Ashvamedhika Parva: Chapter 87

ಅಶ್ವಮೇಧಿಕ ಪರ್ವ

೮೭

ಯಜ್ಞಶಾಲೆಯ ವರ್ಣನೆ (೧-೧೬).

14087001 ವೈಶಂಪಾಯನ ಉವಾಚ

14087001a ತಸ್ಮಿನ್ಯಜ್ಞೇ ಪ್ರವೃತ್ತೇ ತು ವಾಗ್ಮಿನೋ ಹೇತುವಾದಿನಃ|

14087001c ಹೇತುವಾದಾನ್ಬಹೂನ್ಪ್ರಾಹುಃ ಪರಸ್ಪರಜಿಗೀಷವಃ||

ವೈಶಂಪಾಯನನು ಹೇಳಿದನು: “ಆ ಯಜ್ಞವು ನಡೆಯುತ್ತಿರಲಾಗಿ ವಾಗ್ಮಿ ತಾರ್ಕಿಕರು ಪರಸ್ಪರರನ್ನು ಗೆಲ್ಲಲೋಸಗ ಅನೇಕ ತರ್ಕಯುಕ್ತ ವಾದಗಳನ್ನು ಮಂಡಿಸುತ್ತಿದ್ದರು.

14087002a ದದೃಶುಸ್ತಂ ನೃಪತಯೋ ಯಜ್ಞಸ್ಯ ವಿಧಿಮುತ್ತಮಮ್|

14087002c ದೇವೇಂದ್ರಸ್ಯೇವ ವಿಹಿತಂ ಭೀಮೇನ ಕುರುನಂದನ||

ಕುರುನಂದನ! ದೇವೇಂದ್ರನ ಯಜ್ಞಶಾಲೆಯಂತೆಯೇ ಭೀಮನು ವಿಧಿವತ್ತಾಗಿ ನಿರ್ಮಿಸಿದ್ದ ಆ ಯಜ್ಞಶಾಲೆಯನ್ನು ನೃಪತಿಯರು ನೋಡಿದರು.

14087003a ದದೃಶುಸ್ತೋರಣಾನ್ಯತ್ರ ಶಾತಕುಂಭಮಯಾನಿ ತೇ|

14087003c ಶಯ್ಯಾಸನವಿಹಾರಾಂಶ್ಚ ಸುಬಹೂನ್ರತ್ನಭೂಷಿತಾನ್||

ಅಲ್ಲಿ ಸುವರ್ಣಖಚಿತ ತೋರಣಗಳನ್ನೂ, ಅನೇಕ ರತ್ನವಿಭೂಷಿತ ಶಯ್ಯಾಸನ ವಿಹಾರಗಳನ್ನೂ ಅವರು ನೋಡಿದರು.

14087004a ಘಟಾನ್ಪಾತ್ರೀಃ ಕಟಾಹಾನಿ ಕಲಶಾನ್ವರ್ಧಮಾನಕಾನ್|

14087004c ನ ಹಿ ಕಿಂ ಚಿದಸೌವರ್ಣಮಪಶ್ಯಂಸ್ತತ್ರ ಪಾರ್ಥಿವಾಃ||

ಅಲ್ಲಿ ಚಿನ್ನವಲ್ಲದ ಯಾವ ಘಟಗಳೂ, ಪಾತ್ರೆಗಳೂ, ಕಡಾಯಿಗಳೂ, ಕಲಶಗಳೂ ಮತ್ತು ಶರಾವೆಗಳೂ ಇಲ್ಲದಿದ್ದುದನ್ನು ಪಾರ್ಥಿವರು ನೋಡಿದರು.

14087005a ಯೂಪಾಂಶ್ಚ ಶಾಸ್ತ್ರಪಠಿತಾನ್ದಾರವಾನ್ ಹೇಮಭೂಷಿತಾನ್|

14087005c ಉಪಕ್ಳ್ಪ್ತಾನ್ಯಥಾಕಾಲಂ ವಿಧಿವದ್ಭೂರಿವರ್ಚಸಃ||

ಶಾಸ್ತ್ರವಿಧಿಯನ್ನನುಸರಿಸಿ ದಾರುವೃಕ್ಷಗಳಿಂದ ನಿರ್ಮಿಸಿದ್ದ ಯೂಪಗಳೂ ಹೇಮಭೂಷಿತವಾಗಿದ್ದವು. ಅತ್ಯಂತ ವರ್ಚಸ್ಸಿನಿಂದ ಬೆಳಗುತ್ತಿದ್ದ ಅವುಗಳನ್ನು ಯಥಾಕಾಲದಲ್ಲಿ ವಿಧಿವತ್ತಾಗಿ ನಿರ್ಮಿಸಲಾಗಿತ್ತು.

14087006a ಸ್ಥಲಜಾ ಜಲಜಾ ಯೇ ಚ ಪಶವಃ ಕೇ ಚನ ಪ್ರಭೋ|

14087006c ಸರ್ವಾನೇವ ಸಮಾನೀತಾಂಸ್ತಾನಪಶ್ಯಂತ ತೇ ನೃಪಾಃ||

ಪ್ರಭೋ! ಭೂಮಿಯ ಮೇಲೆ ಮತ್ತು ಜಲದಲ್ಲಿ ವಾಸಿಸುವ ಏನೆಲ್ಲ ಪಶುಗಳಿವೆಯೋ ಅವೆಲ್ಲವನ್ನೂ ಅಲ್ಲಿಗೆ ತಂದಿರುವುದನ್ನು ನೃಪರು ವೀಕ್ಷಿಸಿದರು.

14087007a ಗಾಶ್ಚೈವ ಮಹಿಷೀಶ್ಚೈವ ತಥಾ ವೃದ್ಧಾಃ ಸ್ತ್ರಿಯೋಽಪಿ ಚ|

14087007c ಔದಕಾನಿ ಚ ಸತ್ತ್ವಾನಿ ಶ್ವಾಪದಾನಿ ವಯಾಂಸಿ ಚ||

14087008a ಜರಾಯುಜಾನ್ಯಂಡಜಾನಿ ಸ್ವೇದಜಾನ್ಯುದ್ಭಿದಾನಿ ಚ|

14087008c ಪರ್ವತಾನೂಪವನ್ಯಾನಿ ಭೂತಾನಿ ದದೃಶುಶ್ಚ ತೇ||

ಹಸುಗಳು, ಎಮ್ಮೆಗಳು, ವೃದ್ಧಸ್ತ್ರೀಯರು, ಜಲಚರಪ್ರಾಣಿಗಳು, ಮಾಂಸಾಹಾರಿ ಮೃಗಗಳು, ಪಕ್ಷಿಗಳು, ಜರಾಯುಜ-ಅಂಡಜ-ಸ್ವೇದಜ-ಉದ್ಭಿಜಗಳೆಂಬ ನಾಲ್ಕೂ ಪ್ರಕಾರದ ಪ್ರಾಣಿಗಳು, ಪರ್ವತಪ್ರದೇಶಗಳಲ್ಲಿ ಮತ್ತು ಉಪವನಗಳಲ್ಲಿ ವಾಸಿಸುವ ಪ್ರಾಣಿಗಳನ್ನೂ ಅವರು ನೋಡಿದರು.

14087009a ಏವಂ ಪ್ರಮುದಿತಂ ಸರ್ವಂ ಪಶುಗೋಧನಧಾನ್ಯತಃ|

14087009c ಯಜ್ಞವಾಟಂ ನೃಪಾ ದೃಷ್ಟ್ವಾ ಪರಂ ವಿಸ್ಮಯಮಾಗಮನ್|

ಹೀಗೆ ಸರ್ವ ಪಶು-ಗೋ-ಧನ-ಧಾನ್ಯಗಳಿಂದ ಸಮೃದ್ಧವಾಗಿದ್ದ ಆ ಯಜ್ಞವಾಟಿಕೆಯನ್ನು ನೋಡಿ ನೃಪರು ಪರಮ ವಿಸ್ಮಿತರಾದರು.

14087009e ಬ್ರಾಹ್ಮಣಾನಾಂ ವಿಶಾಂ ಚೈವ ಬಹುಮೃಷ್ಟಾನ್ನಮೃದ್ಧಿಮತ್||

14087010a ಪೂರ್ಣೇ ಶತಸಹಸ್ರೇ ತು ವಿಪ್ರಾಣಾಂ ತತ್ರ ಭುಂಜತಾಮ್|

14087010c ದುಂದುಭಿರ್ಮೇಘನಿರ್ಘೋಷೋ ಮುಹುರ್ಮುಹುರತಾಡ್ಯತ||

14087011a ವಿನನಾದಾಸಕೃತ್ಸೋಽಥ ದಿವಸೇ ದಿವಸೇ ತದಾ|

14087011c ಏವಂ ಸ ವವೃತೇ ಯಜ್ಞೋ ಧರ್ಮರಾಜಸ್ಯ ಧೀಮತಃ||

ಬ್ರಾಹ್ಮಣರಿಗೆ ಮತ್ತು ವೈಶ್ಯರಿಗೆ ಅಲ್ಲಿ ಬಹುಮೃಷ್ಟಾನ್ನ ಭೋಜನದ ವ್ಯವಸ್ಥೆಯಿತ್ತು. ಒಂದು ಲಕ್ಷ ವಿಪ್ರರ ಭೋಜನವು ಪೂರ್ಣಗೊಳ್ಳಲು ಮೇಘನಿರ್ಘೋಷದಂತೆ ದುಂದುಭಿಯು ಮೊಳಗುತ್ತಿತ್ತು. ದಿವಸ ದಿವಸದಲ್ಲಿಯೂ ಆ ದುಂದುಭಿಯ ಶಬ್ಧವು ಮತ್ತೆ ಮತ್ತೆ ಕೇಳಿಬರುತ್ತಿತ್ತು. ಹೀಗೆ ಧೀಮತ ಧರ್ಮರಾಜನ ಯಜ್ಞವು ಮುಂದುವರೆಯಿತು.

14087012a ಅನ್ನಸ್ಯ ಬಹವೋ ರಾಜನ್ನುತ್ಸರ್ಗಾಃ ಪರ್ವತೋಪಮಾಃ|

14087012c ದಧಿಕುಲ್ಯಾಶ್ಚ ದದೃಶುಃ ಸರ್ಪಿಷಶ್ಚ ಹ್ರದಾಂಜನಾಃ||

ಪರ್ವತೋಪಮವಾದ ಅನ್ನದ ಅನೇಕ ರಾಶಿಗಳನ್ನೂ, ಮೊಸರಿನ ಕಾಲುವೆಗಳನ್ನೂ, ತುಪ್ಪದ ಕೊಳಗಳನ್ನೂ ರಾಜರು ನೋಡಿದರು.

14087013a ಜಂಬೂದ್ವೀಪೋ ಹಿ ಸಕಲೋ ನಾನಾಜನಪದಾಯುತಃ|

14087013c ರಾಜನ್ನದೃಶ್ಯತೈಕಸ್ಥೋ ರಾಜ್ಞಸ್ತಸ್ಮಿನ್ಮಹಾಕ್ರತೌ||

ರಾಜನ್! ರಾಜನ ಆ ಮಹಾಕ್ರತುವಿನಲ್ಲಿ ನಾನಾ ದೇಶಗಳಿಂದ ರಾಜರು ಬಂದಿದ್ದರಿಂದ ಜಂಬೂದ್ವೀಪವೆಲ್ಲವೂ ಒಂದೇ ಕಡೆ ಬಂದು ಸೇರಿದೆಯೋ ಎನ್ನುವಂತೆ ತೋರುತ್ತಿತ್ತು.

14087014a ತತ್ರ ಜಾತಿಸಹಸ್ರಾಣಿ ಪುರುಷಾಣಾಂ ತತಸ್ತತಃ|

14087014c ಗೃಹೀತ್ವಾ ಧನಮಾಜಗ್ಮುರ್ಬಹೂನಿ ಭರತರ್ಷಭ||

ಭರತರ್ಷಭ! ಅಲ್ಲಿ ಸಹಸ್ರಾರು ಜಾತಿಗಳ ಪುರುಷರು ಅನೇಕ ಧನಗಳನ್ನು ತೆಗೆದುಕೊಂಡು ಎಲ್ಲೆಲ್ಲಿಂದಲೋ ಬಂದಿದ್ದರು.

14087015a ರಾಜಾನಃ ಸ್ರಗ್ವಿಣಶ್ಚಾಪಿ ಸುಮೃಷ್ಟಮಣಿಕುಂಡಲಾಃ|

14087015c ಪರ್ಯವೇಷನ್ ದ್ವಿಜಾಗ್ರ್ಯಾಂಸ್ತಾನ್ಶತಶೋಽಥ ಸಹಸ್ರಶಃ||

ಸುವರ್ಣದ ಹಾರಗಳನ್ನೂ ಮಣಿಕುಂಡಲಗಳನ್ನೂ ಧರಿಸಿದ್ದ ರಾಜರು ನೂರಾರು ಸಹಸ್ರಾರು ದ್ವಿಜಾಗ್ರರಿಗೆ ಬಡಿಸುತ್ತಿದ್ದರು.

14087016a ವಿವಿಧಾನ್ಯನ್ನಪಾನಾನಿ ಪುರುಷಾ ಯೇಽನುಯಾಯಿನಃ|

14087016c ತೇಷಾಂ ನೃಪೋಪಭೋಜ್ಯಾನಿ ಬ್ರಾಹ್ಮಣೇಭ್ಯೋ ದದುಃ ಸ್ಮ ತೇ||

ಅವರ ಅನುಯಾಯಿಗಳು ಕೂಡ ಬ್ರಾಹ್ಮಣರಿಗೆ ರಾಜಭೋಗ್ಯವಾದ ವಿಧವಿಧದ ಅನ್ನ-ಪಾನಗಳನ್ನು ಬಡಿಸುತ್ತಿದ್ದರು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅಶ್ವಮೇಧಾರಂಭೇ ಸಪ್ತಶೀತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಮೇಧಾರಂಭ ಎನ್ನುವ ಎಂಭತ್ತೇಳನೇ ಅಧ್ಯಾಯವು.

Comments are closed.