Harivamsha: Chapter 39

ಹರಿವಂಶ: ಹರಿವಂಶ ಪರ್ವ

39

ಅಕ್ರೂರಚರಿತಮ್

ಸ್ಯಮಂತಕ ಮಣಿಯ ಕಾರಣದಿಂದ ಪ್ರಸೇನ, ಸತ್ರಾಜಿತ ಮತ್ತು ಶತಧನ್ವರು ಮೃತ್ಯುವನ್ನಪ್ಪಿದುದು; ಬಲದೇವನ ದುರ್ಯೋಧನನನಿಗೆ ಗದಾಯುದ್ಧದ ಶಿಕ್ಷಣವನ್ನು ನೀಡುವುದು; ಅಕ್ರೂರನು ಸ್ಯಮಂತಕ ಮಣಿಯನ್ನು ಕೃಷ್ಣನಿಗೆ ಕೊಡಲು ಅದನ್ನು ಕೃಷ್ಣನು ಅವನಿಗೆ ಹಿಂದಿರುಗಿಸಿದುದು.

ವೈಶಂಪಾಯನ ಉವಾಚ

ಯತ್ತತ್ಸತ್ರಾಜಿತೇ ಕೃಷ್ಣೋ ಮಣಿರತ್ನಂ ಸ್ಯಮಂತಕಮ್ |

ಅದಾತ್ತದ್ಧಾರಯಾಮಾಸ ಬಭ್ರುರ್ವೈ ಶತಧನ್ವನಾ || ೧-೩೯-೧

ವೈಶಂಪಾಯನನು ಹೇಳಿದನು: “ಕೃಷ್ಣನು ಸತ್ರಾಜಿತನಿಗೆ ಮರಳಿ ಕೊಟ್ಟಿದ್ದ ಮಣಿರತ್ನ ಸ್ಯಮಂತಕವನ್ನು ಬಭ್ರು ಅಕ್ರೂರನು ಶತಧನ್ವನ ಮೂಲಕ ಕದಿಯಲು ಬಯಸಿದನು.

ಯದಾ ಹಿ ಪ್ರಾರ್ಥಯಾಮಾಸ ಸತ್ಯಭಾಮಾಮನಿಂದಿತಾಮ್ |

ಅಕ್ರೂರೋಽಂತರಮನ್ವಿಚ್ಛನ್ಮಣಿಂ ಚೈವ ಸ್ಯಮಂತಕಮ್ || ೧-೩೯-೨

ನಿತ್ಯವೂ ಚಿನ್ನವನ್ನು ಕೊಡುವ ಸ್ಯಮಂತಕ ಮಣಿಯನ್ನಲ್ಲದೇ ಅಕ್ರೂರನು ಅನಿಂದಿತೆ ಸತ್ಯಭಾಮೆಯನ್ನೂ ಬಯಸಿದ್ದನು.

ಸತ್ರಾಜಿತಂ ತತೋ ಹತ್ವಾ ಶತಧನ್ವಾ ಮಹಾಬಲಃ |

ರಾತ್ರೌ ತನ್ಮಣಿಮಾದಾಯ ತತೋಽಕ್ರೂರಾಯ ದತ್ತವಾನ್ || ೧-೩೯-೩

ಮಹಾಬಲ ಶತಧನ್ವನು ರಾತ್ರಿಯಲ್ಲಿ ಸತ್ರಾಜಿತನನ್ನು ಕೊಂದು ಆ ಮಣಿಯನ್ನು ಅಕ್ರೂರನಿಗೆ ತಂದಿತ್ತನು.

ಅಕ್ರೂರಸ್ತು ತತೋ ರತ್ನಮಾದಾಯ ಭರತರ್ಷಭ |

ಸಮಯಂ ಕಾರಯಾಂಚಕ್ರೇ ನಾವೇದ್ಯೋಽಹಂ ತ್ವಯೇತ್ಯುತ || ೧-೩೯-೪

ವಯಮಭ್ಯುಪಯಾಸ್ಯಾಮಃ ಕೃಷ್ಣೇನ ತ್ವಾಮಭಿದ್ರುತಮ್ |

ಮಮಾದ್ಯ ದ್ವಾರಕಾ ಸರ್ವಾ ವಶೇ ತಿಷ್ಠತ್ಯಸಂಶಯಮ್ || ೧-೩೯-೫

ಭರತರ್ಷಭ! ಅಕ್ರೂರನಾದರೋ ಆ ರತ್ನವನ್ನು ತೆಗೆದುಕೊಂಡು “ನನ್ನಲ್ಲಿ ಮಣಿಯಿದೆಯೆಂಬ ವಿಷಯವನ್ನು ಯಾರಿಗೂ ಹೇಳಬಾರದು. ಕೃಷ್ಣನೇನಾದರೂ ನಿನ್ನನ್ನು ಪೀಡಿಸತೊಡಗಿದರೆ ನಾನು ನಿನ್ನ ಪಕ್ಷವನ್ನು ಸೇರಿಕೊಳ್ಳುತ್ತೇನೆ. ಈ ದಿನಗಳಲ್ಲಿ ದ್ವಾರಕೆಯಲ್ಲವೂ ನನ್ನ ವಶದಲ್ಲಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.” ಎಂದು ಶತಧನ್ವನೊಂದಿಗೆ ಕರಾರನ್ನು ಮಾಡಿಕೊಂಡನು.

ಹತೇ ಪಿತರಿ ದುಃಖಾರ್ತಾ ಸತ್ಯಭಾಮಾ ಯಶಸ್ವಿನೀ |

ಪ್ರಯಯೌ ರಥಮಾರುಹ್ಯ ನಗರಂ ವಾರಣಾವತಮ್ || ೧-೩೯-೬

ತಂದೆಯು ಹತನಾಗಲು ದುಃಖಾರ್ತಳಾದ ಯಶಸ್ವಿನೀ ಸತ್ಯಭಾಮೆಯು ರಥವನ್ನೇರಿ ವಾರಣಾವತನಗರಕ್ಕೆ ಹೋದಳು.

ಸತ್ಯಭಾಮಾ ತು ತದ್ವೃತ್ತಂ ಭೋಜಸ್ಯ ಶತಧನ್ವನಃ |

ಭರ್ತುರ್ನಿವೇದ್ಯ ದುಃಖಾರ್ತಾ ಪಾರ್ಶ್ವಸ್ಥಾಶ್ರೂಣ್ಯವರ್ತಯತ್ || ೧-೩೯-೭

ದುಃಖಾರ್ತಳಾದ ಸತ್ಯಭಾಮೆಯು ಆಗ ಅಲ್ಲಿದ್ದ ಕೃಷ್ಣನ ಪಕ್ಕದಲ್ಲಿ ಕುಳಿತು ಭೋಜ ಶತಧನ್ವನನ ಆ ಕೃತ್ಯದ ಕುರಿತು ಹೇಳಿದಳು.

ಪಾಂಡವಾನಾಂ ತು ದಗ್ಧಾನಾಂ ಹರಿಃ ಕೃತ್ವೋದಕಕ್ರಿಯಾಮ್ |

ಕುಲ್ಯಾರ್ಥೇ ಚಾಪಿ ಪಾಂಡೂನಾಂ ನ್ಯಯೋಜಯತ ಸಾತ್ಯಕಿಮ್ || ೧-೩೯-೮

ಆಗ ವಾರಣಾವತ ಲಾಕ್ಷಾಗೃಹದಲ್ಲಿ ಸುಟ್ಟುಹೋಗಿದ್ದ ಪಾಂಡವರಿಗೆ ಉದಕಕ್ರಿಯೆಗಳನ್ನು ಮಾಡಿ ಹರಿಯು ಪಾಂಡವರ ಅಸ್ತಿಸಂಚಯನ ಕಾರ್ಯಕ್ಕೆ ಸಾತ್ಯಕಿಯನ್ನು ನಿಯೋಜಿಸಿದನು.

ತತಸ್ತ್ವರಿತಮಾಗತ್ಯ ದ್ವಾರಕಾಂ ಮಧುಸೂದನಃ |

ಪೂರ್ವಜಂ ಹಲಿನಂ ಶ್ರೀಮಾನಿದಂ ವಚನಮಬ್ರವೀತ್ || ೧-೩೯-೯

ತ್ವರೆಮಾಡಿ ದ್ವಾರಕೆಗೆ ಹಿಂದಿರುಗಿ ಮಧುಸೂದನನು ತನ್ನ ಪೂರ್ವಜ ಹಲಿ ಶ್ರೀಮಾನ ಬಲರಾಮನಿಗೆ ಹೇಳಿದನು:

ಹತಃ ಪ್ರಸೇನಃ ಸಿಂಹೇನ ಸತ್ರಾಜಿಚ್ಛತಧನ್ವನಾ |

ಸ್ಯಮಂತಕಃ ಸ ಮದ್ಗಾಮೀ ತಸ್ಯ ಪ್ರಭುರಹಂ ವಿಭೋ || ೧-೩೯-೧೦

“ವಿಭೋ! ಪ್ರಸೇನನು ಸಿಂಹದಿಂದ ಹತನಾದನು. ಸತ್ರಾಚಿತನು ಶತಧನ್ವನಿಂದ ಹತನಾದನು. ಈಗ ಆ ಸ್ಯಮಂತಕ ಮಣಿಯ ಪ್ರಭುವು ನಾನಾಗುತ್ತೇನೆ.

ತದಾರೋಹ ರಥಂ ಶೀಘ್ರಂ ಭೋಜಂ ಹತ್ವಾ ಮಹಾಬಲಮ್ |

ಸ್ಯಮಂತಕೋ ಮಹಾಬಾಹೋ ಹ್ಯಸ್ಮಾಕಂ ಸ ಭವಿಷ್ಯತಿ || ೧-೩೯-೧೧

ಮಹಾಬಾಹೋ! ಆದುದರಿಂದ ಶೀಘ್ರವಾಗಿ ರಥವನ್ನೇರಿ ಮಹಾಬಲ ಭೋಜನನ್ನು ಸಂಹರಿಸಿದರೆ ಸ್ಯಮಂತಕವು ನಮ್ಮದಾಗುತ್ತದೆ.”

ತತಃ ಪ್ರವವೃತೇ ಯುದ್ಧಂ ತುಮುಲಂ ಭೋಜಕೃಷ್ಣಯೋಃ |

ಶತಧನ್ವಾ ತತೋಽಕ್ರೂರಮವೈಕ್ಷತ್ಸರ್ವತೋದಿಶಮ್ || ೧-೩೯-೧೨

ಆಗ ಭೋಜ ಶತಧನ್ವ ಮತ್ತು ಕೃಷ್ಣರ ನಡುವೆ ತುಮುಲ ಯುದ್ಧವು ಪ್ರಾರಂಭವಾಯಿತು. ಆಗ ಶತಧನ್ವನು ಅಕ್ರೂರನಿಗಾಗಿ ಎಲ್ಲ ಕಡೆ ನೋಡಿದನು.

ಸಂರಬ್ಧೌ ತಾವುಭೌ ದೃಷ್ಟ್ವಾ ತತ್ರ ಭೋಜಜನಾರ್ದನೌ |

ಶಕ್ತೋಽಪಿ ಶಾಠ್ಯಾದ್ಧಾರ್ದಿಕ್ಯಮಕ್ರೂರೋ ನಾಭ್ಯಪದ್ಯತ || ೧-೩೯-೧೩

ಕುಪಿತರಾದ ಭೋಜ-ಜನಾರ್ದನರಿಬ್ಬರನ್ನೂ ನೋಡಿ ಶಕ್ತನಾಗಿದ್ದರೂ ಶಠತನದ ಕಾರಣದಿಂದ ಅಕ್ರೂರನು ಹಾರ್ದಿಕ್ಯ ಕೃತವರ್ಮನ ಮಗ ಶತಧನ್ವನ ಪರವಾಗಿ ಹೋರಾಡಲು ಹೋಗಲಿಲ್ಲ. 

ಅಪಯಾನೇ ತತೋ ಬುದ್ಧಿಂ ಭೋಜಶ್ಚಕ್ರೇ ಭಯಾರ್ದಿತಃ |

ಯೋಜನಾನಾಂ ಶತಂ ಸಾಗ್ರಂ ಹಯಯಾ ಪ್ರತ್ಯಪದ್ಯತ || ೧-೩೯-೧೪

ಆಗ ಭಯಾರ್ದಿತನಾದ ಶತಧನ್ವನು ಪಲಾಯನಮಾಡಲು ಯೋಚಿಸಿದನು. ಅವನು ಕುದುರೆಯನ್ನೇರಿ ನೂರು ಯೋಜನ ದೂರ ಪಲಾಯನ ಮಾಡಿದನು.

ವಿಖ್ಯಾತಾ ಹೃದಯಾ ನಾಮ ಶತಯೋಜನಗಾಮಿನೀ |

ಭೋಜಸ್ಯ ವಡವಾ ರಾಜನ್ಯಯಾ ಕೃಷ್ಣಮಯೋಧಯತ್ || ೧-೩೯-೧೫

ರಾಜನ್! ಶತಧನ್ವನು ಯಾವ ಕುದುರೆಯನ್ನೇರಿ ಕೃಷ್ಣನೊಡನೆ ಯುದ್ಧಮಾಡಲು ಬಂದಿದ್ದನೋ ಆ ಕುದುರೆಯು ಶತಯೋಜನ ಗಾಮಿನಿಯಾಗಿತ್ತು ಮತ್ತು ಹೃದಯಾ ಎಂಬ ಹೆಸರಿನಿಂದ ವಿಖ್ಯಾತವಾಗಿತ್ತು.

ಕ್ಷೀಣಾಂ ಜವೇನ ಚ ಹಯಾಮಧ್ವನಃ ಶತಯೋಜನೇ |

ದೃಷ್ಟ್ವಾ ರಥಸ್ಯ ತಾಂ ವೃದ್ಧಿಂ ಶತಧನ್ವಾನಮಾರ್ದಯತ್ || ೧-೩೯-೧೬

ಶತಯೋಜನ ದೂರ ಹೋದ ನಂತರ ಆ ಕುದುರೆಯ ವೇಗವು ಕಡಿಮಿಯಾಗತೊಡಗಿತು. ಕೃಷ್ಣನ ರಥದ ವೇಗವು ಹೆಚ್ಚಾಗುತ್ತಿರುವುದನ್ನು ಕಂಡು ಶತಧನ್ವನು ಕುದುರೆಯನ್ನು ಬಿಟ್ಟು ಓಡತೊಡಗಿದನು.

ತತಸ್ತಸ್ಯಾ ಹಯಾಯಾಸ್ತು ಶ್ರಮಾತ್ಖೇದಾಚ್ಚ ಭಾರತ |

ಖಮುತ್ಪೇತುರಥ ಪ್ರಾಣಾಃ ಕೃಷ್ಣೋ ರಾಮಮಥಾಬ್ರವೀತ್ || ೧-೩೯-೧೭

ಭಾರತ! ಆಗ ಅವನ ಆ ಕುದುರೆಯು ಶ್ರಮ ಮತ್ತು ಖೇದದ ಕಾರಣದಿಂದ ಪ್ರಾಣವನ್ನು ತೊರೆಯಿತು. ಕೃಷ್ಣನು ರಾಮನಿಗೆ ಹೇಳಿದನು:

ತಿಷ್ಠಸ್ವೇಹ ಮಹಾಬಾಹೋ ದೃಷ್ಟದೋಷಾ ಹಯಾ ಮಯಾ |

ಪದ್ಭ್ಯಾಂ ಗತ್ವಾ ಹರಿಷ್ಯಾಮಿ ಮಣೀರತ್ನಂ ಸ್ಯಮಂತಕಮ್ || ೧-೩೯-೧೮

“ಮಹಾಬಾಹೋ! ಕುದುರೆಗಳು ಬಳಲಿರುವುದನ್ನು ನೋಡು. ಇಲ್ಲಿಯೇ ನಿಲ್ಲಿಸು. ಪದಾತಿಯಾಗಿ ಹೋಗಿ ಆ ಮಣಿರತ್ನ ಸ್ಯಮಂತಕವನ್ನು ತರುತ್ತೇನೆ.”

ಪದ್ಭ್ಯಾಮೇವ ತತೋ ಗತ್ವಾ ಶತಧನ್ವಾನಮಚ್ಯುತಃ |

ಮಿಥಿಲಾಮಭಿತೋ ರಾಜನ್ಜಘಾನ ಪರಮಾಸ್ತ್ರವಿತ್ || ೧-೩೯-೧೯

ರಾಜನ್! ಆಗ ಪರಮಾಸ್ತ್ರವಿದು ಅಚ್ಯುತನು ಪದಾತಿಯಾಗಿಯೇ ಹೋಗಿ ಮಿಥಿಲಾನಗರದ ಬಳಿ ಶತಧನ್ವನನ್ನು ಕೊಂದನು.

ಸ್ಯಮಂತಕಂ ಚ ನಾಪಶ್ಯದ್ಧತ್ವಾ ಬೋಜಂ ಮಹಾಬಲಮ್ |

ನಿವೃತ್ತಂ ಚಾಬ್ರವೀತ್ಕೃಷ್ಣಂ ರತ್ನಂ ದೇಹೀತಿ ಲಾಂಗಲೀ || ೧-೩೯-೨೦

ಮಹಾಬಲ ಭೋಜನನ್ನು ಸಂಹರಿಸಿಯೂ ಅವನಿಗೆ ಸ್ಯಮಂತಕ ಮಣಿಯು ದೊರಕಲಿಲ್ಲ. ಹಿಂದಿರುಗಿದ ಕೃಷ್ಣನಿಗೆ ಲಾಂಗಲೀ ರಾಮನು ರತ್ನವನ್ನು ಕೊಡೆಂದು ಕೇಳಿದನು.

ನಾಸ್ತೀತಿ ಕೃಷ್ಣಶ್ಚೋವಾಚ ತತೋ ರಾಮೋ ರುಷಾನ್ವಿತಃ |

ಧಿಕ್ಛಬ್ದಮಸಕೃತ್ಕೃತ್ವಾ ಪ್ರತ್ಯುವಾಚ ಜನಾರ್ದನಮ್ || ೧-೩೯-೨೧

“ಅದು ಸಿಗಲಿಲ್ಲ” ಎಂದು ಕೃಷ್ಣನು ಹೇಳಿದನು. ಆಗ ರಾಮನು ರೋಷಾನ್ವಿತನಾಗಿ ಧಿಕ್ಕಾರದ ಶಬ್ದಗಳನ್ನು ಬಳಸುತ್ತಾ ಜನಾರ್ದನನಿಗೆ ಹೇಳಿದನು:

ಭ್ರಾತೃತ್ವಾನ್ಮರ್ಷಯಾಮ್ಯೇಷ ಸ್ವಸ್ತಿ ತೇಽಸ್ತು ವ್ರಜಾಮ್ಯಹಮ್  |

ಕೃತ್ಯಂ ನ ಮೇ ದ್ವಾರಕಯಾ ನ ತ್ವಯಾ ನ ಚ ವೃಷ್ಣಿಭಿಃ  || ೧-೩೯-೨೨

“ಭ್ರಾತೃತ್ವದ ಕಾರಣದಿಂದ ನಿನ್ನ ಈ ಕೃತ್ಯವನ್ನು ಸಹಿಸಿಕೊಳ್ಳುತ್ತಿದ್ದೇನೆ! ನಿನಗೆ ಮಂಗಳವಾಗಲಿ! ಹೋಗುತ್ತಿದ್ದೇನೆ! ಇನ್ನು ನನಗೆ ದ್ವಾರಕೆಯಲ್ಲಾಗಲೀ, ನಿನ್ನಲ್ಲಾಗಲೀ ಮತ್ತು ವೃಷ್ಣಿಗಳಿಂದಾಗಲೀ ಯಾವ ಕೆಲಸವೂ ಇಲ್ಲ!”

ಪ್ರವಿವೇಶ ತತೋ ರಾಮೋ ಮಿಥಿಲಾಮರಿಮರ್ದನಃ |

ಸರ್ವಕಾಮೈರುಪಚಿತೈರ್ಮೈಥಿಲೇನಾಭಿಪೂಜಿತಃ || ೧-೩೯-೨೩

ಆಗ ಅರಿಮರ್ದನ ರಾಮನು ಮಿಥಿಲೆಯನ್ನು ಪ್ರವೇಶಿಸಿದನು. ಮಿಥಿಲೇಶನು ಅವನ ಸರ್ವಕಾಮಗಳನ್ನು ಪೂರೈಸುವ ಉಪಚಾರವನ್ನು ಮಾಡಿ ಪೂಜಿಸಿದನು.

ಏತಸ್ಮಿನ್ನೇವ ಕಾಲೇ ತು ಬಭ್ರುರ್ಮತಿಮತಾಂ ವರಃ |

ನಾನಾರೂಪಾನ್ಕ್ರತೂನ್ಸರ್ವಾನಾಜಹಾರ ನಿರರ್ಗಲಾನ್ || ೧-೩೯-೨೪

ಇದೇ ಕಾಲದಲ್ಲಿ ಮತಿವಂತರಲ್ಲಿ ಶ್ರೇಷ್ಠ ಬಭ್ರು[1]ವು ನಿರರ್ಗಲವಾದ ನಾನಾರೂಪದ ಕ್ರತುಗಳನ್ನು ನೆರವೇರಿಸಿದನು.

ದೀಕ್ಷಾಮಯಂ ಸ ಕವಚಂ ರಕ್ಷಾರ್ಥಂ ಪ್ರವಿವೇಶ ಹ |

ಸ್ಯಮಂತಕಕೃತೇ ಪ್ರಾಜ್ಞೋ ಗಾಂದೀಪುತ್ರೋ ಮಹಾಯಶಾಃ || ೧-೩೯-೨೫

ಮಹಾಯಶಸ್ವೀ ಪ್ರಾಜ್ಞ ಗಾಂದೀಪುತ್ರ ಅಕ್ರೂರನು ಸ್ಯಮಂತಕವನ್ನು ರಕ್ಷಿಸುವುದಕ್ಕೋಸ್ಕರ ದೀಕ್ಷೆಯ ಕವಚವನ್ನು ಧರಿಸಿದ್ದನು[2].  

ಅಥ ರತ್ನಾನಿ ಚಾಗ್ರ್ಯಾಣಿ ದ್ರವ್ಯಾಣಿ ವಿವಿಧಾನಿ ಚ |

ಷಷ್ಟಿಂ ವರ್ಷಾಣಿ ಧರ್ಮಾತ್ಮಾ ಯಜ್ಞೇಷು ವಿನಿಯೋಜಯತ್ || ೧-೩೯-೨೬

ಹಾಗೆ ಧರ್ಮಾತ್ಮಾ ಅಕ್ರೂರನು ಅರವತ್ತು ವರ್ಷಗಳ ಪರ್ಯಂತ ವಿವಿಧ ರತ್ನಗಳು ಮತ್ತು ಅಗ್ರ ದ್ರವ್ಯಗಳನ್ನು ಯಜ್ಞಗಳಿಗೆ ವೆಚ್ಚಮಾಡಿದನು.

ಅಕ್ರೂರಯಜ್ಞಾ ಇತಿ ತೇ ಖ್ಯಾತಾಸ್ತಸ್ಯ ಮಹಾತ್ಮನಃ |

ಬಹ್ವನ್ನದಕ್ಷಿಣಾಃ ಸರ್ವೇ ಸರ್ವಕಾಮಪ್ರದಾಯಿನಃ || ೧-೩೯-೨೭

ಸರ್ವಕಾಮಗಳನ್ನೂ ಪೂರೈಸುವ ಮತ್ತು ಅಪಾರ ಅನ್ನ-ಕಕ್ಷಿಣೆಗಳಿಂದ ಕೂಡಿದ್ದ ಆ ಮಹಾತ್ಮನ ಯಜ್ಞವು ಅಕ್ರೂರಯಯಜ್ಞ ಎಂದೇ ಖ್ಯಾತವಾಯಿತು.

ಅಥ ದುರ್ಯೋಧನೋ ರಾಜಾ ಗತ್ವಾ ತು ಮಿಥಿಲಾಂ ಪ್ರಭುಃ |

ಗದಾಶಿಕ್ಷಾಂ ತತೋ ದಿವ್ಯಾಂ ಬಲಭದ್ರಾದವಾಪ್ತವಾನ್ || ೧-೩೯-೨೮

ಅದೇ ಸಮಯದಲ್ಲಿ ರಾಜಾ ಪ್ರಭು ದುರ್ಯೋಧನನು ಮಿಥಿಲೆಗೆ ಹೋಗಿ ಅಲ್ಲಿ ಬಲಭದ್ರನಿಂದ ದಿವ್ಯ ಗದಾಶಿಕ್ಷೆಯನ್ನು ಪಡೆದುಕೊಂಡನು.

ಪ್ರಸಾದ್ಯ ತು ತತೋ ರಾಮೋ ವೃಷ್ಣ್ಯಂಧಕಮಹಾರಥೈಃ |

ಆನೀತೋ ದ್ವಾರಕಾಮೇವ ಕೃಷ್ಣೇನ ಚ ಮಹಾತ್ಮನಾ || ೧-೩೯-೨೯

ಅನಂತರ ವೃಷ್ಣಿ-ಅಂಧಕ ಮಹಾರಥತರು ಮತ್ತು ಮಹಾತ್ಮ ಕೃಷ್ಣ ಇವರು ರಾಮನನ್ನು ಪ್ರಸನ್ನಗೊಳಿಸಿ ದ್ವಾರಕೆಗೇ ಕರೆತಂದರು.

ಅಕ್ರೂರಸ್ತ್ವಂಧಕೈಃ ಸಾರ್ಧಮಪಾಯಾದ್ಭರತರ್ಷಭ |

ಹತ್ವಾ ಸತ್ರಾಜಿತಂ ಸುಪ್ತಂ ಸಹಬಂಧುಂ ಮಹಾಬಲಮ್ || ೧-೩೯-೩೦

ಜ್ಞಾತಿಭೇದಭಯಾತ್ಕೃಷ್ಣಸ್ತಮುಪೇಕ್ಷಿತವಾನಥ |

ಅಪಯಾತೇ ತಥಾಕ್ರೂರೇ ನಾವರ್ಷತ್ಪಾಕಶಾಸನಃ || ೧-೩೯-೩೧

ಭರತರ್ಷಭ! ಮಲಗಿದ್ದ ಮಹಾಬಲ ಸತ್ರಾಜಿತನನ್ನು ಅವನ ಬಂಧುಗಳೊಂದಿಗೆ ಶತುಬಂಧುವಿನ ಕೈಯಿಂದ ಕೊಲ್ಲಿಸಿ ಅಕೃರನು ಅಂಧಕರೊಂದಿಗೆ ಓಡಿಹೋಗಿದ್ದನು. ದಾಯಾದಿಗಳಲ್ಲಿ ಒಡಕು ಬರಬರದೆಂಬ ಭಯದಿಂದ ಕೃಷ್ಣನು ಅಕ್ರೂರನ ಆ ಕೃತ್ಯವನ್ನು ಉಪೇಕ್ಷಿಸಿದ್ದನು. ಅಕ್ರೂರನು ಓಡಿಹೋಗಿದ್ದಂದಿನಿಂದ ಪಾಕಶಾಸನನು ಮಳೆಯನ್ನೇ ಸುರಿಸಲಿಲ್ಲ.

ಅನಾವೃಷ್ಟ್ಯಾ ಯದಾ ರಾಜ್ಯಮಭವದ್ಬಹುಧಾ ಕೃಶಮ್ |

ತತಃ ಪ್ರಸಾದಯಾಮಾಸುರಕ್ರೂರಂ ಕುಕುರಾಂಧಕಾಃ || ೧-೩೯-೩೨

ಅನಾವೃಷ್ಟಿಯ ಕಾರಣದಿಂದ ರಾಜ್ಯವು ಅತ್ಯಂತ ಕೃಶವಾಗತೊಡಗಿದಾಗ ಕುಕುರರು ಮತ್ತು ಅಂಧಕರು ಅಕ್ರೂರನನ್ನು ಪ್ರಸನ್ನಗೊಳಿಸಿದರು.

ಪುನರ್ದ್ವಾರವತೀಂ ಪ್ರಾಪ್ತೇ ತಸ್ಮಿನ್ ದಾನಪತೌ ತತಃ |

ಪ್ರವವರ್ಷೇ ಸಹಸ್ರಾಕ್ಷಃ ಕಚ್ಛೇ ಜಲನಿಧೇಸ್ತದಾ || ೧-೩೯-೩೩

ಆ ದನಪತಿಯು ದ್ವಾರವತಿಯನ್ನು ಪ್ರವೇಶಿಸಲು ಸಮುದ್ರದ ಆ ತೀರದಲ್ಲಿ ಸಹಸ್ರಾಕ್ಷನು ಭಾರೀ ಮಳೆಯನ್ನು ಸುರಿಸಿದನು.

ಕನ್ಯಾಂ ಚ ವಾಸುದೇವಾಯಾ ಸ್ವಸಾರಂ ಶೀಲಸಂಮತಾಮ್ |

ಅಕ್ರೂರಃ ಪ್ರದದೌ ಧೀಮಾನ್ಪ್ರೀತ್ಯರ್ಥಂ ಕುರುನಂದನ  || ೧-೩೯-೩೪

ಕುರುನಂದನ! ವಾಸುದೇವನನ್ನು ಪ್ರೀತಗೊಳಿಸಲು ಧೀಮಾನ್ ಅಕ್ರೂರನು ತನ್ನ ತಂಗಿ ಶೀಲಸಂಮತ ಕನ್ಯೆಯನ್ನು ಅವನಿಗೆ ಕೊಟ್ಟನು.

ಅಥ ವಿಜ್ಞಾಯ ಯೋಗೇನ ಕೃಷ್ಣೋ ಬಭ್ರುಗತಂ ಮಣಿಮ್ |

ಸಭಾಮಧ್ಯೇ ಗತಂ ಪ್ರಾಹ ತಮಕ್ರೂರಂ ಜನಾರ್ದನಃ || ೧-೩೯-೩೫

ತನ್ನ ಯೋಗದಿಂದ ಮಣಿಯು ಬಭ್ರು ಅಕ್ರೂರನಲ್ಲಿದೆ ಎಂದು ತಿಳಿದ ಜನಾರ್ದನ ಕೃಷ್ಣನು ಸಭಾಮಧ್ಯದಲ್ಲಿ ಹೋಗಿ ಅಕ್ರೂರನಿಗೆ ಹೇಳಿದನು:

ಯತ್ತದ್ರತ್ನಂ ಮಣಿವರಂ ತವ ಹಸ್ತಗತಂ ವಿಭೋ |

ತತ್ಪ್ರಯಚ್ಛಸ್ವ ಮಾನಾರ್ಹಂ ಮಯಿ ಮಾನಾರ್ಯಕಂ ಕೃಥಾಃ || ೧-೩೯-೩೬

“ವಿಭೋ! ಮಣಿವರ ರತ್ನವು ನಿನ್ನ ಹಸ್ತಗತವಾಗಿರುವಾಗ ಅದನ್ನು ಮಾನಾರ್ಹನಾದ ನನಗೆ ಕೊಟ್ಟುಬಿಡು. ಅನಾರ್ಯಕ ಕಾರ್ಯವನ್ನು ಮಾಡಬೇಡ!

ಷಷ್ಟಿವರ್ಷೇ ಗತೇ ಕಾಲೇ ಯದ್ರೋಷೋಽಭೂನ್ಮಮಾನಘ |

ಸ ಸಂರೂಢೋಽಸಕೃತ್ಪ್ರಾಪ್ತಸ್ತತಃ ಕಾಲಾತ್ಯಯೋ ಮಹಾನ್ || ೧-೩೯-೩೭

ಅರವತ್ತು ವರ್ಷಗಳ ಹಿಂದೆ ಯಾವ ರೋಷವುಂಟಾಗಿತ್ತೋ ಅದೇ ಮಹಾನ್ ರೋಷವು ಬಾರಿ ಬಾರಿ ನನಗಾಗುತ್ತಿದೆ.”

ತತಃ ಕೃಷ್ಣಸ್ಯ ವಚನಾತ್ಸರ್ವಸಾತ್ತ್ವತಸಂಸದಿ |

ಪ್ರದದೌ ತಂ ಮಣಿಂ ಬಭ್ರುರಕ್ಲೇಶೇನ ಮಹಾಮತಿಃ || ೧-೩೯-೩೮

ಆಗ ಕೃಷ್ಣನ ವಚನದಂತೆ ಆ ಸಾತ್ವತ ಸಂಸದಿಯಲ್ಲಿ ಮಹಾಮತಿ ಬಭ್ರುವು ಕ್ಲೇಶವಿಲ್ಲದೇ ಆ ಮಣಿಯನ್ನು ಅವನಿಗೆ ನೀಡಿದನು.

ತತಸ್ತಮಾರ್ಜವಪ್ರಾಪ್ತಂ ಬಭ್ರೋರ್ಹಸ್ತಾದರಿಂದಮಃ |

ದದೌ ಹೃಷ್ಟಮನಾಃ ಕೃಷ್ಣಸ್ತಂ ಮಣಿಂ ಬಭ್ರವೇ ಪುನಃ  || ೧-೩೯-೩೯

ಅತಿ ಸರಳತೆಯಿಂದ ಬಭ್ರುವಿನ ಕೈಯಿಂದ ಪಡೆದುಕೊಂಡ ಆ ಮಣಿಯನ್ನು ಹೃಷ್ಟಮನಸ್ಕನಾದ ಅರಿಂದಮ ಕೃಷ್ಣನು ಪುನಃ ಅದನ್ನು ಬಭ್ರುವಿಗೆ ಕೊಟ್ಟನು.

ಸ ಕೃಷ್ಣಹಸ್ತಾತ್ಸಂಪ್ರಾಪ್ತಂ ಮಣಿರತ್ನಂ ಸ್ಯಮಂತಕಮ್ |

ಆಬಧ್ಯ ಗಾಂಧಿನೀಪುತ್ರೋ ವಿರರಾಜಾಂಶುಮಾನಿವ || ೧-೩೯-೪೦

ಕೃಷ್ಣನ ಹಸ್ತದಿಂದ ಆ ಮಣಿರತ್ನ ಸ್ಯಮಂತಕವನ್ನು ಪಡೆದ ಗಾಂಧಿನೀಪುತ್ರನು ಅದನ್ನು ಕಟ್ಟಿಕೊಂಡು ಸೂರ್ಯನಂತೆ ವಿರಾಜಿಸಿದನು.

ಯಸ್ತ್ವೇವಂ ಶೃಣುಯಾನ್ನಿತ್ಯಂ ಶುಚಿರ್ಭೂತ್ವಾ ಸಮಾಹಿತಃ |

ಸುಖಾನಾಂ ಸಕಲಾನಾಂ ಚ ಫಲಭಾಗೀಹ ಜಾಯತೇ || ೧-೩೯-೪೧

ನಿತ್ಯವೂ ಇದನ್ನು ಶುಚಿಯಾಗಿದ್ದು ಸಮಾಹಿತನಾಗಿ ಕೇಳುವವನಿಗೆ ಇದರ ಫಲರೂಪವಾಗಿ ಸಕಲ ಸುಖಗಳೂ ದೊರೆಯುತ್ತದೆ.

ಆಬ್ರಹ್ಮಭುವನಾಚ್ಚಾಪಿ ಯಶಃ ಖ್ಯಾತಿರ್ನ ಸಂಶಯಃ |

ಭವಿಷ್ಯತಿ ನೃಪಶ್ರೇಷ್ಠ ಸತ್ಯಮೇತದ್ಬ್ರವೀಮಿ ತೇ || ೧-೩೯-೪೨

ನೃಪಶ್ರೇಷ್ಠ! ಅವನ ಯಶಸ್ಸು ಬ್ರಹ್ಮಭುವನದ ವರೆಗೂ ಕೇಳಿಬರುತ್ತದೆ. ಇದರಲ್ಲಿ ಸಂಶಯವೇ ಇಲ್ಲ. ಸತ್ಯವನ್ನೇ ನಾನು ನಿನಗೆ ಹೇಳುತ್ತಿದ್ದೇನೆ.”

ಇತಿ ಶ್ರೀಮನ್ಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣ್ಯೇಕೋನಚತ್ವಾರಿಂಶೋಽಧ್ಯಾಯಃ

Hand drawn flowers isolated on white background Vector Image

[1] ಅಕ್ರೂರ

[2] ಅರ್ಥಾತ್, ಯಜ್ಞದ ದೀಕ್ಷೆಯನ್ನು ಕೈಗೊಂಡರೆ ತನಗೆ ಶತಧನ್ವನನ್ನು ರಕ್ಷಿಸಲು ಹೋಗುವ ಹಾಗಿಲ್ಲ ಮತ್ತು ಹಾಗೆ ಕೃಷ್ಣನೊಡನೆ ಯುದ್ಧವನ್ನೂ ಮಾಡುವ ಹಾಗಿಲ್ಲ. ಏಕೆಂದರೆ ದೀಕ್ಷಾಬದ್ಧರಾದವರು ಯುದ್ಧಕವಚವನ್ನು ಕಟ್ಟುವಹಾಗಿಲ್ಲ.

Comments are closed.