Ashvamedhika Parva: Chapter 55

ಅಶ್ವಮೇಧಿಕ ಪರ್ವ

೫೫

ಉತ್ತಂಕನು ಗುರುಶುಶ್ರೂಷೆಯಿಂದ ಪಡೆದುಕೊಂಡಿದ್ದ ತಪಃಶಕ್ತಿಯ ವರ್ಣನೆ (೧-೧೩). ಉತ್ತಂಕನ ಗುರುಪತ್ನಿ ಅಹಲ್ಯೆಯು ಗುರುದಕ್ಷಿಣೆಯಾಗಿ ಸೌದಾಸನ ಪತ್ನಿಯಲ್ಲಿರುವ ದಿವ್ಯ ಕುಂಡಲಗಳನ್ನು ಕೇಳಿದುದು (೧೪-೨೯). ಉತ್ತಂಕನು ವನದಲ್ಲಿದ್ದ ನರಭಕ್ಷಕ ಸೌದಾಸನನ್ನು ನೋಡಿದುದು (೩೦-೩೫).

 14055001 ಜನಮೇಜಯ ಉವಾಚ

14055001a ಉತ್ತಂಕಃ ಕೇನ ತಪಸಾ ಸಂಯುಕ್ತಃ ಸುಮಹಾತಪಾಃ|

14055001c ಯಃ ಶಾಪಂ ದಾತುಕಾಮೋಽಭೂದ್ವಿಷ್ಣವೇ ಪ್ರಭವಿಷ್ಣವೇ||

ಜನಮೇಜಯನು ಹೇಳಿದನು: “ಎಲ್ಲವುಗಳ ಉತ್ಪತ್ತಿಗೇ ಕಾರಣನಾದ ವಿಷ್ಣುವಿಗೇ ಶಾಪವನ್ನು ಕೊಡಲು ಬಯಸಿದ್ದ ಆ ಮಹಾತಪಸ್ವೀ ಉತ್ತಂಕನು ಯಾವ ತಪಸ್ಸಿನ ಶಕ್ತಿಯನ್ನು ಹೊಂದಿದ್ದನು?”

14055002 ವೈಶಂಪಾಯನ ಉವಾಚ

14055002a ಉತ್ತಂಕೋ ಮಹತಾ ಯುಕ್ತಸ್ತಪಸಾ ಜನಮೇಜಯ|

14055002c ಗುರುಭಕ್ತಃ ಸ ತೇಜಸ್ವೀ ನಾನ್ಯಂ ಕಂ ಚಿದಪೂಜಯತ್||

ವೈಶಂಪಾಯನನು ಹೇಳಿದನು: “ಜನಮೇಜಯ! ಉತ್ತಂಕನು ಮಹಾ ತಪಃಶಕ್ತಿಯುಳ್ಳವನಾಗಿದ್ದನು. ಗುರುಭಕ್ತನಾಗಿದ್ದ ಆ ತೇಜಸ್ವಿಯು ಅನ್ಯ ಯಾರನ್ನೂ ಎಂದೂ ಪೂಜಿಸುತ್ತಿರಲಿಲ್ಲ.

14055003a ಸರ್ವೇಷಾಮೃಷಿಪುತ್ರಾಣಾಮೇಷ ಚಾಸೀನ್ಮನೋರಥಃ|

14055003c ಔತ್ತಂಕೀಂ ಗುರುವೃತ್ತಿಂ ವೈ ಪ್ರಾಪ್ನುಯಾಮಿತಿ ಭಾರತ||

ಭಾರತ! ಎಲ್ಲ ಋಷಿಪುತ್ರರ ಮನೋರಥವೂ ಉತ್ತಂಕನಿಗಿದ್ದಂಥಹ ಗುರುಭಕ್ತಿಯನ್ನು ಪಡೆಯಬೇಕು ಎಂಬುದಾಗಿತ್ತು.

14055004a ಗೌತಮಸ್ಯ ತು ಶಿಷ್ಯಾಣಾಂ ಬಹೂನಾಂ ಜನಮೇಜಯ|

14055004c ಉತ್ತಂಕೇಽಭ್ಯಧಿಕಾ ಪ್ರೀತಿಃ ಸ್ನೇಹಶ್ಚೈವಾಭವತ್ತದಾ||

ಗೌತಮನಿಗೆ ಅನೇಕ ಶಿಷ್ಯರಿದ್ದರು. ಆದರೂ ಉತ್ತಂಕನ ಮೇಲೆ ಅವನಿಗೆ ಅಧಿಕ ಪ್ರೀತಿ-ಸ್ನೇಹಗಳಿದ್ದವು.

14055005a ಸ ತಸ್ಯ ದಮಶೌಚಾಭ್ಯಾಂ ವಿಕ್ರಾಂತೇನ ಚ ಕರ್ಮಣಾ|

14055005c ಸಮ್ಯಕ್ಚೈವೋಪಚಾರೇಣ ಗೌತಮಃ ಪ್ರೀತಿಮಾನಭೂತ್||

ಅವನು ದಮ, ಶೌಚ, ವಿಕ್ರಮ ಕರ್ಮಗಳು ಮತ್ತು ಉತ್ತಮ ಉಪಚಾರಗಳಿಂದ ಗೌತಮನಿಗೆ ಪ್ರೀತಿಪಾತ್ರನಾಗಿದ್ದನು.

14055006a ಅಥ ಶಿಷ್ಯಸಹಸ್ರಾಣಿ ಸಮನುಜ್ಞಾಯ ಗೌತಮಃ|

14055006c ಉತ್ತಂಕಂ ಪರಯಾ ಪ್ರೀತ್ಯಾ ನಾಭ್ಯನುಜ್ಞಾತುಮೈಚ್ಚತ||

ಗೌತಮನು ತನ್ನ ಸಹಸ್ರಾರು ಶಿಷ್ಯರಿಗೆ ಹೋಗಲು ಅನುಮತಿಯನ್ನಿತ್ತನು. ಆದರೆ ಪರಮಪ್ರೀತಿಯ ಕಾರಣದಿಂದ ಉತ್ತಂಕನಿಗೆ ಹೋಗಲು ಅನುಮತಿಯನ್ನು ನೀಡಲು ಬಯಸಲಿಲ್ಲ.

14055007a ತಂ ಕ್ರಮೇಣ ಜರಾ ತಾತ ಪ್ರತಿಪೇದೇ ಮಹಾಮುನಿಮ್|

14055007c ನ ಚಾನ್ವಬುಧ್ಯತ ತದಾ ಸ ಮುನಿರ್ಗುರುವತ್ಸಲಃ||

ಮಗೂ! ಕ್ರಮೇಣ ಮಹಾಮುನಿ ಉತ್ತಂಕನು ಮುಪ್ಪಾದನು. ಗುರುವತ್ಸಲನಾಗಿದ್ದ ಅವನಿಗೆ ತಾನು ಮುಪ್ಪಾಗಿದ್ದುದರ ಅರಿವೆಯೂ ಉಂಟಾಗಿರಲಿಲ್ಲ.

14055008a ತತಃ ಕದಾ ಚಿದ್ರಾಜೇಂದ್ರ ಕಾಷ್ಠಾನ್ಯಾನಯಿತುಂ ಯಯೌ|

14055008c ಉತ್ತಂಕಃ ಕಾಷ್ಠಭಾರಂ ಚ ಮಹಾಂತಂ ಸಮುಪಾನಯತ್||

ರಾಜೇಂದ್ರ! ಹೀಗಿರಲು ಒಮ್ಮೆ ಉತ್ತಂಕನು ಕಟ್ಟಿಗೆಯನ್ನು ತರಲು ಹೋದನು. ಅವನು ಕಟ್ಟಿಗೆಯ ದೊಡ್ಡ ಹೊರೆಯನ್ನು ಸಂಗ್ರಹಿಸಿದನು.

14055009a ಸ ತು ಭಾರಾಭಿಭೂತಾತ್ಮಾ ಕಾಷ್ಠಭಾರಮರಿಂದಮ|

14055009c ನಿಷ್ಪಿಪೇಷ ಕ್ಷಿತೌ ರಾಜನ್ಪರಿಶ್ರಾಂತೋ ಬುಭುಕ್ಷಿತಃ||

ರಾಜನ್! ಅರಿಂದಮ! ಕಟ್ಟಿಗೆಯ ಭಾರದಿಂದ ಅವನು ಬಳಲಿದನು. ಆಗ ಅವನು ಹೊತ್ತಿದ್ದ ಕಟ್ಟಿಗೆಯ ಹೊರೆಯನ್ನು ಕೆಳಗಿಳಿಸಲು ಪ್ರಯತ್ನಿಸಿದನು.

14055010a ತಸ್ಯ ಕಾಷ್ಠೇ ವಿಲಗ್ನಾಭೂಜ್ಜಟಾ ರೂಪ್ಯಸಮಪ್ರಭಾ|

14055010c ತತಃ ಕಾಷ್ಠೈಃ ಸಹ ತದಾ ಪಪಾತ ಧರಣೀತಲೇ||

ಬೆಳ್ಳಿಯಂತೆ ಹೊಳೆಯುತ್ತಿದ್ದ ಅವನ ಜಟೆಯು ಕಟ್ಟಿಗೆಯ ಹೊರೆಯಲ್ಲಿ ಸಿಲುಕಿಕೊಂಡಿದ್ದುದರಿಂದ ಆಗ ಅವನು ಕಟ್ಟಿಗೆಯ ಹೊರೆಯೊಂದಿಗೆ ನೆಲದ ಮೇಲೆ ಬಿದ್ದನು.

14055011a ತತಃ ಸ ಭಾರನಿಷ್ಪಿಷ್ಟಃ ಕ್ಷುಧಾವಿಷ್ಟಶ್ಚ ಭಾರ್ಗವಃ|

14055011c ದೃಷ್ಟ್ವಾ ತಾಂ ವಯಸೋಽವಸ್ಥಾಂ ರುರೋದಾರ್ತಸ್ವರಂ ತದಾ||

ಕಟ್ಟಿಗೆಯ ಹೊರೆಯ ಭಾರದಿಂದ ಜಜ್ಜಿಹೋಗಿದ್ದ ಮತ್ತು ಹಸಿವೆಯಿಂದ ಬಳಲಿದ್ದ ಆ ಭಾರ್ಗವನು ತನ್ನ ಮುಪ್ಪಿನ ಅವಸ್ಥೆಯನ್ನು ಕಂಡು ಆರ್ತಸ್ವರದಲ್ಲಿ ರೋದಿಸಿದನು.

14055012a ತತೋ ಗುರುಸುತಾ ತಸ್ಯ ಪದ್ಮಪತ್ರನಿಭೇಕ್ಷಣಾ|

14055012c ಜಗ್ರಾಹಾಶ್ರೂಣಿ ಸುಶ್ರೋಣೀ ಕರೇಣ ಪೃಥುಲೋಚನಾ|

14055012e ಪಿತುರ್ನಿಯೋಗಾದ್ಧರ್ಮಜ್ಞಾ ಶಿರಸಾವನತಾ ತದಾ||

ಆಗ ತಂದೆಯ ಆಜ್ಞೆಯಂತೆ ಪದ್ಮಪತ್ರದಂತೆ ವಿಶಾಲ ಮುಖವಿದ್ದ, ವಿಶಾಲ ಕಣ್ಣುಗಳಿದ್ದ, ಗುರು ಗೌತಮನ ಮಗಳು ಧರ್ಮಜ್ಞೆ ಸುಶ್ರೋಣಿಯು ತಲೆಯನ್ನು ತಗ್ಗಿಸಿ ತನ್ನ ಕೈಗಳಿಂದ ಉತ್ತಂಕನ ಕಣ್ಣೀರನ್ನು ಹಿಡಿದಳು.

14055013a ತಸ್ಯಾ ನಿಪೇತತುರ್ದಗ್ಧೌ ಕರೌ ತೈರಶ್ರುಬಿಂದುಭಿಃ|

14055013c ನ ಹಿ ತಾನಶ್ರುಪಾತಾನ್ವೈ ಶಕ್ತಾ ಧಾರಯಿತುಂ ಮಹೀ||

ಉತ್ತಂಕನ ಕಣ್ಣೀರಿನ ಹನಿಗಳಿಂದ ಅವಳ ಕೈಗಳು ಸುಟ್ಟು ಕೆಳಕ್ಕೆ ಬಿದ್ದವು. ಹಾಗೆ ಕೆಳಗೆ ಬಿದ್ದ ಕಣ್ಣೀರನ್ನು ಭೂಮಿಯೂ ಕೂಡ ತಡೆದುಕೊಳ್ಳಲು ಶಕ್ತಳಾಗಲಿಲ್ಲ.

14055014a ಗೌತಮಸ್ತ್ವಬ್ರವೀದ್ವಿಪ್ರಮುತ್ತಂಕಂ ಪ್ರೀತಮಾನಸಃ|

14055014c ಕಸ್ಮಾತ್ತಾತ ತವಾದ್ಯೇಹ ಶೋಕೋತ್ತರಮಿದಂ ಮನಃ|

14055014e ಸ ಸ್ವೈರಂ ಬ್ರೂಹಿ ವಿಪ್ರರ್ಷೇ ಶ್ರೋತುಮಿಚ್ಚಾಮಿ ತೇ ವಚಃ||

ಆಗ ಪ್ರೀತಮಾನಸನಾದ ಗೌತಮನು ಉತ್ತಂಕನಿಗೆ ಹೇಳಿದನು: “ಮಗೂ! ಇಂದು ನಿನ್ನ ಮನಸ್ಸೇಕೆ ಶೋಕದಿಂದ ವ್ಯಾಕುಲಗೊಂಡಿದೆ? ವಿಪ್ರರ್ಷೇ! ಬೇಗ ಹೇಳು! ನಿನ್ನ ಮಾತನ್ನು ಕೇಳಲು ಬಯಸುತ್ತೇನೆ!”

14055015 ಉತ್ತಂಕ ಉವಾಚ

14055015a ಭವದ್ಗತೇನ ಮನಸಾ ಭವತ್ಪ್ರಿಯಚಿಕೀರ್ಷಯಾ|

14055015c ಭವದ್ಭಕ್ತಿಗತೇನೇಹ ಭವದ್ಭಾವಾನುಗೇನ ಚ||

ಉತ್ತಂಕನು ಹೇಳಿದನು: “ನಿಮಗೆ ಪ್ರಿಯವನ್ನುಂಟುಮಾಡಲು ಬಯಸಿ ನಿಮ್ಮಲ್ಲಿಯೇ ಮನಸ್ಸನ್ನಿಟ್ಟು ನಿಮ್ಮಮೇಲಿನ ಭಕ್ತಿಯಿಂದಾಗಿ ನಿಮ್ಮನ್ನೇ ಅನುಸರಿಸುತ್ತಾ ಬಂದಿದ್ದೇನೆ.

14055016a ಜರೇಯಂ ನಾವಬುದ್ಧಾ ಮೇ ನಾಭಿಜ್ಞಾತಂ ಸುಖಂ ಚ ಮೇ|

14055016c ಶತವರ್ಷೋಷಿತಂ ಹಿ ತ್ವಂ ನ ಮಾಮಭ್ಯನುಜಾನಥಾಃ||

ನನಗೆ ಮುಪ್ಪಾಗಿದುದರ ಅರಿವೆಯೂ ನನಗಾಗಲಿಲ್ಲ. ನಾನು ಸುಖವನ್ನೇ ಅನುಭವಿಸಿಲ್ಲ. ನಿಮ್ಮೊಡನೆ ನೂರು ವರ್ಷಗಳನ್ನು ಕಳೆದರೂ ಹೋಗಲು ನನಗೆ ನಿಮ್ಮಿಂದ ಅನುಮತಿಯು ದೊರಕಲಿಲ್ಲ.

14055017a ಭವತಾ ಹ್ಯಭ್ಯನುಜ್ಞಾತಾಃ ಶಿಷ್ಯಾಃ ಪ್ರತ್ಯವರಾ ಮಯಾ|

14055017c ಉಪಪನ್ನಾ ದ್ವಿಜಶ್ರೇಷ್ಠ ಶತಶೋಽಥ ಸಹಸ್ರಶಃ||

ದ್ವಿಜಶ್ರೇಷ್ಠ! ನನ್ನ ನಂತರ ಬಂದಿದ್ದ ನಿಮ್ಮ ನೂರಾರು ಸಹಸ್ರಾರು ಶಿಷ್ಯರಿಗೆ ಹೋಗಲು ನೀವು ಅನುಮತಿಯನ್ನು ನೀಡಿದ್ದೀರಿ.”

14055018 ಗೌತಮ ಉವಾಚ

14055018a ತ್ವತ್ಪ್ರೀತಿಯುಕ್ತೇನ ಮಯಾ ಗುರುಶುಶ್ರೂಷಯಾ ತವ|

14055018c ವ್ಯತಿಕ್ರಾಮನ್ಮಹಾನ್ಕಾಲೋ ನಾವಬುದ್ಧೋ ದ್ವಿಜರ್ಷಭ||

ಗೌತಮನು ಹೇಳಿದನು: “ದ್ವಿಜರ್ಷಭ! ಪ್ರೀತಿಯುಕ್ತವಾದ ನಿನ್ನ ಗುರುಶುಶ್ರೂಷೆಯಿಂದ ನನಗೆ ದೀರ್ಘ ಕಾಲವು ಕಳೆದದ್ದೇ ತಿಳಿಯಲಿಲ್ಲ!

14055019a ಕಿಂ ತ್ವದ್ಯ ಯದಿ ತೇ ಶ್ರದ್ಧಾ ಗಮನಂ ಪ್ರತಿ ಭಾರ್ಗವ|

14055019c ಅನುಜ್ಞಾಂ ಗೃಹ್ಯ ಮತ್ತಸ್ತ್ವಂ ಗೃಹಾನ್ಗಚ್ಚಸ್ವ ಮಾ ಚಿರಮ್||

ಭಾರ್ಗವ! ಒಂದುವೇಳೆ ನಿನಗೆ ಹೋಗುವ ಶ್ರದ್ಧೆಯಿದ್ದರೆ ನನ್ನ ಅನುಜ್ಞೆಯನ್ನು ಪಡೆದು ತಡಮಾಡದೇ ನಿನ್ನ ಮನೆಗೆ ಹೋಗು!”

14055020 ಉತ್ತಂಕ ಉವಾಚ

14055020a ಗುರ್ವರ್ಥಂ ಕಂ ಪ್ರಯಚ್ಚಾಮಿ ಬ್ರೂಹಿ ತ್ವಂ ದ್ವಿಜಸತ್ತಮ|

14055020c ತಮುಪಾಕೃತ್ಯ ಗಚ್ಚೇಯಮನುಜ್ಞಾತಸ್ತ್ವಯಾ ವಿಭೋ||

ಉತ್ತಂಕನು ಹೇಳಿದನು: “ದ್ವಿಜಸತ್ತಮ! ವಿಭೋ! ಗುರುವಿಗಾಗಿ ನಾನು ಏನು ಮಾಡಬೇಕೆಂದು ಹೇಳಿ. ಅದನ್ನು ಮಾಡಿ ನಿಮ್ಮ ಅನುಜ್ಞೆಯಂತೆ ಹೋಗುತ್ತೇನೆ.”

14055021 ಗೌತಮ ಉವಾಚ

14055021a ದಕ್ಷಿಣಾ ಪರಿತೋಷೋ ವೈ ಗುರೂಣಾಂ ಸದ್ಭಿರುಚ್ಯತೇ|

14055021c ತವ ಹ್ಯಾಚರತೋ ಬ್ರಹ್ಮಂಸ್ತುಷ್ಟೋಽಹಂ ವೈ ನ ಸಂಶಯಃ||

ಗೌತಮನು ಹೇಳಿದನು: “ಬ್ರಾಹ್ಮಣ! ಗುರುಸೇವೆಯೇ ಗುರುವಿಗೆ ನೀಡುವ ದಕ್ಷಿಣೆಯೆಂದು ಸತ್ಪುರುಷರು ಹೇಳುತ್ತಾರೆ. ನಿನ್ನ ಆಚರಣೆಯಿಂದ ನಾನು ಸಂತುಷ್ಟನಾಗಿದ್ದೇನೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

14055022a ಇತ್ಥಂ ಚ ಪರಿತುಷ್ಟಂ ಮಾಂ ವಿಜಾನೀಹಿ ಭೃಗೂದ್ವಹ|

14055022c ಯುವಾ ಷೋಡಶವರ್ಷೋ ಹಿ ಯದದ್ಯ ಭವಿತಾ ಭವಾನ್||

ಭೃಗೂದ್ವಹ! ಈಗಾಗಲೇ ನೀನು ನನ್ನನ್ನು ಸಂತುಷ್ಟಿಗೊಳಿಸಿದ್ದೀಯೆ ಎಂದು ತಿಳಿದುಕೋ! ನೀನು ಇಂದು ಹದಿನಾರು ವರ್ಷದ ಯುವಕನಾಗುವೆ!

14055023a ದದಾಮಿ ಪತ್ನೀಂ ಕನ್ಯಾಂ ಚ ಸ್ವಾಂ ತೇ ದುಹಿತರಂ ದ್ವಿಜ|

14055023c ಏತಾಮೃತೇ ಹಿ ನಾನ್ಯಾ ವೈ ತ್ವತ್ತೇಜೋಽರ್ಹತಿ ಸೇವಿತುಮ್||

ದ್ವಿಜ! ನನ್ನ ಪುತ್ರಿ ಕನ್ಯೆಯನ್ನು ನಿನಗೆ ಪತ್ನಿಯನ್ನಾಗಿ ಕೊಡುತ್ತೇನೆ. ಅವಳ ಹೊರತು ಬೇರೆ ಯಾರೂ ತೇಜೋನ್ವಿತನಾದ ನಿನ್ನ ಸೇವೆಗೈಯಲಾರರು.”

14055024a ತತಸ್ತಾಂ ಪ್ರತಿಜಗ್ರಾಹ ಯುವಾ ಭೂತ್ವಾ ಯಶಸ್ವಿನೀಮ್|

14055024c ಗುರುಣಾ ಚಾಭ್ಯನುಜ್ಞಾತೋ ಗುರುಪತ್ನೀಮಥಾಬ್ರವೀತ್||

ಅನಂತರ ಅವನು ಯುವಕನಾಗಿ ಯಶಸ್ವಿನೀ ಗುರುಪುತ್ರಿಯನ್ನು ಸ್ವೀಕರಿಸಿದನು. ಗುರುವಿನಿಂದ ಅಪ್ಪಣೆಪಡೆದು ಅವನು ಗುರುಪತ್ನಿಯಲ್ಲಿ ಹೀಗೆ ಕೇಳಿದನು:

14055025a ಕಿಂ ಭವತ್ಯೈ ಪ್ರಯಚ್ಚಾಮಿ ಗುರ್ವರ್ಥಂ ವಿನಿಯುಂಕ್ಷ್ವ ಮಾಮ್|

14055025c ಪ್ರಿಯಂ ಹಿ ತವ ಕಾಂಕ್ಷಾಮಿ ಪ್ರಾಣೈರಪಿ ಧನೈರಪಿ||

“ಗುರುದಕ್ಷಿಣೆಯಾಗಿ ನಿಮಗೆ ಏನನ್ನು ತರಲಿ? ನನಗೆ ಅಪ್ಪಣೆ ಕೊಡಿ. ಪ್ರಾಣದಿಂದಲಾದರೂ ಧನಗಳಿಂದಲಾದರೂ ನಿಮಗೆ ಪ್ರಿಯವಾದುದನ್ನು ಮಾಡಲು ಬಯಸುತ್ತೇನೆ.

14055026a ಯದ್ದುರ್ಲಭಂ ಹಿ ಲೋಕೇಽಸ್ಮಿನ್ರತ್ನಮತ್ಯದ್ಭುತಂ ಭವೇತ್|

14055026c ತದಾನಯೇಯಂ ತಪಸಾ ನ ಹಿ ಮೇಽತ್ರಾಸ್ತಿ ಸಂಶಯಃ||

ಈ ಲೋಕದಲ್ಲಿ ದುರ್ಲಭವೂ ಅದ್ಭುತವೂ ಆದ ರತ್ನವಿದ್ದರೆ ಅದನ್ನೂ ನನ್ನ ತಪಸ್ಸಿನ ಪ್ರಭಾವದಿಂದ ತಂದುಕೊಡುತ್ತೇನೆ. ಅದರಲ್ಲಿ ಸಂಶಯವಿಲ್ಲದಿರಲಿ!”

14055027 ಅಹಲ್ಯೋವಾಚ

14055027a ಪರಿತುಷ್ಟಾಸ್ಮಿ ತೇ ಪುತ್ರ ನಿತ್ಯಂ ಭಗವತಾ ಸಹ|

14055027c ಪರ್ಯಾಪ್ತಯೇ ತದ್ಭದ್ರಂ ತೇ ಗಚ್ಚ ತಾತ ಯಥೇಚ್ಚಕಮ್||

ಅಹಲ್ಯೆಯು ಹೇಳಿದಳು: “ಪುತ್ರ! ನಿತ್ಯವೂ ನಿನ್ನ ಸೇವೆಯಿಂದ ನಾನು ಪರಿತುಷ್ಟಳಾಗಿದ್ದೇನೆ. ಇದೇ ಸಾಕು. ಮಗೂ! ನಿನಗೆ ಮಂಗಳವಾಗಲಿ! ಇಷ್ಟವಿದ್ದಲ್ಲಿಗೆ ಹೋಗು!””

14055028 ವೈಶಂಪಾಯನ ಉವಾಚ

14055028a ಉತ್ತಂಕಸ್ತು ಮಹಾರಾಜ ಪುನರೇವಾಬ್ರವೀದ್ವಚಃ|

14055028c ಆಜ್ಞಾಪಯಸ್ವ ಮಾಂ ಮಾತಃ ಕರ್ತವ್ಯಂ ಹಿ ಪ್ರಿಯಂ ತವ||

ವೈಶಂಪಾಯನನು ಹೇಳಿದನು: “ಮಹಾರಾಜ! ಉತ್ತಂಕನಾದರೋ “ಮಾತೇ! ನಿಮಗೆ ಪ್ರಿಯವಾದ ಏನನ್ನು ಮಾಡಲಿ ಆಜ್ಞಾಪಿಸಿ!” ಎಂದು ಪುನಃ ಕೇಳಿಕೊಂಡನು.

14055029 ಅಹಲ್ಯೋವಾಚ

14055029a ಸೌದಾಸಪತ್ನ್ಯಾ ವಿದಿತೇ ದಿವ್ಯೇ ವೈ ಮಣಿಕುಂಡಲೇ|

14055029c ತೇ ಸಮಾನಯ ಭದ್ರಂ ತೇ ಗುರ್ವರ್ಥಃ ಸುಕೃತೋ ಭವೇತ್||

ಅಹಲ್ಯೆಯು ಹೇಳಿದಳು: “ಸೌದಾಸನ ಪತ್ನಿಯು ದಿವ್ಯವಾದ ಮಣಿಕುಂಡಲಗಳನ್ನು ಪಡೆದಿದ್ದಾಳೆ ಎಂದು ತಿಳಿದಿದೆ. ಅವುಗಳನ್ನು ತಾ! ಗುರುದಕ್ಷಿಣೆಯಾಗಿ ಇದೇ ಸಾಕಾಗುತ್ತದೆ. ನಿನಗೆ ಮಂಗಳವಾಗಲಿ!”

14055030a ಸ ತಥೇತಿ ಪ್ರತಿಶ್ರುತ್ಯ ಜಗಾಮ ಜನಮೇಜಯ|

14055030c ಗುರುಪತ್ನೀಪ್ರಿಯಾರ್ಥಂ ವೈ ತೇ ಸಮಾನಯಿತುಂ ತದಾ||

ಜನಮೇಜಯ! ಹಾಗೆಯೇ ಆಗಲೆಂದು ಹೇಳಿ ಅವನು ಗುರುಪತ್ನಿಗಾಗಿ ಅವುಗಳನ್ನು ತರಲು ಹೋದನು.

14055031a ಸ ಜಗಾಮ ತತಃ ಶೀಘ್ರಮುತ್ತಂಕೋ ಬ್ರಾಹ್ಮಣರ್ಷಭಃ|

14055031c ಸೌದಾಸಂ ಪುರುಷಾದಂ ವೈ ಭಿಕ್ಷಿತುಂ ಮಣಿಕುಂಡಲೇ||

ಅನಂತರ ಆ ಬ್ರಾಹ್ಮಣರ್ಷಭ ಉತ್ತಂಕನು ನರಭಕ್ಷಕನಾಗಿದ್ದ ಸೌದಾಸನಲ್ಲಿ ಮಣಿಕುಂಡಲಗಳ ಭಿಕ್ಷೆಯನ್ನು ಕೇಳಲು ಶೀಘ್ರವಾಗಿ ಹೋದನು.

14055032a ಗೌತಮಸ್ತ್ವಬ್ರವೀತ್ಪತ್ನೀಮುತ್ತಂಕೋ ನಾದ್ಯ ದೃಶ್ಯತೇ|

14055032c ಇತಿ ಪೃಷ್ಟಾ ತಮಾಚಷ್ಟ ಕುಂಡಲಾರ್ಥಂ ಗತಂ ತು ವೈ||

ಗೌತಮನು “ಇಂದು ಉತ್ತಂಕನು ಕಾಣುತ್ತಿಲ್ಲವಲ್ಲ!” ಎಂದು ಪತ್ನಿಯಲ್ಲಿ ಕೇಳಿದನು. ಅದಕ್ಕೆ ಅವಳು “ಕುಂಡಲಗಳನ್ನು ತರಲು ಹೋಗಿದ್ದಾನೆ” ಎಂದು ಹೇಳಿದಳು.

14055033a ತತಃ ಪ್ರೋವಾಚ ಪತ್ನೀಂ ಸ ನ ತೇ ಸಮ್ಯಗಿದಂ ಕೃತಮ್|

14055033c ಶಪ್ತಃ ಸ ಪಾರ್ಥಿವೋ ನೂನಂ ಬ್ರಾಹ್ಮಣಂ ತಂ ವಧಿಷ್ಯತಿ||

ಆಗ ಅವನು ಪತ್ನಿಗೆ ಹೇಳಿದನು: “ನೀನು ಮಾಡಿದುದು ಒಳ್ಳೆಯದಾಗಲಿಲ್ಲ. ಆ ರಾಜನು ಶಾಪಗ್ರಸ್ತನಾಗಿದ್ದಾನೆ. ಅವನು ಬ್ರಾಹ್ಮಣನನ್ನು ವಧಿಸುತ್ತಾನೆ!”

14055034 ಅಹಲ್ಯೋವಾಚ

14055034a ಅಜಾನಂತ್ಯಾ ನಿಯುಕ್ತಃ ಸ ಭಗವನ್ಬ್ರಾಹ್ಮಣೋಽದ್ಯ ಮೇ|

14055034c ಭವತ್ಪ್ರಸಾದಾನ್ನ ಭಯಂ ಕಿಂ ಚಿತ್ತಸ್ಯ ಭವಿಷ್ಯತಿ||

ಅಹಲ್ಯೆಯು ಹೇಳಿದಳು: “ಭಗವನ್! ತಿಳಿಯದೇ ಇಂದು ನಾನು ಆ ಬ್ರಾಹ್ಮಣನನ್ನು ಕಳುಹಿಸಿಬಿಟ್ಟೆ! ಆದರೆ ನಿಮ್ಮ ಅನುಗ್ರಹವಿರುವಾಗ ಅವನಿಗೆ ಏನೂ ಆಗುವುದಿಲ್ಲ.”

14055035a ಇತ್ಯುಕ್ತಃ ಪ್ರಾಹ ತಾಂ ಪತ್ನೀಮೇವಮಸ್ತ್ವಿತಿ ಗೌತಮಃ|

14055035c ಉತ್ತಂಕೋಽಪಿ ವನೇ ಶೂನ್ಯೇ ರಾಜಾನಂ ತಂ ದದರ್ಶ ಹ||

ಇದಕ್ಕೆ ಗೌತಮನು ತನ್ನ ಪತ್ನಿಗೆ “ಅದು ಹಾಗೆಯೇ ಆಗಲಿ!” ಎಂದು ಹೇಳಿದನು. ಉತ್ತಂಕನಾದರೋ ಶೂನ್ಯ ವನದಲ್ಲಿ ರಾಜ ಸೌದಾಸನನ್ನು ಕಂಡನು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಉತ್ತಂಕೋಪಾಖ್ಯಾನೇ ಕುಂಡಲಾಹರಣೇ ಪಂಚಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಉತ್ತಂಕೋಪಾಖ್ಯಾನೇ ಕುಂಡಲಾಹರಣ ಎನ್ನುವ ಐವತ್ತೈದನೇ ಅಧ್ಯಾಯವು.

Comments are closed.