Drona Parva: Chapter 156

ದ್ರೋಣ ಪರ್ವ: ಘಟೋತ್ಕಚವಧ ಪರ್ವ

೧೫೬

ಕೃಷ್ಣ-ಅರ್ಜುನರ ಸಂವಾದ (೧-೩೩).

07156001 ಅರ್ಜುನ ಉವಾಚ|

07156001a ಕಥಮಸ್ಮದ್ಧಿತಾರ್ಥಂ ತೇ ಕೈಶ್ಚ ಯೋಗೈರ್ಜನಾರ್ದನ|

07156001c ಜರಾಸಂಧಪ್ರಭೃತಯೋ ಘಾತಿತಾಃ ಪೃಥಿವೀಷ್ವರಾಃ||

ಅರ್ಜುನನು ಹೇಳಿದನು: “ಜನಾರ್ದನ! ನಮಗಾಗಿ ನೀನು ಜರಾಸಂಧನೇ ಮೊದಲಾದ ಪೃಥಿವೀಪಾಲರನ್ನು ಯಾವ ಯಾವ ಉಪಾಯಗಳಿಂದ ಸಂಹರಿಸಿದೆ?”

07156002 ವಾಸುದೇವ ಉವಾಚ|

07156002a ಜರಾಸಂಧಶ್ಚೇದಿರಾಜೋ ನೈಷಾದಿಶ್ಚ ಮಹಾಬಲಃ|

07156002c ಯದಿ ಸ್ಯುರ್ನ ಹತಾಃ ಪೂರ್ವಮಿದಾನೀಂ ಸ್ಯುರ್ಭಯಂಕರಾಃ||

ವಾಸುದೇವನು ಹೇಳಿದನು: “ಒಂದುವೇಳೆ ಈ ಮೊದಲೇ ಜರಾಸಂಧ, ಚೇದಿರಾಜ ಮತ್ತು ಮಹಾಬಲ ನೈಷಾದರು ಹತರಾಗಿರದಿದ್ದರೆ ಈಗ ಅವರು ನಮಗೆ ಅತಿ ಭಯಂಕರರಾಗಿರುತ್ತಿದ್ದರು.

07156003a ಸುಯೋಧನಸ್ತಾನವಶ್ಯಂ ವೃಣುಯಾದ್ರಥಸತ್ತಮಾನ್|

07156003c ತೇಽಸ್ಮಾಭಿರ್ನಿತ್ಯಸಂದುಷ್ಟಾಃ ಸಂಶ್ರಯೇಯುಶ್ಚ ಕೌರವಾನ್||

ಅವಶ್ಯವಾಗಿ ಸುಯೋಧನನು ಆ ರಥಸತ್ತಮರನ್ನು ತನ್ನ ಕಡೆಯವರನ್ನಾಗಿಯೇ ಆರಿಸಿಕೊಳ್ಳುತ್ತಿದ್ದನು. ನಮಗೆ ನಿತ್ಯವೈರಿಗಳಾಗಿದ್ದ ಅವರೂ ಕೂಡ ಕೌರವರನ್ನೇ ಸೇರಿಕೊಳ್ಳುತ್ತಿದ್ದರು.

07156004a ತೇ ಹಿ ವೀರಾ ಮಹಾತ್ಮಾನಃ ಕೃತಾಸ್ತ್ರಾ ದೃಢಯೋಧಿನಃ|

07156004c ಧಾರ್ತರಾಷ್ಟ್ರೀಂ ಚಮೂಂ ಕೃತ್ಸ್ನಾಂ ರಕ್ಷೇಯುರಮರಾ ಇವ||

ಆ ಕೃತಾಸ್ತ್ರ, ಧೃಢಯೋಧಿ ಮಹಾತ್ಮರು ಅಮರರಂತೆ ಧಾರ್ತರಾಷ್ಟ್ರರ ಈ ಸೇನೆಯೆಲ್ಲವನ್ನೂ ರಕ್ಷಿಸುತ್ತಿದ್ದರು.

07156005a ಸೂತಪುತ್ರೋ ಜರಾಸಂಧಶ್ಚೇದಿರಾಜೋ ನಿಷಾದಜಃ|

07156005c ಸುಯೋಧನಂ ಸಮಾಶ್ರಿತ್ಯ ತಪೇರನ್ಪೃಥಿವೀಮಿಮಾಂ||

ಸೂತಪುತ್ರ, ಜರಾಸಂಧ, ಚೇದಿರಾಜ ಮತ್ತು ನಿಷಾದಜರು ಸುಯೋಧನನನ್ನು ಸಮಾಶ್ರಯಿಸಿ ಈ ಪೃಥ್ವಿಯೆಲ್ಲವನ್ನೂ ಕಾಡುತ್ತಿದ್ದರು.

07156006a ಯೋಗೈರಪಿ ಹತಾ ಯೈಸ್ತೇ ತಾನ್ಮೇ ಶೃಣು ಧನಂಜಯ|

07156006c ಅಜಯ್ಯಾ ಹಿ ವಿನಾ ಯೋಗೈರ್ಮೃಧೇ ತೇ ದೈವತೈರಪಿ||

ಧನಂಜಯ! ಉಪಾಯಗಳಿಂದಲ್ಲದೇ ದೇವತೆಗಳಿಂದಲೂ ರಣದಲ್ಲಿ ಜಯಿಸಲ್ಪಡತಕ್ಕವರಾಗಿರದ ಅವರು ನನ್ನ ಯಾವ ಯಾವ ಉಪಾಯಗಳಿಂದ ಹತರಾದರೆನ್ನುವುದನ್ನು ಕೇಳು.

07156007a ಏಕೈಕೋ ಹಿ ಪೃಥಕ್ತೇಷಾಂ ಸಮಸ್ತಾಂ ಸುರವಾಹಿನೀಂ|

07156007c ಯೋಧಯೇತ್ಸಮರೇ ಪಾರ್ಥ ಲೋಕಪಾಲಾಭಿರಕ್ಷಿತಾಂ||

ಪಾರ್ಥ! ಅವರಲ್ಲಿ ಒಬ್ಬೊಬ್ಬರೂ ಪ್ರತ್ಯೇಕವಾಗಿ ಸಮರದಲ್ಲಿ ಲೋಕಪಾಲರಿಂದ ರಕ್ಷಿತ ಸಮಸ್ತ ಸುರವಾಹಿನಿಯೊಂದಿಗೂ ಯುದ್ಧಮಾಡಬಲ್ಲತಕ್ಕವರಾಗಿದ್ದರು.

07156008a ಜರಾಸಂಧೋ ಹಿ ರುಷಿತೋ ರೌಹಿಣೇಯಪ್ರಧರ್ಷಿತಃ|

07156008c ಅಸ್ಮದ್ವಧಾರ್ಥಂ ಚಿಕ್ಷೇಪ ಗದಾಂ ವೈ ಲೋಹಿತಾಮುಖೀಂ||

ಹಿಂದೊಮ್ಮೆ ರೌಹಿಣೇಯ ಬಲರಾಮನು ಆಕ್ರಮಣಿಸಿದ್ದಾಗ ಕ್ರೋಧದಿಂದ ಜರಾಸಂಧನು ನಮ್ಮನ್ನು ವಧಿಸಲೋಸುಗ ಉಕ್ಕಿನ ತುದಿಯುಳ್ಳ ಗದೆಯನ್ನು ನಮ್ಮ ಮೇಲೆ ಎಸೆದನು.

07156009a ಸೀಮಂತಮಿವ ಕುರ್ವಾಣಾಂ ನಭಸಃ ಪಾವಕಪ್ರಭಾಂ|

07156009c ವ್ಯದೃಶ್ಯತಾಪತಂತೀ ಸಾ ಶಕ್ರಮುಕ್ತಾ ಯಥಾಶನಿಃ||

ಶಕ್ರನು ಬಿಟ್ಟ ವಜ್ರದೋಪಾದಿಯಲ್ಲಿ ಅಗ್ನಿಯಪ್ರಭೆಯುಳ್ಳ ಆ ಶಕ್ತ್ಯಾಯುಧವು ಬೈತಲೆಯಂತೆ ಆಕಾಶವನ್ನು ಸೀಳುತ್ತಾ ನಮ್ಮ ಮೇಲೆ ಬೀಳುತ್ತಿರುವುದನ್ನು ಕಂಡೆವು.

07156010a ತಾಮಾಪತಂತೀಂ ದೃಷ್ಟ್ವೈವ ಗದಾಂ ರೋಹಿಣಿನಂದನಃ|

07156010c ಪ್ರತಿಘಾತಾರ್ಥಮಸ್ತ್ರಂ ವೈ ಸ್ಥೂಣಾಕರ್ಣಮವಾಸೃಜತ್||

ಅದು ಬೀಳುತ್ತಿರುವುದನ್ನು ನೋಡಿ ರೋಹಿಣೀನಂದನನು ಅದನ್ನು ತುಂಡರಿಸಲು ಸ್ಥೂಣಾಕರ್ಣವೆಂಬ ಅಸ್ತ್ರವನ್ನು ಪ್ರಯೋಗಿಸಿದನು.

07156011a ಅಸ್ತ್ರವೇಗಪ್ರತಿಹತಾ ಸಾ ಗದಾ ಪ್ರಾಪತದ್ಭುವಿ|

07156011c ದಾರಯಂತೀ ಧರಾಂ ದೇವೀಂ ಕಂಪಯಂತೀವ ಪರ್ವತಾನ್||

ಅಸ್ತ್ರವೇಗದಿಂದ ಪ್ರತಿಹತ ಆ ಗದೆಯು ಪರ್ವತಗಳನ್ನೇ ಕಂಪಿಸುವಂತೆ ಭೂಮಿಯನ್ನು ಸೀಳಿ ಹೊಕ್ಕಿತು.

07156012a ತತ್ರ ಸ್ಮ ರಾಕ್ಷಸೀ ಘೋರಾ ಜರಾ ನಾಮಾಶುವಿಕ್ರಮಾ|

07156012c ಸಂಧಯಾಮಾಸ ತಂ ಜಾತಂ ಜರಾಸಂಧಮರಿಂದಮಂ||

ಅಲ್ಲಿಯೇ ವಜ್ರದ ವಿಕ್ರಮವುಳ್ಳ ಘೋರ ಜರಾ ಎಂಬ ಹೆಸರಿನ ರಾಕ್ಷಸಿಯಿದ್ದಳು. ಅವಳೇ ಅರಿಂದಮ ಜರಾಸಂಧನು ಹುಟ್ಟಿದಾಗ ಅವನನ್ನು ಒಂದುಗೂಡಿಸಿದ್ದಳು.

07156013a ದ್ವಾಭ್ಯಾಂ ಜಾತೋ ಹಿ ಮಾತೃಭ್ಯಾಮರ್ಧದೇಹಃ ಪೃಥಕ್ಪೃಥಕ್|

07156013c ತಯಾ ಸ ಸಂಧಿತೋ ಯಸ್ಮಾಜ್ಜರಾಸಂಧಸ್ತತಃ ಸ್ಮೃತಃ||

ಪ್ರತ್ಯೇಕ ಪ್ರತ್ಯೇಕ ಎರಡು ಅರ್ಧದೇಹಗಳಿಂದ ಇಬ್ಬರು ತಾಯಂದಿರಲ್ಲಿ ಹುಟ್ಟಿದ ಅವನು ಜರಾ ಎಂಬ ರಾಕ್ಷಸಿಯಿಂದ ಸೇರಿಸಲ್ಪಟ್ಟನಾಗಿರುವುದರಿಂದ ಅವನು ಜರಾಸಂಧನೆನಿಸಿಕೊಂಡನು.

07156014a ಸಾ ತು ಭೂಮಿಗತಾ ಪಾರ್ಥ ಹತಾ ಸಸುತಬಾಂಧವಾ|

07156014c ಗದಯಾ ತೇನ ಚಾಸ್ತ್ರೇಣ ಸ್ಥೂಣಾಕರ್ಣೇನ ರಾಕ್ಷಸೀ||

ಪಾರ್ಥ! ಅಲ್ಲಿ ಭೂಮಿಯ ಕೆಳಗೆ ವಾಸಿಸುತ್ತಿದ್ದ ಆ ರಾಕ್ಷಸಿಯು ಸುತ-ಬಾಂಧವರೊಡನೆ ಆ ಗದೆ ಮತ್ತು ಸ್ಥೂಣಕರ್ಣದ ಹೊಡೆತದಿಂದಾಗಿ ಹತಳಾದಳು.

07156015a ವಿನಾಭೂತಃ ಸ ಗದಯಾ ಜರಾಸಂಧೋ ಮಹಾಮೃಧೇ|

07156015c ನಿಹತೋ ಭೀಮಸೇನೇನ ಪಶ್ಯತಸ್ತೇ ಧನಂಜಯ||

ಧನಂಜಯ! ಆ ಗದೆಯನ್ನು ಕಳೆದುಕೊಂಡ ಜರಾಸಂಧನು ಮಹಾ ಮಲ್ಲಯುದ್ಧದಲ್ಲಿ ಭೀಮಸೇನನಿಂದ ಹತನಾದುದನ್ನು ನೀನೇ ನೋಡಿದ್ದೀಯೆ.

07156016a ಯದಿ ಹಿ ಸ್ಯಾದ್ಗದಾಪಾಣಿರ್ಜರಾಸಂಧಃ ಪ್ರತಾಪವಾನ್|

07156016c ಸೇಂದ್ರಾ ದೇವಾ ನ ತಂ ಹಂತುಂ ರಣೇ ಶಕ್ತಾ ನರೋತ್ತಮ||

ನರೋತ್ತಮ! ಒಂದುವೇಳೆ ಪ್ರತಾಪವಾನ್ ಜರಾಸಂಧನು ಆ ಗದೆಯನ್ನು ಹೊಂದಿದ್ದರೆ ರಣದಲ್ಲಿ ಅವನನ್ನು ಸಂಹರಿಸಲು ಇಂದ್ರಸಮೇತ ದೇವತೆಗಳೂ ಶಕ್ತರಾಗುತ್ತಿರಲಿಲ್ಲ.

07156017a ತ್ವದ್ಧಿತಾರ್ಥಂ ಹಿ ನೈಷಾದಿರಂಗುಷ್ಠೇನ ವಿಯೋಜಿತಃ|

07156017c ದ್ರೋಣೇನಾಚಾರ್ಯಕಂ ಕೃತ್ವಾ ಚದ್ಮನಾ ಸತ್ಯವಿಕ್ರಮಃ||

ನಿನ್ನ ಹಿತಕ್ಕಾಗಿಯೇ ಸತ್ಯವಿಕ್ರಮ ದ್ರೋಣನು ಆಚಾರ್ಯನ ವೇಷದಲ್ಲಿ ನೈಷಾದಿ ಏಕಲವ್ಯನ ಅಂಗುಷ್ಠವನ್ನು ಅಪಹರಿಸಿದನು.

07156018a ಸ ತು ಬದ್ಧಾಂಗುಲಿತ್ರಾಣೋ ನೈಷಾದಿರ್ದೃಢವಿಕ್ರಮಃ|

07156018c ಅಸ್ಯನ್ನೇಕೋ ವನಚರೋ ಬಭೌ ರಾಮ ಇವಾಪರಃ||

ದೃಢವಿಕ್ರಮಿ ನೈಷಾದಿಯು ಅಂಗುಲಿತ್ರಾಣಗಳನ್ನು ಕಟ್ಟಿಕೊಂಡು ಇನ್ನೊಬ್ಬ ರಾಮನಂತೆಯೇ ವನಗಳಲ್ಲಿ ಸಂಚರಿಸುತ್ತಿದ್ದನು.

07156019a ಏಕಲವ್ಯಂ ಹಿ ಸಾಂಗುಷ್ಠಮಶಕ್ತಾ ದೇವದಾನವಾಃ|

07156019c ಸರಾಕ್ಷಸೋರಗಾಃ ಪಾರ್ಥ ವಿಜೇತುಂ ಯುಧಿ ಕರ್ಹಿ ಚಿತ್||

ಪಾರ್ಥ! ಅಂಗುಷ್ಠವನ್ನು ಹೊಂದಿದ್ದ ಏಕಲವ್ಯನನ್ನು ದೇವ ಮಾನವ ರಾಕ್ಷಸ ಉರಗರು ಸೇರಿಯೂ ಯುದ್ಧದಲ್ಲಿ ಜಯಿಸಲು ಎಂದೂ ಶಕ್ತರಾಗುತ್ತಿರಲಿಲ್ಲ.

07156020a ಕಿಮು ಮಾನುಷಮಾತ್ರೇಣ ಶಕ್ಯಃ ಸ್ಯಾತ್ಪ್ರತಿವೀಕ್ಷಿತುಂ|

07156020c ದೃಢಮುಷ್ಟಿಃ ಕೃತೀ ನಿತ್ಯಮಸ್ಯಮಾನೋ ದಿವಾನಿಶಂ||

ಇನ್ನು ಮನುಷ್ಯ ಮಾತ್ರರು ಏನು! ಅವನನ್ನು ನೋಡಲು ಕೂಡ ಶಕ್ಯರಾಗುತ್ತಿರಲಿಲ್ಲ. ದೃಢಮುಷ್ಟಿಯಾಗಿದ್ದ ಅವನು ಹಗಲೂ ರಾತ್ರಿ ನಿತ್ಯವೂ ಶ್ರಮಿಸುತ್ತಿದ್ದನು.

07156021a ತ್ವದ್ಧಿತಾರ್ಥಂ ತು ಸ ಮಯಾ ಹತಃ ಸಂಗ್ರಾಮಮೂರ್ಧನಿ|

07156021c ಚೇದಿರಾಜಶ್ಚ ವಿಕ್ರಾಂತಃ ಪ್ರತ್ಯಕ್ಷಂ ನಿಹತಸ್ತವ||

ನಿನ್ನ ಹಿತಕ್ಕಾಗಿಯೇ ಸಂಗ್ರಾಮಕ್ಕೆ ಮೊದಲೇ ನಾನು ಚೇದಿರಾಜ ವಿಕ್ರಾಂತ ಶಿಶುಪಾಲನನ್ನು ನಿನ್ನ ಪ್ರತ್ಯಕ್ಷದಲ್ಲಿಯೇ ಸಂಹರಿಸಿದೆನು.

07156022a ಸ ಚಾಪ್ಯಶಕ್ಯಃ ಸಂಗ್ರಾಮೇ ಜೇತುಂ ಸರ್ವೈಃ ಸುರಾಸುರೈಃ|

07156022c ವಧಾರ್ಥಂ ತಸ್ಯ ಜಾತೋಽಹಮನ್ಯೇಷಾಂ ಚ ಸುರದ್ವಿಷಾಂ||

ಸಂಗ್ರಾಮದಲ್ಲಿ ಅವನನ್ನು ಕೂಡ ಗೆಲ್ಲಲು ಸುರಾಸುರರೆಲ್ಲರೂ ಅಶಕ್ಯರೇ! ಅವನ ಮತ್ತು ಅನ್ಯ ಸುರಶತ್ರುಗಳ ವಧೆಗಾಗಿಯೇ ನಾನು ಹುಟ್ಟಿದ್ದೇನೆ.

07156023a ತ್ವತ್ಸಹಾಯೋ ನರವ್ಯಾಘ್ರ ಲೋಕಾನಾಂ ಹಿತಕಾಮ್ಯಯಾ|

07156023c ಹಿಡಿಂಬಬಕಕಿರ್ಮೀರಾ ಭೀಮಸೇನೇನ ಪಾತಿತಾಃ|

07156023e ರಾವಣೇನ ಸಮಪ್ರಾಣಾ ಬ್ರಹ್ಮಯಜ್ಞವಿನಾಶನಾಃ||

ನರವ್ಯಾಘ್ರ! ನಿನ್ನ ಸಹಾಯಕ್ಕೆಂದು ಮತ್ತು ಲೋಕಗಳ ಹಿತವನ್ನು ಬಯಸಿ ಭೀಮಸೇನನು ರಾವಣನ ಸಮಪ್ರಾಣರಾದ ಬ್ರಹ್ಮ ಯಜ್ಞವಿನಾಶಕರಾದ ಹಿಡಿಂಬ-ಕಿರ್ಮೀರರನ್ನು ಉರುಳಿಸಿದನು.

07156024a ಹತಸ್ತಥೈವ ಮಾಯಾವೀ ಹೈಡಿಂಬೇನಾಪ್ಯಲಾಯುಧಃ|

07156024c ಹೈಡಿಂಬಶ್ಚಾಪ್ಯುಪಾಯೇನ ಶಕ್ತ್ಯಾ ಕರ್ಣೇನ ಘಾತಿತಃ||

ಅದೇ ರೀತಿ ಮಯಾವಿ ಅಲಾಯುಧನೂ ಹೈಡಿಂಬಿ ಘಟೋತ್ಕಚನಿಂದ ಹತನಾದನು. ಹೈಡಿಂಬಿಯೂ ಕೂಡ ಉಪಾಯದಿಂದ ಕರ್ಣನ ಶಕ್ತಿಗೆ ಸಿಲುಕಿ ಹತನಾದನು.

07156025a ಯದಿ ಹ್ಯೇನಂ ನಾಹನಿಷ್ಯತ್ಕರ್ಣಃ ಶಕ್ತ್ಯಾ ಮಹಾಮೃಧೇ|

07156025c ಮಯಾ ವಧ್ಯೋಽಭವಿಷ್ಯತ್ಸ ಭೈಮಸೇನಿರ್ಘಟೋತ್ಕಚಃ||

ಒಂದುವೇಳೆ ಮಹಾಯುದ್ಧದಲ್ಲಿ ಕರ್ಣನು ಶಕ್ತ್ಯಾಯುಧದಿಂದ ಇವನನ್ನು ಸಂಹರಿಸದೇ ಇದ್ದಿದ್ದರೆ ಭೈಮಸೇನಿ ಘಟೋತ್ಕಚನ ವಧೆಯು ನನ್ನಿಂದಲೇ ಆಗುತ್ತಿತ್ತು!

07156026a ಮಯಾ ನ ನಿಹತಃ ಪೂರ್ವಮೇಷ ಯುಷ್ಮತ್ಪ್ರಿಯೇಪ್ಸಯಾ|

07156026c ಏಷ ಹಿ ಬ್ರಾಹ್ಮಣದ್ವೇಷೀ ಯಜ್ಞದ್ವೇಷೀ ಚ ರಾಕ್ಷಸಃ||

07156027a ಧರ್ಮಸ್ಯ ಲೋಪ್ತಾ ಪಾಪಾತ್ಮಾ ತಸ್ಮಾದೇಷ ನಿಪಾತಿತಃ|

07156027c ವ್ಯಂಸಿತಾ ಚಾಪ್ಯುಪಾಯೇನ ಶಕ್ರದತ್ತಾ ಮಯಾನಘ||

07156028a ಯೇ ಹಿ ಧರ್ಮಸ್ಯ ಲೋಪ್ತಾರೋ ವಧ್ಯಾಸ್ತೇ ಮಮ ಪಾಂಡವ|

ನಿಮಗೆ ಪ್ರಿಯವಾದುದನ್ನು ಮಾಡಲೋಸುಗ ನಾನು ಅವನನ್ನು ಈ ಹಿಂದೆಯೇ ಸಂಹರಿಸಲಿಲ್ಲ. ಈ ರಾಕ್ಷಸನು ಬ್ರಾಹ್ಮಣದ್ವೇಷೀ. ಯಜ್ಞದ್ವೇಷೀ. ಧರ್ಮವನ್ನು ಕಳೆದುಕೊಂಡವನು, ಪಾಪಾತ್ಮ. ಆದುದರಿಂದಲೇ ಅವನು ಸತ್ತನು. ಅನಘ! ಉಪಾಯದಿಂದ ಶಕ್ರನು ನೀಡಿದ ಶಕ್ತಿಯು ಕೈಬಿಡುವಂತೆ ಮಾಡಿದೆ. ಧರ್ಮವನ್ನು ಲೋಪಮಾಡುವವರು ನನ್ನಿಂದ ವಧಿಸಲ್ಪಡುತ್ತಾರೆ ಪಾಂಡವ!

07156028c ಧರ್ಮಸಂಸ್ಥಾಪನಾರ್ಥಂ ಹಿ ಪ್ರತಿಜ್ಞೈಷಾ ಮಮಾವ್ಯಯಾ||

07156029a ಬ್ರಹ್ಮ ಸತ್ಯಂ ದಮಃ ಶೌಚಂ ಧರ್ಮೋ ಹ್ರೀಃ ಶ್ರೀರ್ಧೃತಿಃ ಕ್ಷಮಾ|

07156029c ಯತ್ರ ತತ್ರ ರಮೇ ನಿತ್ಯಮಹಂ ಸತ್ಯೇನ ತೇ ಶಪೇ||

ಧರ್ಮಸಂಸ್ಥಾಪನೆಗಾಗಿಯೇ ನಾನು ಈ ಅಚಲ ಪ್ರತಿಜ್ಞೆಯನ್ನು ಕೈಗೊಂಡಿರುವೆನು. ಎಲ್ಲಿ ಬ್ರಹ್ಮ, ಸತ್ಯ, ದಮ, ಶೌಚ, ಧರ್ಮ, ಲಜ್ಜೆ, ಸಾತ್ವಿಕ ಸಂಪತ್ತು, ಧೃತಿ ಮತ್ತು ಕ್ಷಮೆಗಳಿರುವವೋ ಅಲ್ಲಿ ನಿತ್ಯವೂ ನಾನು ರಮಿಸುತ್ತೇನೆ. ಸತ್ಯದ ಮೇಲೆ ಆಣೆಯಿಟ್ಟು ನಿನಗೆ ಹೇಳುತ್ತಿದ್ದೇನೆ.

07156030a ನ ವಿಷಾದಸ್ತ್ವಯಾ ಕಾರ್ಯಃ ಕರ್ಣಂ ವೈಕರ್ತನಂ ಪ್ರತಿ|

07156030c ಉಪದೇಕ್ಷ್ಯಾಮ್ಯುಪಾಯಂ ತೇ ಯೇನ ತಂ ಪ್ರಸಹಿಷ್ಯಸಿ||

ವೈಕರ್ತನನ ಕುರಿತು ನೀನು ದುಃಖಿಸಬೇಕಾದುದಿಲ್ಲ. ನಂತರದಲ್ಲಿ ನಾನು ನಿನಗೆ ಅವನ ವಧೋಪಾಯವನ್ನು ಉಪದೇಶಿಸುತ್ತೇನೆ.

07156031a ಸುಯೋಧನಂ ಚಾಪಿ ರಣೇ ಹನಿಷ್ಯತಿ ವೃಕೋದರಃ|

07156031c ತಸ್ಯ ಚಾಪಿ ವಧೋಪಾಯಂ ವಕ್ಷ್ಯಾಮಿ ತವ ಪಾಂಡವ||

ಸುಯೋಧನನನ್ನು ಕೂಡ ರಣದಲ್ಲಿ ವೃಕೋದರನು ಸಂಹರಿಸುತ್ತಾನೆ. ಪಾಂಡವ! ಅವನ ವಧೋಪಾಯವನ್ನು ಕೂಡ ನಾನು ನಿನಗೆ ಹೇಳುತ್ತೇನೆ.

07156032a ವರ್ಧತೇ ತುಮುಲಸ್ತ್ವೇಷ ಶಬ್ದಃ ಪರಚಮೂಂ ಪ್ರತಿ|

07156032c ವಿದ್ರವಂತಿ ಚ ಸೈನ್ಯಾನಿ ತ್ವದೀಯಾನಿ ದಿಶೋ ದಶ||

ಶತ್ರುಗಳ ಸೇನೆಗಳ ಮಧ್ಯೆ ತುಮುಲ ಶಬ್ಧವು ಹೆಚ್ಚಾಗುತ್ತಲೇ ಇದೆ. ನಿನ್ನ ಸೇನೆಗಳು ಕೂಡ ದಶದಿಶಗಳಲ್ಲಿ ಓಡುತ್ತಿವೆ.

07156033a ಲಬ್ಧಲಕ್ಷ್ಯಾ ಹಿ ಕೌರವ್ಯಾ ವಿಧಮಂತಿ ಚಮೂಂ ತವ|

07156033c ದಹತ್ಯೇಷ ಚ ವಃ ಸೈನ್ಯಂ ದ್ರೋಣಃ ಪ್ರಹರತಾಂ ವರಃ||

ಲಕ್ಷ್ಯಭೇದನದಲ್ಲಿ ಪರಿಣಿತರಾದ ಕೌರವರು ನಿನ್ನ ಸೇನೆಯನ್ನು ಧ್ವಂಸಮಾಡುತ್ತಿದ್ದಾರೆ. ಪ್ರಹರಿಗಳಲ್ಲಿ ಶ್ರೇಷ್ಠ ದ್ರೋಣನೂ ಕೂಡ ನಮ್ಮ ಸೇನೆಯನ್ನು ಸುಡುತ್ತಿದ್ದಾನೆ!””

ಇತಿ ಶ್ರೀ ಮಹಾಭಾರತೇ ದ್ರೋಣ ಪರ್ವಣಿ ಘಟೋತ್ಕಚವಧ ಪರ್ವಣಿ ರಾತ್ರಿಯುದ್ಧೇ ಕೃಷ್ಣವಾಕ್ಯೇ ಷಟ್ಪಂಚಾಶದಧಿಕಶತತಮೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ದ್ರೋಣ ಪರ್ವದಲ್ಲಿ ಘಟೋತ್ಕಚವಧ ಪರ್ವದಲ್ಲಿ ರಾತ್ರಿಯುದ್ಧೇ ಕೃಷ್ಣವಾಕ್ಯ ಎನ್ನುವ ನೂರಾಐವತ್ತಾರನೇ ಅಧ್ಯಾಯವು.

Related image

Comments are closed.