Ashvamedhika Parva: Chapter 80

ಅಶ್ವಮೇಧಿಕ ಪರ್ವ

೮೦

ಮೂರ್ಛೆಯಿಂದ ಎಚ್ಚೆತ್ತ ಬಭ್ರುವಾಹನನು ಶೋಕಿಸುತ್ತಾ ಆಮರಣಾಂತ ಉಪವಾಸವನ್ನು ಕೈಗೊಂಡಿದುದು (೧-೨೨).

14080001 ವೈಶಂಪಾಯನ ಉವಾಚ

14080001a ತಥಾ ವಿಲಪ್ಯೋಪರತಾ ಭರ್ತುಃ ಪಾದೌ ಪ್ರಗೃಹ್ಯ ಸಾ|

14080001c ಉಪವಿಷ್ಟಾಭವದ್ದೇವೀ ಸೋಚ್ಚ್ವಾಸಂ ಪುತ್ರಮೀಕ್ಷತೀ||

ವೈಶಂಪಾಯನನು ಹೇಳಿದನು: “ಹಾಗೆ ಪತಿಯ ಪಾದಗಳೆರಡನ್ನೂ ಹಿಡಿದು ವಿಲಪಿಸುತ್ತ ಕುಳಿತಿದ್ದ ದೇವೀ ಚಿತ್ರಾಂಗದೆಯು ಮಗನು ಉಸಿರಾಡುತ್ತಿರುವುದನ್ನು ಗಮನಿಸಿದಳು.

14080002a ತತಃ ಸಂಜ್ಞಾಂ ಪುನರ್ಲಬ್ಧ್ವಾ ಸ ರಾಜಾ ಬಭ್ರುವಾಹನಃ|

14080002c ಮಾತರಂ ತಾಮಥಾಲೋಕ್ಯ ರಣಭೂಮಾವಥಾಬ್ರವೀತ್||

ಅನಂತರ ಸಂಜ್ಞೆಗಳನ್ನು ಪುನಃ ಪಡೆದ ರಾಜಾ ಬಭ್ರುವಾಹನನು ರಣಭೂಮಿಯಲ್ಲಿ ತನ್ನ ತಾಯಿಯನ್ನು ನೋಡಿ ಈ ಮಾತುಗಳನ್ನಾಡಿದನು:

14080003a ಇತೋ ದುಃಖತರಂ ಕಿಂ ನು ಯನ್ಮೇ ಮಾತಾ ಸುಖೈಧಿತಾ|

14080003c ಭೂಮೌ ನಿಪತಿತಂ ವೀರಮನುಶೇತೇ ಮೃತಂ ಪತಿಮ್||

“ಅಯ್ಯೋ! ಸುಖವನ್ನೇ ತಿಳಿದಿರುವ ನನ್ನ ಈ ತಾಯಿಯು ಮೃತನಾದ ವೀರ ಪತಿಯೊಡನೆ ಭೂಮಿಯ ಮೇಲೆ ಬಿದ್ದು ಮಲಗಿದ್ದಾಳಲ್ಲಾ! ಇದಕ್ಕಿಂತಲೂ ಹೆಚ್ಚಿನ ದುಃಖವು ಯಾವುದಿದೆ?

14080004a ನಿಹಂತಾರಂ ರಣೇಽರೀಣಾಂ ಸರ್ವಶಸ್ತ್ರಭೃತಾಂ ವರಮ್|

14080004c ಮಯಾ ವಿನಿಹತಂ ಸಂಖ್ಯೇ ಪ್ರೇಕ್ಷತೇ ದುರ್ಮರಂ ಬತ||

ರಣದಲ್ಲಿ ಅರಿಗಳನ್ನು ಸಂಹರಿಸುವ, ಸರ್ವಶಸ್ತ್ರಭೃತರಲ್ಲಿಯೂ ಶ್ರೇಷ್ಠನಾಗಿದ್ದವನು ನನ್ನಿಂದ ಯುದ್ಧದಲ್ಲಿ ಹತನಾಗಿ ದುರ್ಮರಣ ಹೊಂದಿರುವುದನ್ನು ಇವಳು ನೋಡುತ್ತಿರುವಳಲ್ಲ!

14080005a ಅಹೋಽಸ್ಯಾ ಹೃದಯಂ ದೇವ್ಯಾ ದೃಢಂ ಯನ್ನ ವಿದೀರ್ಯತೇ|

14080005c ವ್ಯೂಢೋರಸ್ಕಂ ಮಹಾಬಾಹುಂ ಪ್ರೇಕ್ಷಂತ್ಯಾ ನಿಹತಂ ಪತಿಮ್||

ಈ ವಿಶಾಲವಕ್ಷಸ್ಥಳವಿರುವ ಮಹಾಬಾಹು ಪತಿಯು ಹತನಾಗಿರುವುದನ್ನು ನೋಡಿಯೂ ಈ ದೇವಿಯ ಹೃದಯವು ಒಡೆದುಹೋಗುತ್ತಿಲ್ಲ ಎಂದರೆ ಇವಳ ಹೃದಯವು ದೃಢವಾಗಿಯೇ ಇರಬೇಕು!

14080006a ದುರ್ಮರಂ ಪುರುಷೇಣೇಹ ಮನ್ಯೇ ಹ್ಯಧ್ವನ್ಯನಾಗತೇ|

14080006c ಯತ್ರ ನಾಹಂ ನ ಮೇ ಮಾತಾ ವಿಪ್ರಯುಜ್ಯೇತ ಜೀವಿತಾತ್||

ದುರ್ಮರಣದಂಥಹ ಈ ಸಂಕಟವು ಸಂಭವಿಸಿದಾಗಲೂ ನನ್ನ ಅಥವಾ ನನ್ನ ತಾಯಿಯ ಪ್ರಾಣವು ಹೊರಟುಹೋಗುತ್ತಿಲ್ಲವಲ್ಲ!

14080007a ಅಹೋ ಧಿಕ್ಕುರುವೀರಸ್ಯ ಹ್ಯುರಃಸ್ಥಂ ಕಾಂಚನಂ ಭುವಿ|

14080007c ವ್ಯಪವಿದ್ಧಂ ಹತಸ್ಯೇಹ ಮಯಾ ಪುತ್ರೇಣ ಪಶ್ಯತ||

ಅಯ್ಯೋ! ನನಗೆ ಧಿಕ್ಕಾರ! ಈ ಕುರುವೀರನ ಕಾಂಚನ ಕವಚವು ಭೂಮಿಯ ಮೇಲೆ ಕೆಡವಲ್ಪಟ್ಟು ಮಗನಾದ ನನ್ನಿಂದ ಹತನಾಗಿರುವ ಇವನನ್ನು ನೋಡಿರಿ!

14080008a ಭೋ ಭೋ ಪಶ್ಯತ ಮೇ ವೀರಂ ಪಿತರಂ ಬ್ರಾಹ್ಮಣಾ ಭುವಿ|

14080008c ಶಯಾನಂ ವೀರಶಯನೇ ಮಯಾ ಪುತ್ರೇಣ ಪಾತಿತಮ್||

ಭೋ! ಭೋ! ಬ್ರಾಹ್ಮಣರೇ! ನನ್ನ ವೀರ ತಂದೆಯು ಮಗನಾದ ನನ್ನಿಂದ ಕೆಳಗುರುಳಿಸಲ್ಪಟ್ಟು ವೀರಶಯನದಲ್ಲಿ ಮಲಗಿರುವುದನ್ನು ನೋಡಿರಿ!

14080009a ಬ್ರಾಹ್ಮಣಾಃ ಕುರುಮುಖ್ಯಸ್ಯ ಪ್ರಯುಕ್ತಾ ಹಯಸಾರಿಣಃ|

14080009c ಕುರ್ವಂತು ಶಾಂತಿಕಾಂ ತ್ವದ್ಯ ರಣೇ ಯೋಽಯಂ ಮಯಾ ಹತಃ||

ಕುರುಮುಖ್ಯನ ಕುದುರೆಯನ್ನು ಹಿಂಬಾಲಿಸಿ ಬಂದಿರುವ ಬ್ರಾಹ್ಮಣರು ಇಂದು ನನ್ನಿಂದ ರಣದಲ್ಲಿ ಹತನಾಗಿರುವ ಇವನಿಗೆ ಯಾವ ಶಾಂತಿಕರ್ಮಗಳನ್ನು ಮಾಡುವರು?

14080010a ವ್ಯಾದಿಶಂತು ಚ ಕಿಂ ವಿಪ್ರಾಃ ಪ್ರಾಯಶ್ಚಿತ್ತಮಿಹಾದ್ಯ ಮೇ|

14080010c ಸುನೃಶಂಸಸ್ಯ ಪಾಪಸ್ಯ ಪಿತೃಹಂತೂ ರಣಾಜಿರೇ||

ವಿಪ್ರರೇ! ರಣರಂಗದಲ್ಲಿ ತಂದೆಯನ್ನು ಕೊಂದ ಈ ಕ್ರೂರಿ ಪಾಪಿಗೆ ಪ್ರಾಯಶ್ಚಿತ್ತವೇನನ್ನಾದರೂ ವಿದಿಸಿರಿ!

14080011a ದುಶ್ಚರಾ ದ್ವಾದಶ ಸಮಾ ಹತ್ವಾ ಪಿತರಮದ್ಯ ವೈ|

14080011c ಮಮೇಹ ಸುನೃಶಂಸಸ್ಯ ಸಂವೀತಸ್ಯಾಸ್ಯ ಚರ್ಮಣಾ||

14080012a ಶಿರಃಕಪಾಲೇ ಚಾಸ್ಯೈವ ಭುಂಜತಃ ಪಿತುರದ್ಯ ಮೇ|

14080012c ಪ್ರಾಯಶ್ಚಿತ್ತಂ ಹಿ ನಾಸ್ತ್ಯನ್ಯದ್ಧತ್ವಾದ್ಯ ಪಿತರಂ ಮಮ||

ಇಂದು ತಂದೆಯನ್ನು ಕೊಂದ ನಾನು ಹನ್ನೆರಡು ವರ್ಷಗಳು ಕಷ್ಟದಲ್ಲಿ ಇರಬೇಕು. ಕ್ರೂರನಾಗಿರುವ ನಾನು ಇವನದೇ ಚರ್ಮವನ್ನು ಹೊದೆದುಕೊಂಡು ಇವನದೇ ಶಿರವನ್ನು ಕಪಾಲವನ್ನಾಗಿ ಹಿಡಿದು ಸಂಚರಿಸಬೇಕು. ತಂದೆಯನ್ನೇ ಕೊಂದ ನನಗೆ ಇದಕ್ಕಿಂತ ಬೇರೆ ಯಾವ ಪ್ರಾಯಶ್ಚಿತ್ತವೂ ಇಲ್ಲ!

14080013a ಪಶ್ಯ ನಾಗೋತ್ತಮಸುತೇ ಭರ್ತಾರಂ ನಿಹತಂ ಮಯಾ|

14080013c ಕೃತಂ ಪ್ರಿಯಂ ಮಯಾ ತೇಽದ್ಯ ನಿಹತ್ಯ ಸಮರೇಽರ್ಜುನಮ್||

ನಾಗೋತ್ತಮನ ಮಗಳೇ! ನೋಡು! ನಿನ್ನ ಪತಿಯನ್ನು ನಾನು ಸಂಹರಿಸಿದ್ದೇನೆ! ಸಮರದಲ್ಲಿ ಅರ್ಜುನನನ್ನು ಸಂಹರಿಸಿ ಇಂದು ನಾನು ನಿನಗೆ ಪ್ರಿಯವಾದುದನ್ನು ಮಾಡಿದ್ದೇನೆ!

14080014a ಸೋಽಹಮಪ್ಯದ್ಯ ಯಾಸ್ಯಾಮಿ ಗತಿಂ ಪಿತೃನಿಷೇವಿತಾಮ್|

14080014c ನ ಶಕ್ನೋಮ್ಯಾತ್ಮನಾತ್ಮಾನಮಹಂ ಧಾರಯಿತುಂ ಶುಭೇ||

ಶುಭೇ! ಆದರೆ ನಾನು ನನ್ನ ಜೀವವನ್ನೇ ಧರಿಸಿರಲು ಶಕ್ಯನಾಗಿಲ್ಲ! ಇಂದು ನನ್ನ ತಂದೆಯು ಯಾವ ಮಾರ್ಗದಲ್ಲಿ ಹೋಗಿರುವನೋ ಅದೇ ಮಾರ್ಗದಲ್ಲಿ ಹೋಗುತ್ತೇನೆ!

14080015a ಸಾ ತ್ವಂ ಮಯಿ ಮೃತೇ ಮಾತಸ್ತಥಾ ಗಾಂಡೀವಧನ್ವನಿ|

14080015c ಭವ ಪ್ರೀತಿಮತೀ ದೇವಿ ಸತ್ಯೇನಾತ್ಮಾನಮಾಲಭೇ||

ಮಾತಾ! ಗಾಂಡೀವಧನ್ವಿಯೊಡನೆ ನಾನೂ ಮೃತನಾದ ನಂತರ ನೀನು ಸಂತೋಷದಿಂದಿರು! ದೇವಿ! ಇವನಿಲ್ಲದೇ ನಾನು ಬದುಕಿರಲಾರೆ ಎನ್ನುವುದು ಸತ್ಯ!”

14080016a ಇತ್ಯುಕ್ತ್ವಾ ಸ ತದಾ ರಾಜಾ ದುಃಖಶೋಕಸಮಾಹತಃ|

14080016c ಉಪಸ್ಪೃಶ್ಯ ಮಹಾರಾಜ ದುಃಖಾದ್ವಚನಮಬ್ರವೀತ್||

ಮಹಾರಾಜ! ಹೀಗೆ ಹೇಳಿ ದುಃಖಶೋಕಸಮಾಹತನಾದ ರಾಜ ಬಭ್ರುವಾಹನನು ಆಚಮನ ಮಾಡಿ ದುಃಖದಿಂದ ಈ ಮಾತನ್ನಾಡಿದನು:

14080017a ಶೃಣ್ವಂತು ಸರ್ವಭೂತಾನಿ ಸ್ಥಾವರಾಣಿ ಚರಾಣಿ ಚ|

14080017c ತ್ವಂ ಚ ಮಾತರ್ಯಥಾ ಸತ್ಯಂ ಬ್ರವೀಮಿ ಭುಜಗೋತ್ತಮೇ||

“ಸ್ಥಾವರ-ಚರ ಸರ್ವಭೂತಗಳೂ ಕೇಳಿರಿ! ಭುಜಗೋತ್ತಮೇ! ಮಾತಾ! ನೀನೂ ಕೂಡ ನಾನು ಹೇಳಲಿರುವ ಈ ಸತ್ಯವನ್ನು ಕೇಳು!

14080018a ಯದಿ ನೋತ್ತಿಷ್ಠತಿ ಜಯಃ ಪಿತಾ ಮೇ ಭರತರ್ಷಭಃ|

14080018c ಅಸ್ಮಿನ್ನೇವ ರಣೋದ್ದೇಶೇ ಶೋಷಯಿಷ್ಯೇ ಕಲೇವರಮ್||

ಒಂದು ವೇಳೆ ನನ್ನ ತಂದೆ ಈ ಭರತರ್ಷಭ ಜಯನು ಮೇಲೇಳದಿದ್ದರೆ ಇದೇ ರಣಪ್ರದೇಶದಲ್ಲಿ ನಾನು ನನ್ನ ಶರೀರವನ್ನು ಶೋಷಿಸಿಬಿಡುತ್ತೇನೆ!

14080019a ನ ಹಿ ಮೇ ಪಿತರಂ ಹತ್ವಾ ನಿಷ್ಕೃತಿರ್ವಿದ್ಯತೇ ಕ್ವ ಚಿತ್|

14080019c ನರಕಂ ಪ್ರತಿಪತ್ಸ್ಯಾಮಿ ಧ್ರುವಂ ಗುರುವಧಾರ್ದಿತಃ||

ತಂದೆಯನ್ನು ಕೊಂದಿರುವ ನನಗೆ ಯಾವುದೇ ರೀತಿಯ ಪ್ರಾಯಶ್ಚಿತ್ತವೂ ಇಲ್ಲ! ಗುರುವನ್ನು ವಧಿಸಿದ ಪಾಪಮಾಡಿದ ನಾನು ನಿಶ್ಚಯವಾಗಿಯೂ ನರಕವನ್ನೇ ಪಡೆಯುತ್ತೇನೆ!

14080020a ವೀರಂ ಹಿ ಕ್ಷತ್ರಿಯಂ ಹತ್ವಾ ಗೋಶತೇನ ಪ್ರಮುಚ್ಯತೇ|

14080020c ಪಿತರಂ ತು ನಿಹತ್ಯೈವಂ ದುಸ್ತರಾ ನಿಷ್ಕೃತಿರ್ಮಯಾ||

ನೂರು ಗೋವುಗಳನ್ನು ದಾನಮಾಡುವುದರಿಂದ ವೀರ ಕ್ಷತ್ರಿಯನನ್ನು ಕೊಂದ ಪಾಪದಿಂದ ಮುಕ್ತನಾಗಬಹುದು. ಆದರೆ ತಂದೆಯನ್ನೇ ಕೊಂದ ಈ ಪಾಪವನ್ನು ಮಾಡಿರುವ ನನಗೆ ಬಿಡುಗಡೆಯೇ ಇಲ್ಲವಾಗಿದೆ!

14080021a ಏಷ ಹ್ಯೇಕೋ ಮಹಾತೇಜಾಃ ಪಾಂಡುಪುತ್ರೋ ಧನಂಜಯಃ|

14080021c ಪಿತಾ ಚ ಮಮ ಧರ್ಮಾತ್ಮಾ ತಸ್ಯ ಮೇ ನಿಷ್ಕೃತಿಃ ಕುತಃ||

ಪಾಂಡುವಿನ ಮಗನಾದ ಈ ಧನಂಜಯನು ಅದ್ವಿತೀಯನು. ಮಹಾತೇಜಸ್ವಿಯು. ಧರ್ಮಾತ್ಮನಾದ ಈ ತಂದೆಯನ್ನು ಕೊಂದ ನನಗೆ ಎಲ್ಲಿಯ ಪ್ರಾಯಶ್ಚಿತ್ತವು?”

14080022a ಇತ್ಯೇವಮುಕ್ತ್ವಾ ನೃಪತೇ ಧನಂಜಯಸುತೋ ನೃಪಃ|

14080022c ಉಪಸ್ಪೃಶ್ಯಾಭವತ್ತೂಷ್ಣೀಂ ಪ್ರಾಯೋಪೇತೋ ಮಹಾಮತಿಃ||

ಹೀಗೆ ಹೇಳಿ ನೃಪತಿ ಧನಂಜಯನ ಮಗ ನೃಪ ಮಹಾಮತಿ ಬಭ್ರುವಾಹನನು ಆಚಮನ ಮಾಡಿ ಆಮರಣಾಂತ ಉಪವಾಸವ್ರತವನ್ನು ಕೈಗೊಂಡು ಮೌನವಾಗಿ ಕುಳಿತನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅರ್ಜುನಪ್ರತ್ಯುಜ್ಜೀವನೇ ಆಶೀತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅರ್ಜುನಪ್ರತ್ಯುಜ್ಜೀವನ ಎನ್ನುವ ಎಂಭತ್ತನೇ ಅಧ್ಯಾಯವು.

Comments are closed.