ಶಾಂತಿ ಪರ್ವ: ರಾಜಧರ್ಮ ಪರ್ವ

೧೫

12015001 ವೈಶಂಪಾಯನ ಉವಾಚ

12015001a ಯಾಜ್ಞಸೇನ್ಯಾ ವಚಃ ಶ್ರುತ್ವಾ ಪುನರೇವಾರ್ಜುನೋಽಬ್ರವೀತ್|

12015001c ಅನುಮಾನ್ಯ ಮಹಾಬಾಹುಂ ಜ್ಯೇಷ್ಠಂ ಭ್ರಾತರಮೀಶ್ವರಮ್||

ವೈಶಂಪಾಯನನು ಹೇಳಿದನು: “ಯಾಜ್ಞಸೇನಿಯ ಮಾತನ್ನು ಕೇಳಿ ಪುನಃ ಅರ್ಜುನನು ಮಹಾಬಾಹು ಜ್ಯೇಷ್ಠ ಭ್ರಾತಾ ಈಶ್ವರ ಯುಧಿಷ್ಠಿರನನ್ನು ಗೌರವಿಸಿ ಈ ಮಾತುಗಳನ್ನಾಡಿದನು:

12015002a ದಂಡಃ ಶಾಸ್ತಿ ಪ್ರಜಾಃ ಸರ್ವಾ ದಂಡ ಏವಾಭಿರಕ್ಷತಿ|

12015002c ದಂಡಃ ಸುಪ್ತೇಷು ಜಾಗರ್ತಿ ದಂಡಂ ಧರ್ಮಂ ವಿದುರ್ಬುಧಾಃ||

“ದಂಡವು ಪ್ರಜೆಗಳನ್ನು ಆಳುತ್ತದೆ ಹಾಗೂ ರಕ್ಷಿಸುತ್ತದೆ. ಎಲ್ಲರೂ ಮಲಗಿರುವಾಗ ದಂಡವು ಎಚ್ಚೆತ್ತಿರುತ್ತದೆ. ಆದುದರಿಂದ ತಿಳಿದವರು ದಂಡವೇ ಧರ್ಮವೆಂದೂ ಹೇಳುತ್ತಾರೆ.

12015003a ಧರ್ಮಂ ಸಂರಕ್ಷತೇ ದಂಡಸ್ತಥೈವಾರ್ಥಂ ನರಾಧಿಪ|

12015003c ಕಾಮಂ ಸಂರಕ್ಷತೇ ದಂಡಸ್ತ್ರಿವರ್ಗೋ ದಂಡ ಉಚ್ಯತೇ||

ನರಾಧಿಪ! ದಂಡವು ಧರ್ಮವನ್ನು ರಕ್ಷಿಸುತ್ತದೆ. ದಂಡವು ಅರ್ಥವನ್ನೂ ಹಾಗೆಯೇ ಕಾಮವನ್ನೂ ರಕ್ಷಿಸುತ್ತದೆ. ಆದುದರಿಂದ ದಂಡವು ತ್ರಿವರ್ಗರೂಪವಾಗಿರುವುದೆಂದು ಹೇಳುತ್ತಾರೆ.

12015004a ದಂಡೇನ ರಕ್ಷ್ಯತೇ ಧಾನ್ಯಂ ಧನಂ ದಂಡೇನ ರಕ್ಷ್ಯತೇ|

12015004c ಏತದ್ವಿದ್ವನ್ನುಪಾದತ್ಸ್ವ ಸ್ವಭಾವಂ ಪಶ್ಯ ಲೌಕಿಕಮ್||

ದಂಡದಿಂದ ಧಾನ್ಯದ ರಕ್ಷಣೆಯಾಗುತ್ತದೆ. ದಂಡದಿಂದ ಧನದ ರಕ್ಷಣೆಯೂ ಆಗುತ್ತದೆ. ಆದುದರಿಂದ ನೀನೂ ದಂಡಧಾರಣೆಮಾಡು ಮತ್ತು ಲೋಕದ ಸ್ವಭಾವದ ಕಡೆ ಗಮನಹರಿಸು!

12015005a ರಾಜದಂಡಭಯಾದೇಕೇ ಪಾಪಾಃ ಪಾಪಂ ನ ಕುರ್ವತೇ|

12015005c ಯಮದಂಡಭಯಾದೇಕೇ ಪರಲೋಕಭಯಾದಪಿ||

12015006a ಪರಸ್ಪರಭಯಾದೇಕೇ ಪಾಪಾಃ ಪಾಪಂ ನ ಕುರ್ವತೇ|

12015006c ಏವಂ ಸಾಂಸಿದ್ಧಿಕೇ ಲೋಕೇ ಸರ್ವಂ ದಂಡೇ ಪ್ರತಿಷ್ಠಿತಮ್||

ರಾಜದಂಡದ ಭಯದಿಂದ ಕೆಲವು ಪಾಪಿಗಳು ಪಾಪಕರ್ಮಗಳನ್ನೆಸಗುವುದಿಲ್ಲ. ಇನ್ನು ಕೆಲವು ಪಾಪಿಗಳು ಯಮದಂಡದ ಭಯದಿಂದ ಮತ್ತು ಪರಲೋಕದ ಭಯದಿಂದ ಪಾಪಕರ್ಮಗಳನ್ನೆಸಗುವುದಿಲ್ಲ. ಕೆಲವು ಪಾಪಿಗಳು ಪರಸ್ಪರರ ಭಯದಿಂದಾಗಿ ಪಾಪಕರ್ಮಗಳನ್ನೆಸಗುವುದಿಲ್ಲ. ಈ ರೀತಿ ಎಲ್ಲವೂ ದಂಡವನ್ನವಲಂಬಿಸಿವೆ ಎಂದು ಲೋಕದಲ್ಲಿ ಸಿದ್ಧವಾಗಿದೆ.

12015007a ದಂಡಸ್ಯೈವ ಭಯಾದೇಕೇ ನ ಖಾದಂತಿ ಪರಸ್ಪರಮ್|

12015007c ಅಂಧೇ ತಮಸಿ ಮಜ್ಜೇಯುರ್ಯದಿ ದಂಡೋ ನ ಪಾಲಯೇತ್||

ದಂಡದ ಭಯವೊಂದರಿಂದಲೇ ಪರಸ್ಪರರನ್ನು ನುಂಗಿಹಾಕುತ್ತಿಲ್ಲ! ರಾಜನು ದಂಡದಿಂದ ಪ್ರಜೆಗಳನ್ನು ಪಾಲಿಸದೇ ಇದ್ದರೆ ಪ್ರಜೆಗಳೆಲ್ಲರೂ ಅನಾಯಕತ್ವವೆಂಬ ಅಂಧಕಾರದಲ್ಲಿ ಮುಳುಗಿಹೋಗುತ್ತಿದ್ದರು!

12015008a ಯಸ್ಮಾದದಾಂತಾನ್ದಮಯತ್ಯಶಿಷ್ಟಾನ್ದಂಡಯತ್ಯಪಿ|

12015008c ದಮನಾದ್ದಂಡನಾಚ್ಚೈವ ತಸ್ಮಾದ್ದಂಡಂ ವಿದುರ್ಬುಧಾಃ||

ಸ್ವೇಚ್ಛಾಚಾರಿಗಳನ್ನು ದಮನಮಾಡುವುದರಿಂದ, ಮತ್ತು ದುಷ್ಟರನ್ನು ಶಿಕ್ಷಿಸುವುದರಿಂದ ಇದನ್ನು ದಂಡವೆನ್ನುತ್ತಾರೆ. ದಮನ-ದಂಡನೆಗಳನ್ನು ಮಾಡುವುದರಿಂದ ಇದನ್ನು ತಿಳಿದವರು ದಂಡ ಎನ್ನುತ್ತಾರೆ.

12015009a ವಾಚಿ ದಂಡೋ ಬ್ರಾಹ್ಮಣಾನಾಂ ಕ್ಷತ್ರಿಯಾಣಾಂ ಭುಜಾರ್ಪಣಮ್|

12015009c ದಾನದಂಡಃ ಸ್ಮೃತೋ ವೈಶ್ಯೋ ನಿರ್ದಂಡಃ ಶೂದ್ರ ಉಚ್ಯತೇ||

ಬ್ರಾಹ್ಮಣರನ್ನು ಮಾತಿನಿಂದ ದಂಡಿಸಬೇಕು. ಕ್ಷತ್ರಿಯರನ್ನು ಅವರ ಊಟಕ್ಕೆ ಸಾಕಾಗುವಷ್ಟೇ ವೇತನವನ್ನು ನೀಡುವುದರ ಮೂಲಕ ದಂಡಿಸಬೇಕು. ಕಪ್ಪ-ಕಾಣಿಕೆಗಳನ್ನು ತೆಗೆದುಕೊಳ್ಳುವುದರ ಮೂಲಕ ವೈಶ್ಯರನ್ನು ದಂಡಿಸಬೇಕು. ಮತ್ತು ಶೂದ್ರರಿಗೆ ದಂಡನೆಯೇ ಇಲ್ಲ ಎಂದು ಹೇಳುತ್ತಾರೆ.

12015010a ಅಸಂಮೋಹಾಯ ಮರ್ತ್ಯಾನಾಮರ್ಥಸಂರಕ್ಷಣಾಯ ಚ|

12015010c ಮರ್ಯಾದಾ ಸ್ಥಾಪಿತಾ ಲೋಕೇ ದಂಡಸಂಜ್ಞಾ ವಿಶಾಂ ಪತೇ||

ವಿಶಾಂಪತೇ! ಲೋಕದಲ್ಲಿ ಮನುಷ್ಯರು ಮೋಹಪರವಶರಾಗದಂತೆ ಮಾಡಲು ಮತ್ತು ಧನದ ಸಂರಕ್ಷಣೆಗಾಗಿ ದಂಡವೆಂದು ಕರೆಯಲ್ಪಡುವ ಮರ್ಯಾದೆಯು ಸ್ಥಾಪಿತವಾಗಿದೆ.

12015011a ಯತ್ರ ಶ್ಯಾಮೋ ಲೋಹಿತಾಕ್ಷೋ ದಂಡಶ್ಚರತಿ ಸೂನೃತಃ|

12015011c ಪ್ರಜಾಸ್ತತ್ರ ನ ಮುಹ್ಯಂತಿ ನೇತಾ ಚೇತ್ಸಾಧು ಪಶ್ಯತಿ||

ಎಲ್ಲಿ ಶ್ಯಾಮಲವರ್ಣದ ಕೆಂಪುಕಣ್ಣುಗಳುಳ್ಳ ದಂಡವನ್ನು ಸರಿಯಾದ ರೀತಿಯಲ್ಲಿ ಪ್ರಯೋಗಿಸುತ್ತಾರೆಯೋ ಅಲ್ಲಿ ಪ್ರಜೆಗಳು ಮೋಹಪರವಶರಾಗುವುದಿಲ್ಲ ಮತ್ತು ಅಲ್ಲಿ ಅಸಾಧು ಜನರು ಕಂಡುಬರುವುದಿಲ್ಲ.

12015012a ಬ್ರಹ್ಮಚಾರೀ ಗೃಹಸ್ಥಶ್ಚ ವಾನಪ್ರಸ್ಥೋಽಥ ಭಿಕ್ಷುಕಃ|

12015012c ದಂಡಸ್ಸೈವ ಭಯಾದೇತೇ ಮನುಷ್ಯಾ ವರ್ತ್ಮನಿ ಸ್ಥಿತಾಃ||

ದಂಡದ ಭಯದಿಂದಲೇ ಮನುಷ್ಯರು ಬ್ರಹ್ಮಚಾರೀ, ಗೃಹಸ್ಥ, ವಾನಪ್ರಸ್ಥ ಮತ್ತು ಭಿಕ್ಷುಕ ಮೊದಲಾದ ಆಶ್ರಮಗಳಲ್ಲಿ ಸರಿಯಾಗಿ ನಡೆದುಕೊಂಡಿರುತ್ತಾರೆ.

12015013a ನಾಭೀತೋ ಯಜತೇ ರಾಜನ್ನಾಭೀತೋ ದಾತುಮಿಚ್ಚತಿ|

12015013c ನಾಭೀತಃ ಪುರುಷಃ ಕಶ್ಚಿತ್ಸಮಯೇ ಸ್ಥಾತುಮಿಚ್ಚತಿ||

ರಾಜನ್! ಭಯವಿಲ್ಲದವನು ಯಜ್ಞಮಾಡುವುದಿಲ್ಲ. ಭಯವಿಲ್ಲದವನು ದಾನವನ್ನೂ ನೀಡಲು ಇಚ್ಛಿಸುವುದಿಲ್ಲ. ಭಯವಿಲ್ಲದ ಪುರುಷನು ತಾನು ಮಾಡಿದ ಪ್ರಮಾಣವಚನಗಳಂತೆಯೂ ನಡೆದುಕೊಳ್ಳುವುದಿಲ್ಲ.

12015014a ನಾಚ್ಚಿತ್ತ್ವಾ ಪರಮರ್ಮಾಣಿ ನಾಕೃತ್ವಾ ಕರ್ಮ ದಾರುಣಮ್|

12015014c ನಾಹತ್ವಾ ಮತ್ಸ್ಯಘಾತೀವ ಪ್ರಾಪ್ನೋತಿ ಮಹತೀಂ ಶ್ರಿಯಮ್||

ಬೆಸ್ತನಂತೆ ಶತ್ರುಗಳ ಮರ್ಮಸ್ಥಾನಗಳನ್ನು ಸೀಳದೇ, ದಾರುಣ ಕರ್ಮಗಳನ್ನೆಸಗದೆ, ಸಂಹರಿಸದೇ ಮಹದೈಶ್ವರ್ಯವನ್ನು ಸಂಪಾದಿಸಲು ಸಾಧ್ಯವಿಲ್ಲ.

12015015a ನಾಘ್ನತಃ ಕೀರ್ತಿರಸ್ತೀಹ ನ ವಿತ್ತಂ ನ ಪುನಃ ಪ್ರಜಾಃ|

12015015c ಇಂದ್ರೋ ವೃತ್ರವಧೇನೈವ ಮಹೇಂದ್ರಃ ಸಮಪದ್ಯತ||

ಶತ್ರುಗಳನ್ನು ಸಂಹರಿಸದೇ ಕೀರ್ತಿಯಿಲ್ಲ, ಸಂಪತ್ತಿಲ್ಲ ಮತ್ತು ಪ್ರಜೆಗಳೂ ಇರುವುದಿಲ್ಲ. ವೃತ್ರನ ವಧೆಗೈದೇ ಇಂದ್ರನು ಮಹೇಂದ್ರಪದವಿಯನ್ನು ಪಡೆದನು!

12015016a ಯ ಏವ ದೇವಾ ಹಂತಾರಸ್ತಾಽಲ್ಲೋಕೋಽರ್ಚಯತೇ ಭೃಶಮ್|

12015016c ಹಂತಾ ರುದ್ರಸ್ತಥಾ ಸ್ಕಂದಃ ಶಕ್ರೋಽಗ್ನಿರ್ವರುಣೋ ಯಮಃ||

12015017a ಹಂತಾ ಕಾಲಸ್ತಥಾ ವಾಯುರ್ಮೃತ್ಯುರ್ವೈಶ್ರವಣೋ ರವಿಃ|

12015017c ವಸವೋ ಮರುತಃ ಸಾಧ್ಯಾ ವಿಶ್ವೇದೇವಾಶ್ಚ ಭಾರತ||

ಈ ರೀತಿ ಹಂತಕರಾದ ದೇವತೆಗಳನ್ನೇ ಲೋಕಗಳು ಬಹಳವಾಗಿ ಪೂಜಿಸುತ್ತವೆ. ರುದ್ರ ಮತ್ತು ಹಾಗೆಯೇ ಸ್ಕಂದ, ಶಕ್ರ, ವರುಣ ಮತ್ತು ಯಮರೂ ಹಂತಾರರೇ! ಭಾರತ! ಕಾಲ, ವಾಯು, ಮೃತ್ಯು, ವೈಶ್ರವಣ, ರವಿ, ವಸವರು, ಮರುತರು, ಸಾಧ್ಯರು, ಮತ್ತು ವಿಶ್ವೇದೇವರೂ ಕೂಡ ಹಂತಾರರೇ!

12015018a ಏತಾನ್ದೇವಾನ್ನಮಸ್ಯಂತಿ ಪ್ರತಾಪಪ್ರಣತಾ ಜನಾಃ|

12015018cಬ್ರಹ್ಮಾಣಂ ನ ಧಾತಾರಂ ನ ಪೂಷಾಣಂ ಕಥಂ ಚನ||

ಪ್ರತಾಪಗಳಿಂದ ಕೂಡಿರುವ ಈ ದೇವತೆಗಳನ್ನೇ ಜನರು ನಮಸ್ಕರಿಸುತ್ತಾರೆ. ಬ್ರಹ್ಮನನ್ನಲ್ಲ, ಧಾತಾರನನ್ನಲ್ಲ ಮತ್ತು ಪೂಷಾಣನನ್ನಲ್ಲ!

12015019a ಮಧ್ಯಸ್ಥಾನ್ಸರ್ವಭೂತೇಷು ದಾಂತಾನ್ಶಮಪರಾಯಣಾನ್|

12015019c ಯಜಂತೇ ಮಾನವಾಃ ಕೇ ಚಿತ್ಪ್ರಶಾಂತಾಃ ಸರ್ವಕರ್ಮಸು||

ಸರ್ವಭೂತಗಳಲ್ಲೂ ಸಮಭಾವದಿಂದಿರುವ ಜಿತೇಂದ್ರಿಯ ಶಾಂತಿಪರಾಯಣ ದೇವತೆಗಳನ್ನು ಪ್ರಶಾಂತರಾದ ಕೆಲವೇ ಮಾನವರು ಸರ್ವಕರ್ಮಗಳಲ್ಲಿ ಪೂಜಿಸುತ್ತಾರೆ.

12015020a ನ ಹಿ ಪಶ್ಯಾಮಿ ಜೀವಂತಂ ಲೋಕೇ ಕಂ ಚಿದಹಿಂಸಯಾ|

12015020c ಸತ್ತ್ವೈಃ ಸತ್ತ್ವಾನಿ ಜೀವಂತಿ ದುರ್ಬಲೈರ್ಬಲವತ್ತರಾಃ||

ಲೋಕದಲ್ಲಿ ಕೇವಲ ಅಹಿಂಸೆಯಿಂದ ಜೀವಿಸುತ್ತಿರುವವರ್ಯಾರನ್ನೂ ನಾನು ಕಾಣುತ್ತಿಲ್ಲ! ಬಲಶಾಲೀ ಸತ್ತ್ವಗಳು ದುರ್ಬಲರ ಸತ್ತ್ವಗಳಿಂದ ಜೀವಿಸುತ್ತವೆ.

12015021a ನಕುಲೋ ಮೂಷಕಾನತ್ತಿ ಬಿಡಾಲೋ ನಕುಲಂ ತಥಾ|

12015021c ಬಿಡಾಲಮತ್ತಿ ಶ್ವಾ ರಾಜನ್ಶ್ವಾನಂ ವ್ಯಾಲಮೃಗಸ್ತಥಾ||

ರಾಜನ್! ಮುಂಗುಸಿಯು ಇಲಿಗಳನ್ನು, ಬೆಕ್ಕು ಮುಂಗುಸಿಯನ್ನು, ಬೆಕ್ಕನ್ನು ನಾಯಿ ಮತ್ತು ನಾಯಿಯನ್ನು ಚಿರತೆ ಹೀಗೆ ಒಂದು ಇನ್ನೊಂದನ್ನು ತಿನ್ನುತ್ತಿರುತ್ತವೆ!

12015022a ತಾನತ್ತಿ ಪುರುಷಃ ಸರ್ವಾನ್ಪಶ್ಯ ಧರ್ಮೋ ಯಥಾಗತಃ|

12015022c ಪ್ರಾಣಸ್ಯಾನ್ನಮಿದಂ ಸರ್ವಂ ಜಂಗಮಂ ಸ್ಥಾವರಂ ಚ ಯತ್||

ಇವೆಲ್ಲವುಗಳನ್ನೂ ಮನುಷ್ಯನು ಕೊಂದು ತಿನ್ನುತ್ತಾನೆ. ಹೀಗೆ ನಡೆದುಕೊಂಡುಬಂದಿರುವ ಧರ್ಮವನ್ನಾದರೋ ನೀನು ನೋಡು! ಸ್ಥಾವರ-ಜಂಗಮಗಳೆಲ್ಲವೂ ಪ್ರಾಣಧಾರಣೆಗೆ ಅನ್ನರೂಪವಾಗಿಯೇ ಇವೆ.

12015023a ವಿಧಾನಂ ದೇವವಿಹಿತಂ ತತ್ರ ವಿದ್ವಾನ್ನ ಮುಹ್ಯತಿ|

12015023c ಯಥಾ ಸೃಷ್ಟೋಽಸಿ ರಾಜೇಂದ್ರ ತಥಾ ಭವಿತುಮರ್ಹಸಿ||

ರಾಜೇಂದ್ರ! ಪ್ರಾಣಿಗಳು ಪ್ರಾಣಿಗಳನ್ನವಲಂಬಿಸಿಯೇ ಜೀವಿಸಬೇಕು ಎಂಬ ಈ ವಿಧಾನವು ದೇವವಿಹಿತವಾದುದು. ತಿಳಿದವನು ಈ ವಿಷಯದಲ್ಲಿ ಭ್ರಾಂತನಾಗುವುದಿಲ್ಲ. ನೀನು ಹೇಗೆ ಸೃಷ್ಟಿಸಲ್ಪಟ್ಟಿರುವಿಯೋ ಅದೇರೀತಿ ನೀನು ಇರಬೇಕಾಗುತ್ತದೆ!

12015024a ವಿನೀತಕ್ರೋಧಹರ್ಷಾ ಹಿ ಮಂದಾ ವನಮುಪಾಶ್ರಿತಾಃ|

12015024c ವಿನಾ ವಧಂ ನ ಕುರ್ವಂತಿ ತಾಪಸಾಃ ಪ್ರಾಣಯಾಪನಮ್||

ಕ್ರೋಧ-ಹರ್ಷಗಳನ್ನು ಹತೋಟಿಯಲ್ಲಿಟ್ಟುಕೊಂಡು ವನವನ್ನು ಸೇರುವ ಮೂಢ ಕ್ಷತ್ರಿಯ ತಾಪಸರು ವಧೆಗೈಯದೇ ಜೀವಂತವಾಗಿರಲಾರರು!

12015025a ಉದಕೇ ಬಹವಃ ಪ್ರಾಣಾಃ ಪೃಥಿವ್ಯಾಂ ಚ ಫಲೇಷು ಚ|

12015025c ನ ಚ ಕಶ್ಚಿನ್ನ ತಾನ್ ಹಂತಿ ಕಿಮನ್ಯತ್ಪ್ರಾಣಯಾಪನಾತ್||

ಕುಡಿಯುವ ನೀರಿನಲ್ಲಿ, ಗೆಡ್ಡೆ-ಗೆಣಸುಗಳಲ್ಲಿ ಮತ್ತು ಹಣ್ಣುಗಳಲ್ಲಿ ಅನೇಕ ಜೀವಿಗಳಿರುತ್ತವೆ. ಇವುಗಳನ್ನು ಕೊಲ್ಲದೇ ಯಾರೂ ಜೀವಂತವಾಗಿರಲಾರರು!

12015026a ಸೂಕ್ಷ್ಮಯೋನೀನಿ ಭೂತಾನಿ ತರ್ಕಗಮ್ಯಾನಿ ಕಾನಿ ಚಿತ್|

12015026c ಪಕ್ಷ್ಮಣೋಽಪಿ ನಿಪಾತೇನ ಯೇಷಾಂ ಸ್ಯಾತ್ಸ್ಕಂಧಪರ್ಯಯಃ||

ಸೂಕ್ಷ್ಮಯೋನಿಗಳ ಇರುವಿಕೆಯನ್ನು ಕೇವಲ ತರ್ಕದಿಂದ ಪ್ರಮಾಣೀಕರಿಸಬಹುದು. ನಮ್ಮ ಒಂದು ರೆಪ್ಪೆಯ ಕೂದಲೂ ಅವುಗಳ ಮೇಲೆ ಬಿದ್ದರೆ ಅವುಗಳ ಅವಯವಗಳು ಮುರಿದುಹೋಗುತ್ತವೆ!

12015027a ಗ್ರಾಮಾನ್ನಿಷ್ಕ್ರಮ್ಯ ಮುನಯೋ ವಿಗತಕ್ರೋಧಮತ್ಸರಾಃ|

12015027c ವನೇ ಕುಟುಂಬಧರ್ಮಾಣೋ ದೃಶ್ಯಂತೇ ಪರಿಮೋಹಿತಾಃ||

ಕ್ರೋಧ-ಮತ್ಸರಗಳನ್ನು ತೊರೆದು ಮುನಿಗಳು ಗ್ರಾಮದಿಂದ ಹೊರಟು ವನದಲ್ಲಿ ಮೋಹಿತರಾಗಿ ಕುಟುಂಬಧರ್ಮವನ್ನು ಅನುಸರಿಸುತ್ತಿರುವುದನ್ನು ನಾವು ನೋಡುತ್ತೇವೆ.

12015028a ಭೂಮಿಂ ಭಿತ್ತ್ವೌಷಧೀಶ್ಚಿತ್ತ್ವಾ ವೃಕ್ಷಾದೀನಂಡಜಾನ್ಪಶೂನ್|

12015028c ಮನುಷ್ಯಾಸ್ತನ್ವತೇ ಯಜ್ಞಾಂಸ್ತೇ ಸ್ವರ್ಗಂ ಪ್ರಾಪ್ನುವಂತಿ ಚ||

ಭೂಮಿಯನ್ನು ಹೂಳಿ, ಅಲ್ಲಿರುವ ಔಷಧಿ-ಲತೆಗಳನ್ನು ಕಿತ್ತು, ವೃಕ್ಷ-ಪಕ್ಷಿ-ಪ್ರಾಣಿಗಳನ್ನು ಹನನಮಾಡಿ, ಯಜ್ಞಗಳನ್ನು ಮಾಡುವ ಮನುಷ್ಯನು ಸ್ವರ್ಗವನ್ನು ಪಡೆಯುತ್ತಾನೆ.

12015029a ದಂಡನೀತ್ಯಾಂ ಪ್ರಣೀತಾಯಾಂ ಸರ್ವೇ ಸಿಧ್ಯಂತ್ಯುಪಕ್ರಮಾಃ|

12015029c ಕೌಂತೇಯ ಸರ್ವಭೂತಾನಾಂ ತತ್ರ ಮೇ ನಾಸ್ತಿ ಸಂಶಯಃ||

ಕೌಂತೇಯ! ದಂಡನೀತಿಯನ್ನು ಅನುಸರಿಸಿದ್ದೇ ಆದರೆ ಸರ್ವಭೂತಗಳೂ ಪ್ರಯತ್ನಿಸುವ ಸಿದ್ಧಿಗಳು ದೊರೆಯುತ್ತವೆ ಎನ್ನುವುದರಲ್ಲಿ ನನಗೆ ಸಂಶಯವೇ ಇಲ್ಲ.

12015030a ದಂಡಶ್ಚೇನ್ನ ಭವೇಲ್ಲೋಕೇ ವ್ಯನಶಿಷ್ಯನ್ನಿಮಾಃ ಪ್ರಜಾಃ|

12015030c ಶೂಲೇ ಮತ್ಸ್ಯಾನಿವಾಪಕ್ಷ್ಯನ್ದುರ್ಬಲಾನ್ಬಲವತ್ತರಾಃ||

ಲೋಕದಲ್ಲಿ ದಂಡನೀತಿಯೇ ಇರದಿದ್ದರೆ ಈ ಪ್ರಜೆಗಳು ವಿನಾಶಹೊಂದುತ್ತಿದ್ದರು. ದೊಡ್ಡ ಮೀನುಗಳು ಚಿಕ್ಕಮೀನುಗಳನ್ನು ತಿನ್ನುವಂತೆ ಬಲಶಾಲಿಗಳು ದುರ್ಬಲರನ್ನು ವಿನಾಶಗೊಳಿಸಿಬಿಡುತ್ತಿದ್ದರು.

12015031a ಸತ್ಯಂ ಚೇದಂ ಬ್ರಹ್ಮಣಾ ಪೂರ್ವಮುಕ್ತಂ

ದಂಡಃ ಪ್ರಜಾ ರಕ್ಷತಿ ಸಾಧು ನೀತಃ|

12015031c ಪಶ್ಯಾಗ್ನಯಶ್ಚ ಪ್ರತಿಶಾಮ್ಯಂತ್ಯಭೀತಾಃ

ಸಂತರ್ಜಿತಾ ದಂಡಭಯಾಜ್ಜ್ವಲಂತಿ||

ಸರಿಯಾದ ರೀತಿಯಲ್ಲಿ ಬಳಸಿದ ದಂಡನೀತಿಯು ಪ್ರಜೆಗಳನ್ನು ರಕ್ಷಿಸುತ್ತದೆಯೆಂಬ ಸತ್ಯವನ್ನು ಬ್ರಹ್ಮನೇ ಹಿಂದೆ ಹೇಳಿದ್ದನು. ಈ ಅಗ್ನಿಗಳನ್ನಾದರೂ ನೋಡು! ಆರಿಹೋಗುತ್ತಿರುವ ಬೆಂಕಿಯನ್ನು ಊದಿದಾಗ ದಂಡಭಯದಿಂದಲೇ ಅದು ಪುನಃ ಹತ್ತಿಕೊಂಡು ಉರಿಯುತ್ತದೆ!

12015032a ಅಂಧಂ ತಮ ಇವೇದಂ ಸ್ಯಾನ್ನ ಪ್ರಜ್ಞಾಯೇತ ಕಿಂ ಚನ|

12015032c ದಂಡಶ್ಚೇನ್ನ ಭವೇಲ್ಲೋಕೇ ವಿಭಜನ್ಸಾಧ್ವಸಾಧುನೀ||

ಒಳ್ಳೆಯದು ಯಾವುದು ಮತ್ತು ಕೆಟ್ಟದು ಯಾವುದು ಎನ್ನುವುದನ್ನು ವಿಭಜಿಸುವ ದಂಡನೀತಿಯೇ ಈ ಲೋಕದಲ್ಲಿ ಇರದಿದ್ದರೆ ಪ್ರಜೆಗಳೆಲ್ಲರೂ ಕುರುಡರ ಅಂಧಕಾರವನ್ನು ಅನುಭವಿಸುತ್ತಿದ್ದರು.

12015033a ಯೇಽಪಿ ಸಂಭಿನ್ನಮರ್ಯಾದಾ ನಾಸ್ತಿಕಾ ವೇದನಿಂದಕಾಃ|

12015033c ತೇಽಪಿ ಭೋಗಾಯ ಕಲ್ಪಂತೇ ದಂಡೇನೋಪನಿಪೀಡಿತಾಃ||

ಮರ್ಯಾದೆಗಳನ್ನು ಒಡೆದು ವೇದಗಳನ್ನು ನಿಂದಿಸುವ ನಾಸ್ತಿಕರೂ ಕೂಡ ದಂಡದ ಪೀಡೆಗೊಳಪಟ್ಟು ಮರ್ಯಾದೆಗಳನ್ನು ಮೀರದೇ ಸುಖಪಡುವಂತವರಾಗುತ್ತಾರೆ.

12015034a ಸರ್ವೋ ದಂಡಜಿತೋ ಲೋಕೋ ದುರ್ಲಭೋ ಹಿ ಶುಚಿರ್ನರಃ|

12015034c ದಂಡಸ್ಯ ಹಿ ಭಯಾದ್ಭೀತೋ ಭೋಗಾಯೇಹ ಪ್ರಕಲ್ಪತೇ||

ದಂಡದಿಂದಲೇ ಎಲ್ಲವನ್ನೂ ಗೆಲ್ಲಬಹುದು. ಸ್ವಭಾವದಿಂದಲೇ ಶುಚಿಯಾಗಿರುವ ಮನುಷ್ಯರು ಈ ಲೋಕದಲ್ಲಿ ದುರ್ಲಭ. ದಂಡದ ಭಯದಿಂದಲೇ ಭೀತರಾಗಿ ಮನುಷ್ಯರು ಧರ್ಮವನ್ನನುಸರಿಸಿ ನಡೆದುಕೊಳ್ಳುತ್ತಾರೆ.

12015035a ಚಾತುರ್ವರ್ಣ್ಯಾಪ್ರಮೋಹಾಯ ಸುನೀತನಯನಾಯ ಚ|

12015035c ದಂಡೋ ವಿಧಾತ್ರಾ ವಿಹಿತೋ ಧರ್ಮಾರ್ಥಾವಭಿರಕ್ಷಿತುಮ್||

ನಾಲ್ಕುವರ್ಣದವರೂ ಆನಂದದಿಂದಿರಲು, ನೀತಿವಂತರಾಗಿ ಬಾಳಲು ಮತ್ತು ಧರ್ಮ-ಅರ್ಥಗಳನ್ನು ರಕ್ಷಿಸಲು ವಿಧಾತನು ದಂಡವನ್ನು ವಿಧಿಸಿದ್ದಾನೆ.

12015036a ಯದಿ ದಂಡಾನ್ನ ಬಿಭ್ಯೇಯುರ್ವಯಾಂಸಿ ಶ್ವಾಪದಾನಿ ಚ|

12015036c ಅದ್ಯುಃ ಪಶೂನ್ಮನುಷ್ಯಾಂಶ್ಚ ಯಜ್ಞಾರ್ಥಾನಿ ಹವೀಂಷಿ ಚ||

ದಂಡದ ಭಯವೇ ಇರದಿದ್ದರೆ ಕ್ರೂರಮೃಗಗಳಾಗಲೀ ಪಕ್ಷಿಗಳಾಗಲೀ ಇದೂವರೆಗೆ ಯಜ್ಞ ಪಶುಗಳನ್ನು, ಮನುಷ್ಯರನ್ನು, ಯಜ್ಞಸಲಕರಣೆಗಳನ್ನು ಮತ್ತು ಹವಿಸ್ಸುಗಳನ್ನು ತಿಂದುಹಾಕಿಬಿಡುತ್ತಿದ್ದವು.

12015037a ನ ಬ್ರಹ್ಮಚಾರ್ಯಧೀಯೀತ ಕಲ್ಯಾಣೀ ಗೌರ್ನ ದುಹ್ಯತೇ|

12015037c ನ ಕನ್ಯೋದ್ವಹನಂ ಗಚ್ಚೇದ್ಯದಿ ದಂಡೋ ನ ಪಾಲಯೇತ್||

ದಂಡವೆನ್ನುವುದು ಇಲ್ಲದೇ ಇದ್ದಿದ್ದರೆ ಬ್ರಹ್ಮಚಾರಿಯು ಅಧ್ಯಯನ ಮಾಡುತ್ತಿರಲಿಲ್ಲ, ಕಲ್ಯಾಣೀ ಗೋವು ಹಾಲನ್ನು ನೀಡುತ್ತಿರಲಿಲ್ಲ, ಮತ್ತು ಕನ್ಯೆಯು ವಿವಾಹವಾಗುತ್ತಿರಲಿಲ್ಲ.

12015038a ವಿಶ್ವಲೋಪಃ ಪ್ರವರ್ತೇತ ಭಿದ್ಯೇರನ್ಸರ್ವಸೇತವಃ|

12015038c ಮಮತ್ವಂ ನ ಪ್ರಜಾನೀಯುರ್ಯದಿ ದಂಡೋ ನ ಪಾಲಯೇತ್||

ದಂಡದಿಂದ ಪ್ರಜಾಪಾಲನೆಯಾಗದೇ ಇರುತ್ತಿದ್ದರೆ ವಿಶ್ವದಲ್ಲಿ ಧರ್ಮಲೋಪವಾಗುತ್ತಿತ್ತು. ಸರ್ವ ಸೇತುವೆಗಳೂ ಮುರಿದುಬೀಳುತ್ತಿದ್ದವು. ನನ್ನದ್ಯಾವುದು ಮತ್ತು ನನ್ನದು ಯಾವುದಲ್ಲ ಎನ್ನುವ ಭಾವನೆಯೇ ಹುಟ್ಟುತ್ತಿರಲಿಲ್ಲ.

12015039a ನ ಸಂವತ್ಸರಸತ್ರಾಣಿ ತಿಷ್ಠೇಯುರಕುತೋಭಯಾಃ|

12015039c ವಿಧಿವದ್ದಕ್ಷಿಣಾವಂತಿ ಯದಿ ದಂಡೋ ನ ಪಾಲಯೇತ್||

ದಂಡದಿಂದ ಪ್ರಜಾಪಾಲನೆಯಾಗದೇ ಇರುತ್ತಿದ್ದರೆ ನಿರ್ಭಯದಿಂದ ವಿಧಿವತ್ತಾಗಿ ಮತ್ತು ದಕ್ಷಿಣೆಗಳೊಂದಿಗೆ ನಡೆಯುತ್ತಿದ್ದ ಸಂವತ್ಸರ ಸತ್ರಗಳು ನಿಂತುಹೋಗುತ್ತಿದ್ದವು.

12015040a ಚರೇಯುರ್ನಾಶ್ರಮೇ ಧರ್ಮಂ ಯಥೋಕ್ತಂ ವಿಧಿಮಾಶ್ರಿತಾಃ|

12015040c ನ ವಿದ್ಯಾಂ ಪ್ರಾಪ್ನುಯಾತ್ಕಶ್ಚಿದ್ಯದಿ ದಂಡೋ ನ ಪಾಲಯೇತ್||

ದಂಡದಿಂದ ಪ್ರಜಾಪಾಲನೆಯಾಗದೇ ಇರುತ್ತಿದ್ದರೆ ವಿಧಿಯನ್ನನುಸರಿಸಿ ಯಥೋಕ್ತವಾದ ಆಶ್ರಮ ಧರ್ಮಗಳನ್ನು ನಡೆಸುತ್ತಿರಲಿಲ್ಲ ಮತ್ತು ಯಾರೂ ವಿದ್ಯೆಯನ್ನು ಪಡೆಯುತ್ತಿರಲಿಲ್ಲ.

12015041a ನ ಚೋಷ್ಟ್ರಾ ನ ಬಲೀವರ್ದಾ ನಾಶ್ವಾಶ್ವತರಗರ್ದಭಾಃ|

12015041c ಯುಕ್ತಾ ವಹೇಯುರ್ಯಾನಾನಿ ಯದಿ ದಂಡೋ ನ ಪಾಲಯೇತ್||

ದಂಡದಿಂದ ಪ್ರಜಾಪಾಲನೆಯಾಗದೇ ಇರುತ್ತಿದ್ದರೆ ಒಂಟೆ-ಎತ್ತು-ಕುದುರೆ-ಹೇಸರಗತ್ತೆ ಮತ್ತು ಕತ್ತೆಗಳನ್ನು ಕಟ್ಟಿದ್ದರೂ ಅವು ಯಾನಗಳನ್ನು ಎಳೆದುಕೊಂಡು ಹೋಗುತ್ತಿರಲಿಲ್ಲ!

12015042a ನ ಪ್ರೇಷ್ಯಾ ವಚನಂ ಕುರ್ಯುರ್ನ ಬಾಲೋ ಜಾತು ಕರ್ಹಿ ಚಿತ್|

12015042c ತಿಷ್ಠೇತ್ಪಿತೃಮತೇ ಧರ್ಮೇ ಯದಿ ದಂಡೋ ನ ಪಾಲಯೇತ್||

ದಂಡದಿಂದ ಪ್ರಜಾಪಾಲನೆಯಾಗದೇ ಇರುತ್ತಿದ್ದರೆ ಸೇವಕರು ಯಜಮಾನನ ಮಾತಿನಂತೆ ನಡೆಯುತ್ತಿರಲಿಲ್ಲ, ಮತ್ತು ಬಾಲಕರು ತಂದೆಯ ಧರ್ಮವನ್ನು ಪಾಲಿಸುತ್ತಿರಲಿಲ್ಲ.

12015043a ದಂಡೇ ಸ್ಥಿತಾಃ ಪ್ರಜಾಃ ಸರ್ವಾ ಭಯಂ ದಂಡಂ ವಿದುರ್ಬುಧಾಃ|

12015043c ದಂಡೇ ಸ್ವರ್ಗೋ ಮನುಷ್ಯಾಣಾಂ ಲೋಕೋಽಯಂ ಚ ಪ್ರತಿಷ್ಠಿತಃ||

ದಂಡದಿಂದ ಮತ್ತು ದಂಡದ ಭಯದಿಂದಾಗಿ ಪ್ರಜೆಗಳೆಲ್ಲರೂ ತಮ್ಮ ತಮ್ಮ ಧರ್ಮಗಳಲ್ಲಿ ನೆಲೆಸಿದ್ದಾರೆ ಎಂದು ತಿಳಿದವರು ತಿಳಿದುಕೊಂಡಿರುತ್ತಾರೆ. ಮನುಷ್ಯರ ಈ ಲೋಕವೂ ಸ್ವರ್ಗವೂ ದಂಡದ ಮೇಲೆಯೇ ಅವಲಂಬಿಸಿದೆ.

12015044a ನ ತತ್ರ ಕೂಟಂ ಪಾಪಂ ವಾ ವಂಚನಾ ವಾಪಿ ದೃಷ್ಯತೇ|

12015044c ಯತ್ರ ದಂಡಃ ಸುವಿಹಿತಶ್ಚರತ್ಯರಿವಿನಾಶನಃ||

ಶತ್ರುನಾಶಕ ದಂಡನೀತಿಯು ಎಲ್ಲಿ ಚೆನ್ನಾಗಿ ಬಳಸಲ್ಪಟ್ಟಿದೆಯೋ ಅಲ್ಲಿ ಮೋಸವಾಗಲೀ, ಪಾಪಕರ್ಮಗಳಾಗಲೀ ಅಥವಾ ವಂಚನೆಯಾಗಲೀ ಕಂಡುಬರುವುದಿಲ್ಲ.

12015045a ಹವಿಃ ಶ್ವಾ ಪ್ರಪಿಬೇದ್ಧೃಷ್ಟೋ ದಂಡಶ್ಚೇನ್ನೋದ್ಯತೋ ಭವೇತ್|

12015045c ಹರೇತ್ಕಾಕಃ ಪುರೋಡಾಶಂ ಯದಿ ದಂಡೋ ನ ಪಾಲಯೇತ್||

ದಂಡದಿಂದ ಆಳದೇ ಇದ್ದರೆ ಹವಿಸ್ಸನ್ನು ನೋಡಿದ ನಾಯಿಯು ಅದನ್ನು ನೆಕ್ಕಲು ಹೋಗುತ್ತದೆ. ಕಾಗೆಯು ಪುರೋಡಾಶವನ್ನೇ ಎತ್ತಿಕೊಂಡು ಹೋಗುತ್ತದೆ.

12015046a ಯದಿದಂ ಧರ್ಮತೋ ರಾಜ್ಯಂ ವಿಹಿತಂ ಯದ್ಯಧರ್ಮತಃ|

12015046c ಕಾರ್ಯಸ್ತತ್ರ ನ ಶೋಕೋ ವೈ ಭುಂಕ್ತ್ವ ಭೋಗಾನ್ಯಜಸ್ವ ಚ||

ಈ ರಾಜ್ಯವನ್ನು ನಾವು ಧರ್ಮದಿಂದ ಪಡೆದವೋ ಅಥವಾ ಅಧರ್ಮದಿಂದ ಪಡೆದವೋ ಎನ್ನುವುದರ ಕುರಿತು ಯೋಚಿಸುವ ಕಾಲವಿದಲ್ಲ. ಶೋಕಪಡಬೇಡ! ಭೋಗಗಳನ್ನು ಭೋಗಿಸು ಮತ್ತು ಯಜ್ಞಗಳನ್ನು ಮಾಡು!

12015047a ಸುಖೇನ ಧರ್ಮಂ ಶ್ರೀಮಂತಶ್ಚರಂತಿ ಶುಚಿವಾಸಸಃ|

12015047c ಸಂವಸಂತಃ ಪ್ರಿಯೈರ್ದಾರೈರ್ಭುಂಜಾನಾಶ್ಚಾನ್ನಮುತ್ತಮಮ್||

ಶ್ರೀಮಂತರು ಸುಖದಿಂದಲೇ ಶುಭ್ರವಸ್ತ್ರಗಳನ್ನು ಧರಿಸಿ ಧರ್ಮವನ್ನಾಚರಿಸುತ್ತಾರೆ. ಅವರು ಪ್ರಿಯ ಪತ್ನಿಯರೊಂದಿಗೆ ವಾಸಿಸುತ್ತಾರೆ ಮತ್ತು ಉತ್ತಮ ಆಹಾರವನ್ನು ಸೇವಿಸುತ್ತಾರೆ.

12015048a ಅರ್ಥೇ ಸರ್ವೇ ಸಮಾರಂಭಾಃ ಸಮಾಯತ್ತಾ ನ ಸಂಶಯಃ|

12015048c ಸ ಚ ದಂಡೇ ಸಮಾಯತ್ತಃ ಪಶ್ಯ ದಂಡಸ್ಯ ಗೌರವಮ್||

ಸರ್ವ ಸಮಾರಂಭಗಳೂ ಧನದ ಮೇಲೆ ಅವಲಂಬಿಸಿವೆ ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಧನವು ದಂಡವನ್ನು ಅವಲಂಬಿಸಿದೆ. ದಂಡಕ್ಕಿರುವ ಗೌರವವನ್ನಾದರೂ ನೋಡು!

12015049a ಲೋಕಯಾತ್ರಾರ್ಥಮೇವೇಹ ಧರ್ಮಪ್ರವಚನಂ ಕೃತಮ್|

12015049c ಅಹಿಂಸಾ ಸಾಧುಹಿಂಸೇತಿ ಶ್ರೇಯಾನ್ಧರ್ಮಪರಿಗ್ರಹಃ||

ಲೋಕಯಾತ್ರೆಯ ನಿರ್ವಹಣೆಗೆ ಅಹಿಂಸೆಯು ಸಾಧುವೆಂದು ಧರ್ಮಪ್ರವಚನವನ್ನು ಮಾಡುತ್ತಾರೆ. ಆದರೆ ಹಿಂಸೆಯು ಕೆಲವು ಸಮಯಗಳಲ್ಲಿ ಶ್ರೇಯಸ್ಸನ್ನು ನೀಡುವ ಧರ್ಮಕಾರ್ಯವಾಗಬಹುದು.

12015050a ನಾತ್ಯಂತಗುಣವಾನ್ಕಶ್ಚಿನ್ನ ಚಾಪ್ಯತ್ಯಂತನಿರ್ಗುಣಃ|

12015050c ಉಭಯಂ ಸರ್ವಕಾರ್ಯೇಷು ದೃಶ್ಯತೇ ಸಾಧ್ವಸಾಧು ಚ||

ಯಾವುದೇ ಕಾರ್ಯವು ಅತ್ಯಂತ ಗುಣಯುಕ್ತವಾಗಿಯೂ ಅಥವಾ ಅತ್ಯಂತ ನಿರ್ಗುಣವಾಗಿಯೂ ಇರುವುದಿಲ್ಲ. ಸರ್ವಕಾರ್ಯಗಳಲ್ಲಿ ಒಳ್ಳೆಯದು ಯಾವುದು ಮತ್ತು ಯಾವುದು ಒಳ್ಳೆಯದಲ್ಲ ಈ ಎರಡನ್ನೂ ನೋಡಬೇಕಾಗುತ್ತದೆ.

12015051a ಪಶೂನಾಂ ವೃಷಣಂ ಚಿತ್ತ್ವಾ ತತೋ ಭಿಂದಂತಿ ನಸ್ತಕಾನ್|

12015051c ಕೃಷಂತಿ ಬಹವೋ ಭಾರಾನ್ಬಧ್ನಂತಿ ದಮಯಂತಿ ಚ||

ಹೋರಿಯ ಬೀಜವನ್ನು ಒಡೆದು, ಕೋಡುಗಳನ್ನು ಕತ್ತರಿಸುತ್ತಾರೆ. ಹೀಗೆ ಕಷ್ಟಕ್ಕೊಳಗಾದ ಹೋರಿಯು ಅತಿ ಭಾರವನ್ನು ಹೊರುತ್ತದೆ ಮತ್ತು ಕಟ್ಟಿದರೆ ಬಂಡಿಯನ್ನು ಎಳೆದುಕೊಂಡೂ ಹೋಗುತ್ತದೆ.

12015052a ಏವಂ ಪರ್ಯಾಕುಲೇ ಲೋಕೇ ವಿಪಥೇ ಜರ್ಜರೀಕೃತೇ|

12015052c ತೈಸ್ತೈರ್ನ್ಯಾಯೈರ್ಮಹಾರಾಜ ಪುರಾಣಂ ಧರ್ಮಮಾಚರ||

ಮಹಾರಾಜ! ಅಧರ್ಮದಿಂದ ಜರ್ಜರಗೊಂಡು ಒಡೆದುಹೋಗುತ್ತಿರುವ ಲೋಕವನ್ನು ನ್ಯಾಯ ಮತ್ತು ಪುರಾತನ ಧರ್ಮವನ್ನು ಆಚರಿಸಿ ಆಳು!

12015053a ಯಜ ದೇಹಿ ಪ್ರಜಾ ರಕ್ಷ ಧರ್ಮಂ ಸಮನುಪಾಲಯ|

12015053c ಅಮಿತ್ರಾನ್ಜಹಿ ಕೌಂತೇಯ ಮಿತ್ರಾಣಿ ಪರಿಪಾಲಯ||

ಕೌಂತೇಯ! ಯಜ್ಞಮಾಡು. ದಾನಗಳನ್ನು ನೀಡು. ಪ್ರಜೆಗಳನ್ನು ರಕ್ಷಿಸಿ ಧರ್ಮವನ್ನು ಪಾಲಿಸು. ಶತ್ರುಗಳನ್ನು ಸಂಹರಿಸು ಮತ್ತು ಮಿತ್ರರನ್ನು ಪರಿಪಾಲಿಸು!

12015054a ಮಾ ಚ ತೇ ನಿಘ್ನತಃ ಶತ್ರೂನ್ಮನ್ಯುರ್ಭವತು ಭಾರತ|

12015054c ನ ತತ್ರ ಕಿಲ್ಬಿಷಂ ಕಿಂ ಚಿತ್ಕರ್ತುರ್ಭವತಿ ಭಾರತ||

ಭಾರತ! ಶತ್ರುಗಳನ್ನು ಸಂಹರಿಸುವಾಗ ನಿನಗೆ ದೀನತೆಯುಂಟಾಗದಿರಲಿ! ಭಾರತ! ಶತ್ರುವಿನಾಶದಲ್ಲಿ ಸ್ವಲ್ಪವೂ ಪಾಪವಿಲ್ಲ.

12015055a ಆತತಾಯೀ ಹಿ ಯೋ ಹನ್ಯಾದಾತತಾಯಿನಮಾಗತಮ್|

12015055c ನ ತೇನ ಭ್ರೂಣಹಾ ಸ ಸ್ಯಾನ್ಮನ್ಯುಸ್ತಂ ಮನ್ಯುಮೄಚ್ಚತಿ||

ಆಯುಧಗಳನ್ನು ಹಿಡಿದು ಎದುರಾದವನನ್ನು ಆಯುಧಗಳಿಂದ ಸಂಹರಿಸುವುದರಿಂದ ಭ್ರೂಣಹತ್ಯೆಯ ದೋಷವು ಬರುವುದಿಲ್ಲ. ಏಕೆಂದರೆ ಅಲ್ಲಿ ಕೋಪವು ಕೋಪವನ್ನು ಎದುರಿಸಿ ಹೋರಾಡುತ್ತದೆ.

12015056a ಅವಧ್ಯಃ ಸರ್ವಭೂತಾನಾಮಂತರಾತ್ಮಾ ನ ಸಂಶಯಃ|

12015056c ಅವಧ್ಯೇ ಚಾತ್ಮನಿ ಕಥಂ ವಧ್ಯೋ ಭವತಿ ಕೇನ ಚಿತ್||

ಸರ್ವಜೀವಿಗಳಲ್ಲಿರುವ ಅಂತರಾತ್ಮನು ಅವಧ್ಯ ಎನ್ನುವುದರಲ್ಲಿ ಸಂಶಯವೇ ಇಲ್ಲ. ಅವಧ್ಯವಾದ ಆತ್ಮವನ್ನು ಯಾರುತಾನೇ ಹೇಗೆ ವಧಿಸಬಲ್ಲರು?

12015057a ಯಥಾ ಹಿ ಪುರುಷಃ ಶಾಲಾಂ ಪುನಃ ಸಂಪ್ರವಿಶೇನ್ನವಾಮ್|

12015057c ಏವಂ ಜೀವಃ ಶರೀರಾಣಿ ತಾನಿ ತಾನಿ ಪ್ರಪದ್ಯತೇ||

ಮನುಷ್ಯನು ಹೊಸ ಹೊಸ ಮನೆಗಳಲ್ಲಿ ವಾಸಮಾಡುವಂತೆ ಜೀವವು ಬೇರೆ ಬೇರೆ ಶರೀರಗಳನ್ನು ಪಡೆಯುತ್ತದೆ.

12015058a ದೇಹಾನ್ಪುರಾಣಾನುತ್ಸೃಜ್ಯ ನವಾನ್ಸಂಪ್ರತಿಪದ್ಯತೇ|

12015058c ಏವಂ ಮೃತ್ಯುಮುಖಂ ಪ್ರಾಹುರ್ಯೇ ಜನಾಸ್ತತ್ತ್ವದರ್ಶಿನಃ||

ಹಳೆಯದಾದ ದೇಹಗಳನ್ನು ವಿಸರ್ಜಿಸಿ ಹೊಸ ಶರೀರಗಳನ್ನು ಪಡೆಯುತ್ತದೆ. ಇದನ್ನೇ ತತ್ತ್ವದರ್ಶೀ ಜನರು ಮೃತ್ಯುಮುಖವೆಂದು ಹೇಳುತ್ತಾರೆ.””

ಇತಿ ಶ್ರೀ ಮಹಾಭಾರತೇ ಶಾಂತಿಪರ್ವಣಿ ರಾಜಧರ್ಮಪರ್ವಣಿ ಅರ್ಜುನವಾಕ್ಯೇ ಪಂಚದಶೋಽಧ್ಯಾಯಃ||

ಇದು ಶ್ರೀ ಮಹಾಭಾರತ ಶಾಂತಿಪರ್ವದ ರಾಜಧರ್ಮಪರ್ವದಲ್ಲಿ ಅರ್ಜುನವಾಕ್ಯ ಎನ್ನುವ ಹದಿನೈದನೇ ಅಧ್ಯಾಯವು.

Comments are closed.