Ashvamedhika Parva: Chapter 94

ಅಶ್ವಮೇಧಿಕ ಪರ್ವ

೯೪

ಯುಧಿಷ್ಠಿರನ ಅಶ್ವಮೇಧವನ್ನು ಮುಂಗುಸಿಯು ಏಕೆ ನಿಂದಿಸಿತು ಎಂದು ಜನಮೇಜಯನು ಕೇಳಲು ವೈಶಂಪಾಯನನು ಅವನಿಗೆ ಶಕ್ರನ ಯಜ್ಞದಲ್ಲಿ ವಿಪ್ರರು ಅಹಿಂಸಾವಿಧಿಯ ಕುರಿತು ಹೇಳಿದುದರ ಉದಾಹರಣೆಯನ್ನಿತ್ತು ಯಜ್ಞವಿಧಿ-ಫಲಗಳ ಕುರಿತು ಹೇಳಿದುದು (೧-೩೪).

14094001 ಜನಮೇಜಯ ಉವಾಚ

14094001a ಯಜ್ಞೇ ಸಕ್ತಾ ನೃಪತಯಸ್ತಪಃಸಕ್ತಾ ಮಹರ್ಷಯಃ|

14094001c ಶಾಂತಿವ್ಯವಸಿತಾ ವಿಪ್ರಾಃ ಶಮೋ ದಮ ಇತಿ ಪ್ರಭೋ||

ಜನಮೇಜಯನು ಹೇಳಿದನು: “ಪ್ರಭೋ! ನೃಪತಿಗಳು ಯಜ್ಞದಲ್ಲಿ ಆಸಕ್ತರಾಗಿರುತ್ತಾರೆ. ಮಹರ್ಷಿಗಳು ತಪಸ್ಸಿನಲ್ಲಿ ಆಸಕ್ತರಾಗಿರುತ್ತಾರೆ. ವಿಪ್ರರು ಶಮ-ದಮಗಳೆಂದು ಶಾಂತಿಯಲ್ಲಿರಲು ಆಸಕ್ತರಾಗಿರುತ್ತಾರೆ.

14094002a ತಸ್ಮಾದ್ಯಜ್ಞಫಲೈಸ್ತುಲ್ಯಂ ನ ಕಿಂ ಚಿದಿಹ ವಿದ್ಯತೇ|

14094002c ಇತಿ ಮೇ ವರ್ತತೇ ಬುದ್ಧಿಸ್ತಥಾ ಚೈತದಸಂಶಯಮ್||

ಆದುದರಿಂದ ಯಜ್ಞ ಫಲಕ್ಕೆ ಸಮನಾದುದು ಯಾವುದೂ ಇಲ್ಲವೆಂದು ತಿಳಿಯುತ್ತದೆ. ಇದೇ ನನ್ನ ಅಭಿಪ್ರಾಯವೂ ಆಗಿದೆ. ಅದರಲ್ಲಿ ನನಗೆ ಸಂದೇಹವೇನೂ ಕಾಣುತ್ತಿಲ್ಲ.

14094003a ಯಜ್ಞೈರಿಷ್ಟ್ವಾ ಹಿ ಬಹವೋ ರಾಜಾನೋ ದ್ವಿಜಸತ್ತಮ|

14094003c ಇಹ ಕೀರ್ತಿಂ ಪರಾಂ ಪ್ರಾಪ್ಯ ಪ್ರೇತ್ಯ ಸ್ವರ್ಗಮಿತೋ ಗತಾಃ||

ದ್ವಿಜಸತ್ತಮ! ಯಜ್ಞ-ಇಷ್ಟಿಗಳಿಂದಲೇ ಅನೇಕ ರಾಜರು ಇಲ್ಲಿ ಕೀರ್ತಿಯನ್ನೂ ಮರಣಾನಂತರ ಪರಮ ಸ್ವರ್ಗವನ್ನೂ ಪಡೆದಿರುತ್ತಾರೆ.

14094004a ದೇವರಾಜಃ ಸಹಸ್ರಾಕ್ಷಃ ಕ್ರತುಭಿರ್ಭೂರಿದಕ್ಷಿಣೈಃ|

14094004c ದೇವರಾಜ್ಯಂ ಮಹಾತೇಜಾಃ ಪ್ರಾಪ್ತವಾನಖಿಲಂ ವಿಭುಃ||

ಭೂರಿದಕ್ಷಿಣಗಳಿಂದ ಯುಕ್ತವಾದ ಕ್ರತುಗಳ ಮೂಲಕವೇ ವಿಭು ಸಹಸ್ರಾಕ್ಷ ಮಹಾತೇಜಸ್ವಿ ದೇವರಾಜನು ಅಖಿಲ ದೇವರಾಜ್ಯವನ್ನು ಪಡೆದುಕೊಂಡಿದ್ದಾನೆ.

14094005a ಯಥಾ ಯುಧಿಷ್ಠಿರೋ ರಾಜಾ ಭೀಮಾರ್ಜುನಪುರಃಸರಃ|

14094005c ಸದೃಶೋ ದೇವರಾಜೇನ ಸಮೃದ್ಧ್ಯಾ ವಿಕ್ರಮೇಣ ಚ||

ದೇವರಾಜನ ಸದೃಶನಾದ ರಾಜಾ ಯುಧಿಷ್ಠಿರನೂ ಕೂಡ ಭೀಮಾರ್ಜುನರನ್ನು ಮುಂದೆಮಾಡಿಕೊಂಡು ವಿಕ್ರಮದಿಂದ ಸಮೃದ್ಧವಾದ ಅಶ್ವಮೇಧ ಯಾಗವನ್ನು ಪೂರೈಸಿದನು.

14094006a ಅಥ ಕಸ್ಮಾತ್ಸ ನಕುಲೋ ಗರ್ಹಯಾಮಾಸ ತಂ ಕ್ರತುಮ್|

14094006c ಅಶ್ವಮೇಧಂ ಮಹಾಯಜ್ಞಂ ರಾಜ್ಞಸ್ತಸ್ಯ ಮಹಾತ್ಮನಃ||

ಆದರೂ ಮಹಾತ್ಮ ರಾಜನ ಆ ಕ್ರತು ಅಶ್ವಮೇಧ ಮಹಾಯಜ್ಞವನ್ನು ಮುಂಗುಸಿಯು ಏಕೆ ನಿಂದಿಸಿತು?”

14094007 ವೈಶಂಪಾಯನ ಉವಾಚ

14094007a ಯಜ್ಞಸ್ಯ ವಿಧಿಮಗ್ರ್ಯಂ ವೈ ಫಲಂ ಚೈವ ನರರ್ಷಭ|

14094007c ಗದತಃ ಶೃಣು ಮೇ ರಾಜನ್ಯಥಾವದಿಹ ಭಾರತ||

ವೈಶಂಪಾಯನನು ಹೇಳಿದನು: “ನರರ್ಷಭ! ಭಾರತ! ರಾಜನ್! ಈಗ ನಾನು ಯಜ್ಞದ ಶ್ರೇಷ್ಠ ವಿಧಿಗಳನ್ನೂ ಫಲಗಳನ್ನೂ ಹೇಳುತ್ತೇನೆ. ಕೇಳು!

14094008a ಪುರಾ ಶಕ್ರಸ್ಯ ಯಜತಃ ಸರ್ವ ಊಚುರ್ಮಹರ್ಷಯಃ|

14094008c ಋತ್ವಿಕ್ಷು ಕರ್ಮವ್ಯಗ್ರೇಷು ವಿತತೇ ಯಜ್ಞಕರ್ಮಣಿ||

ಹಿಂದೆ ಶಕ್ರನು ಯಜಿಸುತ್ತಿರುವಾಗ ಸರ್ವ ಮಹರ್ಷಿಗಳೂ ಮಂತ್ರಗಳನ್ನು ಉಚ್ಚರಿಸುತ್ತಿದ್ದರು. ಋತ್ವಿಕರು ತಮ್ಮ ತಮ್ಮ ಕರ್ಮಗಳಲ್ಲಿ ಏಕಾಗ್ರರಾಗಿದ್ದರು ಮತ್ತು ಯಜ್ಞಕರ್ಮಗಳು ವಿದ್ಯುಕ್ತವಾಗಿ ನಡೆಯುತ್ತಿದ್ದವು.

14094009a ಹೂಯಮಾನೇ ತಥಾ ವಹ್ನೌ ಹೋತ್ರೇ ಬಹುಗುಣಾನ್ವಿತೇ|

14094009c ದೇವೇಷ್ವಾಹೂಯಮಾನೇಷು ಸ್ಥಿತೇಷು ಪರಮರ್ಷಿಷು||

ಪರಮಋಷಿಗಳು ಅಲ್ಲಿ ಕುಳಿತಿರುವಾಗ ಉತ್ತಮ ಗುಣಯುಕ್ತ ಆಹುತಿಗಳನ್ನು ಅಗ್ನಿಯಲ್ಲಿ ಹೋಮಮಾಡುತ್ತಿದ್ದರು ಮತ್ತು ದೇವತೆಗಳನ್ನು ಮಂತ್ರಪೂರ್ವಕವಾಗಿ ಆಹ್ವಾನಿಸುತ್ತಿದ್ದರು.

14094010a ಸುಪ್ರತೀತೈಸ್ತದಾ ವಿಪ್ರೈಃ ಸ್ವಾಗಮೈಃ ಸುಸ್ವನೈರ್ನೃಪ|

14094010c ಅಶ್ರಾಂತೈಶ್ಚಾಪಿ ಲಘುಭಿರಧ್ವರ್ಯುವೃಷಭೈಸ್ತಥಾ||

ನೃಪ! ಸುಪ್ರತೀತ ವಿಪ್ರರು ಸುಸ್ವರವಾಗಿ ಆಗಮ ಮಂತ್ರಗಳನ್ನು ಹೇಳುತ್ತಿದ್ದರು. ವೃಷಭರಂತಿದ್ದ ಅಧ್ವರ್ಯುಗಳು ಸ್ವಲ್ಪವೂ ಆಯಾಸಗೊಳ್ಳುತ್ತಿರಲಿಲ್ಲ.

14094011a ಆಲಂಭಸಮಯೇ ತಸ್ಮಿನ್ಗೃಹೀತೇಷು ಪಶುಷ್ವಥ|

14094011c ಮಹರ್ಷಯೋ ಮಹಾರಾಜ ಸಂಬಭೂವುಃ ಕೃಪಾನ್ವಿತಾಃ||

ಮಹಾರಾಜ! ಆಲಂಬಸಮಯದಲ್ಲಿ ಪಶುಗಳನ್ನು ಹಿಡಿದುಕೊಂಡು ಬರುವಾಗ ಮಹರ್ಷಿಗಳು ಕೃಪಾನ್ವಿತರಾದರು.

14094012a ತತೋ ದೀನಾನ್ಪಶೂನ್ದೃಷ್ಟ್ವಾ ಋಷಯಸ್ತೇ ತಪೋಧನಾಃ|

14094012c ಊಚುಃ ಶಕ್ರಂ ಸಮಾಗಮ್ಯ ನಾಯಂ ಯಜ್ಞವಿಧಿಃ ಶುಭಃ||

ಆಗ ದೀನ ಪಶುಗಳನ್ನು ನೋಡಿ ತಪೋಧನ ಋಷಿಗಳು ಒಂದಾಗಿ ಶಕ್ರನಿಗೆ ಈ ಯಜ್ಞವಿಧಿಯು ಶುಭವಲ್ಲ ಎಂದು ಹೇಳಿದರು.

14094013a ಅಪವಿಜ್ಞಾನಮೇತತ್ತೇ ಮಹಾಂತಂ ಧರ್ಮಮಿಚ್ಚತಃ|

14094013c ನ ಹಿ ಯಜ್ಞೇ ಪಶುಗಣಾ ವಿಧಿದೃಷ್ಟಾಃ ಪುರಂದರ||

“ಪುರಂದರ! ಈ ಯಜ್ಞದ ಮೂಲಕ ಮಹಾಧರ್ಮವನ್ನು ಇಚ್ಛಿಸಿರುವೆ. ಆದರೆ ಯಜ್ಞದಲ್ಲಿ ಪಶುಬಲಿಯನ್ನು ವೇದಗಳಲ್ಲಿ ನಾವು ಕಂಡಿಲ್ಲ.

14094014a ಧರ್ಮೋಪಘಾತಕಸ್ತ್ವೇಷ ಸಮಾರಂಭಸ್ತವ ಪ್ರಭೋ|

14094014c ನಾಯಂ ಧರ್ಮಕೃತೋ ಧರ್ಮೋ ನ ಹಿಂಸಾ ಧರ್ಮ ಉಚ್ಯತೇ||

ಪ್ರಭೋ! ನಿನ್ನ ಈ ಸಮಾರಂಭವು ಧರ್ಮಘಾತುಕವಾದುದು. ಇದು ಧರ್ಮಕಾರ್ಯವಲ್ಲ. ಹಿಂಸೆಯು ಎಂದೂ ಧರ್ಮ ಎನಿಸಿಕೊಳ್ಳುವುದಿಲ್ಲ.

14094015a ಆಗಮೇನೈವ ತೇ ಯಜ್ಞಂ ಕುರ್ವಂತು ಯದಿ ಹೇಚ್ಚಸಿ|

14094015c ವಿಧಿದೃಷ್ಟೇನ ಯಜ್ಞೇನ ಧರ್ಮಸ್ತೇ ಸುಮಹಾನ್ಭವೇತ್||

ನೀನು ಇಚ್ಛಿಸುವೆಯಾದರೆ ಈ ಯಜ್ಞವನ್ನು ಆಗಮಗಳ ಅನುಸಾರವಾಗಿಯೇ ಮಾಡಲಿ. ವೇದಗಳಲ್ಲಿ ಹೇಳಿರುವ ವಿಧಿಯಂತೆ ಯಜ್ಞವನ್ನು ಮಾಡಿದರೆ ನಿನಗೆ ಮಹಾಧರ್ಮವುಂಟಾಗುತ್ತದೆ.

14094016a ಯಜ ಬೀಜೈಃ ಸಹಸ್ರಾಕ್ಷ ತ್ರಿವರ್ಷಪರಮೋಷಿತೈಃ|

14094016c ಏಷ ಧರ್ಮೋ ಮಹಾನ್ಶಕ್ರ ಚಿಂತ್ಯಮಾನೋಽಧಿಗಮ್ಯತೇ||

ಸಹಸ್ರಾಕ್ಷ! ಮೂರುವರ್ಷಗಳು ಹಳೆಯದಾಗಿರುವ ಬೀಜಗಳಿಂದ ಯಜ್ಞಮಾಡು. ಶಕ್ರ! ಇದರಿಂದ ನಿನಗೆ ಮಹಾ ಧರ್ಮವು ದೊರೆಯುತ್ತದೆ.”

14094017a ಶತಕ್ರತುಸ್ತು ತದ್ವಾಕ್ಯಮೃಷಿಭಿಸ್ತತ್ತ್ವದರ್ಶಿಭಿಃ|

14094017c ಉಕ್ತಂ ನ ಪ್ರತಿಜಗ್ರಾಹ ಮಾನಮೋಹವಶಾನುಗಃ||

ಆದರೆ ಮಾನಮೋಹವಶಾನುಗನಾದ ಶತಕ್ರತುವಾದರೋ ತತ್ತ್ವದರ್ಶೀ ಋಷಿಗಳ ಆ ಮಾತನ್ನು ಸ್ವೀಕರಿಸಲಿಲ್ಲ.

14094018a ತೇಷಾಂ ವಿವಾದಃ ಸುಮಹಾನ್ಜಜ್ಞೇ ಶಕ್ರಮಹರ್ಷಿಣಾಮ್|

14094018c ಜಂಗಮೈಃ ಸ್ಥಾವರೈರ್ವಾಪಿ ಯಷ್ಟವ್ಯಮಿತಿ ಭಾರತ||

ಭಾರತ! ಜಂಗಮ ಪ್ರಾಣಿಗಳಿಂದ ಅಥವಾ ಸ್ಥಾವರ ಬೀಜಗಳಿಂದ ಯಜ್ಞಮಾಡಬೇಕೆಂದು ಶಕ್ರ ಮತ್ತು ಮಹರ್ಷಿಗಳ ಅತಿದೊಡ್ಡ ವಿವಾದವೇ ನಡೆಯಿತು.

14094019a ತೇ ತು ಖಿನ್ನಾ ವಿವಾದೇನ ಋಷಯಸ್ತತ್ತ್ವದರ್ಶಿನಃ|

14094019c ತತಃ ಸಂಧಾಯ ಶಕ್ರೇಣ ಪಪ್ರಚ್ಚುರ್ನೃಪತಿಂ ವಸುಮ್||

ಆ ವಿವಾದದಿಂದ ಖಿನ್ನರಾದ ತತ್ತ್ವದರ್ಶಿ ಋಷಿಗಳು ಶಕ್ರನೊಡಗೂಡಿ ನೃಪತಿ ವಸು[1]ವನ್ನು ಕೇಳಿದರು:

14094020a ಮಹಾಭಾಗ ಕಥಂ ಯಜ್ಞೇಷ್ವಾಗಮೋ ನೃಪತೇ ಸ್ಮೃತಃ|

14094020c ಯಷ್ಟವ್ಯಂ ಪಶುಭಿರ್ಮೇಧ್ಯೈರಥೋ ಬೀಜೈರಜೈರಪಿ||

“ಮಹಾಭಾಗ! ನೃಪತೇ! ಆಗಮಗಳ ಪ್ರಕಾರ ಯಜ್ಞವನ್ನು ಹೇಗೆ ಮಾಡಬೇಕು? ಪಶುಗಳ ಮೇಧದಿಂದಲೋ ಅಥವಾ ಬೀಜರಸಗಳಿಂದಲೋ?”

14094021a ತಚ್ಚ್ರುತ್ವಾ ತು ವಚಸ್ತೇಷಾಮವಿಚಾರ್ಯ ಬಲಾಬಲಮ್|

14094021c ಯಥೋಪನೀತೈರ್ಯಷ್ಟವ್ಯಮಿತಿ ಪ್ರೋವಾಚ ಪಾರ್ಥಿವಃ||

ಆ ಮಾತನ್ನು ಕೇಳಿ ಮಾತಿನ ಬಲಾಬಲಗಳನ್ನು ವಿಚಾರಿಸದೆಯೇ ಪಾರ್ಥಿವ ವಸುವು “ಯಾವಾಗ ಏನು ದೊರಕುತ್ತದೆಯೋ ಅದರಿಂದ ಯಜ್ಞಮಾಡಬೇಕು!” ಎಂದುಬಿಟ್ಟನು.

14094022a ಏವಮುಕ್ತ್ವಾ ಸ ನೃಪತಿಃ ಪ್ರವಿವೇಶ ರಸಾತಲಮ್|

14094022c ಉಕ್ತ್ವೇಹ ವಿತಥಂ ರಾಜಂಶ್ಚೇದೀನಾಮೀಶ್ವರಃ ಪ್ರಭುಃ||

ರಾಜನ್! ಈ ಸುಳ್ಳನ್ನು ಹೇಳಿದುದಕ್ಕಾಗಿ ಹಾಗೆ ಹೇಳಿದ ನೃಪತಿ ಚೇದಿಗಳ ರಾಜ ಪ್ರಭುವು ರಸಾತಲವನ್ನು ಪ್ರವೇಶಿಸಿದನು[2].

14094023a ಅನ್ಯಾಯೋಪಗತಂ ದ್ರವ್ಯಮತೀತಂ ಯೋ ಹ್ಯಪಂಡಿತಃ|

14094023c ಧರ್ಮಾಭಿಕಾಂಕ್ಷೀ ಯಜತೇ ನ ಧರ್ಮಫಲಮಶ್ನುತೇ||

ಅನ್ಯಾಯದಿಂದ ಪಡೆದ ಧನವನ್ನು ಧರ್ಮಾಕಾಂಕ್ಷಿಯಾದ ಯಾವ ಅಪಂಡಿತನು ಯಜ್ಞಮಾಡುತ್ತಾನೋ ಅವನಿಗೆ ಫಲವು ಲಭಿಸುವುದಿಲ್ಲ.

14094024a ಧರ್ಮವೈತಂಸಿಕೋ ಯಸ್ತು ಪಾಪಾತ್ಮಾ ಪುರುಷಸ್ತಥಾ|

14094024c ದದಾತಿ ದಾನಂ ವಿಪ್ರೇಭ್ಯೋ ಲೋಕವಿಶ್ವಾಸಕಾರಕಮ್||

ಜನರಿಂದ ಹೊಗಳಿಸಿಕೊಳ್ಳಲು ತೋರಿಕೆಯ ಧರ್ಮಕಾರ್ಯಗಳನ್ನು ಮಾಡುವ ಪಾಪಾತ್ಮ ಪುರುಷನು ಲೋಕದ ಜನರಿಂದ ವಿಶ್ವಾಸವನ್ನು ಗಳಿಸಿಕೊಳ್ಳಲು ಬ್ರಾಹ್ಮಣರಿಗೆ ದಾನಮಾಡುತ್ತಾನೆ.

14094025a ಪಾಪೇನ ಕರ್ಮಣಾ ವಿಪ್ರೋ ಧನಂ ಲಬ್ಧ್ವಾ ನಿರಂಕುಶಃ|

14094025c ರಾಗಮೋಹಾನ್ವಿತಃ ಸೋಽಂತೇ ಕಲುಷಾಂ ಗತಿಮಾಪ್ನುತೇ||

ಪಾಪಕರ್ಮಗಳಿಂದ ಧನವನ್ನು ಸಂಪಾದಿಸಿ ಸ್ವೇಚ್ಛಾಪ್ರವೃತ್ತನಾಗಿ ರಾಗಮೋಹಿತನಾಗಿ ಜೀವಿಸುವ ವಿಪ್ರನು ಅಂತ್ಯದಲ್ಲಿ ಕಲುಷಗತಿಯನ್ನೇ ಪಡೆಯುತ್ತಾನೆ.

14094026a ತೇನ ದತ್ತಾನಿ ದಾನಾನಿ ಪಾಪೇನ ಹತಬುದ್ಧಿನಾ|

14094026c ತಾನಿ ಸತ್ತ್ವಮನಾಸಾದ್ಯ ನಶ್ಯಂತಿ ವಿಪುಲಾನ್ಯಪಿ||

ಬುದ್ಧಿಯನ್ನು ಕಳೆದುಕೊಂಡ ಪಾಪಿಯು ಕೊಟ್ಟ ದಾನಗಳು ಸತ್ತ್ವಗಳನ್ನು ಪಡೆಯದೇ ವಿಪುಲವಾಗಿದ್ದರೂ ನಾಶವಾಗುತ್ತವೆ.

14094027a ತಸ್ಯಾಧರ್ಮಪ್ರವೃತ್ತಸ್ಯ ಹಿಂಸಕಸ್ಯ ದುರಾತ್ಮನಃ|

14094027c ದಾನೇ ನ ಕೀರ್ತಿರ್ಭವತಿ ಪ್ರೇತ್ಯ ಚೇಹ ಚ ದುರ್ಮತೇಃ||

ಆ ಅಧರ್ಮಪ್ರವೃತ್ತಿಯ ದುರಾತ್ಮ ಹಿಂಸಕನ ದಾನದಿಂದ ಆ ದುರ್ಮತಿಗೆ ಇಲ್ಲಿ ಅಥವಾ ಮರಣದ ನಂತರ ಕೀರ್ತಿಯು ದೊರಕುವುದಿಲ್ಲ.

14094028a ಅಪಿ ಸಂಚಯಬುದ್ಧಿರ್ಹಿ ಲೋಭಮೋಹವಶಂಗತಃ|

14094028c ಉದ್ವೇಜಯತಿ ಭೂತಾನಿ ಹಿಂಸಯಾ ಪಾಪಚೇತನಃ||

ಧನವನ್ನು ಸಂಗ್ರಹಿಸುವ ಬುದ್ಧಿಯುಳ್ಳ ಪಾಪಚೇತನನು ಲೋಭಮೋಹವಶಕ್ಕೆ ಬಂದು ಪ್ರಾಣಿಗಳನ್ನು ಹಿಂಸೆಯಿಂದ ಉದ್ವೇಗಗೊಳಿಸುತ್ತಾನೆ.

14094029a ಏವಂ ಲಬ್ಧ್ವಾ ಧನಂ ಲೋಭಾದ್ಯಜತೇ ಯೋ ದದಾತಿ ಚ|

14094029c ಸ ಕೃತ್ವಾ ಕರ್ಮಣಾ ತೇನ ನ ಸಿಧ್ಯತಿ ದುರಾಗಮಾತ್||

ಲೋಭದಿಂದ ಹೀಗೆ ಸಂಪಾದಿಸಿದ ಧನದಿಂದ ಯಾರು ಯಜ್ಞಗಳನ್ನು ಮಾಡುತ್ತಾನೋ ಅಥವಾ ದಾನನೀಡುತ್ತಾನೋ ಅವನಿಗೆ ಕೆಟ್ಟದಾರಿಯಿಂದ ಆ ಧನವು ಬಂದಿರುವುದರಿಂದ, ಆ ಯಜ್ಞ-ದಾನಗಳ ಸಿದ್ಧಿಯಾಗುವುದಿಲ್ಲ.  

14094030a ಉಂಚಂ ಮೂಲಂ ಫಲಂ ಶಾಕಮುದಪಾತ್ರಂ ತಪೋಧನಾಃ|

14094030c ದಾನಂ ವಿಭವತೋ ದತ್ತ್ವಾ ನರಾಃ ಸ್ವರ್ಯಾಂತಿ ಧರ್ಮಿಣಃ||

ಧಾನ್ಯ, ಗೆಡ್ಡೆ-ಗೆಣಸುಗಳು, ಫಲ, ಜಲಪಾತ್ರೆ ಇವುಗಳನ್ನೂ ತಮ್ಮ ಶಕ್ತಿಗೆ ಅನುಗುಣವಾಗಿ ದಾನಮಾಡಿ ತಪೋಧನರು ಸ್ವರ್ಗಕ್ಕೆ ಹೋಗುತ್ತಾರೆ.

14094031a ಏಷ ಧರ್ಮೋ ಮಹಾಂಸ್ತ್ಯಾಗೋ ದಾನಂ ಭೂತದಯಾ ತಥಾ|

14094031c ಬ್ರಹ್ಮಚರ್ಯಂ ತಥಾ ಸತ್ಯಮನುಕ್ರೋಶೋ ಧೃತಿಃ ಕ್ಷಮಾ|

14094031e ಸನಾತನಸ್ಯ ಧರ್ಮಸ್ಯ ಮೂಲಮೇತತ್ ಸನಾತನಮ್||

ಇದೇ ಧರ್ಮ. ಮಹಾತ್ಯಾಗ. ದಾನ ಮತ್ತು ಭೂತದಯೆ. ಇದೇ ಬ್ರಹ್ಮಚರ್ಯ, ಸತ್ಯ, ಅನುಕ್ರೋಶ, ಧೃತಿ ಮತ್ತು ಕ್ಷಮ. ಸನಾತನ ಧರ್ಮದ ಸನಾತನ ಮೂಲವೇ ಇದು.

14094032a ಶ್ರೂಯಂತೇ ಹಿ ಪುರಾ ವಿಪ್ರಾ ವಿಶ್ವಾಮಿತ್ರಾದಯೋ ನೃಪಾಃ|

14094032c ವಿಶ್ವಾಮಿತ್ರೋಽಸಿತಶ್ಚೈವ ಜನಕಶ್ಚ ಮಹೀಪತಿಃ|

14094032e ಕಕ್ಷಸೇನಾರ್ಷ್ಟಿಷೇಣೌ ಚ ಸಿಂಧುದ್ವೀಪಶ್ಚ ಪಾರ್ಥಿವಃ||

ವಿಪ್ರರೇ! ಹಿಂದೆ ವಿಶ್ವಾಮಿತ್ರಾದಿ ನೃಪರು ಹೀಗೆಯೇ ಸಿದ್ಧಿಪಡೆದರೆಂದು ಕೇಳಿದ್ದೇವೆ. ವಿಶ್ವಾಮಿತ್ರ, ಅಸಿತ, ಮಹೀಪತಿ ಜನಕ, ಕಕ್ಷಸೇನ ಆರ್ಷ್ಟಿಷೇಣ, ಮತ್ತು ಪಾರ್ಥಿವ ಸಿಂಧುದ್ವೀಪ.

14094033a ಏತೇ ಚಾನ್ಯೇ ಚ ಬಹವಃ ಸಿದ್ಧಿಂ ಪರಮಿಕಾಂ ಗತಾಃ|

14094033c ನೃಪಾಃ ಸತ್ಯೈಶ್ಚ ದಾನೈಶ್ಚ ನ್ಯಾಯಲಬ್ಧೈಸ್ತಪೋಧನಾಃ||

ಇವರು ಮತ್ತು ಇನ್ನೂ ಅನೇಕ ಇತರ ನೃಪ ತಪೋಧನರು ಸತ್ಯನಿಷ್ಟರಾಗಿ ನ್ಯಾಯವಾಗಿ ಪಡೆದುದನ್ನು ದಾನವನ್ನಿತ್ತು ಪರಮ ಸಿದ್ಧಿಯನ್ನು ಪಡೆದರು.

14094034a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಶೂದ್ರಾ ಯೇ ಚಾಶ್ರಿತಾಸ್ತಪಃ|

14094034c ದಾನಧರ್ಮಾಗ್ನಿನಾ ಶುದ್ಧಾಸ್ತೇ ಸ್ವರ್ಗಂ ಯಾಂತಿ ಭಾರತ||

ಭಾರತ! ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರು ಯಾರೇ ತಪಸ್ಸನ್ನಾಚರಿಸಿ ಧಾನಧರ್ಮವೆಂಬ ಅಗ್ನಿಯಿಂದ ಶುದ್ಧರಾಗಿ ಸ್ವರ್ಗಕ್ಕೆ ಹೋಗುತ್ತಾರೆ.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಹಿಂಸಾಮಿಶ್ರಧರ್ಮನಿಂದಾಯಾಂ ಚತುರ್ನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಹಿಂಸಾಮಿಶ್ರಧರ್ಮನಿಂದಾ ಎನ್ನುವ ತೊಂಭತ್ನಾಲ್ಕನೇ ಅಧ್ಯಾಯವು.

[1] ವಸು ಉಪರಿಚರ.

[2] ಇದರ ನಂತರ ಭಾರತದರ್ಶನದಲ್ಲಿ ಈ ಶ್ಲೋಕವಿದೆ: ತಸ್ಮಾನ್ನ ವಾಚ್ಯಂ ಹ್ಯೇಕೇನ ಬಹುಜ್ಞೇನಾಪಿ ಸಂಶಯೇ| ಪ್ರಜಾಪತಿಮಪಾಹಾಯ ಸ್ವಯಂಭುವಮೃತೇ ಪ್ರಭುಮ್|| ಅರ್ಥಾತ್ ಆದುದರಿಂದ ಶಾಸ್ತ್ರ ವಿಷಯದಲ್ಲಿ ಯಾವುದಾದರೂ ಸಂದೇಹವುಂಟಾದರೆ ಅನೇಕ ಶಾಸ್ತ್ರಗಳನ್ನು ತಿಳಿದವನಾಗಿದ್ದರೂ ಪ್ರಭುವಾದ ಸ್ವಯಂಭು ಪ್ರಜಾಪತಿಯನ್ನು ಬಿಟ್ಟು ಬೇರೆ ಯಾರೂ ವಿವೇಚಿಸದೇ ನಿರ್ಣಯವನ್ನು ಹೇಳಿಬಿಡಬಾರದು.

Comments are closed.