Mausala Parva: Chapter 6

ಮೌಸಲ ಪರ್ವ

ದ್ವಾರಕೆಗೆ ಅರ್ಜುನನ ಆಗಮನ (೧-೧೫).

16006001 ವೈಶಂಪಾಯನ ಉವಾಚ|

16006001a ದಾರುಕೋಽಪಿ ಕುರೂನ್ಗತ್ವಾ ದೃಷ್ಟ್ವಾ ಪಾರ್ಥಾನ್ಮಹಾರಥಾನ್|

16006001c ಆಚಷ್ಟ ಮೌಸಲೇ ವೃಷ್ಣೀನನ್ಯೋನ್ಯೇನೋಪಸಂಹೃತಾನ್||

ವೈಶಂಪಾನನು ಹೇಳಿದನು: “ದಾರುಕನೂ ಕೂಡ ಕುರುಗಳಲ್ಲಿಗೆ ಹೋಗಿ ಮಹಾರಥ ಪಾರ್ಥರನ್ನು ಕಂಡು ವೃಷ್ಣಿಗಳು ಮೌಸಲಗಳಿಂದ ಅನ್ಯೋನ್ಯರನ್ನು ಸಂಹರಿಸಿದುದನ್ನು ಹೇಳಿದನು.

16006002a ಶ್ರುತ್ವಾ ವಿನಷ್ಟಾನ್ವಾರ್ಷ್ಣೇಯಾನ್ಸಭೋಜಕುಕುರಾಂಧಕಾನ್|

16006002c ಪಾಂಡವಾಃ ಶೋಕಸಂತಪ್ತಾ ವಿತ್ರಸ್ತಮನಸೋಽಭವನ್||

ಭೋಜ-ಕುಕುರ-ಅಂಧಕರೊಂದಿಗೆ ವಾರ್ಷ್ಣೇಯರ ವಿನಾಶವನ್ನು ಕೇಳಿದ ಪಾಂಡವರು ಶೋಕಸಂತಪ್ತರಾಗಿ ವಿತ್ರಸ್ತ ಮನಸ್ಸುಳ್ಳವರಾದರು.

16006003a ತತೋಽರ್ಜುನಸ್ತಾನಾಮಂತ್ರ್ಯ ಕೇಶವಸ್ಯ ಪ್ರಿಯಃ ಸಖಾ|

16006003c ಪ್ರಯಯೌ ಮಾತುಲಂ ದ್ರಷ್ಟುಂ ನೇದಮಸ್ತೀತಿ ಚಾಬ್ರವೀತ್||

ಅನಂತರ ಕೇಶವನ ಪ್ರಿಯಸಖ ಅರ್ಜುನನು ಅವರಿಂದ ಬೀಳ್ಕೊಂಡು, “ಇದು ಹೀಗಲ್ಲ!” ಎಂದು ಹೇಳುತ್ತಾ ತನ್ನ ಸೋದರಮಾವನನ್ನು ನೋಡಲು ಹೊರಟನು.

16006004a ಸ ವೃಷ್ಣಿನಿಲಯಂ ಗತ್ವಾ ದಾರುಕೇಣ ಸಹ ಪ್ರಭೋ|

16006004c ದದರ್ಶ ದ್ವಾರಕಾಂ ವೀರೋ ಮೃತನಾಥಾಮಿವ ಸ್ತ್ರಿಯಮ್||

ಪ್ರಭೋ! ಆ ವೀರನು ದಾರುಕನೊಂದಿಗೆ ವೃಷ್ಣಿನಿಲಯಕ್ಕೆ ಹೋಗಿ ಅಲ್ಲಿ ಪತಿಯನ್ನು ಕಳೆದುಕೊಂಡ ಸ್ತ್ರೀಯಂತಿದ್ದ ದ್ವಾರಕೆಯನ್ನು ನೋಡಿದನು.

16006005a ಯಾಃ ಸ್ಮ ತಾ ಲೋಕನಾಥೇನ ನಾಥವತ್ಯಃ ಪುರಾಭವನ್|

16006005c ತಾಸ್ತ್ವನಾಥಾಸ್ತದಾ ನಾಥಂ ಪಾರ್ಥಂ ದೃಷ್ಟ್ವಾ ವಿಚುಕ್ರುಶುಃ||

ಹಿಂದೆ ಲೋಕನಾಥನೇ ಯಾರ ನಾಥನಾಗಿದ್ದನೋ ಆ ಅನಾಥರು ನಾಥ ಪಾರ್ಥನನ್ನು ಕಂಡು ಜೋರಾಗಿ ರೋದಿಸಿದರು.

16006006a ಷೋಡಶಸ್ತ್ರೀಸಹಸ್ರಾಣಿ ವಾಸುದೇವಪರಿಗ್ರಹಃ|

16006006c ತಾಸಾಮಾಸೀನ್ಮಹಾನ್ನಾದೋ ದೃಷ್ಟ್ವೈವಾರ್ಜುನಮಾಗತಮ್||

ಅರ್ಜುನನು ಬಂದುದನ್ನು ನೋಡಿ ವಾಸುದೇವನ ಕೈಹಿಡಿದಿದ್ದ ಹದಿನಾರು ಸಾವಿರ ಸ್ತ್ರೀಯರು ಜೋರಾಗಿ ಕೂಗಿಕೊಂಡು ರೋದಿಸಿದರು.

16006007a ತಾಸ್ತು ದೃಷ್ಟ್ವೈವ ಕೌರವ್ಯೋ ಬಾಷ್ಪೇಣ ಪಿಹಿತೋಽರ್ಜುನಃ|

16006007c ಹೀನಾಃ ಕೃಷ್ಣೇನ ಪುತ್ರೈಶ್ಚ ನಾಶಕತ್ಸೋಽಭಿವೀಕ್ಷಿತುಮ್||

ಅವರನ್ನು ನೋಡುತ್ತಲೇ ಕೌರವ್ಯ ಅರ್ಜುನನು ಕಣ್ಣೀರು ತುಂಬಿದವನಾಗಿ ಕೃಷ್ಣನಿಂದಲೂ ಪುತ್ರರಿಂದಲೂ ವಿಹೀನರಾದ ಅವರನ್ನು ನೋಡಲೂ ಅಶಕ್ತನಾದನು.

16006008a ತಾಂ ಸ ವೃಷ್ಣ್ಯಂಧಕಜಲಾಂ ಹಯಮೀನಾಂ ರಥೋಡುಪಾಮ್|

16006008c ವಾದಿತ್ರರಥಘೋಷೌಘಾಂ ವೇಶ್ಮತೀರ್ಥಮಹಾಗ್ರಹಾಮ್||

16006009a ರತ್ನಶೈವಲಸಂಘಾಟಾಂ ವಜ್ರಪ್ರಾಕಾರಮಾಲಿನೀಮ್|

16006009c ರಥ್ಯಾಸ್ರೋತೋಜಲಾವರ್ತಾಂ ಚತ್ವರಸ್ತಿಮಿತಹ್ರದಾಮ್||

16006010a ರಾಮಕೃಷ್ಣಮಹಾಗ್ರಾಹಾಂ ದ್ವಾರಕಾಸರಿತಂ ತದಾ|

16006010c ಕಾಲಪಾಶಗ್ರಹಾಂ ಘೋರಾಂ ನದೀಂ ವೈತರಣೀಮಿವ||

ವೃಷ್ಣಿ-ಅಂಧಕರೇ ನೀರಾಗಿದ್ದ, ಕುದುರೆಗಳು ಮೀನಾಗಿದ್ದ, ರಥಗಳು ತೆಪ್ಪದಂತಿದ್ದ, ವಾದ್ಯ-ರಥಘೋಷಗಳೇ ಅಲೆಗಳಂತಿದ್ದ, ಮನೆ-ಉದ್ಯಾನವನಗಳೇ ತೀರ್ಥ-ಮಡುಗಳಂತಿದ್ದ, ರತ್ನ-ಹವಳಗಳೇ ಪಾಚೆಯಂತಿದ್ದ, ವಜ್ರದ ಕೋಟೆಗಳೇ ಮಾಲೆಗಳಂತಿದ್ದ, ರಥಬೀದಿಗಳೇ ಸುಳಿಗಳಂತಿದ್ದ, ಚತ್ವಾರಗಳೇ ಸರೋವರಗಳಂತಿದ್ದ, ರಾಮ-ಕೃಷ್ಣರೇ ಮಹಾ ಮೊಸಳೆಗಳಂತಿದ್ದ ದ್ವಾರಕಾ ಎನ್ನುವ ನದಿಯು ಈಗ ಕಾಲನ ಪಾಶಕ್ಕೆ ಸಿಲುಕಿದ ಘೋರ ವೈತರಣೀ ನದಿಯಂತೆ ತೋರುತ್ತಿತ್ತು.

16006011a ತಾಂ ದದರ್ಶಾರ್ಜುನೋ ಧೀಮಾನ್ವಿಹೀನಾಂ ವೃಷ್ಣಿಪುಂಗವೈಃ|

16006011c ಗತಶ್ರಿಯಂ ನಿರಾನಂದಾಂ ಪದ್ಮಿನೀಂ ಶಿಶಿರೇ ಯಥಾ||

ವೃಷ್ಣಿಪುಂಗವರಿಂದ ವಿಹೀನವಾಗಿ, ಕಾಂತಿಯನ್ನು ಕಳೆದುಕೊಂಡು, ಆನಂದವಿಲ್ಲದೇ ಇದ್ದ ದ್ವಾರಕಾ ಪುರಿಯು ಧೀಮಾನ್ ಅರ್ಜುನನಿಗೆ ಶಿಶಿರ ಋತುವಿನಲ್ಲಿರುವ ಕಮಲದ ಹೂವಿನಂತೆ ತೋರಿತು.

16006012a ತಾಂ ದೃಷ್ಟ್ವಾ ದ್ವಾರಕಾಂ ಪಾರ್ಥಸ್ತಾಶ್ಚ ಕೃಷ್ಣಸ್ಯ ಯೋಷಿತಃ|

16006012c ಸಸ್ವನಂ ಬಾಷ್ಪಮುತ್ಸೃಜ್ಯ ನಿಪಪಾತ ಮಹೀತಲೇ||

ಅಂಥಹ ದ್ವಾರಕೆಯನ್ನೂ ಕೃಷ್ಣನ ಮಡದಿಯರನ್ನೂ ನೋಡಿದ ಪಾರ್ಥನು ಜೋರಾಗಿ ಅಳುತ್ತಾ ಕಣ್ಣೀರು ಸುರಿಸಿ ನೆಲದ ಮೇಲೆ ಬಿದ್ದನು.

16006013a ಸಾತ್ರಾಜಿತೀ ತತಃ ಸತ್ಯಾ ರುಕ್ಮಿಣೀ ಚ ವಿಶಾಂ ಪತೇ|

16006013c ಅಭಿಪತ್ಯ ಪ್ರರುರುದುಃ ಪರಿವಾರ್ಯ ಧನಂಜಯಮ್||

ವಿಶಾಂಪತೇ! ಆಗ ಸತ್ರಾಜಿತನ ಮಗಳು ಸತ್ಯಭಾಮೆ ಮತ್ತು ರುಕ್ಮಿಣಿಯರು ಕೂಡ ಕೆಳಗೆ ಬಿದ್ದು ಧನಂಜಯನನ್ನು ಸುತ್ತುವರೆದು ರೋದಿಸತೊಡಗಿದರು.

16006014a ತತಸ್ತಾಃ ಕಾಂಚನೇ ಪೀಠೇ ಸಮುತ್ಥಾಯೋಪವೇಶ್ಯ ಚ|

16006014c ಅಬ್ರುವಂತ್ಯೋ ಮಹಾತ್ಮಾನಂ ಪರಿವಾರ್ಯೋಪತಸ್ಥಿರೇ||

ಅನಂತರ ಅವನನ್ನು ಎಬ್ಬಿಸಿ ಕಾಂಚನಪೀಠದಲ್ಲಿ ಕುಳ್ಳಿರಿಸಿ, ಆ ಮಹಾತ್ಮನನ್ನು ಸುತ್ತುವರೆದು ಅವನೊಡನೆ ಹೇಳಿಕೊಂಡರು.

16006015a ತತಃ ಸಂಸ್ತೂಯ ಗೋವಿಂದಂ ಕಥಯಿತ್ವಾ ಚ ಪಾಂಡವಃ|

16006015c ಆಶ್ವಾಸ್ಯ ತಾಃ ಸ್ತ್ರಿಯಶ್ಚಾಪಿ ಮಾತುಲಂ ದ್ರಷ್ಟುಮಭ್ಯಗಾತ್||

ಗೋವಿಂದನನ್ನು ಸಂಸ್ತುತಿಸಿ ಅವರೊಂದಿಗೆ ಮಾತನಾಡಿ ಆ ಸ್ತ್ರೀಯರನ್ನು ಸಮಾಧಾನಪಡಿಸಿ ಪಾಂಡವನು ತನ್ನ ಸೋದರಮಾವನನ್ನು ನೋಡಲು ಹೋದನು.”

ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ಆರ್ಜುನಾಗಮನೇ ಷಷ್ಟೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ಅರ್ಜುನಾಗಮನ ಎನ್ನುವ ಆರನೇ ಅಧ್ಯಾಯವು.

Related image

Comments are closed.