Ashvamedhika Parva: Chapter 89

ಅಶ್ವಮೇಧಿಕ ಪರ್ವ

೮೯

ಅರ್ಜುನನು ಸದಾ ಪ್ರಯಾಣಮಾಡುತ್ತಿರಬೇಕಾದುದರ ಕಾರಣವನ್ನು ಕೃಷ್ಣನು ಯುಧಿಷ್ಠಿರನಿಗೆ ತಿಳಿಸಿದುದು (೧-೧೧). ಅರ್ಜುನನು ಯಜ್ಞಶಾಲೆಗೆ ಆಗಮಿಸಿದುದು (೧೨-೨೪). ಬಭ್ರುವಾಹನನ ಆಗಮನ (೨೫-೨೬).

14089001 ಯುಧಿಷ್ಠಿರ ಉವಾಚ

14089001a ಶ್ರುತಂ ಪ್ರಿಯಮಿದಂ ಕೃಷ್ಣ ಯತ್ತ್ವಮರ್ಹಸಿ ಭಾಷಿತುಮ್|

14089001c ತನ್ಮೇಽಮೃತರಸಪ್ರಖ್ಯಂ ಮನೋ ಹ್ಲಾದಯತೇ ವಿಭೋ||

ಯುಧಿಷ್ಠಿರನು ಹೇಳಿದನು: “ಕೃಷ್ಣ! ವಿಭೋ! ನೀನು ಹೇಳಿದ ಅಮೃತರಸದಂತಿರುವ ಅರ್ಜುನನ ಸಂದೇಶವನ್ನು ಕೇಳಿ ನನ್ನ ಮನಸ್ಸು ಆಹ್ಲಾದಗೊಂಡಿದೆ.

14089002a ಬಹೂನಿ ಕಿಲ ಯುದ್ಧಾನಿ ವಿಜಯಸ್ಯ ನರಾಧಿಪೈಃ|

14089002c ಪುನರಾಸನ್ ಹೃಷೀಕೇಶ ತತ್ರ ತತ್ರೇತಿ ಮೇ ಶ್ರುತಮ್||

ಹೃಷೀಕೇಶ! ಅಲ್ಲಲ್ಲಿ ವಿಜಯ ಮತ್ತು ನರಾಧಿಪರೊಡನೆ ಅನೇಕ ಯುದ್ಧಗಳಾದವೆಂದು ಕೇಳಿದ್ದೇನೆ.

14089003a ಮನ್ನಿಮಿತ್ತಂ ಹಿ ಸ ಸದಾ ಪಾರ್ಥಃ ಸುಖವಿವರ್ಜಿತಃ|

14089003c ಅತೀವ ವಿಜಯೋ ಧೀಮಾನಿತಿ ಮೇ ದೂಯತೇ ಮನಃ||

ನನ್ನ ಕಾರಣದಿಂದಾಗಿ ಆ ಧೀಮಾನ್ ವಿಜಯ ಪಾರ್ಥನು ಸದಾ ಸುಖದಿಂದ ವಂಚಿತನಾಗಿದ್ದಾನೆ ಎಂದು ನನ್ನ ಮನಸ್ಸು ಅತೀವವಾಗಿ ನೋಯುತ್ತಿದೆ.

14089004a ಸಂಚಿಂತಯಾಮಿ ವಾರ್ಷ್ಣೇಯ ಸದಾ ಕುಂತೀಸುತಂ ರಹಃ|

14089004c ಕಿಂ ನು ತಸ್ಯ ಶರೀರೇಽಸ್ತಿ ಸರ್ವಲಕ್ಷಣಪೂಜಿತೇ|

14089004e ಅನಿಷ್ಟಂ ಲಕ್ಷಣಂ ಕೃಷ್ಣ ಯೇನ ದುಃಖಾನ್ಯುಪಾಶ್ನುತೇ||

ವಾರ್ಷ್ಣೇಯ! ಏಕಾಂತದಲ್ಲಿ ಸದಾ ನಾನು ಕುಂತೀಸುತ ಅರ್ಜುನನ ಕುರಿತೇ ಚಿಂತಿಸುತ್ತಿರುತ್ತೇನೆ. ಕೃಷ್ಣ! ಸರ್ವಲಕ್ಷಣ ಸಂಪನ್ನನಾಗಿರುವ ಅವನ ಶರೀರದಲ್ಲಿ ಯಾವ ಅನಿಷ್ಟ ಲಕ್ಷಣವಿದೆಯೆಂದು ಅವನು ಈ ರೀತಿಯ ದುಃಖವನ್ನು ಅನುಭವಿಸುತ್ತಿದ್ದಾನೆ?

14089005a ಅತೀವ ದುಃಖಭಾಗೀ ಸ ಸತತಂ ಕುಂತಿನಂದನಃ|

14089005c ನ ಚ ಪಶ್ಯಾಮಿ ಬೀಭತ್ಸೋರ್ನಿಂದ್ಯಂ ಗಾತ್ರೇಷು ಕಿಂ ಚನ|

14089005e ಶ್ರೋತವ್ಯಂ ಚೇನ್ಮಯೈತದ್ವೈ ತನ್ಮೇ ವ್ಯಾಖ್ಯಾತುಮರ್ಹಸಿ||

ಆ ಕುಂತೀನಂದನನು ಸತತವೂ ದುಃಖಭಾಗಿಯಾಗಿದ್ದಾನೆ. ಅವನ ಶರೀರದಲ್ಲಿ ನಿಂದ್ಯಲಕ್ಷಣಗಳನ್ನೇನೂ ನಾನು ಕಂಡಿಲ್ಲ. ಇದರ ಕುರಿತು ನಾನು ಕೇಳಬಹುದಾಗಿದ್ದರೆ ಅದನ್ನು ನೀನು ಹೇಳಬೇಕು!”

14089006a ಇತ್ಯುಕ್ತಃ ಸ ಹೃಷೀಕೇಶೋ ಧ್ಯಾತ್ವಾ ಸುಮಹದಂತರಮ್|

14089006c ರಾಜಾನಂ ಭೋಜರಾಜನ್ಯವರ್ಧನೋ ವಿಷ್ಣುರಬ್ರವೀತ್||

ಇದನ್ನು ಕೇಳಿ ಬಹಳ ಹೊತ್ತು ಧ್ಯಾನಮಗ್ನನಾಗಿ ಭೋಜರಾಜರ ವರ್ಧಕ ಹೃಷೀಕೇಶ ವಿಷ್ಣುವು ರಾಜನಿಗೆ ಇಂತೆಂದನು:

14089007a ನ ಹ್ಯಸ್ಯ ನೃಪತೇ ಕಿಂ ಚಿದನಿಷ್ಟಮುಪಲಕ್ಷಯೇ|

14089007c ಋತೇ ಪುರುಷಸಿಂಹಸ್ಯ ಪಿಂಡಿಕೇಽಸ್ಯಾತಿಕಾಯತಃ||

“ನೃಪತೇ! ಆ ಪುರುಷಸಿಂಹನ ಮೊಳಕಾಲುಗಳ ಹಿಂಭಾಗಗಳು ಇರಬೇಕಾದುದಕ್ಕಿಂತಲೂ ಸ್ವಲ್ಪ ದಪ್ಪನಾಗಿರುವುದರ ಹೊರತು ಅವನಲ್ಲಿ ಬೇರೆ ಯಾವ ಅನಿಷ್ಟಗಳೂ ಕಾಣಿಸುವುದಿಲ್ಲ.

14089008a ತಾಭ್ಯಾಂ ಸ ಪುರುಷವ್ಯಾಘ್ರೋ ನಿತ್ಯಮಧ್ವಸು ಯುಜ್ಯತೇ|

14089008c ನ ಹ್ಯನ್ಯದನುಪಶ್ಯಾಮಿ ಯೇನಾಸೌ ದುಃಖಭಾಗ್ಜಯಃ||

ಅದರಿಂದಾಗಿ ಆ ಪುರುಷವ್ಯಾಘ್ರನು ಸದಾ ಪ್ರಯಾಣಮಾಡುತ್ತಲೇ ಇರಬೇಕಾಗುತ್ತದೆ. ಜಯನ ದುಃಖಕ್ಕೆ ಬೇರೆ ಯಾವ ಕಾರಣವನ್ನೂ ನಾನು ಕಾಣುತ್ತಿಲ್ಲ.”

14089009a ಇತ್ಯುಕ್ತಃ ಸ ಕುರುಶ್ರೇಷ್ಠಸ್ತಥ್ಯಂ ಕೃಷ್ಣೇನ ಧೀಮತಾ|

14089009c ಪ್ರೋವಾಚ ವೃಷ್ಣಿಶಾರ್ದೂಲಮೇವಮೇತದಿತಿ ಪ್ರಭೋ||

ಧೀಮತ ಕೃಷ್ಣನ ಈ ಸತ್ಯದ ಮಾತನ್ನು ಕೇಳಿ ಕುರುಶ್ರೇಷ್ಠ ಯುಧಿಷ್ಠಿರನು “ಪ್ರಭೋ! ನೀನು ಹೇಳಿದುದೇ ಸರಿ!” ಎಂದು ವೃಷ್ಣಿಶಾರ್ದೂಲನಿಗೆ ಹೇಳಿದನು.

14089010a ಕೃಷ್ಣಾ ತು ದ್ರೌಪದೀ ಕೃಷ್ಣಂ ತಿರ್ಯಕ್ಸಾಸೂಯಮೈಕ್ಷತ|

14089010c ಪ್ರತಿಜಗ್ರಾಹ ತಸ್ಯಾಸ್ತಂ ಪ್ರಣಯಂ ಚಾಪಿ ಕೇಶಿಹಾ|

14089010e ಸಖ್ಯುಃ ಸಖಾ ಹೃಷೀಕೇಶಃ ಸಾಕ್ಷಾದಿವ ಧನಂಜಯಃ||

ಆಗ ದ್ರೌಪದೀ ಕೃಷ್ಣೆಯು ಅಸೂಯೆಯಿಂದ ಕೃಷ್ಣನನ್ನು ಕಡೆಗಣ್ಣುಗಳಿಂದ ನೋಡಿದಳು. ಕೇಶಿಹಂತಕ ಕೃಷ್ಣನು ಅವಳ ಆ ವರ್ತನೆಯನ್ನು ಪ್ರಣಯಪೂರ್ವಕವಾಗಿಯೇ ಸ್ವೀಕರಿಸಿದನು. ಸಖ ಹೃಷೀಕೇಶನು ಸಾಕ್ಷಾತ್ ತನ್ನ ಸಖ ಧನಂಜಯನಂತೆಯೇ ತೋರುತ್ತಿದ್ದನು.

14089011a ತತ್ರ ಭೀಮಾದಯಸ್ತೇ ತು ಕುರವೋ ಯಾದವಾಸ್ತಥಾ|

14089011c ರೇಮುಃ ಶ್ರುತ್ವಾ ವಿಚಿತ್ರಾರ್ಥಾ ಧನಂಜಯಕಥಾ ವಿಭೋ||

ವಿಭೋ! ಅಲ್ಲಿದ್ದ ಭೀಮಾದಿ ಕುರುಗಳೂ ಮತ್ತು ಯಾದವರೂ ವಿಚಿತ್ರಾರ್ಥವುಳ್ಳ ಧನಂಜಯನ ಕುರಿತಾದ ಮಾತುಗಳನ್ನು ಕೇಳಿ ಆನಂದಿಸಿದರು.

14089012a ತಥಾ ಕಥಯತಾಮೇವ ತೇಷಾಮರ್ಜುನಸಂಕಥಾಃ|

14089012c ಉಪಾಯಾದ್ವಚನಾನ್ಮರ್ತ್ಯೋ ವಿಜಯಸ್ಯ ಮಹಾತ್ಮನಃ||

ಅರ್ಜುನನ ಕುರಿತಾಗಿ ಅವರು ಹೀಗೆ ಮಾತನಾಡಿಕೊಳ್ಳುತ್ತಿರುವಾಗಲೇ ಮಹಾತ್ಮ ವಿಜಯನ ಸಂದೇಶವನ್ನು ತೆಗೆದುಕೊಂಡು ಪುರುಷನೋರ್ವನು ಅಲ್ಲಿಗೆ ಆಗಮಿಸಿದನು.

14089013a ಸೋಽಭಿಗಮ್ಯ ಕುರುಶ್ರೇಷ್ಠಂ ನಮಸ್ಕೃತ್ಯ ಚ ಬುದ್ಧಿಮಾನ್|

14089013c ಉಪಾಯಾತಂ ನರವ್ಯಾಘ್ರಮರ್ಜುನಂ ಪ್ರತ್ಯವೇದಯತ್||

ಆ ಬುದ್ಧಿವಂತನು ಆಗಮಿಸಿ, ಕುರುಶ್ರೇಷ್ಠನನ್ನು ನಮಸ್ಕರಿಸಿ, ನರವ್ಯಾಘ್ರ ಅರ್ಜುನನು ಬರುತ್ತಿರುವುದನ್ನು ತಿಳಿಸಿದನು.

14089014a ತಚ್ಚ್ರುತ್ವಾ ನೃಪತಿಸ್ತಸ್ಯ ಹರ್ಷಬಾಷ್ಪಾಕುಲೇಕ್ಷಣಃ|

14089014c ಪ್ರಿಯಾಖ್ಯಾನನಿಮಿತ್ತಂ ವೈ ದದೌ ಬಹು ಧನಂ ತದಾ||

ಅದನ್ನು ಕೇಳಿದ ನೃಪತಿಯು ಹರ್ಷದ ಕಣ್ಣೀರಿನಿಂದ ಕಣ್ಣುಗಳು ತುಂಬಿರಲು, ಪ್ರಿಯವಿಷಯವನ್ನು ತಂದಿರುವುದಕ್ಕಾಗಿ ಅವನಿಗೆ ಬಹಳ ಧನವನ್ನಿತ್ತನು.

14089015a ತತೋ ದ್ವಿತೀಯೇ ದಿವಸೇ ಮಹಾನ್ಶಬ್ದೋ ವ್ಯವರ್ಧತ|

14089015c ಆಯಾತಿ ಪುರುಷವ್ಯಾಘ್ರೇ ಪಾಂಡವಾನಾಂ ಧುರಂಧರೇ||

ಅನಂತರ ಎರಡನೆಯ ದಿವಸ ಪಾಂಡವರ ಧುರಂಧರ ಪುರುಷವ್ಯಾಘ್ರ ಅರ್ಜುನನು ಬರುವ ಮಹಾ ಶಬ್ಧವುಂಟಾಯಿತು.

14089016a ತತೋ ರೇಣುಃ ಸಮುದ್ಭೂತೋ ವಿಬಭೌ ತಸ್ಯ ವಾಜಿನಃ|

14089016c ಅಭಿತೋ ವರ್ತಮಾನಸ್ಯ ಯಥೋಚ್ಚೈಃಶ್ರವಸಸ್ತಥಾ||

ಉಚ್ಛೈಶ್ರವದಂತಿದ್ದ ಆ ಕುದುರೆಯು ಹತ್ತಿರಕ್ಕೆ ಬರುತ್ತಿರುವಾಗ ಮೇಲೆದ್ದ ಧೂಳು ಆಕಾಶದಲ್ಲಿ ಅದ್ಭುತವಾಗಿ ಕಾಣುತ್ತಿತ್ತು.

14089017a ತತ್ರ ಹರ್ಷಕಲಾ ವಾಚೋ ನರಾಣಾಂ ಶುಶ್ರುವೇಽರ್ಜುನಃ|

14089017c ದಿಷ್ಟ್ಯಾಸಿ ಪಾರ್ಥ ಕುಶಲೀ ಧನ್ಯೋ ರಾಜಾ ಯುಧಿಷ್ಠಿರಃ||

ಅಲ್ಲಿ “ಅದೃಷ್ಟವಶಾತ್ ಅರ್ಜುನ ಪಾರ್ಥನು ಕುಶಲಿಯಾಗಿದ್ದಾನೆ! ರಾಜಾ ಯುಧಿಷ್ಠಿರನು ಧನ್ಯ!” ಎಂಬ ಜನರ ಹರ್ಷಯುಕ್ತ ಮಾತುಗಳು ಕೇಳಿಬರುತ್ತಿದ್ದವು.

14089018a ಕೋಽನ್ಯೋ ಹಿ ಪೃಥಿವೀಂ ಕೃತ್ಸ್ನಾಮವಜಿತ್ಯ ಸಪಾರ್ಥಿವಾಮ್|

14089018c ಚಾರಯಿತ್ವಾ ಹಯಶ್ರೇಷ್ಠಮುಪಾಯಾಯಾದೃತೇಽರ್ಜುನಮ್||

“ಅರ್ಜುನನಲ್ಲದೇ ಬೇರೆ ಯಾರುತಾನೇ ಪಾರ್ಥಿವರನ್ನು ಸೋಲಿಸಿ ಈ ಶ್ರೇಷ್ಠ ಕುದುರೆಯನ್ನು ಇಡೀ ಭೂಮಿಯಲ್ಲಿ ಸುತ್ತಾಡಿಸಿಕೊಂಡು ಬರುತ್ತಾರೆ?

14089019a ಯೇ ವ್ಯತೀತಾ ಮಹಾತ್ಮಾನೋ ರಾಜಾನಃ ಸಗರಾದಯಃ|

14089019c ತೇಷಾಮಪೀದೃಶಂ ಕರ್ಮ ನ ಕಿಂ ಚಿದನುಶುಶ್ರುಮ||

ಆಗಿ ಹೋಗಿದ್ದ ಸಗರಾದಿ ಮಹಾತ್ಮ ರಾಜರೂ ಇಂತಹ ಕರ್ಮಗಳನ್ನು ಮಾಡಿದ್ದರೆಂದು ನಾವು ಕೇಳಿರಲಿಲ್ಲ!

14089020a ನೈತದನ್ಯೇ ಕರಿಷ್ಯಂತಿ ಭವಿಷ್ಯಾಃ ಪೃಥಿವೀಕ್ಷಿತಃ|

14089020c ಯತ್ತ್ವಂ ಕುರುಕುಲಶ್ರೇಷ್ಠ ದುಷ್ಕರಂ ಕೃತವಾನಿಹ||

ಈ ಕುರುಕುಲಶ್ರೇಷ್ಠನು ಮಾಡಿದ ದುಷ್ಕರ ಕರ್ಮಗಳನ್ನು ಭವಿಷ್ಯದಲ್ಲಿಯೂ ಬೇರೆ ಯಾವ ಪೃಥಿವೀಪತಿಯೂ ಮಾಡುವುದಿಲ್ಲ!”

14089021a ಇತ್ಯೇವಂ ವದತಾಂ ತೇಷಾಂ ನೄಣಾಂ ಶ್ರುತಿಸುಖಾ ಗಿರಃ|

14089021c ಶೃಣ್ವನ್ವಿವೇಶ ಧರ್ಮಾತ್ಮಾ ಫಲ್ಗುನೋ ಯಜ್ಞಸಂಸ್ತರಮ್||

ಹೀಗೆ ಮಾತನಾಡಿಕೊಳ್ಳುತ್ತಿದ್ದ ಆ ಜನರ ಕೇಳಲು ಸುಖಕರವಾದ ಮಾತುಗಳನ್ನು ಕೇಳುತ್ತಾ ಧರ್ಮಾತ್ಮ ಫಲ್ಗುನನು ಯಜ್ಞವಾಟಿಕೆಯನ್ನು ಪ್ರವೇಶಿಸಿದನು.

14089022a ತತೋ ರಾಜಾ ಸಹಾಮಾತ್ಯಃ ಕೃಷ್ಣಶ್ಚ ಯದುನಂದನಃ|

14089022c ಧೃತರಾಷ್ಟ್ರಂ ಪುರಸ್ಕೃತ್ಯ ತೇ ತಂ ಪ್ರತ್ಯುದ್ಯಯುಸ್ತದಾ||

ಆಗ ಅಮಾತ್ಯರು ಮತ್ತು ಯದುನಂದನ ಕೃಷ್ಣನೊಡನೆ ರಾಜಾ ಯುಧಿಷ್ಠಿರನು ಧೃತರಾಷ್ಟ್ರನನ್ನು ಮುಂದಿರಿಸಿಕೊಂಡು ಅರ್ಜುನನನ್ನು ಎದಿರುಗೊಂಡನು.

14089023a ಸೋಽಭಿವಾದ್ಯ ಪಿತುಃ ಪಾದೌ ಧರ್ಮರಾಜಸ್ಯ ಧೀಮತಃ|

14089023c ಭೀಮಾದೀಂಶ್ಚಾಪಿ ಸಂಪೂಜ್ಯ ಪರ್ಯಷ್ವಜತ ಕೇಶವಮ್||

ಅರ್ಜುನನು ತಂದೆಯ ಮತ್ತು ಧೀಮತ ಧರ್ಮರಾಜನ ಪಾದಗಳಿಗೆರಗಿ, ಭೀಮಾದಿಗಳನ್ನು ಪೂಜಿಸಿ ಕೇಶವನನ್ನು ಬಿಗಿದಪ್ಪಿಕೊಂಡನು.

14089024a ತೈಃ ಸಮೇತ್ಯಾರ್ಚಿತಸ್ತಾನ್ಸ ಪ್ರತ್ಯರ್ಚ್ಯ ಚ ಯಥಾವಿಧಿ|

14089024c ವಿಶಶ್ರಾಮಾಥ ಧರ್ಮಾತ್ಮಾ ತೀರಂ ಲಬ್ಧ್ವೇವ ಪಾರಗಃ||

ಅವರಿಂದ ಸತ್ಕರಿಸಲ್ಪಟ್ಟು ಮತ್ತು ಅವರನ್ನೂ ಯಥಾವಿಧಿಯಾಗಿ ಅರ್ಚಿಸಿ, ಧರ್ಮಾತ್ಮ ಅರ್ಜುನನು ತೀರವನ್ನು ತಲುಪಿದ ಈಸುಗಾರನಂತೆ ವಿಶ್ರಮಿಸಿದನು.

14089025a ಏತಸ್ಮಿನ್ನೇವ ಕಾಲೇ ತು ಸ ರಾಜಾ ಬಭ್ರುವಾಹನಃ|

14089025c ಮಾತೃಭ್ಯಾಂ ಸಹಿತೋ ಧೀಮಾನ್ಕುರೂನಭ್ಯಾಜಗಾಮ ಹ||

ಇದೇ ಸಮಯದಲ್ಲಿ ಧೀಮಂತ ರಾಜಾ ಬಭ್ರುವಾಹನನು ಮಾತೆಯರಿಬ್ಬರೊಡನೆ ಕುರುಗಳಲ್ಲಿಗೆ ಆಗಮಿಸಿದನು.

14089026a ಸ ಸಮೇತ್ಯ ಕುರೂನ್ ಸರ್ವಾನ್ ಸರ್ವೈಸ್ತೈರಭಿನಂದಿತಃ|

14089026c ಪ್ರವಿವೇಶ ಪಿತಾಮಹ್ಯಾಃ ಕುಂತ್ಯಾ ಭವನಮುತ್ತಮಮ್||

ಅವನು ಕುರುಗಳೆಲ್ಲರನ್ನೂ ಭೇಟಿಮಾಡಿ, ಸರ್ವರಿಂದ ಅಭಿನಂದಿಸಲ್ಪಟ್ಟು, ಅಜ್ಜಿ ಕುಂತಿಯ ಉತ್ತಮ ಭವನವನ್ನು ಪ್ರವೇಶಿಸಿದನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅರ್ಜುನಪ್ರತ್ಯಾಗಮನೇ ಏಕೋನನವತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅರ್ಜುನಪ್ರತ್ಯಾಗಮನ ಎನ್ನುವ ಎಂಭತ್ತೊಂಭತ್ತನೇ ಅಧ್ಯಾಯವು.

Comments are closed.