Ashvamedhika Parva: Chapter 49

ಅಶ್ವಮೇಧಿಕ ಪರ್ವ

೪೯

ಕೃಷ್ಣನು ಅರ್ಜುನನಿಗೆ ಮೋಕ್ಷ ವಿಷಯಕ ಗುರು-ಶಿಷ್ಯರ ಸಂವಾದವನ್ನು ಮುಂದುವರಿಸಿ ಹೇಳಿದುದು (೧-೫೫).

14049001 ಬ್ರಹ್ಮೋವಾಚ

14049001a ಹಂತ ವಃ ಸಂಪ್ರವಕ್ಷ್ಯಾಮಿ ಯನ್ಮಾಂ ಪೃಚ್ಚಥ ಸತ್ತಮಾಃ|

14049001c ಸಮಸ್ತಮಿಹ ತಚ್ಚ್ರುತ್ವಾ ಸಮ್ಯಗೇವಾವಧಾರ್ಯತಾಮ್||

ಬ್ರಹ್ಮನು ಹೇಳಿದನು: “ಸತ್ತಮರೇ! ಈಗ ನೀವು ಕೇಳಿದುದನ್ನು ಸಂಪೂರ್ಣವಾಗಿ ಹೇಳುತ್ತೇನೆ. ಈ ಸಮಸ್ತವನ್ನೂ ಕೇಳಿ ಅದನ್ನು ಚೆನ್ನಾಗಿ ಧಾರಣೆಮಾಡಿಕೊಳ್ಳಿ.

14049002a ಅಹಿಂಸಾ ಸರ್ವಭೂತಾನಾಮೇತತ್ಕೃತ್ಯತಮಂ ಮತಮ್|

14049002c ಏತತ್ಪದಮನುದ್ವಿಗ್ನಂ ವರಿಷ್ಠಂ ಧರ್ಮಲಕ್ಷಣಮ್||

ಸರ್ವಭೂತಗಳಲ್ಲಿ ಅಹಿಂಸೆಯು ಸರ್ವೋತ್ತಮ ಕರ್ತ್ಯವ್ಯವೆಂದು ಅಭಿಪ್ರಾಯ. ಅಹಿಂಸೆಯು ಉದ್ವೇಗರಹಿತವು. ಇದು ಧರ್ಮದ ಅತಿ ಹಿರಿಯ ಲಕ್ಷಣವು.

14049003a ಜ್ಞಾನಂ ನಿಃಶ್ರೇಯ ಇತ್ಯಾಹುರ್ವೃದ್ಧಾ ನಿಶ್ಚಯದರ್ಶಿನಃ|

14049003c ತಸ್ಮಾತ್ ಜ್ಞಾನೇನ ಶುದ್ಧೇನ ಮುಚ್ಯತೇ ಸರ್ವಪಾತಕೈಃ||

ನಿಶ್ಚಯದರ್ಶಿ ವೃದ್ಧರು ಜ್ಞಾನವೇ ಶ್ರೇಯಸ್ಕರವಾದುದು ಎಂದು ಹೇಳುತ್ತಾರೆ. ಆದುದರಿಂದ ಶುದ್ಧ ಜ್ಞಾನದಿಂದ ಸರ್ವಪಾತಕಗಳಿಂದಲೂ ಮುಕ್ತರಾಗುತ್ತೇವೆ.

14049004a ಹಿಂಸಾಪರಾಶ್ಚ ಯೇ ಲೋಕೇ ಯೇ ಚ ನಾಸ್ತಿಕವೃತ್ತಯಃ|

14049004c ಲೋಭಮೋಹಸಮಾಯುಕ್ತಾಸ್ತೇ ವೈ ನಿರಯಗಾಮಿನಃ||

ಈ ಲೋಕದಲ್ಲಿರುವ ಹಿಂಸಾಪರರೂ, ನಾಸ್ತಿಕರಂತೆ ನಡೆದುಕೊಳ್ಳುವವರೂ, ಲೋಭ-ಮೋಹ ಸಮಾಯುಕ್ತರೂ ನರಕಕ್ಕೆ ಹೋಗುತ್ತಾರೆ.

14049005a ಆಶೀರ್ಯುಕ್ತಾನಿ ಕರ್ಮಾಣಿ ಕುರ್ವತೇ ಯೇ ತ್ವತಂದ್ರಿತಾಃ|

14049005c ತೇಽಸ್ಮಿಽಲ್ಲೋಕೇ ಪ್ರಮೋದಂತೇ ಜಾಯಮಾನಾಃ ಪುನಃ ಪುನಃ||

ಆಲಸ್ಯವಿಲ್ಲದೇ ಶ್ರದ್ಧೆಯಿಂದ ಕಾಮ್ಯ ಕರ್ಮಗಳನ್ನು ಮಾಡುವವರು ಈ ಲೋಕದಲ್ಲಿಯೇ ಪುನಃ ಪುನಃ ಹುಟ್ಟುತ್ತಾ ಆನಂದದಿಂದಿರುತ್ತಾರೆ.

14049006a ಕುರ್ವತೇ ಯೇ ತು ಕರ್ಮಾಣಿ ಶ್ರದ್ದಧಾನಾ ವಿಪಶ್ಚಿತಃ|

14049006c ಅನಾಶೀರ್ಯೋಗಸಂಯುಕ್ತಾಸ್ತೇ ಧೀರಾಃ ಸಾಧುದರ್ಶಿನಃ||

ಶ್ರದ್ಧೆಯಿಂದ ನಿಷ್ಕಾಮಕರ್ಮಗಳನ್ನು ಮಾಡುತ್ತಾ ಯೋಗದಲ್ಲಿ ನಿರತರಾಗಿರುವವರು ಧೀರರು. ಸಾಧುದರ್ಶಿಗಳು.

14049007a ಅತಃ ಪರಂ ಪ್ರವಕ್ಷ್ಯಾಮಿ ಸತ್ತ್ವಕ್ಷೇತ್ರಜ್ಞಯೋರ್ಯಥಾ|

14049007c ಸಂಯೋಗೋ ವಿಪ್ರಯೋಗಶ್ಚ ತನ್ನಿಬೋಧತ ಸತ್ತಮಾಃ||

ಸತ್ತಮರೇ! ಇನ್ನು ಮುಂದೆ ನಾನು ಸತ್ತ್ವಕ್ಕೂ (ಬುದ್ಧಿಗೂ) ಕ್ಷೇತ್ರಜ್ಞನಿಗೂ ಇರುವ ಸಂಯೋಗ-ವಿಯೋಗಗಳ ಕುರಿತು ಹೇಳುತ್ತೇನೆ. ಕೇಳಿ.

14049008a ವಿಷಯೋ ವಿಷಯಿತ್ವಂ ಚ ಸಂಬಂಧೋಽಯಮಿಹೋಚ್ಯತೇ|

14049008c ವಿಷಯೀ ಪುರುಷೋ ನಿತ್ಯಂ ಸತ್ತ್ವಂ ಚ ವಿಷಯಃ ಸ್ಮೃತಃ||

ಸತ್ತ್ವ-ಕ್ಷೇತ್ರಜ್ಞರ ನಡುವೆ ವಿಷಯ ಮತ್ತು ವಿಷಯೀಭಾವದ ಸಂಬಂಧವಿದೆಯೆಂದು ಹೇಳುತ್ತಾರೆ. ಕ್ಷೇತ್ರಜ್ಞ ಅಥವಾ ಪುರುಷನೇ ವಿಷಯೀ. ಸತ್ತ್ವವೇ (ಬುದ್ಧಿಯೇ) ವಿಷಯವೆಂದು ಹೇಳುತ್ತಾರೆ.

14049009a ವ್ಯಾಖ್ಯಾತಂ ಪೂರ್ವಕಲ್ಪೇನ ಮಶಕೋದುಂಬರಂ ಯಥಾ|

14049009c ಭುಜ್ಯಮಾನಂ ನ ಜಾನೀತೇ ನಿತ್ಯಂ ಸತ್ತ್ವಮಚೇತನಮ್|

14049009e ಯಸ್ತ್ವೇವ ತು ವಿಜಾನೀತೇ ಯೋ ಭುಂಕ್ತೇ ಯಶ್ಚ ಭುಜ್ಯತೇ||

ಹಿಂದಿನ ಅಧ್ಯಾಯದಲ್ಲಿ ಉದಾಹರಿಸಿರುವ ಹುಳು ಮತ್ತು ಅತ್ತಿಹಣ್ಣಿನಂತೆ ಭೋಗಿಸಲ್ಪಡುವ ಅಚೇತನ ಸತ್ತ್ವವು ನಿತ್ಯನಾದ ಕ್ಷೇತ್ರಜ್ಞನನ್ನು ತಿಳಿದಿಲ್ಲ. ಆದರೆ ಭೋಗಿಸುವವನು ಆತ್ಮನೆಂದೂ ಭೋಗಿಸಲ್ಪಡುವವನು ಸತ್ತ್ವವೆಂದೂ ಕ್ಷೇತ್ರಜ್ಞನು ತಿಳಿದಿರುತ್ತಾನೆ.

14049010a ಅನಿತ್ಯಂ ದ್ವಂದ್ವಸಂಯುಕ್ತಂ ಸತ್ತ್ವಮಾಹುರ್ಗುಣಾತ್ಮಕಮ್|

14049010c ನಿರ್ದ್ವಂದ್ವೋ ನಿಷ್ಕಲೋ ನಿತ್ಯಃ ಕ್ಷೇತ್ರಜ್ಞೋ ನಿರ್ಗುಣಾತ್ಮಕಃ||

ಗುಣಾತ್ಮಕವಾದ ಸತ್ತ್ವವು ಅನಿತ್ಯ ಮತ್ತು ದ್ವಂದ್ವಸಂಯುಕ್ತ ಎಂದು ಹೇಳುತ್ತಾರೆ. ನಿರ್ಗುಣಾತ್ಮಕನಾದ ಕ್ಷೇತ್ರಜ್ಞನು ನಿತ್ಯ, ನಿಷ್ಕಲ ಮತ್ತು ನಿರ್ದ್ವಂದ್ವ.

14049011a ಸಮಃ ಸಂಜ್ಞಾಗತಸ್ತ್ವೇವಂ ಯದಾ ಸರ್ವತ್ರ ದೃಶ್ಯತೇ|

14049011c ಉಪಭುಂಕ್ತೇ ಸದಾ ಸತ್ತ್ವಮಾಪಃ ಪುಷ್ಕರಪರ್ಣವತ್||

ಸರ್ವತ್ರ ವ್ಯಾಪಿಸಿರುವ, ತನಗೆ ಸಮನೆಂದೇ ತೋರುವ, ಸತ್ತ್ವವನ್ನು ಕ್ಷೇತ್ರಜ್ಞನು ಕಮಲದ ಎಲೆಯು ನಿರ್ಲಿಪ್ತವಾಗಿ ತನ್ನ ಮೇಲಿರುವ ಜಲಬಿಂದುಗಳನ್ನು ಧರಿಸಿರುವಂತೆ ಸದಾ ಉಪಭೋಗಿಸುತ್ತಿರುತ್ತಾನೆ.

14049012a ಸರ್ವೈರಪಿ ಗುಣೈರ್ವಿದ್ವಾನ್ವ್ಯತಿಷಕ್ತೋ ನ ಲಿಪ್ಯತೇ|

14049012c ಜಲಬಿಂದುರ್ಯಥಾ ಲೋಲಃ ಪದ್ಮಿನೀಪತ್ರಸಂಸ್ಥಿತಃ|

14049012e ಏವಮೇವಾಪ್ಯಸಂಸಕ್ತಃ ಪುರುಷಃ ಸ್ಯಾನ್ನ ಸಂಶಯಃ||

ಎಲ್ಲ ಗುಣಗಳಿಂದ ಕೂಡಿದ್ದರೂ ತಿಳಿದವನು ಕಮಲದ ಎಲೆಯು ತನ್ನ ಮೇಲಿರುವ ಜಲಬಿಂದುವಿನಿಂದ ಹೇಗೆ ಲಿಪ್ತವಾಗಿರುವುದಿಲ್ಲವೋ ಹಾಗೆ ಗುಣಗಳಿಗೆ ಅಂಟಿಕೊಂಡಿರುವುದಿಲ್ಲ. ಇದೇರೀತಿ ಕ್ಷೇತ್ರಜ್ಞ ಅಥವಾ ಪುರುಷನು ಅಸಂಗನು. ಸತ್ತ್ವದಿಂದ ಆವೃತನಾಗಿದ್ದರೂ ಅದರಿಂದ ಲಿಪ್ತನಾಗಿರುವುದಿಲ್ಲ. ಇದರಲ್ಲಿ ಸಂಶಯವೇ ಇಲ್ಲ.

14049013a ದ್ರವ್ಯಮಾತ್ರಮಭೂತ್ಸತ್ತ್ವಂ ಪುರುಷಸ್ಯೇತಿ ನಿಶ್ಚಯಃ|

14049013c ಯಥಾ ದ್ರವ್ಯಂ ಚ ಕರ್ತಾ ಚ ಸಂಯೋಗೋಽಪ್ಯನಯೋಸ್ತಥಾ||

ಪುರುಷನಿಗೆ ಸತ್ತ್ವವು ಕೇವಲ ದ್ರವ್ಯರೂಪವಾಗಿರುವುದು ಎಂದು ನಿಶ್ಚಯವು. ಕರ್ತನಿಗೆ ಮತ್ತು ದ್ರವ್ಯಕ್ಕೆ ಯಾವ ಸಂಬಂಧವಿದೆಯೋ ಅದೇ ಸಂಬಂಧವು ಸತ್ತ್ವ ಮತ್ತು ಕ್ಷೇತ್ರಜ್ಞನಿಗೆ ಇರುತ್ತದೆ.

14049014a ಯಥಾ ಪ್ರದೀಪಮಾದಾಯ ಕಶ್ಚಿತ್ತಮಸಿ ಗಚ್ಚತಿ|

14049014c ತಥಾ ಸತ್ತ್ವಪ್ರದೀಪೇನ ಗಚ್ಚಂತಿ ಪರಮೈಷಿಣಃ||

ಕತ್ತಲೆಯಲ್ಲಿ ಹೋಗುವಾಗ ದೀಪವನ್ನು ಹಿಡಿದುಕೊಂಡು ಹೋಗುವಂತೆ ಪರಮಪದವನ್ನು ಪಡೆಯಲಿಚ್ಛಿಸುವವರು ಸತ್ತ್ವವೆಂಬ ದೀಪವನ್ನು ಹಿಡಿದುಕೊಂಡು ಹೋಗುತ್ತಾರೆ.

14049015a ಯಾವದ್ದ್ರವ್ಯಗುಣಸ್ತಾವತ್ಪ್ರದೀಪಃ ಸಂಪ್ರಕಾಶತೇ|

14049015c ಕ್ಷೀಣದ್ರವ್ಯಗುಣಂ ಜ್ಯೋತಿರಂತರ್ಧಾನಾಯ ಗಚ್ಚತಿ||

ಎಲ್ಲಿಯವರೆಗೆ ದೀಪದಲ್ಲಿ ದ್ರವ್ಯ (ಎಣ್ಣೆ) ಮತ್ತು ಗುಣ (ಬತ್ತಿ) ಗಳಿರುತ್ತವೆಯೋ ಅಲ್ಲಿಯವರೆಗೆ ಅದು ಬೆಳಕನ್ನು ಕೊಡುತ್ತದೆ. ದ್ರವ್ಯ-ಗುಣಗಳು ಕ್ಷೀಣವಾದ ಕೂಡಲೆ ಜ್ಯೋತಿಯು ಅಂತರ್ಧಾನವಾಗುತ್ತದೆ.

14049016a ವ್ಯಕ್ತಃ ಸತ್ತ್ವಗುಣಸ್ತ್ವೇವಂ ಪುರುಷೋಽವ್ಯಕ್ತ ಇಷ್ಯತೇ|

14049016c ಏತದ್ವಿಪ್ರಾ ವಿಜಾನೀತ ಹಂತ ಭೂಯೋ ಬ್ರವೀಮಿ ವಃ||

ಸತ್ತ್ವಗುಣವು ವ್ಯಕ್ತ ಮತ್ತು ಪುರುಷನು ಅವ್ಯಕ್ತ ಎಂದು ಹೇಳುತ್ತಾರೆ. ವಿಪ್ರರೇ! ಇದನ್ನು ನೀವು ತಿಳಿದುಕೊಂಡಿರಿ. ಇದರ ಕುರಿತು ಇನ್ನೂ ಹೇಳುತ್ತೇನೆ.

14049017a ಸಹಸ್ರೇಣಾಪಿ ದುರ್ಮೇಧಾ ನ ವೃದ್ಧಿಮಧಿಗಚ್ಚತಿ|

14049017c ಚತುರ್ಥೇನಾಪ್ಯಥಾಂಶೇನ ಬುದ್ಧಿಮಾನ್ಸುಖಮೇಧತೇ||

ಮಂದಬುದ್ಧಿಯುಳ್ಳವನಿಗೆ ಸಾವಿರ ವಿಷಯಗಳನ್ನು ಹೇಳಿದರೂ ಅವನ ಜ್ಞಾನವು ವೃದ್ಧಿಯಾಗುವುದಿಲ್ಲ. ಆದರೆ ಬುದ್ಧಿವಂತನಿಗೆ ನಾಲ್ಕನೆಯ ಒಂದು ಭಾಗ ಹೇಳಿದರೂ ಅದರಿಂದ ಸುಖವನ್ನು ಪಡೆಯುತ್ತಾನೆ.

14049018a ಏವಂ ಧರ್ಮಸ್ಯ ವಿಜ್ಞೇಯಂ ಸಂಸಾಧನಮುಪಾಯತಃ|

14049018c ಉಪಾಯಜ್ಞೋ ಹಿ ಮೇಧಾವೀ ಸುಖಮತ್ಯಂತಮಶ್ನುತೇ||

ಹೀಗೆ ಧರ್ಮ ಸಂಸಾಧನೆಯ ಉಪಾಯವನ್ನು ತಿಳಿದುಕೊಳ್ಳಬೇಕು. ಉಪಾಯಗಳನ್ನು ತಿಳಿದ ಮೇಧಾವಿಯು ಅತ್ಯಂತ ಸುಖವನ್ನು ಹೊಂದುತ್ತಾನೆ.

14049019a ಯಥಾಧ್ವಾನಮಪಾಥೇಯಃ ಪ್ರಪನ್ನೋ ಮಾನವಃ ಕ್ವ ಚಿತ್|

14049019c ಕ್ಲೇಶೇನ ಯಾತಿ ಮಹತಾ ವಿನಶ್ಯತ್ಯಂತರಾಪಿ ವಾ||

ಯಾತ್ರಿಕನೋರ್ವನು ಆಹಾರದ ಬುತ್ತಿಯನ್ನು ಕಟ್ಟಿಕೊಳ್ಳದೇ ಹೊರಟರೆ ಮಹಾಕ್ಲೇಶಕ್ಕೆ ಗುರಿಯಾಗುತ್ತಾನೆ ಅಥವಾ ಮಾರ್ಗದಲ್ಲಿಯೇ ವಿನಾಶನಾಗಲೂ ಬಹುದು.

14049020a ತಥಾ ಕರ್ಮಸು ವಿಜ್ಞೇಯಂ ಫಲಂ ಭವತಿ ವಾ ನ ವಾ|

14049020c ಪುರುಷಸ್ಯಾತ್ಮನಿಃಶ್ರೇಯಃ ಶುಭಾಶುಭನಿದರ್ಶನಮ್||

ಹಾಗೆಯೇ ಕರ್ಮಫಲವನ್ನು ತಿಳಿದುಕೊಳ್ಳಬೇಕು. ಅದು ಪುರುಷನ ಆತ್ಮಕ್ಕೆ ಶ್ರೇಯಸ್ಸಾದುದೇ, ಶುಭವಾದುದೇ ಅಥವಾ ಅಶುಭವಾದುದೇ ಎನ್ನುವುದನ್ನು ತಿಳಿದುಕೊಂಡಿರಬೇಕು.

14049021a ಯಥಾ ಚ ದೀರ್ಘಮಧ್ವಾನಂ ಪದ್ಭ್ಯಾಮೇವ ಪ್ರಪದ್ಯತೇ|

14049021c ಅದೃಷ್ಟಪೂರ್ವಂ ಸಹಸಾ ತತ್ತ್ವದರ್ಶನವರ್ಜಿತಃ||

ಹಿಂದೆಂದೂ ನೋಡಿರದ ದಾರಿಯಲ್ಲಿ ದೀರ್ಘ ಪ್ರಯಾಣಮಾಡುತ್ತಿರುವವನು ಗುರಿಯನ್ನು ಹೇಗೆ ತಲುಪುವುದಿಲ್ಲವೋ ಹಾಗೆ ತತ್ತ್ವದರ್ಶನವಾಗಿರದವನೂ ಕೂಡ ಪರಮ ಪದವನ್ನು ತಲುಪುವುದಿಲ್ಲ.

14049022a ತಮೇವ ಚ ಯಥಾಧ್ವಾನಂ ರಥೇನೇಹಾಶುಗಾಮಿನಾ|

14049022c ಯಾಯಾದಶ್ವಪ್ರಯುಕ್ತೇನ ತಥಾ ಬುದ್ಧಿಮತಾಂ ಗತಿಃ||

ಆದರೆ ಬುದ್ಧಿವಂತರ ಪ್ರಯಾಣವು ಅದೇ ಗೊತ್ತಿರದ ಮಾರ್ಗದಲ್ಲಿ ವೇಗಯುಕ್ತ ಕುದುರೆಗಳನ್ನು ಹೂಡಿರುವ ರಥದಲ್ಲಿ ಕುಳಿತು ಹೋಗುವ ಪ್ರಯಾಣದಂತಿರುತ್ತದೆ.

14049023a ಉಚ್ಚಂ ಪರ್ವತಮಾರುಹ್ಯ ನಾನ್ವವೇಕ್ಷೇತ ಭೂಗತಮ್|

14049023c ರಥೇನ ರಥಿನಂ ಪಶ್ಯೇತ್ಕ್ಲಿಶ್ಯಮಾನಮಚೇತನಮ್||

ಉಚ್ಚ ಪರ್ವತವನ್ನು ಏರಿದವರು ಕೆಳಗಿನದನ್ನು ಹೇಗೆ ನೋಡುವುದಿಲ್ಲವೋ ಹಾಗೆ ಪರಮ ಗತಿಯನ್ನು ಹೊಂದಿದವರು ಕೆಳಗಿರುವ ಪ್ರಪಂಚದ ಕಡೆ ನೋಡುವುದಿಲ್ಲ. ಆದರೆ ರಥವಿದ್ದರೂ ಮೂಢನಾದ ರಥಿಕನು ಸೇರಬೇಕಾದ ಸ್ಥಾನವನ್ನು ಸೇರುತ್ತಾನೆ ಎಂಬ ಭರವಸೆಯಿಲ್ಲ.

14049024a ಯಾವದ್ರಥಪಥಸ್ತಾವದ್ರಥೇನ ಸ ತು ಗಚ್ಚತಿ|

14049024c ಕ್ಷೀಣೇ ರಥಪಥೇ ಪ್ರಾಜ್ಞೋ ರಥಮುತ್ಸೃಜ್ಯ ಗಚ್ಚತಿ||

ಆದುದರಿಂದ ತಿಳಿದವನು ರಥವು ಎಲ್ಲಿಯವರೆಗೆ ಹೋಗುತ್ತದೆಯೋ ಅಲ್ಲಿಯವರೆಗೆ ರಥದಲ್ಲಿ ಕುಳಿತು ಹೋಗುತ್ತಾನೆ. ರಥದ ದಾರಿಯು ಮುಗಿದಾಗ ರಥವನ್ನು ಅಲ್ಲಿಯೇ ಬಿಟ್ಟು ಕಾಲ್ನಡುಗೆಯಲ್ಲಿಯೇ ಮುಂದೆ ಸಾಗುತ್ತಾನೆ.

14049025a ಏವಂ ಗಚ್ಚತಿ ಮೇಧಾವೀ ತತ್ತ್ವಯೋಗವಿಧಾನವಿತ್|

14049025c ಸಮಾಜ್ಞಾಯ ಮಹಾಬುದ್ಧಿರುತ್ತರಾದುತ್ತರೋತ್ತರಮ್||

ಹೀಗೆ ತತ್ತ್ವಯೋಗವಿಧಾನವನ್ನು ತಿಳಿದ ಮಹಾಬುದ್ಧಿಯು ಮುಂದಾಗುವುದನ್ನು ತಿಳಿದುಕೊಳ್ಳುತ್ತಾ ಹೋಗುತ್ತಾನೆ.

14049026a ಯಥಾ ಮಹಾರ್ಣವಂ ಘೋರಮಪ್ಲವಃ ಸಂಪ್ರಗಾಹತೇ|

14049026c ಬಾಹುಭ್ಯಾಮೇವ ಸಂಮೋಹಾದ್ವಧಂ ಚರ್ಚ್ಚತ್ಯಸಂಶಯಮ್||

ಘೋರ ಮಹಾಸಾಗರವನ್ನು ಬಾಹುಗಳನ್ನು ಬಳಸಿ ಈಜಿಕೊಂಡೇ ದಾಟಲು ಇಚ್ಛಿಸಿ ಸಮುದ್ರದಲ್ಲಿ ಬೀಳುವವನು ಸಂಮೋಹದಿಂದ ತನ್ನ ವಧೆಯನ್ನೇ ಮಾಡಿಕೊಳ್ಳುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ. 

14049027a ನಾವಾ ಚಾಪಿ ಯಥಾ ಪ್ರಾಜ್ಞೋ ವಿಭಾಗಜ್ಞಸ್ತರಿತ್ರಯಾ|

14049027c ಅಕ್ಲಾಂತಃ ಸಲಿಲಂ ಗಾಹೇತ್ಕ್ಷಿಪ್ರಂ ಸಂತರತಿ ಧ್ರುವಮ್||

14049028a ತೀರ್ಣೋ ಗಚ್ಚೇತ್ಪರಂ ಪಾರಂ ನಾವಮುತ್ಸೃಜ್ಯ ನಿರ್ಮಮಃ|

14049028c ವ್ಯಾಖ್ಯಾತಂ ಪೂರ್ವಕಲ್ಪೇನ ಯಥಾ ರಥಿಪದಾತಿನೌ||

ಯಾವರೀತಿಯಲ್ಲಿ ಸಮುದ್ರಮಾರ್ಗದ ವಿಭಾಗಗಳನ್ನು ತಿಳಿದಿರುವ ಬುದ್ಧಿವಂತ ನಾವಿಕನು ಸುಂದರ ಜಲ್ಲೆಯಿರುವ ನಾವೆಯ ಮೂಲಕ ಅನಾಯಾಸವಾಗಿ ಸಮುದ್ರವನ್ನು ಕ್ಷಿಪ್ರವಾಗಿ ದಾಟಿ, ಆಚೆಯ ದಡವನ್ನು ಸೇರಿದ ನಂತರ ನಾವೆಯ ಮೇಲಿನ ಮಮತೆಯನ್ನು ತೊರೆಯುತ್ತಾನೋ ಹಾಗೆ ಸಂಸಾರಸಾಗರವನ್ನು ದಾಟಿದ ನಂತರ ಅದಕ್ಕೆ ಸಾಧನಗಳಾದ ಕರ್ಮಗಳ ಮೇಲಿನ ವ್ಯಾಮೋಹವನ್ನು ಜ್ಞಾನಿಯು ತ್ಯಜಿಸುತ್ತಾನೆ. ಈ ವಿಷಯವನ್ನೇ ರಥಿಕನ ಮತ್ತು ಕಾಲ್ನಡಿಗೆಯಲ್ಲಿ ಹೋಗುವವನ ಉದಾಹರಣೆಗಳನ್ನಿತ್ತು ಈ ಹಿಂದೆ ಹೇಳಲಾಗಿದೆ.

14049029a ಸ್ನೇಹಾತ್ಸಂಮೋಹಮಾಪನ್ನೋ ನಾವಿ ದಾಶೋ ಯಥಾ ತಥಾ|

14049029c ಮಮತ್ವೇನಾಭಿಭೂತಃ ಸ ತತ್ರೈವ ಪರಿವರ್ತತೇ||

ಆದರೆ ನಾವೆಯಲ್ಲಿಯೇ ಆಸಕ್ತಿಯನ್ನಿಟ್ಟುಕೊಂಡು ಅದರಲ್ಲಿಯೇ ವ್ಯಾಮೋಹವುಳ್ಳವನಾಗಿ ಅದು ತನ್ನದೆಂಬ ಅಭಿಮಾನವನ್ನು ಹೊಂದಿರುವ ನಾವಿಕನು ಯಾವಾಗಲೂ ಸಮುದ್ರದಲ್ಲಿಯೇ ಸುತ್ತುತ್ತಿರುವಂತೆ ದೇಹದಲ್ಲಿಯೇ ಆಸಕ್ತಿಯನ್ನಿಟ್ಟುಕೊಂಡು ದೇಹವು ತನ್ನದೆಂಬ ಮಮಕಾರವಿರುವವನು ಸಂಸಾರಚಕ್ರದಲ್ಲಿ ಅನವರತವಾಗಿ ಸುತ್ತುತ್ತಲೇ ಇರುತ್ತಾನೆ.

14049030a ನಾವಂ ನ ಶಕ್ಯಮಾರುಹ್ಯ ಸ್ಥಲೇ ವಿಪರಿವರ್ತಿತುಮ್|

14049030c ತಥೈವ ರಥಮಾರುಹ್ಯ ನಾಪ್ಸು ಚರ್ಯಾ ವಿಧೀಯತೇ||

ನಾವೆಯನ್ನೇರಿ ಭೂಮಿಯ ಮೇಲೆ ಸಂಚರಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ರಥವನ್ನೇರಿ ನೀರಿನ ಮೇಲೆ ಸಂಚರಿಸಲು ಸಾಧ್ಯವಿಲ್ಲ.

14049031a ಏವಂ ಕರ್ಮ ಕೃತಂ ಚಿತ್ರಂ ವಿಷಯಸ್ಥಂ ಪೃಥಕ್ ಪೃಥಕ್|

14049031c ಯಥಾ ಕರ್ಮ ಕೃತಂ ಲೋಕೇ ತಥಾ ತದುಪಪದ್ಯತೇ||

ಹೀಗೆ ಮಾಡುವ ಪ್ರತಿಯೊಂದು ಕರ್ಮವೂ ಬೇರೆ ಬೇರೆ ಸ್ಥಾನಗಳಿಗೆ ಕೊಂಡೊಯ್ಯುತ್ತವೆ. ಈ ಲೋಕದಲ್ಲಿ ಯಾವರೀತಿಯ ಕರ್ಮವನ್ನು ಮಾಡುತ್ತಾನೋ ಅದಕ್ಕೆ ತಕ್ಕುದಾದ ಲೋಕವನ್ನೇ ಪಡೆಯುತ್ತಾನೆ.

14049032a ಯನ್ನೈವ ಗಂಧಿನೋ ರಸ್ಯಂ ನ ರೂಪಸ್ಪರ್ಶಶಬ್ದವತ್|

14049032c ಮನ್ಯಂತೇ ಮುನಯೋ ಬುದ್ಧ್ಯಾ ತತ್ಪ್ರಧಾನಂ ಪ್ರಚಕ್ಷತೇ||

ಗಂಧ-ರಸ-ರೂಪ-ಸ್ಪರ್ಶ-ಶಬ್ಧಗಳಿಲ್ಲದ ಯಾವುದನ್ನು ಮುನಿಗಳು ಬುದ್ಧಿಯ ಮೂಲಕ ತಿಳಿದುಕೊಳ್ಳುತ್ತಾರೋ ಅದನ್ನೇ ಪ್ರಧಾನ ಎಂದು ಹೇಳುತ್ತಾರೆ.

14049033a ತತ್ರ ಪ್ರಧಾನಮವ್ಯಕ್ತಮವ್ಯಕ್ತಸ್ಯ ಗುಣೋ ಮಹಾನ್|

14049033c ಮಹತಃ ಪ್ರಧಾನಭೂತಸ್ಯ ಗುಣೋಽಹಂಕಾರ ಏವ ಚ||

ಪ್ರಧಾನವು ಅವ್ಯಕ್ತ. ಅವ್ಯಕ್ತದ ಗುಣವು ಮಹತ್ತತ್ತ್ವ. ಪ್ರಧಾನದಿಂದ ಹುಟ್ಟಿದ ಮಹತ್ತತ್ತ್ವದ ಗುಣವು ಅಹಂಕಾರ.

14049034a ಅಹಂಕಾರಪ್ರಧಾನಸ್ಯ ಮಹಾಭೂತಕೃತೋ ಗುಣಃ|

14049034c ಪೃಥಕ್ತ್ವೇನ ಹಿ ಭೂತಾನಾಂ ವಿಷಯಾ ವೈ ಗುಣಾಃ ಸ್ಮೃತಾಃ||

ಅಹಂಕಾರದ ಪ್ರಧಾನ ಗುಣವು ಮಹಾಭೂತಗಳನ್ನುಂಟುಮಾಡುವುದು. ಈ ಮಹಾಭೂತಗಳು ಪ್ರತ್ಯೇಕ-ಪ್ರತ್ಯೇಕವಾಗಿ ಶಬ್ಧ-ಸ್ಪರ್ಶಾದಿ ಗುಣಗಳಿಂದ ತಿಳಿಯಲ್ಪಟ್ಟಿವೆ.

14049035a ಬೀಜಧರ್ಮಂ ಯಥಾವ್ಯಕ್ತಂ ತಥೈವ ಪ್ರಸವಾತ್ಮಕಮ್|

14049035c ಬೀಜಧರ್ಮಾ ಮಹಾನಾತ್ಮಾ ಪ್ರಸವಶ್ಚೇತಿ ನಃ ಶ್ರುತಮ್||

ಅವ್ಯಕ್ತ ಪ್ರಧಾನವು ಬೀಜಧರ್ಮದಂತೆ ಮಹತ್ತತ್ತ್ವವನ್ನು ಹುಟ್ಟಿಸುತ್ತದೆ. ಮಹತ್ತತ್ತ್ವವೂ ಬೀಜಧರ್ಮವನ್ನನುಸರಿಸಿ ಅಹಂಕಾರವನ್ನು ಹುಟ್ಟಿಸುತ್ತದೆ ಎಂದು ಕೇಳಿದ್ದೇವೆ.

14049036a ಬೀಜಧರ್ಮಾ ತ್ವಹಂಕಾರಃ ಪ್ರಸವಶ್ಚ ಪುನಃ ಪುನಃ|

14049036c ಬೀಜಪ್ರಸವಧರ್ಮಾಣಿ ಮಹಾಭೂತಾನಿ ಪಂಚ ವೈ||

ಪುನಃ ಅಹಂಕಾರವೂ ಬೀಜಧರ್ಮದ ಪ್ರಕಾರ ಮಹಾಭೂತಗಳನ್ನು ಹುಟ್ಟಿಸುತ್ತದೆ. ಪಂಚ ಮಹಾಭೂತಗಳೂ ಕೂಡ ಬೀಜ-ಪ್ರಸವ ಧರ್ಮಗಳನ್ನು ಹೊಂದಿವೆ.

14049037a ಬೀಜಧರ್ಮಿಣ ಇತ್ಯಾಹುಃ ಪ್ರಸವಂ ಚ ನ ಕುರ್ವತೇ|

14049037c ವಿಶೇಷಾಃ ಪಂಚಭೂತಾನಾಂ ತೇಷಾಂ ವಿತ್ತಂ ವಿಶೇಷಣಮ್||

ಪಂಚಭೂತಗಳ ವಿಶೇಷಗಳೂ ಬೀಜಧರ್ಮ ಮತ್ತು ಪ್ರಸವಧರ್ಮಗಳನ್ನು ಹೊಂದಿವೆಯೆಂದು ಹೇಳುತ್ತಾರೆ.

14049038a ತತ್ರೈಕಗುಣಮಾಕಾಶಂ ದ್ವಿಗುಣೋ ವಾಯುರುಚ್ಯತೇ|

14049038c ತ್ರಿಗುಣಂ ಜ್ಯೋತಿರಿತ್ಯಾಹುರಾಪಶ್ಚಾಪಿ ಚತುರ್ಗುಣಾಃ||

ಪಂಚಮಹಾಭೂತಗಳಲ್ಲಿ ಆಕಾಶವು ಒಂದೇ ಗುಣವನ್ನು ಹೊಂದಿದೆ. ವಾಯುವಿಗೆ ಎರಡು ಗುಣಗಳಿವೆ. ಜ್ಯೋತಿಗೆ ಮೂರು ಗುಣಗಳಿವೆ ಮತ್ತು ಆಪಕ್ಕೆ ನಾಲ್ಕು ಗುಣಗಳಿವೆ.

14049039a ಪೃಥ್ವೀ ಪಂಚಗುಣಾ ಜ್ಞೇಯಾ ತ್ರಸಸ್ಥಾವರಸಂಕುಲಾ|

14049039c ಸರ್ವಭೂತಕರೀ ದೇವೀ ಶುಭಾಶುಭನಿದರ್ಶನಾ||

ಸ್ಥಾವರ-ಜಂಗಮ ಸಂಕುಲಗಳಿರುವ ಸರ್ವಭೂತಕರೀ ಶುಭಾಶುಭನಿದರ್ಶನೆ ದೇವೀ ಪೃಥ್ವಿಗೆ ಐದು ಗುಣಗಳಿವೆಯೆಂದು ತಿಳಿಯಬೇಕು.

14049040a ಶಬ್ದಃ ಸ್ಪರ್ಶಸ್ತಥಾ ರೂಪಂ ರಸೋ ಗಂಧಶ್ಚ ಪಂಚಮಃ|

14049040c ಏತೇ ಪಂಚ ಗುಣಾ ಭೂಮೇರ್ವಿಜ್ಞೇಯಾ ದ್ವಿಜಸತ್ತಮಾಃ||

ದ್ವಿಜಸತ್ತಮರೇ! ಶಬ್ಧ, ಸ್ಪರ್ಶ, ರೂಪ, ರಸ, ಮತ್ತು ಐದನೆಯದಾಗಿ ಗಂಧ ಇವೇ ಭೂಮಿಯ ಐದು ಗುಣಗಳೆಂದು ತಿಳಿಯಬೇಕು.

14049041a ಪಾರ್ಥಿವಶ್ಚ ಸದಾ ಗಂಧೋ ಗಂಧಶ್ಚ ಬಹುಧಾ ಸ್ಮೃತಃ|

14049041c ತಸ್ಯ ಗಂಧಸ್ಯ ವಕ್ಷ್ಯಾಮಿ ವಿಸ್ತರೇಣ ಬಹೂನ್ಗುಣಾನ್||

ಭೂಮಿಯು ಸದಾ ಗಂಧಯುಕ್ತವಾಗಿದೆಯೆಂದು ಹೇಳುತ್ತಾರೆ. ಗಂಧದಲ್ಲಿಯೂ ಅನೇಕ ಪ್ರಕಾರಗಳನ್ನು ಹೇಳಿದ್ದಾರೆ. ಆ ಗಂಧದ ಅನೇಕ ಗುಣಗಳನ್ನು ವಿಸ್ತಾರವಾಗಿ ಹೇಳುತ್ತೇನೆ.

14049042a ಇಷ್ಟಶ್ಚಾನಿಷ್ಟಗಂಧಶ್ಚ ಮಧುರೋಽಮ್ಲಃ ಕಟುಸ್ತಥಾ|

14049042c ನಿರ್ಹಾರೀ ಸಂಹತಃ ಸ್ನಿಗ್ಧೋ ರೂಕ್ಷೋ ವಿಶದ ಏವ ಚ|

14049042e ಏವಂ ದಶವಿಧೋ ಜ್ಞೇಯಃ ಪಾರ್ಥಿವೋ ಗಂಧ ಇತ್ಯುತ||

ಇಷ್ಟಗಂಧ (ಸುಗಂಧ), ಅನಿಷ್ಟ ಗಂಧ (ದುರ್ಗಂಧ), ಮಧುರ, ಹುಳಿ, ಕಟು (ಕಾರ), ನಿರ್ಹಾರೀ (ಬಹಳ ದೂರದವರೆಗೂ ವ್ಯಾಪಿಸುವುದು), ಮಿಶ್ರಿತ, ಸ್ನಿಗ್ಧ, ರೂಕ್ಷ (ಕಠಿನ), ವಿಶದ (ನಿರ್ಮಲ) ಹೀಗೆ ಭೂಮಿಯ ಗಂಧವು ಹತ್ತು ವಿಧಗಳು ಎಂದು ಹೇಳುತ್ತಾರೆ.

14049043a ಶಬ್ದಃ ಸ್ಪರ್ಶಸ್ತಥಾ ರೂಪಂ ರಸಶ್ಚಾಪಾಂ ಗುಣಾಃ ಸ್ಮೃತಾಃ|

14049043c ರಸಜ್ಞಾನಂ ತು ವಕ್ಷ್ಯಾಮಿ ರಸಸ್ತು ಬಹುಧಾ ಸ್ಮೃತಃ||

ನೀರಿನ ಗುಣಗಳು ಶಬ್ಧ, ಸ್ಪರ್ಶ, ರೂಪ, ಮತ್ತು ರಸ ಎಂದು ಹೇಳಿದ್ದಾರೆ. ರಸಗಳಲ್ಲಿ ಅನೇಕ. ರಸಜ್ಞಾನವನ್ನು ಹೇಳುತ್ತೇನೆ.

14049044a ಮಧುರೋಽಮ್ಲಃ ಕಟುಸ್ತಿಕ್ತಃ ಕಷಾಯೋ ಲವಣಸ್ತಥಾ|

14049044c ಏವಂ ಷಡ್ವಿಧವಿಸ್ತಾರೋ ರಸೋ ವಾರಿಮಯಃ ಸ್ಮೃತಃ||

ಮಧುರ (ಸಿಹಿ), ಆಮ್ಲ (ಹುಳಿ), ಕಟು (ಕಾರ), ತಿಕ್ತ (ಕಹಿ), ಕಷಾಯ (ಒಗರು), ಲವಣ (ಉಪ್ಪು) ಹೀಗೆ ಜಲಮಯ ರಸವು ಆರು ವಿಧಗಳು ಎಂದು ಹೇಳುತ್ತಾರೆ.

14049045a ಶಬ್ದಃ ಸ್ಪರ್ಶಸ್ತಥಾ ರೂಪಂ ತ್ರಿಗುಣಂ ಜ್ಯೋತಿರುಚ್ಯತೇ|

14049045c ಜ್ಯೋತಿಷಶ್ಚ ಗುಣೋ ರೂಪಂ ರೂಪಂ ಚ ಬಹುಧಾ ಸ್ಮೃತಮ್||

ಜ್ಯೋತಿಯ ಗುಣಗಳು ಮೂರು – ಶಬ್ಧ, ಸ್ಪರ್ಶ ಮತ್ತು ರೂಪ – ಎಂದು ಹೇಳುತ್ತಾರೆ. ಜ್ಯೋತಿಯ ಗುಣವು ರೂಪ. ರೂಪದಲ್ಲಿ ಅನೇಕ ವಿಧಗಳಿಗೆ ಎನ್ನುತ್ತಾರೆ.

14049046a ಶುಕ್ಲಂ ಕೃಷ್ಣಂ ತಥಾ ರಕ್ತಂ ನೀಲಂ ಪೀತಾರುಣಂ ತಥಾ|

14049046c ಹ್ರಸ್ವಂ ದೀರ್ಘಂ ತಥಾ ಸ್ಥೂಲಂ ಚತುರಸ್ರಾಣು ವೃತ್ತಕಮ್||

14049047a ಏವಂ ದ್ವಾದಶವಿಸ್ತಾರಂ ತೇಜಸೋ ರೂಪಮುಚ್ಯತೇ|

14049047c ವಿಜ್ಞೇಯಂ ಬ್ರಾಹ್ಮಣೈರ್ನಿತ್ಯಂ ಧರ್ಮಜ್ಞೈಃ ಸತ್ಯವಾದಿಭಿಃ||

ಬಿಳಿ, ಕಪ್ಪು, ಕೆಂಪು, ನೀಲಿ, ಹಳದಿ, ಅರುಣ, ಹ್ರಸ್ವ, ದೀರ್ಘ, ಕೃಶ, ಸ್ಥೂಲ, ಚಚ್ಚೌಕ ಮತ್ತು ದುಂಡು – ಈ ಹನ್ನೆರಡೂ ತೇಜಸ್ಸಿನ ರೂಪಗಳೆಂದು ಹೇಳುತ್ತಾರೆ. ಇದು ಧರ್ಮಜ್ಞರೂ ಸತ್ಯವಾದಿಗಳೂ ಆದ ಬ್ರಾಹ್ಮಣರಿಗೆ ಸದಾ ತಿಳಿದಿರುತ್ತದೆ.

14049048a ಶಬ್ದಸ್ಪರ್ಶೌ ಚ ವಿಜ್ಞೇಯೌ ದ್ವಿಗುಣೋ ವಾಯುರುಚ್ಯತೇ|

14049048c ವಾಯೋಶ್ಚಾಪಿ ಗುಣಃ ಸ್ಪರ್ಶಃ ಸ್ಪರ್ಶಶ್ಚ ಬಹುಧಾ ಸ್ಮೃತಃ||

ಶಬ್ಧ ಮತ್ತು ಸ್ಪರ್ಶ – ಈ ಎರಡು ವಾಯುವಿನ ಗುಣಗಳೆಂದು ತಿಳಿದಿವೆ. ವಾಯುವಿನ ಗುಣವು ಸ್ಪರ್ಶ, ಸ್ಪರ್ಶವು ಅನೇಕವಿಧಗಳು ಎಂದು ಹೇಳುತ್ತಾರೆ.

14049049a ಉಷ್ಣಃ ಶೀತಃ ಸುಖೋ ದುಃಖಃ ಸ್ನಿಗ್ಧೋ ವಿಶದ ಏವ ಚ|

14049049c ಕಠಿನಶ್ಚಿಕ್ಕಣಃ ಶ್ಲಕ್ಷ್ಣಃ ಪಿಚ್ಚಿಲೋ ದಾರುಣೋ ಮೃದುಃ||

14049050a ಏವಂ ದ್ವಾದಶವಿಸ್ತಾರೋ ವಾಯವ್ಯೋ ಗುಣ ಉಚ್ಯತೇ|

14049050c ವಿಧಿವದ್ಬ್ರಹ್ಮಣೈಃ ಸಿದ್ಧೈರ್ಧರ್ಮಜ್ಞೈಸ್ತತ್ತ್ವದರ್ಶಿಭಿಃ||

ಉಷ್ಣ, ಶೀತ, ಸುಖ, ದುಃಖ, ಸ್ನಿಗ್ಧ, ವಿಶದ, ಕಠಿನ, ನುಣುಪು, ಶ್ಲಕ್ಷ್ಣ, ಜಿಡ್ಡು, ದಾರುಣ ಮತ್ತು ಮೃದು – ಈ ಹನ್ನೆರಡೂ ವಾಯುವಿನ ಗುಣಗಳೆಂದು ಹೇಳುತ್ತಾರೆ. ಇದು ಸಿದ್ದರೂ ಧರ್ಮಜ್ಞರೂ, ತತ್ತ್ವದರ್ಶಿಗಳೂ ಆದ ಬ್ರಾಹ್ಮಣರಿಗೆ ತಿಳಿದಿದೆ.

14049051a ತತ್ರೈಕಗುಣಮಾಕಾಶಂ ಶಬ್ದ ಇತ್ಯೇವ ಚ ಸ್ಮೃತಃ|

14049051c ತಸ್ಯ ಶಬ್ದಸ್ಯ ವಕ್ಷ್ಯಾಮಿ ವಿಸ್ತರೇಣ ಬಹೂನ್ಗುಣಾನ್||

ಆಕಾಶಕ್ಕೆ ಶಬ್ಧವು ಒಂದೇ ಗುಣ ಎಂದು ಹೇಳುತ್ತಾರೆ. ಆಕಾಶದ ಗುಣವಾದ ಶಬ್ಧದ ಬಹುವಿಧಗಳನ್ನು ವಿಸ್ತಾರವಾಗಿ ಹೇಳುತ್ತೇನೆ.

14049052a ಷಡ್ಜರ್ಷಭೌ ಚ ಗಾಂಧಾರೋ ಮಧ್ಯಮಃ ಪಂಚಮಸ್ತಥಾ|

14049052c ಅತಃ ಪರಂ ತು ವಿಜ್ಞೇಯೋ ನಿಷಾದೋ ಧೈವತಸ್ತಥಾ||

14049053a ಇಷ್ಟೋಽನಿಷ್ಟಶ್ಚ ಶಬ್ದಸ್ತು ಸಂಹತಃ ಪ್ರವಿಭಾಗವಾನ್|

14049053c ಏವಂ ಬಹುವಿಧೋ ಜ್ಞೇಯಃ ಶಬ್ದ ಆಕಾಶಸಂಭವಃ||

ಷಡ್ಜ, ಋಷಭ, ಗಾಂಧಾರ, ಮಧ್ಯಮ, ಪಂಚಮ, ನಿಷಾದ, ಧೈವತ, ಇಷ್ಟ, ಅನಿಷ್ಟ, ಸಂಹತ (ಶ್ಲಿಷ್ಟ) – ಹೀಗೆ ಆಕಾಶಸಂಭವ ಶಬ್ಧವು ಬಹುವಿಧವಾದುದು.

14049054a ಆಕಾಶಮುತ್ತಮಂ ಭೂತಮಹಂಕಾರಸ್ತತಃ ಪರಮ್|

14049054c ಅಹಂಕಾರಾತ್ಪರಾ ಬುದ್ಧಿರ್ಬುದ್ಧೇರಾತ್ಮಾ ತತಃ ಪರಃ||

ಆಕಾಶವೇ ಎಲ್ಲ ಭೂತಗಳಲ್ಲಿಯೂ ಉತ್ತಮವಾದುದು. ಅಹಂಕಾರವು ಅದಕ್ಕಿಂತಲೂ ಶ್ರೇಷ್ಠವಾದುದು. ಅಹಂಕಾರಕ್ಕಿಂತಲೂ ಬುದ್ಧಿಯು ಶ್ರೇಷ್ಠವಾದುದು. ಬುದ್ಧಿಗಿಂತಲೂ ಆತ್ಮವು ಶ್ರೇಷ್ಠವಾದುದು.

14049055a ತಸ್ಮಾತ್ತು ಪರಮವ್ಯಕ್ತಮವ್ಯಕ್ತಾತ್ಪುರುಷಃ ಪರಃ|

14049055c ಪರಾವರಜ್ಞೋ ಭೂತಾನಾಂ ಯಂ ಪ್ರಾಪ್ಯಾನಂತ್ಯಮಶ್ನುತೇ||

ಆತ್ಮಕ್ಕಿಂತಲೂ ಅವ್ಯಕ್ತವು ಶ್ರೇಷ್ಠವಾದುದು. ಅವ್ಯಕ್ತಕ್ಕಿಂತಲೂ ಶ್ರೇಷ್ಠವಾದುದು ಪುರುಷ. ಭೂತಗಳಲ್ಲಿರುವ ಈ ಶ್ರೇಷ್ಠತೆಗಳನ್ನು ತಿಳಿದುಕೊಂಡಿರುವವನು ಅನಂತನನ್ನು ಸೇರುತ್ತಾನೆ ಎಂದು ಹೇಳುತ್ತಾರೆ.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಗುರುಶಿಷ್ಯಸಂವಾದೇ ಏಕೋನಪಂಚಾಶತ್ತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಗುರುಶಿಷ್ಯಸಂವಾದ ಎನ್ನುವ ನಲ್ವತ್ತೊಂಭತ್ತನೇ ಅಧ್ಯಾಯವು.

Comments are closed.