||ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಶಾಂತಿ ಪರ್ವ: ರಾಜಧರ್ಮ ಪರ್ವ

ಶುದ್ಧಿಕಾರ್ಯಗಳನ್ನಾಚರಿಸುತ್ತಾ ಗಂಗಾತೀರದಲ್ಲಿ ಒಂದು ತಿಂಗಳು ಉಳಿದುಕೊಂಡಿದ್ದ ಪಾಂಡವರ ಬಳಿ ಬ್ರಹ್ಮರ್ಷಿಸತ್ತಮರು ಆಗಮಿಸಿದುದು (೧-೮). ಯುಧಿಷ್ಠಿರನ ಮನಃಸ್ಥಿತಿಯ ಕುರಿತು ನಾರದನು ಕೇಳಲು ಯುಧಿಷ್ಠಿರನು ಜ್ಞಾತಿವಧೆಗೆ ತಾನು ಕಾರಣನಾದೆನೆಂದು ಶೋಕಿಸುವುದು (೯-೧೭). ಯುಧಿಷ್ಠಿರನು ಕರ್ಣನ ಕುರಿತು ಶೋಕಿಸುತ್ತಾ, ರಣರಂಗದಲ್ಲಿ ಕರ್ಣನ ರಥಚಕ್ರಗಳನ್ನು ಭೂಮಿಯು ಏಕೆ ನುಂಗಿಬಿಟ್ಟಳು ಎಂದು ನಾರದನನ್ನು ಕೇಳಿದುದು (೧೮-೪೫).

12001001 ವೈಶಂಪಾಯನ ಉವಾಚ|

12001001a ಕೃತೋದಕಾಸ್ತೇ ಸುಹೃದಾಂ ಸರ್ವೇಷಾಂ ಪಾಂಡುನಂದನಾಃ|

12001001c ವಿದುರೋ ಧೃತರಾಷ್ಟ್ರಶ್ಚ ಸರ್ವಾಶ್ಚ ಭರತಸ್ತ್ರಿಯಃ||

12001002a ತತ್ರ ತೇ ಸುಮಹಾತ್ಮಾನೋ ನ್ಯವಸನ್ಕುರುನಂದನಾಃ|

12001002c ಶೌಚಂ ನಿವರ್ತಯಿಷ್ಯಂತೋ ಮಾಸಮೇಕಂ ಬಹಿಃ ಪುರಾತ್||

ವೈಶಂಪಾಯನನು ಹೇಳಿದನು: “ಪಾಂಡುನಂದನರು, ವಿದುರ, ಧೃತರಾಷ್ಟ್ರ ಮತ್ತು ಸರ್ವ ಭರತಸ್ತ್ರೀಯರು ಎಲ್ಲ ಸುಹೃದಯರಿಗೂ ಉದಕ ಕ್ರಿಯೆಗಳನ್ನು ಪೂರೈಸಿದರು. ಬಳಿಕ ಮಹಾತ್ಮ ಕುರುನಂದನರು ಶುದ್ಧಿಕಾರ್ಯಗಳನ್ನಾಚರಿಸುತ್ತಾ ಒಂದು ತಿಂಗಳ ಕಾಲ ಪುರದಿಂದ ಹೊರಗೆ ಗಂಗಾತೀರದಲ್ಲಿಯೇ ಉಳಿದುಕೊಂಡರು.

12001003a ಕೃತೋದಕಂ ತು ರಾಜಾನಂ ಧರ್ಮಾತ್ಮಾನಂ ಯುಧಿಷ್ಠಿರಮ್|

12001003c ಅಭಿಜಗ್ಮುರ್ಮಹಾತ್ಮಾನಃ ಸಿದ್ಧಾ ಬ್ರಹ್ಮರ್ಷಿಸತ್ತಮಾಃ||

ಉದಕ ಕ್ರಿಯೆಗಳನ್ನು ಪೂರೈಸಿದ ರಾಜಾ ಧರ್ಮಾತ್ಮ ಯುಧಿಷ್ಠಿರನಲ್ಲಿಗೆ ಮಹಾತ್ಮ ಸಿದ್ಧ ಬ್ರಹ್ಮರ್ಷಿಸತ್ತಮರು ಆಗಮಿಸಿದರು.

12001004a ದ್ವೈಪಾಯನೋ ನಾರದಶ್ಚ ದೇವಲಶ್ಚ ಮಹಾನೃಷಿಃ|

12001004c ದೇವಸ್ಥಾನಶ್ಚ ಕಣ್ವಶ್ಚ ತೇಷಾಂ ಶಿಷ್ಯಾಶ್ಚ ಸತ್ತಮಾಃ||

12001005a ಅನ್ಯೇ ಚ ವೇದವಿದ್ವಾಂಸಃ ಕೃತಪ್ರಜ್ಞಾ ದ್ವಿಜಾತಯಃ|

12001005c ಗೃಹಸ್ಥಾಃ ಸ್ನಾತಕಾಃ ಸರ್ವೇ ದದೃಶುಃ ಕುರುಸತ್ತಮಮ್||

ದ್ವೈಪಾಯನ, ನಾರದ, ಮಹಾನ್ ಋಷಿ ದೇವಲ, ದೇವಸ್ಥಾನ, ಕಣ್ವ ಮತ್ತು ಅವನ ಸತ್ತಮ ಶಿಷ್ಯರು, ಅನ್ಯ ವೇದವಿದ್ವಾಂಸರೂ, ಕೃತಪ್ರಜ್ಞ ದ್ವಿಜಾತೀಯರೂ, ಗೃಹಸ್ಥರೂ, ಸ್ನಾತಕರೂ ಎಲ್ಲರೂ ಆ ಕುರುಸತ್ತಮನನ್ನು ಕಂಡರು.

12001006a ಅಭಿಗಮ್ಯ ಮಹಾತ್ಮಾನಃ ಪೂಜಿತಾಶ್ಚ ಯಥಾವಿಧಿ|

12001006c ಆಸನೇಷು ಮಹಾರ್ಹೇಷು ವಿವಿಶುಸ್ತೇ ಮಹರ್ಷಯಃ||

ಆಗಮಿಸಿದ ಮಹಾಋಷಿಗಳು ಯಥಾವಿಧಿಯಾಗಿ ಪೂಜಿಸಲ್ಪಟ್ಟು ಅಮೂಲ್ಯ ಆಸನಗಳಲ್ಲಿ ಕುಳಿತುಕೊಂಡರು.

12001007a ಪ್ರತಿಗೃಹ್ಯ ತತಃ ಪೂಜಾಂ ತತ್ಕಾಲಸದೃಶೀಂ ತದಾ|

12001007c ಪರ್ಯುಪಾಸನ್ಯಥಾನ್ಯಾಯಂ ಪರಿವಾರ್ಯ ಯುಧಿಷ್ಠಿರಮ್||

12001008a ಪುಣ್ಯೇ ಭಾಗೀರಥೀತೀರೇ ಶೋಕವ್ಯಾಕುಲಚೇತಸಮ್|

12001008c ಆಶ್ವಾಸಯಂತೋ ರಾಜಾನಂ ವಿಪ್ರಾಃ ಶತಸಹಸ್ರಶಃ||

ಆ ಶೋಕಸಮಯಕ್ಕೆ ತಕ್ಕುದಾದ ಪೂಜೆಗಳನ್ನು ಸ್ವೀಕರಿಸಿ ನೂರಾರು ಸಹಸ್ರಾರು ವಿಪ್ರರು ಆ ಪುಣ್ಯ ಭಾಗೀರಥೀ ತೀರದಲ್ಲಿ ಶೋಕವ್ಯಾಕುಲ ಚೇತಸ ರಾಜ ಯುಧಿಷ್ಠಿರನನ್ನು ಯಥಾನ್ಯಾಯವಾಗಿ ಗೌರವಿಸಿ ಸುತ್ತುವರೆದು ಕುಳಿತು ಸಮಾಧಾನಪಡಿಸುತ್ತಿದ್ದರು.

12001009a ನಾರದಸ್ತ್ವಬ್ರವೀತ್ಕಾಲೇ ಧರ್ಮಾತ್ಮಾನಂ ಯುಧಿಷ್ಠಿರಮ್|

12001009c ವಿಚಾರ್ಯ ಮುನಿಭಿಃ ಸಾರ್ಧಂ ತತ್ಕಾಲಸದೃಶಂ ವಚಃ||

ಆ ಸಮಯದಲ್ಲಿ ನಾರದನು ಇತರ ಮುನಿಗಳೊಂದಿಗೆ ವಿಚಾರಿಸಿ ಆ ಸಮಯಕ್ಕೆ ತಕ್ಕುದಾದ ಈ ಮಾತುಗಳನ್ನು ಧರ್ಮಾತ್ಮ ಯುಧಿಷ್ಠಿರನಿಗೆ ಹೇಳಿದನು:

12001010a ಭವತೋ ಬಾಹುವೀರ್ಯೇಣ ಪ್ರಸಾದಾನ್ಮಾಧವಸ್ಯ ಚ|

12001010c ಜಿತೇಯಮವನಿಃ ಕೃತ್ಸ್ನಾ ಧರ್ಮೇಣ ಚ ಯುಧಿಷ್ಠಿರ||

“ಯುಧಿಷ್ಠಿರ! ನಿನ್ನ ಬಾಹುವೀರ್ಯದಿಂದ ಮತ್ತು ಮಾಧವನ ಪ್ರಸಾದದಿಂದ ನೀನು ಈ ಇಡೀ ಭೂಮಿಯನ್ನು ಧರ್ಮಪೂರ್ವಕವಾಗಿ ಗೆದ್ದಿರುವೆ!

12001011a ದಿಷ್ಟ್ಯಾ ಮುಕ್ತಾಃ ಸ್ಥ ಸಂಗ್ರಾಮಾದಸ್ಮಾಲ್ಲೋಕಭಯಂಕರಾತ್|

12001011c ಕ್ಷತ್ರಧರ್ಮರತಶ್ಚಾಪಿ ಕಚ್ಚಿನ್ಮೋದಸಿ ಪಾಂಡವ||

ಸೌಭಾಗ್ಯವಾಶಾತ್ ನೀನು ಆ ಲೋಕಭಯಂಕರ ಸಂಗ್ರಾಮದಿಂದ ಮುಕ್ತನಾಗಿರುವೆ. ಪಾಂಡವ! ಕ್ಷತ್ರಧರ್ಮರತನಾಗಿದ್ದುಕೊಂಡು ಈಗಲಾದರೂ ಸಂತೋಷದಿಂದಿರುವೆಯಲ್ಲವೇ?

12001012a ಕಚ್ಚಿಚ್ಚ ನಿಹತಾಮಿತ್ರಃ ಪ್ರೀಣಾಸಿ ಸುಹೃದೋ ನೃಪ|

12001012c ಕಚ್ಚಿಚ್ಚ್ರಿಯಮಿಮಾಂ ಪ್ರಾಪ್ಯ ನ ತ್ವಾಂ ಶೋಕಃ ಪ್ರಬಾಧತೇ||

ನೃಪ! ಅಮಿತ್ರರನ್ನು ಸಂಹರಿಸಿ ಮಿತ್ರರಿಗೆ ಪ್ರೀತಿಯನ್ನುಂಟುಮಾಡಿರುವೆ ತಾನೇ? ಈ ಶ್ರೀಯನ್ನು ಪಡೆದ ನಿನ್ನನ್ನು ಬೇರೆ ಯಾವ ಶೋಕವೂ ಬಾಧಿಸುತ್ತಿಲ್ಲ ತಾನೇ?”

12001013 ಯುಧಿಷ್ಠಿರ ಉವಾಚ|

12001013a ವಿಜಿತೇಯಂ ಮಹೀ ಕೃತ್ಸ್ನಾ ಕೃಷ್ಣಬಾಹುಬಲಾಶ್ರಯಾತ್|

12001013c ಬ್ರಾಹ್ಮಣಾನಾಂ ಪ್ರಸಾದೇನ ಭೀಮಾರ್ಜುನಬಲೇನ ಚ||

ಯುಧಿಷ್ಠಿರನು ಹೇಳಿದನು: “ಕೃಷ್ಣನ ಬಾಹುಬಲವನ್ನಾಶ್ರಯಿಸಿ, ಬ್ರಾಹ್ಮಣರ ಪ್ರಸಾದದಿಂದ ಮತ್ತು ಭೀಮಾರ್ಜುನರ ಬಲದಿಂದ ಇಡೀ ಭೂಮಿಯನ್ನೇ ಗೆದ್ದಾಯಿತು!

12001014a ಇದಂ ತು ಮೇ ಮಹದ್ದುಃಖಂ ವರ್ತತೇ ಹೃದಿ ನಿತ್ಯದಾ|

12001014c ಕೃತ್ವಾ ಜ್ಞಾತಿಕ್ಷಯಮಿಮಂ ಮಹಾಂತಂ ಲೋಭಕಾರಿತಮ್||

ಆದರೆ ಲೋಭಕ್ಕಾಗಿ ಈ ಮಹಾ ಜ್ಞಾತಿಕ್ಷಯವನ್ನು ಮಾಡಿದೆನಲ್ಲಾ ಎಂಬ ಮಹಾದುಃಖವು ನಿತ್ಯವೂ ನನ್ನ ಹೃದಯದಲ್ಲಿ ನೆಲೆಗೊಂಡಿದೆ!

12001015a ಸೌಭದ್ರಂ ದ್ರೌಪದೇಯಾಂಶ್ಚ ಘಾತಯಿತ್ವಾ ಪ್ರಿಯಾನ್ಸುತಾನ್|

12001015c ಜಯೋಽಯಮಜಯಾಕಾರೋ ಭಗವನ್ಪ್ರತಿಭಾತಿ ಮೇ||

ಭಗವನ್! ಪ್ರಿಯ ಸುತರಾದ ಸೌಭದ್ರ ಮತ್ತು ದ್ರೌಪದೇಯರನ್ನು ಸಾಯಗೊಳಿಸಿ ನನಗೆ ಈ ಜಯವೂ ಸೋಲಾಗಿ ಕಾಣುತ್ತಿದೆ.

12001016a ಕಿಂ ನು ವಕ್ಷ್ಯತಿ ವಾರ್ಷ್ಣೇಯೀ ವಧೂರ್ಮೇ ಮಧುಸೂದನಮ್|

12001016c ದ್ವಾರಕಾವಾಸಿನೀ ಕೃಷ್ಣಮಿತಃ ಪ್ರತಿಗತಂ ಹರಿಮ್||

ಇಲ್ಲಿಂದ ಕೃಷ್ಣನು ಹಿಂದಿರುಗಿದಾಗ ನನ್ನ ಸೊಸೆ ವಾರ್ಷ್ಣೇಯೀ ಸುಭದ್ರೆಯು ಮಧುಸೂದನನಿಗೆ ಏನೆನ್ನುವಳು? ದ್ವಾರಕಾವಾಸಿಗಳು ಹರಿಯನ್ನು ಏನೆಂದು ಪ್ರಶ್ನಿಸುವರು?

12001017a ದ್ರೌಪದೀ ಹತಪುತ್ರೇಯಂ ಕೃಪಣಾ ಹತಬಾಂಧವಾ|

12001017c ಅಸ್ಮತ್ಪ್ರಿಯಹಿತೇ ಯುಕ್ತಾ ಭೂಯಃ ಪೀಡಯತೀವ ಮಾಮ್||

ಪುತ್ರರನ್ನೂ ಬಾಂಧವರನ್ನೂ ಕಳೆದುಕೊಂಡ ದ್ರೌಪದಿಯು ದೀನಳಾಗಿದ್ದಾಳೆ. ನಮ್ಮ ಪ್ರಿಯಹಿತದಲ್ಲಿಯೇ ನಿರತಳಾಗಿದ್ದ ಅವಳು ಈಗ ನನ್ನನ್ನು ಪೀಡಿಸುತ್ತಿರುವಳೋ ಎನ್ನುವಂತೆ ನನಗನ್ನಿಸುತ್ತದೆ.

12001018a ಇದಮನ್ಯಚ್ಚ ಭಗವನ್ಯತ್ತ್ವಾಂ ವಕ್ಷ್ಯಾಮಿ ನಾರದ|

12001018c ಮಂತ್ರಸಂವರಣೇನಾಸ್ಮಿ ಕುಂತ್ಯಾ ದುಃಖೇನ ಯೋಜಿತಃ||

ಭಗವನ್! ನಾರದ! ಜೊತೆಗೆ ಇನ್ನೊಂದು ದುಃಖದ ಕುರಿತು ನಿನಗೆ ಹೇಳುತ್ತೇನೆ. ಕುಂತಿಯು ರಹಸ್ಯವಾಗಿಟ್ಟಿದ್ದುದನ್ನು ಕೇಳಿ ಅತೀವ ದುಃಖಿತನಾಗಿದ್ದೇನೆ.

12001019a ಯೋಽಸೌ ನಾಗಾಯುತಬಲೋ ಲೋಕೇಽಪ್ರತಿರಥೋ ರಣೇ|

12001019c ಸಿಂಹಖೇಲಗತಿರ್ಧೀಮಾನ್ ಘೃಣೀ ದಾಂತೋ ಯತವ್ರತಃ||

12001020a ಆಶ್ರಯೋ ಧಾರ್ತರಾಷ್ಟ್ರಾಣಾಂ ಮಾನೀ ತೀಕ್ಷ್ಣಪರಾಕ್ರಮಃ|

12001020c ಅಮರ್ಷೀ ನಿತ್ಯಸಂರಂಭೀ ಕ್ಷೇಪ್ತಾಸ್ಮಾಕಂ ರಣೇ ರಣೇ||

12001021a ಶೀಘ್ರಾಸ್ತ್ರಶ್ಚಿತ್ರಯೋಧೀ ಚ ಕೃತೀ ಚಾದ್ಭುತವಿಕ್ರಮಃ|

12001021c ಗೂಢೋತ್ಪನ್ನಃ ಸುತಃ ಕುಂತ್ಯಾ ಭ್ರಾತಾಸ್ಮಾಕಂ ಚ ಸೋದರಃ||

ಹತ್ತುಸಾವಿರ ಆನೆಗಳ ಬಲವಿದ್ದ, ಲೋಕದಲ್ಲಿಯೇ ಅಪ್ರತಿಮ ಮಹಾರಥ, ರಣದಲ್ಲಿ ಸಿಂಹದಂತೆ ಸಂಚರಿಸುತ್ತಿದ್ದ ಧೀಮಾನ್, ದಯಾಳು, ಅಭಿಮಾನೀ, ತೀಕ್ಷ್ಣ ಪರಾಕ್ರಮಿ, ಧಾರ್ತರಾಷ್ಟ್ರರ ಆಶ್ರಯ, ಅಸಹನಶೀಲ, ನಿತ್ಯಕೋಪೀ, ರಣರಣದಲ್ಲಿಯೂ ನಮ್ಮನ್ನು ಸೋಲಿಸುತ್ತಿದ್ದ ಆ ಶೀಘ್ರಾಸ್ತ್ರ, ಚಿತ್ರಯೋಧೀ, ಧನುರ್ವೇದ ಪಂಡಿತ, ಅದ್ಭುತ ವಿಕ್ರಮಿಯು ರಹಸ್ಯದಲ್ಲಿ ಹುಟ್ಟಿದ ಕುಂತಿಯ ಮಗ ಮತ್ತು ನಮ್ಮ ಸಹೋದರ ಅಣ್ಣನಾಗಿದ್ದನು!

12001022a ತೋಯಕರ್ಮಣಿ ಯಂ ಕುಂತೀ ಕಥಯಾಮಾಸ ಸೂರ್ಯಜಮ್|

12001022c ಪುತ್ರಂ ಸರ್ವಗುಣೋಪೇತಮವಕೀರ್ಣಂ ಜಲೇ ಪುರಾ||

ಉದಕಕ್ರಿಯೆಗಳನ್ನು ಮಾಡುತ್ತಿದ್ದಾಗ ಕುಂತಿಯು ಸೂರ್ಯನಿಂದ ಹುಟ್ಟಿದ ಆ ಸರ್ವಗುಣೋಪೇತ ಪುತ್ರನನ್ನು ಹಿಂದೆ ನೀರಿನಲ್ಲಿ ತೇಲಿಸಿ ಬಿಟ್ಟಿದುದನ್ನು ನಮಗೆ ಹೇಳಿದಳು.

12001023a ಯಂ ಸೂತಪುತ್ರಂ ಲೋಕೋಽಯಂ ರಾಧೇಯಂ ಚಾಪ್ಯಮನ್ಯತ|

12001023c ಸ ಜ್ಯೇಷ್ಠಪುತ್ರಃ ಕುಂತ್ಯಾ ವೈ ಭ್ರಾತಾಸ್ಮಾಕಂ ಚ ಮಾತೃಜಃ||

ಈ ಲೋಕವು ಯಾರನ್ನು ರಾಧೇಯ ಸೂತಪುತ್ರನೆಂದು ಅಪಮಾನಿಸುತ್ತಿತ್ತೋ ಅವನು ಕುಂತಿಯ ಜ್ಯೇಷ್ಠಪುತ್ರ ಮತ್ತು ನಮ್ಮ ತಾಯಲ್ಲಿ ಹುಟ್ಟಿದ ನಮ್ಮ ಅಣ್ಣನಾಗಿದ್ದನು.

12001024a ಅಜಾನತಾ ಮಯಾ ಸಂಖ್ಯೇ ರಾಜ್ಯಲುಬ್ಧೇನ ಘಾತಿತಃ|

12001024c ತನ್ಮೇ ದಹತಿ ಗಾತ್ರಾಣಿ ತೂಲರಾಶಿಮಿವಾನಲಃ||

ಅದನ್ನು ತಿಳಿಯದೇ ನಾನು ರಾಜ್ಯಲೋಭದಿಂದ ರಣದಲ್ಲಿ ಅವನನ್ನು ಕೊಲ್ಲಿಸಿದೆ. ಅಗ್ನಿಯು ಹತ್ತಿಯರಾಶಿಯನ್ನು ಹೇಗೋ ಹಾಗೆ ಅದು ನನ್ನ ಅಂಗಾಂಗಳನ್ನು ಸುಡುತ್ತಿದೆ.

12001025a ನ ಹಿ ತಂ ವೇದ ಪಾರ್ಥೋಽಪಿ ಭ್ರಾತರಂ ಶ್ವೇತವಾಹನಃ|

12001025c ನಾಹಂ ನ ಭೀಮೋ ನ ಯಮೌ ಸ ತ್ವಸ್ಮಾನ್ವೇದ ಸುವ್ರತಃ||

ಅವನು ಅಣ್ಣನೆಂದು ಶ್ವೇತವಾಹನ ಪಾರ್ಥನಿಗಾಗಲೀ, ನನಗಾಗಲೀ, ಭೀಮನಿಗಾಗಲೀ, ಯಮಳರಿಗಾಗಲೀ ತಿಳಿದಿರಲಿಲ್ಲ. ಆದರೆ ನಾವು ಅವನ ಸಹೊದರರೆಂದು ಆ ಸುವ್ರತನಿಗೆ ತಿಳಿದಿತ್ತು!

12001026a ಗತಾ ಕಿಲ ಪೃಥಾ ತಸ್ಯ ಸಕಾಶಮಿತಿ ನಃ ಶ್ರುತಮ್|

12001026c ಅಸ್ಮಾಕಂ ಶಮಕಾಮಾ ವೈ ತ್ವಂ ಚ ಪುತ್ರೋ ಮಮೇತ್ಯಥ||

ನಮ್ಮೊಡನೆ ಶಾಂತಿಯನ್ನು ಬಯಸಿ ಪೃಥೆಯು ಅವಳ ಬಳಿ ಹೋಗಿ “ನೀನು ನನ್ನ ಮಗ” ಎಂದು ಹೇಳಿದ್ದಳೆಂದು ನಾವು ಕೇಳಿದ್ದೇವೆ.

12001027a ಪೃಥಾಯಾ ನ ಕೃತಃ ಕಾಮಸ್ತೇನ ಚಾಪಿ ಮಹಾತ್ಮನಾ|

12001027c ಅತಿಪಶ್ಚಾದಿದಂ ಮಾತರ್ಯವೋಚದಿತಿ ನಃ ಶ್ರುತಮ್||

ಆದರೆ ಆ ಮಹಾತ್ಮನು ಪೃಥೆಯು ಬಯಸಿದಂತೆ ಮಾಡಲಿಲ್ಲ. ಅದೂ ಅಲ್ಲದೆ ಅವನು ತಾಯಿಗೆ ಇದನ್ನು ಹೇಳಿದನೆಂದು ನಾವು ಕೇಳಿದ್ದೇವೆ.

12001028a ನ ಹಿ ಶಕ್ಷ್ಯಾಮ್ಯಹಂ ತ್ಯಕ್ತುಂ ನೃಪಂ ದುರ್ಯೋಧನಂ ರಣೇ|

12001028c ಅನಾರ್ಯಂ ಚ ನೃಶಂಸಂ ಚ ಕೃತಘ್ನಂ ಚ ಹಿ ಮೇ ಭವೇತ್||

“ರಣದಲ್ಲಿ ನೃಪ ದುರ್ಯೋಧನನ್ನು ತ್ಯಜಿಸಲು ನಾನು ಶಕ್ತನಿಲ್ಲ. ನಾನು ಅನಾರ್ಯನೂ, ಕ್ರೂರಿಯೂ, ಕೃತಘ್ನನು ಆಗುವುದು ಬೇಡ! 

12001029a ಯುಧಿಷ್ಠಿರೇಣ ಸಂಧಿಂ ಚ ಯದಿ ಕುರ್ಯಾಂ ಮತೇ ತವ|

12001029c ಭೀತೋ ರಣೇ ಶ್ವೇತವಾಹಾದಿತಿ ಮಾಂ ಮಂಸ್ಯತೇ ಜನಃ||

ನಿನ್ನ ಸಲಹೆಯಂತೆ ನಾನೇನಾದರೂ ಯುಧಿಷ್ಠಿರನೊಡನೆ ಸಂಧಿಮಾಡಿಕೊಂಡರೆ ರಣದಲ್ಲಿ ಶ್ವೇತವಾಹನನಿಗೆ ಹೆದರಿ ಹೀಗೆ ಮಾಡಿದೆನೆಂದು ಜನರು ತಿಳಿದುಕೊಳ್ಳುತ್ತಾರೆ.

12001030a ಸೋಽಹಂ ನಿರ್ಜಿತ್ಯ ಸಮರೇ ವಿಜಯಂ ಸಹಕೇಶವಮ್|

12001030c ಸಂಧಾಸ್ಯೇ ಧರ್ಮಪುತ್ರೇಣ ಪಶ್ಚಾದಿತಿ ಚ ಸೋಽಬ್ರವೀತ್||

ಸಮರದಲ್ಲಿ ನಾನು ಕೇಶವನೊಡನೆ ವಿಜಯ ಅರ್ಜುನನನ್ನು ಸೋಲಿಸಿದ ನಂತರ ನಾನು ಧರ್ಮಪುತ್ರನೊಂದಿಗೆ ಸಂಧಿಮಾಡಿಕೊಳ್ಳುತ್ತೇನೆ” ಎಂದು ಅವನು ಹೇಳಿದನಂತೆ.

12001031a ತಮವೋಚತ್ಕಿಲ ಪೃಥಾ ಪುನಃ ಪೃಥುಲವಕ್ಷಸಮ್|

12001031c ಚತುರ್ಣಾಮಭಯಂ ದೇಹಿ ಕಾಮಂ ಯುಧ್ಯಸ್ವ ಫಲ್ಗುನಮ್||

ಪುನಃ ಪೃಥೆಯು ಆ ವಿಶಾಲವಕ್ಷಸ್ಥಳನಿಗೆ “ಬೇಕಾದರೆ ಫಲ್ಗುನನೊಡನೆ ಯುದ್ಧಮಾಡು, ಆದರೆ ಉಳಿದ ನಾಲ್ವರಿಗೆ ಅಭಯವನ್ನು ನೀಡು” ಎಂದು ಕೇಳಿಕೊಂಡಳಂತೆ!

12001032a ಸೋಽಬ್ರವೀನ್ಮಾತರಂ ಧೀಮಾನ್ವೇಪಮಾನಃ ಕೃತಾಂಜಲಿಃ|

12001032c ಪ್ರಾಪ್ತಾನ್ವಿಷಹ್ಯಾಂಶ್ಚತುರೋ ನ ಹನಿಷ್ಯಾಮಿ ತೇ ಸುತಾನ್||

ಆಗ ಆ ಧೀಮಂತನು ನಡುಗುತ್ತಾ ಅಂಜಲೀಬದ್ಧನಾಗಿ ತಾಯಿಗೆ “ನಿನ್ನ ಆ ನಾಲ್ವರು ಮಕ್ಕಳೂ ನನ್ನಿಂದಾಗಿ ವಿಷಮ ಸ್ಥಿತಿಯನ್ನು ಹೊಂದಿದರೂ ನಾನು ಅವರನ್ನು ಸಂಹರಿಸುವುದಿಲ್ಲ.

12001033a ಪಂಚೈವ ಹಿ ಸುತಾ ಮಾತರ್ಭವಿಷ್ಯಂತಿ ಹಿ ತೇ ಧ್ರುವಮ್|

12001033c ಸಕರ್ಣಾ ವಾ ಹತೇ ಪಾರ್ಥೇ ಸಾರ್ಜುನಾ ವಾ ಹತೇ ಮಯಿ||

ಪಾರ್ಥನು ಹತನಾದರೆ ಕರ್ಣ ಮತ್ತು ನಾನು ಹತನಾದರೆ ಅರ್ಜುನನೂ ಸೇರಿ ನಿನಗೆ ಐವರು ಮಕ್ಕಳು ಇರುತ್ತಾರೆ. ಮಾತೇ! ಇದು ಸತ್ಯ!”

12001034a ತಂ ಪುತ್ರಗೃದ್ಧಿನೀ ಭೂಯೋ ಮಾತಾ ಪುತ್ರಮಥಾಬ್ರವೀತ್|

12001034c ಭ್ರಾತೃಣಾಂ ಸ್ವಸ್ತಿ ಕುರ್ವೀಥಾ ಯೇಷಾಂ ಸ್ವಸ್ತಿ ಚಿಕೀರ್ಷಸಿ||

ಪುತ್ರಪ್ರಿಯಳಾದ ಆ ಮಾತೆಯು ತನ್ನ ಮಗನಿಗೆ ಪುನಃ “ನೀನು ಯಾರಿಗೆ ಮಂಗಳವನ್ನುಂಟುಮಾಡಲು ಬಯಸುತ್ತೀಯೋ ಆ ಸಹೋದರರಿಗೆ ಮಂಗಳವನ್ನುಂಟುಮಾಡು!” ಎಂದು ಹೇಳಿದಳಂತೆ.

12001035a ತಮೇವಮುಕ್ತ್ವಾ ತು ಪೃಥಾ ವಿಸೃಜ್ಯೋಪಯಯೌ ಗೃಹಾನ್|

12001035c ಸೋಽರ್ಜುನೇನ ಹತೋ ವೀರೋ ಭ್ರಾತಾ ಭ್ರಾತ್ರಾ ಸಹೋದರಃ||

ಪೃಥೆಯು ಹಾಗೆ ಹೇಳಲು ಅವರಿಬ್ಬರೂ ಬೀಳ್ಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದರಂತೆ. ಆ ವೀರನೇ ಅರ್ಜುನನಿಂದ ಹತನಾದನು. ಅಣ್ಣನನ್ನು ತಮ್ಮನು ಸಂಹರಿಸಿದನು!

12001036a ನ ಚೈವ ವಿವೃತೋ ಮಂತ್ರಃ ಪೃಥಾಯಾಸ್ತಸ್ಯ ವಾ ಮುನೇ|

12001036c ಅಥ ಶೂರೋ ಮಹೇಷ್ವಾಸಃ ಪಾರ್ಥೇನಾಸೌ ನಿಪಾತಿತಃ||

ಮುನೇ! ಈ ರಹಸ್ಯವನ್ನು ಪೃಥೆಯಾಗಲೀ ಕರ್ಣನಾಗಲೀ ಅಂತ್ಯದವರೆಗೂ ಹೊರಗೆಡಹಲೇ ಇಲ್ಲ! ಈಗ ಆ ಶೂರ ಮಹೇಷ್ವಾಸನು ಪಾರ್ಥನಿಂದ ಹತನಾಗಿದ್ದಾನೆ.

12001037a ಅಹಂ ತ್ವಜ್ಞಾಸಿಷಂ ಪಶ್ಚಾತ್ಸ್ವಸೋದರ್ಯಂ ದ್ವಿಜೋತ್ತಮ|

12001037c ಪೂರ್ವಜಂ ಭ್ರಾತರಂ ಕರ್ಣಂ ಪೃಥಾಯಾ ವಚನಾತ್ಪ್ರಭೋ||

ದ್ವಿಜೋತ್ತಮ! ಪ್ರಭೋ! ಅವನ ಮರಣಾನಂತರವೇ ನಾನು ಪೃಥೆಯ ವಚನದಂತೆ ಕರ್ಣನು ನಮ್ಮ ಸಹೋದರನೆಂದೂ, ನಮ್ಮೆಲ್ಲರ ಮೊದಲು ಹುಟ್ಟಿದ ಅಣ್ಣನೆಂದೂ ತಿಳಿದುಕೊಂಡೆನು.

12001038a ತೇನ ಮೇ ದೂಯತೇಽತೀವ ಹೃದಯಂ ಭ್ರಾತೃಘಾತಿನಃ|

12001038c ಕರ್ಣಾರ್ಜುನಸಹಾಯೋಽಹಂ ಜಯೇಯಮಪಿ ವಾಸವಮ್||

ಸಹೋದರನನ್ನು ಕೊಲ್ಲಿಸಿದ ನನ್ನ ಈ ಹೃದಯವು ಅತೀವವಾಗಿ ದುಃಖಿಸುತ್ತಿದೆ. ಕರ್ಣಾರ್ಜುನರ ಸಹಾಯದಿಂದ ನಾನು ವಾಸವನನ್ನೂ ಜಯಿಸಬಹುದಾಗಿತ್ತು!

12001039a ಸಭಾಯಾಂ ಕ್ಲಿಶ್ಯಮಾನಸ್ಯ ಧಾರ್ತರಾಷ್ಟ್ರೈರ್ದುರಾತ್ಮಭಿಃ|

12001039c ಸಹಸೋತ್ಪತಿತಃ ಕ್ರೋಧಃ ಕರ್ಣಂ ದೃಷ್ಟ್ವಾ ಪ್ರಶಾಮ್ಯತಿ||

ಸಭೆಯಲ್ಲಿ ದುರಾತ್ಮ ಧಾರ್ತರಾಷ್ಟ್ರರಿಂದ ಕಷ್ಟಕ್ಕೊಳಗಾದಾಗ ಒಮ್ಮೆಲೇ ಮೇಲೇರುತ್ತಿದ್ದ ನನ್ನ ಕ್ರೋಧವು ಕರ್ಣನನ್ನು ನೋಡಿದೊಡನೆಯೇ ತಣ್ಣಗಾಗುತ್ತಿತ್ತು!

12001040a ಯದಾ ಹ್ಯಸ್ಯ ಗಿರೋ ರೂಕ್ಷಾಃ ಶೃಣೋಮಿ ಕಟುಕೋದಯಾಃ|

12001040c ಸಭಾಯಾಂ ಗದತೋ ದ್ಯೂತೇ ದುರ್ಯೋಧನಹಿತೈಷಿಣಃ||

12001041a ತದಾ ನಶ್ಯತಿ ಮೇ ಕ್ರೋಧಃ ಪಾದೌ ತಸ್ಯ ನಿರೀಕ್ಷ್ಯ ಹ|

12001041c ಕುಂತ್ಯಾ ಹಿ ಸದೃಶೌ ಪಾದೌ ಕರ್ಣಸ್ಯೇತಿ ಮತಿರ್ಮಮ||

ಸಭೆಯಲ್ಲಿ ದ್ಯೂತವನ್ನಾಡುತ್ತಿದ್ದಾಗ ದುರ್ಯೋಧನನ ಹಿತೈಷಿ ಕರ್ಣನ ಕಠೋರ ಚುಚ್ಚುಮಾತುಗಳನ್ನು ಕೇಳಿ ಉಂಟಾದ ನನ್ನ ಕೋಪವು ಅವನ ಪಾದಗಳನ್ನು ನೋಡಿದೊಡನೆಯೇ ನಾಶವಾಗುತ್ತಿತ್ತು. ಕರ್ಣನ ಆ ಎರಡು ಪಾದಗಳು ಕುಂತಿಯ ಪಾದಗಳಂತಿದ್ದವು ಎಂದು ನನಗೆ ಅನ್ನಿಸುತ್ತಿತ್ತು.

12001042a ಸಾದೃಶ್ಯಹೇತುಮನ್ವಿಚ್ಚನ್ಪೃಥಾಯಾಸ್ತವ ಚೈವ ಹ|

12001042c ಕಾರಣಂ ನಾಧಿಗಚ್ಚಾಮಿ ಕಥಂ ಚಿದಪಿ ಚಿಂತಯನ್||

ಪೃಥೆಯ ಮತ್ತು ಅವನ ಪಾದಗಳ ಸಾದೃಶ್ಯತೆಯ ಕಾರಣವೇನೆಂದು ಎಷ್ಟೇ ಚಿಂತಿಸಿದರೂ ನನಗೆ ಆ ಕಾರಣವು ತಿಳಿದಿರಲಿಲ್ಲ.

12001043a ಕಥಂ ನು ತಸ್ಯ ಸಂಗ್ರಾಮೇ ಪೃಥಿವೀ ಚಕ್ರಮಗ್ರಸತ್|

12001043c ಕಥಂ ಚ ಶಪ್ತೋ ಭ್ರಾತಾ ಮೇ ತತ್ತ್ವಂ ವಕ್ತುಮಿಹಾರ್ಹಸಿ||

ಸಂಗ್ರಾಮದಲ್ಲಿ ಅವನ ರಥಚಕ್ರಗಳನ್ನು ಭೂಮಿಯು ಹೇಗೆ ನುಂಗಿಬಿಟ್ಟಳು? ನನ್ನ ಸಹೋದರನು ಹೇಗೆ ಶಪಿತನಾದನು? ಇದನ್ನು ನೀನು ನನಗೆ ಹೇಳಬೇಕು!

12001044a ಶ್ರೋತುಮಿಚ್ಚಾಮಿ ಭಗವಂಸ್ತ್ವತ್ತಃ ಸರ್ವಂ ಯಥಾತಥಮ್|

12001044c ಭವಾನ್ ಹಿ ಸರ್ವವಿದ್ವಿದ್ವಾಽಲ್ಲೋಕೇ ವೇದ ಕೃತಾಕೃತಮ್||

ಭಗವನ್! ಅವೆಲ್ಲವನ್ನೂ ಯಥಾವತ್ತಾಗಿ ಕೇಳಬಯಸುತ್ತೇನೆ. ನೀನು ಲೋಕದಲ್ಲಿ ನಡೆದುಹೋದ ಮತ್ತು ನಡೆಯಲಿರುವ ಎಲ್ಲವನ್ನೂ ತಿಳಿದಿದ್ದೀಯೆ.””

ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಕರ್ಣಾಭಿಜ್ಞಾನೇ ಪ್ರಥಮೋಽಧ್ಯಾಯಃ|

ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಕರ್ಣಾಭಿಜ್ಞಾನವೆನ್ನುವ ಮೊದಲನೇ ಅಧ್ಯಾಯವು.

 

Comments are closed.