Mausala Parva: Chapter 3

ಮೌಸಲ ಪರ್ವ

ಯಾದವರಲ್ಲಿ ಉತ್ಪಾತದರ್ಶನ (೧-೧೫). ಕೃಷ್ಣನು ಸಮುದ್ರಯಾತ್ರೆಯನ್ನು ಘೋಷಿಸಿದುದು (೧೬-೨೨).

16003001 ವೈಶಂಪಾಯನ ಉವಾಚ|

16003001a ಏವಂ ಪ್ರಯತಮಾನಾನಾಂ ವೃಷ್ಣೀನಾಮಂಧಕೈಃ ಸಹ|

16003001c ಕಾಲೋ ಗೃಹಾಣಿ ಸರ್ವೇಷಾಂ ಪರಿಚಕ್ರಾಮ ನಿತ್ಯಶಃ||

16003002a ಕರಾಲೋ ವಿಕಟೋ ಮುಂಡಃ ಪುರುಷಃ ಕೃಷ್ಣಪಿಂಗಲಃ|

16003002c ಗೃಹಾಣ್ಯವೇಕ್ಷ್ಯ ವೃಷ್ಣೀನಾಂ ನಾದೃಶ್ಯತ ಪುನಃ ಕ್ವ ಚಿತ್||

ವೈಶಂಪಾಯನನು ಹೇಳಿದನು: “ಹೀಗೆ ವೃಷ್ಣಿ-ಅಂಧಕರು ಒಂದಾಗಿ ಪ್ರಯತ್ನಿಸುತ್ತಿದ್ದರೂ ಕಾಲಪುರುಷನು ನಿತ್ಯವೂ ಅವರೆಲ್ಲರ ಮನೆಗಳಿಗೆ ತಿರುಗುತ್ತಿದ್ದನು. ಕಪ್ಪಾಗಿದ್ದ, ವಿಕಟ, ಬೋಳುಮಂಡೆಯ, ಕಪ್ಪು-ಕಿತ್ತಳೆ ಬಣ್ಣಗಳ ಪುರುಷನು ವೃಷ್ಣಿಗಳ ಮನೆಗಳನ್ನು ಹೊಕ್ಕಿ ನೋಡಿ, ಪುನಃ ಎಲ್ಲಿಯೋ ಅದೃಶ್ಯನಾಗುತ್ತಿದ್ದನು.

16003003a ಉತ್ಪೇದಿರೇ ಮಹಾವಾತಾ ದಾರುಣಾಶ್ಚಾ ದಿನೇ ದಿನೇ|

16003003c ವೃಷ್ಣ್ಯಂಧಕವಿನಾಶಾಯ ಬಹವೋ ರೋಮಹರ್ಷಣಾಃ||

ಪ್ರತಿದಿನವೂ ವೃಷ್ಣಿ-ಅಂಧಕರ ವಿನಾಶವನ್ನು ಸೂಚಿಸುವ ರೋಮಾಂಚಕ ದಾರುಣ ಭಿರುಗಾಳಿಯು ಬೀಸುತ್ತಿತ್ತು.

16003004a ವಿವೃದ್ಧಮೂಷಕಾ ರಥ್ಯಾ ವಿಭಿನ್ನಮಣಿಕಾಸ್ತಥಾ|

16003004c ಚೀಚೀಕೂಚೀತಿ ವಾಶ್ಯಂತ್ಯಃ ಸಾರಿಕಾ ವೃಷ್ಣಿವೇಶ್ಮಸು|

16003004e ನೋಪಶಾಮ್ಯತಿ ಶಬ್ದಶ್ಚ ಸ ದಿವಾರಾತ್ರಮೇವ ಹಿ||

ಬೀದಿಗಳು ದೊಡ್ಡ ದೊಡ್ಡ ಇಲಿಗಳಿಂದ ತುಂಬಿಹೋಗಿದ್ದವು. ವೃಷ್ಣಿಗಳ ಮನೆಗಳಲ್ಲಿ ಮಡಿಕೆಗಳು ತಾವಾಗಿಯೇ ಒಡೆಯತೊಡಗಿದವು. ಸಾರಂಗ ಪಕ್ಷಿಗಳ ಚೀಚೀ ಕೂಗುಗಳು ಹಗಲಾಗಲೀ ರಾತ್ರಿಯಾಗಲೀ ಕೊನೆಯಿಲ್ಲದೇ ಕೇಳಿಬರುತ್ತಿದ್ದವು.

16003005a ಅನುಕುರ್ವನ್ನುಲೂಕಾನಾಂ ಸಾರಸಾ ವಿರುತಂ ತಥಾ|

16003005c ಅಜಾಃ ಶಿವಾನಾಂ ಚ ರುತಮನ್ವಕುರ್ವತ ಭಾರತ||

ಸಾರಸ ಪಕ್ಷಿಗಳು ಗೂಬೆಗಳಂತೆ ಕೂಗುತ್ತಿದ್ದವು ಮತ್ತು ಭಾರತ! ಆಡುಗಳು ನರಿಗಳಂತೆ ಕೂಗತೊಡಗಿದವು.

16003006a ಪಾಂಡುರಾ ರಕ್ತಪಾದಾಶ್ಚ ವಿಹಗಾಃ ಕಾಲಚೋದಿತಾಃ|

16003006c ವೃಷ್ಣ್ಯಂಧಕಾನಾಂ ಗೇಹೇಷು ಕಪೋತಾ ವ್ಯಚರಂಸ್ತದಾ||

ಕಾಲಚೋದಿತ ಕೆಂಪು ಕಾಲುಗಳಿದ್ದ ಬಿಳಿಯ ಪಕ್ಷಿಗಳು ಕಂಡುಬಂದವು ಮತ್ತು ವೃಷ್ಣಿ-ಅಂಧಕರ ಮನೆಗಳ ಮೇಲೆ ಪಾರಿವಾಳಗಳು ಹಾರಾಡುತ್ತಿದ್ದವು.

16003007a ವ್ಯಜಾಯಂತ ಖರಾ ಗೋಷು ಕರಭಾಶ್ವತರೀಷು ಚ|

16003007c ಶುನೀಷ್ವಪಿ ಬಿಡಾಲಾಶ್ಚ ಮೂಷಕಾ ನಕುಲೀಷು ಚ||

ಗೋವುಗಳು ಕತ್ತೆಗಳಿಗೂ, ಕುದುರೆಗಳು ಆನೆಗಳಿಗೂ, ನಾಯಿಗಳು ಬೆಕ್ಕುಗಳಿಗೂ, ಮತ್ತು ಮುಂಗುಸಿಗಳು ಇಲಿಗಳಿಗೂ ಜನ್ಮವಿತ್ತವು.

16003008a ನಾಪತ್ರಪಂತ ಪಾಪಾನಿ ಕುರ್ವಂತೋ ವೃಷ್ಣಯಸ್ತದಾ|

16003008c ಪ್ರಾದ್ವಿಷನ್ಬ್ರಾಹ್ಮಣಾಂಶ್ಚಾಪಿ ಪಿತೄನ್ದೇವಾಂಸ್ತಥೈವ ಚ||

16003009a ಗುರೂಂಶ್ಚಾಪ್ಯವಮನ್ಯಂತ ನ ತು ರಾಮಜನಾರ್ದನೌ|

16003009c ಪತ್ನ್ಯಃ ಪತೀನ್ವ್ಯುಚ್ಚರಂತ ಪತ್ನೀಶ್ಚ ಪತಯಸ್ತಥಾ||

ವೃಷ್ಣಿಗಳು ಪಾಪಕರ್ಮಗಳನ್ನು ಮಾಡಲು ನಾಚುತ್ತಿರಲಿಲ್ಲ. ಬ್ರಾಹ್ಮಣರನ್ನೂ, ಪಿತೃಗಳನ್ನೂ, ದೇವತೆಗಳನ್ನೂ ದ್ವೇಷಿಸತೊಡಗಿದರು. ಬಲರಾಮ-ಕೃಷ್ಣರನ್ನು ಬಿಟ್ಟು ಉಳಿದ ಹಿರಿಯರನ್ನು ಅವಹೇಳನ ಮಾಡತೊಡಗಿದರು. ಪತ್ನಿಯರು ತಮ್ಮ ಪತಿಗಳಿಗೂ, ಪತಿಗಳು ತಮ್ಮ ಪತ್ನಿಯರಿಗೂ ಮೋಸಮಾಡತೊಡಗಿದರು.

16003010a ವಿಭಾವಸುಃ ಪ್ರಜ್ವಲಿತೋ ವಾಮಂ ವಿಪರಿವರ್ತತೇ|

16003010c ನೀಲಲೋಹಿತಮಾಂಜಿಷ್ಠಾ ವಿಸೃಜನ್ನರ್ಚಿಷಃ ಪೃಥಕ್||

ಅಗ್ನಿಯು ಎಡಗಡೆಯೇ ವಾಲಿಕೊಂಡು ಪ್ರಜ್ವಲಿಸುತ್ತಿದ್ದನು ಮತ್ತು ನೀಲಿ-ಕೆಂಪು-ಬಿಳಿಯ ಕಿಡಿಗಳನ್ನು ಮತ್ತೆ ಮತ್ತೆ ಕಾರುತ್ತಿದ್ದನು.

16003011a ಉದಯಾಸ್ತಮನೇ ನಿತ್ಯಂ ಪುರ್ಯಾಂ ತಸ್ಯಾಂ ದಿವಾಕರಃ|

16003011c ವ್ಯದೃಶ್ಯತಾಸಕೃತ್ಪುಂಭಿಃ ಕಬಂಧೈಃ ಪರಿವಾರಿತಃ||

ನಿತ್ಯವೂ ಉದಯ-ಅಸ್ತಮಾನಗಳ ಸಮಯದಲ್ಲಿ ನಗರದ ಮೇಲೆ ಸೂರ್ಯನ ಸುತ್ತಲೂ ಶಿರಗಳಿಲ್ಲದ ಕಬಂಧಗಳ ಆಕಾರಗಳು ಕಾಣುತ್ತಿದ್ದವು.

16003012a ಮಹಾನಸೇಷು ಸಿದ್ಧೇಽನ್ನೇ ಸಂಸ್ಕೃತೇಽತೀವ ಭಾರತ|

16003012c ಆಹಾರ್ಯಮಾಣೇ ಕೃಮಯೋ ವ್ಯದೃಶ್ಯಂತ ನರಾಧಿಪ||

ಭಾರತ! ನರಾಧಿಪ! ಅತೀವ ಸುಸಂಸ್ಕೃತವಾಗಿ ತಯಾರಿಸಿದ ಆಹಾರಗಳನ್ನು ತಿನ್ನಬೇಕು ಎನ್ನುವಾಗ ಅದರಲ್ಲಿ ಕ್ರಿಮಿಗಳು ಕಂಡುಬರುತ್ತಿದ್ದವು!

16003013a ಪುಣ್ಯಾಹೇ ವಾಚ್ಯಮಾನೇ ಚ ಜಪತ್ಸು ಚ ಮಹಾತ್ಮಸು|

16003013c ಅಭಿಧಾವಂತಃ ಶ್ರೂಯಂತೇ ನ ಚಾದೃಶ್ಯತ ಕಶ್ಚನ||

ಪುಣ್ಯಾಹ ವಾಚನ ಮಾಡುವಾಗ ಮತ್ತು ಮಹಾತ್ಮರು ಜಪಿಸುವಾಗ ಯಾರೋ ಓಡಿಹೋಗುತ್ತಿರುವುದು ಕೇಳಿಬರುತ್ತಿತ್ತು, ಆದರೆ ಯಾರೂ ಓಡಿಹೋಗುತ್ತಿರುವವರು ಕಾಣುತ್ತಿರಲಿಲ್ಲ.

16003014a ಪರಸ್ಪರಂ ಚ ನಕ್ಷತ್ರಂ ಹನ್ಯಮಾನಂ ಪುನಃ ಪುನಃ|

16003014c ಗ್ರಹೈರಪಶ್ಯನ್ಸರ್ವೇ ತೇ ನಾತ್ಮನಸ್ತು ಕಥಂ ಚನ||

ನಕ್ಷತ್ರಗಳು ಮತ್ತು ಗ್ರಹಗಳು ಪುನಃ ಪುನಃ ಪರಸ್ಪರರೊಡನೆ ಸಂಘರ್ಷಿಸುವುದನ್ನು ಎಲ್ಲರೂ ನೋಡುತ್ತಿದ್ದರು. ಆದರೆ ತಮ್ಮದೇ ಜನ್ಮಕುಂಡಲಿಗಳು ಯಾರಿಗೂ ಕಾಣುತ್ತಿರಲಿಲ್ಲ.

16003015a ನದಂತಂ ಪಾಂಚಜನ್ಯಂ ಚ ವೃಷ್ಣ್ಯಂಧಕನಿವೇಶನೇ|

16003015c ಸಮಂತಾತ್ಪ್ರತ್ಯವಾಶ್ಯಂತ ರಾಸಭಾ ದಾರುಣಸ್ವರಾಃ||

ಪಾಂಚಜನ್ಯವನ್ನು ಊದಿದಾಗ ವೃಷ್ಣಿ ಮತ್ತು ಅಂಧಕರ ಮನೆಗಳಲ್ಲಿ ಅದರ ಧ್ವನಿಯು ಕತ್ತೆಗಳ ಕಿರುಚಾಟದಂತೆ ಪ್ರತಿಧ್ವನಿಸಿ ಕೇಳುತ್ತಿತ್ತು.

16003016a ಏವಂ ಪಶ್ಯನ್ ಹೃಷೀಕೇಶಃ ಸಂಪ್ರಾಪ್ತಂ ಕಾಲಪರ್ಯಯಮ್|

16003016c ತ್ರಯೋದಶ್ಯಾಮಮಾವಾಸ್ಯಾಂ ತಾಂ ದೃಷ್ಟ್ವಾ ಪ್ರಾಬ್ರವೀದಿದಮ್||

ಇದನ್ನು ನೋಡಿ ಹೃಷೀಕೇಶನು ಕಾಲಪಲ್ಲಟವು ಬಂದೊದಗಿದೆಯೆಂದು ತಿಳಿದನು. ತ್ರಯೋದಶಿಯಂದೇ ಅಮವಾಸ್ಯೆಯು ಬಂದಿರುವುದನ್ನು ನೋಡಿ ಅವನು ಹೀಗೆ ಅಂದುಕೊಂಡನು:

16003017a ಚತುರ್ದಶೀ ಪಂಚದಶೀ ಕೃತೇಯಂ ರಾಹುಣಾ ಪುನಃ|

16003017c ತದಾ ಚ ಭಾರತೇ ಯುದ್ಧೇ ಪ್ರಾಪ್ತಾ ಚಾದ್ಯ ಕ್ಷಯಾಯ ನಃ||

“ಪುನಃ ರಾಹುವು ಚತುರ್ದಶಿಯನ್ನು ಅಮವಾಸ್ಯೆಯನ್ನಾಗಿ ಮಾಡಿದ್ದಾನೆ. ಅಂದು ಈ ರೀತಿಯಾದಾಗ ಭಾರತ ಯುದ್ಧವು ನಡೆಯಿತು. ಇಂದು ನಮ್ಮೆಲ್ಲರ ವಿನಾಶವಾಗಲು ಈ ರೀತಿಯಾಗುತ್ತಿದೆ.”

16003018a ವಿಮೃಶನ್ನೇವ ಕಾಲಂ ತಂ ಪರಿಚಿಂತ್ಯ ಜನಾರ್ದನಃ|

16003018c ಮೇನೇ ಪ್ರಾಪ್ತಂ ಸ ಷಟ್ತ್ರಿಂಶಂ ವರ್ಷಂ ವೈ ಕೇಶಿಸೂದನಃ||

16003019a ಪುತ್ರಶೋಕಾಭಿಸಂತಪ್ತಾ ಗಾಂಧಾರೀ ಹತಬಾಂಧವಾ|

16003019c ಯದನುವ್ಯಾಜಹಾರಾರ್ತಾ ತದಿದಂ ಸಮುಪಾಗತಮ್||

ಇದನ್ನು ವಿಮರ್ಶಿಸಿ ಮತ್ತು ಕಾಲದ ಕುರಿತು ಚಿಂತಿಸಿ ಜನಾರ್ದನ ಕೇಶಿಸೂದನನು ಯುದ್ಧಮುಗಿದು ಮೂವತ್ತಾರನೆಯ ವರ್ಷವು ಕಾಲಿಡುತ್ತಿದೆ ಮತ್ತು ಬಾಂಧವರನ್ನು ಕಳೆದುಕೊಂಡು ಪುತ್ರ ಶೋಕದಿಂದ ಸಂತಪ್ತಳಾಗಿದ್ದ ಗಾಂಧಾರಿಯು ಯಾವ ಶಾಪವನ್ನು ಶಪಿಸಿದ್ದಳೋ ಅದು ಈಗ ನಿಜವಾಗುತ್ತದೆ ಎಂದು ಅಭಿಪ್ರಾಯಪಟ್ಟನು.

16003020a ಇದಂ ಚ ತದನುಪ್ರಾಪ್ತಮಬ್ರವೀದ್ಯದ್ಯುಧಿಷ್ಠಿರಃ|

16003020c ಪುರಾ ವ್ಯೂಢೇಷ್ವನೀಕೇಷು ದೃಷ್ಟ್ವೋತ್ಪಾತಾನ್ಸುದಾರುಣಾನ್||

“ಹಿಂದೆ ಸೇನೆಗಳ ವ್ಯೂಹವನ್ನು ರಚಿಸುತ್ತಿದ್ದಾಗ ಯುಧಿಷ್ಠಿರನು ಕಂಡ ದಾರುಣ ಉತ್ಪಾತಗಳು ಈಗ ಪುನಃ ತೋರಿಸಿಕೊಳ್ಳುತ್ತಿವೆ!”

16003021a ಇತ್ಯುಕ್ತ್ವಾ ವಾಸುದೇವಸ್ತು ಚಿಕೀರ್ಷನ್ಸತ್ಯಮೇವ ತತ್|

16003021c ಆಜ್ಞಾಪಯಾಮಾಸ ತದಾ ತೀರ್ಥಯಾತ್ರಾಮರಿಂದಮ||

ಹೀಗೆ ಹೇಳಿ ಅರಿಂದಮ ವಾಸುದೇವನು ಅದನ್ನು ಸತ್ಯವಾಗಿಸಲು ಬಯಸಿ ತೀರ್ಥಯಾತ್ರೆಗೆ ಆಜ್ಞಾಪಿಸಿದನು.

16003022a ಅಘೋಷಯಂತ ಪುರುಷಾಸ್ತತ್ರ ಕೇಶವಶಾಸನಾತ್|

16003022c ತೀರ್ಥಯಾತ್ರಾ ಸಮುದ್ರೇ ವಃ ಕಾರ್ಯೇತಿ ಪುರುಷರ್ಷಭಾಃ||

ಕೇಶವನ ಶಾಸನದಂತೆ ಪುರುಷರು “ಪುರುಷರ್ಷಭರೇ! ಸಮುದ್ರತೀರಕ್ಕೆ ತೀರ್ಥಯಾತ್ರೆಗೆ ನಡೆಯಿರಿ!” ಎಂದು ಘೋಷಿಸಿದರು.”

ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ಉತ್ಪಾತದರ್ಶನೇ ತೃತೀಯೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ಉತ್ಪಾತದರ್ಶನ ಎನ್ನುವ ಮೂರನೇ ಅಧ್ಯಾಯವು.

Related image

Comments are closed.