Ashvamedhika Parva: Chapter 52

ಅಶ್ವಮೇಧಿಕ ಪರ್ವ

೫೨

ಮಾರ್ಗದಲ್ಲಿ ದೊರಕಿದ ಮುನಿ ಉತ್ತಂಕನು ಕುರು-ಪಾಂಡವರ ನಡುವೆ ಸಂಧಿಯು ಯಶಸ್ವಿಯಾಯಿತೇ ಎಂದು ಕೃಷ್ಣನಲ್ಲಿ ಕೇಳುವುದು (೧-೧೪). ಕೃಷ್ಣನು ಯುದ್ಧದಲ್ಲಿ ಸರ್ವ ಧಾರ್ತರಾಷ್ಟ್ರರೂ ನಾಶವಾದುದನ್ನು ಹೇಳಲು ಉತ್ತಂಕನು ಅವನಿಗೆ ಶಾಪವನ್ನು ಕೊಡಲು ಮುಂದಾದುದು (೧೫-೨೬).

14052001 ವೈಶಂಪಾಯನ ಉವಾಚ

14052001a ತಥಾ ಪ್ರಯಾಂತಂ ವಾರ್ಷ್ಣೇಯಂ ದ್ವಾರಕಾಂ ಭರತರ್ಷಭಾಃ|

14052001c ಪರಿಷ್ವಜ್ಯ ನ್ಯವರ್ತಂತ ಸಾನುಯಾತ್ರಾಃ ಪರಂತಪಾಃ||

ವೈಶಂಪಾಯನನು ಹೇಳಿದನು: “ಹೀಗೆ ವಾರ್ಷ್ಣೇಯನು ದ್ವಾರಕೆಗೆ ಹೊರಡುವಾಗ ಪರಂತಪ ಭರತರ್ಷಭರು ಅವನನ್ನು ಗಾಢವಾಗಿ ಆಲಂಗಿಸಿ ಬೀಳ್ಕೊಟ್ಟು ಸೇವಕರೊಡನೆ ಹಿಂದಿರುಗಿದರು.

14052002a ಪುನಃ ಪುನಶ್ಚ ವಾರ್ಷ್ಣೇಯಂ ಪರ್ಯಷ್ವಜತ ಫಲ್ಗುನಃ|

14052002c ಆ ಚಕ್ಷುರ್ವಿಷಯಾಚ್ಚೈನಂ ದದರ್ಶ ಚ ಪುನಃ ಪುನಃ||

ಫಲ್ಗುನನು ವಾರ್ಷ್ಣೇಯನನ್ನು ಪುನಃ ಪುನಃ ತಬ್ಬಿಕೊಂಡನು. ಅವನು ಕಾಣುವವರೆಗೆ ಪುನಃ ಪುನಃ ಅವನ ಕಡೆ ನೋಡುತ್ತಲೇ ಇದ್ದನು.

14052003a ಕೃಚ್ಚ್ರೇಣೈವ ಚ ತಾಂ ಪಾರ್ಥೋ ಗೋವಿಂದೇ ವಿನಿವೇಶಿತಾಮ್|

14052003c ಸಂಜಹಾರ ತದಾ ದೃಷ್ಟಿಂ ಕೃಷ್ಣಶ್ಚಾಪ್ಯಪರಾಜಿತಃ||

ಗೋವಿಂದನನ್ನೇ ನೋಡುತ್ತಿದ್ದ ಪಾರ್ಥನು ಅವನು ಕಾಣದಂತಾದಾಗ ಕಷ್ಟದಿಂದಲೇ ತನ್ನ ದೃಷ್ಟಿಯನ್ನು ಹಿಂದೆ ತೆಗೆದುಕೊಂಡನು. ಅಪರಾಜಿತ ಕೃಷ್ಣನೂ ಕೂಡ ಹಾಗೆಯೇ ಮಾಡಿದನು.

14052004a ತಸ್ಯ ಪ್ರಯಾಣೇ ಯಾನ್ಯಾಸನ್ನಿಮಿತ್ತಾನಿ ಮಹಾತ್ಮನಃ|

14052004c ಬಹೂನ್ಯದ್ಭುತರೂಪಾಣಿ ತಾನಿ ಮೇ ಗದತಃ ಶೃಣು||

ಆ ಮಹಾತ್ಮನು ಪ್ರಯಾಣಿಸುವಾಗ ಅನೇಕ ಅದ್ಭುತ ನಿಮಿತ್ತಗಳು ಕಂಡುಬಂದವು. ಅವುಗಳ ಕುರಿತು ಹೇಳುತ್ತೇನೆ. ಕೇಳು.

14052005a ವಾಯುರ್ವೇಗೇನ ಮಹತಾ ರಥಸ್ಯ ಪುರತೋ ವವೌ|

14052005c ಕುರ್ವನ್ನಿಃಶರ್ಕರಂ ಮಾರ್ಗಂ ವಿರಜಸ್ಕಮಕಂಟಕಮ್||

ಭಿರುಗಾಳಿಯು ವೇಗದಿಂದ ರಥದ ಮುಂದೆ ಬೀಸಿ ಮಾರ್ಗದಲ್ಲಿ ಕಲ್ಲು, ಧೂಳು ಮತ್ತು ಮುಳ್ಳುಗಳು ಇರದಂತೆ ಮಾಡಿತು.

14052006a ವವರ್ಷ ವಾಸವಶ್ಚಾಪಿ ತೋಯಂ ಶುಚಿ ಸುಗಂಧಿ ಚ|

14052006c ದಿವ್ಯಾನಿ ಚೈವ ಪುಷ್ಪಾಣಿ ಪುರತಃ ಶಾರ್ಙ್ರಧನ್ವನಃ||

ಇಂದ್ರನೂ ಕೂಡ ಶಾಂಙ್ರಧನ್ವಿಯ ಎದಿರು ಶುಭ್ರವೂ ಸುಗಂಧಯುಕ್ತವೂ ಆದ ಮಳೆಯನ್ನೂ ದಿವ್ಯ ಪುಷ್ಪಗಳನ್ನೂ ಸುರಿಸಿದನು.

14052007a ಸ ಪ್ರಯಾತೋ ಮಹಾಬಾಹುಃ ಸಮೇಷು ಮರುಧನ್ವಸು|

14052007c ದದರ್ಶಾಥ ಮುನಿಶ್ರೇಷ್ಠಮುತ್ತಂಕಮಮಿತೌಜಸಮ್||

ಆ ಮಹಾಬಾಹುವು ಸಮಪ್ರದೇಶಗಳಲ್ಲಿ ಮತ್ತು ಮರುಭೂಮಿಗಳಲ್ಲಿ ಪ್ರಯಾಣಿಸುತ್ತಿದ್ದಾಗ ಅಲ್ಲಿ ಅಮಿತೌಜಸ ಮುನಿಶ್ರೇಷ್ಠ ಉತ್ತಂಕನನ್ನು ಕಂಡನು.

14052008a ಸ ತಂ ಸಂಪೂಜ್ಯ ತೇಜಸ್ವೀ ಮುನಿಂ ಪೃಥುಲಲೋಚನಃ|

14052008c ಪೂಜಿತಸ್ತೇನ ಚ ತದಾ ಪರ್ಯಪೃಚ್ಚದನಾಮಯಮ್||

ವಿಶಾಲಾಕ್ಷನು ಆ ತೇಜಸ್ವೀ ಮುನಿಯನ್ನು ಪೂಜಿಸಿದನು. ಅವನಿಂದ ಪ್ರತಿಪೂಜೆಯನ್ನು ಪಡೆದು ಕೃಷ್ಣನು ಅವನ ಯೋಗಕ್ಷೇಮವನ್ನು ವಿಚಾರಿಸಿದನು.

14052009a ಸ ಪೃಷ್ಟಃ ಕುಶಲಂ ತೇನ ಸಂಪೂಜ್ಯ ಮಧುಸೂದನಮ್|

14052009c ಉತ್ತಂಕೋ ಬ್ರಾಹ್ಮಣಶ್ರೇಷ್ಠಸ್ತತಃ ಪಪ್ರಚ್ಚ ಮಾಧವಮ್||

ಕುಶಲ ಪ್ರಶ್ನೆಯನ್ನು ಕೇಳಿದ ಮಧುಸೂದನನನ್ನು ಪೂಜಿಸಿ ಬ್ರಾಹ್ಮಣಶ್ರೇಷ್ಠ ಉತ್ತಂಕನು ಮಾಧವನನ್ನು ಪ್ರಶ್ನಿಸಿದನು:

14052010a ಕಚ್ಚಿಚ್ಚೌರೇ ತ್ವಯಾ ಗತ್ವಾ ಕುರುಪಾಂಡವಸದ್ಮ ತತ್|

14052010c ಕೃತಂ ಸೌಭ್ರಾತ್ರಮಚಲಂ ತನ್ಮೇ ವ್ಯಾಖ್ಯಾತುಮರ್ಹಸಿ||

“ಶೌರೇ! ನೀನು ಕುರು-ಪಾಂಡವರ ಸದನಗಳಿಗೆ ಹೋಗಿ ಎರಡೂ ಪಂಗಡಗಳಲ್ಲಿ ಉತ್ತಮ ಭ್ರಾತೃಭಾವವನ್ನು ಉಂಟುಮಾಡಿಸಿ ಬಂದೆಯಾ? ಅದರ ಕುರಿತು ನೀನು ನನಗೆ ಹೇಳಬೇಕು.

14052011a ಅಭಿಸಂಧಾಯ ತಾನ್ವೀರಾನುಪಾವೃತ್ತೋಽಸಿ ಕೇಶವ|

14052011c ಸಂಬಂಧಿನಃ ಸುದಯಿತಾನ್ಸತತಂ ವೃಷ್ಣಿಪುಂಗವ||

ಕೇಶವ! ವೃಷ್ಣಿಪುಂಗವ! ಸತತವೂ ನಿನ್ನ ಸಂಬಂಧಿಗಳೂ ಪ್ರೀತಿಪಾತ್ರರೂ ಆದ ಆ ವೀರರ ನಡುವೆ ಸಂಧಿಯನ್ನು ನಡೆಸಿಕೊಟ್ಟು ಬಂದೆಯಾ?

14052012a ಕಚ್ಚಿತ್ಪಾಂಡುಸುತಾಃ ಪಂಚ ಧೃತರಾಷ್ಟ್ರಸ್ಯ ಚಾತ್ಮಜಾಃ|

14052012c ಲೋಕೇಷು ವಿಹರಿಷ್ಯಂತಿ ತ್ವಯಾ ಸಹ ಪರಂತಪ||

ಪರಂತಪ! ಐವರು ಪಾಂಡುಸುತರು ಮತ್ತು ಧೃತರಾಷ್ಟ್ರನ ಮಕ್ಕಳು ನಿನ್ನೊಡನೆ ಲೋಕಗಳಲ್ಲಿ ವಿಹರಿಸುತ್ತಿದ್ದಾರೆ ತಾನೇ?

14052013a ಸ್ವರಾಷ್ಟ್ರೇಷು ಚ ರಾಜಾನಃ ಕಚ್ಚಿತ್ಪ್ರಾಪ್ಸ್ಯಂತಿ ವೈ ಸುಖಮ್|

14052013c ಕೌರವೇಷು ಪ್ರಶಾಂತೇಷು ತ್ವಯಾ ನಾಥೇನ ಮಾಧವ||

ಮಾಧವ! ನಾಥನಾದ ನೀನು ಕೌರವರಲ್ಲಿ ಶಾಂತಿಯನ್ನು ಏರ್ಪಡಿಸಿದ ನಂತರ ರಾಜರು ತಮ್ಮ ತಮ್ಮ ರಾಷ್ಟ್ರಗಳಲ್ಲಿ ಸುಖದಿಂದ ಇರುವರು ತಾನೇ?

14052014a ಯಾ ಮೇ ಸಂಭಾವನಾ ತಾತ ತ್ವಯಿ ನಿತ್ಯಮವರ್ತತ|

14052014c ಅಪಿ ಸಾ ಸಫಲಾ ಕೃಷ್ಣ ಕೃತಾ ತೇ ಭರತಾನ್ಪ್ರತಿ||

ಕೃಷ್ಣ! ಮಗೂ! ನೀನು ಹಾಗೆಯೇ ಮಾಡುತ್ತೀಯೆ ಎಂದು ನನಗೆ ಸಂಪೂರ್ಣವಾದ ಭರವಸೆಯಿದ್ದಿತು. ಏಕೆಂದರೆ ಭಾರತರ ಪ್ರತಿ ನಿನಗಿರುವ ಪ್ರೀತಿಯಿಂದಾಗಿ ಸಂಧಿಯು ಸಫಲವಾಗಲೇ ಬೇಕಿತ್ತು!”

14052015 ವಾಸುದೇವ ಉವಾಚ

14052015a ಕೃತೋ ಯತ್ನೋ ಮಯಾ ಬ್ರಹ್ಮನ್ಸೌಭ್ರಾತ್ರೇ ಕೌರವಾನ್ಪ್ರತಿ|

14052015c ನ ಚಾಶಕ್ಯಂತ ಸಂಧಾತುಂ ತೇಽಧರ್ಮರುಚಯೋ ಮಯಾ||

ವಾಸುದೇವನು ಹೇಳಿದನು: “ಬ್ರಹ್ಮನ್! ಕೌರವರಲ್ಲಿ ಪರಸ್ಪರ ಸೌಭ್ರಾತೃತ್ವವನ್ನುಂಟುಮಾಡಲು ನಾನು ಪ್ರಯತ್ನಿಸಿದೆ. ಆದರೆ ಅಧರ್ಮದಲ್ಲಿಯೇ ಆಸಕ್ತರಾದ ಅವರು ಸಂಧಿಮಾಡಿಕೊಳ್ಳುವಂತೆ ಮಾಡಲು ನನಗೆ ಶಕ್ಯವಾಗಲಿಲ್ಲ.

14052016a ತತಸ್ತೇ ನಿಧನಂ ಪ್ರಾಪ್ತಾಃ ಸರ್ವೇ ಸಸುತಬಾಂಧವಾಃ|

14052016c ನ ದಿಷ್ಟಮಭ್ಯತಿಕ್ರಾಂತುಂ ಶಕ್ಯಂ ಬುದ್ಧ್ಯಾ ಬಲೇನ ವಾ|

14052016e ಮಹರ್ಷೇ ವಿದಿತಂ ನೂನಂ ಸರ್ವಮೇತತ್ತವಾನಘ||

ಅನಂತರ ಅವರೆಲ್ಲರೂ ಮಕ್ಕಳು-ಬಾಂಧವರೊಂದಿಗೆ ನಿಧನಹೊಂದಿದರು. ಬುದ್ಧಿ ಅಥವಾ ಬಲಗಳಿಂದ ದೈವವನ್ನು ಅತಿಕ್ರಮಿಸಲು ಶಕ್ಯವಿಲ್ಲ. ಮಹರ್ಷೇ! ಅನಘ! ಇವೆಲ್ಲವೂ ನಿನಗೆ ತಿಳಿದಿದ್ದೇ ಆಗಿವೆ!

14052017a ತೇಽತ್ಯಕ್ರಾಮನ್ಮತಿಂ ಮಹ್ಯಂ ಭೀಷ್ಮಸ್ಯ ವಿದುರಸ್ಯ ಚ|

14052017c ತತೋ ಯಮಕ್ಷಯಂ ಜಗ್ಮುಃ ಸಮಾಸಾದ್ಯೇತರೇತರಮ್||

ಮಹಾಮತಿ ಭೀಷ್ಮ ಮತ್ತು ವಿದುರರ ಸಲಹೆಗಳನ್ನು ಅತಿಕ್ರಮಿಸಿ ಅವರು ಪರಸ್ಪರರರೊಡನೆ ಹೋರಾಡಿ ಯಮಕ್ಷಯಕ್ಕೆ ಹೋದರು.

14052018a ಪಂಚ ವೈ ಪಾಂಡವಾಃ ಶಿಷ್ಟಾ ಹತಮಿತ್ರಾ ಹತಾತ್ಮಜಾಃ|

14052018c ಧಾರ್ತರಾಷ್ಟ್ರಾಶ್ಚ ನಿಹತಾಃ ಸರ್ವೇ ಸಸುತಬಾಂಧವಾಃ||

ಮಕ್ಕಳನ್ನೂ ಮಿತ್ರರನ್ನು ಕಳೆದುಕೊಂಡ ಐವರು ಪಾಂಡವರು ಮಾತ್ರ ಉಳಿದುಕೊಂಡಿದ್ದಾರೆ. ಧಾರ್ತರಾಷ್ಟ್ರರೆಲ್ಲರೂ ಮಕ್ಕಳು-ಬಾಂಧವರೊಡನೆ ಹತರಾಗಿದ್ದಾರೆ.”

14052019a ಇತ್ಯುಕ್ತವಚನೇ ಕೃಷ್ಣೇ ಭೃಶಂ ಕ್ರೋಧಸಮನ್ವಿತಃ|

14052019c ಉತ್ತಂಕಃ ಪ್ರತ್ಯುವಾಚೈನಂ ರೋಷಾದುತ್ಫಾಲ್ಯ ಲೋಚನೇ||

ಕೃಷ್ಣನು ಹೀಗೆ ಹೇಳಲು ಉತ್ತಂಕನು ಅತ್ಯಂತ ಕ್ರೋಧಸಮನ್ವಿತನಾದನು. ರೋಷದಿಂದ ಕಣ್ಣುಗಳನ್ನು ಅರಳಿಸಿಕೊಂಡು ಅವನು ಈ ಮಾತುಗಳನ್ನಾಡಿದನು:

14052020a ಯಸ್ಮಾಚ್ಚಕ್ತೇನ ತೇ ಕೃಷ್ಣ ನ ತ್ರಾತಾಃ ಕುರುಪಾಂಡವಾಃ|

14052020c ಸಂಬಂಧಿನಃ ಪ್ರಿಯಾಸ್ತಸ್ಮಾಚ್ಚಪ್ಸ್ಯೇಽಹಂ ತ್ವಾಮಸಂಶಯಮ್||

“ಕೃಷ್ಣ! ಶಕ್ತನಾಗಿದ್ದರೂ ಸಂಬಂಧಿಗಳೂ ಪ್ರಿಯರೂ ಆಗಿದ್ದ ಕುರು-ಪಾಂಡವರನ್ನು ನೀನು ರಕ್ಷಿಸಲಿಲ್ಲ. ಆದುದರಿಂದ ನಿನ್ನನ್ನೀಗ ಶಪಿಸುತ್ತೇನೆ. ಇದರಲ್ಲಿ ಸಂಶಯವೇ ಇಲ್ಲ!

14052021a ನ ಚ ತೇ ಪ್ರಸಭಂ ಯಸ್ಮಾತ್ತೇ ನಿಗೃಹ್ಯ ನಿವರ್ತಿತಾಃ|

14052021c ತಸ್ಮಾನ್ಮನ್ಯುಪರೀತಸ್ತ್ವಾಂ ಶಪ್ಸ್ಯಾಮಿ ಮಧುಸೂದನ||

ಮಧುಸೂದನ! ಬಲವನ್ನು ಪ್ರಯೋಗಿಸಿಯಾದರೂ ನೀನು ಅವರನ್ನು ತಡೆಯಬಹುದಾಗಿತ್ತು. ವಿನಾಶದಿಂದ ಪಾರುಮಾಡಬಹುದಾಗಿತ್ತು. ಆದರೆ ನೀನು ಹಾಗೆ ಮಾಡಲಿಲ್ಲ. ಇದರಿಂದ ಕುಪಿತನಾಗಿ ನಾನು ನಿನ್ನನ್ನು ಶಪಿಸುತ್ತೇನೆ.

14052022a ತ್ವಯಾ ಹಿ ಶಕ್ತೇನ ಸತಾ ಮಿಥ್ಯಾಚಾರೇಣ ಮಾಧವ|

14052022c ಉಪಚೀರ್ಣಾಃ ಕುರುಶ್ರೇಷ್ಠಾ ಯಸ್ತ್ವೇತಾನ್ಸಮುಪೇಕ್ಷಥಾಃ||

ಮಾಧವ! ತಡೆಯಲು ಶಕ್ತನಾಗಿದ್ದರೂ ನೀನು ಪರಸ್ಪರರನ್ನು ನಾಶಗೊಳಿಸಿದ ಕುರುಶ್ರೇಷ್ಠರನ್ನು ಮಿಥ್ಯಾಚಾರದಿಂದ ಉಪೇಕ್ಷಿಸಿದೆ!”

14052023 ವಾಸುದೇವ ಉವಾಚ

14052023a ಶೃಣು ಮೇ ವಿಸ್ತರೇಣೇದಂ ಯದ್ವಕ್ಷ್ಯೇ ಭೃಗುನಂದನ|

14052023c ಗೃಹಾಣಾನುನಯಂ ಚಾಪಿ ತಪಸ್ವೀ ಹ್ಯಸಿ ಭಾರ್ಗವ||

ವಾಸುದೇವನು ಹೇಳಿದನು: “ಭೃಗುನಂದನ! ಭಾರ್ಗವ! ನೀನು ತಪಸ್ವಿಯಾಗಿರುವೆ! ಕೋಪಗೊಳ್ಳಬೇಡ! ನಾನು ಹೇಳುವುದನ್ನು ಸಮಗ್ರವಾಗಿ ಕೇಳಿ ನನ್ನ ಪ್ರಾರ್ಥನೆಯನ್ನು ಅಂಗೀಕರಿಸು.

14052024a ಶ್ರುತ್ವಾ ತ್ವಮೇತದಧ್ಯಾತ್ಮಂ ಮುಂಚೇಥಾಃ ಶಾಪಮದ್ಯ ವೈ|

14052024c ನ ಚ ಮಾಂ ತಪಸಾಲ್ಪೇನ ಶಕ್ತೋಽಭಿಭವಿತುಂ ಪುಮಾನ್||

ನನ್ನಿಂದ ಆಧ್ಯಾತ್ಮತತ್ತ್ವವನ್ನು ಕೇಳಿದನಂತರ ನೀನು ನನಗೆ ಶಾಪವನ್ನು ಕೊಡಬಹುದು. ಅಲ್ಪ ತಪಸ್ಸಿನಿಂದ ಯಾವ ಪುರುಷನೂ ನನ್ನನ್ನು ತಿರಸ್ಕರಿಸಲಾರನು.

14052025a ನ ಚ ತೇ ತಪಸೋ ನಾಶಮಿಚ್ಚಾಮಿ ಜಪತಾಂ ವರ|

14052025c ತಪಸ್ತೇ ಸುಮಹದ್ದೀಪ್ತಂ ಗುರವಶ್ಚಾಪಿ ತೋಷಿತಾಃ||

ಜಪಿಗಳಲ್ಲಿ ಶ್ರೇಷ್ಠನೇ! ನಿನ್ನ ತಪಸ್ಸು ನಾಶವಾಗುವುದನ್ನು ನಾನು ಬಯಸುವುದಿಲ್ಲ. ಗುರುವನ್ನು ತೃಪ್ತಿಗೊಳಿಸುರುವ ನಿನ್ನ ತಪಸ್ಸು ಮಹಾ ದೀಪ್ತವಾದುದು.

14052026a ಕೌಮಾರಂ ಬ್ರಹ್ಮಚರ್ಯಂ ತೇ ಜಾನಾಮಿ ದ್ವಿಜಸತ್ತಮ|

14052026c ದುಃಖಾರ್ಜಿತಸ್ಯ ತಪಸಸ್ತಸ್ಮಾನ್ನೇಚ್ಚಾಮಿ ತೇ ವ್ಯಯಮ್||

ದ್ವಿಜಸತ್ತಮ! ಬಾಲ್ಯದಿಂದಲೇ ನೀನು ಬ್ರಹ್ಮಚರ್ಯವನ್ನು ಪಾಲಿಸುತ್ತಿರುವೆ ಎಂದು ತಿಳಿದಿದ್ದೇನೆ. ಆದುದರಿಂದ ಕಷ್ಟದಿಂದ ಸಂಪಾದಿಸಿದ ನಿನ್ನ ಈ ತಪಸ್ಸನ್ನು ವ್ಯಯಗೊಳಿಸಲು ನಾನು ಇಷ್ಟಪಡುವುದಿಲ್ಲ.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಉತ್ತಂಕೋಪಾಖ್ಯಾನೇ ಕೃಷ್ಣೋತ್ತಂಕಸಮಾಗಮೇ ದ್ವಿಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಉತ್ತಂಕೋಪಾಖ್ಯಾನೇ ಕೃಷ್ಣೋತ್ತಂಕಸಮಾಗಮ ಎನ್ನುವ ಐವತ್ತೆರಡನೇ ಅಧ್ಯಾಯವು.

Comments are closed.