Ashvamedhika Parva: Chapter 63

ಅಶ್ವಮೇಧಿಕ ಪರ್ವ

೬೩

ಪಾಂಡವರು ನಿಧಿಯ ಬಳಿ ಬೀಡುಬಿಟ್ಟಿದುದು (೧-೧೭).

14063001 ವೈಶಂಪಾಯನ ಉವಾಚ

14063001a ತತಸ್ತೇ ಪ್ರಯಯುರ್ಹೃಷ್ಟಾಃ ಪ್ರಹೃಷ್ಟನರವಾಹನಾಃ|

14063001c ರಥಘೋಷೇಣ ಮಹತಾ ಪೂರಯಂತೋ ವಸುಂಧರಾಮ್||

ವೈಶಂಪಾಯನನು ಹೇಳಿದನು: “ಅನಂತರ ಸಂತೋಷದಿಂದ ಅವರು ಹರ್ಷಿತ ನರ-ವಾಹನಗಳೊಂದಿಗೆ ಮಹಾ ರಥಘೋಷಗಳಿಂದ ಭೂಮಿಯನ್ನು ಮೊಳಗಿಸುತ್ತಾ ಪ್ರಯಾಣಿಸಿದರು.

14063002a ಸಂಸ್ತೂಯಮಾನಾಃ ಸ್ತುತಿಭಿಃ ಸೂತಮಾಗಧಬಂದಿಭಿಃ|

14063002c ಸ್ವೇನ ಸೈನ್ಯೇನ ಸಂವೀತಾ ಯಥಾದಿತ್ಯಾಃ ಸ್ವರಶ್ಮಿಭಿಃ||

ಸೂತ-ಮಾಗಧ-ಬಂದಿಗಳು ಸ್ತುತಿಗಳಿಂದ ಪ್ರಶಂಸಿಸುತ್ತಿರಲು ಪಾಂಡವರು ಆದಿತ್ಯರು ತಮ್ಮ ಕಿರಣಗಳಿಂದ ಪ್ರಕಾಶಿಸುವಂತೆ ತಮ್ಮ ಸೈನ್ಯಗಳಿಂದ ಆವೃತರಾಗಿ ಪ್ರಕಾಶಿಸುತ್ತಿದ್ದರು.

14063003a ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ|

14063003c ಬಭೌ ಯುಧಿಷ್ಠಿರಸ್ತತ್ರ ಪೌರ್ಣಮಾಸ್ಯಾಮಿವೋಡುರಾಟ್||

ನೆತ್ತಿಯ ಮೇಲೆ ಬೆಳ್ಗೊಡೆಯನ್ನು ಧರಿಸಿದ್ದ ಯುಧಿಷ್ಠಿರನು ಆಗ ಹುಣ್ಣಿಮೆಯಂದು ಬೆಳದಿಂಗಳಿನಿಂದ ಆವೃತನಾದ ಚಂದ್ರನಂತೆಯೇ ಶೋಭಿಸುತ್ತಿದ್ದನು.

14063004a ಜಯಾಶಿಷಃ ಪ್ರಹೃಷ್ಟಾನಾಂ ನರಾಣಾಂ ಪಥಿ ಪಾಂಡವಃ|

14063004c ಪ್ರತ್ಯಗೃಹ್ಣಾದ್ಯಥಾನ್ಯಾಯಂ ಯಥಾವತ್ಪುರುಷರ್ಷಭಃ||

ಮಾರ್ಗದಲ್ಲಿ ಆ ಪುರುಷರ್ಷಭ ಪಾಂಡವನು ಪ್ರಹೃಷ್ಟ ಜನರು ನ್ಯಾಯೋಚಿತವಾಗಿ ಮಾಡುತ್ತಿದ್ದ ಜಯಕಾರ-ಆಶೀರ್ವಾದಗಳನ್ನು ಯಥಾವತ್ತಾಗಿ ಸ್ವೀಕರಿಸಿದನು.

14063005a ತಥೈವ ಸೈನಿಕಾ ರಾಜನ್ರಾಜಾನಮನುಯಾಂತಿ ಯೇ|

14063005c ತೇಷಾಂ ಹಲಹಲಾಶಬ್ದೋ ದಿವಂ ಸ್ತಬ್ಧ್ವಾ ವ್ಯತಿಷ್ಠತ||

ರಾಜನ್! ರಾಜನನ್ನು ಅನುಸರಿಸಿ ಹೋಗುತ್ತಿದ್ದ ಸೈನಿಕರ ಹಲಾಹಲ ಶಬ್ಧವು ಆಕಾಶವನ್ನು ಸ್ತಬ್ಧಗೊಳಿಸುತ್ತಿತ್ತು.

14063006a ಸ ಸರಾಂಸಿ ನದೀಶ್ಚೈವ ವನಾನ್ಯುಪವನಾನಿ ಚ|

14063006c ಅತ್ಯಕ್ರಾಮನ್ಮಹಾರಾಜೋ ಗಿರಿಂ ಚೈವಾನ್ವಪದ್ಯತ||

ವನ-ಉಪವನ-ನದಿ-ಸರೋವರಗಳನ್ನು ದಾಟಿ ಮಹಾರಾಜನು ಗಿರಿಯನ್ನು ತಲುಪಿದನು.

14063007a ತಸ್ಮಿನ್ದೇಶೇ ಚ ರಾಜೇಂದ್ರ ಯತ್ರ ತದ್ದ್ರವ್ಯಮುತ್ತಮಮ್|

14063007c ಚಕ್ರೇ ನಿವೇಶನಂ ರಾಜಾ ಪಾಂಡವಃ ಸಹ ಸೈನಿಕೈಃ|

14063007e ಶಿವೇ ದೇಶೇ ಸಮೇ ಚೈವ ತದಾ ಭರತಸತ್ತಮ||

14063008a ಅಗ್ರತೋ ಬ್ರಾಹ್ಮಣಾನ್ಕೃತ್ವಾ ತಪೋವಿದ್ಯಾದಮಾನ್ವಿತಾನ್|

14063008c ಪುರೋಹಿತಂ ಚ ಕೌರವ್ಯ ವೇದವೇದಾಂಗಪಾರಗಮ್||

ರಾಜೇಂದ್ರ! ಭರತಸತ್ತಮ! ಕೌರವ್ಯ! ಯಾವ ಪ್ರದೇಶದಲ್ಲಿ ಆ ಉತ್ತಮ ದ್ರವ್ಯವಿತ್ತೋ ಅಲ್ಲಿ ಶುಭಕರ ಸಮತಟ್ಟು ಪ್ರದೇಶದಲ್ಲಿ ರಾಜಾ ಪಾಂಡವನು ತಪಸ್ಸು-ವಿದ್ಯೆ-ಇಂದ್ರಿಯನಿಗ್ರಹಗಳಿಂದ ಯುಕ್ತರಾದ ಬ್ರಾಹ್ಮಣರನ್ನೂ ವೇದವೇದಾಂಗಪಾರಗ ಪುರೋಹಿತನನ್ನೂ ಮುಂದೆ ಮಾಡಿಕೊಂಡು ಸೈನಿಕರೊಂದಿಗೆ ಬಿಡಾರಹೂಡಿದನು.

14063009a ಪ್ರಾಙ್ನಿವೇಶಾತ್ತು ರಾಜಾನಂ ಬ್ರಾಹ್ಮಣಾಃ ಸಪುರೋಧಸಃ|

14063009c ಕೃತ್ವಾ ಶಾಂತಿಂ ಯಥಾನ್ಯಾಯಂ ಸರ್ವತಃ ಪರ್ಯವಾರಯನ್||

ಪುರೋಹಿತ ಸಹಿತ ಬ್ರಾಹ್ಮಣರು ಮೊದಲು ಶಾಂತಿಕರ್ಮಗಳನ್ನು ಮಾಡಿ ಯಥಾನ್ಯಾಯವಾಗಿ ರಾಜಾ ಯುಧಿಷ್ಠಿರನ ಬಿಡಾರವನ್ನು ಸುತ್ತುವರೆದು ಉಳಿದುಕೊಂಡರು.

14063010a ಕೃತ್ವಾ ಚ ಮಧ್ಯೇ ರಾಜಾನಮಮಾತ್ಯಾಂಶ್ಚ ಯಥಾವಿಧಿ|

14063010c ಷಟ್ಪಥಂ ನವಸಂಸ್ಥಾನಂ ನಿವೇಶಂ ಚಕ್ರಿರೇ ದ್ವಿಜಾಃ||

ಯಥಾವಿಧಿಯಾಗಿ ರಾಜನನ್ನೂ ಅಮಾತ್ಯರನ್ನೂ ಮಧ್ಯದಲ್ಲಿರಿಸಿ ದ್ವಿಜರು ಆರು ಮಾರ್ಗಗಳಲ್ಲಿ ಒಂಭತ್ತು ನಿವೇಶನಗಳ ಗುಂಪುಗಳನ್ನು ರಚಿಸಿದರು.

14063011a ಮತ್ತಾನಾಂ ವಾರಣೇಂದ್ರಾಣಾಂ ನಿವೇಶಂ ಚ ಯಥಾವಿಧಿ|

14063011c ಕಾರಯಿತ್ವಾ ಸ ರಾಜೇಂದ್ರೋ ಬ್ರಾಹ್ಮಣಾನಿದಮಬ್ರವೀತ್||

ಮದಿಸಿದ ಆನೆಗಳಿಗೂ ಯಥಾವಿಧಿಯಾಗಿ ನಿವೇಶನಗಳನ್ನು ನಿರ್ಮಿಸಿ ರಾಜೇಂದ್ರನು ಬ್ರಾಹ್ಮಣರಿಗೆ ಇಂತೆಂದನು:

14063012a ಅಸ್ಮಿನ್ಕಾರ್ಯೇ ದ್ವಿಜಶ್ರೇಷ್ಠಾ ನಕ್ಷತ್ರೇ ದಿವಸೇ ಶುಭೇ|

14063012c ಯಥಾ ಭವಂತೋ ಮನ್ಯಂತೇ ಕರ್ತುಮರ್ಹಥ ತತ್ತಥಾ||

“ದ್ವಿಜಶ್ರೇಷ್ಠರೇ! ಈ ಕಾರ್ಯವನ್ನು ಯಾವ ಶುಭ ನಕ್ಷತ್ರ-ದಿನದಲ್ಲಿ ಮಾಡಬೇಕೆಂದು ನೀವು ಅಭಿಪ್ರಾಯಪಡುತ್ತೀರೋ ಆಗಲೇ ಮಾಡಬೇಕು.

14063013a ನ ನಃ ಕಾಲಾತ್ಯಯೋ ವೈ ಸ್ಯಾದಿಹೈವ ಪರಿಲಂಬತಾಮ್|

14063013c ಇತಿ ನಿಶ್ಚಿತ್ಯ ವಿಪ್ರೇಂದ್ರಾಃ ಕ್ರಿಯತಾಂ ಯದನಂತರಮ್||

ವಿಪ್ರೇಂದ್ರರೇ! ಇಲ್ಲಿಯೇ ಹೆಚ್ಚು ಸಮಯ ಉಳಿಯುವಂತಾಗಿ ನಮ್ಮ ಕಾಲವು ವ್ಯರ್ಥವಾಗದ ರೀತಿಯಲ್ಲಿ ನಂತರದ ಕರ್ಮಗಳನ್ನು ಮಾಡಬೇಕು.”

14063014a ಶ್ರುತ್ವೈತದ್ವಚನಂ ರಾಜ್ಞೋ ಬ್ರಾಹ್ಮಣಾಃ ಸಪುರೋಧಸಃ|

14063014c ಇದಮೂಚುರ್ವಚೋ ಹೃಷ್ಟಾ ಧರ್ಮರಾಜಪ್ರಿಯೇಪ್ಸವಃ||

ರಾಜನ ಆ ಮಾತನ್ನು ಕೇಳಿದ ಪುರೋಹಿತನೊಡಗೂಡಿದ ಬ್ರಾಹ್ಮಣರು ಹೃಷ್ಟರಾಗಿ ಧರ್ಮರಾಜನ ಪ್ರಿಯವನ್ನೇ ಬಯಸಿ ಈ ಮಾತುಗಳನ್ನಾಡಿದರು:

14063015a ಅದ್ಯೈವ ನಕ್ಷತ್ರಮಹಶ್ಚ ಪುಣ್ಯಂ

ಯತಾಮಹೇ ಶ್ರೇಷ್ಠತಮಂ ಕ್ರಿಯಾಸು|

14063015c ಅಂಭೋಭಿರದ್ಯೇಹ ವಸಾಮ ರಾಜನ್

ಉಪೋಷ್ಯತಾಂ ಚಾಪಿ ಭವದ್ಭಿರದ್ಯ||

“ರಾಜನ್! ಇಂದೇ ಪವಿತ್ರ ನಕ್ಷತ್ರ ಮತ್ತು ಪುಣ್ಯ ದಿನವಾಗಿದೆ. ಆದುದರಿಂದ ಇಂದಿನಿಂದಲೇ ನಾವು ಶ್ರೇಷ್ಠತಮ ಕ್ರಿಯೆಗಳನ್ನು ಮಾಡಲು ಪ್ರಯತ್ನಿಸುತ್ತೇವೆ. ಇಂದು ನಾವು ಕೇವಲ ನೀರನ್ನು ಕುಡಿಯುತ್ತೇವೆ. ನೀನೂ ಕೂಡ ಇಂದು ಉಪವಾಸದಿಂದಿರಬೇಕು.”

14063016a ಶ್ರುತ್ವಾ ತು ತೇಷಾಂ ದ್ವಿಜಸತ್ತಮಾನಾಂ

ಕೃತೋಪವಾಸಾ ರಜನೀಂ ನರೇಂದ್ರಾಃ|

14063016c ಊಷುಃ ಪ್ರತೀತಾಃ ಕುಶಸಂಸ್ತರೇಷು

ಯಥಾಧ್ವರೇಷು ಜ್ವಲಿತಾ ಹವ್ಯವಾಹಾಃ||

ದ್ವಿಜಸತ್ತಮರ ಆ ಮಾತನ್ನು ಕೇಳಿ ನರೇಂದ್ರರು ಉಪವಾಸದಲ್ಲಿದ್ದುಕೊಂಡು ದರ್ಭೆಯ ಹಾಸಿನ ಮೇಲೆ ಮಲಗಿ ಆ ರಾತ್ರಿಯನ್ನು ಕಳೆದರು. ಆಗ ಅವರು ಯಜ್ಞದಲ್ಲಿ ಪ್ರಜ್ವಲಿಸುವ ಹವ್ಯವಾಹನರಂತೆಯೇ ಕಾಣುತ್ತಿದ್ದರು.

14063017a ತತೋ ನಿಶಾ ಸಾ ವ್ಯಗಮನ್ಮಹಾತ್ಮನಾಂ

ಸಂಶೃಣ್ವತಾಂ ವಿಪ್ರಸಮೀರಿತಾ ಗಿರಃ|

14063017c ತತಃ ಪ್ರಭಾತೇ ವಿಮಲೇ ದ್ವಿಜರ್ಷಭಾ

ವಚೋಽಬ್ರುವನ್ಧರ್ಮಸುತಂ ನರಾಧಿಪಮ್||

ವಿಪ್ರರ ಸುಮಧುರ ಮಾತುಗಳನ್ನು ಕೇಳುತ್ತಲೇ ಮಹಾತ್ಮರಿಗೆ ಆ ರಾತ್ರಿಯು ಕಳೆದು ಹೋಯಿತು. ನಿರ್ಮಲ ಪ್ರಭಾತವಾಗಲು ದ್ವಿಜರ್ಷಭರು ನರಾಧಿಪ ಧರ್ಮಸುತನಿಗೆ ಈ ಮಾತುಗಳನ್ನಾಡಿದರು.

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ದ್ರವ್ಯಾನಯನೋಪಕ್ರಮೇ ತ್ರಿಷಷ್ಟಿತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ದ್ರವ್ಯಾನಯನೋಪಕ್ರಮ ಎನ್ನುವ ಅರವತ್ಮೂರನೇ ಅಧ್ಯಾಯವು.

Comments are closed.