ಹರಿವಂಶ: ಹರಿವಂಶ ಪರ್ವ
ಏಕತ್ರಿಂಶೋಽಧ್ಯಾಯಃ
ಕಕ್ಷೇಯುವಂಶವರ್ಣನಮ್
ಪೂರುವಿನ ವಂಶಪರಂಪರೆಯಲ್ಲಿ ಕಕ್ಷೇಯುವಿನ ವಂಶದ ವರ್ಣನೆ.
19031001 ಜನಮೇಜಯ ಉವಾಚ |
19031001a ಪೂರೋರ್ವಂಶಮಹಂ ಬ್ರಹ್ಮಂಶ್ರೋತುಮಿಚ್ಛಾಮಿ ತತ್ತ್ವತಃ |
19031001c ದ್ರುಹ್ಯೋಶ್ಚಾನೋರ್ಯದೋಶ್ಚೈವ ತುರ್ವಸೋಶ್ಚ ಪೃಥಕ್ಪೃಥಕ್ ||
ಜನಮೇಜಯನು ಹೇಳಿದನು: “ಬ್ರಹ್ಮನ್! ಪೂರುವಿನ ವಂಶವನ್ನು ಮತ್ತು ದ್ರುಹ್ಯು, ಅನು, ಯದು ಮತ್ತು ತುರ್ವಸುಗಳ ವಂಶವನ್ನು ತತ್ತ್ವತಃ ಪ್ರತ್ಯೇಕ ಪ್ರತ್ಯೇಕವಾಗಿ ಕೇಳಬಯಸುತ್ತೇನೆ.
19031002a ವೃಷ್ಣಿವಂಶಪ್ರಸಂಗೇನ ಸ್ವಂ ವಂಶಂ ಪೂರ್ವಮೇವ ತು |
19031002c ವಿಸ್ತರೇಣಾನುಪೂರ್ವ್ಯಾ ಚ ತದ್ಭವಾನ್ವಕ್ತುಮರ್ಹತಿ ||
ವೃಷ್ಣಿವಂಶಪ್ರಸಂಗದಲ್ಲಿ ನನ್ನ ವಂಶದ ಕುರಿತು ಮೊದಲು ಕೇಳಲು ಬಯಸುತ್ತೇನೆ. ಆದುದರಿಂದ ವಿಸ್ತಾರದಿಂದ ಪೂರುವಿನ ವಂಶದ ಕುರಿತು ಹೇಳಬೇಕು.”
19031003 ವೈಶಂಪಾಯನ ಉವಾಚ|
19031003a ಶೃಣು ಪೂರೋರ್ಮಹಾರಾಜ ವಂಶಮುತ್ತಮಪೌರುಷಮ್ |
19031003c ವಿಸ್ತರೇಣಾನುಪೂರ್ವ್ಯಾ ಚ ಯತ್ರ ಜಾತೋಽಸಿ ಪಾರ್ಥಿವ ||
ವೈಶಂಪಾಯನನು ಹೇಳಿದನು: “ಮಹಾರಾಜ! ಪಾರ್ಥಿವ! ಯಾವ ವಂಶದಲ್ಲಿ ನೀನು ಹುಟ್ಟಿರುವೆಯೋ ಆ ಉತ್ತಮ ಪೌರುಷ ವಂಶ ಪೂರುವಿನ ವಂಶದ ಕುರಿತು ವಿಸ್ತಾರವಾಗಿ ಮೊದಲಿನಿಂದ ಕೇಳು.
19031004a ಹಂತ ತೇ ಕೀರ್ತಯಿಷ್ಯಾಮಿ ಪೂರೋರ್ವಂಶಮನುತ್ತಮಮ್|
19031004c ದ್ರುಹ್ಯೋಶ್ಚಾನೋರ್ಯದೋಶ್ಚೈವ ತುರ್ವಸೋಶ್ಚ ನರಾಧಿಪ||
ನರಾಧಿಪ! ಪೂರುವಿನ ಉತ್ತಮ ವಂಶದ ಬಳಿಕ ದ್ರುಹ್ಯು, ಅನು, ಯದು ಮತ್ತು ತುರ್ವಸುವಿನ ವಂಶಗಳ ಕುರಿತೂ ಹೇಳುತ್ತೇನೆ.
19031005a ಪೂರೋಃ ಪುತ್ರೋ ಮಹಾವೀರ್ಯೋ ರಾಜಾಽಽಸೀಜ್ಜನಮೇಯಃ |
19031005c ಪ್ರಚಿನ್ವಾಂಸ್ತು ಸುತಸ್ತಸ್ಯ ಯಃ ಪ್ರಾಚೀಮಜಯದ್ದಿಶಮ್ ||
ಪೂರುವಿನ ಪುತ್ರನು ಮಹಾವೀರ್ಯ ರಾಜಾ ಜನಮೇಜಯನಾದನು. ಅವನ ಸುತನು ಪ್ರಚಿನ್ವಾನನು. ಅವನು ಪೂರ್ವದಿಕ್ಕನ್ನು ಜಯಿಸಿದ್ದನು.
19031006a ಪ್ರಚಿನ್ವತಃ ಪ್ರವೀರೋಽಭೂನ್ಮನಸ್ಯುಸ್ತಸ್ಯ ಚಾತ್ಮಜಃ |
19031006c ರಾಜಾ ಚಾಭಯದೋ ನಾಮ ಮನಸ್ಯೋರಭವತ್ಸುತಃ ||
ಪ್ರಚಿನ್ವಾನನ ಪುತ್ರನು ಪ್ರವೀರನಾದನು. ಮನಸ್ಯು ಅವನ ಮಗನಾದನು. ಮನಸ್ಯುವಿನ ಪುತ್ರ ರಾಜಾ ಅಭಯದ ಎಂಬ ಹೆಸರಿನವನಾಗಿದ್ದನು.
19031007a ತಥೈವಾಭಯದಸ್ಯಾಸೀತ್ಸುಧನ್ವಾ ತು ಮಹೀಪತಿಃ |
19031007c ಸುಧನ್ವನೋ ಬಹುಗವಃ ಶಂಯಾತಿಸ್ತಸ್ಯ ಚಾತ್ಮಜಃ ||
ಅಭಯದನ ಪುತ್ರನು ಮಹೀಪತಿ ಸುಧನ್ವನಾದನು. ಸುಧನ್ವನ ಮಗನು ಬಹುಗವ ಮತ್ತು ಶಂಯಾತಿಯು ಅವನ ಮಗನು.
19031008a ಶಂಯಾತೇಸ್ತು ರಹಸ್ಯಾತೀ ರೌದ್ರಶ್ವಸ್ತಸ್ಯ ಚಾತ್ಮಜಃ |
19031008c ರೌದ್ರಾಶ್ವಸ್ಯ ಘೃತಾಚ್ಯಾಂ ವೈ ದಶಾಪ್ಸರಸಿ ಸೂನವಃ ||
ಶಂಯಾತಿಯ ಮಗನು ರಹಸ್ಯಾತೀ ಮತ್ತು ರೌದ್ರಶ್ವನು ಅವನ ಮಗನು. ರೌದ್ರಶ್ವನಿಗೆ ಅಪ್ಸರಾ ಘೃತಾಚಿಯಲ್ಲಿ ಹತ್ತು ಮಕ್ಕಳು ಜನಿಸಿದರು.
19031009a ಋಚೇಯುಃ ಪ್ರಥಮಸ್ತೇಷಾಂ ಕೃಕಣೇಯುಸ್ತಥೈವ ಚ |
19031009c ಕಕ್ಷೇಯುಃ ಸ್ಥಂಡಿಲೇಯುಶ್ಚ ಸನ್ನತೇಯುಸ್ತಥೈವ ಚ ||
19031010a ದಶಾರ್ಣೇಯುರ್ಜಲೇಯುಶ್ಚ ಸ್ಥಲೇಯುಶ್ಚ ಮಹಾಯಶಾಃ |
19031010c ಧನೇಯುಶ್ಚ ವನೇಯುಶ್ಚ ಪುತ್ರಿಕಾಶ್ಚ ದಶ ಸ್ತ್ರಿಯಃ ||
19031011a ರುದ್ರಾ ಶೂದ್ರಾ ಚ ಭದ್ರಾ ಚ ಮಲದಾ ಮಲಹಾ ತಥಾ |
19031011c ಖಲದಾ ಚೈವ ರಾಜೇಂದ್ರ ನಲದಾ ಸುರಸಾಪಿ ಚ |
19031011e ತಥಾ ಗೋಚಪಲಾ ತು ಸ್ತ್ರೀರತ್ನಕೂಟಾಶ್ಚ ತಾ ದಶ ||
ಅವರಲ್ಲಿ ಋಚೇಯುವು ಮೊದಲನೆಯವನಾಗಿದ್ದನು. ಅವನ ನಂತರ ಕೃಕಣೇಯು, ಕಕ್ಷೇಯು, ಸ್ಥಂಡಿಲೇಯು, ಸನ್ನತೇಯು, ದಶಾರ್ಣೇಯು, ಜಲೇಯು, ಮಹಾಯಶಸ್ವೀ ಸ್ಥಲೇಯು, ಧನೇಯು, ಮತ್ತು ವನೇಯು. ಅವನಿಗೆ ಪುತ್ರಿಕಾಧರ್ಮವನ್ನು ಪಾಲಿಸುತ್ತಿದ್ದ ಹತ್ತು ಪುತ್ರಿಯರೂ ಇದ್ದರು. ರುದ್ರಾ, ಶೂದ್ರಾ, ಭದ್ರಾ, ಮಲದಾ, ಮಲಹಾ, ಖಲದಾ, ನಲದಾ, ಸುರಸಾ, ಗೋಪಚಲಾ ಮತ್ತು ಸ್ತ್ರೀರತ್ನಕೂಟಾ ಇವರೇ ಆ ಹತ್ತು ಕನ್ಯೆಯರು.
19031012a ಋಷಿರ್ಜಾತೋಽತ್ರಿವಂಶೇ ತು ತಾಸಾಂ ಭರ್ತಾ ಪ್ರಭಾಕರಃ |
19031012c ರುದ್ರಾಯಾಂ ಜನಯಾಮಾಸ ಸುತಂ ಸೋಮಂ ಯಶಸ್ವಿನಮ್||
ಅತ್ರಿವಂಶೀಯ ಋಷಿ ಪ್ರಭಾಕರನು ಅವರ ಪತಿಯಾದನು. ಅವನು ರುದ್ರೆಯಲ್ಲಿ ಯಶಸ್ವೀ ಸೋಮನನ್ನು ಪುತ್ರನನ್ನಾಗಿ ಪಡೆದನು.
19031013a ಸ್ವರ್ಭಾನುನಾ ಹತೇ ಸೂರ್ಯೇ ಪತಮಾನೇ ದಿವೋ ಮಹೀಮ್ |
19031013c ತಮೋಽಭಿಭೂತೇ ಲೋಕೇ ಚ ಪ್ರಭಾ ಯೇನ ಪ್ರಕಲ್ಪಿತಾ ||
ರಾಹುವಿನಿಂದ ಹತನಾಗಿ ಸೂರ್ಯನು ದಿವದಿಂದ ಮಹಿಯ ಮೇಲೆ ಬೀಳುತ್ತಿರುವ ಸಂದರ್ಭದಲ್ಲಿ ಕತ್ತಲೆಯು ಲೋಕವನ್ನು ಆವರಿಸಿದಾಗ ಈ ಪ್ರಭಾಕರನೇ ತನ್ನ ಪ್ರಭೆಯಿಂದ ಬೆಳಕನ್ನು ನೀಡಿದ್ದನು.
19031014a ಸ್ವಸ್ತಿ ತೇಽಸ್ತ್ವಿತಿ ಚೋಕ್ತೋ ವೈ ಪತಮಾನೋ ದಿವಾಕರಃ |
19031014c ವಚನಾತ್ತಸ್ಯ ವಿಪ್ರರ್ಷೇರ್ನ ಪಪಾತ ದಿವೋ ಮಹೀಮ್ ||
ಆ ಮಹರ್ಷಿಯು ಬೀಳುತ್ತಿದ್ದ ದಿವಾಕರನಿಗೆ “ನಿನಗೆ ಮಂಗಳವಾಗಲಿ!” ಎಂದು ಹೇಳಿದನು. ಆ ವಿಪ್ರರ್ಷಿಯ ವಚನದಂತೆ ಅವನು ದಿವದಿಂದ ಮಹಿಯ ಮೇಲೆ ಬೀಳಲಿಲ್ಲ.
19031015a ಅತ್ರಿಶ್ರೇಷ್ಠಾನಿ ಗೋತ್ರಾಣಿ ಯಶ್ಚಕಾರ ಮಹಾತಪಾಃ |
19031015c ಯಜ್ಞೇಷ್ವತ್ರೇರ್ಧನಂ ಚೈವ ಸುರೈರ್ಯಸ್ಯ ಪ್ರವರ್ತಿತಮ್ ||
ಮಹಾತಪಸ್ವೀ ಪ್ರಭಾಕರನು ಎಲ್ಲ ಗೋತ್ರಗಳಲ್ಲಿ ಅತ್ರಿಗೋತ್ರವನ್ನು ಶ್ರೇಷ್ಠವೆಂದಾಗಿಸಿದನು. ಅತ್ರಿಯ ಯಜ್ಞದಲ್ಲಿ ಇವನ ಪ್ರಭಾವದಿಂದಲೇ ಸುರರು ಧನವನ್ನು ತಂದಿದ್ದರು.
19031016a ಸ ತಾಸು ಜನಯಾಮಾಸ ಪುತ್ರಿಕಾಸು ಸನಾಮಕಾನ್ |
19031016c ದಶ ಪುತ್ರಾನ್ಮಹಾತ್ಮಾ ಸ ತಪಸ್ಯುಗ್ರೇ ರತಾನ್ಸದಾ ||
ಆ ಮಹಾತ್ಮನು ರುದ್ರಶ್ವನ ಪುತ್ರಿಗಳಲ್ಲಿ ಒಂದೇ ಹೆಸರಿನ ಹತ್ತು ಪುತ್ರರನ್ನು ಪಡೆದನು ಮತ್ತು ಅವರು ಸದಾ ಉಗ್ರ ತಪಸ್ಸಿನಲ್ಲಿ ನಿರತರಾಗಿರುತ್ತಿದ್ದರು.
19031017a ತೇ ತು ಗೋತ್ರಕರಾ ರಾಜನೃಷಯೋ ವೇದಪಾರಗಾಃ |
19031017c ಸ್ವಸ್ತ್ಯಾತ್ರೇಯಾ ಇತಿ ಖ್ಯಾತಾಃ ಕಿಂ ತ್ವತ್ರಿಂ ಧನವರ್ಜಿತಾಃ ||
ರಾಜನ್! ಆ ಋಷಿಗಳು ವೇದಪಾರಗರೂ ಗೋತ್ರಪ್ರವರ್ತಕರೂ ಆದರು. ಸ್ವಸ್ತ್ಯಾತ್ರೇಯರೆಂದು ಅವರು ಖ್ಯಾತರಾದರು. ಆದರೆ ಅವರು ಅತ್ರಿಗೋತ್ರೀ ಪಿತೃಧನದಿಂದ ವಂಚಿತರಾಗಿದ್ದರು[1].
19031018a ಕಕ್ಷೇಯೋಸ್ತನಯಾಶ್ಚಾಸಂಸ್ತ್ರಯ ಏವ ಮಹಾರಥಾಃ |
19031018c ಸಭಾನರಶ್ಚಾಕ್ಷುಷಶ್ಚ ಪರಮನ್ಯುಸ್ತಥೈವ ಚ ||
ಕಕ್ಷೇಯುವಿಗೆ ಸಭಾನರ, ಚಾಕ್ಷುಷ ಮತ್ತು ಪರಮನ್ಯು ಎಂಬ ಮೂವರು ಮಹಾರಥ ಪುತ್ರರಾದರು.
19031019a ಸಭಾನರಸ್ಯ ಪುತ್ರಸ್ತು ವಿದ್ವಾನ್ಕಾಲಾನಲೋ ನೃಪಃ |
19031019c ಕಾಲಾನಲಸ್ಯ ಧರ್ಮಜ್ಞಃ ಸೃಂಜಯೋ ನಾಮ ವೈ ಸುತಃ ||
ಸಭಾನರನ ಪುತ್ರನು ವಿದ್ವಾನ್ ನೃಪ ಕಾಲಾನಲನು. ಕಾಲಾನಲನ ಧರ್ಮಜ್ಞ ಸುತನು ಸೃಂಜಯ ಎಂಬ ಹೆಸರಿನಿಂದ ಖ್ಯಾತನಾದನು.
19031020a ಸೃಂಜಯಸ್ಯಾಭವತ್ಪುತ್ರೋ ವೀರೋ ರಾಜಾ ಪುರಂಜಯಃ |
19031020c ಜನಮೇಜಯೋ ಮಹಾರಾಜ ಪುರಂಜಯಸುತೋಽಭವತ್ ||
ಸೃಂಜಯನ ಪುತ್ರನು ವೀರ ರಾಜಾ ಪುರಂಜಯನು. ಮಹಾರಾಜ! ಜನಮೇಜಯನು ಪುರಂಜಯನ ಮಗನಾದನು.
19031021a ಜನಮೇಜಯಸ್ಯ ರಾಜರ್ಷೇರ್ಮಹಾಶಾಲೋಽಭವತ್ಸುತಃ |
19031021c ದೇವೇಷು ಸ ಪರಿಜ್ಞಾತಃ ಪ್ರತಿಷ್ಠಿತಯಶಾ ಭುವಿ ||
ರಾಜರ್ಷಿ ಜನಮೇಜಯನ ಸುತನು ಮಹಾಶಾಲನಾಗಿದ್ದನು. ಅವನು ದೇವತೆಗಳಲ್ಲಿಯೂ ವಿಖ್ಯಾತನಾಗಿದ್ದನು ಮತ್ತು ಅವನ ಯಶಸ್ಸು ಭುವಿಯಲ್ಲಿಯೂ ಪ್ರತಿಷ್ಠಿತವಾಗಿತ್ತು.
19031022a ಮಹಾಮನಾ ನಾಮ ಸುತೋ ಮಹಾಶಾಲಸ್ಯ ಧಾರ್ಮಿಕಃ |
19031022c ಜಜ್ಞೇ ವೀರಃ ಸುರಗಣೈಃ ಪೂಜಿತಃ ಸುಮಹಾಯಶಾಃ ||
ಮಹಾಶಾಲನಿಗೆ ಮಹಾಮನಾ ಎಂಬ ಧಾರ್ಮಿಕ ಸುತನಾದನು. ವೀರನಾಗಿ ಹುಟ್ಟಿದ ಆ ಸುಮಹಾಯಶಸ್ವಿಯು ಸುರಗಣಗಳಿಂದಲೂ ಸತ್ಕೃತನಾಗಿದ್ದನು.
19031023a ಮಹಾಮನಾಸ್ತು ಪುತ್ರೌ ದ್ವೌ ಜನಯಾಮಾಸ ಭಾರತ |
19031023c ಉಶೀನರಂ ಚ ಧರ್ಮಜ್ಞಂ ತಿತಿಕ್ಷುಂ ಚ ಮಹಾಬಲಮ್ ||
ಭಾರತ! ಮಹಾಮನನಿಗೆ ಇಬ್ಬರು ಪುತ್ರರು ಹುಟ್ಟಿದರು: ಧರ್ಮಜ್ಞ ಉಶೀನರ ಮತ್ತು ಮಹಾಬಲಿ ತಿತಿಕ್ಷು.
19031024a ಊಶೀನರಸ್ಯ ಪತ್ನ್ಯಸ್ತು ಪಂಚ ರಾಜರ್ಷಿವಂಶಜಾಃ |
19031024c ನೃಗಾ ಕೃಮೀ ನವಾ ದರ್ವಾ ಪಂಚಮೀ ಚ ದೃಷದ್ವತೀ ||
ಉಶೀನರನಿಗೆ ರಾಜರ್ಷಿವಂಶಗಳಲ್ಲಿ ಹುಟ್ಟಿದ ಐವರು ಪತ್ನಿಯರಿದ್ದರು: ನೃಗಾ, ಕೃಮೀ, ನವಾ, ದರ್ವಾ ಮತ್ತು ಐದನೆಯವಳು ದೃಷದ್ವತೀ.
19031025a ಉಶೀನರಸ್ಯ ಪುತ್ರಾಸ್ತು ಪಂಚ ತಾಸು ಕುಲೋದ್ವಹಾಃ |
19031025c ತಪಸಾ ವೈ ಸುಮಹತಾ ಜಾತಾ ವೃದ್ಧಸ್ಯ ಭಾರತ ||
ಭಾರತ! ಉಶೀನರನಿಗೆ ಅವರಲ್ಲಿ ಐವರು ಕುಲೋದ್ವಹ ಪುತ್ರರು ಹುಟ್ಟಿದರು. ವೃದ್ಧಾಪ್ಯದಲ್ಲಿ ಮಹಾ ತಪಸ್ಸಿನಿಂದ ಅವರು ಹುಟ್ಟಿದ್ದರು.
19031026a ನೃಗಾಯಾಸ್ತು ನೃಗಃ ಪುತ್ರಃ ಕೃಮ್ಯಾಂ ಕೃಮಿರಜಾಯತ |
19031026c ನವಾಯಾಸ್ತು ನವಃ ಪುತ್ರೋ ದರ್ವಾಯಾಃ ಸುವ್ರತೋಽಭವತ್ ||
ನೃಗಾಳಲ್ಲಿ ಹುಟ್ಟಿದ ಮಗನು ನೃಗ. ಕೃಮಿಯಲ್ಲಿ ಕೃಮಿಯು ಹುಟ್ಟಿದನು. ನವಾಳಲ್ಲಿ ನವನು ಮಗನಾದನು ಮತ್ತು ದರ್ವಾಳಲ್ಲಿ ಸುವ್ರತನು ಹುಟ್ಟಿದನು.
19031027a ದೃಷದ್ವತ್ಯಾಸ್ತು ಸಂಜಜ್ಞೇ ಶಿಬಿರೌಶೀನರೋ ನೃಪಃ |
19031027c ಶಿಬೇಸ್ತು ಶಿಬಯಸ್ತಾತ ಯೌಧೇಯಾಸ್ತು ನೃಗಸ್ಯ ಹ ||
ದೃಷದ್ವತಿಯಲ್ಲಿ ನೃಪ ಶಿಬಿ ಔಶೀನರನು ಹುಟ್ಟಿದನು. ಅಯ್ಯಾ! ಶಿಬಿಗೆ ಶಿಬಿದೇಶವು ದೊರೆಯಿತು ಮತ್ತು ನೃಗನಿಗೆ ಯೌಧೇಯ ಪ್ರದೇಶವು ದೊರೆಯಿತು.
19031028a ನವಸ್ಯ ನವರಾಷ್ಟ್ರಂ ತು ಕೃಮೇಸ್ತು ಕೃಮಿಲಾ ಪುರೀ |
19031028c ಸುವ್ರತಸ್ಯ ತಥಾಂಬಷ್ಠಾ ಶಿಬಿಪುತ್ರಾನ್ನಿಬೋಧ ಮೇ ||
ನವನಿಗೆ ನವರಾಷ್ಟ್ರ, ಕೃಮಿಗೆ ಕೃಮಿಲಾ ಪುರಿ ಮತ್ತು ಸುವ್ರತನಿಗೆ ಅಂಬಷ್ಠ ರಾಜ್ಯಗಳು ದೊರೆತವು. ಈಗ ಶಿಬಿಯ ಪುತ್ರರ ಕುರಿತು ಕೇಳು.
19031029a ಶಿಬೇಶ್ಚ ಪುತ್ರಾಶ್ಚತ್ವಾರೋ ವೀರಾಸ್ತ್ರೈಲೋಕ್ಯವಿಶ್ರುತಾಃ |
19031029c ವೃಷದರ್ಭಃ ಸುವೀರಶ್ಚ ಮದ್ರಕಃ ಕೈಕಯಸ್ತಥಾ ||
ಶಿಬಿಗೆ ನಾಲ್ವರು ತ್ರೈಲೋಕ್ಯವಿಶ್ರುತ ವೀರ ಪುತ್ರರಿದ್ದರು: ವೃಷದರ್ಭ, ಸುವೀರ, ಮದ್ರಕ ಮತ್ತು ಕೈಕಯ.
19031030a ತೇಷಾಂ ಜನಪದಾಃ ಸ್ಫೀತಾಃ ಕೇಕಯಾ ಮದ್ರಕಾಸ್ತಥಾ |
19031030c ವೃಷದರ್ಭಾಃ ಸುವೀರಾಶ್ಚ ತಿತಿಕ್ಷೋಸ್ತು ಪ್ರಜಾಃ ಶೃಣು ||
ಇವರ ಸಮೃದ್ಧಶಾಲೀ ಜನಪದಗಳು ಅವರದ್ದೇ ಹೆಸರಿನಿಂದ ಪ್ರಸಿದ್ಧವಾದವು: ಕೇಕಯಾ, ಮದ್ರಕಾ, ವೃಷದರ್ಭಾ, ಮತ್ತು ಸುವೀರ ರಾಷ್ಟ್ರಗಳು. ತಿತಿಕ್ಷುವಿನ ಸಂತಾನಗಳ ಕುರಿತು ಕೇಳು.
19031031a ತೈತಿಕ್ಷವೋಽಭವದ್ರಾಜಾ ಪೂರ್ವಸ್ಯಾಂ ದಿಶಿ ಭಾರತ |
19031031c ಉಷದ್ರಥೋ ಮಹಾಬಾಹುಸ್ತಸ್ಯ ಫೇನಃ ಸುತೋಽಭವತ್ ||
ಭಾರತ! ತಿತಿಕ್ಷುವಿನ ಪುತ್ರ ಮಹಾಬಾಹು ಉಷದ್ರಥನು ಆದನು. ಅವನು ಪೂರ್ವದಿಕ್ಕಿನ ರಾಜನಾಗಿದ್ದನು. ಫೇನನು ಅವನ ಮಗನಾಗಿದ್ದನು.
19031032a ಫೇನಾತ್ತು ಸುತಪಾ ಜಜ್ಞೇ ಸುತಃ ಸುತಪಸೋ ಬಲಿಃ |
19031032c ಜಾತೋ ಮಾನುಷಯೋನೌ ತು ಸ ರಾಜಾ ಕಾಂಚನೇಷುಧೀಃ||
ಫೇನನಿಗೆ ಸುತಪನು ಹುಟ್ಟಿದನು. ಸುತಪನ ಪುತ್ರನು ಬಲಿಯು. ದಾನವರಾಜ ಬಲಿಯೇ ಮನುಷ್ಯಯೋನಿಯಲ್ಲಿ ಜನ್ಮತಾಳಿದ್ದನು. ಅವನು ಕಾಂಚನದ ಬತ್ತಳಿಕೆಯನ್ನು ಹೊಂದಿದ್ದನು.
19031033a ಮಹಾಯೋಗೀ ಸ ತು ಬಲಿರ್ಬಭೂವ ನೃಪತಿಃ ಪುರಾ |
19031033c ಪುತ್ರಾನುತ್ಪಾದಯಾಮಾಸ ಪಂಚ ವಂಶಕರಾನ್ಭುವಿ ||
ಪೂರ್ವಕಾಲದಲ್ಲಿ ನೃಪತಿ ಬಲಿಯು ಮಹಾಯೋಗಿಯಾಗಿದ್ದನು. ಅವನು ಭುವಿಯಲ್ಲಿ ಐವರು ಪುತ್ರರನ್ನು ಹುಟ್ಟಿಸಿದನು.
19031034a ಅಂಗಃ ಪ್ರಥಮತೋ ಜಜ್ಞೇ ವಂಗಃ ಸುಹ್ಮಸ್ತಥೈವ ಚ |
19031034c ಪುಂಡ್ರಃ ಕಲಿಂಗಶ್ಚ ತಥಾ ಬಾಲೇಯಂ ಕ್ಷತ್ರಮುಚ್ಯತೇ ||
ಅಂಗನು ಪ್ರಥಮನು. ಅನಂತರ ಕ್ರಮಶಃ ವಂಗ, ಸುಹ್ಮ, ಪುಂಡ್ರ ಮತ್ತು ಕಲಿಂಗ. ಇವರೆಲ್ಲರೂ ಬಾಲೇಯ ಕ್ಷತ್ರಿಯರೆಂದು ಕರೆಯಲ್ಪಡುತ್ತಾರೆ.
19031035a ಬಾಲೇಯಾ ಬ್ರಾಹ್ಮಣಾಶ್ಚೈವ ತಸ್ಯ ವಂಶಕರಾ ಭುವಿ |
19031035c ಬಲೇಸ್ತು ಬ್ರಹ್ಮನಾ ದತ್ತಾ ವರಾಃ ಪ್ರೀತೇನ ಭಾರತ ||
ಭಾರತ! ಬಲಿಯ ಕುಲದಲ್ಲಿ ಬಾಲೇಯ ಬ್ರಾಹ್ಮಣರೂ ಆದರು. ಅವರು ಭುವಿಯಲ್ಲಿ ಅವನ ವಂಶವನ್ನು ವೃದ್ಧಿಸಿದರು. ಬ್ರಹ್ಮನು ಪ್ರೀತನಾಗಿ ಬಲಿಗೆ ಈ ವರವನ್ನಿತ್ತಿದ್ದನು:
19031036a ಮಹಾಯೋಗಿತ್ವಮಾಯುಶ್ಚ ಕಲ್ಪಸ್ಯ ಪರಿಮಾಣತಃ |
19031036c ಸಂಗ್ರಾಮೇ ವಾಪ್ಯಜೇಯತ್ವಂ ಧರ್ಮಂ ಚೈವ ಪ್ರಧಾನತಾ ||
“ನೀನು ಮಹಾಯೋಗಿಯಾಗುವೆ. ನಿನ್ನ ಆಯಸ್ಸು ಒಂದು ಕಲ್ಪದವರೆಗೆ ಇರುತ್ತದೆ. ನೀನು ಯುದ್ಧದಲ್ಲಿ ಅಜೇಯನಾಗುವೆ, ನಿನಗೆ ಧರ್ಮವೇ ಪ್ರಧಾನವಾಗಿರುವುದು.
19031037a ತ್ರೈಲೋಕ್ಯದರ್ಶನಮ್ ಚೈವ ಪ್ರಾಧಾನ್ಯಂ ಪ್ರಸವೇ ತಥಾ |
19031037c ಬಲೇ ಚಾಪ್ರತಿಮತ್ವಂ ವೈ ಧರ್ಮತತ್ತ್ವಾರ್ಥದರ್ಶನಂ ||
ನಿನಗೆ ಮೂರೂ ಲೋಕಗಳೂ ಕಾಣಿಸುತ್ತವೆ. ನಿನ್ನ ಸಂತಾನವು ಪ್ರಾಧಾನ್ಯತೆಯನ್ನು ಪಡೆದುಕೊಳ್ಳುತ್ತದೆ. ಬಲದಲ್ಲಿ ನೀನು ಅಪ್ರತಿಮನಾಗಿರುವೆ. ನಿನಗೆ ಧರ್ಮತತ್ತ್ವಾರ್ಥಗಳ ದರ್ಶನವಾಗುತ್ತದೆ.
19031038a ಚತುರೋ ನಿಯತಾನ್ವರ್ಣಾಂಸ್ತ್ವಂ ಚ ಸ್ಥಾಪಯಿತಾ ಭುವಿ |
19031038c ಇತ್ಯುಕ್ತೋ ವಿಭುನಾ ರಾಜಾ ಬಲಿಃ ಶಾಂತಿಂ ಪರಾಮ್ ಯಯೌ ||
ನೀನು ಭುವಿಯಲ್ಲಿ ನಾಲ್ಕೂ ವರ್ಣದವರನ್ನು ನಿಯಂತ್ರಿಸಿ ಅವರನ್ನು ಮರ್ಯಾದೆಗಳ ಒಳಗೇ ಸ್ಥಾಪಿಸುತ್ತೀಯೆ.” ವಿಭುವು ಹೀಗೆ ಹೇಳಲು ರಾಜಾ ಬಲಿಯು ಪರಮ ಶಾಂತಿಯನ್ನು ಹೊಂದಿದನು.
19031039a ತಸ್ಯ ತೇ ತನಯಾಃ ಸರ್ವೇ ಕ್ಷೇತ್ರಜಾ ಮುನಿಪುಂಗವಾತ್ |
19031039c ಸಂಭೂತಾ ದೀರ್ಘತಪಸಃ ಸುದೇಷ್ಣಾಯಾಂ ಮಹೌಜಸಃ ||
ಅವನ ಮಕ್ಕಳೆಲ್ಲರೂ ಕ್ಷೇತ್ರಜರಾಗಿದ್ದರು. ಮುನಿಪುಂಗವ ದೀರ್ಘತಪಸನಿಂದ ಸುದೇಷ್ಣಾಳ ಗರ್ಭದಲ್ಲಿ ಜನಿಸಿದ್ದರು. ಎಲ್ಲರೂ ಮಹೌಜಸರಾಗಿದ್ದರು.
19031040a ಬಲಿಸ್ತಾನಭಿಶಿಚ್ಯೇಹ ಪಂಚ ಪುತ್ರಾನಕಲ್ಮಷಾನ್ |
19031040c ಕೃತಾರ್ಥಃ ಸೋಽಪಿ ಯೋಗಾತ್ಮಾ ಯೋಗಮಾಶೃತ್ಯ ಸ ಪ್ರಭುಃ ||
19031041a ಅಧೃಷ್ಯಃ ಸರ್ವಭೂತಾನಾಂ ಕಾಲಾಪೇಕ್ಷೀ ಚರನ್ನಪಿ |
19031041c ಕಾಲೇನ ಮಹತಾ ರಾಜನ್ಸ್ವಂ ಚ ಸ್ಥಾನಮುಪಾಗಮತ್ ||
ಬಲಿಯಾದರೋ ಆ ಐವರು ಅಕಲ್ಮಷ ಪುತ್ರರನ್ನು ಅಭಿಷೇಕಿಸಿ ಕೃತಾರ್ಥನಾದನು. ಆ ಪ್ರಭು ಯೋಗಾತ್ಮನು ಯೋಗವನ್ನು ಆಶ್ರಯಿಸಿ ಸರ್ವಭೂತಗಳಿಗೂ ಅಜೇಯನಾಗಿದ್ದನು. ಕಾಲವನ್ನು ಅಪೇಕ್ಷಿಸುತ್ತಾ ಸಂಚರಿಸುತ್ತಿದ್ದನು. ರಾಜನ್! ದೀರ್ಘಕಾಲದ ನಂತರ ಅವನಿಗೆ ತನ್ನ ಸ್ಥಾನವಾದ ಸುತಲಲೋಕವು ದೊರಕಿತು.
19031042a ತೇಷಾಂ ಜನಪದಾಃ ಪಂಚ ಅಂಗಾ ವಂಗಾಃ ಸಸುಹ್ಮಕಾಃ |
19031042c ಕಲಿಂಗಾಃ ಪುಂಡ್ರಕಾಶ್ಚೈವ ಪ್ರಜಾಸ್ತ್ವಂಗಸ್ಯ ಮೇ ಶೃಣು ||
ಬಲಿಯ ಐವರು ಪುತ್ರರ ಐದು ಜನಪದಗಳು ಇಂತಿವೆ: ಅಂಗ, ವಂಗ, ಸುಹ್ಮಕ, ಕಲಿಂಗ ಮತ್ತು ಪುಂಡ್ರಕ. ಈಗ ಅಂಗನ ಸಂತಾನದ ಕುರಿತು ಕೇಳು.
19031043a ಅಂಗಪುತ್ರೋ ಮಹಾನಾಸೀದ್ರಾಜೇಂದ್ರೋ ದಧಿವಾಹನಃ |
19031043c ದಧಿವಾಹನಪುತ್ರಸ್ತು ರಾಜಾ ದಿವಿರಥೋಽಭವತ್ ||
ಮಹಾನ್ ರಾಜೇಂದ್ರ ದಧಿವಾಹನನು ಅಂಗಪುತ್ರನಾಗಿದ್ದನು. ರಾಜಾ ದಿವಿರಥನು ದಧಿವಾನನನ ಪುತ್ರನಾದನು.
19031044a ಪುತ್ರೋ ದಿವಿರಥಸ್ಯಾಸೀಚ್ಛಕ್ರತುಲ್ಯಪರಾಕ್ರಮಃ |
19031044c ವಿದ್ವಾಂಧರ್ಮರಥೋ ನಾಮ ತಸ್ಯ ಚಿತ್ರರಥಃ ಸುತಃ ||
ದಿವಿರಥನ ಪುತ್ರನು ಶಕ್ರತುಲ್ಯ ಪರಾಕ್ರಮಿಯಾಗಿದ್ದನು. ಆ ವಿದ್ವಾನನ ಹೆಸರು ಧರ್ಮರಥನೆಂದಿತ್ತು. ಚಿತ್ರರಥನು ಅವನ ಮಗನು.
19031045a ತೇನ ಚಿತ್ರರಥೇನಾಥ ತದಾ ವಿಷ್ಣುಪದೇ ಗಿರೌ |
19031045c ಯಜತಾ ಸಹ ಶಕ್ರೇಣ ಸೋಮಃ ಪೀತೋ ಮಹಾತ್ಮನಾ ||
ಚಿತ್ರರಥನು ವಿಷ್ಣುಪದ ಗಿರಿಯಲ್ಲಿ ಯಜ್ಞವನ್ನು ನಡೆಸಿದಾಗ ಆ ಮಹಾತ್ಮನು ಶಕ್ರನೊಂದಿಗೆ ಸೋಮವನ್ನು ಕುಡಿದಿದ್ದನು.
19031046a ಅಥ ಚಿತ್ರರಥಸ್ಯಾಪಿ ಪುತ್ರೋ ದಶರಥೋಽಭವತ್ |
19031046c ಲೋಮಪಾದ ಇತಿ ಖ್ಯಾತೋ ಯಸ್ಯ ಶಾಂತಾ ಸುತಾಭವತ್||
ಚಿತ್ರರಥನ ಪುತ್ರನು ದಶರಥನಾದನು. ಅವನು ಲೋಮಪಾದನೆಂದು ಖ್ಯಾತನಾಗಿದ್ದನು. ಅವನ ಮಗಳು ಶಾಂತಾ.
19031047a ತಸ್ಯ ದಾಶರಥಿರ್ವೀರಶ್ಚತುರಂಗೋ ಮಹಾಯಶಾಃ |
19031047c ಋಶ್ಯಶೃಂಗಪ್ರಸಾದೇನ ಜಜ್ಞೇ ಕುಲವಿವರ್ಧನಃ ||
ಆ ಲೋಮಪಾದ ದಶರಥನ ಮಗನು ಮಹಾಯಶಸ್ವೀ ವೀರ ಚತುರಂಗನು. ಆ ಕುಲವಿವರ್ಧನನು ಋಷ್ಯಶೃಂಗನ ಪ್ರಸಾದದಿಂದ ಹುಟ್ಟಿದ್ದನು.
19031048a ಚತುರಂಗಸ್ಯ ಪುತ್ರಸ್ತು ಪೃಥುಲಾಕ್ಷ ಇತಿ ಸ್ಮೃತಃ |
19031048c ಪೃಥುಲಾಕ್ಷಸುತೋ ರಾಜಾ ಚಂಪೋ ನಾಮಾ ಮಹಾಯಶಾಃ||
ಚತುರಂಗನ ಪುತ್ರನು ಪೃಥುಲಾಕ್ಷ ಎಂದು ಹೇಳುತ್ತಾರೆ. ಪೃಥುಲಾಕ್ಷನ ಮಗನು ಚಂಪಾ ಎಂಬ ಹೆಸರಿನ ಮಹಾಯಶಸ್ವೀ ರಾಜನು.
19031049a ಚಂಪಸ್ಯ ತು ಪುರೀ ಚಂಪಾ ಯಾ ಮಾಲಿನ್ಯಭವತ್ಪುರಾ |
19031049c ಪೂರ್ಣಭದ್ರಪ್ರಸಾದೇನ ಹರ್ಯಂಗೋಽಸ್ಯ ಸುತೋಽಭವತ್||
ಚಂಪನ ಪುರಿಯು ಚಂಪಾ ಎಂದಾಯಿತು. ಅದು ಹಿಂದೆ ಮಾಲಿನಿ ಎಂಬ ಹೆಸರನ್ನು ಪಡೆದಿತ್ತು. ಋಷಿ ಪೂರ್ಣಭದ್ರನ ಪ್ರಸಾದದಿಂದ ಅವನಿಗೆ ಹರ್ಯಂಗ ಎಂಬ ಸುತನಾದನು.
19031050a ತತೋ ವೈಭಾಂಡಕಿಸ್ತಸ್ಯ ವಾರಣಂ ಶಕ್ರವಾರಣಮ್ |
19031050c ಅವತಾರಯಾಮಾಸ ಮಹೀಂ ಮಂತ್ರೈರ್ವಾಹನಮುತ್ತಮಮ್||
ಆಗ ವಿಭಾಂಡಕ ಮುನಿಯ ಪುತ್ರ ಋಷ್ಯಶೃಂಗನು ಅವನಿಗಾಗಿ ಉತ್ತಮ ವಾಹನ ಶಕ್ರನ ಆನೆ ಐರಾವತವನ್ನು ಮಂತ್ರಗಳ ಮೂಲಕ ಭೂಮಿಗೆ ಇಳಿಸಿದ್ದನು.
19031051a ಹರ್ಯಂಗಸ್ಯ ತು ದಾಯಾದೋ ರಾಜಾ ಭದ್ರರಥಃ ಸ್ಮೃತಃ |
19031051c ಪುತ್ರೋ ಭದ್ರರಥಸ್ಯಾಸೀದ್ಬೃಹತ್ಕರ್ಮಾ ಪ್ರಜೇಶ್ವರಃ ||
ಹರ್ಯಂಗನ ಪುತ್ರನು ರಾಜಾ ಭದ್ರರಥನಾದನು. ಭದ್ರರಥನ ಪುತ್ರನು ಪ್ರಜೇಶ್ವರ ಬೃಹತ್ಕರ್ಮನಾದನು.
19031052a ಬೃಹದ್ದರ್ಭಃ ಸುತಸ್ತಸ್ಯ ತಸ್ಮಾಜ್ಜಜ್ಞೇ ಬೃಹನ್ಮನಾಃ |
19031052c ಬೃಹನ್ಮನಾಸ್ತು ರಾಜೇಂದ್ರ ಜನಯಾಮಾಸ ವೈ ಸುತಮ್ ||
19031053a ನಾಮ್ನಾ ಜಯದ್ರಥಂ ನಾಮ ಯಸ್ಮಾದ್ದೃಢರಥೋ ನೃಪಃ |
ಬೃಹತ್ಕರ್ಮನ ಮಗನು ಬೃಹದ್ದರ್ಭನು. ಅವನಿಗೆ ಬೃಹನ್ಮನನು ಹುಟ್ಟಿದನು. ರಾಜೇಂದ್ರ! ಬೃಹನ್ಮನನು ಜಯದ್ರಥನೆಂಬ ಹೆಸರಿನ ಪುತ್ರನನ್ನು ಹುಟ್ಟಿಸಿದನು. ಅವನ ಮಗನು ನೃಪ ದೃಢರಥನು.
19031053c ಆಸೀದ್ದೃಢರಥಸ್ಯಾಪಿ ವಿಶ್ವಜಿಜ್ಜನಮೇಜಯ |
19031054a ದಾಯಾದಸ್ತಸ್ಯ ಕರ್ಣಸ್ತು ವಿಕರ್ಣಸ್ತಸ್ಯ ಚಾತ್ಮಜಃ ||
19031054c ತಸ್ಯ ಪುತ್ರಶತಂ ತ್ವಾಸೀದಂಗಾನಾಂ ಕುಲವರ್ಧನಮ್ |
ಜನಮೇಜಯ! ದೃಢರಥನ ಮಗನು ವಿಶ್ವಜಿತುವು. ಅವನ ಮಗನು ಕರ್ಣ ಮತ್ತು ಅವನ ಮಗನು ವಿಕರ್ಣ. ವಿಕರ್ಣನಿಗೆ ನೂರು ಮಕ್ಕಳಿದ್ದರು. ಅವರು ಅಂಗರ ಕುಲವರ್ಧನರಾಗಿದ್ದರು.
19031054e ಬೃಹದ್ದರ್ಭಸುತೋ ಯಸ್ತು ರಾಜಾ ನಾಮ್ನಾ ಬೃಹನ್ಮನಾಃ ||
19031055a ತಸ್ಯ ಪತ್ನೀದ್ವಯಂ ಚಾಸೀಚ್ಚೈದ್ಯಸ್ಯೈತೇ ಸುತೇ ಶುಭೇ |
19031055c ಯಶೋದೇವೀ ಚ ಸತ್ಯಾ ಚ ತಾಭ್ಯಾಂ ವಂಶಸ್ತು ಭಿದ್ಯತೇ ||
ಬೃಹದ್ದರ್ಭನ ಮಗ ಬೃಹನ್ಮನಾ ಎಂಬ ಹೆಸರಿನ ಯಾವ ರಾಜನಿದ್ದನೋ ಅವನಿಗೆ ಇಬ್ಬರು ಪತ್ನಿಯರಿದ್ದರು. ಇಬ್ಬರೂ ಚೇದಿರಾಜನ ಶುಭ ಸುತೆಯರು: ಯಶೋದೇವೀ ಮತ್ತು ಸತ್ಯಾ. ಅವರಿಬ್ಬರಿಂದ ವಂಶವು ಒಡೆಯಿತು.
19031056a ಜಯದ್ರಥಸ್ತು ರಾಜೇಂದ್ರ ಯಶೋದೇವ್ಯಾಂ ವ್ಯಜಾಯತ |
19031056c ಬ್ರಹ್ಮಕ್ಷತ್ರೋತ್ತರಃ ಸತ್ಯಾಂ ವಿಜಯೋ ನಾಮ ವಿಶ್ರುತಃ ||
ರಾಜೇಂದ್ರ! ಜಯದ್ರಥನು ಯಶೋದೇವಿಯಲ್ಲಿ ಹುಟ್ಟಿದನು. ಬೃಹನ್ಮನನ ಇನ್ನೊಬ್ಬ ಪುತ್ರನು ಸತ್ಯೆಯಲ್ಲಿ ಹುಟ್ಟಿದನು. ಅವನು ವಿಜಯ ಎಂಬ ನಾಮದಿಂದ ವಿಶ್ರುತನಾದನು. ಅವನು ಬ್ರಾಹ್ಮಣ-ಕ್ಷತ್ರಿಯ ಗುಣಗಳಿಂದ ಉತ್ಕೃಷ್ಟನಾಗಿದ್ದನು.
19031057a ವಿಜಯಸ್ಯ ಧೃತಿಃ ಪುತ್ರಸ್ತಸ್ಯ ಪುತ್ರೋ ಧೃತವ್ರತಃ |
19031057c ಧೃತವ್ರತಸ್ಯ ಪುತ್ರಸ್ತು ಸತ್ಯಕರ್ಮಾ ಮಹಾಯಶಾಃ ||
ವಿಜಯನ ಪುತ್ರನು ಧೃತಿ. ಅವನ ಪುತ್ರನು ಧೃತವ್ರತ. ಧೃತವ್ರತನ ಪುತ್ರನು ಮಹಾಯಶಸ್ವೀ ಸತ್ಯಕರ್ಮ.
19031058a ಸತ್ಯಕರ್ಮಸುತಶ್ಚಾಪಿ ಸೂತಸ್ತ್ವಧಿರಥಸ್ತು ವೈ |
19031058c ಯಃ ಕರ್ಣಂ ಪ್ರತಿ ಜಗ್ರಾಹ ತತಃ ಕರ್ಣಸ್ತು ಸೂತಜಃ ||
ಸತ್ಯಕರ್ಮನ ಸುತನು ಸೂತ ಅಧಿರಥನು. ಅವನು ಕರ್ಣನನ್ನು ಮಗನನ್ನಾಗಿ ಸ್ವೀಕರಿಸಿದ್ದನು. ಅದರಿಂದಾಗಿ ಕರ್ಣನು ಸೂತಜನೆಂದಾಗಿದ್ದನು.
19031059a ಏತದ್ವಃ ಕಥಿತಂ ಸರ್ವಂ ಕರ್ಣಂ ಪ್ರತಿ ಮಹಾಬಲಮ್ |
19031059c ಕರ್ಣಸ್ಯ ವೃಷಸೇನಸ್ತು ವೃಷಸ್ತಸ್ಯಾತ್ಮಜಃ ಸ್ಮೃತಃ ||
ಈ ಎಲ್ಲವನ್ನೂ ನಾನು ನಿನಗೆ ಮಹಾಬಲೀ ಕರ್ಣನ ವಿಷಯದಲ್ಲಿ ಹೇಳಿದ್ದೇನೆ. ಕರ್ಣನ ಪುತ್ರನು ವೃಷಸೇನನಾದನು. ವೃಷಸೇನನ ಪುತ್ರನು ವೃಷ ಎಂದು ಹೇಳುತ್ತಾರೆ.
19031060a ಏತೇಽಂಗವಂಶಜಾಃ ಸರ್ವೇ ರಾಜಾನಃ ಕೀರ್ತಿತಾ ಮಯಾ |
19031060c ಸತ್ಯವ್ರತಾ ಮಹಾತ್ಮಾನಃ ಪ್ರಜಾವಂತೋ ಮಹಾರಥಾಃ ||
ಈ ಎಲ್ಲ ಅಂಗವಂಶಜ ರಾಜರ ಕುರಿತು ನಾನು ಹೇಳಿದ್ದೇನೆ. ಆ ಮಹಾರಥರು ಮಹಾತ್ಮರೂ ಸತ್ಯವ್ರತರೂ ಮತ್ತು ಪ್ರಜಾವಂತರೂ ಆಗಿದ್ದರು.
19031061a ಋಚೇಯೋಸ್ತು ಮಹಾರಾಜ ರೌದ್ರಾಶ್ವತನಯಸ್ಯ ಹ |
19031061c ಶೃಣು ವಂಶಮನುಪ್ರೋಕ್ತಂ ಯತ್ರ ಜಾತೋಽಸಿ ಪಾರ್ಥಿವ ||
ಪಾರ್ಥಿವ! ಮಹಾರಾಜ! ಈಗ ನೀನು ಹುಟ್ಟಿರುವ ರೌದ್ರಾಶ್ವನ ಪುತ್ರ ಋಚೇಯುವಿನ ವಂಶದ ಕುರಿತು ಹೇಳುತ್ತೇನೆ. ಕೇಳು.”
ಇತಿ ಶ್ರೀಮಹಾಭಾರತೇ ಖಿಲೇಷು ಹರಿವಂಶೇ ಹರಿವಂಶಪರ್ವಣಿ ಕುಕ್ಷೇಯುವಂಶಾನುಕೀರ್ತನಂ ನಾಮ ಏಕತ್ರಿಂಶೋಽಧ್ಯಾಯಃ|

[1] ಏಕೆಂದರೆ ಪುತ್ರಿಕಾ ಧರ್ಮದ ಪ್ರಕಾರ ಅವರು ಅವರ ತಾಯಿಯ ತಂದೆಯ ಸಂತಾನವಾಗಿದ್ದರು.