Ashvamedhika Parva: Chapter 81

ಅಶ್ವಮೇಧಿಕ ಪರ್ವ

೮೧

ಉಲೂಪಿಯು ನಾಗಲೋಕದಿಂದ ಸಂಜೀವಿನೀ ಮಣಿಯನ್ನು ತರಿಸಿ, ಅದರಿಂದ ಅರ್ಜುನನನ್ನು ಪುನರ್ಜೀವಗೊಳಿಸಿದುದು (೧-೧೨). ಎಚ್ಚೆತ್ತ ಅರ್ಜುನನು ರಣಭೂಮಿಯಲ್ಲಿ ಉಲೂಪಿ-ಚಿತ್ರಾಂಗದೆಯರನ್ನು ನೋಡಿ ವಿಸ್ಮಿತನಾಗಿ ಬಭ್ರುವಾಹನನನ್ನು ಪ್ರಶ್ನಿಸಿದುದು (೧೩-೨೧).

Image result for dhritarashtra embraces bhima14081001 ವೈಶಂಪಾಯನ ಉವಾಚ

14081001a ಪ್ರಾಯೋಪವಿಷ್ಟೇ ನೃಪತೌ ಮಣಿಪೂರೇಶ್ವರೇ ತದಾ|

14081001c ಪಿತೃಶೋಕಸಮಾವಿಷ್ಟೇ ಸಹ ಮಾತ್ರಾ ಪರಂತಪ||

ವೈಶಂಪಾಯನನು ಹೇಳಿದನು: “ಪರಂತಪ! ಪಿತೃಶೋಕದಿಂದ ಮುಳುಗಿಹೋಗಿದ್ದ ಮಣಿಪೂರೇಶ್ವರ ನೃಪತಿಯು ಆಗ ತಾಯಿಯೊಡನೆ ಪ್ರಾಯೋಪವೇಶ ಮಾಡಿದನು.

14081002a ಉಲೂಪೀ ಚಿಂತಯಾಮಾಸ ತದಾ ಸಂಜೀವನಂ ಮಣಿಮ್|

14081002c ಸ ಚೋಪಾತಿಷ್ಠತ ತದಾ ಪನ್ನಗಾನಾಂ ಪರಾಯಣಮ್||

ಆಗ ಉಲೂಪಿಯು ಸಂಜೀವನ ಮಣಿಯನ್ನು ಸ್ಮರಿಸಿಕೊಂಡಳು. ಪನ್ನಗಗಳ ಪರಾಯಣವಾದ ಆ ಮಣಿಯು ಕೂಡಲೇ ಅಲ್ಲಿಗೆ ಬಂದಿತು.

14081003a ತಂ ಗೃಹೀತ್ವಾ ತು ಕೌರವ್ಯ ನಾಗರಾಜಪತೇಃ ಸುತಾ|

14081003c ಮನಃಪ್ರಹ್ಲಾದನೀಂ ವಾಚಂ ಸೈನಿಕಾನಾಮಥಾಬ್ರವೀತ್||

ಕೌರವ್ಯ! ಆ ಮಣಿಯನ್ನು ಹಿಡಿದುಕೊಂಡು ನಾಗರಾಜಪತಿಯ ಆ ಮಗಳು ಸೈನಿಕರ ಮನಸ್ಸಿಗೆ ಆಹ್ಲಾದಕರವಾದ ಈ ಮಾತನ್ನಾಡಿದಳು:

14081004a ಉತ್ತಿಷ್ಠ ಮಾ ಶುಚಃ ಪುತ್ರ ನೈಷ ಜಿಷ್ಣುಸ್ತ್ವಯಾ ಹತಃ|

14081004c ಅಜೇಯಃ ಪುರುಷೈರೇಷ ದೇವೈರ್ವಾಪಿ ಸವಾಸವೈಃ||

“ಮಗೂ! ಎದ್ದೇಳು! ಶೋಕಿಸಬೇಡ! ಜಿಷ್ಣುವು ನಿನ್ನಿಂದ ಹತನಾಗಲಿಲ್ಲ. ಇವನು ಇಂದ್ರಸಹಿತನಾದ ದೇವತೆಗಳಿಗೂ ಮನುಷ್ಯರಿಗೂ ಅಜೇಯನು.

14081005a ಮಯಾ ತು ಮೋಹಿನೀ ನಾಮ ಮಾಯೈಷಾ ಸಂಪ್ರಯೋಜಿತಾ|

14081005c ಪ್ರಿಯಾರ್ಥಂ ಪುರುಷೇಂದ್ರಸ್ಯ ಪಿತುಸ್ತೇಽದ್ಯ ಯಶಸ್ವಿನಃ||

ಯಶಸ್ವಿನೀ ನಿನ್ನ ಈ ತಂದೆ ಪುರುಷೇಂದ್ರನಿಗೆ ಪ್ರಿಯವಾದುದನ್ನು ಮಾಡಲೋಸುಗ ನಾನೇ ಈ ಮೋಹಿನೀ ಎಂಬ ಹೆಸರಿನ ಮಾಯೆಯನ್ನು ಪ್ರದರ್ಶಿಸಿದೆನು.

14081006a ಜಿಜ್ಞಾಸುರ್ಹ್ಯೇಷ ವೈ ಪುತ್ರ ಬಲಸ್ಯ ತವ ಕೌರವಃ|

14081006c ಸಂಗ್ರಾಮೇ ಯುಧ್ಯತೋ ರಾಜನ್ನಾಗತಃ ಪರವೀರಹಾ||

ರಾಜನ್! ಈ ಪರವೀರಹ ಕೌರವನು ತನ್ನ ಮಗನ ಬಲವೆಷ್ಟಿರಬಹುದೆಂಬ ಜಿಜ್ಞಾಸೆಯಿಂದಲೇ ನಿನ್ನೊಡನೆ ಸಂಗ್ರಾಮದಲ್ಲಿ ಯುದ್ಧಮಾಡಲು ಬಯಸಿದ್ದನು.

14081007a ತಸ್ಮಾದಸಿ ಮಯಾ ಪುತ್ರ ಯುದ್ಧಾರ್ಥಂ ಪರಿಚೋದಿತಃ|

14081007c ಮಾ ಪಾಪಮಾತ್ಮನಃ ಪುತ್ರ ಶಂಕೇಥಾಸ್ತ್ವಣ್ವಪಿ ಪ್ರಭೋ||

ಪ್ರಭೋ! ಪುತ್ರ! ಆದುದರಿಂದಲೇ ನಾನು ನಿನ್ನನ್ನು ಯುದ್ಧಕ್ಕಾಗಿ ಪ್ರಚೋದಿಸಿದೆ! ನೀನು ನಿನ್ನನ್ನು ಪಾಪಿಯೆಂದು ಸ್ವಲ್ಪವೂ ಶಂಕಿಸಬೇಕಾಗಿಲ್ಲ!

14081008a ಋಷಿರೇಷ ಮಹಾತೇಜಾಃ ಪುರುಷಃ ಶಾಶ್ವತೋಽವ್ಯಯಃ|

14081008c ನೈನಂ ಶಕ್ತೋ ಹಿ ಸಂಗ್ರಾಮೇ ಜೇತುಂ ಶಕ್ರೋಽಪಿ ಪುತ್ರಕ||

ಪುತ್ರಕ! ಈ ಪುರುಷನು ಮಹಾತೇಜಸ್ವೀ ಋಷಿಯು. ಶಾಶ್ವತನು ಮತ್ತು ಅವ್ಯಯನು. ಸಂಗ್ರಾಮದಲ್ಲಿ ಇವನನ್ನು ಶಕ್ರನಿಗೂ ಜಯಿಸಲು ಸಾಧ್ಯವಿಲ್ಲ!

14081009a ಅಯಂ ತು ಮೇ ಮಣಿರ್ದಿವ್ಯಃ ಸಮಾನೀತೋ ವಿಶಾಂ ಪತೇ|

14081009c ಮೃತಾನ್ಮೃತಾನ್ಪನ್ನಗೇಂದ್ರಾನ್ಯೋ ಜೀವಯತಿ ನಿತ್ಯದಾ||

ವಿಶಾಂಪತೇ! ಮೃತಗೊಂಡ ಪನ್ನಗೇಂದ್ರರನ್ನು ನಿತ್ಯವೂ ಬದುಕಿಸುವ ಈ ದಿವ್ಯ ಮಣಿಯನ್ನು ಇಗೋ ತರಿಸಿದ್ದೇನೆ.

14081010a ಏತಮಸ್ಯೋರಸಿ ತ್ವಂ ತು ಸ್ಥಾಪಯಸ್ವ ಪಿತುಃ ಪ್ರಭೋ|

14081010c ಸಂಜೀವಿತಂ ಪುನಃ ಪುತ್ರ ತತೋ ದ್ರಷ್ಟಾಸಿ ಪಾಂಡವಮ್||

ಪ್ರಭೋ! ಪುತ್ರ! ಇದನ್ನು ನೀನು ನಿನ್ನ ತಂದೆಯ ಎದೆಯ ಮೇಲೆ ಇಡು. ಆಗ ನೀನು ಪುನಃ ಪಾಂಡವ ಅರ್ಜುನನನ್ನು ಜೀವಂತನಾಗಿ ಕಾಣುವೆ!”

14081011a ಇತ್ಯುಕ್ತಃ ಸ್ಥಾಪಯಾಮಾಸ ತಸ್ಯೋರಸಿ ಮಣಿಂ ತದಾ|

14081011c ಪಾರ್ಥಸ್ಯಾಮಿತತೇಜಾಃ ಸ ಪಿತುಃ ಸ್ನೇಹಾದಪಾಪಕೃತ್||

ಹೀಗೆ ಹೇಳಲು ಪಾಪವನ್ನೆಸಗಿದ್ದ ಅಮಿತತೇಜಸ್ವೀ ಬಭ್ರುವಾಹನನು ಸ್ನೇಹಪೂರ್ವಕವಾಗಿ ಆ ಮಣಿಯನ್ನು ತಂದೆ ಪಾರ್ಥನ ಎದೆಯಮೇಲೆ

ಇಟ್ಟನು.

14081012a ತಸ್ಮಿನ್ನ್ಯಸ್ತೇ ಮಣೌ ವೀರ ಜಿಷ್ಣುರುಜ್ಜೀವಿತಃ ಪ್ರಭುಃ|

14081012c ಸುಪ್ತೋತ್ಥಿತ ಇವೋತ್ತಸ್ಥೌ ಮೃಷ್ಟಲೋಹಿತಲೋಚನಃ||

ವೀರ! ಆ ಮಣಿಯನ್ನು ಇಟ್ಟೊಡನೆಯೇ ಪ್ರಭು ಜಿಷ್ಣುವು ಪುನಃ ಜೀವಿತನಾದನು. ಮಲಗಿದ್ದವನು ಎದ್ದೇಳುವಂತೆ ತನ್ನ ಕೆಂಪು ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಅವನು ಎದ್ದು ಕುಳಿತನು.

14081013a ತಮುತ್ಥಿತಂ ಮಹಾತ್ಮಾನಂ ಲಬ್ಧಸಂಜ್ಞಂ ಮನಸ್ವಿನಮ್|

14081013c ಸಮೀಕ್ಷ್ಯ ಪಿತರಂ ಸ್ವಸ್ಥಂ ವವಂದೇ ಬಭ್ರುವಾಹನಃ||

ಸಂಜ್ಞೆಗಳನ್ನು ಪಡೆದು ಸ್ವಸ್ಥನಾಗಿ ಮೇಲೆದ್ದ ಆ ಮಹಾತ್ಮ ಮನಸ್ವೀ ತಂದೆಯನ್ನು ನೋಡಿ ಬಭ್ರುವಾಹನನು ವಂದಿಸಿದನು.

14081014a ಉತ್ಥಿತೇ ಪುರುಷವ್ಯಾಘ್ರೇ ಪುನರ್ಲಕ್ಷ್ಮೀವತಿ ಪ್ರಭೋ|

14081014c ದಿವ್ಯಾಃ ಸುಮನಸಃ ಪುಣ್ಯಾ ವವೃಷೇ ಪಾಕಶಾಸನಃ||

ಪ್ರಭೋ! ಆ ಪುರುಷವ್ಯಾಘ್ರ ಶ್ರೀಮಂತನು ಪುನಃ ಮೇಲೇಳಲು ಸಂತೋಷಗೊಂಡ ಪಾಕಶಾಸನ ಇಂದ್ರನು ಅವನ ಮೇಲೆ ಪುಣ್ಯ ದಿವ್ಯವೃಷ್ಟಿಯನ್ನು ಸುರಿಸಿದನು.

14081015a ಅನಾಹತಾ ದುಂದುಭಯಃ ಪ್ರಣೇದುರ್ಮೇಘನಿಸ್ವನಾಃ|

14081015c ಸಾಧು ಸಾಧ್ವಿತಿ ಚಾಕಾಶೇ ಬಭೂವ ಸುಮಹಾನ್ಸ್ವನಃ||

ಯಾರೂ ಬಾರಿಸದೇ ಇದ್ದರೂ ಮೇಘದ ಧ್ವನಿಯಲ್ಲಿ ದುಂದುಭಿಗಳು ಮೊಳಗಿದವು. ಆಕಾಶದಲ್ಲಿ “ಸಾಧು! ಸಾಧು!” ಎಂಬ ಮಹಾ ಧ್ವನಿಯು ಕೇಳಿಬಂದಿತು.

14081016a ಉತ್ಥಾಯ ತು ಮಹಾಬಾಹುಃ ಪರ್ಯಾಶ್ವಸ್ತೋ ಧನಂಜಯಃ|

14081016c ಬಭ್ರುವಾಹನಮಾಲಿಂಗ್ಯ ಸಮಾಜಿಘ್ರತ ಮೂರ್ಧನಿ||

ಮಹಾಬಾಹು ಧನಂಜಯನು ಸಮಾಧಾನಹೊಂದಿ ಮೇಲೆದ್ದು ಬಭ್ರುವಾಹನನನ್ನು ಆಲಂಗಿಸಿ ನೆತ್ತಿಯನ್ನು ಆಘ್ರಾಣಿಸಿದನು.

14081017a ದದರ್ಶ ಚಾವಿದೂರೇಽಸ್ಯ ಮಾತರಂ ಶೋಕಕರ್ಶಿತಾಮ್|

14081017c ಉಲೂಪ್ಯಾ ಸಹ ತಿಷ್ಠಂತೀಂ ತತೋಽಪೃಚ್ಚದ್ಧನಂಜಯಃ||

ಅನತಿ ದೂರದಲ್ಲಿಯೇ ಉಲೂಪಿಯೊಡನೆ ಶೋಕಕರ್ಶಿತಳಾಗಿ ನಿಂತಿದ್ದ ಅವನ ತಾಯಿ ಚಿತ್ರಾಂಗದೆಯನ್ನೂ ನೋಡಿ, ಧನಂಜಯನು ಬಭ್ರುವಾಹನನಿಗೆ ಕೇಳಿದನು:

14081018a ಕಿಮಿದಂ ಲಕ್ಷ್ಯತೇ ಸರ್ವಂ ಶೋಕವಿಸ್ಮಯಹರ್ಷವತ್|

14081018c ರಣಾಜಿರಮಮಿತ್ರಘ್ನ ಯದಿ ಜಾನಾಸಿ ಶಂಸ ಮೇ||

“ಅಮಿತ್ರಘ್ನ! ಈ ರಣಾಂಗಣವು ಶೋಕ-ವಿಸ್ಮಯ-ಹರ್ಷಗಳಿಂದ ಕೂಡಿದಂತೆ ಕಾಣುತ್ತಿದೆ. ಇದಕ್ಕೆ ಕಾರಣವೇನಾದರೂ ನಿನಗೆ ತಿಳಿದಿದ್ದರೆ ಹೇಳು!

14081019a ಜನನೀ ಚ ಕಿಮರ್ಥಂ ತೇ ರಣಭೂಮಿಮುಪಾಗತಾ|

14081019c ನಾಗೇಂದ್ರದುಹಿತಾ ಚೇಯಮುಲೂಪೀ ಕಿಮಿಹಾಗತಾ||

ನಿನ್ನ ಜನನಿಯು ಏಕೆ ಈ ರಣಭೂಮಿಗೆ ಬಂದಿದ್ದಾಳೆ? ನಾಗೇಂದ್ರನ ಮಗಳು ಉಲೂಪಿಯೂ ಕೂಡ ಇಲ್ಲಿಗೆ ಏಕೆ ಬಂದಿದ್ದಾಳೆ?

14081020a ಜಾನಾಮ್ಯಹಮಿದಂ ಯುದ್ಧಂ ತ್ವಯಾ ಮದ್ವಚನಾತ್ಕೃತಮ್|

14081020c ಸ್ತ್ರೀಣಾಮಾಗಮನೇ ಹೇತುಮಹಮಿಚ್ಚಾಮಿ ವೇದಿತುಮ್||

ನನ್ನ ಹೇಳಿಕೆಯಂತೆಯೇ ನಮ್ಮಿಬ್ಬರೊಡನೆ ಯುದ್ಧವು ನಡೆಯಿತು ಎನ್ನುವುದು ನನಗೆ ತಿಳಿದಿದೆ. ಆದರೆ ಈ ಸ್ತ್ರೀಯರು ಇಲ್ಲಿಗೆ ಬರಲು ಕಾರಣವೇನೆಂದು ತಿಳಿಯಲು ಬಯಸುತ್ತೇನೆ.”

14081021a ತಮುವಾಚ ತತಃ ಪೃಷ್ಟೋ ಮಣಿಪೂರಪತಿಸ್ತದಾ|

14081021c ಪ್ರಸಾದ್ಯ ಶಿರಸಾ ವಿದ್ವಾನುಲೂಪೀ ಪೃಚ್ಚ್ಯತಾಮಿತಿ||

ಹೀಗೆ ಕೇಳಲು ಮಣಿಪೂರಪತಿಯು ಅರ್ಜುನನಿಗೆ ಶಿರಸಾ ನಮಸ್ಕರಿಸಿ ಪ್ರಸನ್ನಗೊಳಿಸಿ ಇದನ್ನು ಉಲೂಪಿಯಲ್ಲಿ ಕೇಳಿ ತಿಳಿದುಕೊಳ್ಳಬೇಕೆಂದು ಪ್ರಾರ್ಥಿಸಿಕೊಂಡನು.

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅರ್ಜುನಪ್ರತ್ಯುಜ್ಜೀವನೇ ಏಕಾಶೀತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅರ್ಜುನಪ್ರತ್ಯುಜ್ಜೀವನ ಎನ್ನುವ ಎಂಭತ್ತೊಂದನೇ ಅಧ್ಯಾಯವು.

Comments are closed.