Ashvamedhika Parva: Chapter 71

ಅಶ್ವಮೇಧಿಕ ಪರ್ವ

೭೧

ಯಜ್ಞಸಾಮಗ್ರಿಗಳನ್ನು ಒಂದುಗೂಡಿಸಿದುದು (೧-೧೧). ವ್ಯಾಸನೊಂದಿಗೆ ಸಮಾಲೋಚನೆಗೈದು ಯುಧಿಷ್ಠಿರನು ಅರ್ಜುನನನ್ನು ಅಶ್ವಾನುಸರಣೆಗೆ ಕಳುಹಿಸಿದುದು (೧೨-೨೬).

14071001 ವೈಶಂಪಾಯನ ಉವಾಚ

14071001a ಏವಮುಕ್ತಸ್ತು ಕೃಷ್ಣೇನ ಧರ್ಮಪುತ್ರೋ ಯುಧಿಷ್ಠಿರಃ|

14071001c ವ್ಯಾಸಮಾಮಂತ್ರ್ಯ ಮೇಧಾವೀ ತತೋ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ಕೃಷ್ಣನು ಹೀಗೆ ಹೇಳಲು ಧರ್ಮಪುತ್ರ ಯುಧಿಷ್ಠಿರನು ಮೇಧಾವೀ ವ್ಯಾಸನನ್ನು ಕರೆಯಿಸಿ ಈ ಮಾತುಗಳನ್ನಾಡಿದನು:

14071002a ಯಥಾ ಕಾಲಂ ಭವಾನ್ವೇತ್ತಿ ಹಯಮೇಧಸ್ಯ ತತ್ತ್ವತಃ|

14071002c ದೀಕ್ಷಯಸ್ವ ತದಾ ಮಾ ತ್ವಂ ತ್ವಯ್ಯಾಯತ್ತೋ ಹಿ ಮೇ ಕ್ರತುಃ||

“ಹಯಮೇಧಕ್ಕೆ ತತ್ತ್ವತಃ ಯಾವ ಕಾಲವು ಸರಿಯೆಂದು ನಿಮಗೆ ತಿಳಿದಿದೆಯೋ ಆಗ ನನಗೆ ಯಜ್ಞದೀಕ್ಷೆಯನ್ನು ನೀಡಿರಿ. ಈ ಕ್ರತುವು ನಿಮ್ಮನ್ನೇ ಅವಲಂಬಿಸಿದೆ!”

14071003 ವ್ಯಾಸ ಉವಾಚ

14071003a ಅಹಂ ಪೈಲೋಽಥ ಕೌಂತೇಯ ಯಾಜ್ಞವಲ್ಕ್ಯಸ್ತಥೈವ ಚ|

14071003c ವಿಧಾನಂ ಯದ್ಯಥಾಕಾಲಂ ತತ್ಕರ್ತಾರೋ ನ ಸಂಶಯಃ||

ವ್ಯಾಸನು ಹೇಳಿದನು: “ಕೌಂತೇಯ! ಕಾಲವು ಸನ್ನಿಹಿತವಾದೊಡನೆಯೇ ನಾನು ಪೈಲ ಮತ್ತು ಯಾಜ್ಞವಲ್ಕ್ಯನೇ ಮೊದಲಾದವರಿಂದ ಯಜ್ಞವಿಧಾನವನ್ನು ನಡೆಸಿಕೊಡುತ್ತೇನೆ. ಅದರಲ್ಲಿ ಸಂಶಯವಿಲ್ಲದಿರಲಿ!

14071004a ಚೈತ್ರ್ಯಾಂ ಹಿ ಪೌರ್ಣಮಾಸ್ಯಾಂ ಚ ತವ ದೀಕ್ಷಾ ಭವಿಷ್ಯತಿ|

14071004c ಸಂಭಾರಾಃ ಸಂಭ್ರಿಯಂತಾಂ ತೇ ಯಜ್ಞಾರ್ಥಂ ಪುರುಷರ್ಷಭ||

ಪುರುಷರ್ಷಭ! ಬರುವ ಚೈತ್ರ ಶುದ್ಧ ಪೂರ್ಣಿಮೆಯಂದು ನಿನ್ನ ದೀಕ್ಷೆಯು ನಡೆಯುತ್ತದೆ. ಯಜ್ಞಾರ್ಥಕ್ಕಾಗಿ ಸಾಮಗ್ರಿಗಳನ್ನು ಸಂಗ್ರಹಿಸು.

14071005a ಅಶ್ವವಿದ್ಯಾವಿದಶ್ಚೈವ ಸೂತಾ ವಿಪ್ರಾಶ್ಚ ತದ್ವಿದಃ|

14071005c ಮೇಧ್ಯಮಶ್ವಂ ಪರೀಕ್ಷಂತಾಂ ತವ ಯಜ್ಞಾರ್ಥಸಿದ್ಧಯೇ||

ನಿನ್ನ ಯಜ್ಞಸಿದ್ಧಿಗಾಗಿ ಅಶ್ವವಿದ್ಯೆಯನ್ನು ತಿಳಿದ ಸೂತರು ಮತ್ತು ವಿಪ್ರರು ಪವಿತ್ರ ಕುದುರೆಯನ್ನು ಗುರುತಿಸಲಿ.

14071006a ತಮುತ್ಸೃಜ್ಯ ಯಥಾಶಾಸ್ತ್ರಂ ಪೃಥಿವೀಂ ಸಾಗರಾಂಬರಾಮ್|

14071006c ಸ ಪರ್ಯೇತು ಯಶೋ ನಾಮ್ನಾ ತವ ಪಾರ್ಥಿವ ವರ್ಧಯನ್||

ಪಾರ್ಥಿವ! ಯಥಾಶಾಸ್ತ್ರವಾಗಿ ಅದನ್ನು ಬಿಟ್ಟ ನಂತರ ಅದು ಸಾಗರವನ್ನೇ ವಸ್ತ್ರವಾಗುಳ್ಳ ಪೃಥ್ವಿಯಲ್ಲಿ ನಿನ್ನ ಯಶಸ್ಸು-ಹೆಸರನ್ನು ವರ್ಧಿಸುತ್ತಾ ಸುತ್ತಾಡಲಿ!””

14071007 ವೈಶಂಪಾಯನ ಉವಾಚ

14071007a ಇತ್ಯುಕ್ತಃ ಸ ತಥೇತ್ಯುಕ್ತ್ವಾ ಪಾಂಡವಃ ಪೃಥಿವೀಪತಿಃ|

14071007c ಚಕಾರ ಸರ್ವಂ ರಾಜೇಂದ್ರ ಯಥೋಕ್ತಂ ಬ್ರಹ್ಮವಾದಿನಾ|

14071007E ಸಂಭಾರಾಶ್ಚೈವ ರಾಜೇಂದ್ರ ಸರ್ವೇ ಸಂಕಲ್ಪಿತಾಭವನ್||

ವೈಶಂಪಾಯನನು ಹೇಳಿದನು: “ರಾಜೇಂದ್ರ! ಹೀಗೆ ಹೇಳಲು ಪೃಥಿವೀಪತಿ ಪಾಂಡವನು ಬ್ರಹ್ಮವಾದಿಯು ಹೇಳಿದಂತೆ ಎಲ್ಲವನ್ನೂ ಮಾಡಿದನು. ರಾಜೇಂದ್ರ! ಸಕಲ ಸಾಮಗ್ರಿಗಳನ್ನೂ ಸಂಗ್ರಹಿಸಿದನು.

14071008a ಸ ಸಂಭಾರಾನ್ಸಮಾಹೃತ್ಯ ನೃಪೋ ಧರ್ಮಾತ್ಮಜಸ್ತದಾ|

14071008c ನ್ಯವೇದಯದಮೇಯಾತ್ಮಾ ಕೃಷ್ಣದ್ವೈಪಾಯನಾಯ ವೈ||

ಸಾಮಗ್ರಿಗಳನ್ನು ಒಟ್ಟುಗೂಡಿಸಿಕೊಂಡು ನೃಪ ಧರ್ಮಾತ್ಮಜನು ಅಮೇಯಾತ್ಮಾ ಕೃಷ್ಣದ್ವೈಪಾಯನನಿಗೆ ನಿವೇದಿಸಿದನು.

14071009a ತತೋಽಬ್ರವೀನ್ಮಹಾತೇಜಾ ವ್ಯಾಸೋ ಧರ್ಮಾತ್ಮಜಂ ನೃಪಮ್|

14071009c ಯಥಾಕಾಲಂ ಯಥಾಯೋಗಂ ಸಜ್ಜಾಃ ಸ್ಮ ತವ ದೀಕ್ಷಣೇ||

ಆಗ ಮಹಾತೇಜಸ್ವೀ ವ್ಯಾಸನು ನೃಪ ಧರ್ಮಾತ್ಮಜನಿಗೆ ಹೇಳಿದನು: “ಯಥಾಕಾಲದಲ್ಲಿ ಯಥಾಯೋಗದಲ್ಲಿ ನಿನಗೆ ದೀಕ್ಷೆಯನ್ನು ನೀಡಲು ಸಿದ್ಧರಿದ್ದೇವೆ!

14071010a ಸ್ಫ್ಯಶ್ಚ ಕೂರ್ಚಶ್ಚ ಸೌವರ್ಣೋ ಯಚ್ಚಾನ್ಯದಪಿ ಕೌರವ|

14071010c ತತ್ರ ಯೋಗ್ಯಂ ಭವೇತ್ಕಿಂ ಚಿತ್ತದ್ರೌಕ್ಮಂ ಕ್ರಿಯತಾಮಿತಿ||

ಕೌರವ! ನೀನು ಸುವರ್ಣಮಯ ಸ್ಫ್ಯಶವನ್ನೂ ಕೂರ್ಚವನ್ನೂ ಮಾಡಿಸು. ಬೇರೆ ಯಾವುದರ ಅವಶ್ಯಕತೆಯಿದೆಯೋ ಅವುಗಳೆಲ್ಲವನ್ನು ಸುವರ್ಣದಲ್ಲಿ ಮಾಡಿಸು!

14071011a ಅಶ್ವಶ್ಚೋತ್ಸೃಜ್ಯತಾಮದ್ಯ ಪೃಥ್ವ್ಯಾಮಥ ಯಥಾಕ್ರಮಮ್|

14071011c ಸುಗುಪ್ತಶ್ಚ ಚರತ್ವೇಷ ಯಥಾಶಾಸ್ತ್ರಂ ಯುಧಿಷ್ಠಿರ||

ಯುಧಿಷ್ಠಿರ! ಇಂದು ಯಥಾಕ್ರಮವಾಗಿ ಅಶ್ವವನ್ನು ಭೂಮಿಯ ಮೇಲೆ ಸಂಚರಿಸಲು ಬಿಟ್ಟುಬಿಡು. ಚೆನ್ನಾಗಿ ರಕ್ಷಿಸಲ್ಪಟ್ಟು ಅದು ಯಥಾಶಾಸ್ತ್ರವಾಗಿ ಸಂಚರಿಸಲಿ!”

14071012 ಯುಧಿಷ್ಠಿರ ಉವಾಚ

14071012a ಅಯಮಶ್ವೋ ಮಯಾ ಬ್ರಹ್ಮನ್ನುತ್ಸೃಷ್ಟಃ ಪೃಥಿವೀಮಿಮಾಮ್|

14071012c ಚರಿಷ್ಯತಿ ಯಥಾಕಾಮಂ ತತ್ರ ವೈ ಸಂವಿಧೀಯತಾಮ್||

ಯುಧಿಷ್ಠಿರನು ಹೇಳಿದನು: “ಬ್ರಹ್ಮನ್! ಈ ಅಶ್ವವನ್ನು ನಾನು ಬಿಟ್ಟಿದ್ದೇನೆ. ಇದು ಮನಬಂದಂತೆ ಇಡೀ ಭೂಮಿಯನ್ನು ಸುತ್ತಾಡುತ್ತದೆ. ಇದರ ಕುರಿತು ನೀವು ನನಗೆ ಸಲಹೆಯನ್ನು ನೀಡಬೇಕು.

14071013a ಪೃಥಿವೀಂ ಪರ್ಯಟಂತಂ ಹಿ ತುರಗಂ ಕಾಮಚಾರಿಣಮ್|

14071013c ಕಃ ಪಾಲಯೇದಿತಿ ಮುನೇ ತದ್ಭವಾನ್ವಕ್ತುಮರ್ಹತಿ||

ಮುನೇ! ಭೂಮಿಯನ್ನು ಸುತ್ತಾಡುತ್ತಾ ಬೇಕಾದಲ್ಲಿ ಹೋಗುವ ಈ ತುರಗವನ್ನು ಯಾರು ರಕ್ಷಿಸಬೇಕು ಎನ್ನುವುದನ್ನು ನೀವು ಹೇಳಬೇಕು!””

14071014 ವೈಶಂಪಾಯನ ಉವಾಚ

14071014a ಇತ್ಯುಕ್ತಃ ಸ ತು ರಾಜೇಂದ್ರ ಕೃಷ್ಣದ್ವೈಪಾಯನೋಽಬ್ರವೀತ್|

14071014c ಭೀಮಸೇನಾದವರಜಃ ಶ್ರೇಷ್ಠಃ ಸರ್ವಧನುಷ್ಮತಾಮ್||

14071015a ಜಿಷ್ಣುಃ ಸಹಿಷ್ಣುರ್ಧೃಷ್ಣುಶ್ಚ ಸ ಏನಂ ಪಾಲಯಿಷ್ಯತಿ|

ವೈಶಂಪಾಯನನು ಹೇಳಿದನು: “ರಾಜೇಂದ್ರ! ಇದಕ್ಕೆ ಕೃಷ್ಣದ್ವೈಪಾಯನನು ಹೇಳಿದನು: “ಭೀಮಸೇನನ ತಮ್ಮ, ಸರ್ವಧನುಷ್ಮತರಲ್ಲಿ ಶ್ರೇಷ್ಠ, ಜಿಷ್ಣು ಸಹನಶೀಲ ಧೈರ್ಯವಂತ ಅರ್ಜುನನು ಇದನ್ನು ರಕ್ಷಿಸುತ್ತಾನೆ.

14071015c ಶಕ್ತಃ ಸ ಹಿ ಮಹೀಂ ಜೇತುಂ ನಿವಾತಕವಚಾಂತಕಃ||

14071016a ತಸ್ಮಿನ್ ಹ್ಯಸ್ತ್ರಾಣಿ ದಿವ್ಯಾನಿ ದಿವ್ಯಂ ಸಂಹನನಂ ತಥಾ|

14071016c ದಿವ್ಯಂ ಧನುಶ್ಚೇಷುಧೀ ಚ ಸ ಏನಮನುಯಾಸ್ಯತಿ||

ನಿವಾತಕವಚರನ್ನು ಸಂಹರಿಸಿದ ಇವನು ಭೂಮಿಯನ್ನೇ ಗೆಲ್ಲಲು ಶಕ್ತನಾಗಿದ್ದಾನೆ. ಅವನಲ್ಲಿ ದಿವ್ಯಾಸ್ತ್ರಗಳಿವೆ. ದಿವ್ಯ ಕವಚವಿದೆ. ಮತ್ತು ದಿವ್ಯವಾದ ಧನುಸ್ಸೂ-ಭತ್ತಳಿಕೆಗಳೂ ಇವೆ. ಅವನೇ ಈ ಕುದುರೆಯನ್ನು ಅನುಸರಿಸಿ ಹೋಗುತ್ತಾನೆ.

14071017a ಸ ಹಿ ಧರ್ಮಾರ್ಥಕುಶಲಃ ಸರ್ವವಿದ್ಯಾವಿಶಾರದಃ|

14071017c ಯಥಾಶಾಸ್ತ್ರಂ ನೃಪಶ್ರೇಷ್ಠ ಚಾರಯಿಷ್ಯತಿ ತೇ ಹಯಮ್||

ನೃಪಶ್ರೇಷ್ಠ! ಧರ್ಮಾರ್ಥಕುಶಲನೂ ಸರ್ವವಿದ್ಯಾವಿಶಾರದನೂ ಆದ ಅವನೇ ಯಥಾಶಾಸ್ತ್ರವಾಗಿ ಈ ಕುದುರೆಯನ್ನು ತಿರುಗಾಡಿಸುತ್ತಾನೆ.

14071018a ರಾಜಪುತ್ರೋ ಮಹಾಬಾಹುಃ ಶ್ಯಾಮೋ ರಾಜೀವಲೋಚನಃ|

14071018c ಅಭಿಮನ್ಯೋಃ ಪಿತಾ ವೀರಃ ಸ ಏನಮನುಯಾಸ್ಯತಿ||

ರಾಜಪುತ್ರ ಮಹಾಬಾಹು ಶ್ಯಾಮವರ್ಣಿ ರಾಜೀವಲೋಚನ ಅಭಿಮನ್ಯುವಿನ ತಂದೆ ಈ ವೀರನೇ ಇದನ್ನು ಅನುಸರಿಸಿ ಹೋಗುತ್ತಾನೆ.

14071019a ಭೀಮಸೇನೋಽಪಿ ತೇಜಸ್ವೀ ಕೌಂತೇಯೋಽಮಿತವಿಕ್ರಮಃ|

14071019c ಸಮರ್ಥೋ ರಕ್ಷಿತುಂ ರಾಷ್ಟ್ರಂ ನಕುಲಶ್ಚ ವಿಶಾಂ ಪತೇ||

ವಿಶಾಂಪತೇ! ತೇಜಸ್ವೀ ಕೌಂತೇಯ ಅಮಿತವಿಕ್ರಮಿ ಭೀಮಸೇನ ಮತ್ತು ನಕುಲರು ರಾಷ್ಟ್ರವನ್ನು ರಕ್ಷಿಸಲು ಸಮರ್ಥರಾಗಿದ್ದಾರೆ.

14071020a ಸಹದೇವಸ್ತು ಕೌರವ್ಯ ಸಮಾಧಾಸ್ಯತಿ ಬುದ್ಧಿಮಾನ್|

14071020c ಕುಟುಂಬತಂತ್ರಂ ವಿಧಿವತ್ಸರ್ವಮೇವ ಮಹಾಯಶಾಃ||

ಕೌರವ್ಯ! ಬುದ್ಧಿಮಾನ್ ಮಹಾಯಶಸ್ವಿ ಸಹದೇವನಾದರೋ ಕುಟುಂಬರಕ್ಷಣೆಯ ಸಲುವಾಗಿ ಸಮಸ್ತ ಕಾರ್ಯಗಳನ್ನೂ ಕೈಗೊಳ್ಳುತ್ತಾನೆ.”

14071021a ತತ್ತು ಸರ್ವಂ ಯಥಾನ್ಯಾಯಮುಕ್ತಂ ಕುರುಕುಲೋದ್ವಹಃ|

14071021c ಚಕಾರ ಫಲ್ಗುನಂ ಚಾಪಿ ಸಂದಿದೇಶ ಹಯಂ ಪ್ರತಿ||

ಅವನು ಹೇಳಿದಂತೆ ಎಲ್ಲವನ್ನೂ ಯಥಾನ್ಯಾಯವಾಗಿ ಕುರುಕುಲೋದ್ವಹ ಯುಧಿಷ್ಠಿರನು ಮಾಡಿ ಕುದುರೆಯ ಕುರಿತಾಗಿ ಫಲ್ಗುನನಿಗೆ ಹೀಗೆ ಹೇಳಿದನು.

14071022 ಯುಧಿಷ್ಠಿರ ಉವಾಚ

14071022a ಏಹ್ಯರ್ಜುನ ತ್ವಯಾ ವೀರ ಹಯೋಽಯಂ ಪರಿಪಾಲ್ಯತಾಮ್|

14071022c ತ್ವಮರ್ಹೋ ರಕ್ಷಿತುಂ ಹ್ಯೇನಂ ನಾನ್ಯಃ ಕಶ್ಚನ ಮಾನವಃ||

ಯುಧಿಷ್ಠಿರನು ಹೇಳಿದನು: “ವೀರ ಅರ್ಜುನ! ಇಲ್ಲಿ ಬಾ! ನೀನು ಈ ಕುದುರೆಯನ್ನು ರಕ್ಷಿಸಬೇಕು. ಬೇರೆ ಯಾವ ಮಾನವನೂ ಇದನ್ನು ರಕ್ಷಿಸಲು ಅರ್ಹನಲ್ಲ.

14071023a ಯೇ ಚಾಪಿ ತ್ವಾಂ ಮಹಾಬಾಹೋ ಪ್ರತ್ಯುದೀಯುರ್ನರಾಧಿಪಾಃ|

14071023c ತೈರ್ವಿಗ್ರಹೋ ಯಥಾ ನ ಸ್ಯಾತ್ತಥಾ ಕಾರ್ಯಂ ತ್ವಯಾನಘ||

ಮಹಾಬಾಹೋ! ಅನಘ! ಒಂದು ವೇಳೆ ನರಾಧಿಪರು ನಮ್ಮನ್ನು ವಿರೋಧಿಸಿದರೂ ಅವರೊಡನೆ ಯುದ್ಧವಾಗದ ರೀತಿಯಲ್ಲಿ ನೀನು ಕಾರ್ಯನಿರ್ವಹಿಸಬೇಕು.

14071024a ಆಖ್ಯಾತವ್ಯಶ್ಚ ಭವತಾ ಯಜ್ಞೋಽಯಂ ಮಮ ಸರ್ವಶಃ|

14071024c ಪಾರ್ಥಿವೇಭ್ಯೋ ಮಹಾಬಾಹೋ ಸಮಯೇ ಗಮ್ಯತಾಮಿತಿ||

ಎಲ್ಲರಿಗೂ ನನ್ನ ಈ ಯಜ್ಞದ ಕುರಿತು ತಿಳಿಸಬೇಕು ಮತ್ತು ಮಹಾಬಾಹೋ! ಯಜ್ಞದ ಸಮಯಕ್ಕೆ ಬರುವಂತೆ ಎಲ್ಲ ಪಾರ್ಥಿವರನ್ನೂ ಆಹ್ವಾನಿಸಬೇಕು.”

14071025a ಏವಮುಕ್ತ್ವಾ ಸ ಧರ್ಮಾತ್ಮಾ ಭ್ರಾತರಂ ಸವ್ಯಸಾಚಿನಮ್|

14071025c ಭೀಮಂ ಚ ನಕುಲಂ ಚೈವ ಪುರಗುಪ್ತೌ ಸಮಾದಧತ್||

ತಮ್ಮ ಸವ್ಯಸಾಚಿಗೆ ಹೀಗೆ ಹೇಳಿ ಧರ್ಮಾತ್ಮ ಯುಧಿಷ್ಠಿರನು ಭೀಮ-ನಕುಲರನ್ನು ಪುರದ ರಕ್ಷಣೆಗೆ ವಿಧಿಸಿದನು.

14071026a ಕುಟುಂಬತಂತ್ರೇ ಚ ತಥಾ ಸಹದೇವಂ ಯುಧಾಂ ಪತಿಮ್|

14071026c ಅನುಮಾನ್ಯ ಮಹೀಪಾಲಂ ಧೃತರಾಷ್ಟ್ರಂ ಯುಧಿಷ್ಠಿರಃ||

ಯುಧಿಷ್ಠಿರನು ಮಹೀಪಾಲ ಧೃತರಾಷ್ಟ್ರನ ಅನುಮತಿಯನ್ನು ಪಡೆದು ಸೇನಾಪತಿ ಸಹದೇವನನ್ನು ಕುಟುಂಬರಕ್ಷಣೆಗೆ ನೇಮಿಸಿದನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಯಜ್ಞಸಾಮಗ್ರೀಸಂಪಾದನೇ ಏಕಸಪ್ತತಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಯಜ್ಞಸಾಮಗ್ರೀಸಂಪಾದನ ಎನ್ನುವ ಎಪ್ಪತ್ತೊಂದನೇ ಅಧ್ಯಾಯವು.

Comments are closed.