್ನೂ, ಮುಂಡನ ಮಾಡಿಸಿಕೊಂಡವರನ್ನೂ, ಜಟಾಧಾರಿಗಳನ್ನೂ, ಸಾಧುಗಳನ್ನೂ ಪಾಲಿಸುತ್ತಾ ಲೋಕಗಳನ್ನು ಗೆಲ್ಲು!

12018035a ಅಗ್ನ್ಯಾಧೇಯಾನಿ ಗುರ್ವರ್ಥಾನ್ಕ್ರತೂನ್ಸಪಶುದಕ್ಷಿಣಾನ್|

12018035c ದದಾತ್ಯಹರಹಃ ಪೂರ್ವಂ ಕೋ ನು ಧರ್ಮತರಸ್ತತಃ||

ಗುರುಗಳ ಅಗ್ನಿಕಾರ್ಯ-ದಾನಗಳಿಗೆ, ಮತ್ತು ಪಶು-ದಕ್ಷಿಣೆಗಳಿಂದ ಕೂಡಿದ ಕ್ರತುಗಳಿಗೆ ದ್ರವ್ಯಸಂಗ್ರಹಗಳನ್ನು ಮಾಡುವವರಿಗಿಂತಲೂ ಹೆಚ್ಚು ಧರ್ಮಪರಾಯಣರಾದವರು ಬೇರೆ ಯಾರಿದ್ದಾರೆ?”

12018036a ತತ್ತ್ವಜ್ಞೋ ಜನಕೋ ರಾಜಾ ಲೋಕೇಽಸ್ಮಿನ್ನಿತಿ ಗೀಯತೇ|

12018036c ಸೋಽಪ್ಯಾಸೀನ್ಮೋಹಸಂಪನ್ನೋ ಮಾ ಮೋಹವಶಮನ್ವಗಾಃ||

ತತ್ತ್ವಜ್ಞ ರಾಜಾ ಜನಕನ ಕುರಿತು ಲೋಕವು ಈ ಗೀತೆಯನ್ನು ಹಾಡುತ್ತದೆ. ಅವನೂ ಕೂಡ ಮೋಹಸಂಪನ್ನನಾಗಿದ್ದನು. ಅವನಂತೆ ನೀನು ಮೋಹವಶನಾಗಬೇಡ!

12018037a ಏವಂ ಧರ್ಮಮನುಕ್ರಾಂತಂ ಸದಾ ದಾನಪರೈರ್ನರೈಃ|

12018037c ಆನೃಶಂಸ್ಯಗುಣೋಪೇತೈಃ ಕಾಮಕ್ರೋಧವಿವರ್ಜಿತಾಃ||

12018038a ಪಾಲಯಂತಃ ಪ್ರಜಾಶ್ಚೈವ ದಾನಮುತ್ತಮಮಾಸ್ಥಿತಾಃ|

12018038c ಇಷ್ಟಾಽಲ್ಲೋಕಾನವಾಪ್ಸ್ಯಾಮೋ ಬ್ರಹ್ಮಣ್ಯಾಃ ಸತ್ಯವಾದಿನಃ||

ಹೀಗೆ ನಾವೂ ಕೂಡ ಧರ್ಮವನ್ನನುಸರಿಸುತ್ತಾ ಸದಾ ಇತರರಿಗೆ ದಾನಗಳನ್ನು ನೀಡುತ್ತಾ, ದಯಾಗುಣಸಂಪನ್ನರಾಗಿ, ಕಾಮ-ಕ್ರೋಧಗಳನ್ನು ತೊರೆದು, ಉತ್ತಮ ದಾನಗಳನ್ನು ನೀಡುತ್ತಾ ಪ್ರಜೆಗಳನ್ನು ಪಾಲಿಸೋಣ! ಬ್ರಾಹ್ಮಣಪ್ರಿಯರಾಗಿದ್ದು ಸತ್ಯವಾದಿಗಳಾಗಿದ್ದುಕೊಂಡು ಇಷ್ಟವಾದ ಲೋಕಗಳನ್ನು ಪಡೆದುಕೊಳ್ಳೋಣ!”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಅರ್ಜುನವಾಕ್ಯೇ ಅಷ್ಟಾದಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ಹದಿನೆಂಟನೇ ಅಧ್ಯಾಯವು.

[1] ನೀನು ಸಂನ್ಯಾಸಿಯಾದರೂ ನಿನಗೊಂದು ವಸ್ತುವಿನ ಅಗತ್ಯವಿದೆ ಎಂದಾಯಿತು. ಹುರಿದ ಹಿಟ್ಟಿಗೂ ರಾಜ್ಯಕ್ಕೂ ಯಾವ ವ್ಯತ್ಯಾಸವನ್ನೂ ನೀನು ಕಾಣದ ನಂತರ ರಾಜ್ಯವನ್ನಾದರೂ ನೀನು ಏಕೆ ತ್ಯಜಿಸುವೆ? ಕಲ್ಲಿಗೂ ಚಿನ್ನಕ್ಕೂ ವ್ಯತ್ಯಾಸವಿಲ್ಲವೆಂದು ತಿಳಿದ ಮಾತ್ರಕ್ಕೆ ಇರುವ ಚಿನ್ನವೆಲ್ಲವನ್ನೂ ಹೊರಗೆ ಎಸೆಯುವುದಕ್ಕೆ ಅರ್ಥವಿಲ್ಲ. ಜೀವನಕ್ಕಾಗಿ ಹುರಿದ ಹಿಟ್ಟಾದರೂ ಬೇಕೇ ಬೇಕು. ಒಂದು ಬೇಕಾದರೆ ಇನ್ನೊಂದು ಏಕೆ ಬೇಡ? ಯಾವುದೂ ಬೇಡ ಎಂದು ಹೇಳಿಕೊಂಡು ಮನುಷ್ಯನು ಜೀವಿಸಿರಲಾರನು. ಹುರಿದ ಹಿಟ್ಟನ್ನು ಬಿಡಲಾರದಂತೆ ರಾಜ್ಯವನ್ನೂ ಬಿಡುವ ಅಗತ್ಯವಿಲ್ಲ.

[2] ನೀಲಕಂಠರು ಈ ಶ್ಲೋಕಕ್ಕೆ ಹೀಗೆ ಅರ್ಥೈಸಿದ್ದಾರೆ: ಸೌಖಿಕೈಃ ಪರಮ ಸುಖಾರ್ಥಿಭಿಃ ಸಂನ್ಯಾಸಿಭಿಃ ಸಂಭೃತಾನರ್ಥಾನ್ ಕುಂಡಿಕಾದೀನ್ ವೀಕ್ಷ್ಯ ಯಃ ಸ್ವಯಮಪಿ ತಥಾ ಕರೋತಿ ಕಿಂ ನು ತತ್ ರಾಜ್ಯಾದಿಕಂ ತ್ಯಜತ್ಯಪಿ ನೈವ ತ್ಯಜತಿ ಕಿಂ ತು ಉಚಿತಂ ಪರಿಗ್ರಹಂ ತ್ಯಕ್ತ್ವಾ ದೈವೋಪಹತತ್ತ್ವಾದನುಚಿತಂ ಪರಿಗ್ರಹಾಂತರಮೇವ ಕರೋತಿ. ಇತ್ಯಸಂಗತ್ಯಂ ಅಸ್ಯ ದುರ್ಲಭಮಿತ್ಯರ್ಥಃ – ಅರ್ಥಾತ್ – ಪರಮಸುಖಾಭಿಲಾಷಿಗಳಾದ ಸಂನ್ಯಾಸಿಗಳಿಂದ ಸಂಪಾದಿಸಲ್ಪಟ್ಟ ಕಮಂಡಲುವೇ ಮೊದಲಾದವುಗಳನ್ನು ನೋಡಿ ಯಾವನು ತಾನೂ ಹಾಗೆಯೇ ಮಾಡಲು ಹೋಗುತ್ತಾನೋ ಅವನು ರಾಜ್ಯಾದಿಗಳನ್ನು ಪರಿತ್ಯಾಗಮಾಡಿದರೂ ರಾಜೋಚಿತವಾದ ಪರಿಗ್ರಹಕಾರ್ಯವನ್ನು ತ್ಯಜಿಸಿ ದೈವೋಪಹತನಾದುದರಿಂದ ಅನುಚಿತವಾದ ಬೇರೆ ರೀತಿಯ ಪರಿಗ್ರಹವನ್ನೇ ಮಾಡುತ್ತಾನೆ. ರಾಜನಿಗೆ ಯುಕ್ತವಾದ ಕರಾದಿ ಪರಿಗ್ರಹವನ್ನು ಬಿಟ್ಟಂತಾಯಿತು. ಅಹಿತವಾದ ಧಾನಾಮುಷ್ಟಿಯನ್ನು ಪರಿಗ್ರಹಿಸಿದಂತಾಯಿತು. ಆದುದರಿಂದ ಸಂನ್ಯಾಸಿಯಾದರೂ ಸಂಗವು ತಪ್ಪಲೇ ಇಲ್ಲ.

[3] ಭಾರತ ದರ್ಶನದಲ್ಲಿ ಈ ಶ್ಲೋಕಾರ್ಧದ ಬದಲಾಗಿ ಸದೈವ ಯಾಚಮಾನೇಷು ತಥಾ ದಂಭಾನ್ವಿತೇಷು ಚ| ಅರ್ಥಾತ್ ಯಾವಾಗಲೂ ಬೇಡುವವರಿಗೆ ಮತ್ತು ದಾಂಭಿಕನಿಗೆ ಎಂದಿದೆ.

[4] ಭಾರತ ದರ್ಶನದಲ್ಲಿ ಈ ಶ್ಲೋಕಕ್ಕೆ ವ್ಯತ್ಯಾಸವಾಗಿರುವ ಶ್ಲೋಕವಿದೆ: ಸತಾಂ ವೈ ದದತೋಽನ್ನಂ ಚ ಲೋಕೇಽಸ್ಮಿನ್ ಪ್ರಕೃತಿಧ್ರುವಾ| ನ ಚೇದ್ರಾಜಾ ಭವೇದ್ಧಾತಾ ಕುತಃಸ್ಯುಮೋಕ್ಷಕಾಂಕ್ಷಿಣಃ|| ಅರ್ಥಾತ್ ಈ ಲೋಕದಲ್ಲಿ ದಾನಿಗಳು ಕೊಡುವ ಅನ್ನವೇ ಸತ್ಪುರುಷರ ಜೀವಿಕೆಗೆ ಶಾಶ್ವತ ಆಧಾರವಾಗಿರುತ್ತದೆ. ಸತ್ಪುರುಷರಿಗೆ ದಾನಮಾಡುವ ರಾಜನಿಗೆ ರಾಜ್ಯವು ಸ್ಥಿರವಾಗಿರುತ್ತದೆ. ರಾಜನು ದಾನಿಯಾಗಿರದಿದ್ದರೆ ಮೋಕ್ಷಾಪೇಕ್ಷಿಗಳಾದ ಮುನಿಗಳು ಎಲ್ಲಿರುತ್ತಿದ್ದರು?

Comments are closed.