ಶಾಂತಿ ಪರ್ವ: ರಾಜಧರ್ಮ ಪರ್ವ

೧೬

12016001 ವೈಶಂಪಾಯನ ಉವಾಚ

12016001a ಅರ್ಜುನಸ್ಯ ವಚಃ ಶ್ರುತ್ವಾ ಭೀಮಸೇನೋಽತ್ಯಮರ್ಷಣಃ|

12016001c ಧೈರ್ಯಮಾಸ್ಥಾಯ ತೇಜಸ್ವೀ ಜ್ಯೇಷ್ಠಂ ಭ್ರಾತರಮಬ್ರವೀತ್||

ವೈಶಂಪಾಯನನು ಹೇಳಿದನು: “ಅರ್ಜುನನ ಮಾತನ್ನು ಕೇಳಿ ಅತಿ ಅಸಹನಶೀಲನಾದ ತೇಜಸ್ವೀ ಭೀಮಸೇನನು ಧೈರ್ಯವನ್ನು ತಾಳಿ ಹಿರಿಯಣ್ಣನಿಗೆ ಹೇಳಿದನು:

12016002a ರಾಜನ್ವಿದಿತಧರ್ಮೋಽಸಿ ನ ತೇಽಸ್ತ್ಯವಿದಿತಂ ಭುವಿ|

12016002c ಉಪಶಿಕ್ಷಾಮ ತೇ ವೃತ್ತಂ ಸದೈವ ನ ಚ ಶಕ್ನುಮಃ||

“ರಾಜನ್! ನೀನು ಧರ್ಮವನ್ನು ತಿಳಿದಿದ್ದೀಯೆ. ಭುವಿಯಲ್ಲಿ ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ. ನಿನ್ನಿಂದಲೇ ನಾವು ಸದೈವ ಉಪದೇಶಗಳನ್ನು ಪಡೆಯುತ್ತಾ ಬಂದಿದ್ದೇವೆ.

12016003a ನ ವಕ್ಷ್ಯಾಮಿ ನ ವಕ್ಷ್ಯಾಮೀತ್ಯೇವಂ ಮೇ ಮನಸಿ ಸ್ಥಿತಮ್|

12016003c ಅತಿದುಃಖಾತ್ತು ವಕ್ಷ್ಯಾಮಿ ತನ್ನಿಬೋಧ ಜನಾಧಿಪ||

“ನಾನು ಮಾತನಾಡುವುದಿಲ್ಲ! ನಾನು ಮಾತನಾಡುವುದಿಲ್ಲ!” ಎಂದು ನನ್ನ ಮನಸ್ಸಿನ ನಿರ್ಧಾರವಾಗಿತ್ತು. ಆದರೆ ಈಗ ಅತಿ ದುಃಖದಿಂದ ಹೇಳುತ್ತಿದ್ದೇನೆ. ಜನಾಧಿಪ! ಅದನ್ನು ಕೇಳು!

12016004a ಭವತಸ್ತು ಪ್ರಮೋಹೇನ ಸರ್ವಂ ಸಂಶಯಿತಂ ಕೃತಮ್|

12016004c ವಿಕ್ಲವತ್ವಂ ಚ ನಃ ಪ್ರಾಪ್ತಮಬಲತ್ವಂ ತಥೈವ ಚ||

ನಿನ್ನ ಮೋಹಪರವಶದಿಂದಾಗಿ ನಾವು ಮಾಡಿದುದೆಲ್ಲವೂ ಸಂಶಯಾಸ್ಪದವೆನ್ನಿಸುತ್ತಿದೆ. ನಾವು ವ್ಯಾಕುಲಗೊಂಡಿದ್ದೇವೆ ಮತ್ತು ದುರ್ಬಲರಾಗಿದ್ದೇವೆ ಎಂದನ್ನಿಸುತ್ತಿದೆ.

12016005a ಕಥಂ ಹಿ ರಾಜಾ ಲೋಕಸ್ಯ ಸರ್ವಶಾಸ್ತ್ರವಿಶಾರದಃ|

12016005c ಮೋಹಮಾಪದ್ಯತೇ ದೈನ್ಯಾದ್ಯಥಾ ಕುಪುರುಷಸ್ತಥಾ||

ಸರ್ವಶಾಸ್ತ್ರವಿಶಾರದನೂ ಲೋಕದ ರಾಜನೂ ಆಗಿರುವ ನೀನು ಏಕೆ ಹೀಗೆ ಹೇಡಿಯಂತೆ ದೈನ್ಯದಿಂದ ಮೋಹಪರವಶನಾಗಿರುವೆ?

12016006a ಆಗತಿಶ್ಚ ಗತಿಶ್ಚೈವ ಲೋಕಸ್ಯ ವಿದಿತಾ ತವ|

12016006c ಆಯತ್ಯಾಂ ಚ ತದಾತ್ವೇ ಚ ನ ತೇಽಸ್ತ್ಯವಿದಿತಂ ಪ್ರಭೋ||

ಲೋಕದಲ್ಲಿ ನಡೆದುಹೋಗಿರುವ ಮತ್ತು ನಡೆಯುತ್ತಿರುವ ಎಲ್ಲವೂ ನಿನಗೆ ತಿಳಿದೇ ಇದೆ. ಪ್ರಭೋ! ದುರ್ಮಾರ್ಗ-ಸನ್ಮಾರ್ಗಗಳೂ ನಿನಗೆ ತಿಳಿದಿವೆ.

12016007a ಏವಂ ಗತೇ ಮಹಾರಾಜ ರಾಜ್ಯಂ ಪ್ರತಿ ಜನಾಧಿಪ|

12016007c ಹೇತುಮತ್ರ ಪ್ರವಕ್ಷ್ಯಾಮಿ ತದಿಹೈಕಮನಾಃ ಶೃಣು||

ಮಹಾರಾಜ! ಜನಾಧಿಪ! ಹೀಗಿರುವಾಗ ರಾಜ್ಯದ ಕುರಿತು ನಾವು ಹೇಳುತ್ತಿರುದು ಏಕೆನ್ನುವುದನ್ನು ಹೇಳುತ್ತೇನೆ. ಏಕಾಗ್ರಚಿತ್ತನಾಗಿ ಕೇಳು!

12016008a ದ್ವಿವಿಧೋ ಜಾಯತೇ ವ್ಯಾಧಿಃ ಶಾರೀರೋ ಮಾನಸಸ್ತಥಾ|

12016008c ಪರಸ್ಪರಂ ತಯೋರ್ಜನ್ಮ ನಿರ್ದ್ವಂದ್ವಂ ನೋಪಲಭ್ಯತೇ||

ಶಾರೀರಕ ಮತ್ತು ಮಾನಸಿಕ ಎನ್ನುವ ಎರಡು ರೀತಿಯ ವ್ಯಾಧಿಗಳುಂಟಾಗುತ್ತವೆ. ಒಂದನ್ನಾಶ್ರಯಿಸಿ ಇನ್ನೊಂದು ವ್ಯಾಧಿಯೂ ಹುಟ್ಟಿಕೊಳ್ಳಬಹುದು. ಆದರೆ ಒಂದು ಹುಟ್ಟದೇ ಇನ್ನೊಂದು ಹುಟ್ಟಲಾರದು.

12016009a ಶಾರೀರಾಜ್ಜಾಯತೇ ವ್ಯಾಧಿರ್ಮಾನಸೋ ನಾತ್ರ ಸಂಶಯಃ|

12016009c ಮಾನಸಾಜ್ಜಾಯತೇ ವ್ಯಾಧಿಃ ಶಾರೀರ ಇತಿ ನಿಶ್ಚಯಃ||

ಶರೀರದಿಂದ ವ್ಯಾಧಿಯು ಹುಟ್ಟಿ ಅದರಿಂದಲೇ ಮನೋವ್ಯಾಧಿಯು ಹುಟ್ಟಿಕೊಳ್ಳುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಮನೋವ್ಯಾಧಿಯಿಂದ ಶಾರೀರಿಕ ವ್ಯಾಧಿಯೂ ಉಂಟಾಗುತ್ತದೆ ಎನ್ನುವುದು ನಿಶ್ಚಯವಾದುದು.

12016010a ಶಾರೀರಮಾನಸೇ ದುಃಖೇ ಯೋಽತೀತೇ ಅನುಶೋಚತಿ|

12016010c ದುಃಖೇನ ಲಭತೇ ದುಃಖಂ ದ್ವಾವನರ್ಥೌ ಪ್ರಪದ್ಯತೇ||

ಮುಗಿದುಹೋಗಿರುವ ಶಾರೀರಿಕ ಮತ್ತು ಮಾನಸಿಕ ದುಃಖಗಳನ್ನು ನೆನಪಿಸಿಕೊಂಡು ಶೋಕಿಸುವವನಿಗೆ ದುಃಖದಿಂದ ದುಃಖವು ದೊರಕುವುದೇ ಹೊರತು ಧರ್ಮಾರ್ಥಗಳು ದೊರಕುವುದಿಲ್ಲ.

12016011a ಶೀತೋಷ್ಣೇ ಚೈವ ವಾಯುಶ್ಚ ತ್ರಯಃ ಶಾರೀರಜಾ ಗುಣಾಃ|

12016011c ತೇಷಾಂ ಗುಣಾನಾಂ ಸಾಮ್ಯಂ ಚ ತದಾಹುಃ ಸ್ವಸ್ಥಲಕ್ಷಣಮ್||

ಶೀತ, ಉಷ್ಣ ಮತ್ತು ವಾಯು ಈ ಮೂರು ಶರೀರದಲ್ಲಿರುವ ಗುಣಗಳು. ಈ ಗುಣಗಳ ಸಮಾನತೆಯನ್ನು ಆರೋಗ್ಯದ ಲಕ್ಷಣವೆಂದು ಹೇಳುತ್ತಾರೆ.

12016012a ತೇಷಾಮನ್ಯತಮೋತ್ಸೇಕೇ ವಿಧಾನಮುಪದಿಷ್ಯತೇ|

12016012c ಉಷ್ಣೇನ ಬಾಧ್ಯತೇ ಶೀತಂ ಶೀತೇನೋಷ್ಣಂ ಪ್ರಬಾಧ್ಯತೇ||

ಅವುಗಳಲ್ಲಿ ಯಾವುದಾದರೂ ಒಂದು ಉದ್ರೇಕಗೊಂಡರೆ ಅದರ ಚಿಕಿತ್ಸೆಕೆಗೆ ಈ ವಿಧಾನವನ್ನು ಹೇಳಿದ್ದಾರೆ: ಉಷ್ಣದಿಂದ ಶೀತವನ್ನೂ ಶೀತದಿಂದ ಉಷ್ಣವನ್ನೂ ಪರಿಹರಿಸಬಹುದು.

12016013a ಸತ್ತ್ವಂ ರಜಸ್ತಮಶ್ಚೈವ ಮಾನಸಾಃ ಸ್ಯುಸ್ತ್ರಯೋ ಗುಣಾಃ|

[1]12016013c ಹರ್ಷೇಣ ಬಾಧ್ಯತೇ ಶೋಕೋ ಹರ್ಷಃ ಶೋಕೇನ ಬಾಧ್ಯತೇ||

ಸತ್ವ, ರಜಸ್ಸು ಮತ್ತು ತಮ ಈ ಮೂರು ಮನಸ್ಸಿನ ಗುಣಗಳು. ಹರ್ಷದಿಂದ ಶೋಕವು ಉಪಶಮನಗೊಳ್ಳುತ್ತದೆ ಮತ್ತು ಶೋಕದಿಂದ ಹರ್ಷವು ಕುಂದುತ್ತದೆ.

12016014a ಕಶ್ಚಿತ್ಸುಖೇ ವರ್ತಮಾನೋ ದುಃಖಸ್ಯ ಸ್ಮರ್ತುಮಿಚ್ಚತಿ|

12016014c ಕಶ್ಚಿದ್ದುಃಖೇ ವರ್ತಮಾನಃ ಸುಖಸ್ಯ ಸ್ಮರ್ತುಮಿಚ್ಚತಿ||

ವರ್ತಮಾನದಲ್ಲಿ ಸುಖದಿಂದಿದ್ದರೆ ಕಳೆದುಹೋದ ದುಃಖವನ್ನು ನೆನಪಿಸಿಕೊಳ್ಳಬೇಕು. ಹಾಗೆಯೇ ವರ್ತಮಾನದಲ್ಲಿ ದುಃಖದಿಂದಿದ್ದರೆ ಹಿಂದೆ ಪಟ್ಟಿರುವ ಸುಖವನ್ನು ನೆನಪಿಸಿಕೊಳ್ಳಬೇಕು.

12016015a ಸ ತ್ವಂ ನ ದುಃಖೀ ದುಃಖಸ್ಯ ನ ಸುಖೀ ಚ ಸುಖಸ್ಯ ಚ|

12016015c ನ ದುಃಖೀ ಸುಖಜಾತಸ್ಯ ನ ಸುಖೀ ದುಃಖಜಸ್ಯ ವಾ||

ಆದರೆ ನೀನು ಮಾತ್ರ ಈಗ ದುಃಖಿಯಾಗಿದ್ದು ಹಿಂದಿನ ನಮ್ಮ ದುಃಖಗಳನ್ನು ಸ್ಮರಿಸುತ್ತಿಲ್ಲ ಅಥವಾ ಈಗ ಸುಖಿಯಾಗಿದ್ದು ಹಿಂದಿನ ನಮ್ಮ ಸುಖಗಳನ್ನು ಸ್ಮರಿಸುತ್ತಿಲ್ಲ ಅಥವಾ ಈಗ ದುಃಖಿಯಾಗಿದ್ದು ನಮ್ಮ ಹಿಂದಿನ ಸುಖಗಳನ್ನು ಸ್ಮರಿಸುತ್ತಿಲ್ಲ ಅಥವಾ ಈಗ ಸುಖಿಯಾಗಿದ್ದು ಹಿಂದಿನ ನಮ್ಮ ದುಃಖಗಳನ್ನು ಸ್ಮರಿಸಿಕೊಳ್ಳುತ್ತಿಲ್ಲ.

12016016a ಸ್ಮರ್ತುಮರ್ಹಸಿ ಕೌರವ್ಯ ದಿಷ್ಟಂ ತು ಬಲವತ್ತರಮ್|

12016016c ಅಥ ವಾ ತೇ ಸ್ವಭಾವೋಽಯಂ ಯೇನ ಪಾರ್ಥಿವ ಕೃಷ್ಯಸೇ||

ಕೌರವ್ಯ! ದೈವವು ಎಷ್ಟು ಬಲವತ್ತರವಾಗಿದೆ ಎನ್ನುವುದನ್ನು ಸ್ಮರಿಸಿಕೊಳ್ಳಬೇಕು. ಪಾರ್ಥಿವ! ಅಥವಾ ಸ್ವಭಾವತಃ ನೀನು ಶೋಕಪಡುವವನಾಗಿರುವುದರಿಂದ ಈ ರೀತಿ ಶೋಕಿಸುತ್ತಿರುವೆ!

12016017a ದೃಷ್ಟ್ವಾ ಸಭಾಗತಾಂ ಕೃಷ್ಣಾಮೇಕವಸ್ತ್ರಾಂ ರಜಸ್ವಲಾಮ್|

12016017c ಮಿಷತಾಂ ಪಾಂಡುಪುತ್ರಾಣಾಂ ನ ತಸ್ಯ ಸ್ಮರ್ತುಮರ್ಹಸಿ||

ಪಾಂಡುಪುತ್ರರು ನೋಡುತ್ತಿದ್ದಂತೆಯೇ ರಜಸ್ವಲೆಯಾಗಿ ಏಕವಸ್ತ್ರಳಾಗಿದ್ದ ಕೃಷ್ಣೆಯನ್ನು ಸಭೆಗೆ ಎಳೆತಂದಿರುವುದನ್ನು ನೋಡಿಯೂ ನೀನು ಅದನ್ನು ನೆನಪಿಸಿಕೊಳ್ಳುತ್ತಿಲ್ಲ!

12016018a ಪ್ರವ್ರಾಜನಂ ಚ ನಗರಾದಜಿನೈಶ್ಚ ನಿವಾಸನಮ್|

12016018c ಮಹಾರಣ್ಯನಿವಾಸಶ್ಚ ನ ತಸ್ಯ ಸ್ಮರ್ತುಮರ್ಹಸಿ||

ಜಿನವಸ್ತ್ರಗಳನ್ನುಡಿಸಿ ನಗರದಿಂದ ಹೊರಗಟ್ಟಿದುದನ್ನು ಮತ್ತು ಮಹಾ ಅರಣ್ಯದಲ್ಲಿ ನಮ್ಮ ವಾಸವನ್ನು ನೀನು ನೆನಪಿಸಿಕೊಳ್ಳುತ್ತಿಲ್ಲ!

12016019a ಜಟಾಸುರಾತ್ಪರಿಕ್ಲೇಶಂ ಚಿತ್ರಸೇನೇನ ಚಾಹವಮ್|

12016019c ಸೈಂಧವಾಚ್ಚ ಪರಿಕ್ಲೇಶಂ ಕಥಂ ವಿಸ್ಮೃತವಾನಸಿ||

12016019e ಪುನರಜ್ಞಾತಚರ್ಯಾಯಾಂ ಕೀಚಕೇನ ಪದಾ ವಧಮ್||

ಜಟಾಸುರನಿಂದಾದ ಕಷ್ಟವನ್ನೂ, ಚಿತ್ರಸೇನನೊಡನೆ ಮಾಡಿದ ಯುದ್ಧವನ್ನೂ ಮತ್ತು ಸೈಂಧವನ ಉಪಟಳವನ್ನೂ ನೀನು ಹೇಗೆ ಮರೆತುಬಿಟ್ಟಿದ್ದೀಯೆ? ಅನಂತರ ಅಜ್ಞಾತವಾಸದಲ್ಲಿ ಕೀಚಕನು ದ್ರೌಪದಿಯನ್ನು ಕಾಲಿನಿಂದ ಒದೆದನು.

12016020a ಯಚ್ಚ ತೇ ದ್ರೋಣಭೀಷ್ಮಾಭ್ಯಾಂ ಯುದ್ಧಮಾಸೀದರಿಂದಮ|

12016020c ಮನಸೈಕೇನ ತೇ ಯುದ್ಧಮಿದಂ ಘೋರಮುಪಸ್ಥಿತಮ್||

ಅರಿಂದಮ! ದ್ರೋಣ-ಭೀಷ್ಮರೊಡನೆ ಹೇಗೆ ಯುದ್ಧವನ್ನು ನಡೆಸಿದೆಯೋ ಹಾಗೆ ನಿನ್ನ ಮನಸ್ಸಿನಲ್ಲಿಯೂ ಈ ಘೋರ ಯುದ್ಧವು ನಡೆಯುತ್ತಿದೆ.

12016021a ಯತ್ರ ನಾಸ್ತಿ ಶರೈಃ ಕಾರ್ಯಂ ನ ಮಿತ್ರೈರ್ನ ಚ ಬಂಧುಭಿಃ|

12016021c ಆತ್ಮನೈಕೇನ ಯೋದ್ಧವ್ಯಂ ತತ್ತೇ ಯುದ್ಧಮುಪಸ್ಥಿತಮ್||

ಈಗ ಬಂದೊದಗಿರುವ ಯುದ್ಧದಲ್ಲಿ ನೀನು ನಿನ್ನ ಆತ್ಮದೊಂದಿಗೇ ಯುದ್ಧಮಾಡಬೇಕಾಗುತ್ತದೆ. ಈ ಯುದ್ಧದಲ್ಲಿ ಬಾಣಗಳ ಅಥವಾ ಮಿತ್ರ-ಬಂಧುಗಳ ಕೆಲಸವೇನೂ ಇಲ್ಲ.

12016022a ತಸ್ಮಿನ್ನನಿರ್ಜಿತೇ ಯುದ್ಧೇ ಪ್ರಾಣಾನ್ಯದಿ ಹ ಮೋಕ್ಷ್ಯಸೇ|

12016022c ಅನ್ಯಂ ದೇಹಂ ಸಮಾಸ್ಥಾಯ ಪುನಸ್ತೇನೈವ ಯೋತ್ಸ್ಯಸೇ||

ನೀನೇನಾದರೂ ಈ ಯುದ್ಧದಲ್ಲಿ ಸೋತು ಪ್ರಾಣಗಳನ್ನು ತೊರೆದರೆ ಅನ್ಯ ದೇಹವನ್ನು ಹೊತ್ತು ಪುನಃ ಈ ಶತ್ರುಗಳೊಡನೆ ಹೋರಾಡಬೇಕಾಗುತ್ತದೆ!

12016023a ತಸ್ಮಾದದ್ಯೈವ ಗಂತವ್ಯಂ ಯುದ್ಧಸ್ಯ ಭರತರ್ಷಭ|

12016023c ಏತಜ್ಜಿತ್ವಾ ಮಹಾರಾಜ ಕೃತಕೃತ್ಯೋ ಭವಿಷ್ಯಸಿ||

ಭರತರ್ಷಭ! ಮಹಾರಾಜ! ಆದುದರಿಂದ ಇಂದೇ ನೀನು ಈ ಯುದ್ಧವನ್ನು ಮಾಡಬೇಕು. ಇದನ್ನು ಗೆದ್ದು ನೀನು ಕೃತಕೃತ್ಯನಾಗುವೆ!

12016024a ಏತಾಂ ಬುದ್ಧಿಂ ವಿನಿಶ್ಚಿತ್ಯ ಭೂತಾನಾಮಾಗತಿಂ ಗತಿಮ್|

12016024c ಪಿತೃಪೈತಾಮಹೇ ವೃತ್ತೇ ಶಾಧಿ ರಾಜ್ಯಂ ಯಥೋಚಿತಮ್||

ಇರುವವುಗಳು ಬರುತ್ತಿರುತ್ತವೆ ಮತ್ತು ಹೋಗುತ್ತಿರುತ್ತವೆ ಎಂಬ ನಿಶ್ಚಯವನ್ನು ಮಾಡಿ ಪಿತೃ-ಪಿತಾಮಹರು ನಡೆದುಕೊಂಡ ರೀತಿಯಲ್ಲಿ ಮನಸ್ಸು ಮಾಡಿ ಯಥೋಚಿತವಾದ ರಾಜ್ಯವನ್ನು ಆಳು!

12016025a ದಿಷ್ಟ್ಯಾ ದುರ್ಯೋಧನಃ ಪಾಪೋ ನಿಹತಃ ಸಾನುಗೋ ಯುಧಿ|

12016025c ದ್ರೌಪದ್ಯಾಃ ಕೇಶಪಕ್ಷಸ್ಯ ದಿಷ್ಟ್ಯಾ ತ್ವಂ ಪದವೀಂ ಗತಃ||

ದೈವವು ನಡೆಸಿದಂತೆ ಯುದ್ಧದಲ್ಲಿ ಪಾಪೀ ದುರ್ಯೋಧನನು ಅವನ ಅನುಯಾಯಿಗಳೊಂದಿಗೆ ಹತನಾದನು. ಸೌಭಾಗ್ಯವಶಾತ್ ನೀನು ದ್ರೌಪದಿಯ ಕೇಶಪಾಶದ ಅಧಿಕಾರವನ್ನು ಪುನಃ ಪಡೆದುಕೊಂಡಿರುವೆ!

12016026a ಯಜಸ್ವ ವಾಜಿಮೇಧೇನ ವಿಧಿವದ್ದಕ್ಷಿಣಾವತಾ|

12016026c ವಯಂ ತೇ ಕಿಂಕರಾಃ ಪಾರ್ಥ ವಾಸುದೇವಶ್ಚ ವೀರ್ಯವಾನ್||

ಪಾರ್ಥ! ವಿವಿಧ ದಕ್ಷಿಣಾಯುಕ್ತವಾದ ಅಶ್ವಮೇಧವನ್ನು ಯಾಜಿಸು. ನಾವು ಮತ್ತು ವೀರ್ಯವಾನ್ ವಾಸುದೇವನೂ ನಿನ್ನ ಕಿಂಕರರಾಗಿದ್ದೇವೆ!”

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಭೀಮವಾಕ್ಯೇ ಷೋಡಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಭೀಮವಾಕ್ಯ ಎನ್ನುವ ಹದಿನಾರನೇ ಅಧ್ಯಾಯವು.

[1] ಹಿಂದೆ ಶೀತ-ಉಷ್ಣ-ವಾಯುಗಳ ಕುರಿತು ಹೇಳುವಾಗ ಇದ್ದಂತೆ ಸತ್ವ-ರಜ-ತಮೋಗುಣಗಳ ಕುರಿತು ಹೇಳುವಾಗಲೂ ಈ ಶ್ಲೋಕಾರ್ಧಗಳನ್ನು ಭಾರತ ದರ್ಶನ ಪ್ರಕಾಶನದಲ್ಲಿ ನೀಡಲಾಗಿದೆ: ತೇಷಾಂ ಗುಣಾನಾಂ ಸಾಮ್ಯಂ ಯತ್ತದಾಹುಃ ಸ್ವಸ್ಥಲಕ್ಷಣಂ|| ತೇಷಾಮನ್ಯತಮೋತ್ಸೇಕೇ ವಿಧಾನಮುಪದಿಶ್ಯತೇ| ಅರ್ಥಾತ್ ಈ ಮೂರು ಗುಣಗಳ ಸಮತೆಯನ್ನು ಆರೋಗ್ಯದ ಲಕ್ಷಣವೆಂದು ಹೇಳುತ್ತಾರೆ. ಅವುಗಳಲ್ಲಿ ಯಾವುದಾದರೂ ಒಂದು ಉದ್ರೇಕಗೊಂಡರೆ ಅದರ ಚಿಕಿತ್ಸೆಗೆ ವಿಧಾನವನ್ನು ಹೇಳಿದ್ದಾರೆ.

Comments are closed.