Harivamsha: Chapter 57

ಹರಿವಂಶ: ವಿಷ್ಣುಪರ್ವಃ

೫೭

ಕಂಸಸಂಕೇತಃ ಆರ್ಯಾನುಶಾಸನಂ ಚ

ಕಂಸನು ದೇವಕಿಯ ಗರ್ಭವನ್ನು ವಿನಾಶಗೊಳಿಸಲು ಪ್ರಯತ್ನಿಸಿದುದು; ಭಗವಾನ್ ವಿಷ್ಣುವು ಪಾತಾಲಲೋಕದಲ್ಲಿದ್ದ ಷಡ್ಗರ್ಭ ಎಂಬ ಹೆಸರಿನ ದೈತ್ಯರ ಜೀವಗಳನ್ನು ಆಕರ್ಷಿಸಿ ಅವರನ್ನು ನಿದ್ರಾ ದೇವಿಯ ಕೈಯಲ್ಲಿ ಕೊಟ್ಟು ದೇವಕಿಯ ಗರ್ಭದಲ್ಲಿ ಅವರನ್ನು ಕ್ರಮಶಃ ಸ್ಥಾಪಿತಗೊಳಿಸಲು ಆದೇಶವನ್ನಿತ್ತಿದುದು.

ವೈಶಂಪಾಯನ ಉವಾಚ|  

ಸೋಽಜ್ಞಾಪಯತ ಸಂರಬ್ಧಃ ಸಚಿವಾನಾತ್ಮನೋ ಹಿತಾನ್ |

ಯತ್ತಾ ಭವತ ಸರ್ವೇ ವೈ ದೇವಕ್ಯಾ ಗರ್ಭಕೃಂತನೇ ||೨-೫೭-೧

ವೈಶಂಪಾಯನನು ಹೇಳಿದನು: “ಕ್ರೋಧಾವಿಷ್ಟನಾದ ಕಂಸನು ತನ್ನ ಹಿತೈಷೀ ಸಚಿವರಿಗೆ “ನೀವೆಲ್ಲರೂ ದೇವಕಿಯ ಗರ್ಭವನ್ನು ಕತ್ತರಿಸಲು ಪ್ರಯತ್ನಿಸಿ!” ಎಂದು ಆಜ್ಞಾಪಿಸಿದನು.

ಪ್ರಥಮಾದೇವ ಹಂತವ್ಯಾ ಗರ್ಭಾಸ್ತೇ ಸಪ್ತ ಏವ ಹಿ |

ಮೂಲಾದೇವ ತು ಹಂತವ್ಯಃ ಸೋಽನರ್ಥೋ ಯತ್ರ ಸಂಶಯಃ ||೨-೫೭-೨

“ಮೊದಲನೆಯ ಗರ್ಭದಿಂದ ಪ್ರಾರಂಭಿಸಿ ಏಳೂ ಗರ್ಭಗಳನ್ನೂ ನಷ್ಟಗೊಳಿಸಿ. ಎಲ್ಲಿ ಸಂಶಯವಿದೆಯೋ ಆ ಅನರ್ಥವನ್ನು ಮೂಲದಲ್ಲಿಯೇ ನಾಶಗೊಳಿಸಬೇಕು.

ದೇವಕೀ ಚ ಗೃಹೇ ಗುಪ್ತಾ ಪ್ರಚ್ಛನ್ನೈರಭಿರಕ್ಷಿತಾ |

ಸ್ವೈರಂ ಚರತು ವಿಶ್ರಬ್ಧಾ ಗರ್ಭಕಾಲೇ ತು ರಕ್ಷ್ಯತಾಮ್ ||೨-೫೭-೩

ದೇವಕಿಯು ತನ್ನ ಮನೆಯಲ್ಲಿ ಸ್ವಚ್ಛಂದವಾಗಿರಲಿ ಆದರೆ ಗುಪ್ತ ಸೈನಿಕರ ರಕ್ಷಣೆಯೊಳಗಿರಲಿ. ಆದರೆ ಅವಳ ಗರ್ಭದ ಸಮಯದಲ್ಲಿ ವಿಶೇಷ ನಿಯಂತ್ರಣಗಳಂದಿ ಅವರನ್ನು ರಕ್ಷಿಸಬೇಕು.

ಮಾಸಾನ್ವೈ ಪುಷ್ಪಮಾಸಾದೀನ್ಗಣಯಂತು ಮಮ ಸ್ತ್ರಿಯಃ |

ಪರಿಣಾಮೇ ತು ಗರ್ಭಸ್ಯ ಶೇಷಂ ಜ್ಞಾಸ್ಯಾಮಹೇ ವಯಮ್ ||೨-೫೭-೪

ನನ್ನ ಸ್ತ್ರೀಯರು ಅವಳ ಮುಟ್ಟಿನಿಂದ ಪ್ರಾರಂಭಿಸಿ ಗರ್ಭದ ಮಾಸಗಳನ್ನು ಎಣಿಸುತ್ತಿರಲಿ. ಗರ್ಭವು ಪರಿಪಕ್ವವಾಗಿ ಪ್ರಕಟವಾದಾಗ ಉಳಿದ ಕಾರ್ಯಗಳೇನೆಂದು ನಾವು ಸ್ವಯಂ ಅರ್ಥಮಾಡಿಕೊಳ್ಳುತ್ತೇವೆ.

ವಸುದೇವಸ್ತು ಸಂರಕ್ಷ್ಯಃ ಸ್ತ್ರೀಸನಾಥಾಸು ಭೂಮಿಷು |

ಅಪ್ರಮತ್ತೈರ್ಮಮ ಹಿತೈ ರಾತ್ರಾವಹನಿ ಚೈವ ಹಿ |

ಸ್ತ್ರೀಭಿರ್ವರ್ಷವರೈಶ್ಚೈವ ವಕ್ತವ್ಯಂ ನ ತು ಕಾರಣಮ್ ||೨-೫೭-೫

ವಸುದೇವನನ್ನಾದರೋ ಅವನ ಅಂತಃಪುರದ ಸ್ತ್ರೀಯರೊಂದಿಗೆ ನನ್ನ ಹಿತೈಷಿಗಳು ಜಾಗರೂಕತೆಯಿಂದ ಹಗಲು ರಾತ್ರಿ ಚೆನ್ನಾಗಿ ರಕ್ಷಿಸುತ್ತಿರಲಿ. ಸ್ತ್ರೀಯರು ಮತ್ತು ಕಿನ್ನರರೂ ಕೂಡ ಅವನ ಮೇಲೆ, ಅವನಿಗೆ ತಿಳಿಯದಂತೆ, ಕಡು ದೃಷ್ಟಿಯನ್ನಿಟ್ಟಿರಲಿ.

ಏಷ ಮಾನುಷ್ಯಕೋ ಯತ್ನೋ ಮಾನುಷೈರೇವ ಸಾಧ್ಯತೇ |

ಶ್ರೂಯತಾಂ ಯೇನ ದೈವಂ ಹಿ ಮದ್ವಿಧೈಃ ಪ್ರತಿಹನ್ಯತೇ ||೨-೫೭-೬

ಈ ರೀತಿಯ ಮಾನುಷ್ಯಕ ಯತ್ನವು ಮನುಷ್ಯನಿಂದ ಮಾತ್ರ ಸಾಧ್ಯವಿದೆ. ನನ್ನಂಥವನು ದೈವವನ್ನೇ ಹೇಗೆ ನಿಷ್ಫಲವಾಗಿಸುತ್ತದೆ ಎನ್ನುವುದನ್ನು ಕೇಳಿ.

ಮಂತ್ರಗ್ರಾಮೈಃ ಸುವಿಹಿತೈರೌಷಧೈಶ್ಚ ಸುಯೋಜಿತೈಃ |

ಯತ್ನೇನ ಚಾನುಕೂಲೇನ ದೈವಮಪ್ಯನುಲೋಮ್ಯತೇ ||೨-೫೭-೭

ಸುವಿಹಿತ ಮಂತ್ರಜಪಗಳಿಂದ, ಸುಯೋಜಿತ ಔಷಧಿಗಳಿಂದ ಮತ್ತು ಅನುಕೂಲ ಪ್ರಯತ್ನಗಳಿಂದ ದೈವವು ನಮ್ಮ ಪರವಾಗಿರುವಂತೆ ಮಾಡಬಹುದು.””

ವೈಶಂಪಾಯನ ಉವಾಚ|

ಏವಂ ಸ ಯತ್ನವಾನ್ಕಂಸೋ ದೇವಕೀಗರ್ಭಕೃಂತನೇ |

ಭಯೇನ ಮಂತ್ರಯಾಮಾಸ ಶ್ರುತಾರ್ಥೋ ನಾರದಾತ್ಸ ವೈ ||೨-೫೭-೮

ವೈಶಂಪಾಯನನು ಹೇಳಿದನು: “ಹೀಗೆ ಕಂಸನು ದೇವಕಿಯ ಗರ್ಭವನ್ನು ನಾಶಗೊಳಿಸಲು ಯತ್ನಿಸಿದನು. ನಾರದನಿಂದ ಎಲ್ಲವನ್ನೂ ಕೇಳಿ ಭಗಹೊಂಡಿದ್ದ ಅವನು ಮಂತ್ರಿಗಳೊಡನೆ ಸಮಾಲೋಚನೆ ಮಾಡತೊಡಗಿದನು.

ಏವಂ ಶ್ರುತ್ವಾ ಪ್ರಯತ್ನಂ ವೈ ಕಂಸಸ್ಯಾರಿಷ್ಟಸಂಜ್ಞಿತಮ್ |

ಅಂತರ್ಧಾನಂ ಗತೋ ವಿಷ್ಣೂಶ್ಚಿಂತಯಾಮಾಸ ವೀರ್ಯವಾನ್ ||೨-೫೭-೯

ಅರಿಷ್ಟಸೂಚಕವಾದ ಕಂಸನ ಆ ಪ್ರಯತ್ನವನ್ನು ಕೇಳಿ ಅಂತರ್ಧಾನನಾಗಿದ್ದ ವೀರ್ಯವಾನ್ ವಿಷ್ಣುವು ಈ ರೀತಿ ಆಲೋಚಿಸಿದನು:

ಸಪ್ತೇಮಾಂದೇವಕೀಗರ್ಭಾನ್ಭೋಜಪುತ್ರೋ ವಧಿಷ್ಯತಿ |

ಅಷ್ಟಮೇ ಚ ಮಯಾ ಗರ್ಭೇ ಕಾರ್ಯಮಾಧಾನಮಾತ್ಮನಃ ||೨-೫೭-೧೦ 

“ದೇವಕಿಯ ಏಳು ಗರ್ಭಗಳನ್ನು ಈ ಭೋಜಪುತ್ರ ಕಂಸನು ವಧಿಸುತ್ತಾನೆ. ಎಂಟನೆಯ ಗರ್ಭದಲ್ಲಿ ನಾನು ನನ್ನನ್ನು ಅಲ್ಲಿರಿಸಿಕೊಳ್ಳುವ ಕಾರ್ಯವಾಗಬೇಕು.”

ತಸ್ಯ ಚಿಂತಯತಸ್ತ್ವೇವಂ ಪಾತಾಲಮಗಮನ್ಮನಃ |

ಯತ್ರ ತೇ ಗರ್ಭಶಯನಾಃ ಶಡ್ಗರ್ಭಾ ನಾಮ ದಾನವಾಃ ||೨-೫೭-೧೧

ಹಾಗೆ ಯೋಚಿಸುತ್ತಿರುವಾಗಲೇ ಅವನ ಮನವು ಶಡ್ಗರ್ಭಾ ಎಂಬ ಹೆಸರಿನ ಗರ್ಭಶಯನ ದಾನವರಿರುವ ಪಾತಾಲಕ್ಕೆ ಹೋಯಿತು.

ವಿಕ್ರಾಂತವಪುಷೋ ದೀಪ್ತಾಸ್ತೇಽಮೃತಪ್ರಾಶನೋಪಮಾಃ |

ಅಮರಪ್ರತಿಮಾ ಯುದ್ಧೇ ಪುತ್ರಾ ವೈ ಕಾಲನೇಮಿನಃ ||೨-೫೭-೧೨

ಶರೀರದಲ್ಲಿ ವಿಕ್ರಾಂತರಾಗಿದ್ದ, ಅಮೃತವನ್ನು ಕುಡಿದ ಅಮರರಂತೆ ತೇಜಸ್ವಿಗಳಾಗಿದ್ದ, ಯುದ್ಧದಲ್ಲಿ ಅಮರಪ್ರತಿಮರಾಗಿದ್ದ ಅವರು ಕಾಲನೇಮಿಯ ಪುತ್ರರಾಗಿದ್ದರು.

ತೇ ತಾತತಾತಂ ಸಂತ್ಯಜ್ಯ ಹಿರಣ್ಯಕಶಿಪುಂ ಪುರಾ |

ಉಪಾಸಾಂಚಕ್ರಿರೇ ದೈತ್ಯಾಃ ಪುರಾ ಲೋಕಪಿತಾಮಹಮ್ ||೨-೫೭-೧೩

ಹಿಂದೆ ಆ ದೈತ್ಯರು ತಮ್ಮ ತಂದೆಯ ತಂದೆ ಹಿರಣ್ಯಕಶಿಪುವನ್ನು ತೊರೆದು ಲೋಕಪಿತಾಮಹ ಬ್ರಹ್ಮನ ಉಪಾಸನೆ ಮಾಡತೊಡಗಿದರು.

ತಪ್ಯಮಾನಾಸ್ತಪಸ್ತೀವ್ರಂ ಜಟಾಮಂಡಲಧಾರಿಣಃ |

ತೇಷಾಂ ಪ್ರೀತೋಽಭವದ್ಬ್ರಹ್ಮಾ ಷಡ್ಗರ್ಭಾಣಾಂ ವರಂ ದದೌ ||೨-೫೭-೧೪

ಜಟಾಮಂಡಲಧಾರಿಗಳಾಗಿ ತೀವ್ರ ತಪಸ್ಸಿನಿಂದ ಪ್ರಜ್ವಲಿಸುತ್ತಿದ್ದ ಅವರಿಂದ ಪ್ರೀತನಾದ ಬ್ರಹ್ಮನು ಷಡ್ಗರ್ಭರಿಗೆ ವರವನ್ನಿತ್ತನು.

ಬ್ರಹ್ಮೋವಾಚ|

ಭೋ ಭೋ ದಾನವಶಾರ್ದೂಲಾಸ್ತಪಸಾಹಂ ಸುತೋಷಿತಃ |

ಬ್ರೂತ ವೋ ಯಸ್ಯ ಯಃ ಕಾಮಸ್ತಸ್ಯ ತಂ ತಂ ಕರೋಮ್ಯಹಮ್ ||೨-೫೭-೧೫

ಬ್ರಹ್ಮನು ಹೇಳಿದನು: “ಭೋ! ಭೋ! ದಾನವಶಾರ್ದೂಲರೇ! ತಪಸ್ಸಿನಿಂದ ಸಂತೋಷಗೊಂಡಿದ್ದೇನೆ. ನೀವು ಯಾವ ಕಾಮನೆಯಿಂದ ತಪಸ್ಸು ಮಾಡುತ್ತಿದ್ದೀರಿ ಹೇಳಿ. ಅದನ್ನೇ ನಾನು ಪೂರೈಸುತ್ತೇನೆ.”

ತೇ ತು ಸರ್ವೇ ಸಮಾನಾರ್ಥಾ ದೈತ್ಯಾ ಬ್ರಹ್ಮಾಣಮಬ್ರುವನ್ |

ಯದಿ ನೋ ಭಗವಾನ್ಪ್ರೀತೋ ದೀಯತಾಂ ನೋ ವರೋ ವರಃ ||೨-೫೭-೧೬

ಆ ಎಲ್ಲ ದೈತ್ಯರ ಉದ್ದೇಶವೂ ಸಮನಾಗಿತ್ತು. ಅವರು ಬ್ರಹ್ಮಣನಿಗೆ ಹೇಳಿದರು: “ಭಗವಾನ್! ನೀನು ಪಿತನಾಗಿದ್ದರೆ ನಮಗೆ ಈ ಶ್ರೇಷ್ಠ ವರವನ್ನು ನೀಡಬೇಕು.

ಅವಧ್ಯಾಃ ಸ್ಯಾಮ ಭಗವಂದೇವತೈಃ ಸಮಹೋರಗೈಃ |

ಶಾಪಪ್ರಹರಣೈಶ್ಚೈವಂ ಸ್ವಸ್ತಿ ನೋಽಸ್ತು ಮಹರ್ಷಿಭಿಃ ||೨-೫೭-೧೭

ಭಗವನ್! ಮಹೋರಗಗಳನ್ನೂ ಸೇರಿ ದೇವತೆಗಳಿಂದ ನಾವು ಅವಧ್ಯರಾಗಲಿ. ಶಾಪವನ್ನು ಪ್ರಯೋಗಿಸುವ ಮಹರ್ಷಿಗಳಿಂದಲೂ ನಮಗೆ ಮಂಗಳವೇ ಆಗಲಿ.

ಯಕ್ಷಗಂಧರ್ವಪತಿಭಿಸ್ಸಿದ್ಧಚಾರಣಮಾನವೈಃ |

ಮಾ ಭೂದ್ವಧೋ ನೋ ಭಗವಂದದಾಸಿ ಯದಿ ನೋ ವರಮ್ ||೨-೫೭-೧೮

ಭಗವನ್! ನಮಗೆ ವರವನ್ನು ನೀಡುವೆಯಾದರೆ ಯಕ್ಷ-ಗಂಧರ್ವರ ಒಡೆಯನಿಂದಲೂ, ಸಿದ್ಧ-ಚಾರಣ-ಮಾನವರಿಂದಲೂ ನಮ್ಮ ವಧೆಯಾಗದಿರಲಿ.”

ತಾನುವಾಚ ತತೋ ಬ್ರಹ್ಮಾ ಸುಪ್ರೀತೇನಾಂತರಾತ್ಮನಾ |

ಭವದ್ಭಿರ್ಯದಿದಂ ಪ್ರೋಕ್ತಂ ಸರ್ವಮೇತದ್ಭವಿಷ್ಯತಿ ||೨-೫೭-೧೯

ಆಗ ಬ್ರಹ್ಮನು ಒಳಗಿಂದೊಳಗೇ ಪ್ರೀತನಾಗಿ ಅವರಿಗೆ ಹೇಳಿದನು: “ನೀವು ಹೇಳಿದ ಇವೆಲ್ಲವೂ ಹೀಗೆಯೇ ಆಗುತ್ತನೆ.”

ಷಡ್ಗರ್ಭಾಣಾಂ ವರಂ ದತ್ವಾ ಸ್ವಯಂಭೂಸ್ತ್ರಿದಿವಂ ಗತಃ |

ತತೋ ಹಿರಣ್ಯಕಶಿಪುಃ ಸರೋಷೋ ವಾಕ್ಯಮಬ್ರವೀತ್ ||೨-೫೭-೨೦

ಷಡ್ಗರ್ಭರಿಗೆ ವರವನ್ನಿತ್ತು ಸ್ವಯಂಭುವು ದಿವಕ್ಕೆ ತೆರಳಿದನು. ಅನಂತರ ಹಿರಣ್ಯಕಶಿಪುವು ರೋಷಗೊಂಡು ಈ ಮಾತನ್ನಾಡಿದನು:

ಮಾಮುತ್ಸೃಜ್ಯ ವರೋ ಯಸ್ಮಾದ್ವೃತೋ ವಃ ಪದ್ಮಸಂಭವಾತ್ |

ತಸ್ಮಾದ್ವಸ್ತ್ಯಾಜಿತಃ ಸ್ನೇಹಃ ಶತ್ರುಭೂತಾಂಸ್ತ್ಯಜಾಮ್ಯಹಮ್ ||೨-೫೭-೨೧

“ನೀವು ನನ್ನನ್ನು ಬಿಟ್ಟು ಪದ್ಮಸಂಬವನಿಂದ ವರವನ್ನು ಪಡೆದುಕೊಂಡಿರಿ. ಆದುದರಿಂದ ನೀವು ನನಗೆ ಶತ್ರುವಿನಂತೆಯೇ ಆಗಿದ್ದೀರಿ. ನಾನು ನಿಮ್ಮ ಸ್ನೇಹವನ್ನು ತೊರೆಯುತ್ತೇನೆ.

ಷಡ್ಗರ್ಭಾ ಇತಿ ಯೋಽಯಂ ವಃ ಶಬ್ದಃ ಪಿತ್ರಾಭಿವರ್ಧಿತಃ |

ಸ ಏವ ವೋ ಗರ್ಭಗತಾನ್ಪಿತಾ ಸರ್ವಾನ್ವಧಿಷ್ಯತಿ ||೨-೫೭-೨೨

ಯಾವ ತಂದೆಯು ನಿಮಗೆ ಷಡ್ಗರ್ಭರು ಎಂಬ ಹೆಸರನ್ನಿತ್ತು ಬೆಳೆಸಿದನೋ ಅವನೇ ನೀವು ಗರ್ಭಾವಸ್ಥೆಯಲ್ಲಿರುವಾಗ ನಿಮ್ಮೆಲ್ಲರನ್ನೂ ವಧಿಸುತ್ತಾನೆ.

ಷಡೇವ ದೇವಕೀಗರ್ಭಾಃ ಶಡ್ಗರ್ಭಾ ವೈ ಮಹಾಸುರಾಃ |

ಭವಿಷ್ಯಥ ತತಃ ಕಂಸೋ ಗರ್ಭಸ್ಥಾನ್ವೋ ವಧಿಷ್ಯತಿ ||೨-೫೭-೨೩

ನೀವು ಆರು ಷಡ್ಗರ್ಭ ಮಹಾಸುರರೂ ದೇವಕಿಯ ಗರ್ಭದಲ್ಲಿ ನೆಲೆಸುತ್ತೀರಿ. ನೀವು ಗರ್ಭವಾಸಿಗಳಾಗಿರುವಾಗಲೇ ಕಂಸನು ನಿಮ್ಮನ್ನು ವಧಿಸುತ್ತಾನೆ.””

ವೈಶಂಪಾಯನ ಉವಾಚ|  

ಜಗಾಮಾಥ ತತೋ ವಿಷ್ಣುಃ ಪಾತಾಲಂ ಯತ್ರ ತೇಽಸುರಾಃ |

ಷಡ್ಗರ್ಭಾಃ ಸಂಯತಾಃ ಸಂತಿ ಜಲೇ ಗರ್ಭಗೃಹೇಶಯಾಃ ||೨-೫೭-೨೪

ವೈಶಂಪಾಯನನು ಹೇಳಿದನು: “ಆಗ ವಿಷ್ಣುವು ಆ ಅಸುರರಿದ್ದ ಪಾತಾಲಕ್ಕೆ ಹೋದನು. ಅಲ್ಲಿ ಷಡ್ಗರ್ಭರು ಸಂಯಮನಿಷ್ಠರಾಗಿ ಜಲದಲ್ಲಿ ಗರ್ಭಗೃಹದಲ್ಲಿ ಮಲಗಿದ್ದರು.

ಸಂದದರ್ಶ ಜಲೇ ಸುಪ್ತಾನ್ಷಡ್ಗರ್ಭಾನ್ಗರ್ಭಸಂಸ್ಥಿತಾನ್ |

ನಿದ್ರಯಾ ಕಾಲರೂಪಿಣ್ಯಾ ಸರ್ವಾನಂತರ್ಹಿತಾನ್ಸ ವೈ ||೨-೫೭-೨೫

ನೀರಿನಲ್ಲಿ ಗರ್ಭಸ್ಥರಾಗಿ ಮಲಗಿದ್ದ ಷಡ್ಗರ್ಭರು ಕಾಲರೂಪಿಣೀ ನಿದ್ರೆಯಿಂದ ಅಂತರ್ಹಿತರಾಗಿದ್ದುದನ್ನು ನೋಡಿದನು.

ಸ್ವಪ್ನರೂಪೇಣ ತೇಷಾಂ ವೈ ವಿಷ್ಣುರ್ದೇಹಾನಥಾವಿಶತ್ |

ಪ್ರಾಣೇಶ್ವರಾಂಶ್ಚ ನಿಷ್ಕೃಷ್ಯ ನಿದ್ರಾಯೈ ಪ್ರದದೌ ತದಾ ||೨-೫೭-೨೬

ವಿಷ್ಣುವು ಸ್ವಪ್ನರೂಪದಲ್ಲಿ ಅವರ ದೇಹವನ್ನು ಪ್ರವೇಶಿಸಿ ಅವರ ಪ್ರಾಣೇಶ್ವರರನ್ನು ಕಿತ್ತು ತೆಗೆದು ನಿದ್ರಾದೇವಿಗೆ ನೀಡಿದನು.

ತಾಂ ಚೋವಾಚ ತತೋ ನಿದ್ರಾಂ ವಿಷ್ಣುಃ ಸತ್ಯಪರಾಕ್ರಮಃ |

ಗಚ್ಛ ನಿದ್ರೇ ಮಯೋತ್ಸೃಷ್ಟಾ ದೇವಕೀಭವನಾಂತಿಕಮ್ ||೨-೫೭-೨೭

ಇಮಾನ್ಪ್ರಾಣೇಶ್ವರಾನ್ಗೃಹ್ಯ ಶಡ್ಗರ್ಭಾನ್ದಾನವೋತ್ತಮಾನ್ |

ಸರ್ವಪ್ರಾಣೇಶ್ವರಾಂಶ್ಚೈವ ಷಾಡ್ಗರ್ಭಾನ್ನಾಮ ದೇಹಿನಃ |

ಷಡ್ಗರ್ಭಾನ್ದೇವಕೀಗರ್ಭೇ ಯೋಜಯಸ್ವ ಯಥಾಕ್ರಮಮ್ ||೨-೫೭-೨೮

ಆಗ ಸತ್ಯಪರಾಕ್ರಮ ವಿಷ್ಣುವು ನಿದ್ರೆಗೆ ಹೇಳಿದನು: “ನಿದ್ರೇ! ನನ್ನ ಪ್ರೇರಣೆಯಂತೆ ಈ ಜೀವಗಳನ್ನು ತೆಗೆದುಕೊಂಡು ದೇವಕಿಯ ಬಳಿ ಹೋಗು. ಇವರೆಲ್ಲರೂ ಷಡ್ಗರ್ಭ ಎನ್ನುವ ಉತ್ತಮ ದಾನವರು. ಈ ಎಲ್ಲ ಜೀವಗಳೂ ಷಡ್ಗರ್ಭರು ಎನ್ನುವವರ ದೇಹಗಳಲ್ಲಿರುವವರು. ಈ ಷಡ್ಗರ್ಭರನ್ನು ದೇವಕಿಯ ಗರ್ಭದಲ್ಲಿ ಯಥಾಕ್ರಮವಾಗಿ ಸ್ಥಾಪಿಸುತ್ತಿರು.

ಜಾತೇಷ್ವೇತೇಷು ಗರ್ಭೇಷು ನೀತೇಷು ಚ ಯಮಕ್ಷಯಮ್ |

ಕಂಸಸ್ಯ ವಿಫಲೇ ಯತ್ನೇ ದೇವಕ್ಯಾಃ ಸಫಲೇ ಶ್ರಮೇ ||೨-೫೭-೨೯

ಪ್ರಸಾದಂ ತೇ ಕರಿಷ್ಯಾಮಿ ಮತ್ಪ್ರಭಾವಸಮಂ ಭುವಿ |

ಯೇನ ಸರ್ವಸ್ಯ ಲೋಕಸ್ಯ ದೇವಿ ದೇವೀ ಭವಿಷ್ಯಸಿ ||೨-೫೭-೩೦

ಈ ಗರ್ಭಗಳು ಹುಟ್ಟುತ್ತಲೇ ಇವರನ್ನು ಯಮಕ್ಷಯಕ್ಕೆ ಕಳುಹಿಸಿದ ನಂತರ, ಕಂಸನ ಯತ್ನವು ವಿಫಲವಾಗಲು ಮತ್ತು ದೇವಕಿಯ ಶ್ರಮವು ಸಫಲವಾಗಲು, ನಾನು ನಿನಗೆ ವಿಶೇಷ ಅನುಗ್ರಹವನ್ನು ಮಾಡುತ್ತೇನೆ. ದೇವೀ! ಆ ಸಮಯದಿಂದ ಭೂತಲದಲ್ಲಿ ನಿನ್ನ ಪ್ರಭಾವವು ನನ್ನ ಪ್ರಭಾವದ ಸಮನಾಗುವುದು. ಇದರಿಂದ ನೀನು ಸಂಪೂರ್ಣ ಜಗತ್ತಿನ ಆರಾಧ್ಯ ದೇವಿಯಾಗುತ್ತೀಯೆ.

ಸಪ್ತಮೋ ದೇವಕೀಗರ್ಭೋ ಯೋಽಂಶಃ ಸೌಮ್ಯೋ ಮಮಾಗ್ರಜಃ |

ಸ ಸಂಕ್ರಾಮಯಿತವ್ಯಸ್ತೇ ಸಪ್ತಮೇ ಮಾಸಿ ರೋಹಿಣೀಮ್ ||೨-೫೭-೩೧

ದೇವಕಿಯ ಏಳನೆಯ ಗರ್ಭವು ಅದು ನನ್ನದೇ ಸೌಮ್ಯ ಅಂಶವಾಗಿರುತ್ತದೆ. ನನಗಿಂತಲೂ ಮೊದಲು ಅವತರಿಸಿದುದರಿಂದ ಅವನು ನನ್ನ ಅಣ್ಣನಾಗುತ್ತಾನೆ. ಗರ್ಭದಲ್ಲಿ ಅವನಿಗೆ ಏಳನೆಯ ತಿಂಗಳಾಗಿರುವಾಗಲೇ ನೀನು ಅವನನ್ನು ಎಳೆದು ತೆಗೆದು ರೋಹಿಣಿಯ ಗರ್ಭದಲ್ಲಿ ಇರಿಸು.

ಸಂಕರ್ಷಣಾತ್ತು ಗರ್ಭಸ್ಯ ಸ ತು ಸಂಕರ್ಷಣೋ ಯುವಾ |

ಭವಿಷ್ಯತ್ಯಗ್ರಜೋ ಭ್ರಾತಾ ಮಮ ಶೀತಾಂಶುದರ್ಶನಃ ||೨-೫೭-೩೨

ಗರ್ಭದ ಸಂಕರ್ಷಣವಾಗುವುದರಿಂದ ಆ ಯುವ ವೀರನು ಸಂಕರ್ಷನನೆಂದಾಗುತ್ತಾನೆ. ನನ್ನ ಆ ಅಣ್ಣನು ಚಂದ್ರಮನ ಸಮಾನ ಬಿಳೀ ವರ್ಣದಿಂದ ಸುಶೋಭಿತನಾಗಿರುತ್ತಾನೆ.

ಪತಿತೋ ದೇವಕೀಗರ್ಭಃ ಸಪ್ತಮೋಽಯಂ ಭಯಾದಿತಿ |

ಅಷ್ಟಮೇ ಮಯಿ ಗರ್ಭಸ್ಥೇ ಕಂಸೋ ಯತ್ನಂ ಕರಿಷ್ಯತಿ ||೨-೫೭-೩೩

ಭಯದಿಂದ ದೇವಕಿಯ ಏಳನೇ ಗರ್ಭವು ಪಾತವಾಯಿತು ಎಂದು ಹೇಳುತ್ತಾರೆ. ಎಂಟನೇ ಗರ್ಭದಲ್ಲಿ ನಾನಿರುವಾಗ ಕಂಸನು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ.

ಯಾ ತು ಸಾ ನಂದಗೋಪಸ್ಯ ದಯಿತಾ ಭುವಿ ವಿಶ್ರುತಾ |

ಯಶೋದಾ ನಾಮ ಭದ್ರಂ ತೇ ಭಾರ್ಯಾ ಗೋಪಕುಲೋದ್ವಹಾ ||೨-೫೭-೩೪

ನಿನಗೆ ಮಂಗಳವಾಗಲಿ! ಭುವಿಯಲ್ಲಿ ನಂದಗೋಪನ ಪ್ರೀತಿಯ ಭಾರ್ಯೆ ಯಶೋದ ಎಂಬ ಹೆಸರಿನ ಗೋಪಕುಲೋದ್ವಹೆಯಿದ್ದಾಳೆ.

ತಸ್ಯಾಸ್ತ್ವಂ ನವಮೋ ಗರ್ಭಃ ಕುಲೇಽಸ್ಮಾಕಂ ಭವಿಷ್ಯಸಿ |

ನವಮ್ಯಾಮೇವ ಸಂಜಾತಾ ಕಿಷ್ಣಪಕ್ಷಸ್ಯ ವೈ ತಿಥೌ ||೨-೫೭-೩೫

ನೀನು ಅವಳ ಒಂಭತ್ತನೇ ಗರ್ಭದ ರೂಪದಲ್ಲಿ ನಮ್ಮ ಕುಲದಲ್ಲಿ ಹುಟ್ಟುತ್ತೀಯೆ. ಭಾದ್ರಪದ ಕೃಷ್ಣಪಕ್ಷದ ನವಮಿಯಂದೇ ನಿನ್ನ ಜನ್ಮವಾಗುತ್ತದೆ.

ಅಹಂ ತ್ವಭಿಜಿತೋ ಯೋಗೇ ನಿಶಾಯಾಂ ಯೌವನೇ ಸ್ಥಿತೇ |

ಅರ್ಧರಾತ್ರೇ ಕರಿಷ್ಯಾಮಿ ಗರ್ಭಮೋಕ್ಷಂ ಯಥಾಸುಖಮ್ ||೨-೫೭-೩೬

ರಾತ್ರಿಯು ಯೌವನಸ್ಥಿಯಿಯಲ್ಲಿರುವಾಗ ಅರ್ಧರಾತ್ರಿ ಅಭಿಜಿತ್ ಮುಹೂರ್ತದ ಯೋಗದಲ್ಲಿ ನಾನು ಯಥಾಸುಖವಾಗಿ ಗರ್ಭಮೋಕ್ಷವನ್ನು ಹೊಂದುತ್ತೇನೆ.

ಅಷ್ಟಮಸ್ಯ ತು ಮಾಸಸ್ಯ ಜಾತಾವಾವಾಂ ತತಃ ಸಮಮ್ |

ಪ್ರಾಪ್ಸ್ಯಾವೋ ಗರ್ಭವ್ಯತ್ಯಾಸಂ ಪ್ರಾಪ್ತೇ ಕಂಸಸ್ಯ ನಾಶನೇ ||೨-೫೭-೩೭

ನಾವಿಬ್ಬರೂ ಗರ್ಭದ ಎಂಟನೇ ತಿಂಗಳಿನಲ್ಲಿಯೇ ಹುಟ್ಟೋಣ. ನಂತರ ಕಂಸನ ನಾಶಕ್ಕಾಗಿ ಗರ್ಭವ್ಯತ್ಯಾಸಗೊಳ್ಳೋಣ.

ಅಹಂ ಯಶೋದಾಂ ಯಾಸ್ಯಾಮಿ ತ್ವಂ ದೇವಿ ಭಜ ದೇವಕೀಮ್ |

ಆವಯೋರ್ಗರ್ಭಸಂಯೋಗೇ ಕಂಸೋ ಗಚ್ಛತು ಮೂಢತಾಮ್ ||೨-೫೭-೩೮

ದೇವೀ! ನಾನು ಯಶೋದೆಯ ಬಳಿ ಹೋಗುತ್ತೇನೆ. ನೀನು ದೇವಕಿಯ ಆಶ್ರಯವನ್ನು ಪಡೆ. ನಮ್ಮಿಬ್ಬರ ಪರಿವರ್ತಿತ ಗರ್ಭಸಂಯೋಗದಿಂದ ಕಂಸನು ಮೂಢನಾಗುತ್ತಾನೆ.

ತತಸ್ತ್ವಾಂ ಗೃಹ್ಯ ಚರಣೇ ಶಿಲಾಯಾಂ ಪಾತಯಿಷ್ಯತಿ |

ನಿರಸ್ಯಮಾನಾ ಗಗನೇ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ||೨-೫೭-೩೯

ಆಗ ಅವನು ನಿನ್ನ ಕಾಲುಗಳನ್ನು ಹಿಡಿದು ಕಲ್ಲಿನ ಮೇಲೆ ನಿನ್ನನ್ನು ಎಸೆಯುತ್ತಾನೆ. ಆದರೆ ನೀನು ಅವನ ಕೈಯಿಂದ ತಪ್ಪಿಸಿಕೊಂಡು ಆಕಾಶದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಳ್ಳುತ್ತೀಯೆ.

ಮಚ್ಛವೀಸದೃಶೀ ಕೃಷ್ಣಾ ಸಂಕರ್ಷಣಸಮಾನನಾ |

ಬಿಬ್ರತೀ ವಿಪುಲೌ ಬಾಹೂ ಮಮ ಬಾಹೂಪಮೌ ದಿವಿ ||೨-೫೭-೪೦

ನನ್ನ ಶರೀರದಂತೆ ನಿನ್ನ ಶರೀರವೂ ಕೃಷ್ಣವರ್ಣದ್ದಾಗಿರುತ್ತದೆ. ಆದರೆ ಮುಖವು ಸಂಕರ್ಷಣನ ಮುಖದಂತೆ ಶ್ವೇತವರ್ಣದ್ದಾಗಿರುತ್ತದೆ. ನೀನು ದಿವಿಯಲ್ಲಿ ನನ್ನ ಬಾಹುಗಳಂತಿರುವ ವಿಪುಲ ಬಾಹುಗಳನ್ನು ಧರಿಸಿ ಬೆಳಗುತ್ತೀಯೆ.

ತ್ರಿಶಿಖಂ ಶೂಲಮುದ್ಯಮ್ಯ ಖಡ್ಗಂ ಚ ಕನಕತ್ಸರುಮ್ |

ಪಾತ್ರೀಂ ಚ ಪೂರ್ಣಾಂ ಮಧುನಾ ಪಂಕಜಂ ಚ ಸುನಿರ್ಮಲಮ್ ||೨-೫೭-೪೧

ನಾಲ್ಕು ಭುಜಗಳಲ್ಲಿ ತ್ರಿಶೂಲ, ಚಿನ್ನದ ಹಿಡಿಯಿರುವ ಖಡ್ಗ, ಮಧುವಿನಿಂದ ತುಂಬಿರುವ ಪಾತ್ರೆ, ಮತ್ತು ಸುನಿರ್ಮಲ ಕಮಲವನ್ನು ಹಿಡಿದಿರುತ್ತೀಯೆ.

ನೀಲಕೌಶೇಯಸಂವೀತಾ ಪೀತೇನೋತ್ತರವಾಸಸಾ |

ಶಶಿರಶ್ಮಿಪ್ರಕಾಶೇನ ಹಾರೇಣೋರಸಿ ರಾಜತಾ ||೨-೫೭-೪೨

ನೀಲವರ್ಣದ ರೇಷ್ಮೆ ವಸ್ತ್ರವನ್ನು ಉಡುತ್ತೀಯೆ ಮತ್ತು ಪೀತಾಂಬರವನ್ನು ಹೊದೆಯುತ್ತೀಯೆ. ನಿನ್ನ ವಕ್ಷಸ್ಥಳದಲ್ಲಿ ಚಂದ್ರನ ರಶ್ಮಿಯ ಪ್ರಕಾಶದ ಹಾರವು ರಾರಾಜಿಸುತ್ತದೆ.

ದಿವ್ಯಕುಂಡಲಪೂರ್ಣಾಭ್ಯಾಂ ಶ್ರವಣಾಭ್ಯಾಂ ವಿಭೂಷಿತಾ |

ಚಂದ್ರಸಾಪತ್ನಭೂತೇನ ಮುಖೇನ ತ್ವಂ ವಿರಾಜಿತಾ ||೨-೫೭-೪೩

ದಿವ್ಯಕುಂಡಲಗಳು ನಿನ್ನ ಕಿವಿಗಳನ್ನು ವಿಭೂಷಿತಗೊಳಿಸುತ್ತವೆ. ಮತ್ತು ಚಂದ್ರಮನ ಶೋಭೆಯನ್ನು ಕುಂದಿಸುವ ಮುಖದಿಂದ ವಿರಾಜಿಸುತ್ತೀಯೆ.

ಮುಕುಟೇನ ವಿಚಿತ್ರೇಣ ಕೇಶಬಂಧೇನ ಶೋಭಿನಾ |

ಭುಜಂಗಾಭೈರ್ಭುಜೈರ್ಭೀಮೈರ್ಭೂಷಯಂತೀ ದಿಶೋ ದಶ ||೨-೫೭-೪೪

ವಿಚಿತ್ರ ಮುಕುಟ ಮತ್ತು ಸುಂದರ ಕೇಶಬಂಧದಿಂದ ಅಲಂಕೃತಳಾಗಿರುವೆ. ಭುಜಂಗಗಳಂತಿರುವ ನಿನ್ನ ಭುಜಗಳಿಂದ ಹತ್ತೂ ದಿಕ್ಕುಗಳ ಶೋಭೆಯನ್ನು ಹೆಚ್ಚಿಸುತ್ತೀಯೆ.

ಧ್ವಜೇನ ಶಿಖಿಬರ್ಹೇಣ ಉಚ್ಛ್ರಿತೇನ ವಿರಾಜಿತಾ |

ಅಂಗಜೇನ ಮಯೂರಾಣಾಮಂಗದೇನ ಚ ಭಾಸ್ವತಾ ||೨-೫೭-೪೫

ನವಿಲುಗರಿಯಿಂದ ವಿಭೂಷಿತ ಧ್ವಜ ಮತ್ತು ನವಿಲುಗರಿಗಳಿಂದ ಮಾಡಿದ ಪ್ರಕಾಶಮಾನ ಅಂಗದಗಳಿಂದ ನೀನು ಹೊಳೆಯುತ್ತೀಯೆ.

ಕೀರ್ಣಾ ಭೂತಗಣೈರ್ಘೋರೈರ್ಮನ್ನಿಯೋಗಾನುವರ್ತಿನೀ |

ಕೌಮಾರಂ ವ್ರತಮಾಸ್ಥಾಯ ತ್ರಿದಿವಂ ತ್ವಂ ಗಮಿಷ್ಯಸಿ ||೨-೫೭-೪೬

ಘೋರ ಭೂತಗಣಗಳಿಂದ ಸುತ್ತುವರೆಯಲ್ಪಟ್ಟು ನನ್ನ ಆಜ್ಞಾಪಾಲಕಳಾಗಿ ಸದಾ ಕುಮಾರಿಯಾಗಿರುವ ವ್ರತವನ್ನು ಕೈಗೊಂಡು ನೀನು ತ್ರಿದಿವಕ್ಕೆ ಹೋಗುತ್ತೀಯೆ.

ತತ್ರ ತ್ವಾಂ ಶತದೃಕ್ಛಕ್ರೋ ಮತ್ಪ್ರದಿಷ್ಟೇನ ಕರ್ಮಣಾ |

ಅಭಿಷೇಕೇಣ ದಿವ್ಯೇನ ದೇವತೈಃ ಸಹ ಯೋಕ್ಷ್ಯಸೇ ||೨-೫೭-೪೭

ಅಲ್ಲಿ ಸಹಸ್ರ ನೇತ್ರ ಶಕ್ರನು ನನ್ನ ಅಪೇಕ್ಷೆಯ ಮೇರೆಗೆ ಎಲ್ಲ ಕಾರ್ಯಗಳನ್ನೂ ಸಂಪೂರ್ಣವಾಗಿ ನಡೆಸಿಕೊಟ್ಟಿದ್ದುದಕ್ಕೆ ದೇವತೆಗಳನ್ನೊಡಗೂಡಿ ನಿನಗೆ ದಿವ್ಯ ಅಭಿಷೇಕವನ್ನು ಮಾಡುತ್ತಾನೆ.

ತತ್ರೈವ ತ್ವಾಂ ಭಗಿನ್ಯರ್ಥೇ ಗ್ರಹೀಷ್ಯತಿ ಸ ವಾಸವಃ |

ಕುಶಿಕಸ್ಯ ತು ಗೋತ್ರೇಣ ಕೌಶಿಕೀ ತ್ವಂ ಭವಿಷ್ಯಸಿ ||೨-೫೭-೪೮

ಅಲ್ಲಿಯೇ ವಾಸವನು ನಿನ್ನನ್ನು ತಂಗಿಯನ್ನಾಗಿ ಸ್ವೀಕರಿಸುತ್ತಾನೆ. ಕುಶಿಕ ಗೋತ್ರದವಳಾಗುವುದರಿಂದ ನೀನು ಕೌಶಿಕೀ ಎಂದಾಗುವೆ.

ಸ ತೇ ವಿಂಧ್ಯೇ ನಗಶ್ರೇಷ್ಠೇ ಸ್ಥಾನಂ ದಾಸ್ಯತಿ ಶಾಶ್ವತಮ್ |

ತತಃ ಸ್ಥಾನಸಹಸ್ರೈಸ್ತ್ವಂ ಪೃಥಿವೀಂ ಶೋಭಯಿಷ್ಯಸಿ ||೨-೫೭-೪೯

ಅವನು ನಿನಗೆ ಪರ್ವತಶ್ರೇಷ್ಠ ವಿಂಧ್ಯವನ್ನು ಶಾಶ್ವತ ಸ್ಥಾನವನ್ನಾಗಿ ನೀಡುತ್ತಾನೆ. ಅನಂತರ ನೀನು ಸಹಸ್ರ ಸ್ಥಾನಗಳಿಂದ ಪೃಥ್ವಿಯನ್ನು ಶೋಭಿಸುತ್ತೀಯೆ.

ತ್ರೈಲೋಕ್ಯಚಾರಿಣೀ ಸಾ ತ್ವಂ ಭುವಿ ಸತ್ಯೋಪಯಾಚನಾ |

ಚರಿಷ್ಯಸಿ ಮಹಾಭಾಗೇ ವರದಾ ಕಾಮರೂಪಿಣೀ ||೨-೫೭-೫೦

ಮಹಾಭಾಗೇ! ನೀನು ಕಾಮರೂಪಿಣಿಯಾಗಿ ವರದೆಯಾಗಿ ಮೂರು ಲೋಕಗಳಲ್ಲಿ ಸಂಚರಿಸುತ್ತೀಯೆ ಮತ್ತು ನಿನ್ನ ಯಾವುದೇ ಉಪಯಾಚನೆಗಳೂ ಸತ್ಯವಾಗುತ್ತವೆ.

ತತ್ರ ಶುಂಭನಿಶುಂಭೌ ದ್ವೌ ದಾನವೌ ನಗಚಾರಿಣೌ |

ತೌ ಚ ಕೃತ್ವಾ ಮನಸಿ ಮಾಂ ಸಾನುಗೌ ನಾಶಯಿಷ್ಯಸಿ ||೨-೫೭-೫೧

ಅಲ್ಲಿ ನನ್ನನ್ನು ಮನಸ್ಸಿನಟ್ಟುಕೊಂಡು ವಿಂಧ್ಯಪರ್ವತದಲ್ಲಿ ಸಂಚರಿಸುವ ಶುಂಭ ಮತ್ತು ನಿಶುಂಭ ಎಂಬ ದಾನವರನ್ನು ಅವರ ಅನುಯಾಯಿಗಳೊಂದಿಗೆ ನಾಶಪಡಿಸುತ್ತೀಯೆ.

ಕೃತ್ವಾನುಯಾತ್ರಾಂ ಭೂತೈಸ್ತ್ವಂ ಸುರಾಮಾಂಸಬಲಿಪ್ರಿಯಾ |

ತಿಥೌ ನವಂಮ್ಯಾಂ ಪೂಜಾಂ ತ್ವಂ ಪ್ರಾಪ್ಸ್ಯಸೇ ಸಪಶುಕ್ರಿಯಾಮ್ ||೨-೫೭-೫೨

ಅಲ್ಲಿ ನೀನು ಮಧುಯುಕ್ತ ಮತ್ತು ಮಾಂಸರಹಿತ ಬಲಿಯನ್ನು ಪ್ರೀತಿಯಿಂದ ಗ್ರಹಣಮಾಡುತ್ತೀಯೆ ಮತ್ತು ನಿನ್ನ ತೀರ್ಥಯಾತ್ರೆಯನ್ನು ಮಾಡಿ ನವಮೀ ತಿಥಿಯಲ್ಲಿ ಪಶುಪೂಜನ ಕರ್ಮದೊಂದಿಗೆ ನಿನಗೆ ಪೂಜೆಯನ್ನು ಸಲ್ಲಿಸುತ್ತಾರೆ.

ಯೇ ಚ ತ್ವಾಂ ಮತ್ಪ್ರಭಾವಜ್ಞಾಃ ಪ್ರಣಮಿಷ್ಯಂತಿ ಮಾನವಾಃ |

ತೇಷಾಂ ನ ದುರ್ಲಭಂ ಕಿಂಚಿತ್ಪುತ್ರತೋ ಧನತೋಽಪಿ ವಾ ||೨-೫೭-೫೩

ನನ್ನ ಪ್ರಭಾವವನ್ನು ತಿಳಿದು ನಿನಗೆ ನಮಸ್ಕರಿಸುವ ಮಾನವರಿಗೆ ಪುತ್ರರು ಮತ್ತು ಧನದ ಯಾವುದೂ ದುರ್ಲಭವಾಗುವುದಿಲ್ಲ.

ಕಾಂತಾರೇಷ್ವವಸನ್ನಾನಾಂ ಮಗ್ನಾನಾಂ ಚ ಮಹಾರ್ಣವೇ |

ದಸ್ಯುಭಿರ್ವಾ ನಿರುದ್ಧಾನಾಂ ತ್ವಂ ಗತಿಃ ಪರಮಾ ನೃಣಾಮ್ ||೨-೫೭-೫೪

ಕಾಂತಾರದಲ್ಲಿ ಸಿಕ್ಕಿರಲಿ, ಮಹಾಸಾಗರದಲ್ಲಿ ಮುಳುಗಿರಲಿ, ಅಥವಾ ದಸ್ಯುಗಳ ಬಂಧನದಲ್ಲಿರಲಿ, ಅಂಥಹ ನರರಿಗೆ ನೀನು ಪರಮ ಗತಿಯಾಗುವೆ.

ತ್ವಾಂ ತು ಸ್ತೋಷ್ಯಂತಿ ಯೇ ಭಕ್ತ್ಯಾ ಸ್ತವೇನಾನೇನ ವೈ ಶುಭೇ |

ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ ||೨-೫೭-೫೫

ಶುಭೇ! ಭಕ್ತಿಯಿಂದ ನಿನ್ನನ್ನು ಈ ಸ್ತವದಿಂದ ಸ್ತುತಿಸುವವರಿಗೆ ನಾನು ಕಾಣಿಸದೇ ಇರುವುದಿಲ್ಲ ಮತ್ತು ಅವರೂ ನನಗೆ ಕಾಣಿಸದೇ ಇರುವುದಿಲ್ಲ.””

ಇತಿ ಶ್ರೀಮಹಾಭಾರತೇ ಖಿಲೇಷು ಹರಿವಾಂಶೇ ವಿಷ್ಣುಪರ್ವಣಿ ಭಾರಾವತರಣೇ ನಿದ್ರಾಸಂವಿಜ್ಞಾನೇ ಸಪ್ತಪಂಚಾಶತ್ತಮೋಽಧ್ಯಾಯಃ

Comments are closed.