Ashvamedhika Parva: Chapter 74

ಅಶ್ವಮೇಧಿಕ ಪರ್ವ

೭೪

ಭಗದತ್ತನ ಮಗ ವಜ್ರದತ್ತನು ಕುದುರೆಯನ್ನು ಕಟ್ಟಿಹಾಕಿ ಅರ್ಜುನನೊಂದಿಗೆ ಯುದ್ಧಮಾಡಿದುದು (೧-೨೦).

14074001 ವೈಶಂಪಾಯನ ಉವಾಚ

14074001a ಪ್ರಾಗ್ಜ್ಯೋತಿಷಮಥಾಭ್ಯೇತ್ಯ ವ್ಯಚರತ್ಸ ಹಯೋತ್ತಮಃ|

14074001c ಭಗದತ್ತಾತ್ಮಜಸ್ತತ್ರ ನಿರ್ಯಯೌ ರಣಕರ್ಕಶಃ||

ವೈಶಂಪಾಯನನು ಹೇಳಿದನು: “ಆ ಉತ್ತಮ ಕುದುರೆಯು ಪ್ರಾಗ್ಜೋತಿಷಪುರವನ್ನು ತಲುಪಿ ಅಲ್ಲಿ ಸಂಚರಿಸತೊಡಗಿತು. ಆಗ ರಣಕರ್ಕಶ ಭಗದತ್ತನ ಮಗನು ಅದನ್ನು ಕಟ್ಟಿಹಾಕಲು ಹೊರಟನು.

14074002a ಸ ಹಯಂ ಪಾಂಡುಪುತ್ರಸ್ಯ ವಿಷಯಾಂತಮುಪಾಗತಮ್|

14074002c ಯುಯುಧೇ ಭರತಶ್ರೇಷ್ಠ ವಜ್ರದತ್ತೋ ಮಹೀಪತಿಃ||

ಭರತಶ್ರೇಷ್ಠ! ಪಾಂಡುಪುತ್ರನ ಆ ಕುದುರೆಯು ತನ್ನ ರಾಜ್ಯದ ಗಡಿಯಲ್ಲಿ ಬರಲು ಮಹೀಪತಿ ವಜ್ರದತ್ತನು ಯುದ್ಧಮಾಡಿದನು.

14074003a ಸೋಽಭಿನಿರ್ಯಾಯ ನಗರಾದ್ಭಗದತ್ತಸುತೋ ನೃಪಃ|

14074003c ಅಶ್ವಮಾಯಾಂತಮುನ್ಮಥ್ಯ ನಗರಾಭಿಮುಖೋ ಯಯೌ||

ನೃಪ ಭಗದತ್ತನ ಮಗನು ನಗರದಿಂದ ಹೊರಟು ಬರುತ್ತಿದ್ದ ಕುದುರೆಯನ್ನು ಬಂಧಿಸಿ ಅದರೊಡನೆ ನಗರಾಭಿಮುಖವಾಗಿ ಹೊರಟನು.

14074004a ತಮಾಲಕ್ಷ್ಯ ಮಹಾಬಾಹುಃ ಕುರೂಣಾಮೃಷಭಸ್ತದಾ|

14074004c ಗಾಂಡೀವಂ ವಿಕ್ಷಿಪಂಸ್ತೂರ್ಣಂ ಸಹಸಾ ಸಮುಪಾದ್ರವತ್||

ಅದನ್ನು ನೋಡಿ ಮಹಾಬಾಹು ಕುರುವೃಷಭ ಅರ್ಜುನನು ಗಾಂಡೀವವನ್ನು ಟೇಂಕರಿಸಿ ಬೇಗನೇ ಅವನನ್ನು ಆಕ್ರಮಣಿಸಿದನು.

14074005a ತತೋ ಗಾಂಡೀವನಿರ್ಮುಕ್ತೈರಿಷುಭಿರ್ಮೋಹಿತೋ ನೃಪಃ|

14074005c ಹಯಮುತ್ಸೃಜ್ಯ ತಂ ವೀರಸ್ತತಃ ಪಾರ್ಥಮುಪಾದ್ರವತ್||

ಗಾಂಡೀವದಿಂದ ಹೊರಟ ಬಾಣಗಳಿಂದ ಮೋಹಿತನಾದ ಆ ವೀರ ನೃಪನು ಕುದುರೆಯನ್ನು ಬಿಟ್ಟು ಪಾರ್ಥನನ್ನು ಆಕ್ರಮಣಿಸಿದನು.

14074006a ಪುನಃ ಪ್ರವಿಶ್ಯ ನಗರಂ ದಂಶಿತಃ ಸ ನೃಪೋತ್ತಮಃ|

14074006c ಆರುಹ್ಯ ನಾಗಪ್ರವರಂ ನಿರ್ಯಯೌ ಯುದ್ಧಕಾಂಕ್ಷಯಾ||

ಕವಚಧಾರಿಯಾಗಿದ್ದ ಆ ನೃಪೋತ್ತಮನು ಪುನಃ ತನ್ನ ನಗರವನ್ನು ಪ್ರವೇಶಿಸಿ, ಪ್ರಮುಖ ಆನೆಯನ್ನು ಏರಿ ಯುದ್ಧಾಕಾಂಕ್ಷೆಯಿಂದ ಹೊರಬಂದನು.

14074007a ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ|

14074007c ದೋಧೂಯತಾ ಚಾಮರೇಣ ಶ್ವೇತೇನ ಚ ಮಹಾರಥಃ||

ಆ ಮಹಾರಥನ ನೆತ್ತಿಯ ಮೇಲೆ ಶ್ವೇತಚ್ಛತ್ರವು ಬೆಳಗುತ್ತಿತ್ತು. ಬಿಳಿಯ ಚಾಮರಗಳನ್ನು ಬೀಸುತ್ತಿದ್ದರು.

14074008a ತತಃ ಪಾರ್ಥಂ ಸಮಾಸಾದ್ಯ ಪಾಂಡವಾನಾಂ ಮಹಾರಥಮ್|

14074008c ಆಹ್ವಯಾಮಾಸ ಕೌರವ್ಯಂ ಬಾಲ್ಯಾನ್ಮೋಹಾಚ್ಚ ಸಂಯುಗೇ||

ಪಾಂಡವರ ಮಹಾರಥ ಪಾರ್ಥನನ್ನು ಸಮೀಪಿಸಿ ಅವನು ಬಾಲ್ಯತನ- ಮೂರ್ಖತೆಗಳಿಂದ ಕೌರವ್ಯನನ್ನು ಯುದ್ಧಕ್ಕೆ ಆಹ್ವಾನಿಸಿದನು.

14074009a ಸ ವಾರಣಂ ನಗಪ್ರಖ್ಯಂ ಪ್ರಭಿನ್ನಕರಟಾಮುಖಮ್|

14074009c ಪ್ರೇಷಯಾಮಾಸ ಸಂಕ್ರುದ್ಧಸ್ತತಃ ಶ್ವೇತಹಯಂ ಪ್ರತಿ||

ಸಂಕ್ರುದ್ಧನಾದ ಅವನು ಮದೋದಕವನ್ನು ಸುರಿಸುತ್ತಿದ್ದ ಪರ್ವತೋಪಮ ಮಹಾಗಜವನ್ನು ಶ್ವೇತಹಯ ಅರ್ಜುನನ ಮೇಲೆ ಎರಗುವಂತೆ ಪ್ರಚೋದಿಸಿದನು.

14074010a ವಿಕ್ಷರಂತಂ ಯಥಾ ಮೇಘಂ ಪರವಾರಣವಾರಣಮ್|

14074010c ಶಾಸ್ತ್ರವತ್ಕಲ್ಪಿತಂ ಸಂಖ್ಯೇ ತ್ರಿಸಾಹಂ ಯುದ್ಧದುರ್ಮದಮ್||

ಮೇಘವು ಮಳೆಯನ್ನು ಸುರಿಸುವಂತೆ ಮದೋದಕವನ್ನು ಸುರಿಸುತ್ತಿದ್ದ ಆ ಯುದ್ಧದುರ್ಮದ ಅನೆಯು ಶಾಸ್ತ್ರವತ್ತಾಗಿ ಯುದ್ಧಕ್ಕಾಗಿಯೇ ಸಜ್ಜುಗೊಳಿಸಲ್ಪಟ್ಟಿತ್ತು.

14074011a ಪ್ರಚೋದ್ಯಮಾನಃ ಸ ಗಜಸ್ತೇನ ರಾಜ್ಞಾ ಮಹಾಬಲಃ|

14074011c ತದಾಂಕುಶೇನ ವಿಬಭಾವುತ್ಪತಿಷ್ಯನ್ನಿವಾಂಬರಮ್||

ರಾಜನ ಅಂಕುಶದಿಂದ ತಿವಿಯಲ್ಪಟ್ಟು ಪ್ರಚೋದನೆಗೊಂಡ ಆ ಮಹಾಬಲ ಆನೆಯು ಜಿಗಿದು ಆಕಾಶಕ್ಕೇ ಹಾರುತ್ತಿದೆಯೋ ಎನ್ನುವಂತೆ ತೋರುತ್ತಿತ್ತು.

14074012a ತಮಾಪತಂತಂ ಸಂಪ್ರೇಕ್ಷ್ಯ ಕ್ರುದ್ಧೋ ರಾಜನ್ಧನಂಜಯಃ|

14074012c ಭೂಮಿಷ್ಠೋ ವಾರಣಗತಂ ಯೋಧಯಾಮಾಸ ಭಾರತ||

ರಾಜನ್! ಭಾರತ! ತನ್ನ ಮೇಲೆ ಬೀಳಲು ಬರುತ್ತಿದ್ದ ಅದನ್ನು ನೋಡಿ ಧನಂಜಯನು ಭೂಮಿಯ ಮೇಲೆ ನಿಂತುಕೊಂಡೇ ಆನೆಯನ್ನೇರಿದ್ದ ವಜ್ರದತ್ತನೊಡನೆ ಯುದ್ಧಮಾಡಿದನು.

14074013a ವಜ್ರದತ್ತಸ್ತು ಸಂಕ್ರುದ್ಧೋ ಮುಮೋಚಾಶು ಧನಂಜಯೇ|

14074013c ತೋಮರಾನಗ್ನಿಸಂಕಾಶಾನ್ಶಲಭಾನಿವ ವೇಗಿತಾನ್||

ಸಂಕ್ರುದ್ಧನಾದ ವಜ್ರದತ್ತನಾದರೋ ಧನಂಜಯನ ಮೇಲೆ ಶಲಭಗಳಂತಿರುವ ಅಗ್ನಿಸಂಕಾಶ ತೋಮರಗಳನ್ನು ವೇಗವಾಗಿ ಪ್ರಯೋಗಿಸಿದನು.

14074014a ಅರ್ಜುನಸ್ತಾನಸಂಪ್ರಾಪ್ತಾನ್ಗಾಂಡೀವಪ್ರೇಷಿತೈಃ ಶರೈಃ|

14074014c ದ್ವಿಧಾ ತ್ರಿಧಾ ಚ ಚಿಚ್ಚೇದ ಖ ಏವ ಖಗಮೈಸ್ತದಾ||

ಆಕಾಶದಲ್ಲಿ ಹಾರಿ ಬರುತ್ತಿದ್ದ ಅವುಗಳನ್ನು ಅರ್ಜುನನು ಆಕಾಶಮಾರ್ಗವಾಗಿ ಹಾರುತ್ತಿದ್ದ ಗಾಂಡೀವದಿಂದ ಬಿಟ್ಟ ಶರಗಳಿಂದ ಎರಡು-ಮೂರು ಭಾಗಗಳನ್ನಾಗಿ ತುಂಡರಿಸಿದನು.

14074015a ಸ ತಾನ್ದೃಷ್ಟ್ವಾ ತಥಾ ಚಿನ್ನಾಂಸ್ತೋಮರಾನ್ಭಗದತ್ತಜಃ|

14074015c ಇಷೂನಸಕ್ತಾಂಸ್ತ್ವರಿತಃ ಪ್ರಾಹಿಣೋತ್ಪಾಂಡವಂ ಪ್ರತಿ||

ತೋಮರಗಳು ತುಂಡಾಗಿದ್ದುದನ್ನು ನೋಡಿ ಭಗದತ್ತನ ಮಗನು ತ್ವರೆಯಿಂದ ಪಾಂಡವನ ಮೇಲೆ ನಿರಂತರವಾಗಿ ಬಾಣಗಳನ್ನು ಸುರಿಸಿದನು.

14074016a ತತೋಽರ್ಜುನಸ್ತೂರ್ಣತರಂ ರುಕ್ಮಪುಂಖಾನಜಿಹ್ಮಗಾನ್|

14074016c ಪ್ರೇಷಯಾಮಾಸ ಸಂಕ್ರುದ್ಧೋ ಭಗದತ್ತಾತ್ಮಜಂ ಪ್ರತಿ||

ಆಗ ಸಂಕ್ರುದ್ಧನಾದ ಅರ್ಜುನನು ತ್ವರೆಮಾಡಿ ಚಿನ್ನದ ರೆಕ್ಕೆಗಳುಳ್ಳ ಜಿಹ್ಮಗಗಳನ್ನು ಭಗದತ್ತಾತ್ಮಜನ ಮೇಲೆ ಪ್ರಯೋಗಿಸಿದನು.

14074017a ಸ ತೈರ್ವಿದ್ಧೋ ಮಹಾತೇಜಾ ವಜ್ರದತ್ತೋ ಮಹಾಹವೇ|

14074017c ಭೃಶಾಹತಃ ಪಪಾತೋರ್ವ್ಯಾಂ ನ ತ್ವೇನಮಜಹಾತ್ಸ್ಮೃತಿಃ||

ಆ ಮಹಾಯುದ್ಧದಲ್ಲಿ ಮಹಾತೇಜಸ್ವೀ ಬಾಣಗಳಿಂದ ಹೊಡೆಯಲ್ಪಟ್ಟ ವಜ್ರದತ್ತನು ಅತ್ಯಂತ ಗಾಯಗೊಂಡು ಭೂಮಿಯ ಮೇಲೆ ಬಿದ್ದನು. ಆದರೆ ಅವನ ಸ್ಮೃತಿಯು ತಪ್ಪಿರಲಿಲ್ಲ.

14074018a ತತಃ ಸ ಪುನರಾರುಹ್ಯ ವಾರಣಪ್ರವರಂ ರಣೇ|

14074018c ಅವ್ಯಗ್ರಃ ಪ್ರೇಷಯಾಮಾಸ ಜಯಾರ್ಥೀ ವಿಜಯಂ ಪ್ರತಿ||

ಪುನಃ ಅವ್ಯಗ್ರನಾದ ಅವನು ರಣದಲ್ಲಿ ಆ ಮಹಾಗಜವನ್ನು ಏರಿ ವಿಜಯ ಅರ್ಜುನನ ಮೇಲೆ ಆ ಆನೆಯು ಆಕ್ರಮಣಿಸುವಂತೆ ಮಾಡಿದನು.

14074019a ತಸ್ಮೈ ಬಾಣಾಂಸ್ತತೋ ಜಿಷ್ಣುರ್ನಿರ್ಮುಕ್ತಾಶೀವಿಷೋಪಮಾನ್|

14074019c ಪ್ರೇಷಯಾಮಾಸ ಸಂಕ್ರುದ್ಧೋ ಜ್ವಲಿತಾನಿವ ಪಾವಕಾನ್||

ಆಗ ಸಂಕ್ರುದ್ಧ ಜಿಷ್ಣುವು ಪೊರೆಕಳಚಿದ ಸರ್ಪಗಳಂತೆ ಮತ್ತು ಅಗ್ನಿಗಳಂತೆ ಪ್ರಜ್ವಲಿಸುತ್ತಿದ್ದ ಬಾಣಗಳನ್ನು ಆ ಆನೆಯ ಮೇಲೆ ಪ್ರಯೋಗಿಸಿದನು.

14074020a ಸ ತೈರ್ವಿದ್ಧೋ ಮಹಾನಾಗೋ ವಿಸ್ರವನ್ ರುಧಿರಂ ಬಭೌ|

14074020c ಹಿಮವಾನಿವ ಶೈಲೇಂದ್ರೋ ಬಹುಪ್ರಸ್ರವಣಸ್ತದಾ||

ಅವುಗಳಿಂದ ಹೊಡೆಯಲ್ಪಟ್ಟ ಆ ಮಹಾಗಜವು ರಕ್ತವನ್ನು ಸುರಿಸತೊಡಗಿ, ಗೈರಿಕಾದಿ ಧಾತುಗಳಿಂದ ಮಿಶ್ರಿತವಾದ ಕೆಂಪು ನೀರನ್ನು ಸುರಿಸುತ್ತಿದ್ದ ಹಿಮಾಲಯ ಪರ್ವತದಂತೆಯೇ ಕಾಣುತ್ತಿತ್ತು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ವಜ್ರದತ್ತಯುದ್ಧೇ ಚತುಃಸಪ್ತತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅಶ್ವಾನುಸರಣೇ ವಜ್ರದತ್ತಯುದ್ಧ ಎನ್ನುವ ಎಪ್ಪತ್ನಾಲ್ಕನೇ ಅಧ್ಯಾಯವು.

Comments are closed.