Ashvamedhika Parva: Chapter 93

ಅಶ್ವಮೇಧಿಕ ಪರ್ವ

೯೩

ಮುಂಗುಸಿಯು ಉಂಚವೃತ್ತಿ ಬ್ರಾಹ್ಮಣನು ನೀಡಿದ ದಾನದ ಶ್ರೇಷ್ಠತೆಯನ್ನು ತಿಳಿಸಿದುದು (೧-೯೩).

14093001 ನಕುಲ ಉವಾಚ

14093001a ಹಂತ ವೋ ವರ್ತಯಿಷ್ಯಾಮಿ ದಾನಸ್ಯ ಪರಮಂ ಫಲಮ್|

14093001c ನ್ಯಾಯಲಬ್ಧಸ್ಯ ಸೂಕ್ಷ್ಮಸ್ಯ ವಿಪ್ರದತ್ತಸ್ಯ ಯದ್ದ್ವಿಜಾಃ||

ಮುಂಗುಸಿಯು ಹೇಳಿತು: “ದ್ವಿಜರೇ! ಅಲ್ಪವಾದರೂ ಬ್ರಾಹ್ಮಣನು ನ್ಯಾಯವಾಗಿ ಪಡೆದುದನ್ನು ದಾನಮಾಡಿದುದರ ಮಹಾ ಫಲವೇನೆನ್ನುವುದನ್ನು ಹೇಳುತ್ತೇನೆ. ಕೇಳಿ.

14093002a ಧರ್ಮಕ್ಷೇತ್ರೇ ಕುರುಕ್ಷೇತ್ರೇ ಧರ್ಮಜ್ಞೈರ್ಬಹುಭಿರ್ವೃತೇ|

14093002c ಉಂಚವೃತ್ತಿರ್ದ್ವಿಜಃ ಕಶ್ಚಿತ್ಕಾಪೋತಿರಭವತ್ಪುರಾ||

ಹಿಂದೆ ಅನೇಕ ಧರ್ಮಜ್ಞರಿಂದ ತುಂಬಿದ್ದ ಧರ್ಮಕ್ಷೇತ್ರ ಕುರುಕ್ಷೇತ್ರದಲ್ಲಿ ಉಂಚವೃತ್ತಿ[1]ಯಿಂದ ಜೀವಿಸುತ್ತಿದ್ದ ಓರ್ವ ಕಾಪೋತಿ[2] ದ್ವಿಜನಿದ್ದನು.

14093003a ಸಭಾರ್ಯಃ ಸಹ ಪುತ್ರೇಣ ಸಸ್ನುಷಸ್ತಪಸಿ ಸ್ಥಿತಃ|

14093003c ವಧೂಚತುರ್ಥೋ ವೃದ್ಧಃ ಸ ಧರ್ಮಾತ್ಮಾ ನಿಯತೇಂದ್ರಿಯಃ||

ಭಾರ್ಯೆ, ಪುತ್ರ ಮತ್ತು ಸೊಸೆಯೊಂದಿಗೆ ವಾಸಿಸುತ್ತಿದ್ದ ಆ ಧರ್ಮಾತ್ಮ ವೃದ್ಧನು ನಿಯತೇಂದ್ರಿಯನಾಗಿ ತಪಸ್ಸಿನಲ್ಲಿ ನಿರತನಾಗಿದ್ದನು.

14093004a ಷಷ್ಠೇ ಕಾಲೇ ತದಾ ವಿಪ್ರೋ ಭುಂಕ್ತೇ ತೈಃ ಸಹ ಸುವ್ರತಃ|

14093004c ಷಷ್ಠೇ ಕಾಲೇ ಕದಾ ಚಿಚ್ಚ ತಸ್ಯಾಹಾರೋ ನ ವಿದ್ಯತೇ|

14093004e ಭುಂಕ್ತೇಽನ್ಯಸ್ಮಿನ್ಕದಾ ಚಿತ್ಸ ಷಷ್ಠೇ ಕಾಲೇ ದ್ವಿಜೋತ್ತಮಃ||

ಆ ದ್ವಿಜಸತ್ತಮನು ಪ್ರತಿ ಆರನೆಯ ಕಾಲದಲ್ಲಿ (ಮೂರು ದಿನಗಳಿಗೊಮ್ಮೆ) ತನ್ನ ಕುಟುಂಬದವರೊಡನೆ ಊಟ ಮಾಡುತ್ತಿದ್ದನು. ಒಂದುವೇಳೆ ಮೂರು ದಿನಗಳಲ್ಲಿ ಆಹಾರವು ದೊರೆಯದೇ ಇದ್ದರೆ ಪುನಃ ಮುಂದಿನ ಮೂರು ದಿನಗಳು ಬರುವವರೆಗೆ ಕಾಯ್ದಿದ್ದು ಊಟ ಮಾಡುತ್ತಿದ್ದನು.

14093005a ಕಪೋತಧರ್ಮಿಣಸ್ತಸ್ಯ ದುರ್ಭಿಕ್ಷೇ ಸತಿ ದಾರುಣೇ|

14093005c ನಾವಿದ್ಯತ ತದಾ ವಿಪ್ರಾಃ ಸಂಚಯಸ್ತಾನ್ನಿಬೋಧತ|

14093005e ಕ್ಷೀಣೌಷಧಿಸಮಾವಾಯೋ ದ್ರವ್ಯಹೀನೋಽಭವತ್ ತದಾ||

ಹೀಗೆ ಅವನು ಕಪೋತಧರ್ಮವನ್ನು ನಿರ್ವಹಿಸುತ್ತಿದ್ದಾಗ ಒಮ್ಮೆ ದಾರುಣ ದುರ್ಭಿಕ್ಷವುಂಟಾಯಿತು. ವಿಪ್ರರೇ! ಆಗ ಅವನಲ್ಲಿ ಧಾನ್ಯಗಳ ಸಂಗ್ರಹವಿರಲಿಲ್ಲ. ಗದ್ದೆಗಳು ಒಣಗಿ ಹೋಗಿದ್ದವು. ಆಗ ಅವನು ದ್ರವ್ಯಹೀನನಾದನು.

14093006a ಕಾಲೇ ಕಾಲೇಽಸ್ಯ ಸಂಪ್ರಾಪ್ತೇ ನೈವ ವಿದ್ಯೇತ ಭೋಜನಮ್|

14093006c ಕ್ಷುಧಾಪರಿಗತಾಃ ಸರ್ವೇ ಪ್ರಾತಿಷ್ಠಂತ ತದಾ ತು ತೇ||

ಆರನೆಯ ಕಾಲವು ಒಂದಾದ ಮೇಲೆ ಒಂದರಂತೆ ಬರುತ್ತಿತ್ತೇ ಹೊರತು ಅವನಲ್ಲಿ ಊಟಕ್ಕೆ ಏನೂ ಇರಲಿಲ್ಲ. ಆಗ ಕುಟುಂಬದ ಎಲ್ಲರೂ ಹಸಿವೆಯಿಂದ ಪೀಡಿತರಾದರು.

14093007a ಉಂಚಂಸ್ತದಾ ಶುಕ್ಲಪಕ್ಷೇ ಮಧ್ಯಂ ತಪತಿ ಭಾಸ್ಕರೇ|

14093007c ಉಷ್ಣಾರ್ತಶ್ಚ ಕ್ಷುಧಾರ್ತಶ್ಚ ಸ ವಿಪ್ರಸ್ತಪಸಿ ಸ್ಥಿತಃ|

14093007e ಉಂಚಮಪ್ರಾಪ್ತವಾನೇವ ಸಾರ್ಧಂ ಪರಿಜನೇನ ಹ||

ಜ್ಯೇಷ್ಠ ಶುಕ್ಲಪಕ್ಷದ ಒಂದು ದಿನ ಅವರು ಮಧ್ಯಾಹ್ನದ ವೇಳೆಯಲ್ಲಿ ಸೂರ್ಯನು ಅಧಿಕ ತಾಪವನ್ನುಂಟುಮಾಡುತ್ತಿದ್ದಾಗ ಕಾಳುಗಳನ್ನು ಆರಿಸಿಕೊಂಡು ಬರಲು ಒಟ್ಟಾಗಿ ಹೊರಟರು.

14093008a ಸ ತಥೈವ ಕ್ಷುಧಾವಿಷ್ಟಃ ಸ್ಪೃಷ್ಟ್ವಾ ತೋಯಂ ಯಥಾವಿಧಿ|

14093008c ಕ್ಷಪಯಾಮಾಸ ತಂ ಕಾಲಂ ಕೃಚ್ಚ್ರಪ್ರಾಣೋ ದ್ವಿಜೋತ್ತಮಃ||

ಹಾಗೆ ಹಸಿವೆಯಿಂದ ಬಳಲಿದ್ದರೂ ಯಥಾವಿಧಿಯಾಗಿ ಆಚಮನ ಮಾಡಿ ಕಷ್ಟಪಟ್ಟು ಪ್ರಾಣಗಳನ್ನು ಹಿಡಿದಿಟ್ಟುಕೊಂಡಿದ್ದ ಆ ದ್ವಿಜೋತ್ತಮನು ಕಾಲವನ್ನು ಕಳೆದನು.

14093009a ಅಥ ಷಷ್ಠೇ ಗತೇ ಕಾಲೇ ಯವಪ್ರಸ್ಥಮುಪಾರ್ಜಯತ್|

14093009c ಯವಪ್ರಸ್ಥಂ ಚ ತೇ ಸಕ್ತೂನಕುರ್ವಂತ ತಪಸ್ವಿನಃ||

ಮತ್ತೊಂದು ಮೂರನೆಯ ದಿನವು ಪ್ರಾಪ್ತವಾಗಲು ಆ ತಪಸ್ವಿಗಳು ಒಂದು ಸೇರಿನಷ್ಟು ಯವೆಯನ್ನು ಸಂಗ್ರಹಿಸಿದರು.

14093010a ಕೃತಜಪ್ಯಾಹ್ವಿಕಾಸ್ತೇ ತು ಹುತ್ವಾ ವಹ್ನಿಂ ಯಥಾವಿಧಿ|

14093010c ಕುಡವಂ ಕುಡವಂ ಸರ್ವೇ ವ್ಯಭಜಂತ ತಪಸ್ವಿನಃ||

ಜಪ-ಆಹ್ನೀಕಗಳನ್ನು ಪೂರೈಸಿ ಯಥಾವಿಧಿಯಾಗಿ ಅಗ್ನಿಯಲ್ಲಿ ಹೋಮ ಮಾಡಿ ಆ ತಪಸ್ವಿಗಳೆಲ್ಲರೂ ಒಂದೊಂದು ಪಾವಿನಷ್ಟು ಹಿಟ್ಟನ್ನು ಹಂಚಿಕೊಂಡರು.

14093011a ಅಥಾಗಚ್ಚದ್ದ್ವಿಜಃ ಕಶ್ಚಿದತಿಥಿರ್ಭುಂಜತಾಂ ತದಾ|

14093011c ತೇ ತಂ ದೃಷ್ಟ್ವಾತಿಥಿಂ ತತ್ರ ಪ್ರಹೃಷ್ಟಮನಸೋಽಭವನ್||

ಅವರು ಹಾಗೆ ತಿನ್ನಬೇಕೆಂದಿರುವಾಗ ಅಲ್ಲಿಗೆ ಓರ್ವ ದ್ವಿಜನು ಅತಿಥಿಯಾಗಿ ಆಗಮಿಸಿದನು. ಅಲ್ಲಿ ಅತಿಥಿಯನ್ನು ನೋಡಿ ಅವರು ಪ್ರಹೃಷ್ಟಮನಸ್ಕರಾದರು.

14093012a ತೇಽಭಿವಾದ್ಯ ಸುಖಪ್ರಶ್ನಂ ಪೃಷ್ಟ್ವಾ ತಮತಿಥಿಂ ತದಾ|

14093012c ವಿಶುದ್ಧಮನಸೋ ದಾಂತಾಃ ಶ್ರದ್ಧಾದಮಸಮನ್ವಿತಾಃ||

14093013a ಅನಸೂಯವೋ ಗತಕ್ರೋಧಾಃ ಸಾಧವೋ ಗತಮತ್ಸರಾಃ|

14093013c ತ್ಯಕ್ತಮಾನಾ ಜಿತಕ್ರೋಧಾ ಧರ್ಮಜ್ಞಾ ದ್ವಿಜಸತ್ತಮಾಃ||

14093014a ಸಬ್ರಹ್ಮಚರ್ಯಂ ಸ್ವಂ ಗೋತ್ರಂ ಸಮಾಖ್ಯಾಯ ಪರಸ್ಪರಮ್|

14093014c ಕುಟೀಂ ಪ್ರವೇಶಯಾಮಾಸುಃ ಕ್ಷುಧಾರ್ತಮತಿಥಿಂ ತದಾ||

ಆಗ ಆ ಅತಿಥಿಯನ್ನು ಅಭಿವಂದಿಸಿ ಸುಖಪ್ರಶ್ನೆಗಳನ್ನು ಕೇಳಿ ವಿಶುದ್ಧಮನಸ್ಸಿನ, ಕ್ರೋಧ-ಮತ್ಸರಗಳನ್ನು ತೊರೆದಿದ್ದ, ಮಾನವನ್ನು ತ್ಯಜಿಸಿದ್ದ, ಕ್ರೋಧವನ್ನು ಗೆದ್ದಿದ್ದ ಬ್ರಹ್ಮಚರ್ಯದಲ್ಲಿದ್ದ ಆ ಸಾಧು ಧರ್ಮಜ್ಞ ದ್ವಿಜಸತ್ತಮರು ಪರಸ್ಪರರಲ್ಲಿ ತಮ್ಮ ಗೋತ್ರಗಳನ್ನು ಹೇಳಿಕೊಂಡು ಹಸಿವೆಯಿಂದ ಪೀಡಿತನಾಗಿದ್ದ ಅತಿಥಿಯೊಂದಿಗೆ ಕುಟೀರವನ್ನು ಪ್ರವೇಶಿಸಿದರು.

14093015a ಇದಮರ್ಘ್ಯಂ ಚ ಪಾದ್ಯಂ ಚ ಬೃಸೀ ಚೇಯಂ ತವಾನಘ|

14093015c ಶುಚಯಃ ಸಕ್ತವಶ್ಚೇಮೇ ನಿಯಮೋಪಾರ್ಜಿತಾಃ ಪ್ರಭೋ|

14093015e ಪ್ರತಿಗೃಹ್ಣೀಷ್ವ ಭದ್ರಂ ತೇ ಮಯಾ ದತ್ತಾ ದ್ವಿಜೋತ್ತಮ||

“ಅನಘ! ಪ್ರಭೋ! ದ್ವಿಜೋತ್ತಮ! ನಿನಗೆ ಮಂಗಳವಾಗಲಿ! ಇದೋ ನಿನಗೆ ಅರ್ಘ್ಯ, ಪಾದ್ಯ ಮತ್ತು ದರ್ಭಾಸನ. ಇದೋ ನಿಯಮಪೂರ್ವಕವಾಗಿ ಸಂಗ್ರಹಿಸಿದ ಶುದ್ಧ ಹಿಟ್ಟಿನುಂಡೆಗಳು! ನಾವು ನೀಡುತ್ತಿರುವ ಇವುಗಳನ್ನು ಸ್ವೀಕರಿಸು!”

14093016a ಇತ್ಯುಕ್ತಃ ಪ್ರತಿಗೃಹ್ಯಾಥ ಸಕ್ತೂನಾಂ ಕುಡವಂ ದ್ವಿಜಃ|

14093016c ಭಕ್ಷಯಾಮಾಸ ರಾಜೇಂದ್ರ ನ ಚ ತುಷ್ಟಿಂ ಜಗಾಮ ಸಃ||

ಹೀಗೆ ಹೇಳಲು ಆ ದ್ವಿಜನು ಹಿಟ್ಟಿನ ಉಂಡೆಗಳನ್ನು ಸ್ವೀಕರಿಸಿದನು. ರಾಜೇಂದ್ರ! ಅವುಗಳನ್ನು ತಿಂದರೂ ಅವನಿಗೆ ತೃಪ್ತಿಯೆನಿಸಲಿಲ್ಲ.

14093017a ಸ ಉಂಚವೃತ್ತಿಃ ತಂ ಪ್ರೇಕ್ಷ್ಯ ಕ್ಷುಧಾಪರಿಗತಂ ದ್ವಿಜಮ್|

14093017c ಆಹಾರಂ ಚಿಂತಯಾಮಾಸ ಕಥಂ ತುಷ್ಟೋ ಭವೇದಿತಿ||

ದ್ವಿಜನು ಇನ್ನೂ ಹಸಿದಿದ್ದುದನ್ನು ನೋಡಿದ ಆ ಉಂಚವೃತ್ತಿಯವರು ಹೇಗೆ ಅವನನ್ನು ಆಹಾರದಿಂದ ಸಂತುಷ್ಟಿಗೊಳಿಸಬಹುದು ಎಂದು ಚಿಂತಿಸಿದರು.

14093018a ತಸ್ಯ ಭಾರ್ಯಾಬ್ರವೀದ್ರಾಜನ್ಮದ್ಭಾಗೋ ದೀಯತಾಮಿತಿ|

14093018c ಗಚ್ಚತ್ವೇಷ ಯಥಾಕಾಮಂ ಸಂತುಷ್ಟೋ ದ್ವಿಜಸತ್ತಮಃ||

ರಾಜನ್! ಬ್ರಾಹ್ಮಣನ ಪತ್ನಿಯು “ನನ್ನ ಪಾಲನ್ನು ನೀಡು. ಅದನ್ನು ಭುಂಜಿಸಿ ದ್ವಿಜಸತ್ತಮನು ಸಂತುಷ್ಟನಾಗಿ ಬೇಕೆಂದಲ್ಲಿಗೆ ಹೋಗಲಿ” ಎಂದಳು.

14093019a ಇತಿ ಬ್ರುವಂತೀಂ ತಾಂ ಸಾಧ್ವೀಂ ಧರ್ಮಾತ್ಮಾ ಸ ದ್ವಿಜರ್ಷಭಃ|

14093019c ಕ್ಷುಧಾಪರಿಗತಾಂ ಜ್ಞಾತ್ವಾ ಸಕ್ತೂಂಸ್ತಾನ್ನಾಭ್ಯನಂದತ||

ಹೀಗೆ ಹೇಳಿದ ಆ ಸಾಧ್ವಿಯು ಹಸಿವೆಯಿಂದ ಬಳಲುತ್ತಿರುವುದನ್ನು ತಿಳಿದ ಆ ಧರ್ಮಾತ್ಮ ದ್ವಿಜರ್ಷಭನು ಅವಳ ಪಾಲಿನ ಹಿಟ್ಟಿನುಂಡೆಯನ್ನು ತೆಗೆದುಕೊಳ್ಳಲು ಇಷ್ಟಪಡಲಿಲ್ಲ.

14093020a ಜಾನನ್ವೃದ್ಧಾಂ ಕ್ಷುಧಾರ್ತಾಂ ಚ ಶ್ರಾಂತಾಂ ಗ್ಲಾನಾಂ ತಪಸ್ವಿನೀಮ್|

14093020c ತ್ವಗಸ್ಥಿಭೂತಾಂ ವೇಪಂತೀಂ ತತೋ ಭಾರ್ಯಾಮುವಾಚ ತಾಮ್||

ಹಸಿವೆಯಿಂದ ಪೀಡಿತಳಾಗಿ ಆಯಾಸಗೊಂಡಿರುವ, ಬಳಲಿದ್ದ, ಕೇವಲ ಚರ್ಮ-ಮೂಳೆಗಳನ್ನು ಹೊಂದಿದ್ದ, ನಡುಗುತ್ತಿದ್ದ ಆ ವೃದ್ಧ ತಪಸ್ವಿನಿ ಪತ್ನಿಗೆ ಅವನು ಇಂತೆಂದನು:

14093021a ಅಪಿ ಕೀಟಪತಂಗಾನಾಂ ಮೃಗಾಣಾಂ ಚೈವ ಶೋಭನೇ|

14093021c ಸ್ತ್ರಿಯೋ ರಕ್ಷ್ಯಾಶ್ಚ ಪೋಷ್ಯಾಶ್ಚ ನೈವಂ ತ್ವಂ ವಕ್ತುಮರ್ಹಸಿ||

“ಶೋಭನೇ! ಕೀಟ-ಪತಂಗ-ಮೃಗಗಳಿಗೂ ಸ್ತ್ರೀಯನ್ನು ರಕ್ಷಿಸುವುದು ಮತ್ತು ಪೋಷಿಸುವುದು ಕರ್ತ್ಯವ್ಯವಾಗಿರುವಾಗ ನೀನು ಹೀಗೆ ಹೇಳುವುದು ಸರಿಯಲ್ಲ.

14093022a ಅನುಕಂಪಿತೋ ನರೋ ನಾರ್ಯಾ ಪುಷ್ಟೋ ರಕ್ಷಿತ ಏವ ಚ|

14093022c ಪ್ರಪತೇದ್ಯಶಸೋ ದೀಪ್ತಾನ್ನ ಚ ಲೋಕಾನವಾಪ್ನುಯಾತ್||[3]

ನಾರಿಯ ಅನುಕಂಪಕ್ಕೆ ಪಾತ್ರನಾಗಿ ಅವಳಿಂದ ಪೋಷಿಸಿ ರಕ್ಷಿಸಲ್ಪಡುವವನು ಉಜ್ವಲ ಕೀರ್ತಿಯಿಂದ ಭ್ರಷ್ಟನಾಗುತ್ತಾನೆ ಮತ್ತು ಉತ್ತಮ ಲೋಕಗಳೂ ಅವನಿಗೆ ದೊರೆಯುವುದಿಲ್ಲ.”

14093023a ಇತ್ಯುಕ್ತಾ ಸಾ ತತಃ ಪ್ರಾಹ ಧರ್ಮಾರ್ಥೌ ನೌ ಸಮೌ ದ್ವಿಜ|

14093023c ಸಕ್ತುಪ್ರಸ್ಥಚತುರ್ಭಾಗಂ ಗೃಹಾಣೇಮಂ ಪ್ರಸೀದ ಮೇ||

ಅವನು ಹೀಗೆ ಹೇಳಲು ಅವಳು ಹೇಳಿದಳು: “ದ್ವಿಜ! ಪ್ರಸನ್ನನಾಗು! ಧರ್ಮಾರ್ಥಗಳು ನಮಗಿಬ್ಬರಿಗೂ ಸಮಾನವಲ್ಲವೇ? ಆದುದರಿಂದ ಹಿಟ್ಟಿನುಂಡೆಯ ಈ ನಾಲ್ಕನೆಯ ಒಂದು ಭಾಗವನ್ನು ಸ್ವೀಕರಿಸು.

14093024a ಸತ್ಯಂ ರತಿಶ್ಚ ಧರ್ಮಶ್ಚ ಸ್ವರ್ಗಶ್ಚ ಗುಣನಿರ್ಜಿತಃ|

14093024c ಸ್ತ್ರೀಣಾಂ ಪತಿಸಮಾಧೀನಂ ಕಾಂಕ್ಷಿತಂ ಚ ದ್ವಿಜೋತ್ತಮ||

ದ್ವಿಜೋತ್ತಮ! ಸ್ತ್ರೀಯ ಸತ್ಯ, ರತಿ, ಧರ್ಮ ಗುಣಗಳಿಂದ ಗೆಲ್ಲಲ್ಪಟ್ಟ ಸ್ವರ್ಗವು ಪತಿಯ ಸಮಾಧೀನವಾಗುತ್ತದೆ.

14093025a ಋತುರ್ಮಾತುಃ ಪಿತುರ್ಬೀಜಂ ದೈವತಂ ಪರಮಂ ಪತಿಃ|

14093025c ಭರ್ತುಃ ಪ್ರಸಾದಾತ್ ಸ್ತ್ರೀಣಾಂ ವೈ ರತಿಃ ಪುತ್ರಫಲಂ ತಥಾ||

ತಾಯಿಯ ಋತು ಮತ್ತು ತಂದೆಯ ಬೀಜಗಳಿಂದಲೇ ವಂಶದ ವೃದ್ಧಿಯಾಗುತ್ತದೆ. ಸ್ತ್ರೀಗೆ ಪತಿಯೇ ಪರವ ದೈವವು. ಪತಿಯ ಪ್ರಸಾದದಿಂದಲೇ ಸ್ತ್ರೀಗೆ ರತಿ ಮತ್ತು ಪುತ್ರಫಲಗಳು ಲಭ್ಯವಾಗುತ್ತವೆ.

14093026a ಪಾಲನಾದ್ಧಿ ಪತಿಸ್ತ್ವಂ ಮೇ ಭರ್ತಾಸಿ ಭರಣಾನ್ಮಮ|

14093026c ಪುತ್ರಪ್ರದಾನಾದ್ವರದಸ್ತಸ್ಮಾತ್ಸಕ್ತೂನ್ಗೃಹಾಣ ಮೇ||

ಪಾಲನೆಮಾಡುತ್ತಿರುವ ನೀನು ನನ್ನ ಪತಿಯೆನಿಸಿಕೊಂಡಿರುವೆ. ನನ್ನನ್ನು ಭರಿಸುವುದರಿಂದ ನೀನು ನನ್ನ ಭರ್ತೃ ಎಂದೆನಿಸಿಕೊಂಡಿರುವೆ. ಪುತ್ರನನ್ನು ನೀಡಿರುವೆಯಾದುದರಿಂದ ನೀನು ವರದನೂ ಆಗಿರುವೆ. ನನ್ನ ಈ ಹಿಟ್ಟಿನುಂಡೆಯನ್ನು ಪ್ರತಿಗ್ರಹಿಸು.

14093027a ಜರಾಪರಿಗತೋ ವೃದ್ಧಃ ಕ್ಷುಧಾರ್ತೋ ದುರ್ಬಲೋ ಭೃಶಮ್|

14093027c ಉಪವಾಸಪರಿಶ್ರಾಂತೋ ಯದಾ ತ್ವಮಪಿ ಕರ್ಶಿತಃ||

ನೀನು ಕೂಡ ಮುಪ್ಪಿನಿಂದ ಜೀರ್ಣನಾಗಿರುವೆ. ವೃದ್ಧನಾಗಿರುವೆ. ಹಸಿವೆಯಿಂದ ಬಳಲಿ ತುಂಬಾ ದುರ್ಬಲನಾಗಿರುವೆ. ಉಪವಾಸಗಳಿಂದ ಆಯಾಸಗೊಂಡು ನೀನೂ ಕೂಡ ಕ್ಷೀಣಕಾಯನಾಗಿರುವೆ.”

14093028a ಇತ್ಯುಕ್ತಃ ಸ ತಯಾ ಸಕ್ತೂನ್ಪ್ರಗೃಹ್ಯೇದಂ ವಚೋಽಬ್ರವೀತ್|

14093028c ದ್ವಿಜ ಸಕ್ತೂನಿಮಾನ್ಭೂಯಃ ಪ್ರತಿಗೃಹ್ಣೀಷ್ವ ಸತ್ತಮ||

ಅವಳು ಹೀಗೆ ಹೇಳಲು ಬ್ರಾಹ್ಮಣನು ಅವಳಿಂದ ಹಿಟ್ಟಿನ ಉಂಡೆಯನ್ನು ಪಡೆದು ಅದನ್ನು ಅತಿಥಿಗೆ ನೀಡಿ “ದ್ವಿಜ! ಸತ್ತಮ! ಈ ಹಿಟ್ಟಿನ ಉಂಡೆಯನ್ನೂ ಸ್ವೀಕರಿಸು!” ಎಂದನು.

14093029a ಸ ತಾನ್ಪ್ರಗೃಹ್ಯ ಭುಕ್ತ್ವಾ ಚ ನ ತುಷ್ಟಿಮಗಮದ್ದ್ವಿಜಃ|

14093029c ತಮುಂಚವೃತ್ತಿರಾಲಕ್ಷ್ಯ ತತಶ್ಚಿಂತಾಪರೋಽಭವತ್||

ಅದನ್ನೂ ಸ್ವೀಕರಿಸಿ ತಿಂದ ದ್ವಿಜನು ತುಷ್ಟನಾಗಲಿಲ್ಲ. ಅದನ್ನು ನೋಡಿದ ಉಂಚವೃತ್ತಿಯವರು ಇನ್ನೂ ಚಿಂತಾಪರರಾದರು.

14093030 ಪುತ್ರ ಉವಾಚ

14093030a ಸಕ್ತೂನಿಮಾನ್ಪ್ರಗೃಹ್ಯ ತ್ವಂ ದೇಹಿ ವಿಪ್ರಾಯ ಸತ್ತಮ|

14093030c ಇತ್ಯೇವಂ ಸುಕೃತಂ ಮನ್ಯೇ ತಸ್ಮಾದೇತತ್ಕರೋಮ್ಯಹಮ್||

ಪುತ್ರನು ಹೇಳಿದನು: “ಈ ಹಿಟ್ಟಿನ ಉಂಡೆಗಳನ್ನು ಪಡೆದು ವಿಪ್ರನಿಗೆ ನೀಡು. ಇದೇ ಸುಕೃತವೆಂದು ನನಗನ್ನಿಸುತ್ತದೆ. ಆದುದರಿಂದ ಇದನ್ನು ನಾನು ಕೊಡುತ್ತೇನೆ.

14093031a ಭವಾನ್ ಹಿ ಪರಿಪಾಲ್ಯೋ ಮೇ ಸರ್ವಯತ್ನೈರ್ದ್ವಿಜೋತ್ತಮ|

14093031c ಸಾಧೂನಾಂ ಕಾಂಕ್ಷಿತಂ ಹ್ಯೇತತ್ಪಿತುರ್ವೃದ್ಧಸ್ಯ ಪೋಷಣಮ್||

ದ್ವಿಜೋತ್ತಮ! ಸರ್ವ ಪ್ರಯತ್ನಗಳಿಂದಲೂ ನಿನ್ನನ್ನು ಪರಿಪಾಲಿಸುವುದು ನನ್ನ ಕರ್ತ್ಯವ್ಯ. ವೃದ್ಧ ತಂದೆಯ ಪೋಷಣೆಯನ್ನು ಸಾಧುಗಳು ಬಯಸುತ್ತಾರೆ.

14093032a ಪುತ್ರಾರ್ಥೋ ವಿಹಿತೋ ಹ್ಯೇಷ ಸ್ಥಾವಿರ್ಯೇ ಪರಿಪಾಲನಮ್|

14093032c ಶ್ರುತಿರೇಷಾ ಹಿ ವಿಪ್ರರ್ಷೇ ತ್ರಿಷು ಲೋಕೇಷು ವಿಶ್ರುತಾ||

ವೃದ್ಧನನ್ನು ಪರಿಪಾಲಿಸುವುದು ಪುತ್ರನಿಗೆ ವಿಹಿಸಿದ ಧರ್ಮ. ವಿಪ್ರರ್ಷೇ! ಇದನ್ನೇ ಮೂರು ಲೋಕಗಳಲ್ಲಿಯೂ ಶ್ರುತಿಗಳು ಸಾರುತ್ತವೆ.

14093033a ಪ್ರಾಣಧಾರಣಮಾತ್ರೇಣ ಶಕ್ಯಂ ಕರ್ತುಂ ತಪಸ್ತ್ವಯಾ|

14093033c ಪ್ರಾಣೋ ಹಿ ಪರಮೋ ಧರ್ಮಃ ಸ್ಥಿತೋ ದೇಹೇಷು ದೇಹಿನಾಮ್||

ಪ್ರಾಣಧಾರಣಮಾತ್ರದಿಂದಲೇ ನೀನು ತಪಸ್ಸನ್ನಾಚರಿಸಲು ಶಕ್ಯನಾಗುತ್ತೀಯೆ. ದೇಹಧಾರಿಗಳಿಗೆ ದೇಹದಲ್ಲಿರುವ ಪ್ರಾಣವೇ ಪರಮ ಧರ್ಮ.”

14093034 ಪಿತೋವಾಚ

14093034a ಅಪಿ ವರ್ಷಸಹಸ್ರೀ ತ್ವಂ ಬಾಲ ಏವ ಮತೋ ಮಮ|

14093034c ಉತ್ಪಾದ್ಯ ಪುತ್ರಂ ಹಿ ಪಿತಾ ಕೃತಕೃತ್ಯೋ ಭವತ್ಯುತ||

ತಂದೆಯು ಹೇಳಿದನು: “ನಿನಗೆ ಸಹಸ್ರ ವರ್ಷಗಳಾದರೂ ನೀನು ನನಗೆ ಬಾಲಕನಂತೆಯೇ! ಪುತ್ರನನ್ನು ಪಡೆದಾಗಲೇ ತಂದೆಯು ಕೃತಕೃತ್ಯನಾಗುತ್ತಾನೆ ಎಂದು ಹೇಳುತ್ತಾರೆ.

14093035a ಬಾಲಾನಾಂ ಕ್ಷುದ್ಬಲವತೀ ಜಾನಾಮ್ಯೇತದಹಂ ವಿಭೋ|

14093035c ವೃದ್ಧೋಽಹಂ ಧಾರಯಿಷ್ಯಾಮಿ ತ್ವಂ ಬಲೀ ಭವ ಪುತ್ರಕ||

ಪುತ್ರಕ! ಬಾಲಕರ ಹಸಿವೆಯು ಬಲವತ್ತರವಾದುದು ಎನ್ನುವುದನ್ನು ನಾನು ತಿಳಿದುಕೊಂಡಿದ್ದೇನೆ. ವೃದ್ಧನಾದ ನಾನು ಹಸಿವೆಯನ್ನು ತಡೆದುಕೊಳ್ಳುತ್ತಾನೆ. ಹಿಟ್ಟಿನುಂಡೆಯನ್ನು ತಿಂದು ನೀನು ಬಲಿಷ್ಟನಾಗು.

14093036a ಜೀರ್ಣೇನ ವಯಸಾ ಪುತ್ರ ನ ಮಾ ಕ್ಷುದ್ಬಾಧತೇಽಪಿ ಚ|

14093036c ದೀರ್ಘಕಾಲಂ ತಪಸ್ತಪ್ತಂ ನ ಮೇ ಮರಣತೋ ಭಯಮ್||

ಪುತ್ರ! ವಯಸ್ಸಿನಲ್ಲಿ ಜೀರ್ಣನಾಗಿರುವ ನನ್ನನ್ನು ಹಸಿವೆಯು ಬಾಧಿಸುವುದಿಲ್ಲ. ದೀರ್ಘಕಾಲ ತಪಸ್ಸನ್ನು ತಪಿಸಿರುವ ನನಗೆ ಮರಣದ ಭಯವೂ ಇಲ್ಲ.”

14093037 ಪುತ್ರ ಉವಾಚ

14093037a ಅಪತ್ಯಮಸ್ಮಿ ತೇ ಪುತ್ರಸ್ತ್ರಾಣಾತ್ಪುತ್ರೋ ಹಿ ವಿಶ್ರುತಃ|

14093037c ಆತ್ಮಾ ಪುತ್ರಃ ಸ್ಮೃತಸ್ತಸ್ಮಾತ್ತ್ರಾಹ್ಯಾತ್ಮಾನಮಿಹಾತ್ಮನಾ||

ಪುತ್ರನು ಹೇಳಿದನು: “ನಾನು ನಿನ್ನ ಪುತ್ರನಾಗಿದ್ದೇನೆ. ಪುರುಷನನು ರಕ್ಷಿಸುವುದರಿಂದಲೇ ಪುತ್ರನೆನಿಸಿಕೊಳ್ಳುತ್ತಾನೆ. ಪುತ್ರನನ್ನು ಆತ್ಮನೆಂದೇ ಹೇಳುತ್ತಾರೆ. ಆತ್ಮನಿಂದ ಅತ್ಮನನ್ನು ರಕ್ಷಣೆಮಾಡಿಕೋ!”

14093038 ಪಿತೋವಾಚ

14093038a ರೂಪೇಣ ಸದೃಶಸ್ತ್ವಂ ಮೇ ಶೀಲೇನ ಚ ದಮೇನ ಚ|

14093038c ಪರೀಕ್ಷಿತಶ್ಚ ಬಹುಧಾ ಸಕ್ತೂನಾದದ್ಮಿ ತೇ ತತಃ||

ತಂದೆಯು ಹೇಳಿದನು: “ರೂಪ, ಶೀಲ ಮತ್ತು ಇಂದ್ರಿಯಸಂಯಮಗಳಲ್ಲಿ ನೀನು ನನ್ನ ಹಾಗೆಯೇ ಇದ್ದೀಯೆ. ನಿನ್ನನ್ನು ಅನೇಕ ಬಾರಿ ಪರೀಕ್ಷಿಸಿದ್ದೇನೆ ಕೂಡ. ಆದುದರಿಂದ ನಿನ್ನ ಈ ಹಿಟ್ಟಿನುಂಡೆಯನ್ನು ತೆಗೆದುಕೊಳ್ಳುತ್ತೇನೆ.”

14093039a ಇತ್ಯುಕ್ತ್ವಾದಾಯ ತಾನ್ಸಕ್ತೂನ್ಪ್ರೀತಾತ್ಮಾ ದ್ವಿಜಸತ್ತಮಃ|

14093039c ಪ್ರಹಸನ್ನಿವ ವಿಪ್ರಾಯ ಸ ತಸ್ಮೈ ಪ್ರದದೌ ತದಾ||

ಹೀಗೆ ಹೇಳಿ ಪ್ರೀತಾತ್ಮನಾದ ಆ ದ್ವಿಜಸತ್ತಮನು ಮಗನ ಹಿಟ್ಟಿನುಂಡೆಯನ್ನು ತೆಗೆದುಕೊಂಡು ನಸುನಗುತ್ತಾ ಅತಿಥಿ ವಿಪ್ರನಿಗೆ ನೀಡಿದನು.

14093040a ಭುಕ್ತ್ವಾ ತಾನಪಿ ಸಕ್ತೂನ್ಸ ನೈವ ತುಷ್ಟೋ ಬಭೂವ ಹ|

14093040c ಉಂಚವೃತ್ತಿಸ್ತು ಸವ್ರೀಡೋ ಬಭೂವ ದ್ವಿಜಸತ್ತಮಃ||

ಆ ಉಂಡೆಯನ್ನು ಉಂಡೂ ಅವನು ತುಷ್ಟನಾಗಲಿಲ್ಲ. ಆಗ ಉಂಚವೃತ್ತಿಯ ದ್ವಿಜಸತ್ತಮನು ಅತೀವವಾಗಿ ನಾಚಿಕೊಂಡನು.

14093041a ತಂ ವೈ ವಧೂಃ ಸ್ಥಿತಾ ಸಾಧ್ವೀ ಬ್ರಾಹ್ಮಣಪ್ರಿಯಕಾಮ್ಯಯಾ|

14093041c ಸಕ್ತೂನಾದಾಯ ಸಂಹೃಷ್ಟಾ ಗುರುಂ ತಂ ವಾಕ್ಯಮಬ್ರವೀತ್||

ಆಗ ಅವನ ಸಾಧ್ವೀ ಸೊಸೆಯು ಬ್ರಾಹ್ಮಣನಿಗೆ ಪ್ರಿಯವಾದುದನ್ನು ಮಾಡಲು ಬಯಸಿ ಸಂಹೃಷ್ಟಳಾಗಿ ತನ್ನ ಹಿಟ್ಟಿನುಂಡೆಯನ್ನು ತೆಗೆದು ಮಾವನಿಗೆ ಕೊಟ್ಟು ಹೇಳಿದಳು:

14093042a ಸಂತಾನಾತ್ತವ ಸಂತಾನಂ ಮಮ ವಿಪ್ರ ಭವಿಷ್ಯತಿ|

14093042c ಸಕ್ತೂನಿಮಾನತಿಥಯೇ ಗೃಹೀತ್ವಾ ತ್ವಂ ಪ್ರಯಚ್ಚ ಮೇ||

“ವಿಪ್ರ! ನಿನ್ನ ಸಂತಾನದಿಂದ ನನಗೆ ಸಂತಾನವಾಗುತ್ತದೆ. ನನ್ನ ಈ ಹಿಟ್ಟಿನುಂಡೆಗಳನ್ನು ತೆಗೆದುಕೊಂಡು ಅತಿಥಿಗೆ ನೀಡು ಎಂದು ಕೇಳಿಕೊಳ್ಳುತ್ತಿದ್ದೇನೆ.

14093043a ತವ ಪ್ರಸವನಿರ್ವೃತ್ಯಾ ಮಮ ಲೋಕಾಃ ಕಿಲಾಕ್ಷಯಾಃ|

14093043c ಪೌತ್ರೇಣ ತಾನವಾಪ್ನೋತಿ ಯತ್ರ ಗತ್ವಾ ನ ಶೋಚತಿ||

ನಿನ್ನ ಮಗನಿಂದಲೇ ನನಗೆ ಅಕ್ಷಯ ಲೋಕಗಳು ದೊರೆಯುತ್ತವೆ ತಾನೇ? ಯಾವ ಲೋಕಗಳಿಗೆ ಹೋದರೆ ಶೋಕವಿಲ್ಲವೋ ಆ ಲೋಕಗಳಿಗೆ ಪೌತ್ರರ ಮೂಲಕವೇ ಹೋಗುತ್ತಾರೆ.

14093044a ಧರ್ಮಾದ್ಯಾ ಹಿ ಯಥಾ ತ್ರೇತಾ ವಹ್ನಿತ್ರೇತಾ ತಥೈವ ಚ|

14093044c ತಥೈವ ಪುತ್ರಪೌತ್ರಾಣಾಂ ಸ್ವರ್ಗೇ ತ್ರೇತಾ ಕಿಲಾಕ್ಷಯಾ||

ಧರ್ಮ-ಅರ್ಥ-ಕಾಮಗಳೆಂಬ ಮೂರು ಧರ್ಮಗಳು ಮತ್ತು ಆಹವನೀಯ-ಗಾರ್ಹ್ಯಪತ್ಯ-ದಕ್ಷಿಣಾಗ್ನಿಗಳೆಂಬ ಮೂರು ಅಗ್ನಿಗಳು ಹೇಗೋ ಹಾಗೆ ಪುತ್ರ-ಪೌತ್ರ-ಪ್ರಪೌತ್ರರೆಂಬ ಮೂರು ಬಗೆಯ ಸಂತಾನಗಳೂ ಅಕ್ಷಯ ಸ್ವರ್ಗಕ್ಕೆ ಕಾರಣವಾಗುತ್ತವೆಯಲ್ಲವೇ?

14093045a ಪಿತೄಂಸ್ತ್ರಾಣಾತ್ತಾರಯತಿ ಪುತ್ರ ಇತ್ಯನುಶುಶ್ರುಮ|

14093045c ಪುತ್ರಪೌತ್ರೈಶ್ಚ ನಿಯತಂ ಸಾಧುಲೋಕಾನುಪಾಶ್ನುತೇ||

ಪಿತೃಗಳನ್ನು ಉದ್ಧರಿಸುವವನಾದುದರಿಂದ ಪುತ್ರನೆಂದು ಕರೆಯುತ್ತಾರೆ. ಪುತ್ರ-ಪೌತ್ರರು ನಿಶ್ಚಯವಾಗಿಯೂ ಸಾಧುಲೋಕಗಳಿಗೆ ಕೊಂಡೊಯ್ಯುತ್ತಾರೆ.”

14093046 ಶ್ವಶುರ ಉವಾಚ

14093046a ವಾತಾತಪವಿಶೀರ್ಣಾಂಗೀಂ ತ್ವಾಂ ವಿವರ್ಣಾಂ ನಿರೀಕ್ಷ್ಯ ವೈ|

14093046c ಕರ್ಶಿತಾಂ ಸುವ್ರತಾಚಾರೇ ಕ್ಷುಧಾವಿಹ್ವಲಚೇತಸಮ್||

14093047a ಕಥಂ ಸಕ್ತೂನ್ಗ್ರಹೀಷ್ಯಾಮಿ ಭೂತ್ವಾ ಧರ್ಮೋಪಘಾತಕಃ|

14093047c ಕಲ್ಯಾಣವೃತ್ತೇ ಕಲ್ಯಾಣಿ ನೈವಂ ತ್ವಂ ವಕ್ತುಮರ್ಹಸಿ||

ಮಾವನು ಹೇಳಿದನು: “ಉತ್ತಮ ವ್ರತ-ಆಚಾರಗಳುಳ್ಳವಳೇ! ಗಾಳಿಬಿಸಿಲುಗಳಿಗೆ ಸಿಲುಕಿ ಸುಕ್ಕಾಗಿರುವ, ವಿವರ್ಣಳಾಗಿರುವ, ಬಡಕಲಾಗಿರುವ ಮತ್ತು ಹಸಿವೆಯಿಂದ ವಿಹ್ವಲಳಾಗಿರುವ ನಿನ್ನನ್ನು ನೋಡಿ ನಾನು ನಿನ್ನ ಹಿಟ್ಟಿನುಂಡೆಗಳನ್ನು ಹೇಗೆ ತಾನೇ ತೆಗೆದುಕೊಳ್ಳಬಲ್ಲೆ? ಇದರಿಂದ ಧರ್ಮಘಾತಕನಾಗುವೆನಲ್ಲವೇ? ಕಲ್ಯಾಣನಡತೆಯುಳ್ಳವಳೇ! ಕಲ್ಯಾಣೀ! ನೀನು ಹೀಗೆ ಹೇಳುವುದು ಸರಿಯಲ್ಲ.

14093048a ಷಷ್ಠೇ ಕಾಲೇ ವ್ರತವತೀಂ ಶೀಲಶೌಚಸಮನ್ವಿತಾಮ್|

14093048c ಕೃಚ್ಚ್ರವೃತ್ತಿಂ ನಿರಾಹಾರಾಂ ದ್ರಕ್ಷ್ಯಾಮಿ ತ್ವಾಂ ಕಥಂ ನ್ವಹಮ್||

ಷಷ್ಠಕಾಲದ ವ್ರತದಲ್ಲಿರುವ ಶೀಲ-ಶೌಚಸಮನ್ವಿತಳಾದ, ಕಷ್ಟದ ವೃತ್ತಿಯಲ್ಲಿದ್ದುಕೊಂಡು ನಿರಾಹಾರಳಾಗಿರುವ ನಿನ್ನನ್ನು ನಾನು ಹೇಗೆ ತಾನೇ ನೋಡಲಿ?

14093049a ಬಾಲಾ ಕ್ಷುಧಾರ್ತಾ ನಾರೀ ಚ ರಕ್ಷ್ಯಾ ತ್ವಂ ಸತತಂ ಮಯಾ|

14093049c ಉಪವಾಸಪರಿಶ್ರಾಂತಾ ತ್ವಂ ಹಿ ಬಾಂಧವನಂದಿನೀ||

ಬಾಂಧವನಂದಿನೀ! ಬಾಲೆಯೂ, ಹಸಿವೆಯಿಂದ ಬಳಲಿದವಳೂ ಮತ್ತು ನಾರಿಯೂ ಆದ ನಿನ್ನನ್ನು ನಾನು ಸತತವೂ ರಕ್ಷಿಸಬೇಕು. ನೀನೂ ಕೂಡ ಉಪವಾಸದಿಂದ ಬಳಲಿದ್ದೀಯೆ.”

14093050 ಸ್ನುಷೋವಾಚ

14093050a ಗುರೋರ್ಮಮ ಗುರುಸ್ತ್ವಂ ವೈ ಯತೋ ದೈವತದೈವತಮ್|

14093050c ದೇವಾತಿದೇವಸ್ತಸ್ಮಾತ್ತ್ವಂ ಸಕ್ತೂನಾದತ್ಸ್ವ ಮೇ ವಿಭೋ||

ಸೊಸೆಯು ಹೇಳಿದಳು: “ವಿಭೋ! ನನ್ನ ಗುರುವಿಗೂ ಗುರುವು ನೀನು. ನನ್ನ ದೈವತದ ದೈವತನು ನೀನು. ದೇವನಿಗೂ ದೇವನಾಗಿರುವ ನೀನು ಈ ಹಿಟ್ಟಿನುಂಡೆಗಳನ್ನು ತೆಗೆದುಕೋ!

14093051a ದೇಹಃ ಪ್ರಾಣಶ್ಚ ಧರ್ಮಶ್ಚ ಶುಶ್ರೂಷಾರ್ಥಮಿದಂ ಗುರೋಃ|

14093051c ತವ ವಿಪ್ರ ಪ್ರಸಾದೇನ ಲೋಕಾನ್ಪ್ರಾಪ್ಸ್ಯಾಮ್ಯಭೀಪ್ಸಿತಾನ್||

ವಿಪ್ರ! ನನ್ನ ಈ ದೇಹ, ಪ್ರಾಣ ಮತ್ತು ಧರ್ಮಗಳು ಗುರುವಿನ ಶುಶ್ರೂಷೆಗೆಂದೇ ಇವೆ. ನಿನ್ನ ಪ್ರಸಾದದಿಂದ ನಾನು ಬಯಸಿದ ಲೋಕಗಳನ್ನು ಪಡೆಯಬಲ್ಲೆ.

14093052a ಅವೇಕ್ಷ್ಯಾ ಇತಿ ಕೃತ್ವಾ ತ್ವಂ ದೃಢಭಕ್ತ್ಯೇತಿ ವಾ ದ್ವಿಜ|

14093052c ಚಿಂತ್ಯಾ ಮಮೇಯಮಿತಿ ವಾ ಸಕ್ತೂನಾದಾತುಮರ್ಹಸಿ||

ದ್ವಿಜ! ಇವಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಾಗಲೀ, ಇವಳಲ್ಲಿ ದೃಢಭಕ್ತಿಯಿದೆ ಎಂದಾಗಲೀ, ಇವಳ ಕುರಿತು ನಾನು ಯೋಚಿಸಬೇಕಾಗಿದೆ ಎಂದಾಗಲೀ ನನ್ನ ಈ ಹಿಟ್ಟಿನುಂಡೆಗಳನ್ನು ಪಡೆದು ಅತಿಥಿಗೆ ಕೊಡಬೇಕು.”

14093053 ಶ್ವಶುರ ಉವಾಚ

14093053a ಅನೇನ ನಿತ್ಯಂ ಸಾಧ್ವೀ ತ್ವಂ ಶೀಲವೃತ್ತೇನ ಶೋಭಸೇ|

14093053c ಯಾ ತ್ವಂ ಧರ್ಮವ್ರತೋಪೇತಾ ಗುರುವೃತ್ತಿಮವೇಕ್ಷಸೇ||

14093054a ತಸ್ಮಾತ್ಸಕ್ತೂನ್ಗ್ರಹೀಷ್ಯಾಮಿ ವಧೂರ್ನಾರ್ಹಸಿ ವಂಚನಾಮ್|

14093054c ಗಣಯಿತ್ವಾ ಮಹಾಭಾಗೇ ತ್ವಂ ಹಿ ಧರ್ಮಭೃತಾಂ ವರಾ||

ಮಾವನು ಹೇಳಿದನು: “ಮಹಾಭಾಗೇ! ಧರ್ಮಭೃತರಲ್ಲಿ ಶ್ರೇಷ್ಠಳೇ! ನೀನು ನಿತ್ಯವೂ ಶೀಲನಡತೆಯಲ್ಲಿದ್ದುಕೊಂಡು ಸಾಧ್ವಿಯಾಗಿದ್ದೀಯೆ. ಶೋಭಿಸುತ್ತಿದ್ದೀಯೆ. ನೀನು ಧರ್ಮವ್ರತದಲ್ಲಿದ್ದುಕೊಂಡು ಗುರುಜನರ ಸೇವೆಯಲ್ಲಿ ನಿರತಳಾಗಿರುವೆ. ಆದುದರಿಂದ ಅತಿಥಿಸತ್ಕಾರದ ಪುಣ್ಯದಿಂದ ನೀನು ವಂಚಿತಳಾಗಬಾರದೆಂದು ಪರಿಗಣಿಸಿ ನಿನ್ನ ಹಿಟ್ಟಿನುಂಡೆಯನ್ನು ತೆಗೆದುಕೊಳ್ಳುತ್ತೇನೆ.”

14093055a ಇತ್ಯುಕ್ತ್ವಾ ತಾನುಪಾದಾಯ ಸಕ್ತೂನ್ಪ್ರಾದಾದ್ದ್ವಿಜಾತಯೇ|

14093055c ತತಸ್ತುಷ್ಟೋಽಭವದ್ವಿಪ್ರಸ್ತಸ್ಯ ಸಾಧೋರ್ಮಹಾತ್ಮನಃ||

ಹೀಗೆ ಹೇಳಿ ಅವನು ಅವಳ ಆ ಹಿಟ್ಟಿನುಂಡೆಯನ್ನು ತೆಗೆದುಕೊಂಡು ದ್ವಿಜಾತೀಯ ಅತಿಥಿಗೆ ನೀಡಿದನು. ಅದರಿಂದ ಸಾಧು ಮಹಾತ್ಮ ವಿಪ್ರನು ಸಂತುಷ್ಟನಾದನು.

14093056a ಪ್ರೀತಾತ್ಮಾ ಸ ತು ತಂ ವಾಕ್ಯಮಿದಮಾಹ ದ್ವಿಜರ್ಷಭಮ್|

14093056c ವಾಗ್ಮೀ ತದಾ ದ್ವಿಜಶ್ರೇಷ್ಠೋ ಧರ್ಮಃ ಪುರುಷವಿಗ್ರಹಃ||

ದ್ವಿಜಶ್ರೇಷ್ಠನ ವೇಶಧಾರಿಯಾಗಿದ್ದ ವಾಗ್ಮೀ ಧರ್ಮನು ಪ್ರಿತನಾಗಿ ದ್ವಿಜರ್ಷಭನಿಗೆ ಇಂತೆಂದನು:

14093057a ಶುದ್ಧೇನ ತವ ದಾನೇನ ನ್ಯಾಯೋಪಾತ್ತೇನ ಯತ್ನತಃ|

14093057c ಯಥಾಶಕ್ತಿ ವಿಮುಕ್ತೇನ ಪ್ರೀತೋಽಸ್ಮಿ ದ್ವಿಜಸತ್ತಮ||

“ದ್ವಿಜಸತ್ತಮ! ನ್ಯಾಯವಾಗಿ ಪ್ರಯತ್ನಿಸಿ ಸಂಪಾದಿಸಿದುದನ್ನು ನಿನ್ನ ಶಕ್ತಿಗೂ ಮೀರಿ ನೀಡಿದ ಈ ಶುದ್ಧದಾನದಿಂದ ನಾನು ಪ್ರೀತನಾಗಿದ್ದೇನೆ.

14093058a ಅಹೋ ದಾನಂ ಘುಷ್ಯತೇ ತೇ ಸ್ವರ್ಗೇ ಸ್ವರ್ಗನಿವಾಸಿಭಿಃ|

14093058c ಗಗನಾತ್ಪುಷ್ಪವರ್ಷಂ ಚ ಪಶ್ಯಸ್ವ ಪತಿತಂ ಭುವಿ||

ಇಗೋ! ಸ್ವರ್ಗವಾಸಿಗಳು ಸ್ವರ್ಗದಿಂದ ಘೋಷಿಸಿ ಈ ದಾನವನ್ನು ಪ್ರಶಂಸಿಸುತ್ತಿದ್ದಾರೆ. ಗಗನದಿಂದ ಭೂಮಿಯ ಮೇಲೆ ಬೀಳುತ್ತಿರುವ ಈ ಪುಷ್ಪವೃಷ್ಟಿಯನ್ನು ನೋಡು!

14093059a ಸುರರ್ಷಿದೇವಗಂಧರ್ವಾ ಯೇ ಚ ದೇವಪುರಃಸರಾಃ|

14093059c ಸ್ತುವಂತೋ ದೇವದೂತಾಶ್ಚ ಸ್ಥಿತಾ ದಾನೇನ ವಿಸ್ಮಿತಾಃ||

ದೇವತೆಗಳನ್ನು ಮುಂದಿಟ್ಟುಕೊಂಡು ಸುರರ್ಷಿ-ದೇವ-ಗಂಧರ್ವರು ದೇವದೂತರೂ ನಿನ್ನ ದಾನದಿಂದ ವಿಸ್ಮಿತರಾಗಿ ನಿನ್ನನ್ನು ಸ್ತುತಿಸುತ್ತಿದ್ದಾರೆ!

14093060a ಬ್ರಹ್ಮರ್ಷಯೋ ವಿಮಾನಸ್ಥಾ ಬ್ರಹ್ಮಲೋಕಗತಾಶ್ಚ ಯೇ|

14093060c ಕಾಂಕ್ಷಂತೇ ದರ್ಶನಂ ತುಭ್ಯಂ ದಿವಂ ಗಚ್ಚ ದ್ವಿಜರ್ಷಭ||

ದ್ವಿಜರ್ಷಭ! ವಿಮಾನಸ್ಥರಾಗಿ ಬ್ರಹ್ಮಲೋಕದಲ್ಲಿ ಸಂಚರಿಸುವ ಬ್ರಹ್ಮರ್ಷಿಗಳೂ ನಿನ್ನ ದರ್ಶನವನ್ನು ಅಪೇಕ್ಷಿಸುತ್ತಿದ್ದಾರೆ. ನೀನು ಸ್ವರ್ಗಕ್ಕೆ ಹೋಗು!

14093061a ಪಿತೃಲೋಕಗತಾಃ ಸರ್ವೇ ತಾರಿತಾಃ ಪಿತರಸ್ತ್ವಯಾ|

14093061c ಅನಾಗತಾಶ್ಚ ಬಹವಃ ಸುಬಹೂನಿ ಯುಗಾನಿ ಚ||

ಪಿತೃಲೋಕಕ್ಕೆ ಹೋಗಿರುವ ನಿನ್ನ ಪಿತೃಗಳೆಲ್ಲರನ್ನೂ ಮತ್ತು ಮುಂದೆ ಅನೇಕ ಯುಗಗಳಲ್ಲಿ ಬರುವ ನಿನ್ನ ಕುಲದವರನ್ನೂ ನೀನು ಉದ್ಧರಿಸಿದ್ದೀಯೆ.

14093062a ಬ್ರಹ್ಮಚರ್ಯೇಣ ಯಜ್ಞೇನ ದಾನೇನ ತಪಸಾ ತಥಾ|

14093062c ಅಗಹ್ವರೇಣ ಧರ್ಮೇಣ ತಸ್ಮಾದ್ಗಚ್ಚ ದಿವಂ ದ್ವಿಜ||

ದ್ವಿಜ! ಬ್ರಹ್ಮಚರ್ಯ, ಯಜ್ಞ, ದಾನ ಮತ್ತು ತಪಸ್ಸಿನಿಂದ ಸಂಕರವಿಲ್ಲದ ಧರ್ಮವನ್ನಾಚರಿಸಿದ್ದೀಯೆ. ಆದುದರಿಂದ ದಿವಕ್ಕೆ ಹೋಗು.

14093063a ಶ್ರದ್ಧಯಾ ಪರಯಾ ಯಸ್ತ್ವಂ ತಪಶ್ಚರಸಿ ಸುವ್ರತ|

14093063c ತಸ್ಮಾದ್ದೇವಾಸ್ತವಾನೇನ ಪ್ರೀತಾ ದ್ವಿಜವರೋತ್ತಮ||

ಸುವ್ರತ! ದ್ವಿಜವರೋತ್ತಮ! ಪರಮ ಶ್ರದ್ಧೆಯಿಂದ ನೀನು ತಪಸ್ಸನ್ನು ತಪಿಸಿರುವೆ! ಆದುದರಿಂದ ದೇವತೆಗಳೂ ನಿನ್ನ ಮೇಲೆ ಪ್ರೀತರಾಗಿದ್ದಾರೆ.

14093064a ಸರ್ವಸ್ವಮೇತದ್ಯಸ್ಮಾತ್ತೇ ತ್ಯಕ್ತಂ ಶುದ್ಧೇನ ಚೇತಸಾ|

14093064c ಕೃಚ್ಚ್ರಕಾಲೇ ತತಃ ಸ್ವರ್ಗೋ ಜಿತೋಽಯಂ ತವ ಕರ್ಮಣಾ||

ಕಷ್ಟಕಾಲದಲ್ಲಿಯೂ ನೀನು ನಿನ್ನದಾಗಿರುವ ಎಲ್ಲವನ್ನೂ ತ್ಯಜಿಸಿ ಶುದ್ಧ ಮನಸ್ಸಿನಿಂದ ದಾನಮಾಡಿರುವೆ. ನಿನ್ನ ಈ ಕರ್ಮದಿಂದ ನೀನು ಸ್ವರ್ಗವನ್ನು ಜಯಿಸಿದ್ದೀಯೆ.

14093065a ಕ್ಷುಧಾ ನಿರ್ಣುದತಿ ಪ್ರಜ್ಞಾಂ ಧರ್ಮ್ಯಾಂ ಬುದ್ಧಿಂ ವ್ಯಪೋಹತಿ|

14093065c ಕ್ಷುಧಾಪರಿಗತಜ್ಞಾನೋ ಧೃತಿಂ ತ್ಯಜತಿ ಚೈವ ಹ||

ಹಸಿವು ಪ್ರಜ್ಞೆಯನ್ನು ನಾಶಪಡಿಸುತ್ತದೆ. ಧರ್ಮಬುದ್ಧಿಯನ್ನು ಕಳೆಯುತ್ತದೆ. ಹಸಿವೆಯಿಂದ ಜ್ಞಾನವನ್ನು ಕಳೆದುಕೊಂಡವನು ಧೈರ್ಯವನ್ನೂ ತ್ಯಜಿಸುತ್ತಾನೆ.

14093066a ಬುಭುಕ್ಷಾಂ ಜಯತೇ ಯಸ್ತು ಸ ಸ್ವರ್ಗಂ ಜಯತೇ ಧ್ರುವಮ್|

14093066c ಯದಾ ದಾನರುಚಿರ್ಭವತಿ ತದಾ ಧರ್ಮೋ ನ ಸೀದತಿ||

ಹಸಿವೆಯನ್ನು ಜಯಿಸಿದವನು ನಿಶ್ಚಯವಾಗಿಯೂ ಸ್ವರ್ಗವನ್ನು ಜಯಿಸುತ್ತಾನೆ. ದಾನದಲ್ಲಿ ಅಭಿರುಚಿಯಿರುವವನಿಗೆ ಧರ್ಮವು ನಾಶವಾಗುವುದಿಲ್ಲ.

14093067a ಅನವೇಕ್ಷ್ಯ ಸುತಸ್ನೇಹಂ ಕಲತ್ರಸ್ನೇಹಮೇವ ಚ|

14093067c ಧರ್ಮಮೇವ ಗುರುಂ ಜ್ಞಾತ್ವಾ ತೃಷ್ಣಾ ನ ಗಣಿತಾ ತ್ವಯಾ||

ಮಗನ ಮೇಲಿನ ಸ್ನೇಹವನ್ನೂ ಪತ್ನಿಯ ಮೇಲಿನ ಸ್ನೇಹವನ್ನೂ ಪರಿಗಣಿಸದೇ ನೀನು ಧರ್ಮವೇ ಗುರುವೆಂದು ತಿಳಿದು ಹಸಿವು-ಬಾಯಾರಿಕೆಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.

14093068a ದ್ರವ್ಯಾಗಮೋ ನೃಣಾಂ ಸೂಕ್ಷ್ಮಃ ಪಾತ್ರೇ ದಾನಂ ತತಃ ಪರಮ್|

14093068c ಕಾಲಃ ಪರತರೋ ದಾನಾಚ್ಚ್ರದ್ಧಾ ಚಾಪಿ ತತಃ ಪರಾ||

ಮನುಷ್ಯನ ದ್ರವ್ಯಸಂಪಾದನೆಯು ಸೂಕ್ಷ್ಮವಾದುದು. ಅದರ ನಂತರ ಪಾತ್ರನಾದವನಿಗೆ ದಾನವನ್ನು ಮಾಡುವುದು ಅದಕ್ಕಿಂತಲೂ ಶ್ರೇಷ್ಠವಾದುದು. ಸರಿಯಾದ ಕಾಲದಲ್ಲಿ ದಾನಮಾಡುವುದು ಅದಕ್ಕಿಂತಲೂ ಶ್ರೇಷ್ಠ. ಶ್ರದ್ಧೆಯಿಂದ ದಾನಮಾಡುವುದು ಇನ್ನೂ ಹೆಚ್ಚಿನದು.

14093069a ಸ್ವರ್ಗದ್ವಾರಂ ಸುಸೂಕ್ಷ್ಮಂ ಹಿ ನರೈರ್ಮೋಹಾನ್ನ ದೃಶ್ಯತೇ|

14093069c ಸ್ವರ್ಗಾರ್ಗಲಂ ಲೋಭಬೀಜಂ ರಾಗಗುಪ್ತಂ ದುರಾಸದಮ್||

ಸ್ವರ್ಗದ ದ್ವಾರವು ಅತಿ ಸೂಕ್ಷ್ಮವಾದುದು, ಮೋಹಿತ ನರರಿಗೆ ಅದು ಕಾಣುವುದಿಲ್ಲ. ಸ್ವರ್ಗದ ದ್ವಾರಕ್ಕೆ ಲೋಭದ ಬೀಜವು ಅಗಳಿ. ಅದು ರಾಗದಿಂದ ರಕ್ಷಿತವಾಗಿದೆ. ಪ್ರವೇಶಿಸಲು ಕಷ್ಟದ್ದಾಗಿದೆ.

14093070a ತತ್ತು ಪಶ್ಯಂತಿ ಪುರುಷಾ ಜಿತಕ್ರೋಧಾ ಜಿತೇಂದ್ರಿಯಾಃ|

14093070c ಬ್ರಾಹ್ಮಣಾಸ್ತಪಸಾ ಯುಕ್ತಾ ಯಥಾಶಕ್ತಿಪ್ರದಾಯಿನಃ||

ಜಿತಕ್ರೋಧರಾದ, ಜಿತೇಂದ್ರಿಯರಾದ ಮತ್ತು ತಪೋಯುಕ್ತರಾದ ಬ್ರಾಹ್ಮಣರು ಯಥಾಶಕ್ತಿ ದಾನಮಾಡುವುದರ ಮೂಲಕ ಸ್ವರ್ಗವನ್ನು ಕಾಣುತ್ತಾರೆ.

14093071a ಸಹಸ್ರಶಕ್ತಿಶ್ಚ ಶತಂ ಶತಶಕ್ತಿರ್ದಶಾಪಿ ಚ|

14093071c ದದ್ಯಾದಪಶ್ಚ ಯಃ ಶಕ್ತ್ಯಾ ಸರ್ವೇ ತುಲ್ಯಫಲಾಃ ಸ್ಮೃತಾಃ||

ಸಾವಿರ ಕೊಡುವುದಕ್ಕೆ ಶಕ್ತಿಯಿರುವವನು ನೂರನ್ನು ಕೊಟ್ಟರೂ, ನೂರನ್ನು ಕೊಡಲು ಶಕ್ತನಾಗಿರುವವನು ಹತ್ತನ್ನು ದಾನಮಾಡಿದರೂ, ಆಪತ್ತಿನಲ್ಲಿರುವವನಿಗೆ ಯಥಾಶಕ್ತಿ ಏನನ್ನು ದಾನಮಾಡಿದರೂ ಎಲ್ಲವೂ ಒಂದೇ ಸಮನಾದ ಫಲವನ್ನು ನೀಡುತ್ತದೆ ಎಂದು ಹೇಳಲಾಗಿದೆ.

14093072a ರಂತಿದೇವೋ ಹಿ ನೃಪತಿರಪಃ ಪ್ರಾದಾದಕಿಂಚನಃ|

14093072c ಶುದ್ಧೇನ ಮನಸಾ ವಿಪ್ರ ನಾಕಪೃಷ್ಠಂ ತತೋ ಗತಃ||

ವಿಪ್ರ! ನೃಪತಿ ರಂತಿದೇವನು ಶುದ್ಧಮನಸ್ಸಿನಿಂದ ಒಂದು ಸ್ವಲ್ಪ ನೀರನ್ನೇ ದಾನಮಾಡಿ, ನಾಕಪೃಷ್ಠಕ್ಕೆ ಹೋದನು.

14093073a ನ ಧರ್ಮಃ ಪ್ರೀಯತೇ ತಾತ ದಾನೈರ್ದತ್ತೈರ್ಮಹಾಫಲೈಃ|

14093073c ನ್ಯಾಯಲಬ್ಧೈರ್ಯಥಾ ಸೂಕ್ಷ್ಮೈಃ ಶ್ರದ್ಧಾಪೂತೈಃ ಸ ತುಷ್ಯತಿ||

ಅಯ್ಯಾ! ಮಹಾಫಲಗಳುಳ್ಳವುಗಳನ್ನು ದಾನಮಾಡುವುದರಿಂದ ಧರ್ಮನು ಪ್ರೀತನಾಗುವುದಿಲ್ಲ. ಆದರೆ ನ್ಯಾಯವಾಗಿ ಪಡೆದುದನ್ನು ಅಲ್ಪವಾದರೂ ಶ್ರದ್ಧೆಯಿಂದ ಪವಿತ್ರಗೊಳಿಸಿ ಕೊಡುವುದರಿಂದ ಅವನು ತುಷ್ಟನಾಗುತ್ತಾನೆ.

14093074a ಗೋಪ್ರದಾನಸಹಸ್ರಾಣಿ ದ್ವಿಜೇಭ್ಯೋಽದಾನ್ನೃಗೋ ನೃಪಃ|

14093074c ಏಕಾಂ ದತ್ತ್ವಾ ಸ ಪಾರಕ್ಯಾಂ ನರಕಂ ಸಮವಾಪ್ತವಾನ್||

ನೃಪ ನೃಗನು ದ್ವಿಜರಿಗೆ ಸಾವಿರಾರು ಗೋವುಗಳನ್ನು ದಾನವನ್ನಾಗಿತ್ತನು. ಆದರೆ ಅವುಗಳಲ್ಲಿ ಒಂದು ಅವನ ಸ್ವತ್ತಾಗಿರದೇ ಇದ್ದುದರಿಂದ ಅವನಿಗೆ ನರಕಕ್ಕೆ ಹೋಗಬೇಕಾಯಿತು.

14093075a ಆತ್ಮಮಾಂಸಪ್ರದಾನೇನ ಶಿಬಿರೌಶೀನರೋ ನೃಪಃ|

14093075c ಪ್ರಾಪ್ಯ ಪುಣ್ಯಕೃತಾಽಲ್ಲೋಕಾನ್ಮೋದತೇ ದಿವಿ ಸುವ್ರತಃ||

ಸುವ್ರತನಾದ ನೃಪ ಶಿಬಿ ಔಶೀನರನು ತನ್ನ ಮಾಂಸವನ್ನು ದಾನಮಾಡಿ ಪುಣ್ಯಕೃತರ ಲೋಕಗಳನ್ನು ಸೇರಿ ದಿವಿಯಲ್ಲಿ ಮೋದಿಸುತ್ತಿದ್ದಾನೆ.

14093076a ವಿಭವೇ ನ ನೃಣಾಂ ಪುಣ್ಯಂ ಸ್ವಶಕ್ತ್ಯಾ ಸ್ವರ್ಜಿತಂ ಸತಾಮ್|

14093076c ನ ಯಜ್ಞೈರ್ವಿವಿಧೈರ್ವಿಪ್ರ ಯಥಾನ್ಯಾಯೇನ ಸಂಚಿತೈಃ||

ಮನುಷ್ಯನಿಗೆ ವೈಭವಯುಕ್ತವಾಗಿ ದಾನಮಾಡಿದರೆ ಪುಣ್ಯ ದೊರೆಯುವುದಿಲ್ಲ. ಆದರೆ ತಾನೇ ಸಂಪಾದಿಸಿದುದನ್ನು ತನ್ನ ಶಕ್ತಿಗನುಗುಣವಾಗಿ ದಾನಮಾಡುವುದು ಅವನಿಗೆ ಒಳ್ಳೆಯದಾಗುತ್ತದೆ. ವಿಪ್ರ! ವಿವಿಧ ಯಜ್ಞಗಳನ್ನು ಮಾಡುವುದಕ್ಕಿಂತ ಯಥಾನ್ಯಾಯವಾಗಿ ಸಂಪಾದಿಸಿದುದನ್ನು ದಾನಮಾಡುವುದು ಶ್ರೇಷ್ಠವು.

14093077a ಕ್ರೋಧೋ ದಾನಫಲಂ ಹಂತಿ ಲೋಭಾತ್ಸ್ವರ್ಗಂ ನ ಗಚ್ಚತಿ|

14093077c ನ್ಯಾಯವೃತ್ತಿರ್ಹಿ ತಪಸಾ ದಾನವಿತ್ಸ್ವರ್ಗಮಶ್ನುತೇ||

ಕ್ರೋಧವು ದಾನಫಲವನ್ನು ಕೊಲ್ಲುತ್ತದೆ. ಲೋಭದಿಂದ ಸ್ವರ್ಗಕ್ಕೆ ಹೋಗುವುದಿಲ್ಲ. ನ್ಯಾಯವೃತ್ತಿ, ಮತ್ತು ತಪಸ್ಸಿನಿಂದ ದಾನವನ್ನು ತಿಳಿದಿರುವವನು ಸ್ವರ್ಗವನ್ನು ಹೊಂದುತ್ತಾನೆ.

14093078a ನ ರಾಜಸೂಯೈರ್ಬಹುಭಿರಿಷ್ಟ್ವಾ ವಿಪುಲದಕ್ಷಿಣೈಃ|

14093078c ನ ಚಾಶ್ವಮೇಧೈರ್ಬಹುಭಿಃ ಫಲಂ ಸಮಮಿದಂ ತವ||

ನಿನ್ನ ಈ ಫಲವು ವಿಪುಲದಕ್ಷಿಣೆಗಳನ್ನಿತ್ತು ಮಾಡಿದ ಅನೇಕ ರಾಜಸೂಯ ಯಾಗಗಳ ಮತ್ತು ಅನೇಕ ಅಶ್ವಮೇಧಯಾಗಗಳ ಫಲಕ್ಕೆ ಸಮನಲ್ಲ.

14093079a ಸಕ್ತುಪ್ರಸ್ಥೇನ ಹಿ ಜಿತೋ ಬ್ರಹ್ಮಲೋಕಸ್ತ್ವಯಾನಘ|

14093079c ವಿರಜೋ ಬ್ರಹ್ಮಭವನಂ ಗಚ್ಚ ವಿಪ್ರ ಯಥೇಚ್ಚಕಮ್||

ಅನಘ! ಹಿಟ್ಟಿನುಂಡೆಯನ್ನು ದಾನಮಾಡಿ ನೀನು ಬ್ರಹ್ಮಲೋಕವನ್ನೇ ಗೆದ್ದಿದ್ದೀಯೆ. ವಿಪ್ರ! ರಜೋಗುಣ ರಹಿತನಾಗಿ ನಿನಗಿಷ್ಟವಾದ ಬ್ರಹ್ಮಭವನಕ್ಕೆ ಹೋಗು.

14093080a ಸರ್ವೇಷಾಂ ವೋ ದ್ವಿಜಶ್ರೇಷ್ಠ ದಿವ್ಯಂ ಯಾನಮುಪಸ್ಥಿತಮ್|

14093080c ಆರೋಹತ ಯಥಾಕಾಮಂ ಧರ್ಮೋಽಸ್ಮಿ ದ್ವಿಜ ಪಶ್ಯ ಮಾಮ್||

ದ್ವಿಜಶ್ರೇಷ್ಠ! ನಿಮಗೆಲ್ಲರಿಗೂ ದಿವ್ಯ ಯಾನವು ಸಿದ್ಧವಾಗಿದೆ. ನಿಮಗಿಷ್ಟವಾದಹಾಗೆ ಅದನ್ನು ಏರಿ. ದ್ವಿಜ! ನಾನು ಧರ್ಮ. ನನ್ನನ್ನು ನೋಡು.

14093081a ಪಾವಿತೋ ಹಿ ತ್ವಯಾ ದೇಹೋ ಲೋಕೇ ಕೀರ್ತಿಃ ಸ್ಥಿರಾ ಚ ತೇ|

14093081c ಸಭಾರ್ಯಃ ಸಹಪುತ್ರಶ್ಚ ಸಸ್ನುಷಶ್ಚ ದಿವಂ ವ್ರಜ||

ನಿನ್ನ ದೇಹವನ್ನು ಪವಿತ್ರಗೊಳಿಸಿರುವೆ. ಲೋಕದಲ್ಲಿ ನಿನ್ನ ಕೀರ್ತಿಯನ್ನು ಸ್ಥಿರಗೊಳಿಸಿರುವೆ. ಪತ್ನಿ, ಪುತ್ರ ಮತ್ತು ಸೊಸೆಯರೊಂದಿಗೆ ದಿವಕ್ಕೆ ಹೊರಡು!”

14093082a ಇತ್ಯುಕ್ತವಾಕ್ಯೋ ಧರ್ಮೇಣ ಯಾನಮಾರುಹ್ಯ ಸ ದ್ವಿಜಃ|

14093082c ಸಭಾರ್ಯಃ ಸಸುತಶ್ಚಾಪಿ ಸಸ್ನುಷಶ್ಚ ದಿವಂ ಯಯೌ||

ಧರ್ಮನು ಹೀಗೆ ಹೇಳಲು ಆ ದ್ವಿಜನು ಪತ್ನಿ, ಸುತ ಮತ್ತು ಸೊಸೆಯರೊಂದಿಗೆ ಯಾನವನ್ನೇರಿ ದಿವಕ್ಕೆ ಹೋದನು.

14093083a ತಸ್ಮಿನ್ವಿಪ್ರೇ ಗತೇ ಸ್ವರ್ಗಂ ಸಸುತೇ ಸಸ್ನುಷೇ ತದಾ|

14093083c ಭಾರ್ಯಾಚತುರ್ಥೇ ಧರ್ಮಜ್ಞೇ ತತೋಽಹಂ ನಿಃಸೃತೋ ಬಿಲಾತ್||

ಆ ಧರ್ಮಜ್ಞ ವಿಪ್ರನು ಪತ್ನಿ, ಮಗ ಮತ್ತು ಸೊಸೆಯರೊಂದಿಗೆ ಸ್ವರ್ಗಕ್ಕೆ ಹೊರಟುಹೋಗಲು ನಾನು ಬಿಲದಿಂದ ಹೊರಬಂದೆನು.

14093084a ತತಸ್ತು ಸಕ್ತುಗಂಧೇನ ಕ್ಲೇದೇನ ಸಲಿಲಸ್ಯ ಚ|

14093084c ದಿವ್ಯಪುಷ್ಪಾವಮರ್ದಾಚ್ಚ ಸಾಧೋರ್ದಾನಲವೈಶ್ಚ ತೈಃ|

14093084e ವಿಪ್ರಸ್ಯ ತಪಸಾ ತಸ್ಯ ಶಿರೋ ಮೇ ಕಾಂಚನೀಕೃತಮ್||

ಅಲ್ಲಿದ್ದ ಹಿಟ್ಟಿನ ವಾಸನೆಯಿಂದಲೂ, ಚೆಲ್ಲಿದ್ದ ನೀರಿನಲ್ಲಿ ನೆನೆದುದರಿಂದಲೂ, ದಿವ್ಯಪುಷ್ಪಗಳ ಮೇಲೆ ಓಡಾಡಿದುದರಿಂದಲೂ, ಆ ಸಾಧುವು ದಾನಮಾಡಿದ ಹಿಟ್ಟಿನ ಕಣಗಳ ಸಂಪರ್ಕದಿಂದಲೂ, ಮತ್ತು ಆ ವಿಪ್ರನ ತಪಸ್ಸಿನಿಂದಲೂ ನನ್ನ ತಲೆಯು ಕಾಂಚನದ್ದಾಯಿತು.

14093085a ತಸ್ಯ ಸತ್ಯಾಭಿಸಂಧಸ್ಯ ಸೂಕ್ಷ್ಮದಾನೇನ ಚೈವ ಹ|

14093085c ಶರೀರಾರ್ಧಂ ಚ ಮೇ ವಿಪ್ರಾಃ ಶಾತಕುಂಭಮಯಂ ಕೃತಮ್|

14093085e ಪಶ್ಯತೇದಂ ಸುವಿಪುಲಂ ತಪಸಾ ತಸ್ಯ ಧೀಮತಃ||

ವಿಪ್ರರೇ! ಆ ಸತ್ಯಸಂಧನ ಸೂಕ್ಷ್ಮ ದಾನದಿಂದಲೇ ನನ್ನ ಶರೀರಾರ್ಧವು ಸುವರ್ಣಮಯವಾಯಿತು. ಆ ಧೀಮಂತನ ವಿಪುಲ ತಪಸ್ಸನ್ನು ನೋಡಿ!

14093086a ಕಥಮೇವಂವಿಧಂ ಮೇ ಸ್ಯಾದನ್ಯತ್ಪಾರ್ಶ್ವಮಿತಿ ದ್ವಿಜಾಃ|

14093086c ತಪೋವನಾನಿ ಯಜ್ಞಾಂಶ್ಚ ಹೃಷ್ಟೋಽಭ್ಯೇಮಿ ಪುನಃ ಪುನಃ||

ದ್ವಿಜರೇ! ಇದೇರೀತಿ ನನ್ನ ಅನ್ಯ ಪಾರ್ಶ್ವವೂ ಕೂಡ ಹೇಗೆ ಆಗಬಹುದೆಂದು ಸಂತೋಷದಿಂದ ನಾನು ತಪೋವನಗಳು ಮತ್ತು ಯಜ್ಞಗಳಿಗೆ ಪುನಃ ಪುನಃ ಹೋಗುತ್ತಿದ್ದೇನೆ.

14093087a ಯಜ್ಞಂ ತ್ವಹಮಿಮಂ ಶ್ರುತ್ವಾ ಕುರುರಾಜಸ್ಯ ಧೀಮತಃ|

14093087c ಆಶಯಾ ಪರಯಾ ಪ್ರಾಪ್ತೋ ನ ಚಾಹಂ ಕಾಂಚನೀಕೃತಃ||

ಧೀಮತ ಕುರುರಾಜನ ಈ ಯಜ್ಞದ ಕುರಿತು ಕೇಳಿ ಪರಮ ಆಸೆಯಿಂದ ಇಲ್ಲಿಗೆ ಬಂದರೂ ನನ್ನ ಶರೀರವು ಕಾಂಚನದ್ದಾಗಲಿಲ್ಲ.

14093088a ತತೋ ಮಯೋಕ್ತಂ ತದ್ವಾಕ್ಯಂ ಪ್ರಹಸ್ಯ ದ್ವಿಜಸತ್ತಮಾಃ|

14093088c ಸಕ್ತುಪ್ರಸ್ಥೇನ ಯಜ್ಞೋಽಯಂ ಸಂಮಿತೋ ನೇತಿ ಸರ್ವಥಾ||

ದ್ವಿಜಸತ್ತಮರೇ! ಆದುದರಿಂದಲೇ ಹಿಟ್ಟಿನುಂಡೆಯ ಆ ದಾನಕ್ಕೆ ಈ ಯಜ್ಞವು ಸರ್ವಥಾ ಸಮನಲ್ಲ ಎನ್ನುವ ಆ ವಾಕ್ಯವನ್ನು ಗಟ್ಟಿಯಾಗಿ ನಗುತ್ತಾ ನಾನು ಹೇಳಿದೆ.

14093089a ಸಕ್ತುಪ್ರಸ್ಥಲವೈಸ್ತೈರ್ಹಿ ತದಾಹಂ ಕಾಂಚನೀಕೃತಃ|

14093089c ನ ಹಿ ಯಜ್ಞೋ ಮಹಾನೇಷ ಸದೃಶಸ್ತೈರ್ಮತೋ ಮಮ||

ಹಿಟ್ಟಿನುಂಡೆಯ ಕಣಗಳಿಂದಲೇ ನನ್ನ ಶಿರವು ಕಾಂಚನದ್ದಾಯಿತು. ಈ ಮಹಾಯಜ್ಞವು ಅದಕ್ಕೆ ಸಮನಾದುದಲ್ಲ ಎನ್ನುವುದು ನನ್ನ ಮತ.””

14093090 ವೈಶಂಪಾಯನ ಉವಾಚ

14093090a ಇತ್ಯುಕ್ತ್ವಾ ನಕುಲಃ ಸರ್ವಾನ್ಯಜ್ಞೇ ದ್ವಿಜವರಾಂಸ್ತದಾ|

14093090c ಜಗಾಮಾದರ್ಶನಂ ರಾಜನ್ವಿಪ್ರಾಸ್ತೇ ಚ ಯಯುರ್ಗೃಹಾನ್||

ವೈಶಂಪಾಯನನು ಹೇಳಿದನು: “ರಾಜನ್! ಯಜ್ಞದಲ್ಲಿದ್ದ ದ್ವಿಜಶ್ರೇಷ್ಠರಿಗೆ ಹೀಗೆ ಹೇಳಿ ಮುಂಗುಸಿಯು ಮಾಯವಾಯಿತು. ವಿಪ್ರರು ತಮ್ಮ ತಮ್ಮ ಮನೆಗಳಿಗೆ ತೆರಳಿದರು.

14093091a ಏತತ್ತೇ ಸರ್ವಮಾಖ್ಯಾತಂ ಮಯಾ ಪರಪುರಂಜಯ|

14093091c ಯದಾಶ್ಚರ್ಯಮಭೂತ್ತಸ್ಮಿನ್ವಾಜಿಮೇಧೇ ಮಹಾಕ್ರತೌ||

ಪರಪುರಂಜಯ! ಹೀಗೆ ಆ ಮಹಾಕ್ರತು ಅಶ್ವಮೇಧದಲ್ಲಾದ ಆಶ್ಚರ್ಯದ ಕುರಿತು ಎಲ್ಲವನ್ನೂ ನಾನು ನಿನಗೆ ಹೇಳಿದ್ದೇನೆ.

14093092a ನ ವಿಸ್ಮಯಸ್ತೇ ನೃಪತೇ ಯಜ್ಞೇ ಕಾರ್ಯಃ ಕಥಂ ಚನ|

14093092c ಋಷಿಕೋಟಿಸಹಸ್ರಾಣಿ ತಪೋಭಿರ್ಯೇ ದಿವಂ ಗತಾಃ||

ನೃಪತೇ! ಯಜ್ಞದ ವಿಷಯದಲ್ಲಿ ನಡೆದ ಇದರಿಂದ ನೀನು ವಿಸ್ಮಯನಾಗಬೇಕಾಗಿಲ್ಲ. ಏಕೆಂದರೆ ಸಹಸ್ರ ಕೋಟಿಗಟ್ಟಲೆ ಋಷಿಗಳು ತಪಸ್ಸಿನಿಂದಲೇ ದಿವಕ್ಕೆ ಹೋಗಿದ್ದಾರೆ.

14093093a ಅದ್ರೋಹಃ ಸರ್ವಭೂತೇಷು ಸಂತೋಷಃ ಶೀಲಮಾರ್ಜವಮ್|

14093093c ತಪೋ ದಮಶ್ಚ ಸತ್ಯಂ ಚ ದಾನಂ ಚೇತಿ ಸಮಂ ಮತಮ್||

ಸರ್ವಭೂತಗಳಲ್ಲಿ ದ್ರೋಹವಿಲ್ಲದೇ ಇರುವುದು, ಸಂತೋಷದಿಂದಿರುವುದು, ಶೀಲ, ಸರಳತೆ, ತಪಸ್ಸು, ಇಂದ್ರಿಯ ನಿಗ್ರಹ, ಸತ್ಯ, ಮತ್ತು ದಾನ ಎವೆಲ್ಲವೂ ಸಮ ಎನ್ನುವ ಮತವಿದೆ.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ನಕುಲಾಖ್ಯಾನೇ ತ್ರಿನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ನಕುಲಾಖ್ಯಾನ ಎನ್ನುವ ತೊಂಭತ್ಮೂರನೇ ಅಧ್ಯಾಯವು.

[1] ಹೊಲವನ್ನು ಕೊಯ್ದಾಗ ಕೆಳಗೆ ಉದುರುವ ಕಾಳುಗಳನ್ನು ಆರಿಸಿಕೊಂಡು ಅದರಿಂದ ಜೀವನವನ್ನು ನಡೆಸುವನು.

[2] ಹೊಲಗಳಲ್ಲಿ ಬಿದ್ದಿರುವ ಕಾಳುಗಳನ್ನು ಹೆಕ್ಕಿ ತಿನ್ನುವುದು ಅಥವಾ ಕೂಡಿಸಿ ಇಟ್ಟುಕೊಳ್ಳುವ ಕಾಪೋತ ಪಕ್ಷಿಯಂತೆ ಜೀವನ ನಡೆಸುವವನು.

[3] ಭಾರತ ದರ್ಶನದಲ್ಲಿ ಇದರನಂತರ ಈ ಎರಡು ಶ್ಲೋಕಗಳಿವೆ: ಧರ್ಮಕಾಮಾರ್ಥಕಾರ್ಯಾಣಿ ಶುಶ್ರೂಷಾ ಕುಲಸಂತತಿಃ| ದಾರೇಷ್ವಧೀನೋ ಧರ್ಮಶ್ಚ ಪಿತೃಣಾಮಾತ್ಮನಸ್ತಥಾ|| ನ ವೇತ್ತಿ ಕರ್ಮತೋ ಭಾರ್ಯಾರಕ್ಷಣೇ ಯೋಽಕ್ಷಮಃ ಪುಮಾನ್| ಅಯಶೋ ಮಹದಾಪ್ನೋತಿ ನರಕಂ ಚೈವ ಗಚ್ಛತಿ||

Comments are closed.