Mausala Parva: Chapter 5

ಮೌಸಲ ಪರ್ವ

ರಾಮ-ಕೃಷ್ಣಾವತಾರ ಸಮಾಪ್ತಿ

ಅರ್ಜುನನನ್ನು ಬರಹೇಳಿ ಕೃಷ್ಣನು ದಾರುಕನನ್ನು ಹಸ್ತಿನಾಪುರಕ್ಕೆ ಕಳುಹಿಸಿದುದು; ಸ್ತ್ರೀಯರನ್ನು ರಕ್ಷಿಸಲು ದ್ವಾರಕೆಗೆ ಕಳುಹಿಸಿದ ಬಭ್ರುವೂ ಹತನಾಗಲು ತಾನೇ ದ್ವಾರಕೆಗೆ ಹೋಗಿ ವಸುದೇವನಿಗೆ ಅರ್ಜುನನು ಬರುವವ ವರೆಗೆ ಕಾಯಲು ಹೇಳಿದುದು (೧-೧೧). ಬಲರಾಮನು ಮಹಾನಾಗನ ರೂಪವನ್ನು ತಳೆದು ಸಮುದ್ರವನ್ನು ಸೇರಿದುದು (೧೨-೧೫). ಜರನೆಂಬ ವ್ಯಾಧನಿಂದ ಹೊಡೆಯಲ್ಪಟ್ಟ ಕೃಷ್ಣನು ದಿವವನ್ನು ಸೇರಿದುದು (೧೬-೨೫).

16005001 ವೈಶಂಪಾಯನ ಉವಾಚ|

16005001a ತತೋ ಯಯುರ್ದಾರುಕಃ ಕೇಶವಶ್ಚ

ಬಭ್ರುಶ್ಚ ರಾಮಸ್ಯ ಪದಂ ಪತಂತಃ|

16005001c ಅಥಾಪಶ್ಯನ್ರಾಮಮನಂತವೀರ್ಯಂ

ವೃಕ್ಷೇ ಸ್ಥಿತಂ ಚಿಂತಯಾನಂ ವಿವಿಕ್ತೇ||

ವೈಶಂಪಾಯನನು ಹೇಳಿದನು: “ಅನಂತರ ದಾರುಕ, ಬಭ್ರು ಮತ್ತು ಕೇಶವರು ಬಲರಾಮನ ಹೆಜ್ಜೆಯ ಗುರುತನ್ನೇ ಹಿಡಿದುಕೊಂಡು ಹೊರಟರು. ಅವರು ಅಲ್ಲಿ ಒಂದು ವೃಕ್ಷದಡಿಯಲ್ಲಿ ಚಿಂತಾಮಗ್ನನಾಗಿ ನಿಂತಿರುವ ಅನಂತವೀರ್ಯ ರಾಮನನ್ನು ಕಂಡರು.

16005002a ತತಃ ಸಮಾಸಾದ್ಯ ಮಹಾನುಭಾವಃ

ಕೃಷ್ಣಸ್ತದಾ ದಾರುಕಮನ್ವಶಾಸತ್|

16005002c ಗತ್ವಾ ಕುರೂನ್ಶೀಘ್ರಮಿಮಂ ಮಹಾಂತಂ

ಪಾರ್ಥಾಯ ಶಂಸಸ್ವ ವಧಂ ಯದೂನಾಮ್||

ಅವನ ಬಳಿಹೋದನಂತರ ಮಹಾನುಭಾವ ಕೃಷ್ಣನು ದಾರುಕನಿಗೆ ಆಜ್ಞಾಪಿಸಿದನು: “ಶೀಘ್ರವೇ ಕುರುಗಳಲ್ಲಿಗೆ ಹೋಗಿ ಯದುಗಳ ವಧೆಯನ್ನೂ ಈ ಮಹಾ ಅಂತ್ಯವನ್ನೂ ಪಾರ್ಥನಿಗೆ ತಿಳಿಸು.

16005003a ತತೋಽರ್ಜುನಃ ಕ್ಷಿಪ್ರಮಿಹೋಪಯಾತು

ಶ್ರುತ್ವಾ ಮೃತಾನ್ಯಾದವಾನ್ಬ್ರಹ್ಮಶಾಪಾತ್|

16005003c ಇತ್ಯೇವಮುಕ್ತಃ ಸ ಯಯೌ ರಥೇನ

ಕುರೂಂಸ್ತದಾ ದಾರುಕೋ ನಷ್ಟಚೇತಾಃ||

ಬ್ರಾಹ್ಮಣರ ಶಾಪದಿಂದ ಯಾದವರು ಮೃತರಾದುದನ್ನು ಕೇಳಿ ಕೂಡಲೇ ಅರ್ಜುನನು ಇಲ್ಲಿಗೆ ಬರಲಿ!” ಇದನ್ನು ಕೇಳಿದ ದಾರುಕನು ಚೇತನವನ್ನೇ ಕಳೆದುಕೊಂಡಂಥವನಾಗಿ ರಥದಲ್ಲಿ ಕುರುಗಳ ಕಡೆ ನಡೆದನು.

16005004a ತತೋ ಗತೇ ದಾರುಕೇ ಕೇಶವೋಽಥ

ದೃಷ್ಟ್ವಾಂತಿಕೇ ಬಭ್ರುಮುವಾಚ ವಾಕ್ಯಮ್|

16005004c ಸ್ತ್ರಿಯೋ ಭವಾನ್ರಕ್ಷತು ಯಾತು ಶೀಘ್ರಂ

ನೈತಾ ಹಿಂಸ್ಯುರ್ದಸ್ಯವೋ ವಿತ್ತಲೋಭಾತ್||

ದಾರುಕನು ಹೊರಟುಹೋಗಲು ಕೇಶವನು ಹತ್ತಿರದಲ್ಲಿದ್ದ ಬಭ್ರುವನ್ನು ನೋಡಿ ಹೇಳಿದನು: “ನೀನು ಶೀಘ್ರವಾಗಿ ಹೋಗಿ ಸ್ತ್ರೀಯರನ್ನು ರಕ್ಷಿಸು. ವಿತ್ತಲೋಭದಿಂದ ದಸ್ಯುಗಳು ಅವರನ್ನು ಹಿಂಸಿಸದಿರಲಿ!”

16005005a ಸ ಪ್ರಸ್ಥಿತಃ ಕೇಶವೇನಾನುಶಿಷ್ಟೋ

ಮದಾತುರೋ ಜ್ಞಾತಿವಧಾರ್ದಿತಶ್ಚ|

16005005c ತಂ ವೈ ಯಾಂತಂ ಸಂನಿಧೌ ಕೇಶವಸ್ಯ

ತ್ವರಂತಮೇಕಂ ಸಹಸೈವ ಬಭ್ರುಮ್|

16005005e ಬ್ರಹ್ಮಾನುಶಪ್ತಮವಧೀನ್ಮಹದ್ವೈ

ಕೂಟೋನ್ಮುಕ್ತಂ ಮುಸಲಂ ಲುಬ್ಧಕಸ್ಯ||

ಕೇಶವನ ನಿರ್ದೇಶನದಂತೆ ಆ ಬಾಂಧವರ ವಧೆಯಿಂದ ಆರ್ದಿತನಾಗಿದ್ದ ಮತ್ತು ಕುಡಿದು ಅಮಲೇರಿದ್ದ ಬಭ್ರುವು ಹೊರಟನು. ಕೇಶವನ ಸನ್ನಿಧಿಯಿಂದ ಅವನು ಹೊರಟಿದ್ದಷ್ಟೇ ಒಮ್ಮೆಲೇ ಆ ಗುಂಪಿನಿಂದ ಯಾರೋ ಎಸೆದ ಮುಸುಲವೊಂದು ಅವನಿಗೆ ಹೊಡೆದು ಬ್ರಾಹ್ಮಣರ ಶಾಪಕ್ಕೆ ಗುರಿಯಾಗಿದ್ದ ಬಭ್ರುವೂ ಮರಣಹೊಂದಿದನು.

16005006a ತತೋ ದೃಷ್ಟ್ವಾ ನಿಹತಂ ಬಭ್ರುಮಾಹ

ಕೃಷ್ಣೋ ವಾಕ್ಯಂ ಭ್ರಾತರಮಗ್ರಜಂ ತು|

16005006c ಇಹೈವ ತ್ವಂ ಮಾಂ ಪ್ರತೀಕ್ಷಸ್ವ ರಾಮ

ಯಾವತ್ ಸ್ತ್ರಿಯೋ ಜ್ಞಾತಿವಶಾಃ ಕರೋಮಿ||

ಬಭ್ರುವು ಹತನಾದುದನ್ನು ನೋಡಿ ಕೃಷ್ಣನು ಅಗ್ರಜ ಅಣ್ಣನಿಗೆ ಹೀಗೆಂದನು: “ರಾಮ! ಸ್ತ್ರೀಯರನ್ನು ಯಾರಾದರೂ ನಮ್ಮ ಬಾಂಧವರಿಗೆ ಒಪ್ಪಿಸಿ ಬರುವವರೆಗೂ ಇಲ್ಲಿಯೇ ನನ್ನ ಪ್ರತೀಕ್ಷೆಯಿಂದಿರು!”

16005007a ತತಃ ಪುರೀಂ ದ್ವಾರವತೀಂ ಪ್ರವಿಶ್ಯ

ಜನಾರ್ದನಃ ಪಿತರಂ ಪ್ರಾಹ ವಾಕ್ಯಮ್|

16005007c ಸ್ತ್ರಿಯೋ ಭವಾನ್ರಕ್ಷತು ನಃ ಸಮಗ್ರಾ

ಧನಂಜಯಸ್ಯಾಗಮನಂ ಪ್ರತೀಕ್ಷನ್|

16005007e ರಾಮೋ ವನಾಂತೇ ಪ್ರತಿಪಾಲಯನ್ಮಾಮ್

ಆಸ್ತೇಽದ್ಯಾಹಂ ತೇನ ಸಮಾಗಮಿಷ್ಯೇ||

ಅನಂತರ ದ್ವಾರಕಾಪುರಿಯನ್ನು ಪ್ರವೇಶಿಸಿ ಜನಾರ್ದನನು ತನ್ನ ತಂದೆಗೆ ಹೇಳಿದನು: “ಧನಂಜಯನ ಆಗಮನವನ್ನು ಪ್ರತೀಕ್ಷಿಸುತ್ತಾ ನೀನು ನಮ್ಮ ಸ್ತ್ರೀಯರನ್ನು ರಕ್ಷಿಸಬೇಕು! ಬಲರಾಮನು ವನದಲ್ಲಿ ನನಗಾಗಿ ಕಾಯುತ್ತಿದ್ದಾನೆ. ನಾನು ಅವನನ್ನು ಸೇರುತ್ತೇನೆ.

16005008a ದೃಷ್ಟಂ ಮಯೇದಂ ನಿಧನಂ ಯದೂನಾಂ

ರಾಜ್ಞಾಂ ಚ ಪೂರ್ವಂ ಕುರುಪುಂಗವಾನಾಮ್|

16005008c ನಾಹಂ ವಿನಾ ಯದುಭಿರ್ಯಾದವಾನಾಂ

ಪುರೀಮಿಮಾಂ ದ್ರಷ್ಟುಮಿಹಾದ್ಯ ಶಕ್ತಃ||

ನಾನು ಇಲ್ಲಿ ಯದುಗಳ ಈ ನಿಧನವನ್ನೂ ಹಿಂದೆ ಕುರುಪುಂಗವ ರಾಜರ ನಿಧನವನ್ನೂ ನೋಡಿದೆ. ಯಾದವರಿಲ್ಲದ ಈ ಪುರಿಯನ್ನು ನಾನು ಇಂದು ನೋಡಲು ಶಕ್ಯನಿಲ್ಲ.

16005009a ತಪಶ್ಚರಿಷ್ಯಾಮಿ ನಿಬೋಧ ತನ್ಮೇ

ರಾಮೇಣ ಸಾರ್ಧಂ ವನಮಭ್ಯುಪೇತ್ಯ|

16005009c ಇತೀದಮುಕ್ತ್ವಾ ಶಿರಸಾಸ್ಯ ಪಾದೌ

ಸಂಸ್ಪೃಶ್ಯ ಕೃಷ್ಣಸ್ತ್ವರಿತೋ ಜಗಾಮ||

ರಾಮನೊಂದಿಗೆ ವನವನ್ನು ಸೇರಿ ತಪಸ್ಸನ್ನಾಚರಿಸುತ್ತೇನೆ!” ಹೀಗೆ ಹೇಳಿ ಶಿರಸಾ ಅವನ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಿ ಕೃಷ್ಣನು ತ್ವರೆಮಾಡಿ ಹೊರಟುಹೋದನು.

16005010a ತತೋ ಮಹಾನ್ನಿನದಃ ಪ್ರಾದುರಾಸೀತ್

ಸಸ್ತ್ರೀಕುಮಾರಸ್ಯ ಪುರಸ್ಯ ತಸ್ಯ|

16005010c ಅಥಾಬ್ರವೀತ್ಕೇಶವಃ ಸಂನಿವರ್ತ್ಯ

ಶಬ್ದಂ ಶ್ರುತ್ವಾ ಯೋಷಿತಾಂ ಕ್ರೋಶತೀನಾಮ್||

ಆಗ ಪುರದಲ್ಲಿದ್ದ ಸ್ತ್ರೀ-ಕುಮಾರರ ಮಹಾ ಕೂಗು ಕೇಳಿಬಂದಿತು. ರೋದಿಸುತ್ತಿರುವ ಸ್ತ್ರೀಯರ ಶಬ್ಧವನ್ನು ಕೇಳಿ ಕೇಶವನು ಅವರನ್ನು ಹಿಂದಿರುಗಲು ಹೇಳಿದನು.

16005011a ಪುರೀಮಿಮಾಮೇಷ್ಯತಿ ಸವ್ಯಸಾಚೀ

ಸ ವೋ ದುಃಖಾನ್ಮೋಚಯಿತಾ ನರಾಗ್ರ್ಯಃ|

16005011c ತತೋ ಗತ್ವಾ ಕೇಶವಸ್ತಂ ದದರ್ಶ

ರಾಮಂ ವನೇ ಸ್ಥಿತಮೇಕಂ ವಿವಿಕ್ತೇ||

“ಈ ಪುರಕ್ಕೆ ಸವ್ಯಸಾಚಿಯು ಬರುತ್ತಾನೆ ಮತ್ತು ಆ ನರಾಗ್ರ್ಯನು ನಿಮ್ಮನ್ನು ದುಃಖದಿಂದ ಬಿಡುಗಡೆಗೊಳಿಸುತ್ತಾನೆ.” ಅನಂತರ ಕೇಶವನು ಹೋಗಿ ವನದ ಪಕ್ಕದಲ್ಲಿ ಏಕಾಂಗಿಯಾಗಿ ಯೋಚನಾಮಗ್ನನಾಗಿ ನಿಂತಿದ್ದ ಬಲರಾಮನನ್ನು ನೋಡಿದನು.

16005012a ಅಥಾಪಶ್ಯದ್ಯೋಗಯುಕ್ತಸ್ಯ ತಸ್ಯ

ನಾಗಂ ಮುಖಾನ್ನಿಃಸರಂತಂ ಮಹಾಂತಮ್|

16005012c ಶ್ವೇತಂ ಯಯೌ ಸ ತತಃ ಪ್ರೇಕ್ಷ್ಯಮಾಣೋ

ಮಹಾರ್ಣವೋ ಯೇನ ಮಹಾನುಭಾವಃ||

ಯೋಗಯುಕ್ತನಾಗಿದ್ದ ಅವನ ಮುಖದಿಂದ ಮಹಾನಾಗವೊಂದು ಹೊರಬರುತ್ತಿರುವುದನ್ನು ಅವನು ನೋಡಿದನು. ಅವನು ನೋಡುತ್ತಿದ್ದಂತೆಯೇ ಶ್ವೇತವರ್ಣದ ಆ ಮಹಾ ಸರ್ಪವು ಸಮುದ್ರದ ಕಡೆ ಹರಿದು ಹೋಯಿತು.

16005013a ಸಹಸ್ರಶೀರ್ಷಃ ಪರ್ವತಾಭೋಗವರ್ಷ್ಮಾ

ರಕ್ತಾನನಃ ಸ್ವಾಂ ತನುಂ ತಾಂ ವಿಮುಚ್ಯ|

16005013c ಸಮ್ಯಕ್ಚ ತಂ ಸಾಗರಃ ಪ್ರತ್ಯಗೃಹ್ಣಾನ್

ನಾಗಾ ದಿವ್ಯಾಃ ಸರಿತಶ್ಚೈವ ಪುಣ್ಯಾಃ||

ಆ ದೇಹವನ್ನು ಬಿಟ್ಟು ಹೊರಬಂದ ಪರ್ವತದಷ್ಟೇ ಎತ್ತರ ಹೆಡೆಯನ್ನು ಎತ್ತಿದ್ದ ಆ ಸಾವಿರ ಹೆಡೆಗಳ, ಕೆಂಪು ಬಾಯಿಯ ನಾಗವನ್ನು ದಿವ್ಯ ಪುಣ್ಯ ನದಿಗಳೊಡನೆ ಸಮುದ್ರವು ಸ್ವಾಗತಿಸಿತು.

16005014a ಕರ್ಕೋಟಕೋ ವಾಸುಕಿಸ್ತಕ್ಷಕಶ್ಚ

ಪೃಥುಶ್ರವಾ ವರುಣಃ ಕುಂಜರಶ್ಚ|

16005014c ಮಿಶ್ರೀ ಶಂಖಃ ಕುಮುದಃ ಪುಂಡರೀಕಸ್

ತಥಾ ನಾಗೋ ಧೃತರಾಷ್ಟ್ರೋ ಮಹಾತ್ಮಾ||

16005015a ಹ್ರಾದಃ ಕ್ರಾಥಃ ಶಿತಿಕಂಠೋಽಗ್ರತೇಜಾಸ್

ತಥಾ ನಾಗೌ ಚಕ್ರಮಂದಾತಿಷಂಡೌ|

16005015c ನಾಗಶ್ರೇಷ್ಠೋ ದುರ್ಮುಖಶ್ಚಾಂಬರೀಷಃ

ಸ್ವಯಂ ರಾಜಾ ವರುಣಶ್ಚಾಪಿ ರಾಜನ್|

16005015e ಪ್ರತ್ಯುದ್ಗಮ್ಯ ಸ್ವಾಗತೇನಾಭ್ಯನಂದಂಸ್

ತೇಽಪೂಜಯಂಶ್ಚಾರ್ಘ್ಯಪಾದ್ಯಕ್ರಿಯಾಭಿಃ||

ರಾಜನ್! ಕಾರ್ಕೋಟಕ, ವಾಸುಕಿ, ತಕ್ಷಕ, ಪೃಥುಶ್ರವಾ, ವರುಣ, ಕುಂಜರ, ಮಿಶ್ರೀ, ಶಂಖ, ಕುಮುದ, ಪುಂಡರೀಕ, ಹಾಗೆಯೇ ಮಹಾತ್ಮ ನಾಗ ಧೃತರಾಷ್ಟ್ರ, ಹ್ರಾದ, ಕ್ರಾಥ, ಉಗ್ರತೇಜಸ್ವಿ ಶಿತಿಕಂಠ, ಮತ್ತು ಸ್ವಯಂ ರಾಜಾ ವರುಣನು ಮೇಲೆದ್ದು ಅವನನ್ನು ಅಭಿನಂದಿಸಿ ಸ್ವಾಗತಿಸಿ ಅರ್ಘ್ಯಪಾದ್ಯಗಳಿಂದ ಪೂಜಿಸಿದರು.

16005016a ತತೋ ಗತೇ ಭ್ರಾತರಿ ವಾಸುದೇವೋ

ಜಾನನ್ಸರ್ವಾ ಗತಯೋ ದಿವ್ಯದೃಷ್ಟಿಃ|

16005016c ವನೇ ಶೂನ್ಯೇ ವಿಚರಂಶ್ಚಿಂತಯಾನೋ

ಭೂಮೌ ತತಃ ಸಂವಿವೇಶಾಗ್ರ್ಯತೇಜಾಃ||

ಅಣ್ಣನು ಹೊರಟುಹೋಗಲು ದಿವ್ಯದೃಷ್ಟಿಯೆಲ್ಲವೂ ಹೊರಟುಹೋಯಿತೆಂದು ತಿಳಿದು ವಾಸುದೇವನು ಶೂನ್ಯ ವನದಲ್ಲಿ ಚಿಂತಿಸುತ್ತಾ ತಿರುಗಾಡುತ್ತಿದ್ದನು. ಅನಂತರ, ಆ ಅಗ್ರ್ಯತೇಜಸ್ವಿಯು ಭೂಮಿಯ ಮೇಲೆ ಮಲಗಿಕೊಂಡನು.

16005017a ಸರ್ವಂ ಹಿ ತೇನ ಪ್ರಾಕ್ತದಾ ವಿತ್ತಮಾಸೀದ್

ಗಾಂಧಾರ್ಯಾ ಯದ್ವಾಕ್ಯಮುಕ್ತಃ ಸ ಪೂರ್ವಮ್|

16005017c ದುರ್ವಾಸಸಾ ಪಾಯಸೋಚ್ಚಿಷ್ಟಲಿಪ್ತೇ

ಯಚ್ಚಾಪ್ಯುಕ್ತಂ ತಚ್ಚ ಸಸ್ಮಾರ ಕೃಷ್ಣಃ||

ಎಲ್ಲವೂ ಹೀಗೆಯೇ ಆಗುತ್ತದೆ ಎಂದು ಅವನಿಗೆ ಮೊದಲೇ ತಿಳಿದಿತ್ತು. ಹಿಂದೆ ಗಾಂಧಾರಿಯು ಹೇಳಿದ ಮಾತುಗಳನ್ನೂ, ದುರ್ವಾಸನು ಎಂಜಲು ಪಾಯಸವನ್ನು ಮೈಗೆ ಹಚ್ಚಿಕೊಳ್ಳಲು ಹೇಳಿದುದನ್ನೂ ಕೃಷ್ಣನು ನೆನಪಿಸಿಕೊಂಡನು.

16005018a ಸ ಚಿಂತಯಾನೋಽಂಧಕವೃಷ್ಣಿನಾಶಂ

ಕುರುಕ್ಷಯಂ ಚೈವ ಮಹಾನುಭಾವಃ|

16005018c ಮೇನೇ ತತಃ ಸಂಕ್ರಮಣಸ್ಯ ಕಾಲ

ತತಶ್ಚಕಾರೇಂದ್ರಿಯಸಂನಿರೋಧಮ್||

ಅಂಧಕ-ವೃಷ್ಣಿಗಳ ವಿನಾಶ ಮತ್ತು ಕುರುಕ್ಷಯದ ಕುರಿತು ಚಿಂತಿಸುತ್ತಿದ್ದ ಆ ಮಹಾನುಭಾವನು ಸಂಕ್ರಮಣ[1] ಕಾಲವು ಬಂದಿತೆಂದು ತಿಳಿದು ಇಂದ್ರಿಯಗಳನ್ನು ನಿಯಂತ್ರಿಸಿಕೊಂಡನು.

16005019a ಸ ಸಂನಿರುದ್ಧೇಂದ್ರಿಯವಾಙ್ಮನಾಸ್ತು

ಶಿಶ್ಯೇ ಮಹಾಯೋಗಮುಪೇತ್ಯ ಕೃಷ್ಣಃ|

16005019c ಜರಾಥ ತಂ ದೇಶಮುಪಾಜಗಾಮ

ಲುಬ್ಧಸ್ತದಾನೀಂ ಮೃಗಲಿಪ್ಸುರುಗ್ರಃ||

ಇಂದ್ರಿಯಗಳು, ಮಾತು, ಮತ್ತು ಮನಸ್ಸುಗಳನ್ನು ನಿಯಂತ್ರಿಸಿಕೊಂಡು ಮಹಾಯೋಗದಲ್ಲಿ ಕೃಷ್ಣನು ಮಲಗಿಕೊಂಡನು. ಆಗ ಉಗ್ರ ಬೇಟೆಗಾರ ಜರನು ಜಿಂಕೆಯನ್ನು ಅರಸುತ್ತಾ ಅಲ್ಲಿಗೆ ಬಂದನು.

16005020a ಸ ಕೇಶವಂ ಯೋಗಯುಕ್ತಂ ಶಯಾನಂ

ಮೃಗಾಶಂಕೀ ಲುಬ್ಧಕಃ ಸಾಯಕೇನ|

16005020c ಜರಾವಿಧ್ಯತ್ಪಾದತಲೇ ತ್ವರಾವಾಂಸ್

ತಂ ಚಾಭಿತಸ್ತಜ್ಜಿಙೃಕ್ಷುರ್ಜಗಾಮ|

16005020e ಅಥಾಪಶ್ಯತ್ಪುರುಷಂ ಯೋಗಯುಕ್ತಂ

ಪೀತಾಂಬರಂ ಲುಬ್ಧಕೋಽನೇಕಬಾಹುಮ್||

ಯೋಗಯುಕ್ತನಾಗಿ ಮಲಗಿದ್ದ ಕೇಶವನನ್ನು ಜಿಂಕೆಯೆಂದು ಶಂಕಿಸಿದ ಆ ಬೇಟೆಗಾರ ಜರನು ತಿಳಿಯದೆ ಸಾಯಕದಿಂದ ಅವನ ಪಾದದ ಹಿಮ್ಮಡಿಗೆ ಹೊಡೆದು, ತಾನು ಹೊಡೆದ ಬೇಟೆಯನ್ನು ಹಿಡಿಯಲು ತ್ವರೆಮಾಡಿ ಮುಂದೆ ಹೋದನು. ಅಲ್ಲಿ ಆ ಲುಬ್ಧಕನು ಪೀತಾಂಬರವನ್ನು ಧರಿಸಿದ್ದ ಅನೇಕ ಬಾಹುಗಳನ್ನು ಹೊಂದಿದ್ದ ಯೋಗಯುಕ್ತ ಪುರುಷನನ್ನು ಕಂಡನು.

16005021a ಮತ್ವಾತ್ಮಾನಮಪರಾದ್ಧಂ ಸ ತಸ್ಯ

ಜಗ್ರಾಹ ಪಾದೌ ಶಿರಸಾ ಚಾರ್ತರೂಪಃ|

16005021c ಆಶ್ವಾಸಯತ್ತಂ ಮಹಾತ್ಮಾ ತದಾನೀಂ

ಗಚ್ಚನ್ನೂರ್ಧ್ವಂ ರೋದಸೀ ವ್ಯಾಪ್ಯ ಲಕ್ಷ್ಮ್ಯಾ||

ಮಹಾ ಅಪರಾಧವನ್ನೆಸಗಿದೆನೆಂದು ತಿಳಿದು ಆರ್ತರೂಪನಾದ ಅವನು ಕೃಷ್ಣನ ಪಾದಗಳನ್ನು ಶಿರಸಾ ಸಮಸ್ಕರಿಸಿ ಹಿಡಿದುಕೊಂಡನು. ಅವನನ್ನು ಸಮಾಧಾನಪಡಿಸಿ ಮಹಾತ್ಮ ಕೃಷ್ಣನು ತನ್ನ ಕಾಂತಿಯಿಂದ ಭೂಮ್ಯಾಕಾಶಗಳನ್ನು ಬೆಳಗಿಸುತ್ತಾ ಮೇಲೇರಿದನು.

16005022a ದಿವಂ ಪ್ರಾಪ್ತಂ ವಾಸವೋಽಥಾಶ್ವಿನೌ ಚ

ರುದ್ರಾದಿತ್ಯಾ ವಸವಶ್ಚಾಥ ವಿಶ್ವೇ|

16005022c ಪ್ರತ್ಯುದ್ಯಯುರ್ಮುನಯಶ್ಚಾಪಿ ಸಿದ್ಧಾ

ಗಂಧರ್ವಮುಖ್ಯಾಶ್ಚ ಸಹಾಪ್ಸರೋಭಿಃ||

ಸ್ವರ್ಗವನ್ನು ಸೇರಿದ ಅವನನ್ನು ವಾಸವ ಇಂದ್ರ, ಅಶ್ವಿನೀ ದೇವತೆಗಳು, ರುದ್ರ-ಆದಿತ್ಯರು, ವಸವರು, ವಿಶ್ವೇದೇವರು, ಮುನಿಗಳು, ಸಿದ್ಧರು, ಗಂಧರ್ವಮುಖ್ಯರು ಮತ್ತು ಜೊತೆಗೆ ಅಪ್ಸರೆಯರು ಸ್ವಾಗತಿಸಿದರು.

16005023a ತತೋ ರಾಜನ್ಭಗವಾನುಗ್ರತೇಜಾ

ನಾರಾಯಣಃ ಪ್ರಭವಶ್ಚಾವ್ಯಯಶ್ಚ|

16005023c ಯೋಗಾಚಾರ್ಯೋ ರೋದಸೀ ವ್ಯಾಪ್ಯ ಲಕ್ಷ್ಮ್ಯಾ

ಸ್ಥಾನಂ ಪ್ರಾಪ ಸ್ವಂ ಮಹಾತ್ಮಾಪ್ರಮೇಯಮ್||

ರಾಜನ್! ಅನಂತರ ಆ ಉಗ್ರತೇಜಸ್ವೀ, ಎಲ್ಲವಕ್ಕೂ ಮೂಲನೂ ಅಂತ್ಯನೂ ಆದ, ಯೋಗಾಚಾರ್ಯ ಭಗವಾನ್ ನಾರಾಯಣನು ತನ್ನ ಕಾಂತಿಯಿಂದ ಭೂಮ್ಯಾಕಾಶಗಳನ್ನು ಬೆಳಗಿಸುತ್ತಾ ತನ್ನ ಮಹಾತ್ಮ ಅಪ್ರಮೇಯ ಸ್ಥಾನವನ್ನು ಅಲಂಕರಿಸಿದನು.

16005024a ತತೋ ದೇವೈರೃಷಿಭಿಶ್ಚಾಪಿ ಕೃಷ್ಣಃ

ಸಮಾಗತಶ್ಚಾರಣೈಶ್ಚೈವ ರಾಜನ್|

16005024c ಗಂಧರ್ವಾಗ್ರ್ಯೈರಪ್ಸರೋಭಿರ್ವರಾಭಿಃ

ಸಿದ್ಧೈಃ ಸಾಧ್ಯೈಶ್ಚಾನತೈಃ ಪೂಜ್ಯಮಾನಃ||

ರಾಜನ್! ಅಲ್ಲಿ ಕೃಷ್ಣನು ದೇವ-ಋಷಿಗಳು ಮತ್ತು ಚಾರಣರೊಂದಿಗೆ ಸೇರಿದನು. ಗಂಧರ್ವಾಗ್ರರೂ, ಶ್ರೇಷ್ಠ ಅಪ್ಸರೆಯರೂ, ಸಿದ್ಧರೂ, ಸಾಧ್ಯರೂ ಅವನಿಗೆ ತಲೆಬಾಗಿ ಪೂಜಿಸಿದರು.

16005025a ತೇ ವೈ ದೇವಾಃ ಪ್ರತ್ಯನಂದಂತ ರಾಜನ್

ಮುನಿಶ್ರೇಷ್ಠಾ ವಾಗ್ಭಿರಾನರ್ಚುರೀಶಮ್|

16005025c ಗಂಧರ್ವಾಶ್ಚಾಪ್ಯುಪತಸ್ಥುಃ ಸ್ತುವಂತಃ

ಪ್ರೀತ್ಯಾ ಚೈನಂ ಪುರುಹೂತೋಽಭ್ಯನಂದತ್||

ರಾಜನ್! ದೇವತೆಗಳು ಆನಂದದಿಂದ ಅವನನ್ನು ಸ್ವಾಗತಿಸಿದರು. ಮುನಿಶ್ರೇಷ್ಠರು ವೇದಮಂತ್ರಗಳಿಂದ ಆ ಈಶನನ್ನು ಅರ್ಚಿಸಿದರು. ಗಂಧರ್ವರು ಅವನನ್ನು ಸ್ತುತಿಸಿ, ಪೂಜಿಸಿದರು. ಇಂದ್ರನೂ ಕೂಡ ಪ್ರೀತಿಯಿಂದ ಅವನನ್ನು ಅಭಿನಂದಿಸಿದನು.”

ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ಶ್ರೀಕೃಷ್ಣಸ್ಯ ಸ್ವಲೋಕಗಮನೇ ಪಂಚಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ಶ್ರೀಕೃಷ್ಣಸ್ಯ ಸ್ವಲೋಕಗಮನ ಎನ್ನುವ ಐದನೇ ಅಧ್ಯಾಯವು.

Related image

[1] ತಾನು ಕಾಲಾತೀತನಾಗುವ ಕಾಲ

Comments are closed.