Mausala Parva: Chapter 1

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಮೌಸಲ ಪರ್ವ

ಯುಧಿಷ್ಠಿರನಿಗೆ ಉತ್ಪಾತದರ್ಶನ (೧-೬). ವಾಸುದೇವ, ಬಲರಾಮ ಮತ್ತು ವೃಷ್ಣಿವೀರರೆಲ್ಲರೂ ಮುಕ್ತರಾದ ವಿಷಯವನ್ನು ಪಾಂಡವರು ಕೇಳಿದುದು (೭-೧೧).

16001001 ವೈಶಂಪಾಯನ ಉವಾಚ|

16001001a ಷಟ್ತ್ರಿಂಶೇ ತ್ವಥ ಸಂಪ್ರಾಪ್ತೇ ವರ್ಷೇ ಕೌರವನಂದನಃ|

16001001c ದದರ್ಶ ವಿಪರೀತಾನಿ ನಿಮಿತ್ತಾನಿ ಯುಧಿಷ್ಠಿರಃ||

ವೈಶಂಪಾಯನನು ಹೇಳಿದನು: “ಮೂವತ್ತಾರನೆಯ ವರ್ಷವು ಬರಲು ಕೌರವನಂದನ ಯುಧಿಷ್ಠಿರನು ವಿಪರೀತ ನಿಮಿತ್ತಗಳನ್ನು ಕಂಡನು.

16001002a ವವುರ್ವಾತಾಃ ಸನಿರ್ಘಾತಾ ರೂಕ್ಷಾಃ ಶರ್ಕರವರ್ಷಿಣಃ|

16001002c ಅಪಸವ್ಯಾನಿ ಶಕುನಾ ಮಂಡಲಾನಿ ಪ್ರಚಕ್ರಿರೇ||

ಕಲ್ಲು ಮರಳುಗಳೊಂದಿಗೆ ಭಿರುಸಾದ ಒಣ ಗಾಳಿಯು ಎಲ್ಲ ಕಡೆಗಳಿಂದ ಬೀಸತೊಡಗಿತು. ಪಕ್ಷಿಗಳು ಅಪ್ರದಕ್ಷಿಣೆಯಾಗಿ ಸುತ್ತತೊಡಗಿದವು.

16001003a ಪ್ರತ್ಯಗೂಹುರ್ಮಹಾನದ್ಯೋ ದಿಶೋ ನೀಹಾರಸಂವೃತಾಃ|

16001003c ಉಲ್ಕಾಶ್ಚಾಂಗಾರವರ್ಷಿಣ್ಯಃ ಪ್ರಪೇತುರ್ಗಗನಾದ್ಭುವಿ||

ಮಹಾನದಿಗಳು ವಿರುದ್ಧ ದಿಕ್ಕಿನಲ್ಲಿ ಹರಿಯತೊಡಗಿದವು. ದಿಕ್ಕುಗಳಲ್ಲಿ ಸದಾ ಮುಸುಕು ಕವಿದಿತ್ತು. ಬೆಂಕಿಯ ಉಂಡೆಗಳನ್ನು ಸುರಿಸುತ್ತಾ ಉಲ್ಕೆಗಳು ಗಗನದಿಂದ ಭೂಮಿಯ ಮೇಲೆ ಬಿದ್ದವು. 

16001004a ಆದಿತ್ಯೋ ರಜಸಾ ರಾಜನ್ಸಮವಚ್ಚನ್ನಮಂಡಲಃ|

16001004c ವಿರಶ್ಮಿರುದಯೇ ನಿತ್ಯಂ ಕಬಂಧೈಃ ಸಮದೃಶ್ಯತ||

ರಾಜನ್! ಸೂರ್ಯಮಂಡಲವು ಯಾವಾಗಲೂ ಧೂಳಿನಿಂದ ಮುಸುಕಿದಂತೆ ತೋರುತ್ತಿತ್ತು. ನಿತ್ಯವೂ ಉದಯಕಾಲದಲ್ಲಿ ಸೂರ್ಯನು ಮಂದರಶ್ಮಿಯಾಗಿಯೂ, ತಲೆಗಳಿಲ್ಲದ ಶರೀರಗಳಿಂದ ಮುಚ್ಚಲ್ಪಟ್ಟಂತೆಯೂ ಕಾಣುತ್ತಿದ್ದನು.

16001005a ಪರಿವೇಷಾಶ್ಚ ದೃಶ್ಯಂತೇ ದಾರುಣಾಃ ಚಂದ್ರಸೂರ್ಯಯೋಃ|

16001005c ತ್ರಿವರ್ಣಾಃ ಶ್ಯಾಮರೂಕ್ಷಾಂತಾಸ್ತಥಾ ಭಸ್ಮಾರುಣಪ್ರಭಾಃ||

ಚಂದ್ರ-ಸೂರ್ಯರ ಸುತ್ತಲೂ ದಾರುಣವಾದ ಮೂರು ಬಣ್ಣದ ಮಂಡಲಗಳು ತೋರುತ್ತಿದ್ದವು – ಹೊರ ಆವರಣವು ಕಪ್ಪುಬಣ್ಣದ ಒರಟು ಮಂಡಲ, ಮತ್ತು ಒಳಗಿನ ಮಂಡಲಗಳು ಭಸ್ಮ ಮತ್ತು ಕೆಂಪುಬಣ್ಣದ್ದಾಗಿದ್ದವು.

16001006a ಏತೇ ಚಾನ್ಯೇ ಚ ಬಹವ ಉತ್ಪಾತಾ ಭಯಶಂಸಿನಃ|

16001006c ದೃಶ್ಯಂತೇಽಹರಹೋ ರಾಜನ್ ಹೃದಯೋದ್ವೇಗಕಾರಕಾಃ||

ರಾಜನ್! ಇವುಗಳು ಮತ್ತು ಇನ್ನೂ ಅನೇಕ ಭಯಸೂಚಕ, ಹೃದಯದಲ್ಲಿ ಉದ್ವೇಗವನ್ನುಂಟುಮಾಡುವ ಉತ್ಪಾತಗಳು ದಿನ ದಿನವೂ ಕಾಣುತ್ತಿದ್ದವು.

16001007a ಕಸ್ಯ ಚಿತ್ತ್ವಥ ಕಾಲಸ್ಯ ಕುರುರಾಜೋ ಯುಧಿಷ್ಠಿರಃ|

16001007c ಶುಶ್ರಾವ ವೃಷ್ಣಿಚಕ್ರಸ್ಯ ಮೌಸಲೇ ಕದನಂ ಕೃತಮ್||

ಅದೇ ಸಮಯದಲ್ಲಿ ಕುರುರಾಜ ಯುಧಿಷ್ಠಿರನು ವೃಷ್ಣಿಚಕ್ರವು ಮುಸಲಗಳಿಂದ ಕದನವಾಡಿದುದನ್ನು ಕೇಳಿದನು.

16001008a ವಿಮುಕ್ತಂ ವಾಸುದೇವಂ ಚ ಶ್ರುತ್ವಾ ರಾಮಂ ಚ ಪಾಂಡವಃ|

16001008c ಸಮಾನೀಯಾಬ್ರವೀದ್ ಭ್ರಾತೄನ್ಕಿಂ ಕರಿಷ್ಯಾಮ ಇತ್ಯುತ||

ವಾಸುದೇವ ಮತ್ತು ರಾಮರೂ ಮುಕ್ತರಾದುದನ್ನು ಕೇಳಿ ಪಾಂಡವನು ತನ್ನ ಸಹೋದರರನ್ನು ಕರೆಯಿಸಿ “ಈಗ ನಾವು ಏನು ಮಾಡಬೇಕು?” ಎಂದು ಕೇಳಿದನು.

16001009a ಪರಸ್ಪರಂ ಸಮಾಸಾದ್ಯ ಬ್ರಹ್ಮದಂಡಬಲಾತ್ಕೃತಾನ್|

16001009c ವೃಷ್ಣೀನ್ವಿನಷ್ಟಾಂಸ್ತೇ ಶ್ರುತ್ವಾ ವ್ಯಥಿತಾಃ ಪಾಂಡವಾಭವನ್||

ಬ್ರಹ್ಮದಂಡದ ಬಲದಿಂದ ಉತ್ಕರ್ಷಿತರಾಗಿ ವೃಷ್ಣಿಗಳು ಪರಸ್ಪರರನ್ನು ಆಕ್ರಮಣಿಸಿ ವಿನಷ್ಟರಾದರು ಎಂದು ಕೇಳಿ ಪಾಂಡವರು ವ್ಯಥಿತರಾದರು.

16001010a ನಿಧನಂ ವಾಸುದೇವಸ್ಯ ಸಮುದ್ರಸ್ಯೇವ ಶೋಷಣಮ್|

16001010c ವೀರಾ ನ ಶ್ರದ್ದಧುಸ್ತಸ್ಯ ವಿನಾಶಂ ಶಾಂಙ್ರಧನ್ವನಃ||

ಶಾಂಙ್ರಧನ್ವಿ ವಾಸುದೇವನು ನಿಧನನಾಗಿ ವಿನಾಶಹೊಂದಿದನು ಎಂಬ ಸಮಾಚಾರವನ್ನು, ಸಮುದ್ರವೇ ಒಣಗಿಹೋಯಿತೆನ್ನುವುದನ್ನು ಹೇಗೋ ಹಾಗೆ ಆ ವೀರರು ನಂಬಲೇ ಇಲ್ಲ.

16001011a ಮೌಸಲಂ ತೇ ಪರಿಶ್ರುತ್ಯ ದುಃಖಶೋಕಸಮನ್ವಿತಾಃ|

16001011c ವಿಷಣ್ಣಾ ಹತಸಂಕಲ್ಪಾಃ ಪಾಂಡವಾಃ ಸಮುಪಾವಿಶನ್||

ಆ ಮೌಸಲ ಯುದ್ಧದ ಕುರಿತು ಕೇಳಿ ವಿಷಣ್ಣರಾಗಿ, ಸಂಕಲ್ಪಗಳನ್ನೇ ಕಳೆದುಕೊಂಡು ಪಾಂಡವರು ಅಲ್ಲಿ ಕುಳಿತುಕೊಂಡರು.”

ಇತಿ ಶ್ರೀಮಹಾಭಾರತೇ ಮೌಸಲಪರ್ವಣಿ ಮುಸಲೋತ್ಪತ್ತೌ ಪ್ರಥಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಮೌಸಲಪರ್ವಣಿ ಮುಸಲೋತ್ಪತ್ತಿ ಎನ್ನುವ ಮೊದಲನೇ ಅಧ್ಯಾಯವು.

Image result for indian motifs

Comments are closed.