Ashvamedhika Parva: Chapter 64

ಅಶ್ವಮೇಧಿಕ ಪರ್ವ

೬೪

ಗಿರೀಶನಿಗೆ ಬಲಿಗಳನ್ನಿತ್ತು ಯುಧಿಷ್ಠಿರನು ನಿದಿಗಾಗಿ ಅಗೆಯತೊಡಗಿದುದು (೧-೧೧). ಅಪಾರ ಧನವನ್ನು ಪಡೆದು ಯುಧಿಷ್ಠಿರನು ಹಸ್ತಿನಾಪುರಕ್ಕೆ ಪ್ರಯಾಣಿಸಿದುದು (೧೨-೨೦).

14064001 ಬ್ರಾಹ್ಮಣಾ ಊಚುಃ

14064001a ಕ್ರಿಯತಾಮುಪಹಾರೋಽದ್ಯ ತ್ರ್ಯಂಬಕಸ್ಯ ಮಹಾತ್ಮನಃ|

14064001c ಕೃತ್ವೋಪಹಾರಂ ನೃಪತೇ ತತಃ ಸ್ವಾರ್ಥೇ ಯತಾಮಹೇ||

ಬ್ರಾಹ್ಮಣರು ಹೇಳಿದರು: “ನೃಪತೇ! ಇಂದು ಮೊದಲು ಮಹಾತ್ಮ ತ್ರ್ಯಂಬಕನಿಗೆ ಬಲಿಯನ್ನು ಸಮರ್ಪಿಸು. ಇದರ ನಂತರ ನಮ್ಮ ಕಾರ್ಯಸಿದ್ಧಿಗಾಗಿ ಪ್ರಯತ್ನಿಸೋಣ.””

14064002 ವೈಶಂಪಾಯನ ಉವಾಚ

14064002a ಶ್ರುತ್ವಾ ತು ವಚನಂ ತೇಷಾಂ ಬ್ರಾಹ್ಮಣಾನಾಂ ಯುಧಿಷ್ಠಿರಃ|

14064002c ಗಿರೀಶಸ್ಯ ಯಥಾನ್ಯಾಯಮುಪಹಾರಮುಪಾಹರತ್||

ವೈಶಂಪಾಯನನು ಹೇಳಿದನು: “ಬ್ರಾಹ್ಮಣರ ಆ ಮಾತನ್ನು ಕೇಳಿ ಯುಧಿಷ್ಠಿರನು ಯಥಾನ್ಯಾಯವಾಗಿ ಗಿರೀಶನಿಗೆ ಪೂಜೆ-ಬಲಿಗಳನ್ನು ಅರ್ಪಿಸಿದನು.

14064003a ಆಜ್ಯೇನ ತರ್ಪಯಿತ್ವಾಗ್ನಿಂ ವಿಧಿವತ್ಸಂಸ್ಕೃತೇನ ಹ|

14064003c ಮಂತ್ರಸಿದ್ಧಂ ಚರುಂ ಕೃತ್ವಾ ಪುರೋಧಾಃ ಪ್ರಯಯೌ ತದಾ||

ಪುರೋಹಿತರು ವಿಧಿಪೂರ್ವಕವಾಗಿ ಸಂಸ್ಕರಿಸಿದ ಅಗ್ನಿಯನ್ನು ತುಪ್ಪದಿಂದ ತೃಪ್ತಿಗೊಳಿಸಿ, ಮಂತ್ರಪೂರ್ವಕವಾಗಿ ಚರುವನ್ನು ಸಿದ್ಧಗೊಳಿಸಿ ತಂದರು.

14064004a ಸ ಗೃಹೀತ್ವಾ ಸುಮನಸೋ ಮಂತ್ರಪೂತಾ ಜನಾಧಿಪ|

14064004c ಮೋದಕೈಃ ಪಾಯಸೇನಾಥ ಮಾಂಸೈಶ್ಚೋಪಾಹರದ್ಬಲಿಮ್||

14064005a ಸುಮನೋಭಿಶ್ಚ ಚಿತ್ರಾಭಿರ್ಲಾಜೈರುಚ್ಚಾವಚೈರಪಿ|

14064005c ಸರ್ವಂ ಸ್ವಿಷ್ಟಕೃತಂ ಕೃತ್ವಾ ವಿಧಿವದ್ವೇದಪಾರಗಃ|

ಜನಾಧಿಪ! ವೇದಪಾರಂಗತ ದ್ವಿಜರು ಮಂತ್ರಪೂತ ಪುಷ್ಪಗಳನ್ನು ಹಿಡಿದು ಮೋದಕ-ಪಾಯಸ-ಮಾಂಸಗಳಿಂದ, ಉಚ್ಚಧ್ವನಿಯ ಮಂತ್ರಗಳಿಂದ, ಶಿವನಿಗೆ ಪ್ರಿಯವಾದ ಎಲ್ಲ ವಿಚಿತ್ರ ಪುಷ್ಪ-ಅರಳುಗಳಿಂದ ಬಲಿಯನ್ನು ಸಮರ್ಪಿಸಿದರು.

14064005e ಕಿಂಕರಾಣಾಂ ತತಃ ಪಶ್ಚಾಚ್ಚಕಾರ ಬಲಿಮುತ್ತಮಮ್||

14064006a ಯಕ್ಷೇಂದ್ರಾಯ ಕುಬೇರಾಯ ಮಣಿಭದ್ರಾಯ ಚೈವ ಹ|

14064006c ತಥಾನ್ಯೇಷಾಂ ಚ ಯಕ್ಷಾಣಾಂ ಭೂತಾಧಿಪತಯಶ್ಚ ಯೇ||

14064007a ಕೃಸರೇಣ ಸಮಾಂಸೇನ ನಿವಾಪೈಸ್ತಿಲಸಂಯುತೈಃ|

14064007c ಶುಶುಭೇ ಸ್ಥಾನಮತ್ಯರ್ಥಂ ದೇವದೇವಸ್ಯ ಪಾರ್ಥಿವ||

ಅನಂತರ ಶಿವನ ಕಿಂಕರರಿಗೆ ಉತ್ತಮ ಬಲಿಯನ್ನಿತ್ತರು. ಯಕ್ಷೇಂದ್ರ ಕುಬೇರನಿಗೆ, ಮಣಿಭದ್ರನಿಗೆ ಮತ್ತು ಹಾಗೆಯೇ ಇತರ ಯಕ್ಷ-ಭೂತಾಧಿಪತಿಗಳಿಗೆ ಎಳ್ಳನ್ನದಿಂದಲೂ, ಮಾಂಸದಿಂದಲೂ, ಎಳ್ಳಿನಿಂದ ಕೂಡಿದ ನೀರಿನಿಂದಲೂ ಬಲಿಯನ್ನು ಅರ್ಪಿಸಿದರು. ಪಾರ್ಥಿವ! ದೇವದೇವನ ಆ ಸ್ಥಾನವು ಅತೀವವಾಗಿ ಶೋಭಿಸುತ್ತಿತ್ತು.

14064008a ಕೃತ್ವಾ ತು ಪೂಜಾಂ ರುದ್ರಸ್ಯ ಗಣಾನಾಂ ಚೈವ ಸರ್ವಶಃ|

14064008c ಯಯೌ ವ್ಯಾಸಂ ಪುರಸ್ಕೃತ್ಯ ನೃಪೋ ರತ್ನನಿಧಿಂ ಪ್ರತಿ||

ರುದ್ರನ ಮತ್ತು ಅವನ ಗಣಗಳೆಲ್ಲರ ಪೂಜೆಯನ್ನು ಮಾಡಿ ನೃಪ ಯುಧಿಷ್ಠಿರನು ವ್ಯಾಸನನ್ನು ಮುಂದಿರಿಸಿಕೊಂಡು ರತ್ನನಿಧಿಯ ಕಡೆ ನಡೆದನು.

14064009a ಪೂಜಯಿತ್ವಾ ಧನಾಧ್ಯಕ್ಷಂ ಪ್ರಣಿಪತ್ಯಾಭಿವಾದ್ಯ ಚ|

14064009c ಸುಮನೋಭಿರ್ವಿಚಿತ್ರಾಭಿರಪೂಪೈಃ ಕೃಸರೇಣ ಚ||

14064010a ಶಂಖಾದೀಂಶ್ಚ ನಿಧೀನ್ಸರ್ವಾನ್ನಿಧಿಪಾಲಾಂಶ್ಚ ಸರ್ವಶಃ|

14064010c ಅರ್ಚಯಿತ್ವಾ ದ್ವಿಜಾಗ್ರ್ಯಾನ್ಸ ಸ್ವಸ್ತಿ ವಾಚ್ಯ ಚ ವೀರ್ಯವಾನ್||

14064011a ತೇಷಾಂ ಪುಣ್ಯಾಹಘೋಷೇಣ ತೇಜಸಾ ಸಮವಸ್ಥಿತಃ|

14064011c ಪ್ರೀತಿಮಾನ್ಸ ಕುರುಶ್ರೇಷ್ಠಃ ಖಾನಯಾಮಾಸ ತಂ ನಿಧಿಮ್||

ವಿಚಿತ್ರ ಪುಷ್ಪಗಳಿಂದ, ಅಪೂಪಗಳಿಂದ ಮತ್ತು ಎಳ್ಳನ್ನದಿಂದ ಧನಾಧ್ಯಕ್ಷನನ್ನೂ, ಶಂಖಗಳೇ ಮೊದಲಾದ ನಿಧಿಗಳನ್ನೂ, ಸರ್ವ ನಿಧಿಪಾಲಕರನ್ನೂ ನಮಸ್ಕರಿಸಿ ಪೂಜಿಸಿ, ದ್ವಿಜಾಗ್ರರನ್ನೂ ಅರ್ಚಿಸಿ, ಅವರ ಸ್ವಸ್ತಿವಾಚನ-ಪುಣ್ಯಾಹಘೋಷಗಳೊಂದಿಗೆ, ತೇಜೋನ್ವಿತನಾಗಿ ವೀರ್ಯವಾನ್ ಕುರುಶ್ರೇಷ್ಠ ಯುಧಿಷ್ಠಿರನು ಪ್ರೀತಮನಸ್ಕನಾಗಿ ಆ ನಿಧಿಯನ್ನು ಅಗೆಯತೊಡಗಿದನು.

14064012a ತತಃ ಪಾತ್ರ್ಯಃ ಸಕರಕಾಃ ಸಾಶ್ಮಂತಕಮನೋರಮಾಃ|

14064012c ಭೃಂಗಾರಾಣಿ ಕಟಾಹಾನಿ ಕಲಶಾನ್ವರ್ಧಮಾನಕಾನ್||

14064013a ಬಹೂನಿ ಚ ವಿಚಿತ್ರಾಣಿ ಭಾಜನಾನಿ ಸಹಸ್ರಶಃ|

14064013c ಉದ್ಧಾರಯಾಮಾಸ ತದಾ ಧರ್ಮರಾಜೋ ಯುಧಿಷ್ಠಿರಃ||

ಆಗ ಧರ್ಮರಾಜ ಯುಧಿಷ್ಠಿರನು ಸಹಸ್ರಾರು ಬಹು ಆಕಾರಗಳ ಮನೋಹರ ದೊಡ್ಡ ಮತ್ತು ಸಣ್ಣ ಪಾತ್ರೆಗಳನ್ನೂ, ತಂಬಿಗೆಗಳನ್ನೂ, ಸುವರ್ಣಮಯ ಕಡಾಯಿ-ಕಲಶ-ಶರಾವೆಗಳನ್ನೂ ಮೇಲೆತ್ತಿದನು,

14064014a ತೇಷಾಂ ಲಕ್ಷಣಮಪ್ಯಾಸೀನ್ಮಹಾನ್ಕರಪುಟಸ್ತಥಾ|

14064014c ತ್ರಿಲಕ್ಷಂ ಭಾಜನಂ ರಾಜಂಸ್ತುಲಾರ್ಧಮಭವನ್ನೃಪ||

ರಕ್ಷಣೆಗಾಗಿ ಅವುಗಳನ್ನು ಮಹಾ ಸಂದೂಕಗಳಲ್ಲಿ ಇಟ್ಟರು. ರಾಜನ್! ನೃಪ! ಅಂಥಹ ಕೆಲವು ಸಂದೂಕಗಳನ್ನು ಮರದ ದೊಣ್ಣೆಯ ಎರಡೂ ತುದಿಗಳಿಗೆ ಕಟ್ಟಿ ಎತ್ತಿ ತೆಗೆಯುತ್ತಿದ್ದರು.

14064015a ವಾಹನಂ ಪಾಂಡುಪುತ್ರಸ್ಯ ತತ್ರಾಸೀತ್ತು ವಿಶಾಂ ಪತೇ|

14064015c ಷಷ್ಟಿರುಷ್ಟ್ರಸಹಸ್ರಾಣಿ ಶತಾನಿ ದ್ವಿಗುಣಾ ಹಯಾಃ||

ವಿಶಾಂಪತೇ! ಅವುಗಳನ್ನು ಕೊಂಡೊಯ್ಯಲು ಪಾಂಡುಪುತ್ರನ ಅರವತ್ತು ಲಕ್ಷ ಒಂಟೆಗಳೂ, ಒಂದು ಕೋಟಿ ಎಪ್ಪತ್ತು ಲಕ್ಷ ಕುದುರೆಗಳೂ ಅಲ್ಲಿ ಸಿದ್ಧವಾಗಿದ್ದವು.

14064016a ವಾರಣಾಶ್ಚ ಮಹಾರಾಜ ಸಹಸ್ರಶತಸಂಮಿತಾಃ|

14064016c ಶಕಟಾನಿ ರಥಾಶ್ಚೈವ ತಾವದೇವ ಕರೇಣವಃ|

14064016e ಖರಾಣಾಂ ಪುರುಷಾಣಾಂ ಚ ಪರಿಸಂಖ್ಯಾ ನ ವಿದ್ಯತೇ||

ಮಹಾರಾಜ! ಒಂದು ಲಕ್ಷ ಆನೆಗಳೂ, ಒಂದು ಲಕ್ಷ ಬಂಡಿಗಳೂ, ಒಂದು ಲಕ್ಷ ರಥಗಳೂ, ಒಂದು ಲಕ್ಷ ಹೆಣ್ಣಾನೆಗಳೂ, ಮತ್ತು ಲೆಕ್ಕವಿಲ್ಲದಷ್ಟು ಕತ್ತೆಗಳೂ, ಮನುಷ್ಯರೂ ಅಲ್ಲಿದ್ದರು[1].

14064017a ಏತದ್ವಿತ್ತಂ ತದಭವದ್ಯದುದ್ದಧ್ರೇ ಯುಧಿಷ್ಠಿರಃ|

14064017c ಷೋಡಶಾಷ್ಟೌ ಚತುರ್ವಿಂಶತ್ಸಹಸ್ರಂ ಭಾರಲಕ್ಷಣಮ್||

ಆಗ ಯುಧಿಷ್ಠಿರನಿಗೆ ದೊರಕಿದ ಆ ವಿತ್ತದ ಪ್ರಮಾಣವು ೧೬ ಕೋಟಿ ೮ ಲಕ್ಷ ೨೪ ಸಾವಿರ ಭಾರ[2] ಅಳತೆಯಾಗಿತ್ತು.

14064018a ಏತೇಷ್ವಾಧಾಯ ತದ್ದ್ರವ್ಯಂ ಪುನರಭ್ಯರ್ಚ್ಯ ಪಾಂಡವಃ|

14064018c ಮಹಾದೇವಂ ಪ್ರತಿ ಯಯೌ ಪುರಂ ನಾಗಾಹ್ವಯಂ ಪ್ರತಿ||

ಈ ದ್ರವ್ಯಗಳನ್ನು ಪಡೆದುಕೊಂಡು ಪಾಂಡವನು ಪುನಃ ಮಹಾದೇವನನ್ನು ಅರ್ಚಿಸಿ, ಮರಳಿ ನಾಗಾಹ್ವಯ ಪುರದ ಕಡೆ ಪ್ರಯಾಣಿಸಿದನು.

14064019a ದ್ವೈಪಾಯನಾಭ್ಯನುಜ್ಞಾತಃ ಪುರಸ್ಕೃತ್ಯ ಪುರೋಹಿತಮ್|

14064019c ಗೋಯುತೇ ಗೋಯುತೇ ಚೈವ ನ್ಯವಸತ್ ಪುರುಷರ್ಷಭಃ||

ದ್ವೈಪಾಯನನ ಅನುಮತಿಯನ್ನು ಪಡೆದು ಪುರೋಹಿತನನ್ನು ಮುಂದಿರಿಸಿಕೊಂಡು ಆ ಪುರುಷರ್ಷಭನು ಪ್ರತಿ ಗಾವುದ[3] ದೂರದಲ್ಲಿಯೂ ವಿಶ್ರಾಂತಿಗಾಗಿ ಬೀಡು ಬಿಡುತ್ತಿದ್ದನು.

14064020a ಸಾ ಪುರಾಭಿಮುಖೀ ರಾಜನ್ಜಗಾಮ ಮಹತೀ ಚಮೂಃ|

14064020c ಕೃಚ್ಚ್ರಾದ್ದ್ರವಿಣಭಾರಾರ್ತಾ ಹರ್ಷಯಂತೀ ಕುರೂದ್ವಹಾನ್||

ರಾಜನ್! ದ್ರವ್ಯಧನದ ಭಾರದಿಂದ ಪೀಡಿತರಾಗಿದ್ದರೂ ಆ ಮಹಾ ಸೇನೆಯು ಕುರೂದ್ವಹರನ್ನು ಹರ್ಷಗೊಳಿಸುತ್ತಾ ಪುರಾಭಿಮುಖವಾಗಿ ಪ್ರಯಾಣಬೆಳೆಸಿತು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ದ್ರವ್ಯಾನಯನೇ ಚತುಃಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ದ್ರವ್ಯಾನಯನ ಎನ್ನುವ ಅರವತ್ನಾಲ್ಕನೇ ಅಧ್ಯಾಯವು.

[1] ಭಾರ ಲಕ್ಷಣಗಳನ್ನು ತಿಳಿದವರ ಪ್ರಕಾರ ಒಂದು ಒಂಟೆಯು ೧೬೦೦೦ ಸುವರ್ಣವನ್ನು ಹೊರುತ್ತದೆ. ಈ ಪ್ರಮಾಣವು ಕುದುರೆಗೆ ೮೦೦೦, ಆನೆ-ಗಾಡಿಗಳಿಗೆ ೨೪೦೦೦.

[2] ಚಿನ್ನದ ಭಾರದ ಅಳತೆಯು ಈ ಪ್ರಕಾರವಾಗಿದೆ: ೫ ಗುಲಗುಂಜಿಗಳ ತೂಕ=೧ ಆರ್ಯಮಾಪಕ. ೧೬ ಆರ್ಯಮಾಪಕ=೧ ಪಲ. ೧೦೦ ಪಲಗಳು=೧ ತುಲಾ. ೨೦ ತುಲಗಳು=೧ ಭಾರ.

[3] ಒಂದು ಗಾವುದ=೪ ಮೈಲುಗಳು

Comments are closed.